

ಮೊದಲ ಸುದ್ದಿಯನ್ನು ಅಚ್ಚರಿಯಿಂದಲೋ, ಕುತೂಹಲದಿಂದಲೋ, ಭೀತಿಯಿಂದಲೋ ನೋಡಿದ್ದ ಬಹುಮಂದಿಯನ್ನು ಸಚಿವಾಲಯ ನೀಡಿದ ಸ್ಪಷ್ಟೀಕರಣದ ಎರಡನೇ ಸುದ್ದಿ ತಲುಪಲೇ ಇಲ್ಲ! ಇದರಿಂದಾಗಿ ಮೊದಲು ಹೇಳಿಕೆ ನೀಡಿದ್ದವರ ಉದ್ದೇಶ ಭಾಗಶಃ ಸಾಧನೆಯಾದಂತೆ ಕಂಡರೂ ಅದರಲ್ಲಿ ಅಚ್ಚರಿಯಿಲ್ಲ. ಇದೊಂದು ರೀತಿಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣಗಳಂತೆ ಗೋಚರಿಸುತ್ತದೆ. ಹಿಂದೊಮ್ಮೆ ಪ್ರತಿಷ್ಠಿತ ಸಂಸ್ಥೆಯೊಂದರ ಆಯುರ್ವೆದ ಔಷಧಿಗಳಲ್ಲಿ ಮಾನವನ ತಲೆಬುರುಡೆಯ ಮೂಳೆಯ ಪುಡಿಗಳನ್ನು ಸೇರಿಸಲಾಗಿದೆ ಎಂದು ಮಿಥ್ಯಾರೋಪ ಮಾಡಿ ಮತ್ತೆ ಸುಮ್ಮನೆ ಕುಳಿತದ್ದೂ ಜನರ ನೆನಪಿನಲ್ಲಿದೆ. ಭಾರತದ ಆಯುಷ್ ಸಚಿವಾಲಯ ಹೇಳಿದಂತೆ ನಿಜಕ್ಕೂ ಅವರು ಬಳಸಿದ್ದು ಅಮೃತಬಳ್ಳಿಯನ್ನೋ ಅಥವಾ ಅದನ್ನು ಹೋಲುವ ಬೇರೆ ಸಸ್ಯವನ್ನೋ ಎಂಬುದನ್ನು ಸಸ್ಯಶಾಸ್ತ್ರಜ್ಞರಿಂದ ಅಥವಾ ನುರಿತ ಪ್ರಸಿದ್ಧ ಆಯುರ್ವೆದ ವೈದ್ಯರಿಂದ ಪರಿಶೀಲನೆಗೆ ಒಳಪಡಿಸಿಲ್ಲ, ಕನಿಷ್ಠ ವಿಮರ್ಶಿಸಲೂ ಇಲ್ಲ. ಎಷ್ಟು ಪ್ರಮಾಣದಲ್ಲಿ, ಎಷ್ಟು ದಿನ ಸೇವಿಸಿದ್ದಾರೆ ಎಂಬ ಮಾಹಿತಿಯೂ ಇಲ್ಲ. ವೈದ್ಯರ ಸಲಹೆಯಂತೆ ಸೇವಿಸಿದ್ದೂ ಅಲ್ಲ. ಅಮೃತಬಳ್ಳಿಗೂ ಆಗಿರುವ ತೊಂದರೆಗೂ ಇರುವ ಸಂಬಂಧ ಪರಾಂಬರಿಸಿ ನೋಡಿಲ್ಲ, ಋಜುವಾತೂ ಪಡಿಸಿಲ್ಲ. ಬೇರೆ ಯಾವೆಲ್ಲಾ ಕಾಯಿಲೆಗಳು ಅವರಿಗಿದ್ದವು, ಏನೆಲ್ಲಾ ಔಷಧಗಳನ್ನು ಸೇವಿಸುತ್ತಿದ್ದರು, ಅವರ ಆರೋಗ್ಯದ ಹಿನ್ನೆಲೆಯೇನು- ಇವು ಯಾವುದರ ಸ್ಪಷ್ಟತೆ, ಮಾಹಿತಿ, ಪರಾಮರ್ಶೆಯೂ ಇಲ್ಲದೆ ಸಹಸ್ರಾರು ವರ್ಷಗಳಿಂದ ಭಾರತದಲ್ಲಿ ಬಳಕೆಯಲ್ಲಿರುವ ಸುಪ್ರಸಿದ್ಧ ಔಷಧೀಯ ಸಸ್ಯವಾಗಿರುವ ಅಮೃತಬಳ್ಳಿಯ ಮೇಲೆ ಮಾಡಿರುವ ಆರೋಪ ಜನತೆಯ ಹಾದಿತಪ್ಪಿಸುವ ಹೇಳಿಕೆ ಎಂದಿದೆ.
ಸಂಸ್ಕೃತದಲ್ಲಿ ಗುಡೂಚಿ, ಹಿಂದಿಯಲ್ಲಿ ಗಿಲೋಯ್ ಎಂಬ ಹೆಸರುಗಳನ್ನು ಹೊಂದಿರುವ ಅಮೃತಬಳ್ಳಿಯ ಗುಣ ಪರಿಣಾಮಗಳ ಕಾರ್ಯಕ್ಷಮತೆಗೆ ಮತ್ತು ಸುರಕ್ಷತೆಗೆ ಸಂಬಂಧಪಟ್ಟಂತೆ ಸಾವಿರಾರು ಅಧ್ಯಯನಗಳು ಹಾಗೂ ಸಂಶೋಧನೆಗಳು ನಡೆದು ಅವುಗಳು ದೃಢೀಕರಿಸಲ್ಪಟ್ಟಿವೆ. ಗುಡೂಚಿಯ ಸುರಕ್ಷತೆಯ ಬಗ್ಗೆ 169, ಅದರ ಕಾರ್ಯಕ್ಷಮತೆಯ ಬಗ್ಗೆ 871 ಅಧ್ಯಯನ ವರದಿಗಳು ಅಂತರ್ಜಾಲ ದಲ್ಲೇ ಜಗತ್ತಿಗಿಂದು ಲಭ್ಯವಿದೆ. ಯಕೃತ್ಗೆ ಲವಲೇಶದಷ್ಟೂ ತೊಂದರೆಯನ್ನು ಮಾಡದ ಗುಡೂಚಿಯ ಗುಣ, ಯಕೃತ್ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ, ಯಕೃತ್ನ ರಕ್ಷಣೆಗೆ ಸಹಕರಿಸುವ ಕಾರ್ಯಕ್ಷಮತೆಗಳ ಬಗ್ಗೆ ಅನೇಕ ಸಂಶೋಧನೆಗಳು ನಡೆದಿದ್ದು ಇವೆಲ್ಲವೂ ವೈಜ್ಞಾನಿಕವಾಗಿ ಸಾಬೀತಾಗಿರುವ ವಿಚಾರಗಳಾಗಿವೆ. ತಪ್ಪು ಮಾಹಿತಿಯನ್ನು ಪದೇಪದೆ ಜನರಿಗೆ ನೀಡಲು ಯತ್ನಿಸುವುದರಿಂದ ಆಯುರ್ವೆದದ ಕುರಿತು ಅಪನಂಬಿಕೆ ಮೂಡಿಸುವುದು ಕೇವಲ ಭ್ರಮೆಯಾಗುತ್ತದೆ. ಇದು ಕೇವಲ ಕ್ಷಣಕಾಲದ ಸಾಧನೆಯಾಗಬಹುದು. ಆಯುರ್ವೆದ ಇದನ್ನೆಲ್ಲ ದಾಟಿ ನಿಂತಿದೆ.
ಬಹು ಎತ್ತರಕ್ಕೆ ಬೆಳೆದ ಮರಗಳು ಮೊದಲು ತುಂಡರಿಸಲ್ಪಡುತ್ತವೆ ಎಂಬ ಮಾತಿನಂತೆ ಕಾರ್ಯದಕ್ಷತೆ, ಸುರಕ್ಷತೆಗಳಲ್ಲಿ ಉತ್ತುಂಗ ಸ್ಥಾನದಲ್ಲಿರುವ ಅಮೃತಬಳ್ಳಿಯ ಬಗ್ಗೆ ಲಘುವಾಗಿ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ, ಜನತೆಯ ವ್ಯಾಧಿಯನ್ನು ಪರಿಹರಿಸುವುದೂ ಇಲ್ಲ. ಆಯುರ್ವೆದದ ಮೂಲಗ್ರಂಥಗಳನ್ನು ಅವಲೋಕಿಸಿದಾಗ ಅಮೃತಬಳ್ಳಿಯ ನೂರಾರು ಶಾಸ್ತ್ರೀಯ ಔಷಧಗಳು ಸಾವಿರಾರು ವರ್ಷ ಗಳಿಂದ ಚಿಕಿತ್ಸೆಯಲ್ಲಿ ಬಳಸಲ್ಪಡುತ್ತಿರುವುದರಿಂದ ಹಾಗೂ ಇಂದಿಗೂ ಚಿಕಿತ್ಸೆಯಲ್ಲಿ ಮುಂಚೂಣಿ ಸಾಲಿನ ಔಷಧಿಯಾಗಿರುವುದರಿಂದ ಗುಡೂಚಿಯು ಕಾಲಪರೀಕ್ಷಿತ, ಕಾಲನಂಬಿದ, ಕಾಲವನುಭವಿಸಿದ, ಕಾಲಗೆದ್ದ ಔಷಧಿಯೆಂಬುದನ್ನು ಸಾರಿ ಹೇಳುತ್ತದೆ. ಅಮೃತಬಳ್ಳಿಯ ಗುಣ ವಿಶೇಷತೆಗಳ ಬಗ್ಗೆ, ಚಿಕಿತ್ಸೆಯಲ್ಲಿನ ಮಹೋನ್ನತ ಪಾತ್ರದ ಬಗ್ಗೆ ಅರಳಿಸಿದ ಕಣ್ಣುಗಳಿಂದ, ತೆರೆದ ಮನಸ್ಸಿನಿಂದ, ವಿಕಸಿತ ಹೃದಯ ದಿಂದ ತಿಳಿದುಕೊಳ್ಳಲೇಬೇಕಾದುದು ನಮ್ಮೆಲ್ಲರ ಆದ್ಯಕರ್ತವ್ಯ.