ಅಡಕೆ ಕೊಯ್ಯಲು ದೋಟಿ, ಅಡೆತಡೆಗಳನು ದಾಟಿ...

Column F
Published on
ಸಮಸ್ಯೆಗಳು ಬಂದಾಗ ಹಿಂಜರಿದು ಕೂರುವ ಬದಲು ಅದಕ್ಕೆ ಪರಿಹಾರ ಏನಾದರೂ ಇದೆಯೇ ಎಂದು ಹುಡುಕುವುದು ಮನುಷ್ಯನ ಮೂಲಭೂತ ಗುಣಗಳಲ್ಲಿ ಒಂದು. ಅದಿಲ್ಲವಾದಲ್ಲಿ ಮನುಕುಲ ಪ್ರಗತಿ ಸಾಧಿಸುತ್ತಲೇ ಇರಲಿಲ್ಲ. ಯುದ್ಧಕ್ಕೆ ಬೆನ್ನು ಹಾಕಿದರೆ ಸಮರ ಗೆಲ್ಲುವುದಾದರೂ ಹೇಗೆ! ಕೃಷಿಗೂ ಇದು ಅನ್ವಯ.

ಕೃಷಿಯ ತಾಕತ್ತೇ ಅದು. ಯಾರು ಏನೇ ಅನ್ನಲಿ, ದೊಡ್ಡ ನೌಕರಿಯಂತಹ ಕಣ್ಣುಕೋರೈಸುವ ಇಮೇಜು ಇಲ್ಲದೆ ಇರಲಿ, ಕೃಷಿಕನಿಗೆ ಹೆಣ್ಣುಕೊಡುವುದಿಲ್ಲ ಎಂಬ ಮನಸ್ಥಿತಿ ಇರಲಿ, ಕೃಷಿ ಮಾತ್ರ ತನ್ನ ಮೂಲಗುಣ ಬಿಡುವುದಿಲ್ಲ. ಅದು ಈ ನೆಲದ ವಿಶೇಷತೆ, ಸಂಸ್ಕೃತಿ. ಕೃಷಿಪ್ರೀತಿಯೊಂದಿದ್ದರೆ ಸಾಕು, ಬರಡುನೆಲದಲ್ಲೂ ನೀರು ಜಿನುಗಿಸಬಹುದು; ಕಲ್ಲಿನ ನಡುವೆಯೂ ಗಿಡ ಚಿಗುರಿಸಬಹುದು. ಹಾಗಿಲ್ಲವಾದಲ್ಲಿ, ಸಾಲದ ಕಾರಣಕ್ಕಾಗಿ ಆತ್ಮಹತ್ಯೆ ಯೋಚನೆ ಮಾಡಿದ್ದ ಶಿಕಾರಿಪುರದ ಸಾಸರವಳ್ಳಿಯ ರುದ್ರಪ್ಪ ಅಂಗಡಿ, ನಂತರದಲ್ಲಿ ಸಮಗ್ರ ಕೃಷಿ ಮಾಡಿ ಇಂದು ಹಸನು ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಅಂಗಡಿಯವರನ್ನು ಬೆಂಗಳೂರಿನ ತಮ್ಮ ಕಚೇರಿಗೆ ಕರೆಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂಬುದು ಒಪ್ಪತಕ್ಕ ಮಾತು. ಹಾಗಿದ್ದೂ, ಸರ್ಕಾರಗಳು ಸಾಕಷ್ಟು ಕೃಷಿ ಯೋಜನೆಗಳನ್ನು ಸಹ ತರುತ್ತಿವೆ ಎಂಬುದನ್ನೂ ಒಪ್ಪಬೇಕು. ಅದರ ಜತೆಗೆ, ಸರ್ಕಾರದಲ್ಲಿರುವವರು ಸಚಿವ ಬಿ.ಸಿ. ಪಾಟೀಲರು ಮಾಡಿದಂತೆ, ವಿಶಿಷ್ಟ ಸಾಧನೆಗೈದ ರೈತರನ್ನು ಗುರುತಿಸಿ ಬೆನ್ನುತಟ್ಟುವ ಕೆಲಸ ಮಾಡಿದರೆ ಉಳಿದವರಿಗೂ ಒಂದು ಪ್ರೇರಣೆ, ಪ್ರೋತ್ಸಾಹ ನೀಡಿದಂತಾಗುತ್ತದೆ.

ಯಲ್ಲಾಪುರ ತಾಲೂಕಿನ ಹಿರೇಸರ ಎಂಬುದು ನನ್ನ ಅಜ್ಜನಮನೆ. ಅದು ಹತ್ತು ಹನ್ನೆರಡು ಮನೆಗಳ ಊರು (ಈಗ ಈ ಸಂಖ್ಯೆಯಲ್ಲಿ ವ್ಯತ್ಯಾಸ ಆಗಿರಬಹುದು. ಅದು ಬೇರೆ ಮಾತು. ಜತೆಗೆ ಚಿಕ್ಕವರಿದ್ದಾಗ ಅಜ್ಜನ ಮನೆಯಲ್ಲಿನ ನೆನಪುಗಳ ಕಣಜ ಬೇರೆಯದೇ ಒಂದು ಲೋಕ! ಓರಗೆಯ ಹುಡುಗರು ಮಾಡುವ ಆಟ ತುಂಟಾಟಗಳು, ಹೊಳೆಯಲ್ಲಿ ಈಜಲು ಹೋಗಿ ಬೈಸಿಕೊಳ್ಳುವುದು, ಯಾರದಾದರೂ ವಾಹನದ ಗಾಳಿ ತೆಗೆಯುವುದು... ಇವನ್ನೆಲ್ಲ ಮರೆಯುವುದು ಸಾಧ್ಯವೇ?). ಮುಂಚೆ ಅಲ್ಲಿಗೆ ಅಡಕೆ ಕೊಯ್ಯಲು ಬರುತ್ತಿದ್ದವರು ಕುಮಟಾ ಕಡೆಯವರು. ಅಡಕೆ ಸೀಸನ್ ಬಂದಾಗ ಅವರಿಗೆ ಪತ್ರ ಬರೆದು ಬರಲು ತಿಳಿಸಲಾಗುತ್ತಿತ್ತು. ಅವರು ಇಂಥ ದಿನ ಬರುತ್ತೇವೆ ಎಂದು ಪ್ರತ್ಯುತ್ತರ ಬರೆಯುತ್ತಿದ್ದರು. ಮೂರ್ನಾಲ್ಕು ಮಂದಿಯ ಟೀಮ್ ಬರುತ್ತಿತ್ತು. ಇವರಿಗೆ ಬಹುತೇಕವಾಗಿ ನನ್ನ ಅಜ್ಜನಮನೆ ಅಥವಾ ಸಣ್ಣಜ್ಜನ (ಅಜ್ಜನ ಸೋದರ) ಮನೆಯ ಚೌಕಿಮನೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತಿತ್ತು. ಆ ಊರಿನ ಎಲ್ಲರ ತೋಟದ ಅಡಕೆ ಕೊಯ್ಯುವವರು ಇವರೇ. ಯಾವ ದಿನ ಯಾರ ಮನೆಯ ಬಾರಿ ಇರುತ್ತದೆಯೋ ಆ ದಿನ ಅವರ ಮನೆಯಲ್ಲಿ ಊಟ. ಸಮಯ ಇದ್ದರೆ ಅಕ್ಕಪಕ್ಕದ ಊರಿಗೂ ಹೋಗುತ್ತಿದ್ದರು. ಅಡಕೆ ಕೊಯ್ಲು ಹಂಗಾಮು ಮುಗಿಸಿಯೇ ಊರಿಗೆ ವಾಪಸಾಗುತ್ತಿದ್ದುದು. (ಅನಾರೋಗ್ಯ ಇನ್ನಿತರ ತುರ್ತು ಸಂದರ್ಭಗಳಲ್ಲಿ ಮಾತ್ರ ಮಧ್ಯಂತರದಲ್ಲಿ ಹೋಗುತ್ತಿದ್ದರು). ಎತ್ತರೆತ್ತರದ ಅಡಕೆ ಮರಗಳನೇರಿ ನಾಜೂಕಾಗಿ ಕೊನೆ ಕೊಯ್ದು ಇಳಿಸುವ ಕಲೆ ಇವರಿಗೆ ಸಿದ್ಧಿಸಿತ್ತು. ಎಷ್ಟರಮಟ್ಟಿಗೆಂದರೆ ಇವರು ಅಡಕೆ ಮರವೇರಿ ಕೊನೆ ಕೊಯ್ಯುತ್ತಿದ್ದುದು ಭಾವಿಸಿ ನೋಡಿದ ಹೊರತು ಗೊತ್ತೇ ಆಗುತ್ತಿರಲಿಲ್ಲ. ‘ಅವರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಹಾಗಾಗಿ ಆಯಾ ತೋಟದ ಸ್ವರೂಪ ಅವರಿಗೆ ಅರಿವಾಗುತ್ತಿತ್ತು. ಯಾವ ಮರ ಲಡ್ಡಾಗಿದೆ, ಯಾವ ಮರ ಗಟ್ಟಿ ಇದೆ ಎಂಬುದರ ಅಂದಾಜಿರುತ್ತಿತ್ತು. ಅಲ್ಲದೆ, ಅನೇಕ ವರ್ಷಗಳಿಂದ ಕೊನೆ ಕೊಯ್ಯುತ್ತಿದ್ದುದರಿಂದ ಚೆನ್ನಾಗಿ ಪರಿಚಯ ಇರುತ್ತಿತ್ತು’ ಎನ್ನುತಾರೆ, ಹಿರೇಸರದ ಜನಾರ್ದನ ಹೆಗಡೆ. ಆದರೆ ಕಾಲಚಕ್ರದ ಓಟಕ್ಕೆ ಈ ವೃತ್ತಿಯೂ ಸಿಲುಕಿ ಅಲ್ಲಿ ಸಹ ಹೊಸದಾಗಿ ಕಲಿಯುವವರು ಕಡಿಮೆಯಾದರು; ಇವರಿಗೆ ವಯಸ್ಸಾಯಿತು. ಹೀಗಾಗಿ ಈಗ ಅಲ್ಲಿಂದ ಬರುವವರ ಸಂಖ್ಯೆ ಬಹುತೇಕ ಕಡಿಮೆಯಾಗಿದೆ. ಸ್ಥಳೀಯವಾಗಿಯೇ ಕೊನೆ ಕೊಯ್ಯುವವರು ತಯಾರಾಗಿದ್ದಾರೆ. ಆದರೆ ಎಷ್ಟು ಸಂಖ್ಯೆಯಲ್ಲಿ ಬೇಕೋ ಅಷ್ಟು ಸಂಖ್ಯೆಯಲ್ಲಿ ಇಲ್ಲ. ಒಂದೇ ಸಮಯದಲ್ಲಿ ಎಲ್ಲರೂ ಅಡಕೆ ಕೊಯ್ಲು ಮಾಡಬೇಕಾದುದರಿಂದ ಕಾರ್ವಿುಕರ ತುಟಾಗ್ರತೆ ಕಾಡುತ್ತದೆ. ಅದರಲ್ಲೂ ಕೊನೆ ಕೊಯ್ಲು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ನೆಲದ ಮೇಲಿನ ಕೆಲಸವಾದರೆ ಹೇಗೋ ಮಾಡಿಬಿಡಬಹುದು. ಆದರೆ 60, 70, 80 ಅಡಿ ಎತ್ತರ ಬೆಳೆಯುವ ಅಡಕೆ ಮರವನ್ನು ಏರಿ ಕೊನೆ ಕೊಯ್ಯುವುದು ಸುಲಭದ ಮಾತಲ್ಲ. ಜತೆಗೆ, ಬಾಗುವ, ಬಳುಕುವ ಮರದಿಂದ ಮರಕ್ಕೆ ದಾಟುತ್ತ ಕೊನೆ ಇಳಿಸುವುದು ಯಾವ ಕಸರತ್ತಿಗೂ ಕಡಿಮೆಯಲ್ಲ. ಆ ಕೆಲಸಕ್ಕೆ ಧೈರ್ಯ, ತಾಕತ್ತು, ಏಕಾಗ್ರತೆ ಇವೆಲ್ಲ ಬೇಕಾಗುತ್ತದೆ. ಅದರಲ್ಲೂ ಈ ಸಲ ಕೊನೆಕೊಯ್ಯುವವರು ಮರದ ಮೇಲಿಂದ ಬಿದ್ದು ಸಾವನ್ನಪ್ಪಿದ-ಗಾಯಗೊಂಡ ಎರಡು ಮೂರು ಘಟನೆಗಳು ನಡೆದಿದ್ದು ಖೇದಕರ ಸಂಗತಿ. ಕೃಷಿಕರ ವಲಯದಲ್ಲಿ ಇದು ಗಾಢ ವಿಷಾದ ಮೂಡಿಸಿದೆ.

ಕೊನೆಗೌಡರಿಗೆ (ಅಡಕೆ ಬೆಳೆಯುವ ಪ್ರದೇಶದಲ್ಲಿ ಕೊನೆ ಕೊಯ್ಯುವವರಿಗೆ ಹೀಗೆ ಕರೆಯುವುದು ವಾಡಿಕೆ. ಇದು ಜಾತಿವಾಚಕವಲ್ಲ) ಸೀಸನ್​ನಲ್ಲಿ ಬಹು ಬೇಡಿಕೆ. ಎಷ್ಟರಮಟ್ಟಿಗೆಂದರೆ, ಕೊನೆ ಕೊಯ್ಯುವವರನ್ನು ಪಕ್ಕಾ ಮಾಡಿಕೊಂಡು ಇತರ ಕೆಲಸಗಾರರಿಗೆ ಹೇಳಿ ಕಾಯಬೇಕು. ಎಷ್ಟೋ ವೇಳೆ ಎಲ್ಲರೂ ಕಾಯುತ್ತ ಇರುತ್ತಾರೆ, ಕೊನೆ ಕೊಯ್ಯುವವ ಬರುವುದೇ ಇಲ್ಲ. ಬೇರೆ ಯಾವುದೋ ಮನೆಗೆ ಹೋಗಿರುತ್ತಾನೆ ಅಥವಾ ಮತ್ತೇನೋ ತೊಂದರೆ. ಕೊನೆಗೆ ಕಾದುಕಾದು ಆ ಮನೆಯವರು ಬೇರೆ ಕೆಲಸಕ್ಕೆ ಹೋಗುತ್ತಾರೆ.

ಟಿಎಸ್​ಎಸ್ ಸಹಯೋಗದಲ್ಲಿ ಈಗಾಗಲೇ ಕಾರ್ಬನ್ ದೋಟಿ ಮೂಲಕ ವಿವಿಧೆಡೆ ಅಡಕೆ ಕೊನೆ ಕೊಯ್ಲು ತರಬೇತಿ ನಡೆಸಲಾಗುತ್ತಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಕೂಲಿಕಾರರ ಸಮಸ್ಯೆ ಎದುರಿಸಲು ದೋಟಿ ಕೊಯ್ಲು ಉತ್ತಮ ವ್ಯವಸ್ಥೆಯಾಗಿದೆ. ಸಂಸ್ಥೆ ವತಿಯಿಂದ ಮೊದಲ ಹಂತದಲ್ಲಿ 50ರಿಂದ 70 ಜನರಿಗೆ ತರಬೇತಿ ನೀಡಲಾಗುತ್ತಿದೆ. ಮುಂಬರುವ ವರ್ಷದಲ್ಲಿ 500ರಷ್ಟು ನುರಿತ ಜನರನ್ನು ಈ ವ್ಯವಸ್ಥೆಯಲ್ಲಿ ತೊಡಗಿಸುವ ಗುರಿಯಿದೆ. ಆಸಕ್ತಿಯಿರುವ ಹಾಗೂ ಕೌಶಲ ಇರುವವರು ದೋಟಿ ಮೂಲಕ ಸ್ವತಃ ಕೊನೆ ಕೊಯ್ಲು ಕೂಡ ಮಾಡುವುದರಿಂದ ಕಾರ್ವಿುಕರ ಮೇಲಿನ ಅವಲಂಬನೆ ತಪ್ಪುತ್ತದೆ. ಶೀಘ್ರ ಹಾಗೂ ಅಪಾಯರಹಿತ ಕೊನೆ ಕೊಯ್ಲಿಗೆ ಇದು ಅನುಕೂಲವಾಗಿದೆ. ಸಂಸ್ಥೆಯಿಂದ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ದೋಟಿಯನ್ನು ರಿಯಾಯಿತಿ ದರದಲ್ಲಿ ಕೂಡ ಕಲ್ಪಿಸಲು ಚಿಂತನೆ ನಡೆಸಲಾಗಿದೆ. | ರವೀಶ ಹೆಗಡೆ ಟಿಎಸ್​ಎಸ್ ಪ್ರಧಾನ ವ್ಯವಸ್ಥಾಪಕ

ಸಮಸ್ಯೆಗಳು ಬಂದಾಗ ಹಿಂಜರಿದು ಕೂರುವ ಬದಲು ಅದಕ್ಕೆ ಪರಿಹಾರ ಏನಾದರೂ ಇದೆಯೇ ಎಂದು ಹುಡುಕುವುದು ಮನುಷ್ಯನ ಮೂಲಭೂತ ಗುಣಗಳಲ್ಲಿ ಒಂದು. ಅದಿಲ್ಲವಾದಲ್ಲಿ ಮನುಕುಲ ಪ್ರಗತಿ ಸಾಧಿಸುತ್ತಲೇ ಇರಲಿಲ್ಲ. ಯುದ್ಧಕ್ಕೆ ಬೆನ್ನು ಹಾಕಿದರೆ ಸಮರ ಗೆಲ್ಲುವುದಾದರೂ ಹೇಗೆ! ಕೃಷಿರಂಗಕ್ಕೂ ಈ ಮಾತ ಅನ್ವಯ. ಅಡಕೆ ಸುಲಿಯುವವರ ಸಮಸ್ಯೆ ಆದಾಗ ಯಂತ್ರಗಳ ಆವಿಷ್ಕಾರವಾಗಿ ತಕ್ಕಮಟ್ಟಿಗೆ ಪರಿಹಾರ ದೊರಕಿದೆ. ಹಾಗಂತ ಪೂರ್ತಿಯಾಗಿ ಬಗೆಹರಿದಿದೆ ಅಂತಲ್ಲ. ಈಗ ಕೊನೆ ಕೊಯ್ಯುವ ಕಾರ್ಬನ್ ದೋಟಿ ಬಂದಿದ್ದು, ಬಂದ ಹೊಸದರಲ್ಲಿಯೇ ಇದು ಕೃಷಿಕರ ವಲಯದಲ್ಲಿ ಸಂಚಲನವನ್ನೇ ಮೂಡಿಸಿದೆ. ಇದೇ ಮೊದಲ ಬಾರಿಗೆ ದೋಟಿಯಲ್ಲಿ ಕೊನೆ ಕೊಯ್ದವರು ಸಹ ‘ಭಾರಿ ಚಲೊ ಇದ್ರಾ...’ ಎಂದು ಶ್ಲಾಘಿಸುತ್ತಿದ್ದಾರೆ. 60, 70, 80 ಅಡಿ ಹೀಗೆ ಬೇರೆ ಬೇರೆ ಎತ್ತರಕ್ಕೆ ಏರುವ ಸಾಮರ್ಥ್ಯದ ದೋಟಿಗಳು ಲಭ್ಯ. ಪ್ರತಿ ಅಡಿಗೆ ಸುಮಾರು 1 ಸಾವಿರ ರೂ. ಬೆಲೆಯಾಗುತ್ತದೆ. ಫೋಲ್ಡೆಬಲ್ ಆದುದರಿಂದ ಬೇಕಾದ ಎತ್ತರಕ್ಕೆ ಏರಿಳಿತ ಮಾಡಬಹುದು. ಸಾಗಾಟವೂ ಕಷ್ಟವಲ್ಲ. ಇದನ್ನು ಎಲ್ಲರಿಗೂ ವ್ಯಕ್ತಿಗತವಾಗಿ ತಂದಿಟ್ಟುಕೊಳ್ಳುವುದು ಕಷ್ಟ. ಈಗ ಸಹಕಾರ ಸಂಘಗಳ ಮೂಲಕ ತರಬೇತಿ ನೀಡಿ ದೋಟಿ ಒದಗಿಸಿ ಕೊನೆ ಕೊಯ್ಯುವ ಕೆಲಸ ಅನೇಕ ಕಡೆ ನಡೆಯುತ್ತಿದೆ. ಶಿರಸಿಯ ಟಿಎಸ್​ಎಸ್, ಟಿಎಂಎಸ್ ಮುಂತಾದ ಬೃಹತ್ ಸಂಘಗಳಲ್ಲದೆ, ಯಡಳ್ಳಿ, ಭೈರುಂಬೆ, ವಾನಳ್ಳಿ...ಹೀಗೆ ಆಯಾ ಭಾಗದ ಸಹಕಾರ ಸಂಘಗಳ ಮೂಲಕ ಆಸಕ್ತರಿಗೆ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. ಹೀಗೆ ತರಬೇತಿ ಪಡೆದವರು ಬೇಡಿಕೆ ಬಂದಲ್ಲಿ ಹೋಗಿ ಕೊನೆ ಕೊಯ್ಯುತ್ತಾರೆ. ಒಂದು ಕೊನೆಗೆ ಇಂತಿಷ್ಟು ಎಂದು ಶುಲ್ಕವಿದೆ. ಕುಶಲ ಕೆಲಸಗಾರರು ದಿನಕ್ಕೆ 600, 700 ಕೊನೆ ಕೊಯ್ಯಬಲ್ಲರು. ದಿನಕ್ಕೆ ಸಾವಿರ ಕೊನೆ ಕೊಯ್ಯುವವರೂ ಇದ್ದಾರೆ. ತರಬೇತಿ ಇಲ್ಲದಿದ್ದರೆ ನಾಜೂಕಾಗಿ ಕೊಯ್ಯುವುದು ಕಷ್ಟ. ಏಕೆಂದರೆ, ಅಡಕೆ ಕೊನೆ ಮೆಣಸಿನಬಳ್ಳಿ ಮೇಲೆ ಬಿದ್ದು ಬಳ್ಳಿ ಹಾಳಾಗುವ ಸಂಭವ ಇರುತ್ತದೆ. ಇದಲ್ಲದೆ, ಕೊನೆ ನೆಲಕ್ಕೆ ಬಿದ್ದರೆ ತೆರಿ ಅಡಕೆ (ಅಡಕೆ ಕೊನೆಯಿಂದ ಉದುರಿ ನೆಲಕ್ಕಿ ಬೀಳುವುದು) ಪ್ರಮಾಣ ಜಾಸ್ತಿಯಾಗಿ ಹೆಕ್ಕುವ ಕೆಲಸ ಹೆಚ್ಚುತ್ತದೆ. ಅಡಕೆ ಮರ ಏರಿ ಕೊನೆ ಕೊಯ್ಯುವವರಿಗೆ ಸಹ ನಾಜೂಕುತನ, ಪರಿಣತಿ ಇಲ್ಲದಿದ್ದರೆ ಕೊನೆಯನ್ನು ಹಗ್ಗದಲ್ಲಿ ಬಿಡುವುದಕ್ಕಿಂತ ನೆಲಕ್ಕೆ ಬೀಳಿಸುವುದೇ ಹೆಚ್ಚು. ಅಡಕೆ ಕೊನೆ ಕೊಯ್ಯುವುದಕ್ಕೆ ದೋಟಿ ಬ್ಯಾಲೆನ್ಸ್ ಮಾಡುವ ಪರಿಣತಿ ಮತ್ತು ಶಕ್ತಿ ಬೇಕಾಗುತ್ತದೆ. 50-60 ಅಡಿ ಎತ್ತರಕ್ಕೆ ಹೋದಾಗ ದೋಟಿ ಬಳುಕುತ್ತದೆ. (‘ಬಿಂಕದ ಸಿಂಗಾರಿ ಮೈ ಡೊಂಕಿನ ವೈಯಾರಿ’ ಎಂಬ ಸಿನಿಮಾ ಹಾಡಿನಂತೆ!) ಆಗ ಬ್ಯಾಲೆನ್ಸ್ ತಪ್ಪಿದರೆ ಅಡಕೆ ಸಿಂಗಾರಕ್ಕೆ ಸಹ ಪೆಟ್ಟಾಗುವ ಅಪಾಯ ಇರುತ್ತದೆ. ಅಡಕೆಯ ವಿಶೇಷ ಏನೆಂದರೆ ಮುಂದಿನ ಬೆಳೆ ಈಗಲೇ ನಿರ್ಧಾರವಾಗಿರುತ್ತದೆ. ಇದಲ್ಲದೆ ಏಲಕ್ಕಿ ಇತ್ಯಾದಿಗೂ ಪೆಟ್ಟು. ದೋಟಿಯಲ್ಲಿ ಕೊನೆ ಕೊಯ್ಯುವವ ಒಬ್ಬನಾದರೆ ನೆಲಕ್ಕೆ ಬರುವ ಕೊನೆ ಹಿಡಿಯಲು ಮತ್ತೊಬ್ಬ ಬೇಕು. ಅಡಕೆ ಕೊನೆ ಮೆಣಸಿನಬಳ್ಳಿ ಮೇಲೆ ಬೀಳದಂತೆ ಅಥವಾ ಮರಕ್ಕೆ ತಾಗಿ ಚೆದುರದಂತೆ ನಾಜೂಕಾಗಿ ಹಿಡಿಯುವ ಚಾಣಾಕ್ಷತೆ ಬೇಕಾಗುತ್ತದೆ. ಔಷಧ ಸಿಂಪಡಣೆಗೂ ಇದನ್ನು ಬಳಸಬಹುದು. ಕೊಯ್ಲು ಮಾಡುವಾಗ ದೋಟಿಗೆ ತುದಿಯಲ್ಲಿ ಕತ್ತಿ ಕಟ್ಟಲಾಗುತ್ತದೆ.

ಹಸಿ ಅಡಕೆಯನ್ನು ಕೊಯ್ಸಿದರೆ ಮೂರ್ನಾಲ್ಕು ದಿನದಲ್ಲಿ ಸುಲಿದು ಬೇಯಿಸಿ, ಬಿಸಿಲಿನಲ್ಲಿ ಒಣಗಿಸುವ ಪ್ರಕ್ರಿಯೆ ವೇಗವಾಗಿ ನಡೆಯಬೇಕಾಗುತ್ತದೆ. ಕೆಲ ವರ್ಷಗಳಿಂದ ಅಡಕೆ ಸುಲಿಯುವವರ ಕೊರತೆ ಎದುರಾಗಿದ್ದು ಕೃಷಿಕರಿಗೆ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರವಾಗಿ ಹಸಿ ಅಡಕೆಯನ್ನೇ ಖರೀದಿಸುವ ಪರಿಪಾಠ ಸಹ ಚಾಲ್ತಿಗೆ ಬಂದಿದೆ. ಶಿರಸಿಯ ಟಿಎಸ್​ಎಸ್​ನಂತಹ ಸಂಸ್ಥೆಗಳೇ ಈ ಕಾರ್ಯಕ್ಕೆ ಮುಂದಾಗಿವೆ. ಇದಲ್ಲದೆ, ಫಲಗುತ್ತಿಗೆಯಂತಹ ವ್ಯವಸ್ಥೆಯೂ ಅದಾಗಲೇ ಇದೆ. ಅಂದರೆ, ಗುತ್ತಿಗೆದಾರ ತೋಟದ ಫಸಲನ್ನು ಅಂದಾಜು ಮಾಡಿ, ಒಂದು ಬೆಲೆಕಟ್ಟಿ, ನಂತರ ಒಪ್ಪಂದ ಆದಮೇಲೆ ಕೊನೆ ಕೊಯ್ಲು ಮಾಡಿ ಫಸಲು ಒಯ್ದು ಬೇರೆ ಕಡೆ ಸಂಸ್ಕರಿಸುವುದು. ಈ ಕೆಲವು ಕ್ರಮಗಳಿಂದ ಕೃಷಿಯ ಮೂಲಸಂಸ್ಕೃತಿಗೆ, ಶ್ರಮಸಂಸ್ಕೃತಿಗೆ ಧಕ್ಕೆ ಆಗಬಹುದೆಂಬ ವಾದವನ್ನೂ ಕೆಲವರು ಮುಂದಿಡುತ್ತಾರೆ. ಆದರೆ, ಕೃಷಿ ಕಷ್ಟ ಎಂದು ತ್ಯಜಿಸುವುದಕ್ಕಿಂತ ಹೀಗಾದರೂ ಮಾಡಿ ಉಳಿಸಿಕೊಂಡು ಬರುವುದು ಉತ್ತಮವಲ್ಲವೆ ಎಂದು ಕೆಲವರು ಪ್ರತಿಪಾದಿಸುತ್ತಾರೆ. ಕೃಷಿ ಕುಟುಂಬಗಳು ಸಹ ಈಗ ಮೊದಲಿನಂತಿಲ್ಲ; ಜನರ ಸಂಖ್ಯೆ ಕಡಿಮೆಯಾಗುತ್ತಿದೆ; ಅವಿಭಕ್ತ ಕುಟುಂಬಗಳು ಹೆಚ್ಚಿವೆ. ಕೃಷಿ ಕಾರ್ವಿುಕರು ಮೊದಲಿನಷ್ಟು ಸಿಗುತ್ತಿಲ್ಲ. ಅಡಕೆ ಎಂದಲ್ಲ ಎಲ್ಲ ಬೆಳೆಗಳಿಗೂ ಬಹುತೇಕ ಇದೇ ಪರಿಸ್ಥಿತಿ. ಇಂಥ ಸನ್ನಿವೇಶದಲ್ಲಿಯೂ ಕೃಷಿ ಯಶಸ್ಸಿನ ಕತೆಗಳು ಬರುವುದು ಆಶಾದಾಯಕವೇ ಸರಿ...

ಕೊನೇ ಮಾತು: ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಬಗ್ಗೆ ಮೋದಿ ಸರ್ಕಾರ ಭಾರಿ ಭರವಸೆಗಳನ್ನು ನೀಡುತ್ತಿದೆ. ಹಾಗಾದಲ್ಲಿ ಉತ್ತಮವೇ. ಒಂದೊಮ್ಮೆ ವರಮಾನ ಹೆಚ್ಚದಿದ್ದರೆ ಕೃಷಿಪ್ರೀತಿ ಕಡಿಮೆಯಾಗದಿದ್ದರೆ ಸಾಕು!

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net