

ಪ್ರಾಚೀನ ಕಾಲದಲ್ಲಿ ಮಯಾಂಕ ಎಂಬ ಓರ್ವ ಚಿತ್ರಕಾರನಿದ್ದ. ಅವನು ಯಾವುದೇ ಪ್ರಾಣಿ, ಪಕ್ಷಿ, ಮನುಷ್ಯ, ದೇವತೆ, ವಸ್ತುಗಳನ್ನು ಬಿಡಿಸಿದರೂ ‘ಅದೇ ಸಾಕ್ಷಾತ್ ಎದುರಿಗೆ ಇರುವಂತೆ’ ಭಾಸವಾಗುತ್ತಿತ್ತು. ಕರಗತವಾದ ಮಹಾನ್ ಕಲೆಯಿಂದಾಗಿ ‘ಕಲಾಚಕ್ರವರ್ತಿ’ ಎಂಬ ಬಿರುದಿಗೂ ಅವನು ಪಾತ್ರನಾಗಿದ್ದ. ಮತ್ತು ದೂರ ದೂರದವರೆಗೂ ಅವನ ಕೀರ್ತಿ ಪಸರಿಸಿತ್ತು. ಹೀಗಿರುವಾಗ ಇದನ್ನು ತಿಳಿದ ಆ ದೇಶದ ರಾಜ ಭಾನುವರ್ಮನಿಗೆ ಆ ಮಹಾಕಲಾವಿದನಿಂದ ತನ್ನ ಭಾವಚಿತ್ರವನ್ನು ಬಿಡಿಸಿಕೊಳ್ಳಬೇಕೆಂಬ ಇಚ್ಛೆಯುಂಟಾಯಿತು. ಕೂಡಲೇ ಅರಮನೆಗೆ ಮಯಾಂಕನನ್ನು ಕರೆಸಿಕೊಂಡು, ತನ್ನ ಚಿತ್ರವನ್ನು ಬಿಡಿಸುವಂತೆಯೂ, ಭಾರೀ ಬಹುಮಾನ ನೀಡುವುದಾಗಿಯೂ ಹೇಳಿದ.
ಮಯಾಂಕನಿಗೆ ಚಿಂತೆ ಶುರುವಾಯಿತು. ಯಾಕೆಂದರೆ ರಾಜಾ ಭಾನುವರ್ಮನ ಒಂದು ಕಣ್ಣು ಕುರುಡಾಗಿದ್ದು ಆತ ‘ಒಕ್ಕಣ್ಣ’ನಾಗಿದ್ದ! ಈಗ ಅವನ ಮುಂದೆ ಗಂಡಾಂತರ ಎದುರಾಗಿತ್ತು. ರಾಜನ ನಿಜವಾದ ಚಿತ್ರ ಬಿಡಿಸಿದರೆ ಮೃತ್ಯುದಂಡವೇ ಗತಿ. ಇನ್ನು ನಿಜವಾದ ಚಿತ್ರ ಬಿಡಿಸದೆ ಎರಡೂ ಕಣ್ಣು ಇರುವಂತೆ ಬಿಡಿಸಿದರೆ ಅವಾಸ್ತವ ಚಿತ್ರ ಬಿಡಿಸಿದನೆಂದು ಆಗಲೂ ಮೃತ್ಯುದಂಡ. ಹಾಗಂತ ಚಿತ್ರವನ್ನೇ ಬಿಡಿಸದೇ ಹೋದರೂ ಮೃತ್ಯುದಂಡ ಶಿಕ್ಷೆ! ಈಗೇನು ಮಾಡುವುದು? ಕಲಾವಂತ ಮಯಾಂಕ ಈಗ ಪರಿಹಾರ ಕಾಣದೆ ಚಿಂತಾಕ್ರಾಂತನಾದ. ಕೊನೆಗೆ ತನ್ನ ಗುರುವಿನ ಬಳಿಯೇ ಪರಿಹಾರ ಕೇಳೋಣ ಎಂದು ಅಲ್ಲಿಗೆ ಹೋದ. ಮತ್ತು ತನಗೆ ಒದಗಿದ ಸಮಸ್ಯೆಯನ್ನು ತೋಡಿಕೊಂಡ.
ಆಗ ಗುರುಗಳು ಒಂದು ಕ್ಷಣ ಯೋಚಿಸಿ ಹೇಳಿದರು, ‘ರಾಜ ಧನುರ್ಧಾರಿಯಾಗಿ, ಕುದುರೆಯ ಮೇಲೆ ಕುಳಿತು ಬಾಣ ಗುರಿಹಿಡಿಯುತ್ತಿರುವಂತೆ ಚಿತ್ರಿಸು. ಹಾಂ ಎಚ್ಚರ, ಯಾವ ಕಣ್ಣು ಕಾಣುವುದಿಲ್ಲವೋ ಅದನ್ನು ಮುಚ್ಚಿದಂತೆ ತೋರಿಸಬೇಕು, ತಿಳಿಯಿತೆ?’ ಮಯಾಂಕನಿಗೆ ಸಂತೋಷವಾಯಿತು. ಗುರುಗಳ ಕಾಲಿಗೆರಗಿ ಮನೆಗೆ ಮರಳಿದ. ಗುರುವಿನ ಸಲಹೆಯಂತೆಯೇ ಅದ್ಭುತವೂ ಸುಂದರವೂ ಆದ ಅಂತಹ ಚಿತ್ರವನ್ನು ಬಿಡಿಸಿ ರಾಜನಿಗೆ ಒಪ್ಪಿಸಿದ. ರಾಜನಿಗೆ ಖುಷಿಯಾಯಿತು; ಸೂಕ್ತ ಬಹುಮಾನ ನೀಡಿ ಸನ್ಮಾನಿಸಿದ. ಕಲಾವಿದ ಮಯಾಂಕ ದಂಡದಿಂದ ಪಾರಾದ. ಬಹುಮಾನವನ್ನೂ ಪಡೆದ. ಮಾರ್ವಿುಕವಾದ ಈ ಕಥೆ ‘ಬೇಡ ಆತುರ; ನಿಧಾನ ಮಾಡು ವಿಚಾರ; ಸಿಗುತ್ತದೆ ಉತ್ತರ; ಆಗುತ್ತದೆ ಸಂಕಷ್ಟ ಪರಿಹಾರ’ ಎಂಬ ಸಂದೇಶವನ್ನು ನೀಡುತ್ತದೆ. ಯಾವುದೇ ಸಮಸ್ಯೆ ಎದುರಾದರೂ ಸೂಕ್ತ ಸಮಾಧಾನ ಕಂಡುಕೊಳ್ಳಬಹುದು.
‘ಗುರುಣಾ ನ್ಯಾಯತಜ್ಞೇನ ಕೌಶಲೇನ ವರೇಣಚ |
ಮಂತ್ರೌಷಧ ಮಣೀವಾಗ್ಭಿಃ ವಾರಯೇದ್ದುರಿತಾದಿಕಮ್ ||’
ಗುರು ಹಿರಿಯರ ವಿಶೇಷಜ್ಞರ ಮಾರ್ಗದರ್ಶನದಿಂದ, ನ್ಯಾಯಾಲಯ- ಸರ್ಕಾರಗಳ ಮೂಲಕ, ಸ್ವಂತ ಬುದ್ಧಿ-ಕೌಶಲದಿಂದ, ದೇವರ ಮೊರೆ ಹೊಗುವುದರಿಂದ, ಮಂತ್ರ-ಮದ್ದು-ಮಣಿ, ಮಾತುಕತೆಗಳ ಮೂಲಕ ಹೀಗೆ ದುರಿತ, ಸಮಸ್ಯೆ ಮುಂತಾದವುಗಳನ್ನು ನಿವಾರಿಸಿಕೊಳ್ಳಬೇಕು ಎಂಬ ಸುಭಾಷಿತದಂತೆ ನಿಧಾನವಾಗಿ ಯೋಚಿಸಿ ಒದಗಿದ ಅಪಾಯದಿಂದ ಉಪಾಯವಾಗಿ ಪಾರಾಗಬೇಕು ಎಂಬುದು ತಿಳಿದುಬರುತ್ತದೆ.
(ಲೇಖಕರು ಸಾಹಿತಿ, ಪ್ರತಿಕ್ರಿಯಿಸಿ: manollasavv@gmail.com)