

ಅದೆಲ್ಲ ನಂಗೊತ್ತಿಲ್ಲ. 2 ತಿಂಗಳಲ್ಲಿ ನಾನು ಸಣ್ಣಗಾಗಬೇಕು, ಒಂದೊತ್ತು ತಿಂದ್ರೂ ಪರವಾಗಿಲ್ಲ ಝೀರೋ ಫಿಗರ್ ಗುರಿ ಮುಟ್ಟಲೇಬೇಕು... ಹೀಗಂತ ಹಠ ಹಿಡಿದು ದೇಹಕ್ಕೆ ಮೋಸ ಮಾಡಿಕೊಳ್ಳುವ ಮಹಿಳೆಯರ ಆರೋಗ್ಯ ಸ್ಥಿತಿ ದಿನೇ ದಿನೆ ಹದಗೆಡುತ್ತಿದೆ. ಬದಲಾದ ಆಹಾರ ಪದ್ಧತಿ ಜತೆಗೆ ಡಯಟ್ ಎಂಬ ವಿಷಜಾಲ ದೇಹವನ್ನು ಕರಗಿಸುತ್ತಿದೆ.
ಹಸಿವಿಲ್ಲದುಣಬೇಡ, ಹಸಿದು ಮತ್ತಿರಬೇಡ ಬಿಸಿಗೂಡಿ ತಂಗಳುಣಬೇಡ, ವೈದ್ಯನ ಬೆಸಸಲೇ ಬೇಡ ಸರ್ವಜ್ಞ. ಹಸಿವು ಇಲ್ಲದೆ ಊಟ ಮಾಡಬೇಡ, ಹಸಿವಾಗಿದ್ದರೆ ಊಟ ಮಾಡದೆ ಇರಬೇಡ, ಬಿಸಿಯಲ್ಲಿ ತಂಗಳ ಬೆರೆಸಿದ ಅನ್ನ ಉಣಬೇಡ, ಯಾವಾಗಲೂ ವೈದ್ಯನಿಂದ ದೂರವಿರಿ... ಇದು ಸರ್ವಜ್ಞನ ಮಾತಿನ ಒಟ್ಟಾರೆ ತಾತ್ಪರ್ಯ. ಆದರೆ ನಮ್ಮ ಬದುಕು ಬದಲಾಗಿದೆ. ಅನ್ನಕ್ಕಾಗಿ ಊರೂರು ಸುತ್ತುತ್ತಿದ್ದವರು ಈಗ ತಿಂದ ಅನ್ನ ಅರಗಿಸಿಕೊಳ್ಳಲು ಹತ್ತಾರು ಕಿ.ಮೀ ಓಡಿ, ನಡೆಯುವ ಪ್ರವೃತ್ತಿ ಶುರುವಾಗಿದೆ. ಅದರಲ್ಲೂ ಈ ಝೀರೋ ಫಿಗರ್ ಟ್ರೆಂಡ್ ಮಹಿಳೆಯರ ದೇಹವನ್ನು ಕಾಯಿಲೆಯ ಗೂಡಾಗಿಸುತ್ತಿದೆ. ‘ನಮ್ಮ ಮಾಸ್ತರ್ ಹೇಳಿದಾರ್ರಿ... ಮಧ್ಯಾಹ್ನ 12 ಗಂಟೆಗೆ ಕರೆಕ್ಟಾಗಿ ಊಟ ಮಾಡ್ಬೇಕು. ತಿಂಡಿ ತಿಂದು ಒಂದು ಗಂಟೆ ಆಗಿಲ್ಲ, ಏನ್ ಮಾಡ್ಲಿ ಡಯೆಟ್ನ ಮಿಸ್ ಮಾಡೋ ಹಾಗಿಲ್ಲ’ ತೆಳ್ಳಗಾಗಬೇಕೆಂಬ ಆಸೆಯಿಂದ ಸಾವಿರಾರು ಮಹಿಳೆಯರು ಹೊಟ್ಟೆ ತುಂಬಿದ್ದರೂ ಗಡದ್ದಾಗಿ ಊಟ ಮಾಡುವ ದುರಭ್ಯಾಸ ಬೆಳೆಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಡಯಟ್, ಏರೋಬಿಕ್ಸ್, ಜುಂಬಾ ಡಾನ್ಸ್ನಂತಹ ಕಸರತ್ತುಗಳು ನಮ್ಮ ದೇಹಕ್ಕೆ ಅವಶ್ಯ ಇದೆಯಾ? ನಮ್ಮ ದೇಹಕ್ಕೆ ಇವುಗಳು ಬೇಕೋ ಬೇಡವೋ ಎಂಬುದನ್ನೂ ಅರಿಯದೆ ಇನ್ನೊಬ್ಬರನ್ನು ಅಂಧಾನುಕರಣೆ ಮಾಡುತ್ತೇವೆ. ಇದಕ್ಕೆ ಕಾರಣ ಬದಲಾಗುತ್ತಿರುವ ಮನಸ್ಥಿತಿ.
ಪ್ರತಿಯೊಂದು ದೇಶ, ಪ್ರದೇಶಗಳ ಮೇಲೆ ಅಲ್ಲಿನ ಭೌಗೋಳಿಕತೆ ಪ್ರಭಾವ ಬೀರುತ್ತದೆ. ಇವುಗಳನ್ನು ಗೌರವಿಸಿ ಸ್ಥಳೀಯವಾರು ಆಹಾರವನ್ನು ಅವಲಂಬಿಸಿದರೆ ಮುಕ್ಕಾಲು ಆರೋಗ್ಯ ಸಮಸ್ಯೆ ಪರಿಹಾರವಾದಂತೆ. ತಲೆ ತಲೆ ಮಾರುಗಳಿಂದ ನಮ್ಮ ಪೂರ್ವಜರ ದೇಹಕ್ಕೆ ಒಗ್ಗಿದ ಆಹಾರದ ಪ್ರಭಾವ ವಂಶವಾಹಿಗಳ ಮೂಲಕ ನಮ್ಮ ಮೇಲೂ ಬೀರುತ್ತದೆ. ಸ್ಥಳೀಯ ವಾತಾವರಣ, ನೀರು, ಮಣ್ಣಿನ ಗುಣಗಳು ನಮ್ಮ ದೇಹಕ್ಕೆ ಹೊಂದಿಕೆ ಆಗಿರುತ್ತವೆ. ಉದಾಹರಣೆಗೆ ದಕ್ಷಿಣ ಕನ್ನಡ, ಉಡುಪಿ, ಮಲೆನಾಡಿನ ಕಡೆ ಕುಚ್ಚಲಕ್ಕಿ ಅನ್ನ, ಸೌತೆಕಾಯಿ, ಕುಂಬಳಕಾಯಿ, ಬಸಳೆ, ಹರಿವೆ ಸೊಪು್ಪಗಳನ್ನು ಆಹಾರದಲ್ಲಿ ಬಳಸಲಾಗುತ್ತದೆ. ಅಲ್ಲಿನ ಬಿಸಿ ವಾತಾವರಣಕ್ಕೆ ತಂಪಾದ ಈ ಅಡುಗೆ ಅನಿವಾರ್ಯ. ಹಾಗೆಯೇ ಉತ್ತರ ಕರ್ನಾಟಕದವರು ಬಿಳಿ ಅಕ್ಕಿ, ಜೋಳದ ರೊಟ್ಟಿ, ಮೂಲಂಗಿ, ಬದನೆಕಾಯಿ, ನುಗ್ಗೆ ಸೊಪು್ಪಗಳನ್ನು ಹೆಚ್ಚು ಬಳಸುತ್ತಾರೆ. ಕೇರಳ , ಕರಾವಳಿ ಕರ್ನಾಟಕದಲ್ಲಿ ಅಡುಗೆಗೆ ತೆಂಗಿನೆಣ್ಣೆಯನ್ನು ಮುಖ್ಯವಾಗಿ ಬಳಸಿದರೆ ಉತ್ತರ ಕರ್ನಾಟಕದಲ್ಲಿ ಸೂರ್ಯಕಾಂತಿ ಎಣ್ಣೆ, ಶೇಂಗಾ ಎಣ್ಣೆ ಬಳಕೆ ಹೆಚ್ಚು.
ನಮ್ಮನ್ನು ನಾವು ಗೌರವಿಸಿಕೊಳ್ಳುವಂತೆ ಹೊಟ್ಟೆಯನ್ನೂ ಗೌರವಿಸಬೇಕು. ಹೊಟ್ಟೆಗೆ ಏನು ಬೇಕು? ಏನು ಬೇಡ ಎಂಬುದನ್ನು ತಿಳಿದು ಕೊಳ್ಳಬೇಕು. ನಮ್ಮ ಜೀರ್ಣಶಕ್ತಿ ಅರಿತು ನಾವು ಆಹಾರ ಸೇವಿಸಬೇಕು. ಹೊಟ್ಟೆ ಸರಿ ಇಲ್ಲದಿದ್ದರೆ ಎಷ್ಟೇ ಜಿಮ್ ವ್ಯಾಯಾಮ ಮಾಡಿದರೂ ಪ್ರಯೋಜನವಿಲ್ಲ. | ಡಾ.ರಾಜೇಂದ್ರ ಬೆಂಗಳೂರು ಮದುವೆ ಆದ ಹೊಸತರಲ್ಲಿ ನೆಂಟರ ಮನೆಯಲ್ಲಿ ಐದಾರು ಹೋಳಿಗೆ ಉಂಡು ಐದಾರು ಕಿ.ಮೀ ದೂರವಿರುವ ನಮ್ಮೂರಿಗೆ ನಡೆದೇ ಹೋಗುತ್ತಿದ್ದೆವು. ಮನೆಗೆ ಹೋದ ಮೇಲೆ ಮತ್ತೆ ಐದಾರು ಹೋಳಿಗೆ ಉಂಡು ಅರಗಿಸಿಕೊಳ್ಳುತ್ತಿದ್ದೆವು. ನಮ್ಮ ಕಾಲದಲ್ಲಿ ಪಿಜಾ, ಬರ್ಗರ್ ಇರಲಿಲ್ಲ. ಹೋಳಿಗೆ ಊಟ ತಿಂದರೆ ಅದೇ ನಮಗೆ ಅದೃಷ್ಟ, | ಸುಶೀಲಮ್ಮ80 ವರ್ಷದ ವೃದ್ಧೆ
ನಗರೀಕರಣದ ಯುಗದಲ್ಲಿ ನೆಲದ ಮೇಲೆ ಕುಳಿತು ಉಣ್ಣುವ ಪದ್ಧತಿ ಬದಲಾಗಿದೆ. ಚೇರ್, ಸೋಫಾ ಅಷ್ಟೇ ಏಕೆ ಮಲಗುವ ಮಂಚದ ಮೇಲೆ ಕೆಲವರ ಬ್ರೇಕ್ಫಾಸ್ಟ್, ಲಂಚ್, ಡಿನ್ನರ್ ಮುಗಿದು ಹೋಗುತ್ತದೆ. ಮಲಗಿಕೊಂಡು ತಿನ್ನುವವರನ್ನೂ ನಾವು ನೋಡುತ್ತೇವೆ. ಅಚ್ಚುಕಟ್ಟಾಗಿ ಅಡುಗೆ ಮನೆಯಲ್ಲಿ ನೆಲದ ಮೇಲೆ ಕುಳಿತು ತಿನ್ನುವುದು ಆರೋಗ್ಯಕ್ಕೆ ಒಳಿತು. ಇದರಿಂದಾಗಿ ಪಾದದಿಂದ ತೊಡೆ, ಹೊಟ್ಟೆಗೂ ಉತ್ತಮ ವ್ಯಾಯಾಮವಾಗುತ್ತದೆ. ಅಷ್ಟೇ ಏಕೆ ತಿಂದ ಆಹಾರವೂ ಸುಲಭವಾಗಿ ಜೀರ್ಣವಾಗುತ್ತದೆ. ನಾವು ತಿನ್ನುವ ಆಹಾರ ಎಷ್ಟು ಮುಖ್ಯವೋ, ಹೇಗೆ ಆಹಾರ ಸೇವಿಸುತ್ತೇವೆಂಬುದು ಕೂಡ ಅಷ್ಟೇ ಮುಖ್ಯ ಎನ್ನುತ್ತಾರೆ ವೈದ್ಯರು.