ಮಕ್ಕಳ ಮೇಲೆ ನಿಮ್ಮ ಅಪೇಕ್ಷೆಯ ಹೊರೆ ಹೇರಬೇಡಿ

1-686c0499eb186
Published on
ದ್ಗುರು, ನಿಮ್ಮ ಅಭಿಪ್ರಾಯದಲ್ಲಿ ಒಳ್ಳೆಯ ಪಾಲಕರೆಂದರೆ ಯಾರು?

ಬಹುತೇಕರು, ಒಂದು ಮಗು ಹುಟ್ಟಿದ ಕೂಡಲೇ, ಅದು ತಾವು ಶಿಕ್ಷಕರಾಗುವ ಸಮಯವೆಂದು ಭಾವಿಸಿಕೊಂಡಿದ್ದಾರೆ. ಒಂದು ಮಗು ನಿಮ್ಮ ಮನೆಗೆ ಬಂದರೆ, ಅದು ನೀವು ಒಬ್ಬ ಶಿಕ್ಷಕರಾಗುವ ಸಮಯವಲ್ಲ, ಅದು ನೀವು ಕಲಿಯುವ ಸಮಯ, ಏಕೆಂದರೆ ನೀವು ನಿಮ್ಮನ್ನು ಮತ್ತು ಮಗುವನ್ನು ಹೋಲಿಸಿ ನೋಡಿದರೆ, ಯಾರು ಹೆಚ್ಚು ಸಂತೋಷಭರಿತರು? ಮಗು, ಅಲ್ಲವೇ? ಹಾಗಾಗಿ, ಅದು ಮಗುವಿನಿಂದ ಕಲಿಯುವ ಸಮಯ, ನಿಮ್ಮಿಂದ ಅದು ಕಲಿಯುವುದಲ್ಲ. ಮಗುವಿಗೆ ಕಲಿಸಬಹುದಾದ, ಒಂದು ಹಂತದವರೆಗೆ ಕಲಿಸಲೇಬೇಕಾದ ಏಕೈಕ ವಿಷಯವೆಂದರೆ- ಜೀವನೋಪಾಯದ ಕೆಲವು ತಂತ್ರಗಳು, ಹೇಗೆ ಬದುಕಬೇಕು ಮತ್ತು ಜಗತ್ತಿನಲ್ಲಿ ಒಂದೆರಡು ಕಾಸು ಸಂಪಾದಿಸುವುದು ಹೇಗೆ ಎನ್ನುವುದಷ್ಟೆ.

ಆದರೆ ಜೀವನದ ವಿಷಯಕ್ಕೆ ಬಂದರೆ, ಒಂದು ಮಗು ಜೀವನದ ಬಗ್ಗೆ ಅನುಭವಾತ್ಮಕವಾಗಿ ಹೆಚ್ಚು ತಿಳಿದಿರುತ್ತದೆ. ಮಗುವೇ ಜೀವನ; ಅದಕ್ಕೆ ಗೊತ್ತಿದೆ. ನಿಮ್ಮ ವಿಷಯದಲ್ಲೂ ಸಹ ಹಾಗೆಯೇ, ನಿಮ್ಮ ಮನಸ್ಸಿನ ಮೇಲೆ ಹೇರಿದ ಪ್ರಭಾವಗಳನ್ನು ತೆಗೆದುಹಾಕಿದರೆ, ಈ ಜೀವ, ನಿಮ್ಮ ಜೀವಶಕ್ತಿಗಳು ‘ಹೇಗಿರಬೇಕು’ ಎಂಬುದನ್ನು ತಿಳಿದಿವೆ. ಮನಸ್ಸಿಗೆ ಮಾತ್ರ ‘ಹೇಗಿರಬೇಕು’ ಎಂಬುದು ಗೊತ್ತಿಲ್ಲ. ಹಾಗಾಗಿ, ಮಗುವಿನ ಮೇಲೆ ಹೇರುವ ಎಲ್ಲವೂ ನಿಮ್ಮ ಗಲಿಬಿಲಿಗೊಂಡ, ಕ್ಲೇಶಮಯ ಮನಸ್ಸೇ ಆಗಿದೆ. ಪ್ರತಿಯೊಬ್ಬರೂ ಆ ರೀತಿಯಲ್ಲಿ ದುಃಖಿತರು ಎಂದು ಹೇಳುತ್ತಿಲ್ಲ ಆದರೆ ನೀವು ಎಲ್ಲ ರೀತಿಯ ದುಃಖಗಳನ್ನು ಸೃಷ್ಟಿಸಲು ಸಮರ್ಥರಾಗಿದ್ದೀರಿ. ಮಗು ಇನ್ನೂ ಆ ಸ್ಥಿತಿಗೆ ಹೋಗಿಲ್ಲ.

ಹಾಗಾಗಿ ಅದು ಕಲಿಯುವ ಸಮಯ, ಕಲಿಸುವುದಲ್ಲ. ಅಗತ್ಯವಾಗಿ ಕೊಡಬೇಕಾದ ಸಂಗತಿಯೆಂದರೆ, ಪ್ರೀತಿ, ಕಾಳಜಿ ತುಂಬಿದ ವಾತಾವರಣ ಮತ್ತು ಮಗು ಬೆಳೆಯಲು ಬೇಕಾದ ಬೆಂಬಲವಷ್ಟೇ. ಒಳ್ಳೆಯ ರೀತಿಯಲ್ಲಿ ಸಾಕುವುದು ಎಂದರೆ, ಮಗುವಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಕಲಿಸುವುದಲ್ಲ, ಬದಲಾಗಿ ಒಂದು ವಾತಾವರಣವನ್ನು ಸೃಷ್ಟಿಸುವುದು. ಕೈತೋಟವನ್ನು ಬೆಳೆಸಬೇಕೆಂದರೆ, ಪ್ರತಿದಿನ ಕುಳಿತು ಹೂವುಗಳನ್ನು ಅಥವಾ ಹಣ್ಣುಗಳನ್ನು ಗಿಡಗಳಿಂದ ಕೀಳಲು ಪ್ರಯತ್ನಿಸುವುದಿಲ್ಲ. ಕೇವಲ ಬೇಕಾದ ವಾತಾವರಣವನ್ನು ನಿರ್ವಹಿಸುತ್ತೀರಿ ಮತ್ತು ಅದು ಚೆನ್ನಾಗಿ ಬೆಳೆಯುತ್ತದೆ, ಅಲ್ಲವೇ? ಮಾಡಬಹುದಾದದ್ದು ಅಷ್ಟೆ ಮತ್ತು ಮಾಡಬೇಕಾದದ್ದು ಅಷ್ಟೆ.

ಬಹುತೇಕ ತಂದೆ-ತಾಯಿಗಳು ಮಕ್ಕಳನ್ನು ತಮ್ಮದೇ ಮುಂದುವರಿದ ಭಾಗ ಎಂದು ಭಾವಿಸಿಕೊಂಡಿರುವುದರಿಂದ ಮಕ್ಕಳು ತಮ್ಮಂತೆಯೇ ಇರಬೇಕೆಂದು ಬಯಸುತ್ತಾರೆ, ಇಲ್ಲವಾದರೆ ಅವರಿಗೆ ಅಸ್ಥಿರ ಭಾವನೆ ಬಂದುಬಿಡುತ್ತದೆ. ಅವರಿಗೆ ’ತಮ್ಮ ಮಕ್ಕಳು ಎಲ್ಲಿಂದ ಬಂದಿರಬಹುದು’ ಎಂಬ ಭಾವನೆಯೂ ಬರುತ್ತದೆ, ಯಾಕೆಂದರೆ ಮಕ್ಕಳು ಅಷ್ಟರ ಮಟ್ಟಿಗೆ ತಂದೆ-ತಾಯಿಗಿಂತ ಭಿನ್ನವಾಗಿರುತ್ತಾರೆ. ಮಕ್ಕಳು ನಿಮ್ಮಂತೆ ಇರಬೇಕಾಗಿಲ್ಲ. ಮುಂದಿನ ಪೀಳಿಗೆಯ ಜನರು ನಿಮ್ಮಂತೆ ಯೋಚಿಸಬಾರದು ಮತ್ತು ಭಾವಿಸಬಾರದು, ಮತ್ತು ನೀವು ಯೋಚಿಸಲೂ ಸಾಧ್ಯವಿಲ್ಲದಂಥ ಸಂಗತಿಗಳನ್ನು ಅವರು ಮಾಡಬೇಕು, ಅಲ್ಲವೇ? ತಂದೆ-ತಾಯಿಗಳು ತಮಗೆ ಗೊತ್ತಿರುವುದನ್ನು ಮಕ್ಕಳಿಗೆ ನಿರಂತರವಾಗಿ ಕಲಿಸಲು ಪ್ರಯತ್ನಿಸುವುದಕ್ಕೆ ಕಾರಣವೆಂದರೆ ಅವರಲ್ಲಿ ಮಕ್ಕಳ ಮೂಲಕ ತಮ್ಮನ್ನು ಹೆಚ್ಚಿಸಿಕೊಳ್ಳುವ ಪ್ರವೃತ್ತಿ ಇರುವುದು- ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅವರು ಮಕ್ಕಳ ಜೀವನವನ್ನು ಹಿಂಡಿ ತಮ್ಮ ಜೀವನವನ್ನು ನಡೆಸಲು ಪ್ರಯತ್ನಿಸುತ್ತಿದ್ದಾರೆ. ಅದರ ಅಗತ್ಯವಿಲ್ಲ. ಅಪೂರ್ಣತೆ ಮತ್ತು ಅಸ್ಥಿರತೆಯ ಭಾವನೆಯಿಂದ ಈ ಅವಶ್ಯಕತೆ ಉಂಟಾಗಿದೆ. ಇದನ್ನು ತ್ಯಜಿಸಿದರೆ, ಮಗುವಿನೊಂದಿಗೆ ಏನು ಮಾಡಬೇಕು ಎನ್ನುವುದು ಅವರಿಗೆ ತಿಳಿಯುತ್ತದೆ.

ಪಾಲಕರು ಮಕ್ಕಳ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವುದಾದರೆ, ಅವರು ಮಕ್ಕಳನ್ನು ಹೇಗೆ ಬೆಳೆಸಬೇಕೆಂದರೆ ಅವರಿಗೆ ತಂದೆ-ತಾಯಿಯ ಅಗತ್ಯವೇ ಇರಬಾರದು. ಪ್ರೀತಿಸುವ ಪ್ರಕ್ರಿಯೆ ಯಾವಾಗಲೂ ಮುಕ್ತಗೊಳಿಸುವ ಪ್ರಕ್ರಿಯೆ ಆಗಿರಬೇಕು, ಬಂಧಿಸುವ ಪ್ರಕ್ರಿಯೆಯಲ್ಲ. ಆದರೆ ಅನೇಕ ರೀತಿಗಳಲ್ಲಿ, ಪಾಲಕರು ಮಕ್ಕಳನ್ನು ತಮ್ಮದೆಂಬ ರೀತಿಯಲ್ಲಿ ಬಂಧಿಸಲು ಪ್ರಯತ್ನಿಸುತ್ತಾರೆ, ಏಕೆಂದರೆ ನಿರ್ದಿಷ್ಟ ವಯಸ್ಸಿನ ನಂತರ, ಮಕ್ಕಳ ಮೂಲಕವೇ ನಿಮ್ಮನ್ನು ಗುರುತಿಸಿಕೊಳ್ಳುತ್ತೀರಿ. ಪ್ರಾರಂಭದಲ್ಲಿ, ನಿಮ್ಮ ಗುರುತುಗಳು ಬೇರೆ ರೀತಿಗಳಲ್ಲಿ ಇರುತ್ತವೆ, ಆದರೆ ಮಕ್ಕಳು ವಯಸ್ಸಿಗೆ ಬಂದ ಮೇಲೆ ನಿಮ್ಮ ಮಕ್ಕಳ ಮೂಲಕ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಅವರ ಮೂಲಕ ಜೀವಿಸಲು ಪ್ರಯತ್ನಿಸುತ್ತೀರಿ, ಹಾಗಾಗಿ ಅವರು ನಿಮ್ಮಂತೆ ಇರಬೇಕು ಮತ್ತು ನಿಮ್ಮಂತೆಯೇ ಆಲೋಚಿಸಬೇಕು ಮತ್ತು ಭಾವಿಸಬೇಕು ಎಂದು ಬಯಸುತ್ತೀರಿ. ಅದು ಹಾಗಿರಬೇಕಾಗಿಲ್ಲ. ಅವರು ಸಂಪೂರ್ಣವಾಗಿ ನಿಮಗಿಂತ ಭಿನ್ನವಾಗಿ ಇರಬಹುದು.

ನಿಮ್ಮನ್ನು ಒಂದು ಪರಿಪೂರ್ಣ ಜೀವವನ್ನಾಗಿಸಿಕೊಂಡರೆ ಆಗ ಇನ್ನೊಬ್ಬರ ಮೂಲಕ ಜೀವನವನ್ನು ರೂಪಿಕೊಳ್ಳಬೇಕಾದ ಅಥವಾ ಇನ್ನೊಬ್ಬರ ಜೀವನವನ್ನು ಹಿಂಡಬೇಕಾದ ಅವಶ್ಯಕತೆ ಬರುವುದಿಲ್ಲ. ಈ ಜಗತ್ತಿನಲ್ಲಿ ಒಂದು ಮಗು ಅನೇಕ ರೀತಿಗಳಲ್ಲಿ ಅಸಹಾಯಕ ಮತ್ತು ಶೋಷಿತ ಜೀವವಾಗಿದೆ. ಏಕೆಂದರೆ ನಿಮ್ಮಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಯಾವ ಸೌಲಭ್ಯವೂ ಅದಕ್ಕಿರುವುದಿಲ್ಲ. ‘ಇಲ್ಲ, ನಾನು ಏನೂ ತಪ್ಪು ಮಾಡುತ್ತಿಲ್ಲ. ನಾನು ಮಗುವಿಗೆ ಹೊಡೆಯುವುದಿಲ್ಲ ಅಥವಾ ಬೈಯ್ಯುವುದಿಲ್ಲ’ ಎಂದು ನೀವು ಹೇಳಬಹುದು. ಇಲ್ಲಿ ವಿಷಯ ಅದಲ್ಲ; ನಿಮ್ಮ ಆಲೋಚನೆ ಮತ್ತು ಭಾವನೆಗಳನ್ನು ಅದರ ಮೇಲೆ ಹೇರುತ್ತಿದ್ದೀರಿ. ಇದರ ವಿರುದ್ಧ ಅದು ಪೂರ್ತಿಯಾಗಿ ಅಸಹಾಯಕವಾಗಿದೆ.

ಹಾಗಾಗಿ ಒಂದು ಮಗು ಹುಟ್ಟಿದಾಗ, ಮಗುವನ್ನು ಸುತ್ತಮುತ್ತಲಿನ ಪರಿಸರವನ್ನು ಗಮನಿಸಲು ಬಿಡಿ, ಪ್ರಕೃತಿಯೊಂದಿಗೆ ಮತ್ತು ತನ್ನೊಂದಿಗೆ ತಾನು ಸಮಯ ಕಳೆಯಲು ಬಿಡಿ. ಪ್ರೀತಿಯ ವಾತಾವರಣವನ್ನು ಸೃಷ್ಟಿಸಿ ಮತ್ತು ಬೆಂಬಲಿಸಿ ಮತ್ತು ನಿಮ್ಮ ನೈತಿಕತೆ, ಸಿದ್ಧಾಂತಗಳು, ಮತ ಅಥವಾ ಇನ್ನೇನನ್ನೂ ಯಾವುದೇ ರೀತಿಯಲ್ಲೂ ಮಗುವಿನ ಮೇಲೆ ಹೇರಬೇಡಿ. ಅದನ್ನು ಸುಮ್ಮನೆ ಬೆಳೆಯಲು ಬಿಡಿ, ಅದರ ಬುದ್ಧಿ ಬೆಳೆಯಲು ಬಿಡಿ ಮತ್ತು ಅದು ಒಬ್ಬ ಮನುಷ್ಯ ಜೀವಿಯಾಗಿ ತನ್ನದೇ ರೀತಿಯಲ್ಲಿ ಜೀವನವನ್ನು ನೋಡಲು ಬಿಡಿ- ಕುಟುಂಬ, ಸಂಪತ್ತು ಅಥವಾ ಮತ್ಯಾವುದರೊಂದಿಗೂ ಗುರುತಿಸಿಕೊಳ್ಳದೇ ಬೆಳೆಯಲು ಬಿಡಿ. ಆ ಮಗುವಿಗೆ ಮನುಷ್ಯ ಜೀವಿಯಾಗಿ ಜೀವನವನ್ನು ನೋಡಲು ಸಹಾಯಮಾಡುವುದು ಮಗುವಿನ ಮತ್ತು ಜಗತ್ತಿನ ಶ್ರೇಯಸ್ಸಿಗೆ ಮುಖ್ಯ.

ಅದೇ ರೀತಿ, ಸಮಾಜದಲ್ಲಿ ಮಗುವಿನ ಮೇಲೆ ಪ್ರಭಾವ ಬೀರಲು ನಿರಂತರವಾಗಿ ಪ್ರಯತ್ನಿಸುವ ಬೇರೆ ಶಕ್ತಿಗಳೂ ಇರುತ್ತವೆ. ಶಿಕ್ಷಣ, ಸ್ನೇಹಿತರು, ಮಗು ನಡೆದಾಡುವ ಬೀದಿ, ಇವೆಲ್ಲದರ ಪ್ರಭಾವಗಳಿವೆ. ಒಂದಲ್ಲ ಒಂದು ರೀತಿಯಲ್ಲಿ ನಾವು ಪ್ರಜ್ಞೆಯಿಲ್ಲದೆ ಈ ಸಾಮಾಜಿಕ ರಚನೆಯನ್ನು ನಿರ್ವಿುಸಿದ್ದೇವೆ ಮತ್ತು ಅದರ ಪ್ರಭಾವಗಳನ್ನು ನೂರಕ್ಕೆ ನೂರರಷ್ಟು ನಿವಾರಿಸಿಕೊಳ್ಳಲು ಸಾಧ್ಯವಿಲ್ಲ. ಮಗು ತನ್ನ ಬುದ್ಧಿಶಕ್ತಿಯಿಂದ ಜೀವನವನ್ನು ನೋಡಲು ಸಹಾಯ ಮತ್ತು ಸಹಕಾರಗಳನ್ನು ನೀಡಬಹುದು ಅಷ್ಟೆ, ನಿಮ್ಮ ರೀತಿ ಅಥವಾ ಅವರ ರೀತಿಯಲ್ಲಲ್ಲ. ಇದೀಗ, ಬೀದಿಯ ಪ್ರಭಾವ ಮಗುವಿನ ಮೇಲೆ ಬಲವಾಗಿದೆ; ಇನ್ನೊಂದು ಕಡೆ ನೀವು ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದೀರಿ. ಅನೇಕ ಕಾರಣಗಳಿಂದ ಮಗು ಅದನ್ನು ಪ್ರತಿರೋಧಿಸುತ್ತದೆ, ನೀವು ಯೌವನದಲ್ಲಿದ್ದಾಗ ಬೀದಿಯ ಸಂಸ್ಕ ೃ ಮನೆಯ ಸಂಸ್ಕ ೃಗಿಂತ ಆಕರ್ಷಣೀಯವಾಗಿ ಕಾಣುತ್ತದೆ. ಬಹುತೇಕ ಸಂದರ್ಭಗಳಲ್ಲಿ ಪಾಲಕರು ಬೀದಿಯ ಸಂಸ್ಕ ೃಗೆ ವಿರುದ್ಧವಾದ ಪ್ರಭಾವವನ್ನು ಬೀರಲು ಪ್ರಯತ್ನಿಸುತ್ತಾರೆ, ಆದರೆ ಅದು ಅವರನ್ನು ಇನ್ನಷ್ಟು ಬೀದಿಯ ಕಡೆಗೆ ತಳ್ಳುತ್ತದೆ.

ಬೀದಿಯ ಗಂಡಾಂತರಗಳು ಯಾವಾಗಲೂ ಇರುತ್ತವೆ. ಅದು ಮಾದಕ ವಸ್ತುಗಳಾಗಿರಬಹುದು, ಅಪಘಾತವಾಗಿರಬಹುದು, ಗಾಯವಾಗಿರಬಹುದು, ಸಾವಾಗಿರಬಹುದು, ಮದ್ಯವಾಗಿರಬಹುದು, ಅದು ಅನೇಕ ರೀತಿಯ ಕೆಟ್ಟ ನಡವಳಿಕೆಗಳಾಗಿರಬಹುದು- ಇವೆಲ್ಲ ಜಗತ್ತಿನಲ್ಲಿ ಇವೆ. ಆದರೆ ಅರ್ಥಮಾಡಿಕೊಳ್ಳಬೇಕಾದುದಿಷ್ಟೇ, ನಿಮಗಿಷ್ಟವಿದೆಯೋ ಅಥವಾ ಇಲ್ಲವೋ, ಇಂದೋ ಅಥಾ ನಾಳೆಯೋ, ಮಗು ತನ್ನ ಸ್ವಂತ ಬುದ್ಧಿಶಕ್ತಿಯಿಂದ ಬದುಕುವುದನ್ನು ಕಲಿಯಬೇಕು, ಅವನು ಯಾವುದನ್ನು ಎಷ್ಟು ಮಾಡಬೇಕು ಎನ್ನುವುದನ್ನು ತಾನಾಗೇ ಆಯ್ಕೆ ಮಾಡಿಕೊಳ್ಳಬೇಕು. ಹಾಗಾಗಿ ಅವನು ಎಷ್ಟು ಬೇಗ ಇದರಿಂದ ಸಜ್ಜುಗೊಳ್ಳುತ್ತಾನೋ ಅಷ್ಟು ಒಳ್ಳೆಯದು. ಇದರರ್ಥ ಸ್ವಂತ ಬುದ್ಧಿಶಕ್ತಿಯನ್ನು ಬಳಸುವುದನ್ನು ಕಲಿಯಲು ಮಗುವನ್ನು ಬೀದಿಗೆ ನೂಕಬೇಕೆಂದಲ್ಲ.

ನಿಮ್ಮ ನೈತಿಕತೆ ಮತ್ತು ಮೌಲ್ಯಗಳಿಂದ ಮಗುವಿನ ಮೇಲೆ ವಿರುದ್ಧ ಪ್ರಭಾವವನ್ನು ಬೀರಲು ಪ್ರಯತ್ನಿಸದಿರಿ. ಯಾವುದೋ ಪ್ರಭಾವಕ್ಕೊಳಗಾಗುವುದರ ಬದಲಾಗಿ, ಅವನು ಹೆಚ್ಚಿನ ಬುದ್ಧಿವಂತಿಕೆಯಿಂದ ಜೀವನವನ್ನು ನೋಡಲು ಸಹಾಯ ಮಾಡಿ. ಮನೆಯಲ್ಲಿ ನಿರ್ದಿಷ್ಟ ಮೌಲ್ಯಗಳು, ನೀತಿಬೋಧೆಗಳು ಮತ್ತು ಅರ್ಥವಾಗದ ಕೆಲವು ಧಾರ್ವಿುಕ ನಡವಳಿಕೆಗಳ ಹೇರುವಿಕೆಯಿಂದಲೇ ಅನೇಕ ರೀತಿಗಳಲ್ಲಿ ಬಹುಶಃ ಅವನು ಬೀದಿಯಿಂದ ಪೋಷಿತನಾಗಿರಬಹುದು; ಅವನಿಗೆ ಅವುಗಳಲ್ಲಿ ಯಾವುದೇ ಮೌಲ್ಯ ಕಂಡುಬರುತ್ತಿರುವುದಿಲ್ಲ. ಅದು ಅರ್ಥವಾಗುತ್ತಿರುವುದಿಲ್ಲ ಅಥವಾ ಅದರಲ್ಲಿ ಅರ್ಥವಿದೆಯೆಂದೆನಿಸುವುದಿಲ್ಲ. ಆದರೂ ಅವೆಲ್ಲವನ್ನೂ ಅವನು ಮಾಡಲೇಬೇಕಾಗಿರುತ್ತದೆ. ಹಾಗಾಗಿ, ಅವನಿಗೆ ಬೀದಿಯ ಸರಳವಾದ ಕಟ್ಟುಪಾಡಿಲ್ಲದ ವಿಷಯಗಳು ಹೆಚ್ಚು ಅರ್ಥಪೂರ್ಣವೆನಿಸುತ್ತವೆ. ಕಾಲಾಂತರದಲ್ಲಿ ಅದು ಅವನಿಗೆ ಹಾನಿಕರವಾಗಬಹುದಾದರೂ, ಇದೀಗ ಬೀದಿಯ ಸ್ವಾತಂತ್ರ್ಯ ಮನೆಯ ಹೇರುವಿಕೆಗಿಂತ ಒಳ್ಳೆಯದೆನಿಸುತ್ತದೆ.

ಹಾಗಾಗಿ, ಮನೆ ಎನ್ನುವುದು ನಿಮ್ಮ ಸಂಸ್ಕೃತ, ಸಿದ್ಧಾಂತಗಳು ಮತ್ತು ನೈತಿಕತೆಗಳನ್ನು ಮಕ್ಕಳ ಮೇಲೆ ಹೇರುವ ಸ್ಥಳವಾಗಬಾರದು. ಅದು ಮಗುವಿನ ಮೇಲೆ ಯಾವುದೇ ರೀತಿಯ ಹೇರಿಕೆಯಿಲ್ಲದ ಪೋಷಕ ವಾತಾವರಣವಾಗಿರಬೇಕು ಮತ್ತು ಮಗುವಿನ ಬುದ್ಧಿಯನ್ನು ಪೋ›ತ್ಸಾಹಿಸುವ ಸ್ಥಳವಾಗಿರಬೇಕು. ಒಂದು ಮಗು ಗೊಂದಲಕ್ಕೊಳಗಾದಾಗ ಅಥವಾ ಏನು ಮಾಡಬೇಕೆಂದು ತಿಳಿಯದಾದಾಗ ಅದು ಯೋಚಿಸಲು ತೊಡಗುತ್ತದೆ, ಜೀವನದ ಅನೇಕ ಅಂಶಗಳಿಗೆ ತೆರೆದುಕೊಂಡು ಬೆಳೆಯುತ್ತಿರುವ ಮಗುವಿಗೆ ಹಾಗಾಗುವುದು ಸಹಜ.

ಆದರೆ, ಈಗ ಅದರ ಆಲೋಚನೆಯನ್ನು ಬೀದಿ ಅಥವಾ ಮನೆಯ ವಾತಾವರಣಗಳು ಪ್ರಭಾವಿಸುತ್ತವೆ. ಅದಕ್ಕೆ ಬದಲಾಗಿ, ಮಗುವಿಗೆ ತನ್ನ ಬುದ್ಧಿಯನ್ನು ಉಪಯೋಗಿಸಲು ಬಿಟ್ಟರೆ ಸಾಮಾನ್ಯವಾಗಿ ಮಕ್ಕಳು ಸರಿಯಾದುದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ, ನನಗೆ ಈ ಬುದ್ಧಿವಂತಿಕೆ ಬಗ್ಗೆ ವಿಶ್ವಾಸವಿದೆ. ಹೌದು ಕೆಲವು ಮಕ್ಕಳು ದಾರಿತಪ್ಪಬಹುದು. ದುರಾದೃಷ್ಟವಷಾತ್ ನಿಮ್ಮ ಮಗುವಿಗೆ ಹಾಗೆ ಆದರೆ, ಅದರ ನೋವು ನನಗೆ ಅರ್ಥವಾಗುತ್ತದೆ, ಆದರೆ ಅದು ಜಗತ್ತಿನ ವಾಸ್ತವವಾಗಿದೆ. ಅವರನ್ನು ಪ್ರಭಾವಿಸಲು ಪ್ರಯತ್ನಿಸಿದರೂ ಹಾಗೆ ಆಗುತ್ತದೆ; ನೀವು ಪ್ರಯತ್ನಿಸದಿದ್ದರೆ ಆಗಲೂ ಹಾಗೆ ಆಗುತ್ತದೆ. ಆದರೆ ಮನೆಯಲ್ಲಿ ಹೇರುವಿಕೆಯ ವಾತಾವರಣ ಇಲ್ಲದಿದ್ದರೆ ಹಾಗಾಗುವ ಸಾಧ್ಯತೆ ಅತ್ಯಂತ ಕಡಿಮೆ.

ಈಗ, ಮಗುವಿಗೆ ಮನೆ ಅತ್ಯಂತ ಅನುಕೂಲಕರವಾಗಿದ್ದರೆ, ಅದು ಸಹಜವಾಗಿಯೇ ಹೊರಗಡೆಗಿಂತ ಮನೆಯಲ್ಲೇ ಹೆಚ್ಚು ಕಾಲ ಕಳೆಯಲು ಬಯಸುತ್ತದೆ. ಈಗ, ಮನೆಯಲ್ಲಿಯ ಹೇರುವಿಕೆಯ ಕಾರಣದಿಂದ, ಮನೆಗಿಂತ ಬೀದಿಯ ಮೂಲೆಯೇ ಹೆಚ್ಚು ಅನುಕೂಲಕರವಾಗಿ ಕಾಣುತ್ತಿದೆ. ಹಾಗಾಗಿ, ಅಲ್ಲಿ ಆ ರೀತಿಯ ಅನನುಕೂಲವಿಲ್ಲದಿದ್ದರೆ, ಅವನು ಬೀದಿಯ ಮೂಲೆಯನ್ನು ತನ್ನ ಅಡ್ಡೆಯನ್ನಾಗಿಸಿಕೊಳ್ಳುವುದಿಲ್ಲ. ಆದರೆ ಇದರರ್ಥ ಮಗುವು ಜಗತ್ತಿನ ಕಠಿಣ ವಾಸ್ತವಗಳಿಗೆ ತೆರೆದುಕೊಳ್ಳುವುದಿಲ್ಲ ಎಂದಲ್ಲ. ಅದು ಯಾವಾಗಲೂ ಆಗುತ್ತದೆ, ಮತ್ತು ಅವರು ಒಂದಲ್ಲ ಒಂದು ರೀತಿಯಲ್ಲಿ ಅವನ ಮೇಲೆ ಪ್ರಭಾವ ಬೀರುತ್ತಾರೆ. ಆದರೆ ಯಾವಾಗಲೂ, ತಂದೆ-ತಾಯಿಗಳು ಮಗುವಿಗೆ ತನ್ನ ಕುರಿತು ತಾನೇ ಯೋಚಿಸಲು, ತನಗೆ ಯಾವುದು ಒಳ್ಳೆಯದು ಎಂಬುದನ್ನು ತನ್ನ ಬುದ್ಧಿಯನ್ನು ಬಳಸಿ ತೀರ್ವನಿಸಲು ಕಲಿಸುವುದು ಉತ್ತಮ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net