

ನಮ್ಮ ತಾಯಿಗೆ ನಾನು ಒಬ್ಬಳೇ ಮಗಳು. ನಮ್ಮ ತಂದೆ ನಮ್ಮನ್ನು ನಾನು ಚಿಕ್ಕವಳಿದ್ದಾಗಲೇ ಬಿಟ್ಟು ಹೋಗಿದ್ದರು. ತಾಯಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂಬಳ ಉಳಿಸಿ ಒಂದು ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದರು. ಕಳೆದ ವರ್ಷ ಅದನ್ನು ನನ್ನ ಹೆಸರಿಗೆ ದಾನ ಪತ್ರ ಮಾಡಿಸಿ ನೋಂದಣಿ ಮಾಡಿಸಿದ್ದಾರೆ. ಈಗ ನಮ್ಮ ತಂದೆ ಇಪ್ಪತೆôದು ವರ್ಷಗಳ ನಂತರ ವಾಪಸ್ ಬಂದು ಆ ಅಸ್ತಿಯಲ್ಲಿ ತನಗೂ ತನ್ನ ಎರಡನೇ ಹೆಂಡತಿಯ ಮಗನಿಗೂ ಪಾಲು ಕೇಳುತ್ತಿದ್ದಾರೆ. ನಾನು ಕೊಡದಿದ್ದರೆ ಕೇಸು ಹಾಕುವುದಾಗಿ ಹೇಳುತ್ತಿದ್ದಾರೆ. ಅವರಿಗೂ ಭಾಗ ಇದೆಯೇ? ನನಗೆ ಮತ್ತು ನಮ್ಮ ತಾಯಿಗೆ ತುಂಬಾ ಹೆದರಿಕೆ ಆಗುತ್ತಿದೆ. ದಯವಿಟ್ಟು ಸಲಹೆ ಕೊಡಿ.
ನಿಮ್ಮ ತಾಯಿ ಸ್ವಯಾರ್ಜಿತವಾಗಿ ಸಂಪಾದಿಸಿದ ಆಸ್ತಿಯನ್ನು ಯಾರಿಗೆ ಬೇಕಾದರೂ ಹೇಗೆ ಬೇಕಾದರೂ ಪರಭಾರೆ ಮಾಡಬಹುದು. ನಿಮ್ಮ ಹೆಸರಿಗೆ ಅವರು ಸ್ವ ಇಚ್ಛೆಯಿಂದ ದಾನ ಮಾಡಿರುವುದನ್ನು ಯಾರೂ ಪ್ರಶ್ನೆ ಮಾಡಲಾಗುವುದಿಲ್ಲ. ನಿಮ್ಮ ತಂದೆಗಾಗಲೀ ಅವರ ಎರಡನೇ ಹೆಂಡತಿಯ ಮಗನಿಗಾಗಲೀ, ನಿಮ್ಮ ತಂದೆಯ ಮೊದಲ ಹೆಂಡತಿಯ ಆಸ್ತಿಯಲ್ಲಿ ಯಾವ ಹಕ್ಕೂ ಇರುವುದಿಲ್ಲ.
ಹೆಂಡತಿಯ ಸ್ವಯಾರ್ಜಿತ ಆಸ್ತಿಯಲ್ಲಿ ಆಕೆ ಬದುಕಿರುವಾಗ ಗಂಡನಿಗೆ ಹಕ್ಕು ಇರುವುದಿಲ್ಲ. ನೀವು ಹೆದರಬೇಕಾಗಿಲ್ಲ. ಅದರಲ್ಲಿಯೂ ನಿಮ್ಮ ತಾಯಿ ಸ್ವ ಇಚ್ಛೆಯಿಂದ ದಾನ ಪತ್ರ ಮಾಡಿರುವುದರಿಂದ ನಿಮ್ಮ ಹೊರತಾಗಿ ಬೇರೆ ಯಾರಿಗೂ ಹಕ್ಕು ಇರುವುದಿಲ್ಲ.
ನಾವು ಮುಸಲ್ಮಾನರು. ನನಗೆ ಮೂರು ವರ್ಷದ ಒಬ್ಬ ಮಗ ಮತ್ತು ಏಳು ವರ್ಷದ ಒಬ್ಬಳು ಮಗಳು ಇದ್ದಾಳೆ. ನನ್ನ ಗಂಡನಿಂದ ತುಂಬಾ ಹಿಂಸೆಯಾಗುತ್ತಿದೆ. ಮಗನನ್ನು ಐದು ವರ್ಷವಾದ ಕೂಡಲೇ ಕರೆದುಕೊಂಡು ಹೋಗುತ್ತೇನೆ ಎಂದು ಈಗ ನನ್ನ ಗಂಡ ಹೆದರಿಸುತ್ತಿದ್ದಾರೆ. ನನ್ನ ಇಬ್ಬರು ಮಕ್ಕಳೂ ಸಹ ಒಬ್ಬರ ಜೊತೆಯಲ್ಲಿ ಒಬ್ಬರು ಹೊಂದಿಕೊಂಡು ಇದ್ದಾರೆ. ಅಲ್ಲದೇ ನನ್ನ ಗಂಡ ವಿಪರೀತವಾಗಿ ಕುಡಿಯುತ್ತಾರೆ. ಮಕ್ಕಳನ್ನು ಮತ್ತು ನನ್ನನ್ನು ಸಿಕ್ಕಾಪಟ್ಟೆ ಹೊಡೆಯುತ್ತಾರೆ. ಕೆಟ್ಟ ಪದಗಳಿಂದ ಬಯ್ಯುತ್ತಾರೆ. ಅಂತಹವರ ಹತ್ತಿರ ಮಗನನ್ನು ಕಳಿಸಲು ನನಗೆ ಇಷ್ಟವಿಲ್ಲ . ಏನು ಮಾಡುವುದು?
ಮೊಹಮ್ಮದನ್ ಲಾ ಪ್ರಕಾರ ಗಂಡು ಮಗುವಿಗೆ ಏಳು ವರ್ಷವಾಗುವವರೆಗೆ, ಹೆಣ್ಣು ಮಗು ಮೈನೆರೆವ ವಯಸ್ಸಿಗೆ ಬರುವವರೆಗೆ ತಾಯಿಯ ಅಭಿರಕ್ಷೆಯಲ್ಲಿ ಇರಬಹುದು ಎಂದಿದೆ. ನೀವು ಮುಸಲ್ಮಾನರಾದರೂ ಸಹ, ಮಕ್ಕಳ ವಿಷಯದಲ್ಲಿ ನ್ಯಾಯಾಲಯ ವೈಯಕ್ತಿಕ ಕಾನೂನಿನ ಕಡೆಗೆ ಮಾತ್ರ ಗಮನಹರಿಸದೆ ಮಗುವಿನ ಹಿತದೃಷ್ಟಿಯ ಕಡೆ ಹೆಚ್ಚಿನ ಗಮನಹರಿಸುತ್ತದೆ. ಮಗು ತಂದೆ ತಾಯಿ ಇಬ್ಬರಲ್ಲಿ ಯಾರ ಹತ್ತಿರ ಇದ್ದರೆ ಒಳ್ಳೆಯದು ಎನ್ನುವುದನ್ನು ನ್ಯಾಯಾಲಯ ಅವರವರ ಜಾತಿ ಕೋಮು ಇವುಗಳನ್ನು ಮಾತ್ರ ಆಧಾರವಾಗಿಟ್ಟುಕೊಂಡು ತೀರ್ವನಿಸುವುದಿಲ್ಲ. ಮಗುವಿನ ಒಟ್ಟಾರೆ ಹಿತದ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು, ತೀರ್ವನಿಸುತ್ತದೆ. ನೀವು ಹೇಳಿರುವ ಸಂದರ್ಭದಲ್ಲಿ ನಿಮ್ಮಿಂದ ಮಗುವನ್ನು ತಂದೆಯ ಕಡೆಗೆ ಕೊಡುವ ಸಾಧ್ಯತೆಗಳು ಕಡಿಮೆ ಇರುತ್ತದೆ. ನೀವು ಹೆದರಬೇಡಿ. ನೀವೇ ನ್ಯಾಯಾಲಯದಲ್ಲಿ ಮಗುವಿನ ಪರ್ಮನೆಂಟ್ ಕಸ್ಟಡಿ ತಮಗೇ ಇರಬೇಕೆಂದು ಪ್ರಕರಣ ದಾಖಲಿಸಿ. ನಿಮ್ಮ ಪತಿ ಮಗುವನ್ನು ನಿಮ್ಮಿಂದ ಮತ್ತು ಅದರ ಅಕ್ಕನಿಂದ ಬೇರ್ಪಡಿಸಬಾರದು ಎನ್ನುವ ಮಧ್ಯಂತರ ಆದೇಶವನ್ನೂ ನೀವು ಪಡೆಯಬಹುದು.
(ಲೇಖಕರು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಮತ್ತು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಹಿರಿಯ ಮಧ್ಯಸ್ಥಿಕೆಗಾರರು,)