

ಹರಿಯಾಣದ ಧಾತ್ರತ್ ಗ್ರಾಮದಲ್ಲಿ ಶರ್ಮಾ ಅವರಿಗೆ ಸೇರಿದ ಎರಡಂತಸ್ತಿನ ಐಷಾರಾಮಿ ಮನೆ ಇದೆ. ಅಮೆರಿಕ ಶೈಲಿಯ ಓಪನ್- ಮಾಡ್ಯುಲರ್ ಕಿಚನ್, ರ್ಪಾಂಗ್ ಗ್ಯಾರೇಜ್ ಮೊದಲಾದ ಆಧುನಿಕ ಸೌಲಭ್ಯಗಳಿವೆ. 50 ಇಂಚಿನ ಟಿವಿಯಲ್ಲಿ ಇಡೀ ದಿನ ಅಮೆರಿಕದ ರಂಗುರಂಗಿನ ಜೀವನ ಕುರಿತ ವಿಡಿಯೋಗಳೇ ರಾರಾಜಿಸುತ್ತವೆ. ಈ ದೌಲತ್ತಿನ ಹಿಂದಿರುವ ಗುಟ್ಟು ಏನೆಂದರೆ- ಶರ್ಮಾ ಕುಟುಂಬದ ಮೂವರು ಪುತ್ರರು ಅಮೆರಿಕಕ್ಕೆ ವಲಸೆ ಹೋಗಿದ್ದಾರೆ.
ಹರಿಯಾಣದ ಗ್ರಾಮೀಣ ಭಾಗವು ಈಗ ತನ್ನ ಯುವಕರನ್ನು ಅಮೆರಿಕ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಕ್ಕೆ ಕಳುಹಿಸುವ ಓಟದಲ್ಲಿ ಪಂಜಾಬ್ನಂತಾಗಿದೆ. ಐಇಎಲ್ಟಿಎಸ್ (ದಿ ಇಂಟರ್ನ್ಯಾಷನಲ್ ಇಂಗ್ಲಿಷ್ ಲಾಂಗ್ವೇಜ್ ಟೆಸ್ಟಿಂಗ್ ಸಿಸ್ಟಂ) ಕೋಚಿಂಗ್ ಸೆಂಟರ್, ವೀಸಾ ಕೇಂದ್ರಗಳು ಮತ್ತು ಏಜೆಂಟ್ ಕಚೇರಿಗಳು ಹರಿಯಾಣದ ಸಣ್ಣಪುಟ್ಟ ಪಟ್ಟಣದ ಮಾರುಕಟ್ಟೆ ಸ್ಥಳಗಳಲ್ಲಿ ಸಾಲುಸಾಲಾಗಿ ಸಿಗುತ್ತವೆ. ಪರ್ಮನೆಂಟ್ ರೆಸಿಡೆನ್ಸಿ, ವರ್ಕ್ ಪರ್ವಿುಟ್, ಡಿಪೆಂಡೆಂಟ್ ರಿಪ್ಲೆಸಿಂಗ್ ಮುಂತಾದ ಶಬ್ದಕೋಶಗಳು ರಾಜ್ಯದ ಹಳ್ಳಿಗಳ ತುಂಬೆಲ್ಲ ಆವರಿಸಿಕೊಂಡಿವೆ.
ಕನಸಿನ ಬೆನ್ನೇರಿ...: ಗ್ರಾಮೀಣ ನಿರುದ್ಯೋಗಿ ಯುವಕರು ಕುಟುಂಬದ ಭೂಮಿ ಮತ್ತು ಚಿನ್ನವನ್ನು ಮಾರಾಟ ಮಾಡುತ್ತಿದ್ದಾರೆ, ಮೂಲ ನರ್ಸಿಂಗ್ ಮತ್ತು ಅಕೌಂಟೆನ್ಸಿ ಡಿಪ್ಲೋಮಾಗಳನ್ನು ಪಡೆಯುತ್ತಿದ್ದಾರೆ. ಇಂಗ್ಲಿಷ್ ಕೋರ್ಸ್ಗಳಿಗೆ ದಾಖಲಾಗುತ್ತಿದ್ದಾರೆ. ಅಲ್ಲದೆ, ಯೂಟ್ಯೂಬ್ ವಿಡಿಯೊಗಳನ್ನು ವೀಕ್ಷಿಸಿ ಅಮೆರಿಕನ್ನರ ಮಾತನಾಡುವ ಶೈಲಿ ಕರಗತ ಮಾಡಿಕೊಳ್ಳುತ್ತಿದ್ದಾರೆ. ಈ ವಲಸೆ ಪ್ರಕ್ರಿಯೆ ಜಾಟ್, ಸೈನಿ, ಬ್ರಾಹ್ಮಣ, ಪರಿಶಿಷ್ಟರು ಹೀಗೆ ಎಲ್ಲ ಜಾತಿಗಳಿಗೂ ವ್ಯಾಪಿಸಿದೆ.
ನಿಶ್ಚಯ್ ಶರ್ಮಾ ಕ್ಯಾಲಿಫೋರ್ನಿಯಾದಲ್ಲಿ ಸಾರಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ವರ್ಷಕ್ಕೆ ಒಂದು ತಿಂಗಳ ಕಾಲ ಮನೆಗೆ ಬರುತ್ತಾರೆ. ಅವರ ಇಲ್ಲಿನ ಎರಡು ಅಂತಸ್ತಿನ ಭರ್ಜರಿ ಮನೆ ಕಂಡು ಅಕ್ಕಪಕ್ಕದಲ್ಲಿರುವವರು, ಗ್ರಾಮಸ್ಥರು ಕೂಡ ತಮ್ಮ ಮನೆಯವರು ವಿದೇಶಕ್ಕೆ ಹೋಗಿ ಅದೃಷ್ಟ ಯಾವಾಗ ಖುಲಾಯಿಸುವುದೋ ಎಂದು ಕನಸು ಕಾಣುತ್ತಾರೆ. ಆದರೆ, ಈ ಹಣ, ಪ್ರತಿಷ್ಠೆ ಮತ್ತು ಹೆಮ್ಮೆಯ ಹಿಂದೆಲ್ಲ ವಿದೇಶಕ್ಕೆ ತೆರಳುವ ಅಕ್ರಮ ಮಾರ್ಗ ಇದೆ. ಇದನ್ನು ಡಾಂಕಿ ರೂಟ್ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ತಿಂಗಳಿಗೆ 25 ಸಾವಿರ ರೂಪಾಯಿ ಪಡೆಯುವಂತಹ ಉದ್ಯೋಗಗಳಿಗೆ ವಿದೇಶಗಳಲ್ಲಿ 3-4 ಲಕ್ಷ ರೂಪಾಯಿ ದೊರೆಯುತ್ತದೆ. ನರ್ಸಿಂಗ್, ಡ್ರೖೆವಿಂಗ್ ಮತ್ತು ಮ್ಯಾನೇಜಿಂಗ್ ಸ್ಟೋರ್ ಕೆಲಸಗಳು ಕೆಲವು ಜನಪ್ರಿಯ ಉದ್ಯೋಗಗಳಾಗಿವೆ.
ಪಟಾಕಿ ಹಾರಿಸಿ ಸಂಭ್ರಮ: ಧಾತ್ರತ್ ಹಳ್ಳಿಯಲ್ಲಿ ದೀಪಾವಳಿಯ ಸಮಯದಲ್ಲಿ ಮಾತ್ರವಲ್ಲದೆ, ವರ್ಷವಿಡೀ ಪಟಾಕಿಗಳನ್ನು ಹಾರಿಸಲಾಗುತ್ತದೆ. ವಲಸೆ ಹೋಗಿರುವ ವ್ಯಕ್ತಿ ಗಮ್ಯಸ್ಥಾನವನ್ನು ಸುರಕ್ಷಿತವಾಗಿ ತಲುಪಿದಾಗ, ಅವನ ಕುಟುಂಬ ಪಟಾಕಿ ಸಿಡಿಸುವ ಮೂಲಕ ಸಂಭ್ರಮ ಆಚರಿಸುತ್ತದೆ. ಕಳೆದ ಆರೇಳು ವರ್ಷಗಳಲ್ಲಿ 100ಕ್ಕೂ ಹೆಚ್ಚು ಯುವಕರು ಧಾತ್ರತ್ನಿಂದ ವಿದೇಶಕ್ಕೆ ವಲಸೆ ಹೋಗಿದ್ದಾರೆ. ಕೆಲವರು 15 ವರ್ಷ ವಯಸ್ಸಿನವರಾಗಿದ್ದಾಗಲೇ ಪರದೇಶಕ್ಕೆ ತೆರಳಿದ್ದಾರೆ. 10ನೇ ತರಗತಿ ಉತ್ತೀರ್ಣರಾದ ತಕ್ಷಣವೇ ಅವರು ಈ ಅಕ್ರಮ ಮಾರ್ಗಕ್ಕೆ ತಯಾರಿ ಪ್ರಾರಂಭಿಸುತ್ತಾರೆ.
ನೋ ವೀಸಾ ನೋ ಲಾಸ್: ಭೂಪಿಂದರ್ ಖಾನ್ಪುರ್ 2012ರಲ್ಲಿ ಸಂಬಂಧಿ ಜಸ್ಬೀರ್ ಪಂಜೆಟಾ ಅವರೊಂದಿಗೆ ಕೇಂಬ್ರಿಜ್ ಶಿಕ್ಷಣ ಮತ್ತು ವಲಸೆ ಕೇಂದ್ರ ಪ್ರಾರಂಭಿಸಿದರು. ಇಬ್ಬರೂ ಆಸ್ಟ್ರೇಲಿಯಾ ಮತ್ತು ನಂತರ ಸಿಂಗಾಪುರಕ್ಕೆ ವಲಸೆ ಹೋಗಲು ಅರ್ಜಿ ಸಲ್ಲಿಸಿದ್ದರು. ಆದರೆ, ಅದನ್ನು ತಿರಸ್ಕರಿಸಲಾಯಿತು. ‘ಆ ಹೊತ್ತಿಗೆ ನಾವು ಸಂಪೂರ್ಣ ಪ್ರಕ್ರಿಯೆಯನ್ನು ತಿಳಿದಿದ್ದೆವು. ಅಲ್ಲದೆ, ಇದು ಉತ್ತಮ ವ್ಯವಹಾರ ಕಲ್ಪನೆಯಂತೆ ಕಂಡುಬಂದಿತು. ಸ್ಥಳೀಯ ಭಾಷೆಯಲ್ಲಿ ನಾವು ಏಜೆಂಟರು. ಆದರೆ, ಅತ್ಯಾಧುನಿಕವಾಗಿ ಹೇಳುವುದಾದರೆ ನಾವು ಸಲಹೆಗಾರರು’ ಎನ್ನುತ್ತಾರೆ ಪಂಜೆಟಾ. ಆಸ್ಟ್ರೇಲಿಯಾದಲ್ಲಿ ಕೂಡ ಇವರು ಕಚೇರಿ ಹೊಂದಿದ್ದಾರೆ. 2014ರಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಲಾಗಿರುವ ಇವರ ಕೇಂದ್ರವು ಐಇಎಲ್ಟಿಎಸ್ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತದೆ ಮತ್ತು ವೀಸಾ ಕೊಡಿಸುವ ಕೆಲಸ ಮಾಡುತ್ತದೆ. 1990ರ ದಶಕದಲ್ಲಿ, ಲಾಡ್ವಾದಲ್ಲಿ ಗರಿಷ್ಠ ಎರಡರಿಂದ ಮೂರು ಸಲಹೆಗಾರರು ಇದ್ದರು. ಆ ಸಮಯದಲ್ಲಿ ಆಸ್ಟ್ರೇಲಿಯಾ ಹೆಚ್ಚು ಬೇಡಿಕೆಯಿರುವ ತಾಣವಾಗಿತ್ತು. ಈಗ 200ಕ್ಕೂ ಹೆಚ್ಚು ಕೇಂದ್ರಗಳಿವೆ. ‘ನಮ್ಮ ಕೇಂದ್ರಗಳಲ್ಲಿ ಅರ್ಜಿಗಳನ್ನು ತಿರಸ್ಕರಿಸಿದ ಜನರು ನೆರೆಹೊರೆಯಲ್ಲಿ ಅಂಗಡಿಗಳನ್ನು ತೆರೆದಿದ್ದಾರೆ’ ಎಂದು ಪಂಜೆಟಾ ಹೇಳುತ್ತಾರೆ. ಈ ಪಟ್ಟಣದ ಮೇಲ್ಸೇತುವೆಗಳು, ಸ್ಮಾರಕಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ‘ಆಸ್ಟ್ರೇಲಿಯಾ, ಯುಕೆ ಮತ್ತು ಯುಎಸ್ಗೆ ನೋ ವೀಸಾ, ನೋ ಲಾಸ್’ ಎಂಬ ಜಾಹೀರಾತುಗಳು ರಾರಾಜಿಸುತ್ತಿವೆ.
ಅಪಾಯಕಾರಿ ಪಯಣ: ಪಾಸ್ಪೋರ್ಟ್, ವೀಸಾದಂತಹ ಅಧಿಕೃತ ದಾಖಲೆಗಳಿಲ್ಲದೆಯೇ ವಿವಿಧ ದೇಶಗಳ ಗಡಿಗಳನ್ನು ಅಕ್ರಮವಾಗಿ ದಾಟುತ್ತ, ಅಪಾಯಕಾರಿ ಮಾರ್ಗದಲ್ಲಿ ಸಾಗಿ ಅಮೆರಿಕ, ಆಸ್ಟ್ರೇಲಿಯಾದಂತಹ ದೇಶಗಳನ್ನು ತಲುಪುವುದನ್ನೇ ಡಾಂಕಿ ರೂಟ್ (Donkey Route) ಎಂದು ಕರೆಯಲಾಗುತ್ತದೆ. ಅಮೆರಿಕಕ್ಕೆ ಸಾಗುವವರು ಬಹುತೇಕವಾಗಿ ದಕ್ಷಿಣ ಮತ್ತು ಮಧ್ಯ ಅಮೆರಿಕ ಮೂಲಕವೇ ಅಕ್ರಮವಾಗಿ ಒಳಗೆ ಪ್ರವೇಶಿಸುತ್ತಾರೆ. ಆಹಾರ ಮತ್ತು ಆಶ್ರಯದ ಯಾವುದೇ ಗ್ಯಾರಂಟಿಯಿಲ್ಲದೆ ತೀವ್ರವಾದ ತಾಪಮಾನದಲ್ಲಿ ಕೈಗೊಳ್ಳಬೇಕಾದ ಅಪಾಯಕಾರಿ ಪ್ರಯಾಣ ಇದಾಗಿರುತ್ತದೆ. 2022ರ ಜನವರಿಯಲ್ಲಿ 3 ಮತ್ತು 11 ವರ್ಷ ವಯಸ್ಸಿನ ಇಬ್ಬರು ಮಕ್ಕಳನ್ನು ಒಳಗೊಂಡಂತೆ ನಾಲ್ಕು ಜನರ ಕುಟುಂಬವೊಂದು ಅಮೆರಿಕದ ಗಡಿಯಿಂದ ಸುಮಾರು 10 ಮೀಟರ್ ದೂರದಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ‘ನಾನು ಒಂಬತ್ತು ದೇಶಗಳು, ಕಾಡುಗಳನ್ನು ದಾಟಿ ಮತ್ತು ವಿಪರೀತ ಹವಾಮಾನ ಎದುರಿಸುತ್ತಾ ಕ್ಯಾಲಿ ಫೋರ್ನಿಯಾ ತಲುಪಿದೆ. ಕೆಲವೊಮ್ಮೆ, ಪ್ರಯಾಣವು ಎರಡು ವರ್ಷಗಳನ್ನು ತೆಗೆದುಕೊಳ್ಳಬಹುದು. ಸಿಕ್ಕಿಬಿದ್ದರೆ ಹೊಡೆಯಲಾಗುತ್ತದೆ, ಜೈಲುಗಳಿಗೆ ಹಾಕಲಾಗುತ್ತದೆ ಮತ್ತು ಕೆಲವೊಮ್ಮೆ ಕೊಲ್ಲಲಾಗುತ್ತದೆ’ ಎಂದು ವಲಸೆ ಹೋದವರೊಬ್ಬರು ವಿವರಿಸುತ್ತಾರೆ. ಆದರೆ, ಅವರು ಸಾಗಿದ ಮಾರ್ಗದ ಬಗ್ಗೆ ವಿವರಿಸಲು ಬಯಸುವುದಿಲ್ಲ. ಹರಿಯಾಣದ ಜಿಂದ್ ಜಿಲ್ಲೆಯ ಧಾತ್ರತ್, ಮೋರ್ಖಿ ಮತ್ತು ಕಲ್ವಾಗಳು ಮುಂತಾದ ಗ್ರಾಮಗಳ ಯುವಕರು ಮೊದಲು ಪ್ರವಾಸಿ ವೀಸಾದಲ್ಲಿ ದುಬೈಗೆ ಹಾರುತ್ತಾರೆ. ಹೆಚ್ಚು ಖರ್ಚಿಲ್ಲದ ಹೋಟೆಲ್ಗಳಲ್ಲಿ ವಾಸಿಸುತ್ತಾರೆ. ರಹಸ್ಯ ಕಂಟೇನರ್ಗಳ ಮೂಲಕ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗುತ್ತಾರೆ. ಹಿಮದ ಮೇಲೆ ದಿನಗಟ್ಟಲೇ ನಡೆಯುತ್ತಾರೆ. ಗಡಿ ಬೇಲಿಗಳನ್ನು ಹಾರಿ ತಮ್ಮ ಕನಸಿನ ಭೂಮಿಯನ್ನು ತಲುಪುತ್ತಾರೆ.
ಯುವಕರಿಲ್ಲದ ಶೇಖಪುರ ಗ್ರಾಮ: ಕರ್ನಾಲ್ ಜಿಲ್ಲೆಯ ಶೇಖಪುರ ಗ್ರಾಮದಲ್ಲಿ ವೃದ್ಧರು ಗುಂಪು ಗುಂಪಾಗಿ ಹುಕ್ಕಾ ಸೇದುವುದನ್ನು ಕಾಣಬಹುದು. ಹೆಂಗಸರು ಹೊಲ, ಅಡುಗೆ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರೆ ಮಕ್ಕಳು ಬೀದಿಯಲ್ಲಿ ಆಟವಾಡುತ್ತಿರುತ್ತಾರೆ. ಆದರೆ, ಯುವಕರು ಮಾತ್ರ ಸಿಗುವುದು ವಿರಳ. ಕಳೆದ ಐದಾರು ವರ್ಷಗಳಲ್ಲಿ ನೂರಕ್ಕೂ ಅಧಿಕ ಯುವಕರು ಬೇರೆ ದೇಶಗಳಿಗೆ ತೆರಳಿದ್ದಾರೆ. ‘ಇತ್ತೀಚೆಗೆ ಎಲ್ಲರೂ ವಿದೇಶಕ್ಕೆ ಹೋಗುತ್ತಿದ್ದಾರೆ. ಖೇರಿ ನಾರು ಮತ್ತು ಘೊಗ್ರಿಪುರ ಗ್ರಾಮಗಳು ಸಹ ತಮ್ಮ ಯುವಕರನ್ನು ವಿದೇಶಕ್ಕೆ ಕಳುಹಿಸುತ್ತಿವೆ’ ಎಂದು 45 ವರ್ಷದ ರೈತ ಸುರೇಶ್ ಕುಮಾರ್ ಘಂಘಾಸ್ ಹೇಳುತ್ತಾರೆ.
ನಿರುದ್ಯೋಗ ಅಧಿಕ: ಪಾಶ್ಚಾತ್ಯ ದೇಶಗಳಿಗೆ ವಲಸೆ ಈ ಹಿಂದೆ ಪಂಜಾಬ್ನಲ್ಲಿ ಸಾಕಷ್ಟಿತ್ತು. ಈಗ ಹರಿಯಾಣ ಅದೇ ಮಾರ್ಗದಲ್ಲಿ ಸಾಗುತ್ತಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಸೆಪ್ಟೆಂಬರ್ ವರದಿಯ ಪ್ರಕಾರ, ಹರಿಯಾಣವು ಭಾರತದಲ್ಲಿ ಅತಿ ಹೆಚ್ಚು ನಿರುದ್ಯೋಗವನ್ನು ದಾಖಲಿಸಿದೆ. ಇದು ರಾಷ್ಟ್ರೀಯ ಸರಾಸರಿಗಿಂತ 4 ಪಟ್ಟು ಹೆಚ್ಚು ಇದೆ.
25ರಿಂದ 60 ಲಕ್ಷ ರೂ.: ಡಾಂಕಿ ರೂಟ್ ತೋರುವ ಏಜೆಂಟರ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗೆ ಸಾಗುವಾಗ ಸಿಕ್ಕಿಬಿದ್ದರೆ ಮತ್ತು ಭಾರತಕ್ಕೆ ಮರಳಿ ಗಡೀಪಾರು ಮಾಡಿದರೆ ಹಣ ಹಿಂದಿರುಗಿಸುವ ಗ್ಯಾರಂಟಿಯನ್ನು ಏಜೆಂಟರು ನೀಡುವುದಿಲ್ಲ. ಜನರನ್ನು ಈ ರೀತಿ ವಿದೇಶಗಳಿಗೆ ರವಾನೆ ಮಾಡಲು 25-60 ಲಕ್ಷ ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.
ಮಹಿಳೆಯರೂ ಹಿಂದುಳಿದಿಲ್ಲ: ಇತ್ತೀಚಿನ ತಿಂಗಳುಗಳಲ್ಲಿ, ವೀಸಾ ಏಜೆಂಟ್ಗಳ ಬಳಿ ವಿಚಾರಿಸುವ ಯುವತಿಯರ ಸಂಖ್ಯೆ ಸಹ ಏರಿದೆ. ಅಲ್ಲದೆ, ಅವರು ಸಾಂಪ್ರದಾಯಿಕ ಮದುವೆ ವೀಸಾ ಮಾರ್ಗದ ಮೂಲಕ ಹೋಗುತ್ತಿಲ್ಲ. ಹೆಣ್ಣು ಮಕ್ಕಳನ್ನು ದೆಹಲಿ ವಿಶ್ವವಿದ್ಯಾಲಯ ಅಥವಾ ಇತರ ಸುಸ್ಥಾಪಿತ ಸಂಸ್ಥೆಗಳಿಗೆ ಕಳುಹಿಸದ ಕುಟುಂಬಗಳು ಕೂಡ ಅಮೆರಿಕ, ಕೆನಡಾ, ಆಸ್ಟ್ರೇಲಿಯಾದಲ್ಲಿ ಉದ್ಯೋಗಗಳು ಅಥವಾ ಪದವಿಗಳಿಗಾಗಿ ಅವಕಾಶಗಳನ್ನು ಅನ್ವೇಷಿಸಲು ಪ್ರಾರಂಭಿಸಿವೆ. ಶೇಖಪುರ ಗ್ರಾಮದಲ್ಲಿ ಇಬ್ಬರು ಯುವತಿಯರು ಈಗಾಗಲೇ ವಿದೇಶಕ್ಕೆ ಕಾನೂನುಬದ್ಧವಾಗಿ ಹೋಗಿದ್ದಾರೆ.