

ಮಾದಕದ್ರವ್ಯದ ಕರಾಳ ಜಾಲ ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕವಾಗುತ್ತಿದೆ. ಈ ಪಿಡುಗಿನ ಹಾವಳಿ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಆವರಿಸಿಕೊಂಡಿದ್ದು, ವಿದ್ಯಾರ್ಥಿಗಳು ಮತ್ತು ಯುವಜನರ ಬದುಕಿಗೆ ಕಂಟಕವಾಗುತ್ತಿದೆ. ಮೊದಲೆಲ್ಲ
ಡ್ರಗ್ಸ್ನ ಹಾವಳಿ ಮಹಾನಗರಗಳಿಗೆ ಸೀಮಿತವಾಗಿತ್ತು. ಆದರೆ, ಈಗ ಸಣ್ಣ ಸಣ್ಣ ನಗರಗಳಲ್ಲೂ ಡ್ರಗ್ಸ್ ಸುಲಭವಾಗಿ ದೊರಕುವಂತಾಗಿದೆ ಎಂದರೆ ಈ ಜಾಲದ ವಿಷಬೇರು ಎಷ್ಟು ವ್ಯಾಪಕವಾಗಿ ಹರಡಿಕೊಂಡಿದೆ ಎಂದು ಅಂದಾಜಿಸಬಹುದು. ಇದೊಂದು ಸಾಮಾಜಿಕ ಸಮಸ್ಯೆಯಾಗಿ ಬದಲಾಗಿದ್ದು, ಕಠಿಣ ಕಾನೂನಿನ ಕ್ರಮದ ಜತೆಗೆ, ಜಾಗೃತಿ ಮೂಡಿಸುವ ಅಗತ್ಯವೂ ಇದೆ. ಇತ್ತೀಚಿನ ಬೆಳವಣಿಗೆಗಳನ್ನು ಅವಲೋಕಿಸಿದರೆ ಡ್ರಗ್ಸ್ ಪಿಡುಗಿನ ವಿರುದ್ಧದ ಆಂದೋಲನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮತ್ತು ಸಂಘಟಿತವಾಗಿ ಕೈಗೊಳ್ಳಬೇಕಾದ ಅಗತ್ಯವಿದೆ.
ರಾಜಧಾನಿ ಬೆಂಗಳೂರು ಮಾತ್ರವಲ್ಲ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಡ್ರಗ್ಸ್ ಜಾಲ ವ್ಯಾಪಕವಾಗಿ ಹಬ್ಬಿರುವುದು, ಈ ದಂಧೆಯ ಕರಾಳತೆಗೆ ಸಾಕ್ಷಿ. ಮೈಸೂರಿನಲ್ಲಿ ಮಾದಕವಸ್ತು ತಯಾರಿಕಾ ಘಟಕವೇ ಪತ್ತೆಯಾಗಿದ್ದು, ಖಚಿತ ಮಾಹಿತಿಯ ಮೇರೆಗೆ ಮಹಾರಾಷ್ಟ್ರದ ಪೊಲೀಸರು ಶುಕ್ರವಾರ ದಾಳಿ ನಡೆಸಿ, ಆರು ಜನರನ್ನು ಬಂಧಿಸಿದ್ದಾರೆ. ‘ಮೈಸೂರಿನಲ್ಲಿ ಎಂಡಿಎಂಎ ಮಾದಕವಸ್ತು ತಯಾರಿಸುತ್ತಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸೂಕ್ತಕ್ರಮಕ್ಕೆ ಒತ್ತಾಯಿಸಲಾಗುವುದು. ಮೈಸೂರಿನ ಬಹುತೇಕ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾದಕವಸ್ತು ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ.
ಕೆಲ ಉದ್ಯಾನಗಳನ್ನು ಸ್ಥಳೀಯರು ಡ್ರಗ್ಸ್ ಹೆಸರಿನಿಂದಲೇ ಕರೆಯುತ್ತಾರೆ’ ಎಂದು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯಿಸಿದ್ದಾರೆ. ‘ಮಾದಕ ವಸ್ತು ದಂಧೆ ನಿಯಂತ್ರಣ ಹಾಗೂ ಪೆಡ್ಲರ್ಗಳ ವಿರುದ್ಧ ಕ್ರಮಕ್ಕೆ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಆಂಟಿ ಡ್ರಗ್ಸ್ ಸಮಿತಿ ರಚಿಸಲಾಗುವುದು’ ಎಂದು ಇತ್ತೀಚೆಗೆ ಗೃಹ ಸಚಿವ ಜಿ.ಪರಮೇಶ್ವರ ಘೋಷಿಸಿದ್ದರು. ಬೆಂಗಳೂರು ಪೊಲೀಸರು ಕಳೆದ ಆರೂವರೆ ತಿಂಗಳಲ್ಲಿ 120 ಕೋಟಿ ರೂ. ಮೌಲ್ಯದ 2500 ಕೆ.ಜಿ ಡ್ರಗ್ಸ್ನ್ನು ವಶಪಡಿಸಿಕೊಂಡಿದ್ದು, ಪಡ್ಲರ್ಗಳ ಚಲನವಲನದ ಮೇಲೆ ಹದ್ದುಗಣ್ಣು ಇರಿಸಿದ್ದಾರೆ.
186 ಪ್ರಕರಣಗಳಲ್ಲಿ 256 ಡ್ರಗ್ಸ್ ದಂಧೆಕೋರರನ್ನು ಬಂಧಿಸಿದ್ದಾರೆ. ಈ ವರ್ಷದ ಜನವರಿಯಿಂದ ಜುಲೈ 15ರವರೆಗೆ ಒಟ್ಟು 338 ಎಫ್ಐಆರ್ ದಾಖಲಿಸಲಾಗಿದೆ. ವಿದೇಶಿ ಅಂಚೆ ಮೂಲಕ ಬೆಂಗಳೂರಿಗೆ ಡ್ರಗ್ಸ್ ಸರಬರಾಜು ಆಗುತ್ತಿದ್ದು, ವಿದೇಶಿ ವಿದ್ಯಾರ್ಥಿಗಳ ಸೋಗಿನಲ್ಲಿ ನೆಲೆಸಿರುವವರು ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಂದರೆ, ಮಾದಕವಸ್ತು ಜಾಲ ಹೊಸ ಹೊಸ ಸ್ವರೂಪದಲ್ಲಿ ಬೆಳೆಯುತ್ತ ಸಾಗಿದ್ದು, ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ. ಡ್ರಗ್ಸ್ ವ್ಯಸನಿಗಳ ಬದುಕಂತೂ ನರಕಸದೃಶವಾಗಿದ್ದು, ಇಂಥವರು ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಳ್ಳುತ್ತಿರುವ ನಿದರ್ಶನಗಳೂ ಕಂಡುಬಂದಿವೆ. ಹಾಗಾಗಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಕಟ್ಟುನಿಟ್ಟಿನ ಕ್ರಮದ ಜತೆಗೆ ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕಿದೆ. ಈ ಪಿಡುಗಿನ ವಿರುದ್ಧ ಹೋರಾಡಲು ಇನ್ನಷ್ಟು ಪರಿಣಾಮಕಾರಿ ಹೊಸ ಉಪಕ್ರಮಗಳನ್ನು ಕೈಗೊಳ್ಳಬೇಕಿದೆ.