

ನೆರೆ ಕೆನ್ನೆಗೆ ತೆರೆ ಗಲ್ಲಕೆ, ಶರೀರ ಗೂಡುವೋಗದ ಮುನ್ನ
ಹಲ್ಲು ಹೋಗಿ, ಬೆನ್ನು ಬಾಗಿ,ಅನ್ಯರಿಗೆ ಹಂಗಾಗದ ಮುನ್ನ
ಕಾಲ ಮೇಲೆ ಕೈಯ್ಯನೂರಿ, ಕೋಲ ಹಿಡಿಯದ ಮುನ್ನ
ಮುಪ್ಪಿನಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ ಪೂಜಿಸು ಕೂಡಲ ಸಂಗಮದೇವನ
| ಬಸವಣ್ಣ
ಇರುವುದು ಒಂದೇ ಜೀವನ. ಅದನ್ನು ಅರ್ಥಪೂರ್ಣವಾಗಿ ಜೀವಿಸಬೇಕು. ಅದಕ್ಕೆ ಬಾಲ್ಯದಿಂದಲೇ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಯಾವುದೇ ಕೆಲಸವನ್ನು ಇಂದು ಬೇಡ ನಾಳೆ ಮಾಡೋಣ, ಯೋಚಿಸೋಣ ಎಂದು ಭವಿಷ್ಯಕಾಲಕ್ಕೆ ಮುಂದೂಡುವುದು ಸರಿಯಲ್ಲ. ಏಕೆಂದರೆ ವಯಸ್ಸಾದ ನಂತರ ಯಾವುದೇ ನಿರ್ಧಾರಗಳಿಗೆ ರೂಪುರೇಷೆ ನೀಡಲು ಸಮಯ ಸಿಗುವುದಿಲ್ಲ. ಅದನ್ನು ಸರಿಯಾದ ರೀತಿಯಲ್ಲಿ ಕಾರ್ಯಗತಗೊಳಿಸಲು ಉತ್ಸಾಹವೂ ಇರುವುದಿಲ್ಲ. ಹಾಗಾಗಿ ಸಮಯದ ಕಾರಣ ನೀಡಿ ಕೆಲಸ ಮುಂದೂಡದೆ ಅಂದಿನ ಕೆಲಸ ಅಂದೇ ಮಾಡುವುದು ಒಳ್ಳೆಯದು.
ನಮ್ಮ ಜೀವನದ ದೋಣಿಗೆ ನಾವೇ ನಾವಿಕರು. ಹಾಗಾಗಿ ಆರಂಭದಿಂದಲೇ ಅದನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿಕೊಂಡು ಹೋದರೆ. ತಡವಾದರೂ ನಿರ್ದಿಷ್ಟ ಗುರಿ ತಲುಪಬಹುದು. ಬದಲಿಗೆ ಸಮಯ ವ್ಯರ್ಥ ಮಾಡುವುದು. ಇಲ್ಲವೇ ಅನಗತ್ಯ ಆತುರ ತೋರಿದರೂ, ಗುರಿಯಿಂದ ವಿಮುಖರಾಗುತ್ತೀರ. ಹಾಗಾಗಿ ಸಮಯ ವ್ಯರ್ಥ ಮಾಡದೆ, ನಿರ್ದಿಷ್ಟ ಉದ್ದೇಶ ಮತ್ತು ಗತಿಯಲ್ಲಿ ಸಾಗಿದರೆ ಉತ್ಸಾಹದೊಂದಿಗೆ ಗುರಿಯನ್ನು ಸೇರಬಹುದು.
ವರ್ತಮಾನದಲ್ಲಿ ಬದುಕು ನಡೆಸಿ: ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ಜನರ ಯೋಚನಾ ಲಹರಿಯೂ ಬದಲಾಗಿದೆ. ಪರಿಣಾಮ ವರ್ತಮಾನದಿಂದ ದೂರಾಗುತ್ತಿದ್ದಾರೆ. ಅಂದರೆ ಭೂತಕಾಲದ ವಿಚಾರಗಳ ನೆನಪಿನ ಹೊರೆಯಲ್ಲಿ ಮತ್ತು ಭವಿಷ್ಯ ಕಾಲದ ಕನಸುಗಳ ಪೊರೆಯಲ್ಲಿ ವರ್ತಮಾನದ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾರೆ. ಭೂತ ಭವಿಷ್ಯದ ಬಗ್ಗೆ ಯೋಚಿಸುತ್ತಲೇ ದಿನ ಕಳೆಯುತ್ತಿದ್ದಾರೆ. ಇದರಿಂದ ನಿಜವಾದ ಸಂತೋಷ ಮತ್ತು ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಮನುಷ್ಯನಿಗೆ ಗುರಿ ಇರಬೇಕು. ಅದರ ಸಾಧನೆಗಾಗಿ ಪೂರಕ ಪ್ರಯತ್ನವೂ ಇರಬೇಕು. ಅದು ಸಾಧ್ಯವಾಗುವುದು ವರ್ತಮಾನವನ್ನು ಸರಿಯಾಗಿ ಬಳಸಿಕೊಂಡವರಿಗೆ ಮಾತ್ರ. ಹಾಗಾಗಿ ಭೂತ ಮತ್ತು ಭವಿಷ್ಯತ್ತಿನ ಯೋಚನೆಯಲ್ಲೇ ಇಂದಿನ ಸುಂದರ ಕ್ಷಣವನ್ನು ಕಳೆದುಕೊಳ್ಳಬಾರದು. ಉತ್ತಮ ಜೀವನ ನಡೆಸಲು ವರ್ತಮಾನದಲ್ಲಿ ಬದುಕುವುದನ್ನು ಕಲಿಯಬೇಕು. ಅದರಿಂದ ಭವಿಷ್ಯತ್ತು ಸಹ ಸುಂದರವಾಗಿ ರೂಪುಗೊಳ್ಳುತ್ತದೆ.
ಇಂದಿನ ಪೋಷಕರು ಹಾಗೂ ಯುವಜನತೆ ವರ್ತಮಾನದಲ್ಲಿ ಬದುಕುವುದನ್ನೇ ಮರೆತು ಬಿಟ್ಟಿದ್ದಾರೆನಿಸುತ್ತದೆ. ಸದಾ ಭೂತ ಮತ್ತು ಭವಿಷ್ಯತ್ತಿನ ಬಗ್ಗೆ ಯೋಚಿಸುವುದರಿಂದ ದೇಹ ಮತ್ತು ಮನಸ್ಸುಗಳ ನಡುವೆ ಸಂಪರ್ಕ ಕಡಿದುಹೋಗುತ್ತದೆ. ಇದರಿಂದ ಮನುಷ್ಯನ ಆಲೋಚನಾ ಶಕ್ತಿ ಕುಂದುತ್ತದೆ. ನಿನ್ನೆ-ನಾಳೆಗಳ ದ್ವಂದ್ವ ಯೋಚನೆಗಳಿಂದಾಗಿ ಸದ್ಯದ ಅಸ್ತಿತ್ವದಿಂದ ದೂರಾಗಿ ಅರಿವಿನಿಂದ ವಿಮುಖರಾಗುತ್ತಿದ್ದಾರೆ. ಪ್ರಜ್ಞಾಪೂರ್ವಕ ಜೀವನದಿಂದ ದೂರಾಗುತ್ತಿದ್ದಾರೆ. ಪರಿಣಾಮ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬ ಮಾತಿನಂತೆ ತಮ್ಮ ಬಳಿ ಎಲ್ಲವೂ ಇದ್ದರೂ, ಇಲ್ಲದಿರುವುದರ ಬಗ್ಗೆ ಯೋಚಿಸುತ್ತ ಇರುವ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ವರ್ತಮಾನವನ್ನು ಸರಿಯಾದ ರೀತಿಯಲ್ಲಿ ಬದುಕುವ ಮೂಲಕ ದೇಹ ಮತ್ತು ಮನಸ್ಸಿನ ನಡುವೆ ಸಂಪರ್ಕ ಬೆಳೆಸಿಕೊಂಡಲ್ಲಿ ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಲು ಸಾಧ್ಯವಾಗುತ್ತದೆ. ನಿಮ್ಮ ಬಗ್ಗೆ ನಿಮಗೆ ಅರಿವು ಮೂಡುತ್ತದೆ.
ಹಾದಿಯ ಬಗ್ಗೆ ಗಮನ: ಮನುಷ್ಯ ಗುರಿ ತಲುಪುವುದಕ್ಕಿಂತ ಅದನ್ನು ತಲುಪುವ ದಾರಿ ಬಹಳ ಮುಖ್ಯ ( journey is more important than the destination). ಆದರೆ ಇಂದಿನ ಯುವಪೀಳಿಗೆಯಲ್ಲಿ ಕಾಯುವ ಸಮಯ, ತಾಳ್ಮೆಯೇ ಇಲ್ಲವಾಗಿದೆ. ಎಲ್ಲವನ್ನೂ ಅತಿ ಬೇಗನೆ ಪಡೆದುಕೊಳ್ಳಬೇಕು ಎಂಬ ಆತುರದಲ್ಲಿ ಕಿರುಮಾರ್ಗ ಹುಡುಕುತ್ತಾರೆ. ಗುರಿ ತಲುಪುವುದೊಂದೇ ಉದ್ದೇಶ ಆಗಿರುವುದರಿಂದ ತಾವು ಆಯ್ಕೆ ಮಾಡಿಕೊಂಡಿರುವ ದಾರಿ ಸರಿ ಇದೆಯೇ ಎನ್ನುವುದನ್ನೂ ನೋಡುವುದಿಲ್ಲ. ಆದರೆ ನೆನಪಿರಲಿ, ಗುರಿ ತಲುಪುವುದಕ್ಕಿಂತಲೂ ಮುಖ್ಯವಾದದ್ದು ಅದರ ಪ್ರಯಾಣ.
ಸಿದ್ಧಾಂತಗಳೊಂದಿಗೆ ಬದುಕಿರಿ: ನಮ್ಮ ಪೂರ್ವಿಕರು ಸಿದ್ಧಾಂತಗಳೊಂದಿಗೆ ಬದುಕುತ್ತಿದ್ದರು. ಹಾಗಾಗಿ ಅವರ ಬಳಿ ಏನೂ ಇಲ್ಲದಿದ್ದರೂ ಸಂತೋಷ ನೆಮ್ಮದಿಯಿಂದ ಬದುಕು ನಡೆಸಿದರು. ಆದರೆ ಇಂದಿನ ಆಧುನಿಕ ಜೀವನದಲ್ಲಿ ಮನುಷ್ಯನ ಬಳಿ ಎಲ್ಲವೂ ಇದೆ. ಆದರೆ ಸಿದ್ಧಾಂತ ಕಣ್ಮರೆಯಾಗಿದೆ. ಹಿಂದೆ ಹಣವುಳ್ಳವರು ಇಲ್ಲದವರಿಗೆ ನೀಡುತ್ತಿದ್ದರು, ಹಸಿದವರಿಗೆ ಅನ್ನ ನೀಡುತ್ತಿದ್ದರು, ಕೆರೆ, ಕಟ್ಟೆಗಳನ್ನು ನಿರ್ವಿುಸಿ ಊರಿಗೆ, ದನಕರುಗಳಿಗೆ ನೆರವಾಗುತ್ತಿದ್ದರು. ‘ಪರೋಪಕಾರಂ ಇದಂ ಶರೀರಂ’ ಎಂದು ಜೀವನ ಸಾಗಿಸುತ್ತಿದ್ದರು. ಆದರೆ ಇಂದು ಎಲ್ಲವೂ ಸ್ವಂತಕ್ಕಾಗಿ ಎಂದು ಬದುಕಿದರೂ ಮನುಷ್ಯನಿಗೆ ನೆಮ್ಮದಿ ಸಿಗುತ್ತಿಲ್ಲ.
ಹಣ, ಅಧಿಕಾರ, ಹೆಸರೇ ನಿಜವಾದ ಬದುಕಲ್ಲ: ವೇಗದ ಬದುಕಿನಲ್ಲಿ ಮನುಷ್ಯ ಹಣ, ಅಧಿಕಾರ ಮತ್ತು ಹೆಸರು ಸಂಪಾದನೆಯೇ ನಿಜವಾದ ಬದುಕು, ಅರ್ಥಪೂರ್ಣ ಜೀವನ ಎಂದು ತಿಳಿದಿದ್ದಾನೆ. ಆದರೆ ಇದು ನಿಜವಲ್ಲ. ಯಾವುದೇ ಕೆಲಸದಲ್ಲಿ ಪರೋಪಕಾರ ಇದ್ದರೆ ಅದು ಸಾರ್ಥಕ ಬದುಕು ಎನ್ನಿಸಿಕೊಳ್ಳುತ್ತದೆ. ಪೋಷಕರು ತಾವು ಮಾಡಲಾಗದ್ದನ್ನು ಮಕ್ಕಳು ಮಾಡಲಿ ಎಂದು ಬಯಸುತ್ತಾರೆ. ತಮ್ಮ ಮಕ್ಕಳು ಶಾಲೆಯಲ್ಲಿ ಅಧಿಕ ಅಂಕ ಪಡೆಯಬೇಕು, ಉನ್ನತ ಉದ್ಯೋಗ ಹೊಂದಬೇಕು, ಹೊರದೇಶಕ್ಕೆ ಹೋಗಿ ನೆಲೆಸಬೇಕು, ಹಣ, ಅಧಿಕಾರ ಸಂಪಾದಿಸಬೇಕು ಎಂದು ಯೋಚಿಸುತ್ತಾರೆ. ಬರೀ ಇಷ್ಟನ್ನು ಮಾತ್ರ ಯೋಚಿಸದೆ, ಮಕ್ಕಳಿಗೆ ಪರಿಸರ ಹಾಗೂ ಸಂಬಂಧಗಳ ಬಗ್ಗೆ ಅರಿವು ಹಾಗೂ ಪ್ರೀತಿ ಮೂಡಿಸಬೇಕು. ಯಾರು ಪರಿಸರ ಹಾಗೂ ಸಂಬಂಧಗಳನ್ನು ಪ್ರೀತಿಸುತ್ತಾರೋ, ಗೌರವಿಸುತ್ತಾರೋ ಅವರು ಉತ್ತಮ ರೀತಿಯಲ್ಲಿ ಬದುಕು ನಡೆಸುತ್ತಾರೆ. ‘ಇಲ್ಲಿ ಪಡೆದುಕೊಂಡಿದ್ದನ್ನು ಇಲ್ಲಿಯೇ ಬಿಟ್ಟು ಹೋಗಬೇಕು’ ಎಂಬ ನಿಜವನ್ನು ತಿಳಿದಾಗ ಮನುಷ್ಯನ ಬದುಕಿಗೆ ಹೊಸ ಅರ್ಥ ಬರುತ್ತದೆ; ಜೀವನದ ಕುರಿತ ದೃಷ್ಟಿಕೋನ ಬದಲಾಗುತ್ತದೆ.
(ಲೇಖಕರು ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞರು)