ರೂಢಿಯೊಳಗುತ್ತಮರಾದ ಡಾ.ಸಿಂಗ್

ವಿಜಯವಾಣಿ (4)
Published on
ಟ್ರಿಲಿಯನ್ ಡಾಲರ್ ಆರ್ಥಿಕತೆಗಳ ಬಗ್ಗೆ ಮಾತನಾಡುವಷ್ಟು ನಾವು ಬಲಿಷ್ಠರಾಗಿದ್ದೇವೆಂದರೆ ಅದಕ್ಕೆ ಕಾರಣೀಭೂತರು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್. ‘ಆಧಾರ್’ ಈಗ ಅಧಿಕೃತ ದಾಖಲೆಯಾಗಿದೆ ಎಂದರೆ ಅದಕ್ಕೆ ಅಡಿಪಾಯ ಹಾಕಿದ್ದು ಮನಮೋಹನ್ ಸಿಂಗ್. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮೂಲಕ ಬಡ ಗ್ರಾಮೀಣ ಜನರು 100 ದಿನಗಳ ಉದ್ಯೋಗ ಪಡೆಯುತ್ತಿದ್ದಾರೆಂದರೆ ಅದಕ್ಕೆ ಸಿಂಗ್ ಕಾರಣರು.

ಬಡವರು ಪಡಿತರ ಕಾರ್ಡ್ ಮೂಲಕ ಆಹಾರ ಧಾನ್ಯ ಪಡೆದು ಹಸಿವು ನೀಗಿಸಿಕೊಳ್ಳುತ್ತಿದ್ದಾರೆಂದರೆ ಅದು ಸಿಂಗ್ ಅವರ ಕೊಡುಗೆ. 14 ವರ್ಷದೊಳಗಿನ ಎಲ್ಲ ಮಕ್ಕಳು ಉಚಿತ ಶಿಕ್ಷಣ (ರೈಟ್ ಟು ಎಜುಕೇಷನ್- ಆರ್​ಟಿಇ) ಪಡೆಯುತ್ತಿದ್ದಾರೆಂದರೆ ಅದು ಸಿಂಗ್ ಅವರ ವರದಾನ. ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರಿಗೆ ಬಲ ನೀಡಿ, ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಸಿಂಗ್ ಅವರು ಜಾರಿಗೆ ತಂದ ಮಾಹಿತಿ ಹಕ್ಕು ಕಾಯ್ದೆ (ರೈಟ್ ಟು ಇನ್​ಫಮೇಶನ್- ಆರ್​ಟಿಐ) ಕಾರಣವಾಗಿದೆ. ಆರ್​ಟಿಐ ಭಾರತಕ್ಕೆ ಸಿಕ್ಕ ಎರಡನೇ ಸ್ವಾತಂತ್ರ್ಯವೇ ಆಗಿದೆ.

ಸಾಮಾನ್ಯವಾಗಿ ಈಗ ಒಂದು ಪದವಿ ಪಡೆದಿದ್ದರೂ ನಾವು ದೊಡ್ಡ ಮೇಧಾವಿ ಎಂದುಕೊಳ್ಳುತ್ತೇವೆ. ಆದರೆ ಮನಮೋಹನ್ ಸಿಂಗ್ ಅಂದಿನ ಕಾಲದಲ್ಲೇ ಪ್ರತಿಷ್ಠಿತ ಕೇಂಬ್ರಿಡ್ಜ್ ಹಾಗೂ ಆಕ್ಸ್​ಫರ್ಡ್ ಎರಡರಲ್ಲೂ ವ್ಯಾಸಂಗ ಮಾಡಿ ಮಹಾಜ್ಞಾನಿಯಾಗಿದ್ದರು. ಆದರೂ ನಿಗರ್ವಿಯಾಗಿದ್ದರು. ಅರ್ಥ ವ್ಯವಸ್ಥೆಯ ಬಹುತೇಕ ಎಲ್ಲ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಆ ಹುದ್ದೆಗಳಿಗೆ ಗೌರವ ತಂದುಕೊಟ್ಟವರು.

ಭಾರತವಷ್ಟೇ ಅಲ್ಲ, ವಿಶ್ವದ ಬಲಿಷ್ಠ ರಾಷ್ಟ್ರವಾದ ಅಮೆರಿಕ ಕೂಡ ಆರ್ಥಿಕ ಸಂಕಷ್ಟದಲ್ಲಿದ್ದಾಗ ಯಾರದ್ದಾದರೂ ಆರ್ಥಿಕ ಸಲಹೆ ಪಡೆದಿತ್ತೆಂದರೆ ಅದು ಡಾ. ಮನಮೋಹನ್ ಸಿಂಗ್ ಎಂಬ ಅರ್ಥಶಾಸ್ತ್ರಜ್ಞರಿಂದ ಎಂಬುದು ಹೆಮ್ಮೆಯ ವಿಚಾರ. ಅವರು ಹಣಕಾಸು ಸಚಿವರಾಗಿ, ನಂತರ ಪ್ರಧಾನಿಯಾಗಿ ಈ ದೇಶಕ್ಕಾಗಿ ಜಾರಿಗೆ ತಂದ ಯೋಜನೆಗಳು ಭವಿಷ್ಯದ ಭಾರತದ ದಾರಿದೀಪವಾಗಿವೆ; ನಾವು ಅದರಲ್ಲೇ ಜೀವಿಸುತ್ತಿದ್ದೇವೆ. ‘ಆಕಸ್ಮಿಕ’ವಾಗಿ ಅವರು ಪ್ರಧಾನಿಯಾದುದನ್ನೇ ಆಡಿಕೊಳ್ಳುವವರ ನಡುವೆ, ಆಕಸ್ಮಿಕವೂ ಅವಕಾಶ ಎಂಬುದನ್ನು ತೋರಿಸಿಕೊಟ್ಟವರು ಅವರು. ಬಹುಶಃ ಆಕಸ್ಮಿಕವಾಗಿ ಅವರು ಪ್ರಧಾನಿಯಾಗಿರದಿದ್ದರೆ ಇಂದು ಭಾರತ ಚರಿತ್ರೆ ಸೃಷ್ಟಿಸುವ ದೇಶವಾಗಿರುತ್ತಿರಲಿಲ್ಲ! ಎಂದೂ ಯಾರೂ ಮಾಡಿರದ, ಮುಂದೂ ಯಾರೂ ಮಾಡಲಾಗದ ಸಾಧನೆಗಳನ್ನು ಅವರು ಮಾಡಿದ್ದಾರೆ. ದೇಶದ ರೈತರ ಸಾಲ ಮನ್ನಾ ಮಾಡಿದ ಮೊದಲ ಮತ್ತು ಈವರೆಗಿನ ಪ್ರಧಾನಿಗಳಲ್ಲಿ ಏಕೈಕ ವ್ಯಕ್ತಿ ಡಾ. ಸಿಂಗ್. ಅಂಥ ಧೈರ್ಯದ ನಿರ್ಧಾರಗಳನ್ನು ಸಿಂಗ್​ರಂಥ ಸಿಂಗ್ ಮಾತ್ರ ಕೈಗೊಳ್ಳಲು ಸಾಧ್ಯ.

ರಾಷ್ಟ್ರದ ಸೇವೆಯನ್ನು ದೇವರ ಕೆಲಸದಂತೆ ಕಣ್ಣಿಗೊತ್ತಿಕೊಂಡು ಮಾಡಿದ ಸಿಂಗ್ ಅವರನ್ನು ಇಂದು ಇಡೀ ದೇಶ, ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳು ಸ್ಮರಿಸುತ್ತಿವೆ ಎಂದರೆ ಅವರ ನಿಷ್ಠೆ, ಕಾರ್ಯತತ್ಪರತೆ ಮತ್ತು ಶಿಸ್ತು ಎಷ್ಟು ಪರಿಣಾಮಕಾರಿಯಾಗಿತ್ತೆಂದು ಊಹಿಸಿಕೊಳ್ಳಬಹುದು. ಅವರಿದ್ದಾಗ ಅವರ ಬಗ್ಗೆ, ಅವರ ಕೆಲಸಗಳ ಬಗ್ಗೆ ಭಾರತೀಯರು ಕೇಳಿಸಿಕೊಂಡಿದ್ದೇ ಕಡಿಮೆ. ಕಾರಣ ಅವರು ಅಬ್ಬರದ ಪ್ರಚಾರ ಬಯಸದೇ ಮೌನಿಯಾಗೇ ಕಾರ್ಯಸಾಧನೆ ಮಾಡಿದವರು.

ಆದರೆ, ಅವರನ್ನು ಟೀಕೆಗಳಿಂದ ಜರಿದವರೇ ಹೆಚ್ಚು; ಇದ್ದಾಗಲೂ, ಅಧಿಕಾರದಿಂದ ಇಳಿದಾಗಲೂ! ‘ಇಂದಿನ ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳಿಗಿಂತ, ಇತಿಹಾಸ ನನ್ನ ಬಗ್ಗೆ ಕರುಣೆ ತೋರಿಸುತ್ತದೆ’ ಎಂದು ಸಿಂಗ್ ಅವರು ಹಿಂದೆ ಹೇಳಿದ್ದ ನುಡಿಗಳನ್ನು ಕೇಳಿದಾಗ ನನ್ನ ಕಣ್ಣಾಲಿಗಳು ಒದ್ದೆಯಾದವು. ಸಿಂಗ್ ಸರ್, ಇತಿಹಾಸ ನಿಜಕ್ಕೂ ನಿಮ್ಮ ಮೇಲೆ ಕರುಣೆ ತೋರುತ್ತದೆ; ಈ ರಾಷ್ಟ್ರ, ಈ ಜಗತ್ತು ನಿಮ್ಮಂಥ ಅರ್ಥಶಾಸ್ತ್ರಜ್ಞರನ್ನು ಎಂದಿಗೂ ಮರೆಯುವುದಿಲ್ಲ.

(ಲೇಖಕರು ಮಾಜಿ ಶಾಸಕಿ ಹಾಗೂ ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net