ನಿಮ್ಮ ಮಕ್ಕಳೂ ಜಗಳ ಆಡ್ತಾರಾ?!

Child
Published on

| ಡಾ. ಕೆ.ಎಸ್. ಪವಿತ್ರ ಮನೋವೈದ್ಯರು

‘‘ಮೇಡಂ, ಅತ್ತೆ-ಅಮ್ಮ ಇಬ್ಬರೂ ಆಗ ಹೇಳಿದ್ರು. ಎರಡು ಮಕ್ಕಳು ಬೇಕು. ಒಬ್ಬರಿಗೊಬ್ರು ಅಕ್ಕ/ತಮ್ಮ/ಅಣ್ಣ/ತಂಗಿ ಅಂತ ಇರ್ತಾರೆ. ನಿನಗೂ ಬೆಳೆಸೋದು ಆಗ ಸುಲಭವಾಗುತ್ತೆ ಅಂತ. ಅದಕ್ಕೆ ಒಂದಕ್ಕೇ ಸಾಕು ಅಂತಿದ್ದ ನಾವು ಎರಡು ಮಕ್ಕಳು ಇರಲಿ ಅಂತ ಮಾಡಿಕೊಂಡೆವು. ಈಗ ನೋಡಿದ್ರೆ ಇವರಿಬ್ಬರ ಜಗಳ ಮುಗಿಯೋದೇ ಇಲ್ಲ. ತಾವು ಆಜನ್ಮ ಶತ್ರುಗಳು ಅನ್ನೋ ತರಹ ಆಡ್ತಾರೆ. ಒಬ್ಬರಿಗೊಬ್ಬರು ಕೆಟ್ಟ ಮಾತಾಡ್ತಾರೆ. ಇವರಿಬ್ಬರ ಜಗಳ ಪರಿಹರಿಸ್ಬೇಕು ಅಂತ ನಾನು ಕೂಗಲು ಆರಂಭಿಸ್ತೀನಿ. ಕೊನೆಗೆ ನನ್ನ ಗಂಡ ಬಂದು ‘ನೀನು ಅವರ ಜಗಳದಲ್ಲಿ ಯಾಕೆ ತಲೆ ಹಾಕ್ತೀಯ? ಏನಾದ್ರೂ ಮಾಡಿಕೊಳ್ಳಲಿ. ತನ್ನಿಂತಾನೇ ಸರಿ ಹೋಗುತ್ತೆ’ ಅಂತ ನನ್ನೇ ಬೈತಾರೆ. ‘‘ನನಗೋ ಪಕ್ಕದ ಮನೆಗೆಲ್ಲಾ ನಮ್ಮ ಮನೆಯಲ್ಲಿ ನಡೆಯುವ ಜಗಳಗಳು ಕೇಳಿದ್ರೆ ಏನಂದ್ಕೋತಾರೋ ಅಂತ ಭಯ’, ಹೀಗೆ ಹೇಳಿದ್ದು ‘ತಲೆನೋವು’ ಎಂದು ಚಿಕಿತ್ಸೆಗೆ ಬಂದಿದ್ದ ಒಬ್ಬ ತಾಯಿ.

ಈ ತಾಯಿಯ ಮಾತನ್ನು ಬಹಳಷ್ಟು ಜನ ತಾಯಂದಿರು ಒಪ್ಪುತ್ತಾರೆ. ಇದಕ್ಕೆ ಹೋಲುವಂತಹ ನಮ್ಮ ಅನುಭವಗಳನ್ನೂ ಜೊತೆಗೆ ಸೇರಿಸುತ್ತಾರೆ. ಈಗ ಹಿರಿಯರಾಗಿದ್ದರೂ, ತಮ್ಮ ಬಾಲ್ಯವನ್ನು ಕೆಲಕ್ಷಣ ನೆನಸಿಕೊಂಡರೆ ನಮ್ಮ ಅಕ್ಕ/ತಂಗಿ/ಅಣ್ಣ/ತಮ್ಮಂದಿರೊಡನೆ ಜಗಳವಾಡಿದ ಹಲವು ಘಟನೆಗಳು, ಆಗ ಅಪ್ಪ-ಅಮ್ಮ ಇನ್ನೊಬ್ಬರ ‘ಪಾರ್ಟಿ’ ವಹಿಸಿದ್ದು, ಅಂತಹ ಕಾದಾಟಗಳಲ್ಲಿ ಆದ ಗಾಯಗಳು ಎಲ್ಲರಿಗೂ ನೆನಪಾಗುತ್ತವೆ. ಇಂಥ ಅನುಭವಗಳು ಇಷ್ಟು ಸಾರ್ವತ್ರಿಕವಾಗಿ ಕಂಡುಬರುತ್ತವೆ ಎಂದ ಮೇಲೆ ಅದು ಸಹಜವೇ ಆಗಿರಬೇಕು. ಹಾಗೆಯೇ ‘ಸಹಜವಾದದ್ದು’ ಎಂದರೂ, ತಾಯಂದಿರು ‘‘ಇದು ಸಹಜ’ ಎಂದು ಒಪ್ಪಿಕೊಂಡು ಬಿಟ್ಟು ಬಿಡದೆ, ತಾವು ಕೋಪದಿಂದ ಕೂಗುವುದು ಏಕೆ ಎಂಬ ಬಗ್ಗೆ ನಾವು ಸ್ವಲ್ಪ ಗಮನವಿಟ್ಟು ನೋಡಲೇಬೇಕು. ಒಂದು ಮಗು ಮನೆಯವರೆಲ್ಲರ ಕಣ್ಮಣಿಯಾಗಿ ಬೆಳೆಯುತ್ತಿದೆ. 5 ವರ್ಷಗಳ ಹೊತ್ತಿಗೆ ಮನೆಗೆ ಮತ್ತೊಂದು ಮಗು ಬಂತು. ಅಸೂಯೆ ಸಹಜ ತಾನೆ? ತಂದೆ-ತಾಯಿಗಳಿಗೇನೋ ಮತ್ತೊಂದು ಮಗು ಎಂದರೆ ‘ಏನು’ ಎಂಬುದರ ಸ್ಪಷ್ಟ ಚಿತ್ರಣವಿರುತ್ತದೆ. ಆದರೆ ಅಪ್ಪ-ಅಮ್ಮ ಎಷ್ಟೇ ಬುದ್ಧಿ ಖರ್ಚು ಮಾಡಿ ತಮ್ಮ/ತಂಗಿ ಅಂದರೆ ‘ ಆಡಲು ಜೊತೆಗೊಂದು ಪಾಪು ಬರುತ್ತೆ’, ‘ಪಾಪುನೇ ಹೊಟ್ಟೆಯಲ್ಲಿ ಒದೆಯುವುದು’, ಎಂದೆಲ್ಲಾ ವಿವರಿಸಿ ಹೇಳಿದರೂ ಮಕ್ಕಳಿಗೆ ಹೆರಿಗೆಯಾದಾಕ್ಷಣದಿಂದಲೇ ಅಲ್ಲಿಯವರೆಗಿನ ಪರಿಸ್ಥಿತಿ ಪೂರ್ತಿ ಬದಲಾಗಿರುವುದು ಅರಿವಿಗೆ ಬರುತ್ತದೆ. ‘‘ತನ್ನಿಂದ ಎಲ್ಲವನ್ನೂ ಯಾರೋ ಕಸಿದುಕೊಂಡ’ ಭಾವನೆ ಬರುತ್ತದೆ.

ಅಮ್ಮನಿಗೆ ಮಕ್ಕಳಿಬ್ಬರೂ ಒಂದೇ ಎಂದು ಅಮ್ಮ ಭಾವಿಸಬಹುದು. ಅಲ್ಲಿಯವರೆಗೆ ಮನೆಯವರಿಗೆಲ್ಲ ‘ಪುಟ್ಟಿ’ ಆಗಿದ್ದ ಮೊದಲನೇ ಮಗು, ಎರಡನೆಯ ಮಗು ಬಂದ ತಕ್ಷಣ ಇದ್ದಕ್ಕಿದ್ದಂತೆ ದೊಡ್ಡವಳಾಗಿಬಿಡುತ್ತಾಳೆ. ‘ಅಕ್ಕ’ ಎಂದು ಕರೆಸಿಕೊಳ್ಳುತ್ತಾಳೆ. ಈಗಷ್ಟೇ ಹುಟ್ಟಿರುವ ಎಳೆಯ ಬೊಮ್ಮಟೆಯ ಎದುರು, 5 ವರ್ಷದ ಮಗು ‘ದೊಡ್ಡವಳು’, ‘ತಾನೇ ಅರ್ಥಮಾಡಿಕೊಳ್ಳಬೇಕಾದವಳು’ ಎಂದು ಹಿರಿಯರು ನಿರೀಕ್ಷಿಸತೊಡಗುವುದು ಸಾಮಾನ್ಯವಾಗಿ ಎಲ್ಲ ಮನೆಗಳಲ್ಲಿ ಕಂಡು ಬರುತ್ತದೆ. ಎರಡನೆಯ ಮಗು ಅಮ್ಮನಿಗೆ ಎಂದೂ ದೊಡ್ಡವರಾದಂತೆ ತೋರುವುದಿಲ್ಲ. ದೊಡ್ಡವರಾದ ಮೇಲೂ ಬಹುಜನ ನಗುತ್ತಾ, ಇನ್ನು ಕೆಲವರು ಬೇಸರದಿಂದ ಈ ಬಗ್ಗೆ ಹೇಳಿಕೊಳ್ಳುತ್ತಾರೆ.

ಹೀಗೆಲ್ಲಾ ನಡೆದರೂ, ಹೆಚ್ಚಿನ ಮನೆಗಳಲ್ಲಿ ಇದು ಗಂಭೀರ ಸಮಸ್ಯೆಯೇನೂ ಆಗಲಾರದು. ಏಕೆಂದರೆ ಮನೆಯಲ್ಲಿರುವ ಇತರ ಹಿರಿಯರು ಗಮನವನ್ನು ಸರಿದೂಗಿಸುತ್ತಾರೆ. ಕ್ರಮೇಣ ಕಾಲ ಕಳೆದಂತೆ ಅಕ್ಕ/ತಂಗಿ/ಅಣ್ಣ/ತಮ್ಮ ಜೊತೆಯಲ್ಲಿ ಮಲಗುವುದು, ಆಡುವುದು, ಒಬ್ಬರಿಂದೊಬ್ಬರು ಕಲಿಯುವುದು, ಒಟ್ಟಾಗಿ ಬೇರೆಯವರೊಂದಿಗೆ ಕಾದಾಡುವುದು ಇವುಗಳನ್ನು ಆನಂದಿಸತೊಡಗುತ್ತಾರೆ. ಕೊನೆಗೆ ದೊಡ್ಡವರಾಗಿ, ಮದುವೆಯಾದ ಮೇಲೆ ಗಂಡ/ಹೆಂಡತಿಯ ಬಳಿ ‘‘ನಮ್ಮ ಅಕ್ಕನ ಬಗ್ಗೆ ಮಾತನಾಡಬೇಡ/ನಮ್ಮ ಅಣ್ಣನ ಬಗ್ಗೆ ಮಾತಾಡಿದರೆ ನಾನು ಸುಮ್ನಿರೋಲ್ಲ’ ಎಂಬಂತಹ ಮಾತುಗಳು ಬರುವಷ್ಟು ಪ್ರಬಲ ಸಹೋದರ ಪ್ರೇಮ ನಮ್ಮೆಲ್ಲರದಾಗುತ್ತದೆ!

ಇಂತಹ ಪ್ರಬಲ ಸಹೋದರ ಪ್ರೇಮವೇ ನಮ್ಮಲ್ಲಿ ದೊಡ್ಡವರಾದ ಮೇಲೆ ನೆಲೆಯಾಗಬಹುದಾದರೂ, ಹೆಚ್ಚಿನ ತಾಯಂದಿರಿಗೆ ಮಕ್ಕಳು ಜಗಳವಾಡುವುದು, ಒಬ್ಬರಿಗೊಬ್ಬರು ಹೊಡೆಯುವುದು, ಕೆಟ್ಟ ಮಾತುಗಳನ್ನಾಡುವುದು ಅಪಾರ ಒತ್ತಡ ತರಲು ಸಾಧ್ಯವಿದೆ. ಈ ಬರಹದ ಮೊದಲಲ್ಲಿ ತಿಳಿಸಿದ ತಲೆನೋವಿಗೆಂದು ಬಂದಿದ್ದ ತಾಯಿಯ ಕಥೆ ಹಲವರದ್ದಾಗಿರಬಹುದು. ಅಂತಹ ಸಮಸ್ಯೆಗಳು ಎದುರಾದಾಗ ತಾಯಿಗೆ ಇತರರಿಂದ ಸಿಕ್ಕುವ ಸಲಹೆಗಳು ಬಹಳಷ್ಟು. ಆದರೆ ಅವು ಸಮಸ್ಯೆ-ಸಂಕಟಗಳನ್ನು ಮತ್ತಷ್ಟು ಹೆಚ್ಚಿಸಬಹುದು.

ಹಲವು ತಪ್ಪು ನಂಬಿಕೆಗಳಿವೆ: ‘ಸಹೋದರ ದ್ವೇಷ’ದ ಬಗ್ಗೆ ಹಲವು ತಪ್ಪು ನಂಬಿಕೆಗಳೂ ಇವೆ. ಮೊದಲನೆಯ ಮಗುವಿಗೆ ಹೆಚ್ಚು ಸೌಲಭ್ಯ ಸಿಕ್ಕುತ್ತದೆ; ಮೂರು ಮಕ್ಕಳಿದ್ದರೆ ಮಧ್ಯದ ಮಗು ಯಾರ ‘ಫೇವರಿಟ್’ ಆಗದೇ ಇರುವುದು; ಕೊನೆಯ ಮಗು ಇಡೀ ಕುಟುಂಬದ ‘ಮುದ್ದು’ ಆಗಿ ಉಳಿದು ನಲವತ್ತಾದರೂ ‘ಪಾಪು’ ಎಂದೇ ಕರೆಸಿಕೊಳ್ಳುವುದು; ಕಿರಿಯ ಮಕ್ಕಳು ಹೇಳಿದ್ದನ್ನು ಅಪ್ಪ-ಅಮ್ಮ ಕೇಳುತ್ತಾರೆ ಎಂದು ಹಿರಿಯ ಮಕ್ಕಳು ದೂರುವುದು; ಹಿರಿಯ ಮಕ್ಕಳಿಗೆ ಜವಾಬ್ದಾರಿ ಹೆಚ್ಚು ಎಂದು ಅಪ್ಪ-ಅಮ್ಮ ಭಾವಿಸುವುದು/ನಿರೀಕ್ಷಿಸುವುದು - ಹೀಗೆ ಈ ಪಟ್ಟಿ ಮುಂದುವರಿಯುತ್ತದೆ. ‘ಹುಟ್ಟುವ ಕ್ರಮ’ದ - ಆಜ್ಟಿಠಿಜ ಣ್ಟಛಛ್ಟಿನ ಬಗೆಗಿನ ಹಲವು ಸಂಶೋಧನೆ ಗಳು ಇವೆಲ್ಲವೂ ಕೆಲ ಮಟ್ಟಿಗಷ್ಟೇ ನಿಜ ಎಂದು ನಿರೂಪಿಸಿವೆ. ಹಿರಿಯ ಮಕ್ಕಳು-ಕಿರಿಯ ಮಕ್ಕಳು ಎಂಬುದಕ್ಕಿಂತ ಕೌಟುಂಬಿಕ ವಾತಾವರಣ ಮತ್ತು ಆಯಾ ಮಕ್ಕಳ ವ್ಯಕ್ತಿತ್ವವೇ ಈ ಎಲ್ಲ ಅಂಶಗಳನ್ನು ನಿರ್ಧರಿಸುತ್ತವೆ.

ತಂದೆಯ ಪಾತ್ರವೂ ಮುಖ್ಯ: ಮಕ್ಕಳು ಜಗಳವಾಡುವುದು ‘ಅಪಮಾನ’ ಅಲ್ಲ. ಇತರರೆದುರಿಗೆ ಜಗಳವಾಡಿದರೂ, ಅದೊಂದು ಸಹಜ ವರ್ತನೆ. ನಿಮ್ಮ ಆತ್ಮೀಯರು ಈ ಬಗ್ಗೆ ಗೇಲಿ/ಟೀಕೆ ಮಾಡಿದರೆ, ಅದರ ಅರ್ಥ ‘ಅವರಿಗೆ ಮಕ್ಕಳ ನಡವಳಿಕೆಯ ಬಗೆಗೆ ಅರಿವಿಲ್ಲ’ ಎಂದಷ್ಟೇ! ಹಾಗಾಗಿ ಅದರ ಬಗ್ಗೆ ಬೇಸರ ಬೇಡ. ಮಕ್ಕಳ ತಂದೆಯನ್ನೂ ಮಕ್ಕಳ ಪಾಲನೆ-ಪೋಷಣೆಯಲ್ಲಿ ಸಕ್ರಿಯವಾಗಿಸಿ. ಮಕ್ಕಳ ಜಗಳ ಪರಿಹರಿಸುವ ಅವಕಾಶಗಳನ್ನು ನೀಡಿ, ಪ್ರಯೋಗ ಮಾಡಿ. ಮಕ್ಕಳ ಜಗಳಗಳನ್ನು ಅವರ ನಡುವೆ ಆರೋಗ್ಯಕರವಾದ ಸ್ಪರ್ಧಾತ್ಮಕ ಭಾವನೆ ಹೆಚ್ಚಿಸಲು ಬಳಸಬಹುದು. ಪುರಾಣಗಳಿಂದ ಆಯ್ದ ಅಣ್ಣ-ತಮ್ಮಂದಿರ, ಅಕ್ಕ-ತಂಗಿಯರ ಕಥೆಗಳು, ಜನಪದ ಕಥೆ ಹೇಳಿ, ‘ಸಹೋದರ ಪ್ರೀತಿ’ ಎಂಬ ಕೌಟುಂಬಿಕ ಸಾಮರ್ಥ್ಯದ ಬಗ್ಗೆ ಪರೋಕ್ಷವಾಗಿ ಅರಿವು ಮೂಡಿಸಿ. ಮಕ್ಕಳು ಜಗಳವಾಡುವುದು ದ್ವೇಷಕ್ಕಷ್ಟೇ ಅಲ್ಲ, ಭಾವನೆಗಳನ್ನು ಹೊರಹಾಕಲು, ಪ್ರೀತಿ-ದ್ವೇಷಗಳೆರಡೂ ಒಟ್ಟಿಗೆ ಇರಲು ಸಾಧ್ಯ ಎಂಬುದನ್ನು ಖಚಿತಪಡಿಸಿಕೊಳ್ಳಲೂ ಕೂಡ. ನಿಮ್ಮ ಮಕ್ಕಳು ಜಗಳವಾಡಿದಾಗ, ಬೇಸರಗೊಳ್ಳುವ ಬದಲು ಕುತೂಹಲದಿಂದ ಗಮನಿಸಿ. ಜಗಳವೂ ಬೇಗ ಮುಗಿಯುತ್ತದೆ, ನಿಮ್ಮಲ್ಲಿ ಸಮಾಧಾನ-ಅರಿವುಗಳೂ ಮೂಡುತ್ತವೆ.

ಕಿರಿಯರೆಂಬ ಕವಚ ಬೇಡ: ಒಂದು ಮನೆಯಲ್ಲಿ ನಾಲ್ಕು ಮಂದಿ ಒಟ್ಟಿಗೆ ಜೀವಿಸಬೇಕಾದಾಗ ಎಲ್ಲರ ಮಧ್ಯೆಯೂ ಭಿನ್ನಾಭಿಪ್ರಾಯ-ಕಲಹಗಳು ಸಾಮಾನ್ಯ. ಇದರ ಒಂದು ಭಾಗ ಸಹೋದರ ದ್ವೇಷ. ಹಾಗಾಗಿ ಇದು ‘‘ನಾರ್ಮಲ್’. ಕಿರಿಯ ಮಕ್ಕಳು ನಿಮಗೆ ‘ಕಿರಿಯ’ರೆನಿಸಬಹುದು. ಆದರೆ ‘ಕಿರಿಯ’ರು ನಿಜವಾಗಿ ಅವರಿಗೆಷ್ಟು ವಯಸ್ಸೋ ಅಷ್ಟು ದೊಡ್ಡವರು. ಹಾಗಾಗಿ ಅವರ ಸರಿ/ತಪ್ಪುಗಳ ಬಗೆಗೆ ನೀವು ಗಮನಿಸಬೇಕೇ ವಿನಾ, ಅವರು ‘ಕಿರಿಯ’ ಎಂಬ ಕವಚ ತೊಡಿಸಿಯೇ ಅವರೇನು ಮಾಡಿದರೂ ಸರಿ ಎಂಬ ಧೋರಣೆ ಖಂಡಿತ ಸಲ್ಲದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net