

ಭಾರತೀಯ ಸೇನೆಗೆ ತನ್ನದೇ ಆದ ಘನತೆ ಇದೆ, ಶೌರ್ಯ, ವೀರತೆಯ ಇತಿಹಾಸವಿದೆ. ಜಗತ್ತಿನ ಶಕ್ತಿಶಾಲಿ ಸೇನೆಗಳಲ್ಲಿ ಭಾರತೀಯ ಸೇನೆ ಮುಂಚೂಣಿಯಲ್ಲಿದೆ. ಭಾರತೀಯ ಸೇನೆ ಯಾವಾಗಲೂ ರಾಷ್ಟ್ರೀಯ ಏಕತೆಯ ಪ್ರತೀಕವಾಗಿದೆ. ದೇಶದಲ್ಲಿ ಈ ಹಿಂದೆ ರಾಜಕೀಯ ಕಲಹ ಅಥವಾ ದ್ವೇಷದ ಭಾವನೆ ಇದ್ದರೂ, ಅದರಲ್ಲಿ ಸೇನೆಯನ್ನು ಎಳೆದು ತರಲಾಗಿಲ್ಲ ಎಂಬುದನ್ನು ಗಮನಿಸಬೇಕು. ಸೇನೆ ನಮ್ಮ ದೇಶದ ಹೆಮ್ಮೆಯೂ ಹೌದು. ಗಡಿಗಳನ್ನು ಕಾಯುತ್ತ ಬಾಹ್ಯಶತ್ರುಗಳಿಂದ ರಕ್ಷಿಸುತ್ತಿದ್ದರೆ, ದೇಶದೊಳಗಡೆ ಪ್ರಾಕೃತಿಕ ವಿಕೋಪ, ಅವಘಡಗಳು ಸಂಭವಿಸಿದಾಗ ಜನರ ರಕ್ಷಣೆಗೆ ಬರುವುದು ಸೇನೆಯೇ. ಭಾರತದ ಸಾಮರ್ಥ್ಯ, ಶಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಸಾಬೀತು ಪಡಿಸಿರುವ ಸೇನೆ ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಯಶಸ್ಸು ಕೂಡ ಅಸಾಧಾರಣ. ಸೇನೆಯೆಂದರೆ ಶಕ್ತಿ, ಶೌರ್ಯ ಮತ್ತು ದೇಶಭಕ್ತಿಯ ಭಾವಗಳು ಒಟ್ಟಾಗುತ್ತವೆ. ಆದರೆ, ರಾಜಕೀಯ ಲಾಭಕ್ಕಾಗಿ ಸೇನೆಯನ್ನು ರಾಜಕೀಯಕ್ಕೆ ಎಳೆದು ತರುವ ಪ್ರಯತ್ನ ಖಂಡನೀಯ ಮಾತ್ರವಲ್ಲ, ಧೂರ್ತತನದ ನಡವಳಿಕೆ.
ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನವೆಂಬರ್ 4ರಂದು ಬಿಹಾರದ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತ, ‘ಸೇನೆಯು ಶೇಕಡ 10 ಜನಸಂಖ್ಯೆಯ (ಮೇಲ್ವರ್ಗದವರು) ನಿಯಂತ್ರಣದಲ್ಲಿದೆ ಮತ್ತು ಶೇ.90 ಜನಸಂಖ್ಯೆಗೆ (ಹಿಂದುಳಿದ ವರ್ಗ, ದಲಿತ, ಬುಡಕಟ್ಟು) ಪ್ರಾತಿನಿಧ್ಯ ಸಿಗುತ್ತಿಲ್ಲ. ಸೇನೆಯಲ್ಲಿ ಮೇಲ್ವರ್ಗದವರೇ ಏಕೆ ತುಂಬಿದ್ದಾರೆ. ಸೇನೆಯಲ್ಲೂ ಮೀಸಲಾತಿ ನೀತಿ ಜಾರಿಗೆ ತರಬೇಕು’ ಎನ್ನುವ ಮೂಲಕ ಸೇನೆಯನ್ನೇ ಆ ಮೂಲಕ ದೇಶವನ್ನೇ ಅವಮಾನಿಸುವ ಮಾತುಗಳನ್ನಾಡಿದ್ದಾರೆ. ರಾಜಕೀಯ ಕ್ಷೇತ್ರ ತನ್ನ ಎಲ್ಲೆಯನ್ನು ಮೀರಬಾರದು. ರಾಜಕಾರಣಿಗಳ ಅವಿವೇಕದ ಮಾತುಗಳು ದೇಶದ ಆತ್ಮವನ್ನೇ ಘಾಸಿಮಾಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಬಿಹಾರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಅಲ್ಲಿನ ಜಾತಿ ಮತಗಳನ್ನು ಸೆಳೆಯಲು ರಾಹುಲ್ ಗಾಂಧಿ ಈ ಮಾತುಗಳನ್ನು ಹೇಳಿರಬಹುದು. ಆದರೆ, ಅದರಿಂದ ಎಂಥ ತಪು್ಪಸಂದೇಶ ರವಾನೆಯಾಗುತ್ತದೆ ಎಂಬುದನ್ನು ಮಾತಾಡುವ ಮುಂಚೆಯೇ ಯೋಚಿಸಬೇಕಿತ್ತು. ದೇಶದ ಅಧಿಕಾರಶಾಹಿಯಲ್ಲಿಯೂ ಮೇಲ್ವರ್ಗದವರೇ ತುಂಬಿದ್ದಾರೆ ಎಂದು ಆರೋಪಿಸಿದ್ದ ರಾಹುಲ್, ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಲ್ಲಿ ಲಕ್ಷಾಂತರ ಜನರು ಸೇರಿದ್ದರೂ, ಅಲ್ಲಿ ಅಂಬಾನಿ, ಅದಾನಿಯಂಥ ಸಿರಿವಂತರಿಗೆ ಮಾತ್ರ ಆಮಂತ್ರಣ ನೀಡಲಾಗಿದೆ ಎಂದಿದ್ದರು. ಹೀಗೆ ವಿವಾದಿತ ಮಾತುಗಳ ಮೂಲಕ ಮತಗಳನ್ನು ಸೆಳೆಯಲು ಸಾಧ್ಯವಿಲ್ಲ. ಸೇನೆಯಲ್ಲಿ ಎಲ್ಲ ಧರ್ಮಗಳ, ಜಾತಿಗಳ ಜನರಿದ್ದಾರೆ ಮತ್ತು ತಾಯಿ ಭಾರತಾಂಬೆಯ ಮಕ್ಕಳಾಗಿ ದೇಶಸೇವೆಯಲ್ಲಿ ನಿರತರಾಗಿದ್ದಾರೆ. ಏಕತೆಯ ಈ ಸೂತ್ರ ದೇಶವನ್ನು ಬೆಸೆಯಬೇಕೆ ಹೊರತು, ಸೇನೆಯಲ್ಲೇ ಧರ್ಮ ಮತ್ತು ಜಾತಿಯನ್ನು ಹುಡುಕಲು ಹೋಗುವ ಪ್ರಯತ್ನ ಸರಿಯಲ್ಲ. ‘ರಾಹುಲ್ ಮಾತುಗಳು ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸುವ ಪ್ರಯತ್ನ’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.
ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು, ಅಭಿವೃದ್ಧಿಯ ಆಶಯಗಳನ್ನು ಪ್ರಸ್ತುತಪಡಿಸುತ್ತ ಚುನಾವಣೆ ಎದುರಿಸಲಿ. ಅದನ್ನು ಬಿಟ್ಟು ಸೇನೆಯನ್ನು ಎಳೆದು ತರುವ ದುಸ್ಸಾಹಸ ಬೇಡ.