ಮನೋಲ್ಲಾಸ| ಆತುರದ ನಿರ್ಧಾರ ಬೇಡ

Mano
Published on

| ಮಹಾದೇವ ಬಸರಕೋಡ

ಮನುಷ್ಯ ಭಾವನಾಜೀವಿ. ಅವನು ಭಾವನಾಜೀವಿ ಆಗಿರುವುದರಿಂದಲೇ ನೂರೆಂಟು ಉತ್ತಮ ಸಂಬಂಧಗಳನ್ನು ನಿಭಾಯಿಸಲು ಸಾಧ್ಯವಾಗಿದೆ. ಇತರ ಪ್ರಾಣಿಗಳಿಗಿಂತಲೂ ಉತ್ತಮ ರೀತಿಯಲ್ಲಿ ಬದುಕನ್ನು ರೂಪಿಸಿಕೊಳ್ಳುವಲ್ಲಿ ಭಾವನೆಗಳ ಪಾತ್ರ ಮಹತ್ತರವಾದುದು. ಇದಕ್ಕೆ ಸಮಾನಾಂತರದಲ್ಲಿ ಕೆಲವು ಬಾರಿ ನಾವು ತೀವ್ರವಾದ ಭಾವಬಂಧನಕ್ಕೆ ಒಳಗಾಗುವುದು ಇಲ್ಲದಿಲ್ಲ. ಹಾಗೊಮ್ಮೆ ಭಾವೋದ್ವೇಗಕ್ಕೆ ಒಳಗಾದಾಗ ಅದು ನಮ್ಮ ವಿವೇಚನೆಯನ್ನು ಬದಿಗೊತ್ತಿ ಬಿಡುತ್ತದೆ. ನಾವೆಷ್ಟೇ ಬುದ್ಧಿವಂತರಾಗಿದ್ದರೂ, ಆತುರದ, ಸಮಂಜಸವಲ್ಲದ ನಿರ್ಧಾರಗಳನ್ನು ಕೈಗೊಳ್ಳುವಂತೆ ಮಾಡುತ್ತದೆ. ಇದು ತೀವ್ರವಾದ ಮುಜುಗರಕ್ಕೆ ಕಾರಣವಾಗಿಸುತ್ತದೆ. ಸರಳವಾಗಿ ಬಗೆಹರಿಸಬಹುದಾದ ಹಲವು ಸಮಸ್ಯೆಗಳನ್ನು ಸುಖಾಸುಮ್ಮನೆ ಗೊಂದಲದ ಗೂಡಾಗಿಸುತ್ತದೆ. ವಾಸ್ತವವನ್ನು ಮರೆಮಾಚುತ್ತದೆ. ಉತ್ತಮ ಸಂಬಂಧಗಳನ್ನು ಕ್ಷಣ ಮಾತ್ರದಲ್ಲಿಯೇ ಹಾಳು ಮಾಡಿ, ಒಂಟಿಯನ್ನಾಗಿ, ದುಃಖಿಯನ್ನಾಗಿ ಮಾಡುತ್ತದೆ.

ರಾವಣನ ತಂಗಿ ಶೂರ್ಪನಖಿ ಲಕ್ಷ್ಮಣನನ್ನು ಮದುವೆಯಾಗಲು ಬಯಸಿದಳು. ರಾಮ ಮತ್ತು ಲಕ್ಷ್ಮಣರ ವಿವೇಕದ ಯಾವ ಮಾತುಗಳನ್ನೂ ಅವಳು ಕಿವಿಗೆ ಹಾಕಿಕೊಳ್ಳುವುದೇ ಇಲ್ಲ. ಬದಲಾಗಿ, ಆತುರದಲ್ಲಿ ಆಕ್ರಮಣಕ್ಕೆ ಮುಂದಾದಾಗ ಲಕ್ಷ್ಮಣ ಕೂಡ ಆತುರದಲ್ಲಿಯೇ ಅವಳ ಮೂಗನ್ನು ಕೊಯ್ದ. ಮೂಗನ್ನು ಲಕ್ಷ್ಮಣ ಕೊಯ್ದನೆಂಬ ಮಾತನ್ನು ಅವಳ ಬಾಯಿಯಿಂದ ಕೇಳಿದಾಗ ರಾವಣ ಅದರ ಕಾರಣವನ್ನು ಸಹ ಕೇಳದೆ, ಅರಿಯದೆ ತೀವ್ರ ಭಾವೋನ್ಮಾದಕ್ಕೆ ಒಳಗಾಗಿ ಆತುರಾತುರವಾಗಿ ಸೇಡಿನ ಕ್ರಮಕ್ಕೆ ಮುಂದಾದ. ಹಿಂದೆಮುಂದೆ ಯೋಚಿಸದೆ, ಅಹಂಕಾರದಲ್ಲಿ ಮಗ್ನನಾಗಿ ಸೀತಾಮಾತೆಯನ್ನು ಅಪಹರಿಸಿದ. ಜಟಾಯುವಿನ ಮಾತನ್ನು ಕೇಳದೆ ಅದನ್ನು ದಾರುಣವಾಗಿ ಕೊಂದು ಹಾಕಿದ. ಸೀತೆಯನ್ನು ಬಂಧಿಸಿಟ್ಟ. ಕೊನೆಗೊಮ್ಮೆ ಎಲ್ಲರ ಮಾತುಗಳನ್ನು ಧಿಕ್ಕರಿಸಿ ಯುದ್ಧಕ್ಕೆ ಮುಂದಾದ. ತನ್ನವರನ್ನೆಲ್ಲ ಕಳೆದುಕೊಂಡು, ಕಡೆಗೆ ತಾನೂ ಹತನಾಗಿ ಹೋದ. ಇಂಥ ಹತ್ತುಹಲವು ಸನ್ನಿವೇಶಗಳನ್ನು ನಾವು ದೈನಂದಿನ ಬದುಕಿನಲ್ಲಿ ಅನುಭವಿಸುತ್ತಲೇ ಇರುತ್ತೇವೆ. ಶ್ರೇಷ್ಠ ನರಶಾಸ್ತ್ರಜ್ಞ ಡೊನಾಲ್ಡ್ ಕಾಲ್ನ್ ಹೇಳುವ ಹಾಗೆ ‘ಭಾವನೆಗೂ, ಬುದ್ಧಿಗೂ ಇರುವ ವ್ಯತ್ಯಾಸವೆಂದರೆ ಬುದ್ಧಿ ನಿರ್ಧಾರಗಳಿಗೆ ದಾರಿಯಾದರೆ ಭಾವನೆ ತಕ್ಷಣದ ಕ್ರಿಯೆಗಳಿಗೆ ಮುಂದಾಗುತ್ತದೆ’ ಎಂಬುದು ಗಮನಾರ್ಹ. ಭಾವನೆಗಳೊಂದಿಗೆ ಚಲಿಸುವುದು ಮನುಷ್ಯನ ಮೂಲಗುಣಗಳಲ್ಲಿ ಒಂದು. ಹಾಗಾಗಿ ಭಾವನೆಗಳನ್ನು ನಿಯಂತ್ರಣಕ್ಕೆ ಒಳಪಡಿಸಿ, ಅವುಗಳ ಪರಿಣಾಮವನ್ನು ನಮ್ಮ ಪ್ರಗತಿಗೆ ಬಳಸಿಕೊಳ್ಳಲು ಸಾಧ್ಯವಾಗಿಸಿಕೊಳ್ಳುವುದು ಅಗತ್ಯ.

ಕ್ಲಿಷ್ಟಕರ ಸಂದರ್ಭದಲ್ಲಿಯೂ ವಿವೇಚನೆಯನ್ನು ಕಳೆದುಕೊಳ್ಳದಿದ್ದರೆ ಅತ್ಯದ್ಭುತವಾದುದನ್ನು ಸಾಧಿಸಬಹುದು. ಭಾವೋದ್ರೇಕಕ್ಕೆ ಒಳಗಾಗಿ ಆತುರದಲ್ಲಿ ಮೂಗು ಕೊಯ್ದುಕೊಂಡರೆ ಹಾನಿಯಾಗುವುದು ನಮಗೇ ಎನ್ನುವ ಸತ್ಯ ಅರಿಯಬೇಕಿದೆ. ಭಾವನೆಗಳು ನಮ್ಮತನವನ್ನು ಮರೆಮಾಚಲು ಸದಾ ಹವಣಿಸುತ್ತವೆ. ಅವುಗಳಿಂದ ಕ್ಷಣಕಾಲ ತಪ್ಪಿಸಿಕೊಂಡು, ನಮ್ಮ ಹೃದಯದ ದನಿಗೆ ಕಿವಿಯಾಗಿ, ವಿವೇಚನೆಯಿಂದ ವರ್ತಿಸುವುದು ಅಗತ್ಯ. ಇದು ಮಾತ್ರ ನಮ್ಮನ್ನು ಎಲ್ಲ ಸಂಕಟಗಳಿಂದ ದೂರವಾಗಿಸಿ ನಮ್ಮತನವನ್ನು ಅನಾವರಣಗೊಳಿಸಬಲ್ಲದು. ಏಕೆಂದರೆ, ಹೃದಯದ ದನಿ ಆಂತರ್ಯವನ್ನು ಮೋಸಗೊಳಿಸುವುದಿಲ್ಲ. ಸೂಕ್ತವಾದ ದಾರಿಯನ್ನೇ ಅದು ತೋರಿಸುತ್ತದೆ.

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net