ಅಂತೆ-ಕಂತೆಗಳ ಚಿಂತೆ ನಮಗೇಕೆ?; ಬದುಕಿನ ಹಿಡಿತ ಯೋಚನೆಯ ಕೈಗೆ ಸಿಲುಕದಿರಲಿ

Lalitha
Published on

ಇಂದಿನ ಪರಿಸ್ಥಿತಿಯಲ್ಲಿ ಆರ್ಥಿಕ, ಸಾಮಾಜಿಕ, ವೈಯಕ್ತಿಕ ಸಮಸ್ಯೆ-ಸವಾಲುಗಳಿದ್ದರಷ್ಟೇ ಯೋಚನೆಯ ಮೂಟೆ ಬೆನ್ನೇರುತ್ತದೆ ಎನ್ನುವಂತಿಲ್ಲ. ಹೊರಪ್ರಪಂಚಕ್ಕೆ ಆರಾಮವಾಗಿ, ಒಳ್ಳೆಯ ಜೀವನವನ್ನೇ ನಡೆಸುತ್ತಿರುವಂತೆ ಕಾಣುವ ಮಹಿಳೆಯರೂ ಒಳಗೊಳಗೆ ಈ ತೀವ್ರವಾದ ಯೋಚನೆಯ ಕೂಪದಲ್ಲಿ ಸಿಲುಕಿ ಬಿಟ್ಟಿರುತ್ತಾರೆ.

| ಸುಷ್ಮಾಸಿಂಧು ಮನಃಶಾಸ್ತ್ರಜ್ಞೆ

ಬರೀ ಯೋಚಿಸುವುದರಲ್ಲೇ ನನ್ನ ಬದುಕೆಲ್ಲಾ ಮುಗಿದು ಹೋಗುತ್ತಿದೆಯೇನೋ ಎನಿಸುತ್ತಿದೆ. ಹಾಗೆಂದು ಹೇಳಿಕೊಳ್ಳುವಂತಹ ಸಮಸ್ಯೆಯೇನೂ ನನಗಿಲ್ಲ. ಆದರೂ ನನ್ನ ತಲೆಯೊಳಗೆ ಕಳೆದು ಹೊಗಿದ್ದೀನೇನೋ ಎನ್ನುವಷ್ಟು ಯೋಚನೆ ಮಾಡುತ್ತಿರುತ್ತೇನೆ. ಎದ್ದಾಗಿನಿಂದ ಮಲಗುವವರೆಗೂ ಒಂದಿಲ್ಲೊಂದು ನೆಗೆಟಿವ್ ಯೋಚನೆಗಳು ಕಾಡುತ್ತಲೇ ಇರುತ್ತವೆ... 45ರ ಆಕೆ ಹೇಳುತ್ತಲೇ ಹೋದರು. ಇದು ಆಕೆಯೊಬ್ಬರ ಸಮಸ್ಯೆಯಲ್ಲ, ಅತಿಯಾದ ಯೋಚನೆಗಳಿಗೆ ದೊಡ್ಡದೊಡ್ಡ ಕಾರಣಗಳು ಬೇಕಿಲ್ಲ. ಯಾವುದೋ ತೀರಾ ಅಮುಖ್ಯವೆಂದೆನಿಸುವ ಮಾತು, ನಡವಳಿಕೆಯೂ ಇಷ್ಟಿಷ್ಟೇ ಕಿರಿಕಿರಿ ಮಾಡುತ್ತಾ ಬೃಹದಾಕಾರವಾಗಿ ಬೆಳೆದು ಯೋಚನೆಯ ವರ್ತಲಕ್ಕೆ ಸೆಳೆದು ಬಿಡುತ್ತದೆ. ಸಣ್ಣಪುಟ್ಟದ್ದರಿಂದ ಪ್ರಾರಂಭವಾದ ಅಂತೆ-ಕಂತೆಗಳ ಚಿಂತೆಯಲ್ಲಿ ಮುಳುಗಿರುವಾಗ, ನಾನೇಕೆ ಇಷ್ಟೊಂದು ಯೋಚಿಸುತ್ತೇನೆ? ಎನ್ನುತ್ತಾ ಇನ್ನಷ್ಟು ಯೋಚಿಸಿ ಮತ್ತೆ ಮತ್ತೆ ತೀವ್ರ ಯೋಚನೆಯ ಸುಳಿಯಲ್ಲಿ ಮಹಿಳೆ ಸಿಲುಕುತ್ತಲೇ ಇರುತ್ತಾಳೆ.

ಚಿಕ್ಕದೂ ದೊಡ್ಡದಾಗಿ ಬಾಧಿಸುವ ಪರಿ: ಸಾಕಷ್ಟು ಹೆಣ್ಣು ಮಕ್ಕಳು ಸಾಮಾಜಿಕ ಅಭಿಪ್ರಾಯಗಳಿಗೆ ಬಹಳ ಮನ್ನಣೆ ನೀಡುತ್ತಾರೆ. ಜನರ ದೃಷ್ಟಿಯಲ್ಲಿ ಸೈ ಎನಿಸಿಕೊಂಡರೆ ಅದು ಉತ್ತಮ ಜೀವನ ಎಂದು ನಂಬಿಕೊಂಡಿರುತ್ತಾರೆ. ಸಾಮಾಜಿಕ ಒಪ್ಪಿಗೆಯ ಅವಶ್ಯಕತೆಯಿರುವುದೆಲ್ಲಿ? ಯಾವುದಕ್ಕೆ ಪ್ರಾಶಸ್ತ್ಯ ನೀಡಬಾರದು ಎಂಬ ತಿಳಿವು ಅವರಿಗಿರದು. ಈ ಮನೋಭಾವವಿದ್ದಾಗ ಟೀಕೆ-ಟಿಪ್ಪಣಿಗಳಿಗೆಲ್ಲಾ ಕನಲುತ್ತಾ ಹೀಗೆ ಬಂದು ಹಾಗೆ ಹೋಗುವ ಮಾತುಗಳಿಗೆಲ್ಲಾ ಕಲ್ಪನೆಗಳನ್ನು ಸೇರಿಸಿ ದೊಡ್ಡದು ಮಾಡಿಕೊಂಡು, ಅಲಕ್ಷ್ಯ ಮಾಡುವ ವಿಚಾರಕ್ಕೂ ಜಾಸ್ತಿಯೇ ಲಕ್ಷ್ಯ ನೀಡುತ್ತಾ ಮನೋಕ್ಷೋಭೆಗೆ ಒಳಗಾಗುತ್ತಾರೆ. ಉದಾ: ಯಾರೋ ಸೆಲೆಬ್ರಿಟಿಯೊಬ್ಬಳು ದಪ್ಪಗಿದ್ದರಿಂದ ಏನೆಲ್ಲಾ ಕೌಟುಂಬಿಕ ಸಮಸ್ಯೆ ಎದುರಿಸಿದಳು ಎಂಬುದನ್ನು ಯಾರಾದರೂ ಆಕೆಯ ಬಳಿ ರ್ಚಚಿಸಿದರೆ ಮನಸ್ಸು ಅಷ್ಟಕ್ಕೇ ಸುಮ್ಮನಾಗದೇ ಆತಂಕಿತಗೊಳ್ಳುತ್ತದೆ. ಅವರೇಕೆ ಆ ವಿಚಾರವನ್ನು ನನಗೇ ಹೇಳಿದರು? ನಾನು ದಪ್ಪಗಿದ್ದೀನೆಂದೆ? ಅವರು ಅತ್ತೆಗೂ ಆಪ್ತರು. ಇಲ್ಲಸಲ್ಲದ್ದು ಹೇಳಿ ಅತ್ತೆಯೂ ಪ್ರಭಾವಿತರಾದರೆ? ವಿಷಯ ಮನೆಯಲ್ಲೇ ದೊಡ್ಡದಾಗಿ ಎಲ್ಲರೂ ಕೆಟ್ಟದಾಗಿ ನಡೆಸಿಕೊಂಡರೆ? ನನ್ನ ಸಂಸಾರವೂ ಬಿರುಕು ಕಂಡರೆ? ಹೀಗೆ ಯಾರದ್ದೋ ವಿಚಾರವನ್ನು ತನಗೆ ಅನ್ವಯಿಸಿಕೊಂಡು ಒಂದೇ ಕ್ಷಣದಲ್ಲಿ ಸಂಸಾರವೇ ಕಣ್ಮುಂದೆ ಒಡೆದು ಹೋಗುವುದೆಂದು ಭ್ರಮಿಸಲು ಪ್ರೇರೇಪಿಸಿ ಬಿಡುತ್ತದೆ ಈ ಅತಿ ಯೋಚಿಸುವ ಮನಸ್ಸು.

ಅತಿ ಯೋಚನೆ ಮಾಡುವುದೆಂದರೆ: ಯೋಚನೆ-ಚಿಂತೆ, ಅವಲೋಕನ-ವಿಮರ್ಶೆ ಎಲ್ಲವೂ ಸಾಮಾನ್ಯವೇ. ಆದರೆ ಈ ತೀವ್ರ ಯೋಚನೆಯ ಕ್ರಿಮಿ ತಲೆ ಹೊಕ್ಕಿದರೆ ನಿಲ್ಲಲು, ಕೂರಲು ಬಿಡದು. ಅತಿಯಾಗಿ ಯೋಚಿಸುವುದೆಂದರೆ ನಮಗಾದ ಋಣಾತ್ಮಕ ಭಾವ-ಅನುಭವ, ಆಲೋಚನೆಗಳನ್ನೇ ಬಿಡದಂತೆ ಜಗಿಯುತ್ತಾ, ಪರೀಕ್ಷಿಸುತ್ತಾ, ಪ್ರಶ್ನಿಸುತ್ತಾ ಹಿಂದೆ ನಡೆದ ಕಹಿ ಘಟನೆಗಳನ್ನೂ ಪೋಣಿಸಿ-ಪೇರಿಸಿಕೊಳ್ಳುತ್ತಾ ಆ ಜಾಲದಲ್ಲೇ ಕಳೆದು ಹೋಗಿ ಅತೀವ ಮಾನಸಿಕ ಹಿಂಸೆಗೆ ಒಳಗಾಗುವುದು. ಮಹಿಳೆಯರು ಯೋಚಿಸುವುದರಲ್ಲಿ ಮುಂದು. ಹಾಗೆ ನೋಡಿದರೆ ಮಿದುಳಿನಲ್ಲಿರುವ ಯೋಚನೆಯ ಪ್ರದೇಶ ಹೆಣ್ಣು ಮಕ್ಕಳಲ್ಲಿ ಹೆಚ್ಚು ಸಕ್ರಿಯ. ಹಾಗಾಗಿ ಒಂದರ್ಥದಲ್ಲಿ ಮಹಿಳೆ ಜೈವಿಕವಾಗಿಯೂ ಯೋಚಿಸಲೆಂದೇ ಮಾಡಲ್ಪಟ್ಟಿದ್ದಾಳೆ ಎನ್ನಬಹುದು. ಆದರೆ ಇದೇ ಹೆಚ್ಚಾದ ಯೋಚನೆಗೆ ವಿವರಣೆಯಾಗಲೀ, ಬೆಂಬಲವಾಗಲೀ ಆಗಲಾರದು, ಅದಕ್ಕೇ ನೀನು ಯಾವಾಗಲು ಯೋಚಿಸುತ್ತೀಯಾ ಎಂಬ ಮೂದಲಿಕೆ, ಪೂರ್ವಗ್ರಹವೂ ಸಲ್ಲದು. ಏಕೆಂದರೆ ಆಧುನಿಕ ಜೀವನ ಶೈಲಿ, ಸವಾಲುಗಳು ಮಹಿಳೆಯ ಬದುಕನ್ನು ಬಹಳ ಸಂಕೀರ್ಣಗೊಳಿಸುತ್ತಾ ದಿನನಿತ್ಯದ ಜೀವನವನ್ನೂ ಕಠಿಣಗೊಳಿಸಿರುವುದರಿಂದ ಅತಿಯೋಚನೆಯೆಂಬ ಮಾನಸಿಕ ವ್ಯಥೆಯು ಮಹಿಳೆಯರಲ್ಲಿ ಪಿಡುಗು ಎನ್ನುವಷ್ಟರ ಮಟ್ಟಿಗೆ ಕಾಣಿಸಿಕೊಳ್ಳುತ್ತಿದೆ.

ಮಹಿಳೆಯರನ್ನು ಕಾಡುವ ಸಂಗತಿಗಳಾವುವು?: ಸಾಮಾನ್ಯವಾಗಿ ಮಹಿಳೆಯರು ಕುಟುಂಬ, ಸ್ನೇಹ-ಸಂಬಂಧಗಳು, ವೃತ್ತಿ, ಹಣಕಾಸು, ಸೌಂದರ್ಯ... ಕುರಿತಾದ ವಿಚಾರಗಳ ಬಗ್ಗೆ ಹೆಚ್ಚಾಗಿ ಯೋಚಿಸುತ್ತಾರೆ. ಜತೆಗೆ, ಮಹಿಳೆ ಭಾವನಾತ್ಮಕ ನೆಲೆಗಟ್ಟಿನಿಂದ ನೋಡುವುದು ಹೆಚ್ಚು. ಭಾವನಾತ್ಮಕತೆ, ಸೂಕ್ಷ್ಮತೆ ವ್ಯಕ್ತಿತ್ವದ ಶಕ್ತಿ. ಅದುವೇ ಬಲಹೀನವಾಗಿಬಿಟ್ಟರೆ ಎಂತಹುದೇ ವಿಷಯವನ್ನೂ ಇಂಚಿಂಚೂ ಅವಲೋಕಿಸಿದಾಗಲೂ ಅದರಲ್ಲಿನ ನಕಾರಾತ್ಮಕತೆ ಜಾಸ್ತಿ ಕಣ್ಣಿಗೆ ಕಾಣಿಸಿಕೊಳ್ಳುತ್ತದೆ. ಅದೊಂತರಹ ಬಟ್ಟೆಯ ಮೇಲಿನ ಕೊಳೆಯನ್ನು ಭೂತಗಾಜಿನಲ್ಲಿ ನೋಡಿದಂತೆ. ರಾಡಿ ಚಿಕ್ಕದಾಗಿದ್ದಲ್ಲಿ ನಿರ್ಲಕ್ಷಿಸಿ, ದೊಡ್ದದಾಗಿದ್ದಲ್ಲಿ ಅಗತ್ಯ ಕ್ರಮ ತೆಗೆದುಕೊಂಡು ಮುನ್ನಡೆಯ ಬೇಕೇ ವಿನಾ ಗಲೀಜನ್ನೇ ದೃಷ್ಟಿಸುತ್ತಾ ಕುಳಿತರೆ ಬರೀ ಅದುವೇ ಕಣ್ತುಂಬಿ ಬಿಡುವುದು. ಅಮುಖ್ಯವಾದುದಕ್ಕೂ ಭಾವನೆಗಳನ್ನು ಹೇರಿ, ವಿಮರ್ಶೆ ಮಾಡುತ್ತಿರುವುದರಿಂದ ಎಲ್ಲವೂ ಪ್ರಾಮುಖ್ಯವಾಗಿ ನೋಯಿಸುತ್ತಿದೆಯೆಂದು ತೀವ್ರ ಯೋಚನೆಯಲ್ಲಿರುವ ಮಹಿಳೆಯರು ಮೊದಲು ಮನಗಾಣಬೇಕಿದೆ. ನಕಾರಾತ್ಮಕ ಆಲೋಚನೆಗಳ ಪ್ರಾಬಲ್ಯ ಹೆಚ್ಚಾದಾಗ ಅದು ನಮ್ಮ ವಾಸ್ತವದ ಗ್ರಹಿಕೆಯನ್ನು ತಿರುಚಿ ಸಂಬಂಧಗಳು, ವೃತ್ತಿ, ಮಾನಸಿಕ-ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ ಬದುಕಿನ ಮೇಲೆ ಅಧಿಪತ್ಯ ಸಾಧಿಸುತ್ತದೆ. ಜೀವನದಲ್ಲಿ ಬರುವ ಅನೇಕ ಸಂಕಷ್ಟಗಳಿಗೆ ತಾನು ಮಹಿಳೆಯಾಗಿರುವುದೇ ಕಾರಣವೆಂಬ ವೇದನೆಯನ್ನಷ್ಟೇ ಉಣಿಸಿ ಮತ್ತಷ್ಟು ಸಂಕಟಗಳನ್ನು ಆಹ್ವಾನಿಸುವ ಕೊರಗನ್ನು ಕಳಚಿಟ್ಟು ಬದುಕಿನ ಹಿಡಿತವನ್ನು ಯೋಚನೆಗಳ ಕೈಗಿಡದಿರಲು ಸ್ವಲ್ಪ ಸ್ವಲ್ಪವೇ ಪ್ರಯತ್ನಿಸಿದಂತೆಲ್ಲಾ ಅತೀ ಯೋಚನೆಯ ಮೋಡ ಕರಗಿ ಬದುಕು ಪ್ರಕಾಶಿಸುತ್ತದೆ.

ಅತಿ ಯೋಚಿಸಲು ಕಾರಣಗಳೇನು?

  • ಕೆಲಸ ಎಷ್ಟೇ, ಯಾವುದೇ ಇರಲಿ, ತಾನು ಸೂಪರ್ ವುಮನ್​ನಂತೆ ಪರ್ಫೆಕ್ಟ್ ಆಗಿ ಮಾಡಲೇಬೇಕೆಂದು ಹೊರಡುವುದು
  • ವಿಶ್ರಮಿಸದ ನಿರಂತರ ದುಡಿಮೆಯಿಂದಾದ ಬಳಲಿಕೆ
  • ಸಂಸಾರ-ಕೆಲಸದ ನಡುವೆ ಸಂಭಾಳಿಸಲಾಗದ ಒತ್ತಡದಲ್ಲಿದ್ದಾಗ.
  • ಸಾಂಸಾರಿಕ ಪಾತ್ರ ನಿರ್ವಹಣೆಯಲ್ಲಿ ಅಸಮರ್ಥ ಭಾವವಿದ್ದಾಗ
  • ವೈಯಕ್ತಿಕ, ಕೌಟುಂಬಿಕ ಕಾರಣಗಳಿಂದ ವೃತ್ತಿಯ ವಿಚಾರದಲ್ಲಿ ರಾಜಿ ಮಾಡಿಕೊಂಡಾಗ ತಲುಪಬೇಕಾದ ಸ್ಥಾನ, ಯಶಸ್ಸು ಲಭಿಸದಿದ್ದಲ್ಲಿ
  • ಆರ್ಥಿಕ ತೊಂದರೆಗೆ ತಾನೇನೂ ಮಾಡುತ್ತಿಲ್ಲವೆಂಬ ಅಸಹಾಯಕತೆ
  • ತಮ್ಮ ನಿರ್ಧಾರಗಳ ಬಗೆಗೆ ಅವಿಶ್ವಾಸ, ಅಸುರಕ್ಷತೆ ಹೊಂದಿರುವವರು.
  • ತಾಯ್ತನ, ಮೆನೋಪಾಸ್​ನಂತಹ ಪ್ರಮುಖ ಘಟ್ಟಗಳು ಹಾಗೂ ತಿಂಗಳ ಋತುಚಕ್ರದ ಆಸುಪಾಸು ಇವೆಲ್ಲವೂ ನೈಸರ್ಗಿಕವಾಗೇ ಇದ್ದರೂ ಈ ಸಂದರ್ಭಗಳಲ್ಲಿ ಸೂಕ್ಷ್ಮವೂ, ದುರ್ಬಲವೂ ಆದ ಮನಸ್ಸು ಯೋಚನೆಯ ಕೂಪಕ್ಕೆ ಸಿಲುಕುತ್ತದೆ.

ಹೀಗೆ ಮಾಡಬಹುದು

  • ಯೋಚನೆ ಮಾಡುವುದರಿಂದಲೇ ಸಮಸ್ಯೆ ಬಗೆ ಹರಿಸುತ್ತಿದ್ದೇವೆಂದು ತಿಳಿದಿರುತ್ತೇವೆ. ಆದರೆ ಅತಿ ಯೋಚನೆಯೆಂದರೆ ಯೋಜಿಸುವುದಾಗಲೀ, ಆಳವಾದ ಚಿಂತನೆಯಾಗಲೀ ಅಲ್ಲ. ಅವೆಲ್ಲವೂ ಪರಿಹಾರ ಕೇಂದ್ರೀಕೃತವಾದವು. ಅತಿ ಯೋಚಿಸುವುದು ಸಮಸ್ಯೆಯನ್ನು ವೃದ್ಧಿಸುತ್ತದೆಯೇ ಹೊರತು ಕ್ಷೀಣಿಸುವುದಿಲ್ಲ.
  • ಕಲ್ಪನೆಗೆ ಕಡಿವಾಣವಿರಲಿ. ನನ್ನಲ್ಲಿರುವ ಮಾಹಿತಿ, ಊಹೆಯೆಷ್ಟು? ಪ್ರಶ್ನಿಸಿಕೊಳ್ಳಿ. ಅನಿಸಿದ್ದನ್ನು ಬರೆಯಲು ಶುರುಮಾಡಿ. ತಲೆಯೊಳಗೆ ಸುತ್ತುತ್ತಿರುವ ಯೋಚನೆ ಗಳನ್ನು ಹೊರ ಹಾಕಿದಾಗ ಅವು ಒಳಗೆ ರೌಂಡು ಹೊಡೆಯುವುದನ್ನು ನಿಲ್ಲಿಸುತ್ತವೆ.
  • ಕೈಲಾಗದ್ದು, ಕೈಮೀರಿದ್ದನ್ನು ನಿಯಂತ್ರಿಸಬೇಕೆಂಬ ಪ್ರವೃತ್ತಿ ಕೈಬಿಟ್ಟಷ್ಟೂ ಆಲೋಚನೆಗಳು ನಿಯಂತ್ರಿತವಾಗುತ್ತವೆ.
  • ಯೋಚನೆಯಲ್ಲಿ ಕಳೆದುಹೋದ ಮನಸ್ಸನ್ನು ಕ್ರಿಯಾತ್ಮಕ ಕೆಲಸಗಳಿಗೆ ವರ್ಗಾಯಿಸಿ, ಆತ್ಮೀಯರೊಡನೆ ಒಡನಾಡಿ.
  • ಪರ್ಫೆಕ್ಟ್ ಮಹಿಳೆಯಾಗಿ ಎಲ್ಲರ ಬಳಿ ಪ್ರಶಂಸೆ ಪಡೆಯುವುದಕ್ಕಿಂತ ನನ್ನ ಬೆಸ್ಟ್ ನೀಡುತ್ತೇನೆ ಎಂದುಕೊಳ್ಳಿ.
  • ಪ್ರಾರ್ಥನೆ, ಧ್ಯಾನ, ಯೋಗ/ವ್ಯಾಯಾಮಗಳಲ್ಲಿ ತೊಡಗಿಕೊಳ್ಳಿ. ಮನಸ್ಸನ್ನು ಪಫುಲ್ಲವಾಗಿರಿಸಿಕೊಳ್ಳಲು ಸಮಯ ಮೀಸಲಿಡುವುದು ತೀವ್ರ ಯೋಚನೆಯಿಂದ ಒತ್ತಡಕ್ಕೊಳಗಾಗಿ, ನಮ್ಮವರ ಮೇಲೆಯೇ ಹಾರಾಡುವುದಕ್ಕಿಂತ ಉತ್ತಮ.
  • ವಿಪರೀತ ಯೋಚನೆ ತನ್ನಷ್ಟಕ್ಕೇ ಸಮಸ್ಯೆಯಲ್ಲದಿದ್ದರೂ ಇತರ ಮಾನಸಿಕ ವ್ಯಾಧಿಗಳ ಭಾಗವಾಗಿ ಕಾಣಿಸುತ್ತಿರಬಹುದು. ಯೋಚನೆ ತೀವ್ರ ಆಗಿದ್ದು, ಅನಿಯಂತ್ರಿತವಾಗಿದ್ದಲ್ಲಿ, ಅದರೊಟ್ಟಿಗೆ ದೈನಂದಿನ ಬದುಕನ್ನು ಏರುಪೇರು ಗೊಳಿಸಿರುವ ಬೇರೆ ಲಕ್ಷಣ ಕಂಡು ಬಂದಲ್ಲಿ ತಜ್ಞರ ಸಹಾಯ ಉಪಯುಕ್ತವಾದೀತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net