ದಾನ-ಸಹಾಯ ಉಪಯುಕ್ತವಾಗಿರಲಿ: ಮನೋಲ್ಲಾಸ

Manollasa
Published on
| ಕಾಂತೇಶಾಚಾರ್ಯ ಕದರಮಂಡಲಗಿ

ಅವನು ನಚಿಕೇತ. ಉದ್ದಾಲಕರ ಮಗ. ಇಬ್ಬರೂ ದೊಡ್ಡ ಜ್ಞಾನಿಗಳು. ತಂದೆ ಉದ್ದಾಲಕರು ವಿಶ್ವಜಿತ್ ಯಾಗವನ್ನು ಮಾಡಲು ಹೊರಟಿದ್ದಾರೆ. ಮಾಡಿದ ಕರ್ಮ ಸಫಲವಾಗಲು ಒಂದೊಂದು ಕರ್ಮಕ್ಕೆ ಒಂದೊಂದು ದಾನವನ್ನು ಹೇಳಿದ್ದಾರೆ ಶಾಸ್ತ್ರದಲ್ಲಿ. ಆದರೆ ಈ ವಿಶ್ವಜಿತ್ ಯಾಗಕ್ಕೆ ಸರ್ವಸ್ವದಕ್ಷಿಣೆಯನ್ನು ಹೇಳಿದ್ದಾರೆ. ತನ್ನಲ್ಲಿ ಇದ್ದದ್ದನ್ನೆಲ್ಲವನ್ನೂ ದಾನ ಮಾಡಬೇಕು. ಉದ್ದಾಲಕರು ಎಲ್ಲವನ್ನೂ ದಾನ ಮಾಡುವಾಗ ಗೋವುಗಳನ್ನೂ ದಾನ ಮಾಡುತ್ತಿದ್ದಾರೆ. ಆದರೆ ಆ ಗೋವುಗಳು ಬಹಳ ವಯಸ್ಸಾದ ಕಾರಣ ನಿರುಪಯುಕ್ತವಾಗಿದ್ದವು. ನಿರುಪಯುಕ್ತವಾದ ಗೋವುಗಳನ್ನು ಚೆನ್ನಾಗಿ ಸಂರಕ್ಷಣೆ ಮಾಡಬೇಕೇ ಹೊರತು ದಾನ ಮಾಡುವ ಹಾಗಿಲ್ಲ. ಕಾರಣ, ಯಾವುದೇ ವಸ್ತುವನ್ನು ದಾನ ಮಾಡುವಾಗ ಆ ವಸ್ತು ದಾನ ಪಡೆಯುವವರಿಗೆ ಉಪಯುಕ್ತವಾಗಿರಬೇಕೇ ಹೊರತು ನಿರುಪಯುಕ್ತವಾಗಿರಬಾರದು.

ಅನಂದಾ ನಾಮ ತೇ ಲೋಕಾಃ ತಾನ್ ಸ ಗಚ್ಛತಿ ತಾ ದದತ್ | (ಕಾಠಕೋಪನಿಷತ್)

ಒಂದುವೇಳೆ ನಿರುಪಯುಕ್ತವಾದ ಪದಾರ್ಥವನ್ನು ದಾನ ಕೊಟ್ಟರೆ, ಯಾವ ಲೋಕದಲ್ಲಿ ಸುಖವೇ ಇಲ್ಲವೊ ಅಂತಹ ದುಃಖಮಯವಾದ ಲೋಕ ಸಿಗುವಂತಾಗುತ್ತದೆ ಎನ್ನುತ್ತದೆ ಉಪನಿಷತ್ತು. ಈ ನಿಟ್ಟಿನಲ್ಲಿ ತಂದೆ ಮಾಡಲು ಹೊರಟಿರುವ ನಿರುಪಯುಕ್ತಗೋದಾನವನ್ನು ತಡೆಯುವ ಪ್ರಯತ್ನ ಮಾಡುತ್ತಾನೆ ನಚಿಕೇತ.

ಹಾಗಾಗಿ, ಮುಂದೆ ಯಮದೇವರಿಂದ ತತ್ವೋಪದೇಶ ಪಡೆದು ಉದ್ಧಾರ ಹೊಂದುತ್ತಾನೆ.ಇದು ಕಾಠಕೋಪನಿಷತ್ತಿ ನಲ್ಲಿ ಬರುವ ಕಥೆ. ಈ ಕಥೆಯ ಮೂಲಕ ನಮಗೆಲ್ಲ ಬಹಳ ದೊಡ್ಡ ಸಂದೇಶ ನೀಡುತ್ತದೆ ಉಪನಿಷತ್ತು. ನಮ್ಮ ಸನಾತನ ವೈದಿಕ ಸಂಪ್ರದಾಯದಲ್ಲಿ ಮದುವೆ, ಉಪನಯನ, ಗೃಹಪ್ರವೇಶ, ಹೋಮ, ಹವನ ಹೀಗೆ ಯಾವುದೇ ಕಾರ್ಯಗಳಲ್ಲಿ ದಾನ-ಧರ್ಮ ಮಾಡುವುದು ಶಾಸ್ತ್ರವಿಹಿತ. ಮತ್ತು ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ ಮುಂತಾದ ಪ್ರಕೃತಿವಿಕೋಪದ ಪರಿಣಾಮವಾಗಿ ಬಹಳ ಕಷ್ಟದಲ್ಲಿದ್ದವರಿಗೆ, ನಾನಾವಿಧ ರೋಗರುಜಿನಗಳಿಂದ ದುಃಖದಲ್ಲಿದ್ದವರಿಗೆ ಅನೇಕ ವಿಧವಾದ ಜೀವನಾವಶ್ಯಕ ವಸ್ತುಗಳನ್ನು ಕೊಟ್ಟು ಸಹಾಯ ಮಾಡುವುದು ಮಾನವೀಯತೆ. ಹೀಗೆ ದಾನದ ರೂಪದಲ್ಲಿಯೋ, ಸಹಾಯದ ರೂಪದಲ್ಲಿಯೋ ಯಾವುದೇ ಪದಾರ್ಥಗಳನ್ನು ಮತ್ತೊಬ್ಬರಿಗೆ ಕೊಡುವಾಗ, ಕೊಡುವ ಆ ಪದಾರ್ಥ ಅವರಿಗೆ ಉಪಯುಕ್ತವಾಗುತ್ತದೆಯೋ ಇಲ್ಲವೋ ಎಂಬುದನ್ನು ಯೋಚಿಸಿ, ಉಪಯುಕ್ತಪದಾರ್ಥಗಳನ್ನೇ ಕೊಡಬೇಕು ಎನ್ನುವುದು ಉಪನಿಷತ್ತು ತಿಳಿಸುವ ದಿವ್ಯಸಂದೇಶ. ಅಷ್ಟೇ ಅಲ್ಲ, ಇದೇ ನಿಜವಾದ ಮಾನವೀಯತೆ ಕೂಡ.

‘ಮನೆಯಲ್ಲಿ ಹಣ್ಣುಹಂಪಲುಗಳು, ತಿನ್ನುವ ಇತರ ಪದಾರ್ಥಗಳು ಕೆಡುತ್ತಿವೆ. ನಮಗೆ ತಿನ್ನಲು ಆಗುವುದಿಲ್ಲ. ನಮಗೆ ಬೇಡ. ಯಾರಿಗಾದರೂ ಕೊಟ್ಟುಬಿಡೋಣ’ ಎನ್ನುವ ಭಾವನೆ ಸರಿಯಲ್ಲ. ದಾನವಾಗಿಯೋ ಸಹಾಯವಾಗಿಯೋ ಕೊಡಬೇಕಾದ ಪದಾರ್ಥ ಚೆನ್ನಾಗಿರಬೇಕು. ಕೊಡುವುದಕ್ಕಾಗಿಯೇ ಖರೀದಿಸಿ ಕೊಡಬೇಕು. ಕೊಟ್ಟ ಪದಾರ್ಥ ಅವರಿಗೆ ಉಪಯುಕ್ತವಾಗಬೇಕು. ಕೊಟ್ಟದ್ದಕ್ಕೆ ಅವರ ಮನಸ್ಸೂ ಸಂತುಷ್ಟವಾಗಬೇಕು. ನಾಲ್ಕುದಿನ ಅದನ್ನು ಅವರು ಉಪಯೋಗಿಸಿ, ಹಾರೈಸುವಂತಿರಬೇಕು. ಆಗಲೇ ಅದು ಶಾಸ್ತ್ರೀಯವಾಗಿಯೂ ಲೌಕಿಕವಾಗಿಯೂ ಸಾರ್ಥಕ. ಈ ಸರಳಸೂತ್ರವನ್ನು ನಮ್ಮ ಜೀವನಕ್ರಮದಲ್ಲಿ ಅಳವಡಿಸಿಕೊಂಡರೆ ದೊಡ್ಡ ಬದಲಾವಣೆ ಕಾಣಬಹುದು, ಅಲ್ಲವೇ?

(ಲೇಖಕರು ಸಂಸ್ಕೃತ ವಿದ್ವಾಂಸರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net