ಸೃಜನಶೀಲ ಕ್ರಿಯೆಯೇ ಬಿಡುಗಡೆಯ ಹಾದಿ: ಸೆಲೆಬ್ರಿಟಿ ಕಾರ್ನರ್​ನಲ್ಲಿ ಡಾ.ಬಿ.ಆರ್. ರವಿಕಾಂತೇಗೌಡ..

Ravikanthe Gowda
Published on
ನಾವು ಮಾಧ್ಯಮಿಕ ತರಗತಿಗಳಲ್ಲಿ ಓದುವಾಗ ಮನುಷ್ಯನ ವಿಕಾಸ ಮತ್ತು ನಾಗರಿಕತೆಯ ಹಾದಿಯ ಪಠ್ಯಗಳಲ್ಲಿ ಶಿಲಾಯುಗದ ಮಾನವನ ಗುಹೆಗಳಲ್ಲಿ ಚಿತ್ರಿಸಿದ್ದ ಸಾವಿರಾರು ವರ್ಷಗಳ ಹಿಂದಿನ ಚಿತ್ರಗಳು ವಿಸ್ಮಯ ಮೂಡಿಸುತ್ತಿದ್ದವು. ಆ ಚಿತ್ರಗಳನ್ನು ನಿಧಾನಕ್ಕೆ ಸವರಿ ಆ ಕಾಲಕ್ಕೆ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದೆ. ಶಿಲಾಯುಗದ ಮನುಷ್ಯ ಬಿಡುವಿನ ದಿನಗಳಲ್ಲಿ ಈ ರೀತಿಯ ಚಿತ್ರಗಳನ್ನು ಬಿಡಿಸುತ್ತಿದ್ದ ಎಂದು ನಮ್ಮ ಇತಿಹಾಸದ ಮೇಷ್ಟ್ರು ವಿವರಣೆ ನೀಡುತ್ತಿದ್ದರು. ಆದರೆ ಬುದ್ಧಿ ಬೆಳೆದಂತೆ, ಈ ಚಿತ್ರಗಳ ಹಿಂದಿನ ಕತೆ ಇಷ್ಟೇ ಇರಲಿಕ್ಕಿಲ್ಲ ಎನಿಸತೊಡಗಿತ್ತು. ಶಿಲಾಯುಗದ ಮನುಷ್ಯ ಆಹಾರ, ವಸತಿ ವಿಷಯಗಳಲ್ಲಿ ಒಂದು ಸಮಾಧಾನದ ಸ್ಥಿತಿ ತಲುಪಿದ ನಂತರ ಅವನ ಜೀವ ಇನ್ನೇನನ್ನೋ ಹುಡುಕಲು ಯತ್ನಿಸಿರಬೇಕು; ಬದುಕಿನ ಗುರಿ ಇನ್ನೇನೋ ಅನಿಸಿರಬೇಕು. ಆ ಅದಮ್ಯ ಅನಿಸಿಕೆ ಸೃಜನಶೀಲಕ್ರಿಯೆಗೆ ತೊಡಗಿಸಿ ಈ ಚಿತ್ರಗಳಾಗಿರಬೇಕು. ಈ ಸೃಷ್ಟಿಶೀಲಕ್ರಿಯೆ ಎಂಬುದೇ ತುಡಿಯುವ ಜೀವಕ್ಕೆ ಬಿಡುಗಡೆಯ ಹಾದಿ.

ಪೊಲೀಸ್ ವೃತ್ತಿಯಲ್ಲಿರುವ ನನ್ನನ್ನು ಅನೇಕರು ಸಿಕ್ಕಾಗೆಲ್ಲಾ ಕೇಳುವ ಮೊದಲ ಪ್ರಶ್ನೆಯೆಂದರೆ, ‘ಮನುಷ್ಯ ಜಗತ್ತಿನ ನೇತ್ಯಾತ್ಮಕತೆಯೇ ಮಡುಗಟ್ಟಿರುವ ಅಪರಾಧ ಪ್ರಪಂಚವನ್ನು ಪ್ರತಿನಿತ್ಯ ಅತ್ಯಂತ ಹತ್ತಿರದಿಂದ ನೋಡುವ ನೀವು ಆ ಒತ್ತಡಗಳನ್ನು, ಘಾಸಿಯನ್ನು ಹೇಗೆ ನಿರ್ವಹಿಸುತ್ತೀರಿ?’ ಎಂದು. ವೃತ್ತಿ ಸೇರುವ ಮುನ್ನ ಅಪರಾಧ ಜಗತ್ತಿಗೆ ಹೇಸುತ್ತಿದ್ದ ನಾನು, ಹತ್ತಿರದಿಂದಲೇ ಅದನ್ನು ನೋಡಬೇಕಾದ ಅನಿವಾರ್ಯತೆಗೆ ಒಳಗಾದಾಗ, ನನ್ನೊಳಗಿನ ಆರ್ದ್ರತೆಯನ್ನು, ಸೂಕ್ಷ್ಮ ಲೋಕವನ್ನು ಕಾದಿಟ್ಟುಕೊಳ್ಳಲು ಕೈ ಹಿಡಿದದ್ದು ಸೃಜನ-ಸೃಷ್ಟಿಶೀಲ ಕಲಾಲೋಕ ಎನ್ನುವುದರಲ್ಲಿ ಎರಡು ಮಾತಿಲ್ಲ.

ನನ್ನ ಅಪ್ಪ ವೃತ್ತಿಯಲ್ಲಿ ವೈದ್ಯರಾದರೂ ಕತೆಗಾರ. ಅವರ ಮೊದಲ ಕಥಾ ಸಂಕಲನ ‘ನೆಲದ ಒಡಲು’ ನಾನು ಹುಟ್ಟುವುದಕ್ಕೆ ಮೊದಲೇ ಬೆಳಕು ಕಂಡಿತ್ತು. ಪುಸ್ತಕಗಳು, ಸಾಹಿತ್ಯದ ಚರ್ಚೆ, ಕಲಾಲೋಕದ ಕ್ರಿಯೆಗಳ ನಡುವೆ ಬೆಳೆದದ್ದು ನನ್ನ ಅದೃಷ್ಟ. ಸಾಹಿತ್ಯದ ಅಮಲು ಶಾಲಾ ಪಠ್ಯಗಳಿಂದಲೇ ನನ್ನನ್ನು ದೂರಸೆಳೆಯಲು ಪ್ರಯತ್ನಿಸಿದ್ದೂ ಉಂಟು. ಬಂಡಾಯ-ದಲಿತ ಸಾಹಿತ್ಯದ ಮುಂಚೂಣಿ ಬರಹಗಾರರೆಲ್ಲಾ ನನ್ನ ತಂದೆಯ ಒಡನಾಡಿಗಳಾಗಿದ್ದರು. ತಮ್ಮ ಸೃಷ್ಟಿಶೀಲಕ್ರಿಯೆಯ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕೆಂಬ, ನೋವುಗಳನ್ನು ಕಡಿಮೆ ಮಾಡಬೇಕೆಂಬ, ಸಮಸಮಾಜದ ಆಕಾಂಕ್ಷೆಯನ್ನು ಸಾಧಿಸಬೇಕೆಂಬ ಉತ್ಕಟತೆ ಅವರ ಮಾತುಕತೆಗಳಲ್ಲಿ ಜಿನುಗುತ್ತಿತ್ತು. ನನ್ನ ತಂದೆಯ ಪುಸ್ತಕಲೋಕದಲ್ಲಿ ಕುವೆಂಪು, ಮಾಸ್ತಿ, ಶಿವರಾಮ ಕಾರಂತ, ಬೇಂದ್ರೆ, ಟಾಲ್​ಸ್ಟಾಯ್, ದೊಸ್ತೊವಸ್ಕಿ, ಶಲಕೋವ್, ಷೇಕ್ಸ್​ಪಿಯರ್ ಮುಂತಾದ ಮಹಾಸೃಷ್ಟಿಕಾರರನ್ನು ಕಂಡೆ. ತಾವು ಕಂಡುಂಡ ವಾಸ್ತವಗಳನ್ನು ಪುನರ್​ಸೃಷ್ಟಿಸಿ ಹೊಸದೊಂದು ಹಾದಿಯನ್ನು ಸೃಷ್ಟಿಸುತ್ತಿದ್ದ ಸೃಜನಶೀಲರು ಅವರು. ಅವರ ಹಾದಿಗಳಲ್ಲಿ ನಾ ನಡೆಯುವಾಗ ನಾನು ಒಂಟಿಯಲ್ಲ ಎಂಬ ಭಾವನೆಯೊಂದು ಎದೆಯಾಳದಲ್ಲಿ ಮೂಡಿ ಮನುಷ್ಯತ್ವದ ಜೀವಚಿಲುಮೆಗಳು ಅಲ್ಲಲ್ಲಿ ತಂಪುಗೊಳಗಳನ್ನು ನಿರ್ವಿುಸುತ್ತಿದ್ದವು. ಬಿರುಬೇಗೆಯಲ್ಲೂ ಎಲ್ಲಿಂದಲೋ ಬಂದ ಮೋಡವೊಂದು ಮಳೆ ಸುರಿಸಬಹುದೆಂಬ, ಹಾದಿ ಕಾಣದ ಕಗ್ಗತ್ತಲಲ್ಲಿ ಮಿಂಚುಳು ಒಂದು ಬೆಳಕಾಗಬಹುದೆಂಬ ಭರವಸೆ, ವಿಶ್ವಾಸಗಳನ್ನು ಇವರ ಸೃಷ್ಟಿಕ್ರಿಯೆಗಳು ಮೂಡಿಸುವ ಪರಿ ಸೃಜನಶೀಲತೆ ಏನನ್ನು ಮಾಡಬಹುದೆಂಬುದಕ್ಕೆ ಸಾಕ್ಷ್ಯಗಳಂತಿದ್ದವು. ವಾಸ್ತವಗಳನ್ನು ನೋಡುವ, ಅರಗಿಸಿಕೊಳ್ಳುವ, ನಮ್ಮನ್ನು ಸಿನಿಕರೂ, ವಾಸ್ತವದ ಹೆಸರಿನಲ್ಲಿ ಕ್ರೂರಿಗಳೂ ಆಗದಂತೆ ತಡೆಯಬಲ್ಲ ಧಾರಣಾಶಕ್ತಿಯನ್ನು ನೀಡಬಲ್ಲ ಸಶಕ್ತ ಜೀವಕೋಶಗಳು ಅವು. ಈ ಜೀವಕೋಶಗಳೇ ಎಲ್ಲಾ ನೇತ್ಯಾತ್ಮಕತೆಯ ಎದುರು ನನ್ನನ್ನು ಕಾಪಾಡಿವೆ.

ಈ ಸೃಷ್ಟಿಕ್ರಿಯೆಯ ದಾಟಿಸುವ ಧಾರಣಾಶಕ್ತಿ ಮನುಷ್ಯ ಜಗತ್ತಿನೊಳಗೆ ಸಾಧಿತವಾಗಲೇಬೇಕಾದ ಸಹಬಾಳ್ವೆಗೆ ಅತ್ಯಂತ ಅಗತ್ಯವಾದುದು. ಜಾತಿ, ಧರ್ಮಗಳ ಹೆಸರಿನಲ್ಲಿ ಜನರ ಮನಸ್ಸನ್ನು ಒಡೆದಾಳುವ ಮನಸ್ಥಿತಿಯನ್ನು ಎದುರಿಸಲು ಕಲಾಜಗತ್ತು ಸಿದ್ಧಪಡಿಸುವ ಈ ಮನೋವೇದಿಕೆಯಲ್ಲಿ ಉತ್ತರವಿದೆ. ಸಕಲ ಜೀವಿಗಳನ್ನು ಸಮದೃಷ್ಟಿಯಲ್ಲಿ ನೋಡುವ ವಿಕಾಸಕ್ರಮವೊಂದನ್ನು ಒಳ್ಳೆಯ ಕಲಾಕೃತಿ ಮಾಡುತ್ತಲೇ ಇರುತ್ತದೆ. ಇದರಿಂದಾಗಿಯೇ ಒಂದು ಒಳ್ಳೆಯ ಕಾವ್ಯ, ಕಾದಂಬರಿ, ಕತೆ, ಸಂಗೀತ, ಚಿತ್ರಕೃತಿ ತನ್ನೊಳಗಿನ ಸೃಷ್ಟಿಶೀಲ ಅಂಶಗಳಿಂದ ಮನಸ್ಸಿಗೆ ಆಹ್ಲಾದವನ್ನು, ಸಮಸ್ಥಿತಿಯನ್ನು, ಸಕಲ ಜೀವಿಗಳಿಗೂ ಲೇಸನೆಣಿಸುವ ದಾರಿಯನ್ನು ತೋರುತ್ತದೆ. ಈ ಮನಸ್ಥಿತಿಯೇ ಸೃಷ್ಟಿಯಲ್ಲಿನ ಅಖಂಡತೆ ಭಾಸವಾಗುವಂತೆ ಮಾಡಿ ನಮ್ಮನ್ನು ಜಾತಿ, ಮತಗಳ ಸಂಕೋಲೆಯಿಂದ ಬಿಡುಗಡೆಗೊಳಿ ಸಬಲ್ಲದು. ಜೀವನದ ನೇತ್ಯಾತ್ಮಕ ಅಂಶಗಳ ಎದುರು ತಲ್ಲಣಗೊಂಡರೂ ಈ ಅಖಂಡತೆಯ ಅನುಭವ ನಮ್ಮನ್ನು ಸ್ಥಿರಗೊಳಿಸುತ್ತದೆ. ಎಲ್ಲಾ ಸೃಷ್ಟಿಶೀಲ ಮನಸ್ಸುಗಳೂ ಈ ಅಖಂಡತೆಯನ್ನು ಪಡೆಯಲು ತುಡಿಯುತ್ತಿರುತ್ತವೆ. ಸೃಜನಶೀಲತೆಗೆ ಧಾರಣಾಶಕ್ತಿಯನ್ನು ತುಂಬುವ ಅಕ್ಷಯಶಕ್ತಿಯಿದೆ.

ಖ್ಯಾತ ಭೌತವಿಜ್ಞಾನಿ ಮಣಿಭೌಮಿಕ್ ಅವರ ಭಾಷಣ ಕೇಳುವ ಸುಯೋಗ ನನಗೆ ಒದಗಿತ್ತು. ಬಿಗ್ ಬ್ಯಾಂಗ್ ಸಿದ್ಧಾಂತ ಕುರಿತು ಅವರು ಮಾತನಾಡುತ್ತಿದ್ದರು. ಅದರ ಭೌತ ವಿಶ್ಲೇಷಣೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ ಅವರು ಅದರ ಒಳಾರ್ಥವನ್ನು ವಿವರಿಸಿದ ರೀತಿ ಅಮೋಘವಾಗಿತ್ತು, ಆ ಮಹಾಸ್ಪೋಟ (Big Bang)ದ ಮುನ್ನ ಇಡೀ ವಿಶ್ವವೇ ಒಂದು ಗುಂಡುಸೂಜಿಯ ತಲೆಗಾತ್ರದಲ್ಲಿ ಸಾಂದ್ರಗೊಂಡು, ಸ್ಪೋಟದ ನಂತರ ಸೃಷ್ಟಿಯಾದ ಅಸಂಖ್ಯ ತಾರಾಗಣಗಳ ಬಗ್ಗೆ ಹೇಳುತ್ತಾ, ಹಿಂದೊಮ್ಮೆ ನಾವೆಲ್ಲರೂ ಆ ಗುಂಡುಸೂಜಿಯ ತಲೆಗಾತ್ರದ ದ್ರವ್ಯರಾಶಿಯ ಭಾಗವಾಗಿದ್ದೆವು, ಒಂದೇ ಆಗಿದ್ದೆವು, ಅಖಂಡವಾಗಿದ್ದೆವು ಎಂಬುದು ನಮ್ಮ ಹೆಮ್ಮೆಯಾಗಬೇಕು ಎಂದರು. ಸೃಷ್ಟಿಯ ಆ ಮಹಾಘಟನೆಯ ಭೌತ ವಿಶ್ಲೇಷಣೆ ಅಖಂಡತೆಯ ಆಧ್ಯಾತ್ಮಿಕ ಸತ್ಯವನ್ನು ತೆರೆದಿಟ್ಟಿರುವುದನ್ನು ನಾವು ಮನವರಿಕೆ ಮಾಡಿಕೊಂಡರೆ ಈ ಜಗತ್ತು ಇನ್ನಷ್ಟು ಸಹನೀಯವಾಗಬಲ್ಲದು.

ಸೃಜನಶೀಲತೆ ಮತ್ತು ಪ್ರಭುತ್ವ ಒಂದಾಗಿ ಸಾಗಲಾರವು. ಸೃಜನಶೀಲ ವ್ಯಕ್ತಿ ಪ್ರಭುತ್ವದ ಭಾಗವಾಗಿದ್ದರೂ ಪ್ರಭುತ್ವದ ಋಣಕ್ಕೆ ಒಳಗಾಗದಂತೆ ಎಚ್ಚರವಹಿಸುತ್ತಲೇ ಇರಬೇಕಾಗುತ್ತದೆ. ಮಹಾನ್ ಕಲಾಕೃತಿ ತನ್ನ ಒಡಲಾಳದಲ್ಲಿ ಪ್ರಭುತ್ವ ವಿರೋಧಿಯಾಗಿರುತ್ತದೆ. ಚಲನಶೀಲತೆಯನ್ನು ಬಯಸುವ ಸೃಜನಶೀಲತೆ ಪ್ರಭುತ್ವ ಬಯಸುವ ಸ್ಥಗಿತತೆಯನ್ನು ವಿರೋಧಿಸುವ ಪ್ರಕೃತಿಶೀಲಗುಣವುಳ್ಳದ್ದು, ಕವಿಗೆ ಅರಸುಗಿರಸುಗಳ ಋಣವಿಲ್ಲ, ಅವನು ಅಗ್ನಿಮುಖಿ ಪ್ರಳಯಶಿಖಿ ಎಂದು ಕುವೆಂಪು ಹಾಡಿದ್ದು ಈ ಕಾರಣಕ್ಕೇ. ಪ್ರಭುತ್ವವನ್ನು ವಿರೋಧಿಸುವುದರಲ್ಲೇ ಸೃಜನಶೀಲತೆಯ ಚೈತನ್ಯವಿರುತ್ತದೆ, ಅದೊಂದು ಭಿನ್ನಧ್ವನಿ. ಯಾವ ಪ್ರಭುತ್ವಕ್ಕೂ ಈ ಭಿನ್ನಧ್ವನಿಯನ್ನು ಸಹಿಸಲು ಆಗುವುದಿಲ್ಲ. ಷೇಕ್ಸ್​ಪಿಯರನ ‘ಜೂಲಿಯಸ್ ಸೀಸರ್’ ನಾಟಕದಲ್ಲಿ ಅಲ್ಲೋಲಕಲ್ಲೋಲಗೊಂಡಿರುವ ರೋಮನ್ ಚಕ್ರಾಧಿಪತ್ಯದ ಅವಿವೇಕದ ಕುರಿತು ಹೇಳಬಂದ ಕವಿಯೊಬ್ಬನನ್ನು ಕ್ಯಾಷಿಯಸ್, ವಿವೇಕಿಯೆನಿಸಿಕೊಂಡ ಬ್ರೂಟಸ್​ನ ಎದುರೇ ಕತ್ತಿಡಿದು ಆಚೆ ತಳ್ಳಿಸುತ್ತಾನೆ. ಪ್ರಭುತ್ವ ತಾನು ಪಡೆಯಬೇಕಾದ ಧಾರಣಾಶಕ್ತಿಯನ್ನು ಆಚೆ ತಳ್ಳಿ ಕುಸಿದು ಹೋಗುತ್ತದೆ, ಈ ದೃಶ್ಯ ವ್ಯವಸ್ಥೆಯಂತೆ ವ್ಯಕ್ತಿಗಳಿಗೂ ಅನ್ವಯಿಸುತ್ತದೆ. ವ್ಯಕ್ತಿ ಮತ್ತು ಸಮಷ್ಟಿ ಸಾಂಸ್ಕೃತಿಕವಾಗಿ ಸೋತ ಸ್ಥಿತಿಯಿದು.

ಕಲಾ ಪ್ರಪಂಚದಲ್ಲಿ ಎದ್ದು ಕಾಣುವ ಈ ಸೃಷ್ಟಿಕ್ರಿಯೆ ಪ್ರತಿಯೊಬ್ಬ ಮನುಷ್ಯನಲ್ಲೂ ಕಣ್ದೆರೆಯುತ್ತಲೇ ಇರುತ್ತದೆ, ಪ್ರತಿಯೊಬ್ಬ ಜೀವನ್ಮುಖಿ ಆ ಕ್ರಿಯೆಯಲ್ಲಿರುತ್ತಾನೆ, ನನ್ನ ತಾಯಿ ಅಷ್ಟೇನೂ ಅಕ್ಷರ ಕಲಿಯದ, ವೈದ್ಯನ ಹೆಂಡತಿಯಾದರೂ ಸೋಬಾನೆ ಪದಗಳನ್ನು ಹಾಡುತ್ತಾ ತನ್ನದೇ ಪ್ರಪಂಚ ನಿರ್ವಿುಸಿಕೊಳ್ಳಬಲ್ಲವಳು, ಅಲ್ಲಿ ಬರುವ ಒಂದೊಂದು ರೂಪಕವನ್ನು ಚಿತ್ರವತ್ತಾಗಿ ಕಟ್ಟಿಕೊಳ್ಳಬಲ್ಲವಳು, ಎಷ್ಟೇ ಜನ ಬಂದರೂ ಕ್ಷಣಮಾತ್ರದಲ್ಲಿ ಎಂಬಂತೆ ರುಚಿಕಟ್ಟಾದ ಅಡುಗೆ ಮಾಡಿ, ಬಂದವರು ಊಟ ಮಾಡಿ ತೃಪ್ತಿಯಾಗುವುದ ಕಂಡು ಹೊಸ ಕವಿತೆ ಬರೆದಷ್ಟೇ ಸಂತೋಷಪಡುವವಳು. ಇಂಥ ‘ಅನ್ನದೇವಿ’ಯರು ಎಲ್ಲಾ ಮನೆಯಲ್ಲೂ ಇರುತ್ತಾರೆ. ನನ್ನ ದೊಡ್ಡವ್ವ ಖಾಲಿ ಜಾಗ ಕಂಡಲ್ಲೆಲ್ಲ ಗಿಡ ನೆಡುವ ಇರಾದೆಯುಳ್ಳವಳಾಗಿದ್ದಳು. ತನ್ನದೇ ಮಕ್ಕಳು ಮರಿ ಇಲ್ಲದ ಅವಳ ಈ ಕ್ರಿಯೆ ನನಗೊಂದು ರೂಪಕದಂತೆ ಕಂಡಿದೆ. ತನ್ನ ಬದುಕನ್ನು ಹೆಚ್ಚು ಸಹನೀಯಗೊಳಿಸಿಕೊಳ್ಳಲು ನೆಡುವ, ಬೆಳೆಸುವ ಕ್ರಿಯೆಯಲ್ಲಿ ಜೀವನಪೂರ್ತಿ ತೊಡಗಿಸಿಕೊಂಡಿದ್ದು ನನ್ನೊಳಗನ್ನು ಕಾಪಾಡುವ ಮಾರ್ಗದಂತೆಯೂ ತೋರಿದೆ. ಎಲೆಮರೆಯ ಕಾಯಿಗಳಾಗೇ ಬದುಕಿ ಹಣ್ಣಾಗುವ ಇಂತಹ ಎಷ್ಟೋ ಅಸಂಖ್ಯರು ಸಮಾಜದ ಸಹಬಾಳ್ವೆಗೆ ಅಗತ್ಯವಾದ ಧಾರಣಾಕೇಂದ್ರಗಳು ಒಂದು ಕವಿತೆಯಂತೆ, ಸಂಗೀತದ ಪಲುಕಿನಂತೆ, ಚಿತ್ರಕೃತಿಯಂತೆ. ಸುಡುವಾಸ್ತವವಾದ ಜಗತ್ತು, ಕ್ರೌರ್ಯವೇ ಮೇಲುಗೈ ಸಾಧಿಸಬಹುದೆಂಬ ಭಯ, ಹೇಗಾದರೂ ಯಶಸ್ಸು ಸಾಧಿಸಬೇಕೆಂಬ ದುರಾಲೋಚನೆಯ ಲೋಕದಿಂದ ಬಿಡುಗಡೆಗೊಳ್ಳಲು ಸೃಜನಶೀಲಕ್ರಿಯೆ ಹಾದಿಯಾಗಿ ನನಗೆ ತೋರಿದೆ. ಅದೊಂದು ಶಕ್ತಿಕೇಂದ್ರವೂ ಆಗಿದೆ, ಸೃಜನಶೀಲನವಾಗುವುದೇ ಬದುಕಿನ ಗುರಿಯಾದರೆ ವಿನಾಶದ ಹಾದಿ ತಪ್ಪಬಹುದು.

(ಲೇಖಕರು ಹಿರಿಯ ಐಪಿಎಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net