ಶ್ವಾನ ಸ್ಥಳಾಂತರ ಸವಾಲು; ಬೀದಿನಾಯಿಮುಕ್ತ ಆಗಲಿವೆ ಸಾರ್ವಜನಿಕ ಪ್ರದೇಶಗಳು

Untitled design (3)
Published on

ಶಾಲೆ, ಆಸ್ಪತ್ರೆ, ರಸ್ತೆಗಳಲ್ಲಿರುವ ಬೀದಿನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ದೇಶದಲ್ಲಿ ನಾಯಿ ಕಡಿತದ ಅತಿ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿವೆ. ಉಳಿದ ರಾಜ್ಯಗಳಲ್ಲೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳವಳ ಮೂಡಿಸಿದೆ. ಸುಪ್ರೀಂ ಆದೇಶದ ಬಳಿಕ ಶ್ವಾನ ಸ್ಥಳಾಂತರ ಹೇಗೆ ನಡೆಯಲಿದೆ, ಇದರ ಪ್ರಕ್ರಿಯೆ ಏನು, ಎಷ್ಟು ಸಮಯ ಬೇಕಾಗಲಿದೆ... ಈ ಮೂಲಕ ನಮ್ಮ ರಸ್ತೆಗಳು ಶ್ವಾನಭೀತಿಯಿಂದ ಮುಕ್ತವಾಗಬಹುದೆ? ಎಂಬುದರ ವಿವರ ಇಲ್ಲಿದೆ.

ಬೀದಿನಾಯಿಗಳ ಹಾವಳಿ ತಡೆಗಟ್ಟುವಂತೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎ.ವಿ.ಅಂಜಾರಿಯಾ ಅವರಿದ್ದ ಪೀಠವು, ಸಾರ್ವಜನಿಕ ಸ್ಥಳಗಳಿಂದ ಬೀದಿನಾಯಿಗಳನ್ನು ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನವೆಂಬರ್ 7ರಂದು ಸೂಚನೆ ನೀಡಿದೆ. ಆಸ್ಪತ್ರೆ, ಶಾಲೆ-ಕಾಲೇಜು, ಆಟದ ಮೈದಾನಗಳು, ಬಸ್ ಮತ್ತು ರೈಲ್ವೆ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಬೀದಿನಾಯಿಗಳನ್ನು ಸ್ಥಳಾಂತರಿಸಲು ನಿರ್ಲಕ್ಷ್ಯ ವಹಿಸಿದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದೂ ಪೀಠ ಹೇಳಿದೆ. 2025ರ ಆಗಸ್ಟ್​ನಲ್ಲಿ ರಾಜಸ್ಥಾನ ಹೈಕೋರ್ಟ್ ಕೂಡ ರಾಜಸ್ಥಾನದ ಸಾರ್ವಜನಿಕ ಪ್ರದೇಶಗಳಿಂದ ಬೀದಿನಾಯಿಗಳನ್ನು ತೆರವುಗೊಳಿಸುವಂತೆ ಮತ್ತು ಈ ಕಾರ್ಯಾಚರಣೆಗೆ ಅಡ್ಡಿಬರುವವರ ವಿರುದ್ಧ

ಎಫ್​ಐಆರ್ ದಾಖಲಿಸುವಂತೆ ಸೂಚಿಸಿತ್ತು. ಬೀದಿನಾಯಿಗಳ ಸಮಸ್ಯೆ ಕುರಿತಂತೆ ಸುಪ್ರೀಂ ಕೋರ್ಟ್ ಕಠೋರ ನಿಲುವು ತಳೆದಿರುವುದು ಇದೇ ಮೊದಲೇನಲ್ಲ. ಬೀದಿನಾಯಿಗಳ ಹಾವಳಿ ಮತ್ತು ಅದು ಸೃಷ್ಟಿಸಿರುವ ಆತಂಕದ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿನ (ಎನ್​ಸಿಆರ್) ಬೀದಿನಾಯಿಗಳನ್ನು ಎಂಟು ವಾರದೊಳಗೆ ಹಿಡಿದು, ಸಂತಾನಶಕ್ತಿ ಹರಣ ಮಾಡಿ, ಶಾಶ್ವತ ಆಶ್ರಯ ಕೇಂದ್ರಗಳಿಗೆ ರವಾನಿಸುವಂತೆ ಆಗಸ್ಟ್ 11ರಂದು ಸೂಚಿಸಿತ್ತು. ಆದರೆ, ಈ ಬಾರಿಯ ಆದೇಶ ಇಡೀ ದೇಶಕ್ಕೆ ಅನ್ವಯವಾಗಲಿದೆ. ಸುಪ್ರೀಂ ಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವುದಕ್ಕೆ ಸಕಾರಣವೇ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ನಾಯಿ ಕಡಿತ ಮತ್ತು ರೇಬಿಸ್​ನಿಂದ ಪ್ರತಿವರ್ಷ ಜಗತ್ತಿನಾದ್ಯಂತ 55 ಸಾವಿರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ! ಇನ್ನೂ ಚಿಂತೆಯ ವಿಷಯವೆಂದರೆ ಈ ಪೈಕಿ ಪ್ರತಿ ಮೂರನೆಯ ವ್ಯಕ್ತಿ ಭಾರತೀಯ ಅಂದರೆ 18ರಿಂದ 20 ಸಾವಿರ ಭಾರತೀಯರು ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಪೈಕಿ ಶೇಕಡ 50ಕ್ಕೂ ಹೆಚ್ಚು 15 ವರ್ಷದೊಳಗಿನ ಮಕ್ಕಳೇ ಆಗಿದ್ದಾರೆ. ಅಂದರೆ ಮಕ್ಕಳ ಪಾಲಿಗೆ ಬೀದಿನಾಯಿಗಳು ದೊಡ್ಡ ಆಪತ್ತಾಗಿ ಕಾಡುತ್ತಿರುವುದನ್ನು ಅಂಕಿಸಂಖ್ಯೆಗಳೇ ಸ್ಪಷ್ಟವಾಗಿ ಸಾರುತ್ತವೆ.

ಜನವರಿ 13ರಂದು ಮುಂದಿನ ವಿಚಾರಣೆ

ಮುಂದಿನ ವಿಚಾರಣೆ 2026ರ ಜನವರಿ 13ರಂದು ನಿಗದಿಯಾಗಿದೆ. ಅಂದಿನ ವಿಚಾರಣೆಯ ವೇಳೆ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿ ಗಳು ಮತ್ತು ಎನ್​ಎಚ್​ಎಐ ಅಧ್ಯಕ್ಷರು ಆದೇಶ ಜಾರಿ ಮಾಡಿರುವ ಕುರಿತಂತೆ ಪ್ರಮಾಣಪತ್ರ ಸಲ್ಲಿಸಬೇಕು. ಹೆದ್ದಾರಿ ಮತ್ತು ಸಾರ್ವಜನಿಕ ಸ್ಥಳಗಳಿಂದ ಬೀದಿನಾಯಿಗಳನ್ನು ತೆರವುಗೊಳಿಸಿರುವುದು, ಅವುಗಳನ್ನು ಆಶ್ರಯ ಕೇಂದ್ರಗಳಿಗೆ ಕಳುಹಿಸಿರುವುದು ಮತ್ತು ಸಹಾಯವಾಣಿಯ ಸ್ಟೇಟಸ್ ರಿಪೋರ್ಟನ್ನು ಇದು ಒಳಗೊಂಡಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮತ್ತೆ ಬೀದಿನಾಯಿಗಳು ಪ್ರವೇಶಿಸಬಾರದು. ಈ ನಿಟ್ಟಿನಲ್ಲಿ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಆದೇಶ ಪಾಲನೆ ಮಾಡುವಲ್ಲಿ ವಿಫಲವಾದರೆ ಆಯಾ ಸಂಬಂಧಿತ ಅಧಿಕಾರಿಗಳನ್ನೇ ಹೊಣೆ ಮಾಡಿ, ಕ್ರಮ ಕೈಗೊಳ್ಳಲಾಗುವುದು ಎಂದು ಪೀಠ ತಿಳಿಸಿದೆ. ಅಲ್ಲದೆ, ಪಾಲಿಕೆ ಅಥವಾ ಸಂಬಂಧಿತ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಮೂರು ತಿಂಗಳಿಗೊಮ್ಮೆ ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡಿ, ಅವು ಬೀದಿನಾಯಿಗಳಿಂದ ಮುಕ್ತವಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು.

ಪ್ರಕರಣಗಳ ಸಂಖ್ಯೆ ಏರಿಕೆ

ೇಂದ್ರ ಪಶುಸಂಗೋಪನಾ ಸಚಿವ ಎಸ್.ಪಿ. ಸಿಂಗ್ ಬಘೇಲ್ 2025ರ ಏಪ್ರಿಲ್ 1ರಂದು ಲೋಕಸಭೆಯಲ್ಲಿ ನೀಡಿರುವ ಮಾಹಿತಿ ಪ್ರಕಾರ 2024ರಲ್ಲಿ ದೇಶದಲ್ಲಿ ನಾಯಿ ಕಡಿತದ 37.15 ಲಕ್ಷ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಇವುಗಳ ಸಂಖ್ಯೆ 30.52 ಲಕ್ಷ ಇತ್ತು ಎಂಬುದನ್ನು ಗಮನಿಸಿದರೆ ಒಂದೇ ವರ್ಷದಲ್ಲಿ ನಾಯಿ ಕಡಿತದ ಪ್ರಕರಣಗಳು 6.63 ಲಕ್ಷದಷ್ಟು ಹೆಚ್ಚಿವೆ. ಅಧ್ಯಯನಗಳ ಪ್ರಕಾರ, 2012ರಿಂದ 2020ರ ಅವಧಿಯಲ್ಲಿ ನಾಯಿ ಕಡಿತದ ಪ್ರಕರಣಗಳು ದ್ವಿಗುಣಗೊಂಡಿರುವುದು, ಈ ಸಮಸ್ಯೆಯ ಗಂಭೀರತೆಗೆ ಸಾಕ್ಷಿ. ಇದಕ್ಕೆ ಪ್ರಮುಖ ಕಾರಣ ನಗರ ಮತ್ತು ಮಹಾನಗರಗಳಲ್ಲಿ ಬೀದಿನಾಯಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿರುವುದು. ದೇಶದಲ್ಲಿ 1.53 ಕೋಟಿ ಬೀದಿನಾಯಿಗಳಿವೆ ಎಂದು ಸರ್ಕಾರ ಹೇಳಿದರೆ, ಸರ್ಕಾರೇತರ ಸಂಸ್ಥೆಗಳ ಪ್ರಕಾರ ಈ ಸಂಖ್ಯೆ 6 ಕೋಟಿಗೂ ಹೆಚ್ಚು. ವರ್ಷದಿಂದ ವರ್ಷಕ್ಕೆ ಬೀದಿನಾಯಿಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಬೀದಿನಾಯಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿರುವುದು ಅವುಗಳಿಗೆ ಆಹಾರ ಲಭ್ಯತೆಯ ಸಮಸ್ಯೆಯನ್ನು ತಂದೊಡ್ಡಿದೆ. ಸಾಮಾನ್ಯವಾಗಿ ಬೀದಿನಾಯಿಗಳು ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳುತ್ತವೆ. ಇದಕ್ಕಾಗಿ ತ್ಯಾಜ್ಯಗಳ ಡಂಪ್ ಯಾರ್ಡ್, ಮಾಂಸದಂಗಡಿ ಮತ್ತು ಬೀದಿತಿಂಡಿ ಅಂಗಡಿಗಳ ಸುತ್ತಮುತ್ತಲೇ ನೆರೆದಿರುತ್ತವೆ.

ಶ್ವಾನಗಳನ್ನು ಮತ್ತೆ ಬಿಡುವಂತಿಲ್ಲ

ಸಾರ್ವಜನಿಕ ಸ್ಥಳಗಳಲ್ಲಿ ಹಿಡಿದ ಬೀದಿನಾಯಿಗಳ ಸಂತಾನಶಕ್ತಿ ಹರಣ ಮಾಡಿ, ರೇಬಿಸ್ ನಿರೋಧಕ ಲಸಿಕೆ ನೀಡಿ, ಶಾಶ್ವತ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಬೀದಿನಾಯಿಗಳನ್ನು ಅವುಗಳನ್ನು ಹಿಡಿದ ಸ್ಥಳದಲ್ಲೇ ಮತ್ತೆ ಬಿಡಬಾರದು. ಶ್ವಾನಗಳನ್ನು ಮತ್ತೆ ಬೀದಿಯಲ್ಲಿ ಬಿಟ್ಟರೆ, ಸಾರ್ವಜನಿಕ ಸ್ಥಳಗಳನ್ನು ಮತ್ತೆ ಅಪಾಯಕ್ಕೆ ದೂಡಿದಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮುಂದೇನು?

  1. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮಲ್ಲಿನ ಸ್ಥಳೀಯ ಸಂಸ್ಥೆ ಅಥವಾ ನಗರಪಾಲಿಕೆ ಅಧಿಕಾರಿಗಳ ಮೂಲಕ ಎರಡು ವಾರಗಳ ಒಳಗೆ ಶಾಲೆ, ಕಾಲೇಜು, ಆಸ್ಪತ್ರೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ಆಟದ ಮೈದಾನಗಳ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಬೀದಿನಾಯಿಗಳು ನುಸುಳದಂತೆ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಸೂಕ್ತ ನಿರ್ಬಂಧಕ ವ್ಯವಸ್ಥೆಗಳನ್ನು ಅಳವಡಿಸಬೇಕು.
  2. ಸಾರ್ವಜನಿಕ ಪ್ರದೇಶಗಳು ಬೀದಿನಾಯಿಗಳಿಂದ ಮುಕ್ತಗೊಂಡಿರುವ ಬಗ್ಗೆ ಮತ್ತು ಈ ಪ್ರದೇಶಗಳಿಗೆ ಅವು ನುಗ್ಗುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಜಿಲ್ಲಾಧಿಕಾರಿ ನಿಗರಾಣಿಯಲ್ಲಿ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಖಚಿತಪಡಿಸಬೇಕು.
  3. ಎಲ್ಲ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಲ್ಲಲ್ಲಿ ಸಹಾಯವಾಣಿ ಸಂಖ್ಯೆಯನ್ನು ಡಿಸ್​ಪ್ಲೇ ಮಾಡಬೇಕು. ಪ್ರಯಾಣಿಕರು ಈ ಸಹಾಯವಾಣಿ ಸಂಖ್ಯೆಗೆ ಸಂರ್ಪಸಿ, ಬೀದಿನಾಯಿಗಳ ಸಂಚಾರ/ಹಾವಳಿಯ ಬಗ್ಗೆ ಮಾಹಿತಿ ನೀಡಬಹುದು. ಈ ಸಹಾಯವಾಣಿಗಳನ್ನು ಸ್ಥಳೀಯ ಪೊಲೀಸ್, ಎನ್​ಎಚ್​ಎಐ ಹಾಗೂ ಜಿಲ್ಲಾಡಳಿತದ ಕಂಟ್ರೋಲ್ ರೂಮ್ೊಂದಿಗೆ ಸಂರ್ಪಸಲಾಗುತ್ತದೆ.
  4. ಈ ಎಲ್ಲ ಸೂಚನೆಗಳು ದೇಶಾದ್ಯಂತ ಏಕಸ್ವರೂಪದಲ್ಲಿ ಜಾರಿಯಾ ಗಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಮನುಷ್ಯನ ಅತಿಯಾದ ಹಸ್ತಕ್ಷೇಪ

ಬೀದಿನಾಯಿಗಳು ಇತ್ತೀಚಿನ ವರ್ಷಗಳಲ್ಲಿ ಕ್ರೂರಸ್ವಭಾವ ಬೆಳೆಸಿಕೊಂಡಿವೆ. ಇದಕ್ಕೆ ಮನುಷ್ಯ ಮಾಡಿರುವ ಕೆಲ ಪ್ರಮಾದಗಳೇ ಕಾರಣ ಎನ್ನುತ್ತಾರೆ ತಜ್ಞರು. ಬೀದಿನಾಯಿಗಳು ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳುತ್ತವೆ. ಬೀದಿನಾಯಿಗಳ ಲಾಲನೆ-ಪೋಷಣೆಯಲ್ಲಿ ಮಾನವನ ಹಸ್ತಕ್ಷೇಪ ಮೊದಲಿನಿಂದಲೂ ಇದೆಯಾದರೂ ಕೋವಿಡ್ ಲಾಕ್​ಡೌನ್ ಸಮಯದಲ್ಲಿ ತೀವ್ರವಾಗಿ ಹೆಚ್ಚಿತು. ಲಾಕ್​ಡೌನ್ ಅವಧಿಯಲ್ಲಿ ಬೀದಿನಾಯಿಗಳಿಗೆ ಫೀಡ್ ಮಾಡುವುದು ಫ್ಯಾಷನ್ ಆಗಿಬಿಟ್ಟಿತು. ಬೀದಿನಾಯಿಗಳಿಗೆ ನೆರವಾಗುವ ನೆಪದಲ್ಲಿ ಜನರು ಅವುಗಳಿಗೆ ಎರಡೂ ಹೊತ್ತಿನ ಆಹಾರ ನೀಡಿದರು. ಆದರೆ, ಲಾಕ್​ಡೌನ್ ಮುಗಿದ ಮೇಲೆ ಇದು ನಿಂತುಹೋಯಿತು. ಇದರಿಂದ, ಬೀದಿನಾಯಿಗಳು ಕ್ರಮೇಣ ಅವಲಂಬಿತವಾದವು. ಆಹಾರಕ್ಕಾಗಿ ಜನರ ಮೇಲೆ ದಾಳಿ ಮಾಡತೊಡಗಿದವು. ಜನರನ್ನು ಕಚ್ಚತೊಡಗಿದವು. ಜನರಿಂದ ಆಹಾರ ದೊರೆಯುತ್ತಿದ್ದಂತೆ ಬೀದಿನಾಯಿಗಳ ಸ್ವಭಾವ ಸಾಕುನಾಯಿಗಳಂತಾಯಿತು. ಬೀದಿನಾಯಿಗಳ ಸ್ವಾಭಾವಿಕ ಗುಣ ಮನುಷ್ಯರೇ ಬದಲಿಸಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ.

ಬೇರೆ ದೇಶಗಳ ಸ್ಥಿತಿ...

  • ಟರ್ಕಿ 40 ಲಕ್ಷ ಬೀದಿನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲು 2024ರಲ್ಲಿ ನಿರ್ಧಾರ ಕೈಗೊಂಡಿತು. ಇದಕ್ಕೆ ವಿರೋಧ ವ್ಯಕ್ತವಾದರೂ, ನ್ಯಾಯಾಲಯ ಈ ಆದೇಶ ಬದಲಿಸುವುದಿಲ್ಲ ಎಂದಿತು.
  • ಬ್ರಿಟನ್​ನಲ್ಲಿ ಬೀದಿನಾಯಿಗಳ ಯೋಗಕ್ಷೇಮವನ್ನು ಅಲ್ಲಿನ ಸ್ಥಳೀಯ ಆಡಳಿತಗಳು ನೋಡಿಕೊಳ್ಳುತ್ತವೆ. 2023-24ರಲ್ಲಿ 36 ಸಾವಿರ ನಾಯಿಗಳಿಗೆ ಆಶ್ರಯ ಒದಗಿಸಲಾಗಿದೆ.
  • ಸಿಂಗಾಪುರದಲ್ಲಿ ಬೀದಿನಾಯಿಗಳನ್ನು ಹಿಡಿದು ಲಸಿಕೆ ನೀಡಲಾಗುತ್ತದೆ ಮತ್ತು ಸಂತಾನಶಕ್ತಿ ಹರಣಕ್ಕೆ ಒಳಪಡಿಸಲಾಗುತ್ತದೆ. ಈ ಜವಾಬ್ದಾರಿಯನ್ನು ಸರ್ಕಾರದ ಏಜೆನ್ಸಿ ನಿರ್ವಹಿಸುತ್ತದೆ.
  • ಅಮೆರಿಕದಲ್ಲೂ ಬೀದಿನಾಯಿಗಳನ್ನು ಆಶ್ರಯ ಕೇಂದ್ರ ಗಳಿಗೆ ಸ್ಥಳಾಂತರಿಸಲಾಗುತ್ತದೆ. ಅವುಗಳನ್ನು ಮತ್ತೆ ಬೀದಿಗೆ ಬಿಡುವುದಿಲ್ಲ. ಜಪಾನ್​ನಲ್ಲೂ ಇದೇ ಕ್ರಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net