ಜಲಸಂಕಟದಿಂದ ಪಾರಾಗೋಣ; ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಅಂಕಣ...

Heggade
Published on
ಜಲಾಘಾತದ ಬಗ್ಗೆ (ನೀರಿನಿಂದಾಗುವ ಪ್ರಾಣಹಾನಿ ಬಗ್ಗೆ) ನಿತ್ಯವೂ ಪತ್ರಿಕೆಗಳಲ್ಲಿ ನಾವು ಓದುತ್ತಿರುತ್ತೇವೆ. ಈ ಲೇಖನವನ್ನು ಬರೆಯುತ್ತಿರುವ ಸಮಯದಲ್ಲಿಯೇ, ಗೋಕರ್ಣದ ಕಡಲಿನಲ್ಲಿ ಮೂವರು ಪ್ರಾಣ ಕಳೆದುಕೊಂಡ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂತು. ಪ್ರವಾಸಕ್ಕೆ ಬಂದ ತಂಡದವರು ಸಮುದ್ರದ ನೀರಿನಲ್ಲಿ ಇಳಿದಾಗ, ರಭಸವಾಗಿ ಬಂದ ಅಲೆಯ ಸೆಳೆತಕ್ಕೆ ಸಿಕ್ಕಿ ಆಯತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಲು ಹೋದ ಇಬ್ಬರು ಸೇರಿ ಮೂವರು ಸಾವನ್ನಪ್ಪಿದರು.

ಇಂಥ ಬಹುತೇಕ ಘಟನೆಗಳು ಸ್ವಯಂಕೃತ ಅಥವಾ ತಿಳಿವಳಿಕೆ ಇಲ್ಲದೇ ಆಗುವಂಥವು. ಕೆಲವರು ಸಾಮಾನ್ಯ ಕೆರೆಗಳಲ್ಲಿಯೂ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ. ಮನೆಯ ಸಮೀಪದಲ್ಲಿರುವ ಕೆರೆಗಳಲ್ಲಿ ಬಟ್ಟೆ ಒಗೆಯಲು ಹೋದ ಸಂದರ್ಭದಲ್ಲಿ ಮಕ್ಕಳು ತಾಯಂದಿರ ಜೊತೆಯಾಗಿಯೇ ಬಂದು ಜಾರಿಬಿದ್ದು ಸಾವನ್ನಪ್ಪುತ್ತಾರೆ. ಇನ್ನು ಕೆಲವರು ನೆಂಟರ ಮನೆಗೆಂದು ಹೋದಾಗ, ಸಮೀಪದ ಕೆರೆಯಲ್ಲಿ ಈಜಾಡುವುದು ಉತ್ಸಾಹದ ಮತ್ತು ಉಲ್ಲಾಸದ ಕಾರ್ಯವೆಂದು ಬಗೆಯುತ್ತಾರೆ. ಮನೆಗೆ ಬಂದ ನೆಂಟರನ್ನು ಕರೆದುಕೊಂಡು ಈಜಾಡುವುದಕ್ಕಾಗಿ ಕೆರೆಗೆ ಹೋಗುತ್ತಾರೆ. ‘ಕೆರೆಯ ಆಳ ತಿಳಿಯದೆ ಕೆರೆಯಲ್ಲಿ ಇಳಿಯಬಾರದು’ ಎಂಬುದನ್ನು ಅರ್ಥೈಸಿಕೊಳ್ಳದೆ ಇಳಿದುಬಿಡುತ್ತಾರೆ. ಕೆಲವು ಕಡೆ ಮೆದುವಾದ ಮಣ್ಣಿಂದಾಗಿ ಕಾಲುಜಾರಿ ಸಿಲುಕಿಕೊಂಡು, ನೀರಿನ ಒಳಗೆ ಹೋಗಿ ಬಿಡುತ್ತಾರೆ. ಆಗ ಪಕ್ಕದಲ್ಲಿ ಇದ್ದವರು ಅವರನ್ನು ರಕ್ಷಿಸಲು ಕೆರೆಯಲ್ಲಿ ಇಳಿಯುತ್ತಾರೆ. ಕೆಲವು ಸಲ ಒಳಗೆ ಮಣ್ಣಿನಲ್ಲಿ ಹೂತು, ನೀರಿನಲ್ಲಿ ಮುಳುಗುತ್ತಿರುವವರು ರಕ್ಷಿಸಲು ಬಂದ ವ್ಯಕ್ತಿಯನ್ನೂ ಹಿಡಿದುಕೊಂಡು ಇಬ್ಬರೂ ಸಾಯುತ್ತಾರೆ.

ಪೇಜಾವರ ಮಠದ ವಿಶ್ವೇಶತೀರ್ಥರು ಬಾಲ್ಯದ ಒಂದು ಘಟನೆಯನ್ನು ನೆನಪಿಸುತ್ತಿದ್ದರು. ಶ್ರೀಗಳ ಬಾಲ್ಯದ ಮನೆಯ ಉತ್ತರಕ್ಕೆ ಐವತ್ತು ಅಡಿ ದೂರದಲ್ಲಿ ಚಿಕ್ಕಕೆರೆ ಇತ್ತು. ಆ ಕಾಲದಲ್ಲಿ ಮುಸುರೆ ಪಾತ್ರೆಗಳನ್ನು ತೊಳೆಯುವ ಕೆರೆ ಅದು. ಶ್ರೀಗಳು ನಾಲ್ಕನೇ ವಯಸ್ಸಿನಲ್ಲಿ ಇದ್ದಾಗ ಶ್ರೀಗಳು ಹಾಗೂ ಅಕ್ಕ ಆಟವಾಡುತ್ತ ಕೆರೆಯ ದಂಡೆಗೆ ಬಂದರು. ಆಟವಾಡ್ತಾ ಶ್ರೀಗಳು ಕೆರೆಗೆ ಬಿದ್ದುಬಿಟ್ಟರು. ಕೆಲಸದಾಳುಗಳಾದ ಚೋಮ ಹಾಗೂ ಕಾನತ್ತ ಅಲ್ಲೇ ಪಕ್ಕದಲ್ಲಿ ತೋಡು ಮತ್ತು ಕೆರೆಯ ನಡುವಿನ ದಂಡೆಯನ್ನು ಕಟ್ಟುವ ಕೆಲಸ ಮಾಡುತ್ತಿದ್ದರು. ಬಾಲಕ ಕೆರೆಗೆ ಬಿದ್ದುದನ್ನು ಚೋಮ ನೋಡಿದ. ಆತನ ಗಾಬರಿ ಹೇಳತೀರದು. ಹೀಗೇ ಬಿಟ್ಟರೆ ಮಗು ನೀರಿನಲ್ಲಿ ಮುಳುಗಿ ಸಾಯುವುದು ಖಂಡಿತ ಎಂದರಿತ ಆತ ಜೋರಾಗಿ ಬೊಬ್ಬೆ ಹಾಕಿದ. ಅದನ್ನು ಕೇಳಿಸಿಕೊಂಡ ಶ್ರೀಗಳವರ ತಂದೆ ಓಡಿ ಬಂದು ಮಗುವನ್ನು ನೀರಿನಿಂದ ಎತ್ತಿ ಮೇಲೆ ತಂದರು. ದೊಡ್ಡ ಅನಾಹುತ ತಪ್ಪಿತು. ಇದು ತಮ್ಮ ಬದುಕಿನ ಒಂದು ಪ್ರಮುಖ ಘಟನೆ ಎಂದು ಪೇಜಾವರ ಶ್ರೀಗಳು ನೆನಪಿಸಿಕೊಳ್ಳುತ್ತಿದ್ದರು. ಅವರ ಮೇಲೆ ಗಾಢ ಪರಿಣಾಮ ಬೀರಿದ, ಮುಂದೆ, ಶ್ರೀಗಳವರ ಸಾಮಾಜಿಕ ದೃಷ್ಟಿ, ಸರ್ವ ಸಮಭಾವ ಇವೆಲ್ಲವುಗಳೊಂದಿಗೆ ಸಂಬಂಧ ಹೊಂದಿರಬಹುದಾದ ಘಟನೆ. ಬಾಲಕ ವೆಂಕಟರಾಮ ಮುಂದೆ ವಿಶ್ವೇಶತೀರ್ಥರಾಗಿ ಬೆಳೆಯುವುದೇ ಅಸಾಧ್ಯವಾಗುತ್ತಿತ್ತು ಎಂದು ತಮ್ಮ ಒಂದು ಲೇಖನದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಕೆಲವೊಮ್ಮೆ ಭಯದಿಂದಲೂ ಸಾವು ಬಹಳ ಬೇಗ ಬರುತ್ತದೆ. ಉದಾಹರಣೆಗೆ ಕೆರೆಯಲ್ಲಿ ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗುತ್ತಿದ್ದ ಹಾಗೆ ಭಯದಿಂದಲೇ ಹೃದಯಸ್ತಂಭನವಾಗಿ ಬಿಡುತ್ತದೆ. ನದಿಗಳಲ್ಲಿ ಇದೇ ರೀತಿಯ ಅಪಾಯ ಎದುರಾಗುತ್ತದೆ. ನದಿ ನೀರು ನೋಡಿದ ತಕ್ಷಣ ಆನಂದಪಡುತ್ತಾರೆ. ನೀರಿನಲ್ಲಿ ಇಳಿದು ಸ್ವಲ್ಪ ಮುಂದೆ ಹೋಗುತ್ತಾರೆ. ಮತ್ತಷ್ಟು ಮುಂದೆ ಹೋಗುತ್ತಾರೆ. ನದಿಯಲ್ಲಿ ಈಜುವ ಮತ್ತು ತಂಪಾದ ನೀರು ದೇಹಕ್ಕೆ ಸ್ಪರ್ಶವಾದಾಗ ಉಂಟಾಗುವ ಆಹ್ಲಾದವನ್ನು ಇನ್ನಷ್ಟು ಸವಿಯಬೇಕೆಂದು ಬಯಸುತ್ತಾರೆ. ನದಿಯಲ್ಲಿ ಸೊಂಟದವರೆಗೆ, ಇನ್ನು ಕೆಲವು ಕಡೆ ಎದೆಮಟ್ಟದ ನೀರಿರಬಹುದು. ಇನ್ನು ಕೆಲವು ಕಡೆ ಇದ್ದಕ್ಕಿದ್ದಂತೆ ಆಳವಾದ ಪ್ರದೇಶ ಬಂದುಬಿಡುತ್ತದೆ. ಇದನ್ನು ಅರಿಯದೆ ನದಿಗೆ ಇಳಿದರೆ ಜೀವಕ್ಕೆ ಅಪಾಯ. ಧರ್ಮಸ್ಥಳದ ಬಳಿ ಇರುವ ನೇತ್ರಾವತಿ ನದಿಯಲ್ಲಿ ಕೆಲವು ಸಾವುಗಳಾಗಿವೆ. ಅಲ್ಲಿರುವ ಕಚೇರಿಯಿಂದ ನಿರಂತರ ಮೈಕ್​ನಲ್ಲಿ ಎಚ್ಚರಿಕೆ ಕೊಡುತ್ತಿರುತ್ತಾರೆ. ಯುವಕರು ಹೇಳಿದಷ್ಟೂ ಹಠದಿಂದ ಈಜಿಗೆ ಇಳಿದು, ಅಪಾಯ ತಂದುಕೊಳ್ಳುತ್ತಾರೆ. ಸಮುದ್ರಕ್ಕೆ ಹೋದಾಗ, ಕಿನಾರೆಯಲ್ಲಿ ಪ್ರಕೃತಿಯನ್ನು ಸವಿಯಬಹುದು. ಜಲಸಮೃದ್ಧಿ ನೋಡಿ ಸಂತೋಷ ಪಡಬಹುದು. ಸೂರ್ಯಾಸ್ತವನ್ನು ಕಣ್ತುಂಬ ನೋಡಿ ಮನ ತುಂಬಿಕೊಳ್ಳಬಹುದು. ನಾನೂ ಕೂಡ ಬಾಲ್ಯದಲ್ಲಿದ್ದಾಗ ಅಜ್ಜನಮನೆಗೆ ಎಂದು ಪಡುಬಿದ್ರಿಗೆ ಹೋದಾಗ, ಸಮುದ್ರದ ಕಿನಾರೆಗೆ ಹೋಗುತ್ತಿದ್ದೆ. ಸಮುದ್ರದಲ್ಲಿ ಸ್ನಾನ ಮಾಡುವಾಗ ನಮ್ಮ ಜೊತೆಯಲ್ಲಿ ಯಾವಾಗಲೂ ಇಬ್ಬರು ಕಟ್ಟಾಳುಗಳನ್ನು ನಿಲ್ಲಿಸುತ್ತಿದ್ದರು. ಯಾಕೆಂದರೆ ಸಮುದ್ರದ ಅಲೆ ಬರುವಾಗ ಎಷ್ಟು ಸಂತೋಷವಾಗುತ್ತದೋ ಹಾಗೆಯೇ ತೆರೆಯು ಹಿಂದೆ ಹೋಗುವಾಗ ನಮ್ಮ ಕಾಲಿನ ಅಡಿಯಲ್ಲಿರುವ ಮರಳನ್ನು ಎಳೆದುಕೊಂಡು ಹೋಗಿ, ನೀರಿನಲ್ಲಿ ಬೀಳಿಸಿ ಬಿಡುತ್ತದೆ. ನನ್ನ ಚಿಕ್ಕಪ್ಪ, ಪಡುಬಿದ್ರೆಯ ಅರಸುಗಳು- ಕಿನ್ಯಕ್ಕ ಬಲ್ಲಾಳರು ಹೇಳುತ್ತಿದ್ದರು-ಸಮುದ್ರಕ್ಕೆ ಇಳಿಯುವಾಗ ಮುನ್ನೆಚ್ಚರಿಕೆ ಇರಬೇಕು. ಹೇಗೆಂದರೆ ಸಮುದ್ರ ಎಲ್ಲವನ್ನೂ ಹೊರಗೆ ಹಾಕುತ್ತದೆ. ಅಂದರೆ ನೀವು ಯಾವ ವಸ್ತುವನ್ನು ಸಮುದ್ರದಲ್ಲಿ ಬಿಸಾಡಿದರೂ ವಸ್ತುಗಳು ಹಿಂದೆ ಬರುತ್ತವೆ. ಆದರೆ ಮನುಷ್ಯರನ್ನು ಒಳಗೆ ಎಳೆದುಕೊಳ್ಳುತ್ತದೆ ಎಂದು. ಹಾಗಾಗಿ ಸಮುದ್ರದಲ್ಲಿ ಸ್ನಾನ ಮಾಡಬೇಕಾದರೆ ವಿಶೇಷವಾದ ಈಜುಗಾರಿಕೆ ಗೊತ್ತಿರಬೇಕು ಮತ್ತು ಸಮುದ್ರದ ಸೆಳೆತ, ಅಪಾಯದ ಜಾಗಗಳ ಪರಿಚಯವಿರಬೇಕು. ಜೊತೆಗೆ ಮುನ್ನೆಚ್ಚರಿಕೆಯ ಕ್ರಮಗಳನ್ನೂ ಕೈಗೊಳ್ಳಬೇಕು.

ಕೆರೆ, ನದಿ, ಸಮುದ್ರ ಮೂರು ವಿಧದಲ್ಲೂ ವ್ಯತ್ಯಾಸಗಳಿವೆ. ಕೆರೆ ಸ್ತಬ್ಧವಾದ ನೀರು. ಅಂದರೆ ನಿಂತ ನೀರು. ಇಲ್ಲಿ ಈಜಲು ಪರಿಣತಿ ಇರಬೇಕು. ಅಂದರೆ ಹೊಸಬರು ಅದರ ಆಳವಾದ ಪ್ರದೇಶವನ್ನು ಬಿಟ್ಟು, ಮೃದು ಅಥವಾ ಜೇಡಿಮಣ್ಣು, ಮರಳು ಇರುವಂಥ ಸ್ಥಳವನ್ನು ಬಿಟ್ಟು ಗಟ್ಟಿಯಾದ ಸ್ಥಳವನ್ನು ನೋಡಿ ಇಳಿಯಬಹುದು. ಇಲ್ಲಿ ಈಜು ಗೊತ್ತಿಲ್ಲದೆ ಕೆಳಗಿಳಿದರೆ ಅದು ನಿಂತ ನೀರಾದುದರಿಂದ ಅನಾಹುತ ನಿಶ್ಚಿತ. ನದಿಯ ನೀರಿನಲ್ಲಿ ಸ್ನಾನ ಮಾಡಬೇಕಾದರೂ ಅನುಭವ ಬೇಕು. ಯಾಕೆಂದರೆ ಹರಿಯುವ ನೀರಿನಲ್ಲಿ ಸೆಳೆತವಿರುತ್ತದೆ.

ಸಮುದ್ರದಲ್ಲಿ ಈಜಬೇಕಾದರೆ ಸಾಮಾನ್ಯವಾದ ಈಜುಗಾರಿಕೆ ಅಭ್ಯಾಸ ಸಾಲದು. ಇತ್ತೀಚೆಗೆ ಅನೇಕ ಮಂದಿ ಬೆಸ್ತರು ಅಥವಾ ಮೀನುಗಾರರೇ ಸಮುದ್ರ ಪಾಲಾದ ಘಟನೆಯನ್ನು ಕೇಳುವಾಗ ಆಶ್ಚರ್ಯವಾಯಿತು. ಹೆಚ್ಚಿನ ಮೀನುಗಾರರು ಮತ್ತು ಅವರ ಕುಟುಂಬದವರು ಶ್ರೀಕ್ಷೇತ್ರ ಧರ್ಮಸ್ಥಳದ ಭಕ್ತರಾದುದರಿಂದ ಧರ್ಮಸ್ಥಳಕ್ಕೆ ಅವರು ಬಂದಾಗ, ‘ಸಮುದ್ರದಲ್ಲಿ ದೋಣಿ ಮಗುಚಿ ಸಾವು ಉಂಟಾಯಿತಲ್ಲ! ಅದು ಹೇಗೆ ಸಾಧ್ಯ? ನೀವು ದಿನವೂ ಸಮುದ್ರದಲ್ಲೇ ಇರುವವರು. ಈಜು ಗೊತ್ತಿರುವವರು. ನಿಮಗೆ ಹೇಗೆ ಆಪತ್ತು ಬರುತ್ತದೆ?’ ಎಂದು ಕೇಳಿದೆ. ಅದಕ್ಕವರು ಹೇಳಿದರು- ‘ಸಾಮಾನ್ಯವಾಗಿ ಈಜು ಗೊತ್ತಿದ್ದರೂ ಸಮುದ್ರದಲ್ಲಿ ದೋಣಿ ಮಗುಚಿದಾಗ ಅದರೊಳಗೆ ಇರುವ ಬಲೆ, ಮೀನು ಹಿಡಿಯುವಂಥ ಉಪಕರಣಗಳು ದೋಣಿಯಲ್ಲಿದ್ದ ವ್ಯಕ್ತಿಗಳ ಕೈಗೋ ಕಾಲಿಗೋ ಸುತ್ತು ಹಾಕಿಕೊಂಡು ಅವರು ಈಜಲಾರದೆ ಮುಳುಗುವಂಥ ಪರಿಸ್ಥಿತಿ ನಿರ್ವಣವಾಗುತ್ತದೆ. ಇನ್ನು ಕೆಲವರು ಸಮುದ್ರದ ಆಳದಲ್ಲಿ ಬಿದ್ದಾಗ ಭಯದಿಂದ ಮತ್ತು ಅಕಸ್ಮಾತ್ತಾಗಿ ಉಂಟಾದ ಪರಿಸ್ಥಿತಿಗಳಿಂದಾಗಿ ಹೆಚ್ಚು ಹೊತ್ತು ಈಜಲಾರದೆ ಅಥವಾ ಈಜಿಯೂ ದಡವನ್ನು ಸೇರಲಾಗದೆ ಕೈಸೋತು ಸಾವನ್ನಪು್ಪತ್ತಾರೆ’. ಹಾಗಾಗಿ ಅವರು ಇಲ್ಲಿಗೆ ಬಂದಾಗ ನಾನು ಹೇಳುವುದುಂಟು, ‘ನೀವು ಮಂಜುನಾಥ ಸ್ವಾಮಿಯ ಸೇವೆ ಮಾಡಿ. ಜಲಾಘಾತ ಆಗಬಾರದು ಎಂಬುದಾಗಿ ಪ್ರಾರ್ಥಿಸಿಕೊಳ್ಳಿ. ನಿಮಗೆ ಅಪಾಯ ಬರದಿರಲಿ.’

ಶಾಸ್ತ್ರದಲ್ಲಿ ಉಲ್ಲೇಖವಾದಂತೆ ಆರೂಢನವಾಂಶದ ಸಪ್ತಮದಲ್ಲಿ ಮಾಂದಿಯಿಂದ ಕೂಡಿದ ಚಂದ್ರನಿದ್ದರೆ ಜಲಗಂಡಾಂತರ ದೋಷ ಸಂಭವಿಸುತ್ತದೆ. ಜನ್ಮಕಾಲದಲ್ಲಿ ಲಗ್ನ ಮತ್ತು ಚಂದ್ರ ಈ ಎರಡೂ ಜಲರಾಶಿಯಾದರೆ ಅಥವಾ ಲಗ್ನವು ಜಲರಾಶಿಯಾಗಿದ್ದು ಅದಕ್ಕೆ ಪೂರ್ಣಚಂದ್ರನ ದೃಷ್ಟಿ ಇದ್ದರೆ ಜಲಸಮೀಪದಲ್ಲಿ ಜನನವಾಗುವುದು. ಜನ್ಮಲಗ್ನದಿಂದ ಅಷ್ಟಮಭಾವರಾಶಿ ಕಾಲಪುರುಷನ ಯಾವ ಅಂಗವೆಂದು ಹೇಳಿದೆಯೋ ಆ ಅಂಗಕ್ಕೆ ಪೀಡೆಯುಂಟಾಗಿ ಮೃತ್ಯುವು ಬರುತ್ತದೆ. ಜನ್ಮಲಗ್ನದಿಂದ ಅಷ್ಟಮಭಾವರಾಶಿಯನ್ನು ಚಂದ್ರನು ನೋಡುತ್ತಿದ್ದರೆ ನೀರಿನಿಂದ ಮರಣವು ಎಂದು ತಿಳಿಸಿದ್ದಾರೆ. ಈ ಮೇಲೆ ಹೇಳಿದಂಥ ಜಲಾಘಾತ ಉಂಟಾದಾಗ, ಪ್ರಥಮ ಚಿಕಿತ್ಸೆಗಳು ತಕ್ಷಣದಲ್ಲಿ ದೊರಕುವುದಿಲ್ಲ. ನೀರಿಗಿಳಿದಾಗ ಉಸಿರುಕಟ್ಟಿ ಜೀವ ಕಳೆದುಕೊಳ್ಳುವವರು ಹೆಚ್ಚು. ನೀರಿನಲ್ಲಿ ಒಂದು ನಿಮಿಷ, ಒಂದೂವರೆ ನಿಮಿಷಕ್ಕಿಂತ ಹೆಚ್ಚು ಉಸಿರುಗಟ್ಟಿ ಇರಲು ಸಾಧ್ಯವಾಗುವುದಿಲ್ಲ. ಈ ರೀತಿಯ ಆಘಾತ ಆದಾಗ ಅಥವಾ ಭಯಕ್ಕೆ ಒಳಪಟ್ಟಾಗ ಶ್ವಾಸೋಚ್ಛಾ ್ವಗಳು ಇನ್ನೂ ತೀವ್ರವಾಗಿ ನಡೆದಾಗ ಪ್ರಾಣ ಉಳಿಸಿಕೊಳ್ಳುವುದಕ್ಕೆ ಹೆಚ್ಚಿನ ಸಮಯ ಮತ್ತು ಅವಕಾಶ ಇರುವುದಿಲ್ಲ.

ಹಾಗಾಗಿ, ನೀರು ಕಂಡ ತಕ್ಷಣ ಉತ್ಸಾಹದಿಂದ ಜಿಗಿದು ಬಿಡಬೇಡಿ. ಈಜು ಕಲಿಯುವುದಕ್ಕೆ ಹಿಂದಿಗಿಂತ ಈಗ ಬೇಕಾದಷ್ಟು ಅವಕಾಶಗಳಿವೆ. ನಾವು ಸಣ್ಣವರಿದ್ದಾಗ ಎರಡು ಸಿಪ್ಪೆ ಸಹಿತ ದೊಡ್ಡ ತೆಂಗಿನಕಾಯಿಗಳನ್ನು ಒಂದಕ್ಕೊಂದು ಜೋಡಿಸಿ, ಅದನ್ನು ಹೊಟ್ಟೆಗೆ ಕಟ್ಟಿಕೊಂಡು ನೀರಿಗಿಳಿಯುತ್ತಿದ್ದೆವು. ನಾನು ಈಜು ಕಲಿತದ್ದು ಇದೇ ರೀತಿ. ಎರಡು ಸಿಪ್ಪೆ ಸಹಿತ ದೊಡ್ಡದಾದ ತೆಂಗಿನಕಾಯಿಯನ್ನು ಹಗ್ಗದಿಂದ ಜೋಡಿಸಿ, ವಾಹಕವನ್ನು ಸೊಂಟಕ್ಕೆ ಕಟ್ಟಿಕೊಂಡು ನೀರಿಗೆ ಇಳಿಯುವುದು. ಮೊದಲು ಇದನ್ನು ಹೊಟ್ಟೆಯ ಮಟ್ಟಕ್ಕೆ ಕಟ್ಟಿಕೊಂಡು ಇಳಿಯುತ್ತಿದ್ದು ತದನಂತರ ಅದನ್ನು ಎದೆಯ ಮಟ್ಟಕ್ಕೆ ಕಟ್ಟಿಕೊಂಡು ಇಳಿದು ಈಜು ಅಭ್ಯಾಸ ಮಾಡಿದೆ. ಇದು ಸುಲಭವಾದ ಉಪಾಯ. ಯಾಕೆಂದರೆ ಈ ತೆಂಗಿನಕಾಯಿಗಳು ನೀರಿನಲ್ಲಿ ಮುಳುಗದಂತೆ ತೇಲಿಸುತ್ತವೆ. ನಂತರದ ಕಾಲಘಟ್ಟದಲ್ಲಿ ವಾಹನಗಳ ಟ್ಯೂಬ್​ಗಳು ಬಂದವು. ಈಗ ಪ್ರಾಥಮಿಕ ಈಜು ಅಭ್ಯಾಸಕ್ಕೆ ಸೂಕ್ತವಾದ ಪರಿಕರಗಳು ದೊರಕುತ್ತವೆ. ಹಂತಹಂತವಾಗಿ ಈಜನ್ನು ಕಲಿಯಬೇಕು. ಎರಡನೇ ಹಂತದಲ್ಲಿ ದೀರ್ಘವಾಗಿ ಈಜುವುದನ್ನು ಕಲಿಯಬಹುದು. ಆದರೆ ಹರಿಯುವ ನೀರಿನಲ್ಲಿ ತೆಂಗಿನಕಾಯಿ, ಅಥವಾ ಟ್ಯೂಬನ್ನು ಉಪಯೋಗಿಸಿ ಈಜುವುದು ಸುಲಭವಲ್ಲ.

ಯುವಕರು ಮತ್ತು ಸಣ್ಣ ವಯಸ್ಸಿನ ಮಕ್ಕಳು ನೀರಿನಲ್ಲಿ ಬಿದ್ದು ಸಾಯುವುದನ್ನು ಕಂಡಾಗ ತೀವ್ರವಾದ ದುಃಖವಾಗುತ್ತದೆ. ದಯವಿಟ್ಟು ಎಲ್ಲರೂ ಈಜುವುದನ್ನು ಕಲಿಯಿರಿ. ಏಕೆಂದರೆ, ಈಜು ಬಾರದಿದ್ದರೆ ಸಣ್ಣ ನೀರಿನಲ್ಲೂ ಮುಳುಗಿ ಹೋಗುವಂಥ ಸಂಭವವಿರುತ್ತದೆ. ಈಜು ಬಾರದ್ದವರು ನದಿ ಅಥವಾ ಸಮುದ್ರಗಳಲ್ಲಿ ಆಳಕ್ಕೆ ಹೋಗಬಾರದು. ಈಜು ಬಂದರೂ ನೀರು ಎಷ್ಟೋ ಸಲ ನಮ್ಮ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಆದ್ದರಿಂದ ಯಾರಾದರೂ ಹಿರಿಯರನ್ನು ಜೊತೆಯಲ್ಲಿ ಕರೆದುಕೊಂಡು ಕೆರೆಗಳಿಗೆ, ನದಿಗಳಿಗೆ ಸ್ನಾನಕ್ಕೆ ಇಳಿಯಬೇಕು. ಹಿರಿಯರ ಮಾರ್ಗದರ್ಶನ ಮತ್ತು ಸಲಹೆಯನ್ನು ಗೌರವದಿಂದ ಸ್ವೀಕರಿಸಿ, ಈಜು ಕಲಿಯೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net