‘ನನ್ನ ಹೊರತಾಗಿಯೂ ಇತರರ’ ಬಗ್ಗೆ ಇರಲಿ ಕಾಳಜಿ: ಡಾ. ಕೆ. ಎಸ್. ನಾರಾಯಣಾಚಾರ್ಯರ ರಾಜಧರ್ಮ ರಾಜನೀತಿ

Indicative Image of unity
Published on

‘ಟೀಂ ಸ್ಪಿರಿಟ್’ ಎನ್ನುತ್ತಾರೆ. ಒಂದು ಫುಟ್​ಬಾಲ್ ಟೀಂ ಇದೆಯೆನ್ನಿ. ಅಲ್ಲಿ ಒಟ್ಟಾರೆ ಗೆಲುವು ಮುಖ್ಯ. ಒಬ್ಬರ, ಇನ್ನೊಬ್ಬರ ಸಾಧನೆ ಗಣನೆ ಆಮೇಲಿನ ಮಾತು. ರಾಷ್ಟ್ರಕ್ಕೆ ಅನ್ವಯಿಸಿ. ಕರ್ನಾಟಕದ ಪ್ರತಿಪಕ್ಷದವರು ರಾಷ್ಟ್ರಾತೀತರಂತೆ ಮಾತನಾಡಿದರೆ, ಸಿಕ್ಕಿದ್ದಕ್ಕೆಲ್ಲ ಮೋದಿಯನ್ನು ಬೈದರೆ? ತಿಹಾರ್ ಜೈಲು ತುಂಬಬೇಕಾಗಿದೆ. ಬೇರೇನು ಹೇಳಲಿ?

ಇಂಥ ಸೂಕ್ಷ್ಮ ವಿಷಯಗಳನ್ನು ಶೀರ್ಷಿಕೆಗಳಲ್ಲಿ ತಿಳಿಸುವುದು ಕಷ್ಟ. ಅದಕ್ಕಾಗಿ ನನ್ನ ವೈಯಕ್ತಿಕ ಜೀವನದಲ್ಲಿನ ಕೆಲ ನಿದರ್ಶನಗಳನ್ನು ಮುಂದಿಡುತ್ತೇನೆ. ನನಗಾಗ ಹದಿನಾರು ವರ್ಷ ವಯಸ್ಸು. ಮೈಸೂರಿನ ಒಂದು ಹೆಸರಾಂತ, ಸಣ್ಣ ವಿದ್ಯಾರ್ಥಿನಿಲಯದಲ್ಲಿ ಇರಬೇಕಾದ ನಿರ್ಬಂಧ, ಓದಿಗಾಗಿ. ಅಲ್ಲಿದ್ದವರು ನನ್ನೊಡನೆ ಸುಮಾರು ಇಪ್ಪತೆôದು ವಿದ್ಯಾರ್ಥಿಗಳು. ಒಬ್ಬ ಪುಂಡ ಬೆಳಗ್ಗೆ ಎದ್ದು ಎಲ್ಲರಿಗಿಂತ ಮುಂಚೆ ಸ್ನಾನಗೃಹದಲ್ಲಿದ್ದ ಬಿಸಿನೀರನ್ನು ಒಂದು ಹಂಡೆಯಷ್ಟು ತಾನೊಬ್ಬನೇ ಖಾಲಿ ಮಾಡಿ, ಬೇರೆ ತಣ್ಣೀರನ್ನೂ ತುಂಬದೆ, ಇತರರಿಗೆ ಸ್ನಾನಕ್ಕೆ ಏನೂ ಸಿಗದಂತೆ ಮಾಡಿ ಹೋಗುತ್ತಿದ್ದ. ಊಟವಾದ ಮೇಲೂ ಕೈ ಕಾಲು ತೊಳೆಯಲು ತುಂಬ ನೀರನ್ನು ಬಳಸಿ, ಹೀಗೆ ತುಂಬ ತಕರಾರಿನವನಿದ್ದ. ಅಲ್ಲಿ ನಾನು ಕಲಿತ ಪಾಠ-‘ಬೇರೆಯವರೂ ಇದ್ದಾರೆಂದು ನೆನಪಿರಲಿ’ ಅಂತ.

ನನ್ನ ಮಾತಾಪಿತೃಗಳು ಚಿಕ್ಕವಯಸ್ಸಿನಲ್ಲೇ ಈ ಬಗ್ಗೆ ಪ್ರಜ್ಞೆ ಕಲಿಸಿದ್ದರು. ಬಡತನದ ಬೇಗೆಯಲ್ಲಿ ಅಷ್ಟಿಷ್ಟು ಅನ್ನ ಮಾಡಿದಾಗ, ಊಟಕ್ಕೆ ಕುಳಿತಾಗ ತಂದೆಯವರು ಅಮ್ಮನನ್ನು ‘ಎಷ್ಟಿದೆ? ತೋರಿಸು’ ಎಂದು ಕೇಳಿ, ಮಕ್ಕಳಿಗೆ, ತಾಯಿಗೆ ಉಳಿಸಿ, ಉಳಿದಿದ್ದನ್ನು ಮಾತ್ರ ಉಣ್ಣುತ್ತಿದ್ದರು. ನಾನು ಧಾರವಾಡದಲ್ಲಿ ಪ್ರಾಧ್ಯಾಪಕನಾಗಿದ್ದಾಗ, 1972ರ ಸುಮಾರಿನಲ್ಲಿ ಬಾಡಿಗೆಮನೆಯಲ್ಲಿದ್ದೆ. ಅಲ್ಲಿ ಬಾವಿ ಇದ್ದ ಪ್ರಯುಕ್ತ, ತಾಯಿಗೆ ಮಡಿಅಡುಗೆಗೆ ಸೌಕರ್ಯವಾಗಲಿ ಅಂತ. ಒಂದು ದಿನ ನನ್ನದೇ ಅಡುಗೆಯ ಪಾಳಿ. ನನ್ನ ಗೃಹಿಣಿ ಒಳಗಿಲ್ಲ. ತಾಯಿ ಊರಲ್ಲಿಲ್ಲ. ಬೆಳಗ್ಗೆ 10 ಗಂಟೆಗೇ ಕಾಲೇಜಿಗೆ ಹೋಗಬೇಕಾಗಿದ್ದು ಅನ್ನ, ಹುಳಿ ಮಾಡಿಟ್ಟು, ಹೊರಟಿದ್ದೆ. ಮಕ್ಕಳು ಸ್ಕೂಲಿಂದ ಬರುವುದು 2 ಗಂಟೆಗೆ. ನಾನೂ ಬಂದು, ಬಡಿಸಿ, ಉಂಡು ಮತ್ತೆ ಕಾಲೇಜಿಗೆ ಹೋಗಬೇಕಾಗಿತ್ತು. ಆ ದುರ್ದಿನಕ್ಕೆ ಮೈಸೂರಿನ ಒಬ್ಬ ಕನ್ನಡ ಪ್ರಾಧ್ಯಾಪಕರು ಪೂರ್ವಸೂಚನೆ ಇಲ್ಲದೆಯೇ ನನ್ನ ಮನೆಗೆ ಬಂದು, ಪತ್ನಿಗೆ ಏನು ಮಾಡುವುದೆಂದು ತಿಳಿಯದೆ ಪೇಚಾಡಿದಾಗ, ಅವರು, ಬಾಳೆಎಲೆ ತಾವೇ ಹಾಕಿಕೊಂಡು, ಐದು ಜನಕ್ಕೆಂದು ಮಾಡಿಟ್ಟ ಅನ್ನವನ್ನೂ, ಹುಳಿಯನ್ನೂ, ತಾವು ಒಬ್ಬರೇ ಗಡದ್ದಾಗಿ ಉಂಡು, ಇತರರಿಗೆ ಏನೂ ಉಳಿಯದಂತೆ ಮಾಡಿ, ಪರರ ಕಾಳಜಿ ಇಲ್ಲದೆಯೇ, ಮಲಗಿ ನಿದ್ರಿಸುತ್ತಿದ್ದರು. ನಾನು 2 ಗಂಟೆಗೆ ಬಂದಾಗ, ಹುಡುಗರು ಹಸಿವೆಯಿಂದ ಅಳುತ್ತಿದ್ದರು! ನಾನು ಅಂಗಡಿಯಿಂದ ಬಾಳೆಹಣ್ಣು ತಂದು ಮಕ್ಕಳಿಗೆ ಕೊಟ್ಟು, ಮತ್ತೆ ಅನ್ನ, ಸಾರು ಮಾಡುವುದಕ್ಕೆ ಎರಡು ಗಂಟೆ ಬೇಕಾಯ್ತು. ನಾನೂ ಅಸ್ತಮಾದಿಂದ ಬಳಲುತ್ತಿದ್ದೆ. ಹೋಟೆಲಿನಿಂದ ತರುವ ರೂಢಿ ಇರಲಿಲ್ಲ. ನಿದ್ರೆಯಿಂದೆದ್ದ ಅತಿಥಿಗಳಿಗೆ ಏನೂ ಅನಿಸಲೇ ಇಲ್ಲ. ಎದ್ದು ತಾವು ಬಂದ ‘ಘನಂದಾರಿ’ ಕೆಲಸದ ಸಲುವಾಗಿ ಕೋಟು, ಪೇಟ ಧರಿಸಿ ಹೊರಟುಬಿಟ್ಟರು. ಅದೇನು? ತಮ್ಮ ಮಗ ಒಂದು ಪರೀಕ್ಷೆಗೆ ಕುಳಿತಿದ್ದ. ಅವನಿಗೆ ಪಾಸಾಗಲು ಬೇಕಾದಷ್ಟು ಅಂಕ ಹಾಕಿಸಲು, ವಿಶ್ವವಿದ್ಯಾಲಯದ ಕೆಲವರನ್ನು ‘ಕಾಣಲು’ ಬಂದ ರಾಷ್ಟ್ರೆೊಪಕಾರಕ ಮಹಾಕಾರ್ಯ. ಮರುದಿನ ಹೇಳದೇ ಕೇಳದೇ ಹೊರಟೇ ಹೋದರು. ‘ಥ್ಯಾಂಕ್ಸ್’ ಎಂಬ ಮಾತೂ ಬರಲಿಲ್ಲ!

‘The sense of other’ ಎಂಬುದೇ ಇಲ್ಲದ ಇಂಥ ಕೋಟಿಗಟ್ಟಲೆ ಭಾರತೀಯರು ಇಂದೂ ಇರುವ ಈ ದೇಶದಲ್ಲಿ ನಾನು, ನೀವು ಹೇಗಿರಬೇಕು? ಯೋಚಿಸಿ. ಈ ನಿದರ್ಶನ ಬರೆಯುವಾಗ ಅವರಿಲ್ಲ! ಸತ್ತು ಹೋದವರನ್ನು ನಿಂದಿಸಬಾರದು. ನಿಮಗೆ ಮನದಟ್ಟಾಗಲೆಂದು ಈ ಉದಾಹರಣೆ. ಕಾಲೇಜಿನಲ್ಲಿ ಲೆಕ್ಚರ್ ಹಾಲ್ ತುಂಬಿಯೂ, ಇನ್ನೂ ಬರುತ್ತಿದ್ದ ವಿದ್ಯಾರ್ಥಿಗಳಿಗೆ ನನ್ನ ಕುರ್ಚಿ, ಟೇಬಲನ್ನೂ ಬಿಟ್ಟುಕೊಟ್ಟು ನಿಂತೇ ಪಾಠ ಮಾಡುತ್ತಿದ್ದೆ. ತರಗತಿಯಲ್ಲಿ ಕರಾರುವಾಕ್ಕು ಕಾಲಪ್ರಜ್ಞೆಯಲ್ಲಿರುತ್ತಿದ್ದೆ. ಎಂ.ಎ. ತರಗತಿಯಲ್ಲಿ ಹನ್ನೆರಡು ವಿದ್ಯಾರ್ಥಿಗಳು. ದಿನಾ ಸೆಮಿನಾರ್ ಪೇಪರ್ ಬರೆದು, ಓದಬೇಕಾಗಿತ್ತು. ನಾನು ಜೀವನೋಪಾಯಕ್ಕಾಗಿ ಒಬ್ಬರ ಮನೆಗೆ ಹೋಗಿ ಮನೆಪಾಠ ಹೇಳಿ, ಬಂದು, ಸ್ನಾನ, ಊಟ ಮಾಡಿ ಕ್ಲಾಸಿಗೆ ಹಾಜರಾಗುವ ಹೊತ್ತಿಗೆ ಒಂದೇ ಒಂದು ದಿನ 5 ನಿಮಿಷ ಲೇಟಾಯ್ತು. ನನ್ನ ಬಗೆಗೆ ಗೊತ್ತಿದ್ದ ಪ್ರೊಫೆಸರು ತಾಳ್ಮೆಯಿಂದ ಕಾದು, ಇತರರನ್ನೂ ಕಾಯಿಸಿ, ನಾನು ಏದುಸಿರು ಬಿಡುತ್ತ ಬಂದಾಗ ಕೂರಿಸಿ, ಫ್ಯಾನು ಹಾಕಿ-‘ಆರ್ ಯೂ ರೆಡಿ’ ಎಂದು ಕೇಳಿ, ಪೇಪರು ಓದಿಸಿದರು! ನಾನು ‘sorry’ ಎಂದಾಗ ಅವರು ‘ನನಗಲ್ಲ ನಿನ್ನ ಸಹಪಾಠಿಗಳಿಗೆ ‘sorry’ ಹೇಳು’ ಎಂದು ಪ್ರೇರಿಸಿದರು. ಇದು ಮ್ಯಾನರ್ಸ್ ಅಯ್ಯ.

ಈಗ ಈ ಪ್ರಜ್ಞೆ-‘The sense of other’ ಎಂಬುದು ಮತಧರ್ಮಗಳಲ್ಲೂ, ಸಾಮಾಜಿಕ ಕ್ಷೇತ್ರಗಳಲ್ಲೂ, ರಾಜಕೀಯದಲ್ಲೂ, ಎಲ್ಲೆಲ್ಲೂ, ಸಂಘಸಂಸ್ಥೆಗಳಲ್ಲೂ ಎಷ್ಟೊಂದು ಇಂದಿಗೆ ನಮ್ಮಲ್ಲಿ ಭಾರತೀಯರಲ್ಲಿ ಅವಶ್ಯವಿದೆ ಎಂಬುದನ್ನು ನಿಮಗೆ ಮನನಾಟುವಂತೆ ಹೇಳಬೇಕಾಗಿದ್ದು. ಆಂಗ್ಲಕವಿ ಸರ್ ಫಿಲಿಪ್ ಸಿಡ್ನಿ ಎಂಬುವನು ಯೋಧನೂ ಇದ್ದ. ಒಂದು ಯುದ್ಧದಲ್ಲಿ ಆ ಜಾಗ ಮರಳು ಏಟಾಗಿ, ಇವನು ಕೆಳಗೆ ಬಿದ್ದು ಸಾಯುವುದರಲ್ಲಿದ್ದ. ಒಂದು ಗುಟುಕು ನೀರನ್ನು-ಬಾಯಾರಿದ್ದ ಆ ಮರಣ ಸಂದರ್ಭದಲ್ಲಿ ಚರ್ಮಚೀಲದಿಂದ ಎತ್ತಿ ಕುಡಿಯಲು ಹೋದಾಗ, ಇವನ ಪಕ್ಕದಲ್ಲೇ ಇದ್ದ ಅಂಥದೇ ಇನ್ನೊಬ್ಬ ಆ ನೀರನ್ನು ಬಯಸಿದ! ಸಿಡ್ನಿ ಅವನಿಗೆ ನೀರನ್ನು ಕೊಟ್ಟು, ‘Brother thy need is more than mine’ ಎಂದು ಹೇಳಿ ಸತ್ತ. ಇದು ನಾನು ಮರೆಯಲಾರದ ಪಾಠವಯ್ಯ!

ಆಂಗ್ಲರಲ್ಲಿ ಈ ಗುಣ ಇದ್ದೇ, ಮಹಾಸಾಮ್ರಾಜ್ಯ ಕಟ್ಟಿದರು. ನಾವು ಈ ಸಂದರ್ಭದಲ್ಲಿ, ಸ್ವಾರ್ಥ, ಭ್ರಷ್ಟಾಚಾರ, ಜಾತಿದ್ವೇಷ, ಸಂಘರ್ಷ, ದಿನಾ ಮುಷ್ಕರ, ಹಣ ಕೂಡಿಡುವ ಹಪಾಪಿ, ಪ್ರಕೃತಿ ಶೋಷಣೆ, ವೈರವೃದ್ಧಿ-ಇವುಗಳ ಬಗ್ಗೆ ತಿಳಿದು, ಪ್ರಜ್ಞಾವಂತರಾಗಿ ಪರಿವರ್ತಿತರಾಗದಿದ್ದರೆ, ಮತ್ತೆ ದಾಸ್ಯ ತಪ್ಪದು! ಒಬ್ಬ ಮೋದಿ ಏನು ಮಾಡುತ್ತಾರೆ? ಅಬ್ದುಲ್ಲಾ ಐಯ್ಯರೂ, ನಗರ ನಕ್ಸಲರೂ, ನಾನಾ ವಿಧ್ವಂಸಕರೂ, ಹಣಬಾಕರೂ, ಬ್ಯಾಂಕುಗಳನ್ನೇ ಮುಳುಗಿಸುವವರೂ, ರಾಜಕೀಯ ವೈರಿಗಳನ್ನು ಕೊಲ್ಲಿಸುವವರೂ, ಶಿಷ್ಯರನ್ನೇ ಶೋಷಿಸುವ ಮಠಪತಿಗಳೂ,ರೈತರ ಹೆಸರಲ್ಲಿ ಶೋಷಕರೂ, ವೇಶ್ಯಾವಾಟಿಕೆ, ಜೂಜಿನ ಅಡ್ಡೆ ನಡೆಸುವ ರೆಸಾರ್ಟ್ ಮಾಲೀಕರೂ-ಸಿನಿಮಾ, ಕ್ರಿಕೆಟ್ ದಂಧೆಗಳಲ್ಲಿ ಡ್ರಗ್ಸ್​ಜಾಲದ-ಪೋಕರಿಪುಂಡರು, ಏನೆಲ್ಲ ಮಾಡಿ ಹಣ ಮಾಡುವ ನೀಚರೂ ಇರುವಾಗ ನಾನು ಧ್ಯೇಯದ ಮಾತುಗಳನ್ನು ಬರೆಯುವುದೂ, ಆಡುವುದೂ ಅಪಹಾಸ್ಯವಾಗುತ್ತದೆ.

ನೀವು ಅನಂತಮೂರ್ತಿ, ಕಾರ್ನಾಡರಾಗುವುದು ಸುಲಭ, ಬಿಎಂಶ್ರೀ, ಡಿವಿಜಿ, ತೀನಂಶ್ರೀ ಆಗಲಾರಿರಿ. ಅವರು ಕನ್ನಡ ತಳಹದಿ ಹಾಕಿದ pioneers. ‘ಮಾನವಜಾತಿ ಒಂದೇ ಕುಲಂ’ ಎಂದು ತಮಟೆ ಬಡಿಯುವವರು ಹಾಗೆ ನಡತೆಯಲ್ಲಿ ತೋರಿಸಿಯಾರೆ? ಈಗ ಕೋವಿಡ್ 19 ಸಂದರ್ಭದಲ್ಲಿ , ಎಂಎಲ್​ಎಗಳೇನಕರು ತಮ್ಮ ಆಸ್ಪತ್ರೆ ಖರ್ಚು ಎಂದು 6, 7, 8 ಲಕ್ಷ ರೂ. ಬಿಲ್ ಮಾಡಿರುವುದು ಟಿವಿಗಳಲ್ಲಿ ಬರುತ್ತಿದೆ! ‘ಬಕಾಸುರ’ ಎಂದರೆ ಇದು ಒಂದು ಸಮಿತಿಯೋ? ಸಂಕೇತವೋ? ಯಾವ ಕಾದಂಬರಿಕಾರನೂ ಬರೆಯಲಾರ! ಬರಹಗಾರನಿಗೆ ತನ್ನ ಕೃತಿಯಿಂದ ಓದುಗರ ಮೇಲೆ ಏನು ಪರಿಣಾಮ ಆಗುತ್ತದೆಂಬ ಪ್ರಜ್ಞೆ ಇರಬೇಕು. ಇಲ್ಲವಾದರೆ? ಆಂಗ್ಲ ಕವಿ ಜಾನ್ ಪೋಪ್ ಹೇಳುತ್ತಿದ್ದ-‘i lisped in numbers, for the numbers came’ ಅಂತ. ಹಾಗೆಂದರೆ, ‘ನಾನೇಕೆ ಬರೆದೆನೆಂದರೆ, ಶಬ್ದಗಳು ತಾವೇ ಜೋಡಿಸಿಕೊಂಡು ಬಂದವು’ ಅಂತ. ಬೇಜವಾಬ್ದಾರ ಮಾತು ಇದು. ‘ಬಾಯಿಗೆ ಬಂದದ್ದೇ ಮಾತು’ ಎಂದರೆ ನಗೆಪಾಟಲು ಅಸೆಂಬ್ಲಿಗಳಂತಾಗುತ್ತದೆ.

ಮತಧರ್ಮ ಪ್ರಸಾರಕರಿಗೆ ಒಬ್ಬನನ್ನು ಮತಾಂತರಿಸಿದರೆ, ಅವನ ಕುಟುಂಬದ ಇತರರ ಗತಿ ಏನಾಗುತ್ತೆ? ಎಂಬ ಕಾಳಜಿ ಇದ್ದರೆ, ಕ್ರೖೆಸ್ತರು ಆಡುವ ‘Compassion, Love’ ಮಾತುಗಳಿಗೆ ಅರ್ಥವಿಲ್ಲವಾದರೆ ಮೋಸ, ಕಪಟ, ರಾಜಕೀಯ ಹುನ್ನಾರ. ಮುಸ್ಲಿಂ ದಾಳಿಕೋರರಿಗೆ ಅನ್ವಯಿಸಿ. ‘ಅವರ ಸ್ತ್ರೀಯರನ್ನು ಇತರರು ಕೆಡಿಸಿದರೆ? ಅವರ ಮಕ್ಕಳನ್ನು ವೇಶ್ಯಾವಾಟಿಕೆಗೆ ಮಾರಿದರೆ?’ ಎಂಬ ಪ್ರಜ್ಞೆ ಆದಿಯಿಂದ ಈವರೆಗೆ ಇಲ್ಲದೆಯೆ ಭಯೋತ್ಪಾದಕರು ಪ್ರಜ್ಞಾಶೂನ್ಯರಾಗಿ ಬೆಳೆಯುತ್ತಿದ್ದಾರೆ! ರಾಜಕೀಯ ಪಕ್ಷಗಳಲ್ಲಿ ಇದೇ ಸ್ಥಿತಿ. ಕೊಳೆತ ಹಣ್ಣುಗಳನ್ನು ಬುಟ್ಟಿ ಬದಲಾಯಿಸಿದರೆ, ಅವು ಕೊಳೆತ ಕಳಕೊಳ್ಳುವುದಿಲ್ಲ. ಎಂಎಲ್​ಸಿ ನಾಮನಿರ್ದೇಶನ ಕಾಲದಲ್ಲಿ ಎಲ್ಲರೂ ‘ನಾನು ಕವಿ’, ‘ನಾನು ನಟ’, ‘ನಿರ್ದೇಶಕ’ ಎನ್ನುತ್ತ, ಬೇಂದ್ರೆ ಹೇಳುವಂತೆ, ‘ನಾ ನಾ ಎನ್ನುತ್ತ ನಾನಾತ್ವ’ ಬೆಳೆಯುವುದು ರಕ್ಕಸಕಳ್ಳಿ ಬೆಳೆಯುವ ರೀತಿ! ಮುಳ್ಳು ಮುಳ್ಳೇ! ‘ಟೀಂ ಸ್ಪಿರಿಟ್’ ಎನ್ನುತ್ತಾರೆ. ಒಂದು ಫುಟ್​ಬಾಲ್ ಟೀಂ ಇದೆಯೆನ್ನಿ. ಅಲ್ಲಿ ಒಟ್ಟಾರೆ ಗೆಲುವು ಮುಖ್ಯ. ಒಬ್ಬರ, ಇನ್ನೊಬ್ಬರ ಸಾಧನೆ ಗಣನೆ ಆಮೇಲಿನ ಮಾತು. ರಾಷ್ಟ್ರಕ್ಕೆ ಅನ್ವಯಿಸಿ. ಕರ್ನಾಟಕದ ಪ್ರತಿಪಕ್ಷದವರು ರಾಷ್ಟ್ರಾತೀತರಂತೆ ಮಾತನಾಡಿದರೆ, ಸಿಕ್ಕಿದ್ದಕ್ಕೆಲ್ಲ ಮೋದಿಯನ್ನು ಬೈದರೆ? ತಿಹಾರ್ ಜೈಲು ತುಂಬಬೇಕಾಗಿದೆ. ಬೇರೇನು ಹೇಳಲಿ? ವಾಜಪೇಯಿ ಮೊದಲ ಸರ್ಕಾರ ಬೀಳಿಸಿದ ತಮಿಳುನಾಡಿನ ಜಯಲಲಿತಾ ಒಂದು ಭಾಷಣದಲ್ಲಿ ‘ಯಾರು ಈ ವಾಜಪೇಯಿ?’ ಎಂದು ಗುಡುಗಿ ಚಪ್ಪಾಳೆ ಗಿಟ್ಟಿಸಿದರು. ಆದರೆ ಹೇಗೆ ಸತ್ತರು? ಶಶಿಕಲಾ ಸ್ಥಿತಿ? ಈ ಬಗೆಯವರಿಗೆ ‘ನಾವು ಒಂದು ರಾಷ್ಟ್ರ, ಅಲ್ಲಿ ತಮಿಳುನಾಡಿನವರೂ ಇದ್ದಾರೆ’ ಎಂಬ ಪ್ರಜ್ಞೆ ಇರುವುದಿಲ್ಲ.

ಸಹಜೀವನದ ಉತ್ತಮ ವೇದಿಕೆ ಈ ರಾಷ್ಟ್ರ. ಒಂದು ವಿಶ್ವ ಸಮ್ಮೇಳನ ಮೈಸೂರಿನಲ್ಲಿ ನಡೆಯುತ್ತಿತ್ತು. ಕನ್ನಡದವರಲ್ಲದ ನೂರು ಜನ ಅಲ್ಲಿದ್ದರು. ಉದ್ಘಾಟಕರಾದ ಅಂದಿನ ವಿ.ಸಿ. ಕನ್ನಡ ಪ್ರೇಮಾತಿಶಯದಿಂದ ಕನ್ನಡದಲ್ಲಿ ‘ಮಾತಾಡಿ’ ಸಭೆಯನ್ನೇ ಕೆಡಿಸಿದರು! ಆಗ ನಾನು ವಿದ್ಯಾರ್ಥಿ, ಅಲ್ಲಿದ್ದೆ. ಕನ್ನಡಪ್ರೇಮ ಇತರರ ತೇಜೋವಧೆಯಿಂದ, ಪ್ರದರ್ಶನೀಯವಾಗಬೇಕಿಲ್ಲ. ಮೊನ್ನೆ, ಮೊನ್ನೆ, ಕರೊನಾ ಬರುವ ಮುನ್ನ ಬೆಂಗಳೂರಿನ ಒಂದು ಸಂಸ್ಥೆ ಅಯೋಧ್ಯೆ ಬಗ್ಗೆ ಒಂದು ಸಭೆ ಸೇರಿಸಿತ್ತು. ಅಲ್ಲಿ ನಾನು ಮುಖ್ಯ ಭಾಷಣಕಾರ. ನನ್ನ ಪಕ್ಕ ಅಯೋಧ್ಯಾ ಉತ್ಖನನದ ಮುಖ್ಯ ರೂವಾರಿ ಕೆ.ಕೆ.ಮಹಮ್ಮದ್ ಇದ್ದರು. ಸಭೆ ಇಂಗ್ಲಿಷಿನಲ್ಲಿ ಭಾಷಣ ಏರ್ಪಡಿಸಿತ್ತು. ನಾನು ಒಂದು ಗಂಟೆ ಕಾಲ ‘ಶ್ರೀರಾಮ, ರಾಮಾಯಣ, ರಾಮ ನನಗೆ, ನಿಮಗೆ ಇಂದೇಕೆ?’ ಎಂದೆಲ್ಲ ಭಾಷಣ ಮಾಡಿದಾಗ ಕೆ.ಕೆ.ಮಹಮ್ಮದ್ ತುಂಬ ಖುಷಿಪಟ್ಟರು. ಒಂದು ಚೀಟಿ ಬಂದು’-‘ಸ್ವಲ್ಪ ಕನ್ನಡದಲ್ಲಿ ಹೇಳಿ’ ಎಂದಾಗ ನಾನು ಮಹಮ್ಮದ್ ಅವರ ಮುಖ ನೋಡಿದೆ. ಅವರು ನಗುತ್ತ ‘ಯೆಸ್’ ಎಂದರು. ಕನ್ನಡದಲ್ಲಿ ಮಾತಾಡುತ್ತ ಆಗಾಗ ಇಂಗ್ಲಿಷಿನಲ್ಲೂ ಮುಖ್ಯಾಂಶ ಹೇಳುತ್ತ ಬಂದಾಗ ಮಹಮ್ಮದ್ ಖುಷಿಪಟ್ಟರು.

ಹಿಂದೆ ಮೇಲುಕೋಟೆಯಲ್ಲಿ Consciousness-‘ಪ್ರಜ್ಞೆ’ ಬಗ್ಗೆ ಒಂದು ಘನ ಸೆಮಿನಾರ್. ಅಲ್ಲಿ ನನ್ನದು ‘ಕೀ ನೋಟ್ ಅಡ್ರೆಸ್’ ಇತ್ತು. ಡಾ.ರಾಜಾರಾಮ್ಲೂ, ನಿಮ್ಹಾನ್ಸ್​ನ ಆರ್.ಎನ್.ವರ್ವ, ಈಸಿಜಿಎಸ್ ಸುದರ್ಶನ, ಇನ್ನಿತರ ವಿಜ್ಞಾನಿಗಳೂ, ಪಾರಂಪರಿಕ ವಿದ್ವಾಂಸರೂ, ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ನಿಟ್ಟೂರು ಶ್ರೀನಿವಾಸರಾಯರೂ ಅಲ್ಲಿದ್ದರು. ನಾನು ಇಂಗ್ಲಿಷಿನಲ್ಲಿ ಮಾತಾಡಬೇಕಾದ ನಿರ್ಬಂಧ ಇತ್ತು. ನಾನು ಹೇಳಿದ್ದು ಪಾರಂಪರಿಕ ವಿದ್ವಾಂಸರಿಗೆ ಏನೂ ತಿಳಿಯಲಿಲ್ಲ. ‘ಕನ್ನಡದಲ್ಲಿ’ ಎಂದು ಒತ್ತಾಯಿಸಿದರು. ಮರುಕ್ಷಣವೇ ಕನ್ನಡದಲ್ಲೂ ಹೇಳಿದಾಗ ಪಂಡಿತರೂ ಪ್ರಶಂಸಿಸಿದರು. ಅಲ್ಲಿ ಭಾಷಾಂಧತೆ ಇರಲಿಲ್ಲ.

ಬರ್ನಾರ್ಡ್ ಷಾ ಅವರ ‘ಸೇಂಟ್ ಜೋನ್’ ಎಂಬ ದುರಂತನಾಟಕದ ಒಂದು ದೃಶ್ಯದಲ್ಲಿ ಹೀಗೆ. ಜೋನ್ (Joan) ಎಂಬುವಳು ಓದು, ಬರಹ ಬಾರದ ಫ್ರೆಂಚ್ ಹುಡುಗಿ, ಫ್ರೆಂಚ್ ರಾಷ್ಟ್ರೀಯತೆಯನ್ನು ಹುಟ್ಟುಹಾಕಿದ ವೀರಮಹಿಳೆ. ಆಗ ಫ್ರಾನ್ಸ್​ನ ಕೆಲ ಭಾಗ ಆಂಗ್ಲರ ಹಿಡಿತದಲ್ಲಿತ್ತು. ಹುಡುಗಿಯನ್ನು ಆಂಗ್ಲರು ಸೆರೆ ಹಿಡಿದರು. Inquisition ಎಂಬ ಪ್ರಹಸನದಲ್ಲಿ ಜೀವಂತ ಸುಡಲು ಕೃತಕ ನ್ಯಾಯಾಲಯ ಸೇರಿಸಿದ್ದರು. ಜಜ್​ರೆಲ್ಲ ಆಂಗ್ಲರು. ವಿಚಾರಣೆ ಆರಂಭವಾದಾಗ, ಆಂಗ್ಲ ಬಿಷಪನ ಪ್ರಶ್ನೆಗೆ ಜೋನ್ ಫ್ರೆಂಚ್ ಭಾಷೆಯಲ್ಲಿ ಉತ್ತರಿಸಿದಾಗ ಮುಖ್ಯ ವಿಚಾರಣಾಧಿಕಾರಿ-ಒಂದು ತಕರಾರು ಎತ್ತಿದ. ‘ದೇವರಿಗೆ ಫ್ರೆಂಚ್ ಭಾಷೆ ಗೊತ್ತಿಲ್ಲವಾಗಿ, ಈ ಹುಡುಗಿ ಫ್ರೆಂಚ್​ನಲ್ಲಿ ಮಾತಾಡಿದ್ದು ಅಪರಾಧ. ಇಲ್ಲೇ ಇದಕ್ಕಾಗಿಯೇ ಇವಳನ್ನು ಸುಡಬೇಕು’ ಅಂತ. ಹೇಗಿದೆ? ಮತಮೊಂಡು? ಭಾಷಾಮೊಂಡು? ‘ಎಲ್ಲರ ಎಲ್ಲ ಭಾಷೆ ತಿಳಿಯದ ದೇವರು ಎಂಥ ದೇವರು?’ ಎಂದು ಕ್ರೖೆಸ್ತರು ಯೋಚಿಸಲಿಲ್ಲ. ಇಂದಿಗೂ ಮತಾಂತರಿಗಳು ಎದುರಿಸುತ್ತಿರುವ ಸಮಸ್ಯೆ ಇದು. ‘ದಾಸಕೂಟ, ವ್ಯಾಸಕೂಟ’, ‘ತೆಂಗಲೈ, ಏಡಗಲೈ’ ಹೆಚ್ಚಾಟದ ಅವಿವೇಕಿಗಳೂ ಪರಿಹಸನೀಯ.

ಮೇಷ್ಟ್ರು ‘ದಿನಾ ಇಂತಿಷ್ಟು’ ಎಂದು ಪಾಠ ಹೇಳುವ ಬದಲು, ತಯಾರಿಯಿದ್ದೂ ಅಂದಂದಿನ, ವಿದ್ಯಾರ್ಥಿಗಳ ಸಮಸ್ಯೆ ತೀರುವಂತೆ, ಅರಿವು ಹಿರಿದಾಗುವಂತೆ ಪಾಠ ಮಾಡುವುದನ್ನು ನಾನು ಅನುಭವದಲ್ಲಿ ಕಲಿತೆ. ಖ್ಯಾತ ಕನ್ನಡ ವಿಮರ್ಶಕರೊಬ್ಬರು (ಈಗಿಲ್ಲ) ಇಂಗ್ಲಿಷು ಪ್ರಾಧ್ಯಾಪಕರಾಗಿದ್ದು, ಒಮ್ಮೆ ನನ್ನ ಕಾಲೇಜಿನಲ್ಲಿ, ವಿದ್ಯಾರ್ಥಿಕೂಟದ ಸಭೆಗೆ, ಅತಿಥಿಯನ್ನಾಗಿ ಆಹ್ವಾನಿಸಿದ್ದರು. ನಾನು ವಿಭಾಗ ಮುಖ್ಯಸ್ಥನಾಗಿ ಸಭಾಧ್ಯಕ್ಷನಾಗಿದ್ದೆ. ಅವರು ಆರಿಸಿಕೊಂಡ ವಿಷಯ, ‘ಮಹಾಭಾರತ ಕಥೆಯ ಮೂಲಸಮಸ್ಯೆಗಳು’ ಅಂತ! ಅರ್ಧಗಂಟೆಗಿಂತ ಕಡಿಮೆ ಅವಧಿಯಲ್ಲಿ ಭಾಷಣ ಮುಗಿಸಿಯೇ ಬಿಟ್ಟರು! ಬೆವರೊರೆಸಿಕೊಳ್ಳುತ್ತ! ಯಾರಿಗೂ ಏನೂ ತಿಳಿಯಲಿಲ್ಲ! ನಾನು ಅವರು ಬಿಟ್ಟಿದ್ದನ್ನೆಲ್ಲ ಒಂದು ತಾಸು ಉಪನ್ಯಾಸ ಮಾಡಿದೆ. ಅವರು ಹೋಗುವಾಗ-‘ಮುಂದಿನ ಸಲ ತಯಾರಿ ಮಾಡಿಕೊಂಡು ಬನ್ನಿ, ಯೋಗ್ಯತೆಗೆ ತಕ್ಕ ವಿಷಯ ಆರಿಸಿ ಬನ್ನಿ’ ಅಂತ ಕಿವಿಮಾತೂ ಹೇಳಿದೆ. ಆಂಗ್ಲ ವಿದ್ಯಾರ್ಥಿಕೂಟದ ಸಭೆಗೆ ಈ ವಿಷಯ ಬೇಕಿರಲಿಲ್ಲ. ‘ಯಾರು ಶ್ರೋತಾ?’ ಎಂಬ ಪರಿಗಣನೆಯೇ ಇಲ್ಲದ ಇಂಥವರು ಇಂದಿನ ಅಸೆಂಬ್ಲಿಗಳಲ್ಲಿ ಮಾತಾಡಲು ಯೋಗ್ಯರು ಅಂತ ಹೇಳಿ, ಮುಗಿಸುತ್ತೇನೆ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net