

ಇಂಥ ಪ್ರಾಕೃತಿಕ ಸಮೃದ್ಧಿಯಿಂದಾಗಿಯೇ ಈ ಜಿಲ್ಲೆ ಹಲವು ಅಭಿವೃದ್ಧಿ ಯೋಜನೆ ಗಳಿಗೆ ಮಡಿಲಾಗಿದೆ. ಅನೇಕ ಜಲವಿದ್ಯುತ್ ಯೋಜನೆಗಳು ಒಂದೆಡೆಯಾದರೆ, ಸೀಬರ್ಡ್ ನೌಕಾನೆಲೆಯಂತಹ ದೇಶದ ರಕ್ಷಣಾ ಮಹತ್ವದ ಯೋಜನೆಗೂ ಇದೇ ನೆಲೆ. ಮತ್ತೊಂದೆಡೆ, ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಕೈಗಾ ಅಣುವಿದ್ಯುತ್ ಸ್ಥಾವರ. ವಿಪರ್ಯಾಸ ನೋಡಿ, ವಿವಿಧ ಯೋಜನೆಗಳ ಮುಖಾಂತರ ನಾಡಿಗೆ ವಿದ್ಯುಚ್ಛಕ್ತಿ ನೀಡುತ್ತಿದ್ದರೂ, ಇನ್ನೂ ವಿದ್ಯುಚ್ಛಕ್ತಿ ಕಾಣದ ಗ್ರಾಮಗಳೂ ಇಲ್ಲಿವೆ.
ಒಮ್ಮೆ ಕಣ್ಣುಹಾಯಿಸಿದರೆ ಇಲ್ಲಿ ಕಿಕ್ಕಿರಿದು ನೆರೆದಿರುವ ಯೋಜನೆಗಳ ಯಾದಿ ತೆರೆದುಕೊಳ್ಳುತ್ತದೆ. ಕಾಳಿ ನದಿಯನ್ನೇ ಗಮನಿಸಿದರೆ, ಇದಕ್ಕೆ 5 ಅಣೆಕಟ್ಟುಗಳನ್ನು ನಿರ್ವಿುಸಲಾಗಿದೆ-ಸೂಪಾ, ತಟ್ಟಿಹಳ್ಳ, ಬೊಮ್ಮನಹಳ್ಳಿ, ಕೊಡಸಳ್ಳಿ ಹಾಗೂ ಕದ್ರಾದಲ್ಲಿ. ಶರಾವತಿ ನದಿಗೆ ಗೇರುಸೊಪ್ಪದಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಲಾಗಿದೆ. ಸೀಬರ್ಡ್ ನೌಕಾನೆಲೆ ಯೋಜನೆ 1986ರಲ್ಲಿ ಜಾರಿಯಾಯಿತು. ಈ ಯೋಜನೆಗಾಗಿ ಕಾರವಾರ-ಅಂಕೋಲಾ ತಾಲೂಕುಗಳ 13 ಗ್ರಾಮಗಳ ಸುಮಾರು 4 ಸಾವಿರ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು. ಜಲ ವಿದ್ಯುತ್ ಯೋಜನೆಗಳಿಂದ 1032 ಕುಟುಂಬಗಳು, ಕೊಂಕಣ ರೈಲ್ವೆಯಿಂದ 1703 ಕುಟುಂಬಗಳು ನಿರಾಶ್ರಿತವಾಗಿವೆ. ಇವರಲ್ಲಿ ಅನೇಕರು ಪರಿಹಾರಕ್ಕಾಗಿ ವರ್ಷಗಳ ಕಾಲ ಹೋರಾಟ ನಡೆಸಬೇಕಾಯಿತು. ಅಷ್ಟಾಗಿಯೂ ಎಲ್ಲರಿಗೂ ಸಮರ್ಪಕವಾಗಿ ಪರಿಹಾರ ದೊರಕಿದೆ ಎಂದಲ್ಲ. ಅದು ಬೇರೆಯದೇ ಕಥೆ-ವ್ಯಥೆ. ಕೊಂಕಣ ರೈಲ್ವೆ ಯೋಜನೆಗೆ 1995ರಲ್ಲಿ ಕಾರವಾರದಿಂದ ಭಟ್ಕಳವರೆಗೆ ಅರಣ್ಯ ಹಾಗೂ ಕೃಷಿ ಜಮೀನನ್ನು ವಶಕ್ಕೆ ಪಡೆಯಲಾಯಿತು. ಬೇರೆ ಬೇರೆ ಯೋಜನೆಗಳಿಗೆ ಜನರನ್ನು ಒಕ್ಕಲೆಬ್ಬಿಸುವ ಜತೆಗೆ ಅರಣ್ಯ ನಾಶ ಅನಿವಾರ್ಯ. ಈ ಕಾರಣದಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯದ ಪ್ರಮಾಣ ಶೇ. 82ರಿಂದ 52 ಕ್ಕೆ ಇಳಿಕೆಯಾಗಿದೆ ಎಂದು ವರದಿಗಳು ಹೇಳುತ್ತವೆ. ಸೀಬರ್ಡ್ ನೌಕಾನೆಲೆ ಯೋಜನೆಗೆ -3853 ಹೆಕ್ಟೇರ್, ಕೊಂಕಣ ರೈಲ್ವೆಗೆ- 272 ಹೆಕ್ಟೇರ್, ಸೂಪಾ ಅಣೆಕಟ್ಟೆಗೆ 10691 ಹೆಕ್ಟೇರ್, ಬೊಮ್ಮನಹಳ್ಳಿ ಅಣೆಕಟ್ಟೆಗೆ-1420 ಹೆಕ್ಟೇರ್, ಕೊಡಸಳ್ಳಿ ಅಣೆಕಟ್ಟೆಗೆ 1519 ಹೆಕ್ಟೇರ್, ಕದ್ರಾ ಅಣೆಕಟ್ಟೆಗೆ 2719 ಹೆಕ್ಟೇರ್, ಶರಾವತಿ ಟೇಲರೇಸ್ಗೆ 700 ಹೆಕ್ಟೇರ್, ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ 732 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿದೆ. ಒಟ್ಟಾರೆ ಕಳೆದ 50 ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 68,814 ಹೆಕ್ಟೇರ್ ಅರಣ್ಯ ಭೂಮಿಯನ್ನು ಪರಿವರ್ತನೆ ಮಾಡಲಾಗಿದೆ. ಅಭಿವೃದ್ಧಿಗೆ ತೆರಬೇಕಾದ ಬೆಲೆ ಎಷ್ಟು ದುಬಾರಿ ಅಲ್ಲವೆ? ಕಾಡುನಾಶದಿಂದಾಗಿ ಪಶ್ಚಿಮ ಘಟ್ಟದ ತಪ್ಪಲಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದೆ. ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಹೆಚ್ಚುತ್ತಿದೆ. ಇವೆಲ್ಲ ಜನರಿಗೆ ಹೊಸ ಹೊಸ ಅಪಾಯಗಳನ್ನು ತಂದೊಡ್ಡುತ್ತಿವೆ.
ಯೋಜನೆಗಳ ಯಾದಿ ಇಷ್ಟಕ್ಕೇ ಮುಗಿದಿಲ್ಲ. ಹುಬ್ಬಳ್ಳಿ -ಅಂಕೋಲಾ ರೈಲ್ವೆ ಯೋಜನೆ ನನೆಗುದಿಗೆ ಬಿದ್ದಿದ್ದು, ಇದಕ್ಕೆ ಸುಮಾರು 596 ಹೆಕ್ಟೇರ್ ಅರಣ್ಯವನ್ನು ಕಡಿಯಬೇಕಾಗುತ್ತದೆ. ಶರಾವತಿ ಪಂಪ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಯಿಂದ 150 ಹೆಕ್ಟೇರ್ ಅರಣ್ಯ ನಾಶದ ಸಾಧ್ಯತೆ ಇದೆ.
ಈ ಸರಣಿಗೆ ಸೇರ್ಪಡೆಯಾಗಿರುವುದು ಬೇಡ್ತಿ-ವರದಾ ನದಿ ಜೋಡಣೆ ಯೋಜನೆ. ಬೇಡ್ತಿ ಮತ್ತು ವರದಾ ನದಿಗಳಿಂದ 22 ಟಿಎಂಸಿ ನೀರು ಸಮುದ್ರ ಸೇರುತ್ತದೆ ಎಂಬುದು ಒಂದು ಅಂದಾಜು. ಈ ನೀರನ್ನು ಗದಗ, ಹಾವೇರಿ, ಕೊಪ್ಪಳ, ಸಿಂಧನೂರು, ರಾಯಚೂರಿಗೆ ಒಯ್ಯುವುದು ಯೋಜನೆಯ ಉದ್ದೇಶ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿದ ಈ ಸಲದ ರಾಜ್ಯ ಬಜೆಟ್ನಲ್ಲಿ ಈ ಯೋಜನೆಯ ಪ್ರಸ್ತಾಪ ಮಾಡಲಾಗಿದೆ. ಈ ಕುರಿತು ವಿವರ ಯೋಜನಾ ವರದಿ (ಡಿಪಿಆರ್) ತಯಾರಿಸಲು ರಾಷ್ಟ್ರೀಯ ಜಲಮೂಲ ಅಭಿವೃದ್ಧಿ ಏಜೆನ್ಸಿ(ಎನ್ಡಬ್ಲ್ಯುಡಿಎ)ಗೆ ವಿನಂತಿ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ. ಮೂರು ಕಡೆ ಜಲಾಶಯಗಳನ್ನು ನಿರ್ವಿುಸಿ, ಪಂಪ್ ಮುಖಾಂತರ ನೀರು ಮೇಲೆತ್ತಿ ಕೊಳವೆಮಾರ್ಗದ ಮೂಲಕ ನೀರು ಹರಿಸುವುದು ಯೋಜನೆಯ ಸ್ಥೂಲ ವಿವರ. ಈ ಸಂಗತಿ ತಿಳಿದಾಗಿನಿಂದ ಬೇಡ್ತಿ ಮತ್ತು ವರದಾ ನದಿ ಪ್ರದೇಶದಲ್ಲಿ ಒಂದು ಬಗೆಯ ಆತಂಕ ಮನೆಮಾಡಿದೆ. ಇದಕ್ಕೆ ಕಾರಣ ಇಲ್ಲದಿಲ್ಲ.
ಹಲವು ಯೋಜನೆಗಳಿಂದ ಉತ್ತರ ಕನ್ನಡದ ಪರಿಸರ ಧಾರಣಾ ಸಾಮರ್ಥ್ಯ ಕಳೆದುಕೊಂಡಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಟಿ.ವಿ.ರಾಮಚಂದ್ರ ಅವರ ಸಮಿತಿ ವರದಿ ನೀಡಿದೆ. ಇನ್ನು ಪರಿಸರ ನಾಶವಾಗುವ ಯಾವುದೇ ಹೊಸ ಯೋಜನೆಗಳು ಬೇಡ ಎಂದು ಸಹ ಎಚ್ಚರಿಸಿದೆ. ಆದರೆ ಅಭಿವೃದ್ಧಿಯ ಭರಾಟೆಯಲ್ಲಿ ಈ ಎಚ್ಚರಿಕೆ ಆಡಳಿತಗಾರರಿಗೆ ಕಿವಿಮೇಲೆ ಬಿದ್ದೀತೆ?
ಹಾಗಂತ ಯಾವುದೇ ಪ್ರದೇಶಕ್ಕೆ ನೀರು ಒಯ್ಯುವುದಕ್ಕೆ ವಿರೋಧ ಎಂದಲ್ಲ. ಆದರೆ ಬೇಸಿಗೆಯಲ್ಲಿ ಬತ್ತಿಹೋಗುವ ನದಿಯಿಂದ ಎಲ್ಲಿಗೆ ನೀರು ಒಯ್ಯುತ್ತೀರಿ ಎಂಬುದು ಇಲ್ಲಿನವರ ಪ್ರಶ್ನೆ. ಉದಾಹರಣೆಗೆ-ಬೇಡ್ತಿ ನದಿಯಲ್ಲಿ ಬೇಸಿಗೆಯಲ್ಲಿ ನೀರು ನಾಸ್ತಿ. ಎತ್ತಿನಹೊಳೆ ಯೋಜನೆಯ ಬಗೆಗೂ ಇಂಥದೇ ಅನುಮಾನ, ಪ್ರಶ್ನೆಗಳಿವೆ. ನೂರಾರು ಸಾವಿರಾರು ಕೋಟಿ ರೂಪಾಯಿ ವ್ಯಯಿಸಿದ ಮೇಲೂ ಸರಿಯಾಗಿ ನೀರು ಕೊಡಲಾಗದಿದ್ದರೆ ಪ್ರಯೋಜನವೇನೆಂಬ ಜನರ ಪ್ರಶ್ನೆಗೆ ಉತ್ತರಿಸುವವರು ಯಾರು?
ಹತ್ತು ವರ್ಷಗಳ ಹಿಂದೆ ಬೇಡ್ತಿ-ವರದಾ ನದಿ ಜೋಡಣೆ ಪ್ರಸ್ತಾಪ ಬಂದಾಗ, ಇದು ಕಾರ್ಯಸಾಧುವಾದ ಯೋಜನೆಯಲ್ಲ ಎಂದು ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಂಸ್ಥೆಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಈಗ ಮತ್ತೆ ಯೋಜನೆಯ ವಿವರ ಯೋಜನಾ ವರದಿ (ಡಿಪಿಆರ್) ಬಗ್ಗೆ ರಾಜ್ಯ ಸರ್ಕಾರ ಕೇಳಿದೆ ಎನ್ನುತ್ತಾರೆ, ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷರೂ ಆಗಿರುವ ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ.
ಬೇಡ್ತಿ ನದಿಯಲ್ಲಿ ಬೇಸಿಗೆಯಲ್ಲಿ ನೀರು ಇರುವುದಿಲ್ಲ. ಅಲ್ಲೇ ಹತ್ತಿರದ ಯಲ್ಲಾಪುರ ಪಟ್ಟಣಕ್ಕೆ ನೀರು ತೆಗೆದುಕೊಂಡು ಹೋಗುವ ಯೋಜನೆ ಸಹ ಕಾರ್ಯಗತವಾಗಲಿಲ್ಲ. ಹೀಗಿರುವಾಗ ದೂರದ ಪ್ರದೇಶಕ್ಕೆ ಒಯ್ಯಲು ನೀರು ಎಲ್ಲಿದೆ? ಹೀಗಾಗಿಯೇ ಯೋಜನೆಯ ಉದ್ದೇಶದ ಬಗ್ಗೆ ಜನರಿಗೆ ಗುಮಾನಿ ಮೂಡಿದೆ ಎಂದು ಅವರು ಹೇಳುತ್ತಾರೆ. ಈ ನದಿಯಲ್ಲಿ ಸಾವಿರಾರು ಜನರು ಪಂಪ್ಸೆಟ್ ಅಳವಡಿಸಿಕೊಂಡು ಬೇಸಾಯ ನಡೆಸುತ್ತಿದ್ದಾರೆ. ಈ ನದಿಗಳ ನೀರು ಸಮುದ್ರ ಸೇರುತ್ತದೆ ಎನ್ನುವ ಸರ್ಕಾರ, ಈ ರೈತರ ಬಗ್ಗೆ ಗಮನಿಸಿಯೇ ಇಲ್ಲ ಎಂದು ಅವರು ಮತ್ತೊಂದು ಆಯಾಮದತ್ತ ಗಮನ ಸೆಳೆಯುತ್ತಾರೆ. ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ ಎಂಬ ಪ್ರತಿಪಾದನೆಯನ್ನು ಅನೇಕರು ಒಪು್ಪವುದಿಲ್ಲ. ನಿಸರ್ಗವು ಸಮತೋಲನದ ಉದ್ದೇಶದಿಂದ ತನ್ನದೇ ಆದ ನಿಯಮಗಳನ್ನು ಮಾಡಿಕೊಂಡಿರುತ್ತದೆ. ಅದನ್ನು ಮಾನವ ತನ್ನ ಪ್ರಯೋಜನದ ನಿಟ್ಟಿನಲ್ಲಿ ವ್ಯಾಖ್ಯಾನಿಸುವುದು ಎಷ್ಟು ಸರಿ? ಎಂಬುದು ಇವರ ಪ್ರಶ್ನೆ. ನದಿಗಳ ಸಿಹಿನೀರು ಸಮುದ್ರಕ್ಕೆ ಸೇರದಿದ್ದರೆ ಮೀನಿನ ಸಂತಾನಾಭಿವೃದ್ಧಿಗೆ ತೊಂದರೆಯಾಗುತ್ತದೆ; ಮತ್ಸ್ಯಕ್ಷಾಮವೂ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಯೋಜನೆಯಿಂದಾಗಿ ನದಿ ಪ್ರದೇಶದ ಭೂಭಾಗದಲ್ಲಿ ವ್ಯತ್ಯಾಸ ಆಗುವುದರಿಂದ ಭೂಕುಸಿತದಂತಹ ಅಪಾಯವೂ ಇದೆ. ಭೂಕುಸಿತವು ನಮ್ಮಲ್ಲಿ ಜಾಗತಿಕ ತಾಪಮಾನದ ಹೊಸ ಅಪಾಯವಾಗಿ ಗೋಚರಿಸಿದೆ ಎಂದು ಎಂದು ಅನಂತ ಹೆಗಡೆ ಹೇಳುತ್ತಾರೆ. ರಾಜ್ಯ ಜೀವವೈವಿಧ್ಯ ಮಂಡಳಿಯು ಈಚೆಗೆ ಸರ್ಕಾರಕ್ಕೆ ವರದಿಯೊಂದನ್ನು ನೀಡಿದೆ. ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮುಂತಾದ ಜಿಲ್ಲೆಗಳನ್ನು ಭೂಕುಸಿತ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದೆ. ಇಲ್ಲಿ ಕೈಗೊಳ್ಳುವ ಭವಿಷ್ಯದ ಯೋಜನೆಗಳು ಸುಸ್ಥಿರವಾಗಿರಬೇಕು; ಇದಕ್ಕಾಗಿ ಸಮಗ್ರ ಭೂಬಳಕೆ ವಿಧಾನ ರೂಪಿಸಬೇಕು ಎಂದು ಶಿಫಾರಸು ಮಾಡಿರುವುದು ಗಮನಾರ್ಹ. ಹೀಗೆ ಮಾಡಿದಲ್ಲಿ ಯೋಜನೆಗಳನ್ನು ರೂಪಿಸುವಾಗ ವೈಜ್ಞಾನಿಕ ಚಿಂತನೆ ನಡೆಯಬಹುದೆಂದು ಆಶಿಸಬಹುದು.
ಬೇಡ್ತಿ-ವರದಾ ನದಿ ಜೋಡಣೆಯ ಸಾಧಕಬಾಧಕಗಳ ಚರ್ಚೆಗೆ ಮಾ.24ರಂದು ಶಿರಸಿಯಲ್ಲಿ ಸಮಾವೇಶ ಏರ್ಪಡಾಗಿತ್ತು. ಅನೇಕ ತಜ್ಞರು ಭಾಗವಹಿಸಿ ವಿಚಾರಗಳನ್ನು ಮಂಡಿಸಿದರು. ಈ ಯೋಜನೆಗೆ ಸಂಬಂಧಿಸಿದ ಡಿಪಿಆರ್ಗೆ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸುವ ನಿರ್ಣಯವನ್ನು ಸಮಾವೇಶ ಒಕ್ಕೊರಲಿನಿಂದ ಕೈಗೊಂಡಿತು. ‘ಬಯಲುಸೀಮೆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬ ಸಂಗತಿ ನಮಗೂ ಗೊತ್ತಿದೆ. ಆ ಭಾಗದ ಜನರಿಗೆ ನೀರು ಕೊಡಬಾರದು ಎಂಬುದು ನಮ್ಮ ಉದ್ದೇಶವಲ್ಲ. ಆದರೆ, ಇಂಥ ಯೋಜನೆಗಳನ್ನು ಯೋಚಿಸುವಾಗ ವೈಜ್ಞಾನಿಕವಾಗಿ ಚಿಂತನೆ ನಡೆಯಬೇಕು. ಏಕೆಂದರೆ, ಯೋಜನೆ ಆದ ನಂತರದಲ್ಲಿ ಅಲ್ಲಿಗೂ ನೀರಿಲ್ಲ, ಇಲ್ಲಿಗೂ ನೀರಿಲ್ಲ ಎಂಬ ಸ್ಥಿತಿ ನಿರ್ವಣವಾಗಬಾರದು ಎಂಬುದು ನಮ್ಮ ಕಳಕಳಿ’ ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನಿಲುವನ್ನು ಸ್ಪಷ್ಟಪಡಿಸಿದರು. ಹಾಗೆನೋಡಿದರೆ, ಸ್ವರ್ಣವಲ್ಲೀ ಶ್ರೀಗಳು ತಾವು ಪೀಠಾಧಿಕಾರ ವಹಿಸಿಕೊಂಡ ದಿನಗಳಿಂದಲೇ ಪರಿಸರ ಸಂರಕ್ಷಣಾ ಕಾರ್ಯದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 1990ರ ದಶಕದಲ್ಲಿ ಬೇಡ್ತಿ ಯೋಜನೆಯನ್ನು ಪ್ರಬಲವಾಗಿ ವಿರೋಧಿಸಿ, ಬೃಹತ್ ಜನಾಂದೋಲನ ರೂಪಿಸಿ ಆ ಯೋಜನೆ ರದ್ದಾಗುವಂತೆ ಮಾಡುವಲ್ಲಿ ಶ್ರೀಗಳದು ಪ್ರಮುಖ ಪಾತ್ರ. ಹೀಗೆಂದೇ ‘ಹಸಿರು ಸ್ವಾಮೀಜಿ’ ಎಂಬ ಅಭಿದಾನ ಅವರಿಗೆ ಸೇರಿಕೊಂಡಿತು.
ಹಾಗಾದರೆ ಯೋಜನೆಗಳೇ ಬೇಡವೆ? ನೀರು, ವಿದ್ಯುತ್ ಇದಕ್ಕೆಲ್ಲ ಏನು ಮಾಡುವುದು? ಇದು ಲಾಗಾಯ್ತಿನಿಂದ ಇರುವ ಸವಾಲು, ವಾದ. ಇದಕ್ಕೆ ಸುಸ್ಥಿರ ಅಭಿವೃದ್ಧಿಯ ಅನೇಕ ಪರ್ಯಾಯಗಳನ್ನೂ ತಜ್ಞರು ಸೂಚಿಸು ತ್ತಾರೆ. ಸೌರಶಕ್ತಿಯ ಸದ್ಬಳಕೆ, ಪರಿಸರಕ್ಕೆ-ಜನಜೀವನಕ್ಕೆ ತೊಂದರೆ ಯಾಗದ ರೀತಿ ಕಿರು ವಿದ್ಯುತ್ ಯೋಜನೆಗಳು ಇತ್ಯಾದಿ. ಇದೇನೇ ಇದ್ದರೂ, ಅಭಿವೃದ್ಧಿ-ಪರಿಸರ ಸಮತೋಲನದ ತಾಕಲಾಟವನ್ನು ತೀವ್ರವಾಗಿ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಉತ್ತರ ಕನ್ನಡವೂ ಒಂದು ಎಂಬುದು ನಿರ್ವಿವಾದ.
‘ಚುಟುಕು ಬ್ರಹ್ಮ’ ಎಂದೇ ಹೆಸರಾಗಿದ್ದ ದಿನಕರ ದೇಸಾಯಿಯವರ ‘ಒಂದು ನದಿಯ ಆತ್ಮಚರಿತ್ರೆ’ ಎಂಬ ಕವನದ ಸಾಲುಗಳು ಇವು: ‘ಸಹ್ಯಾದ್ರಿ ಶೃಂಗದಲಿ ಜನಿಸಿದೆನು ನಾನು/ಚಿಕ್ಕಂದಿನಲಿ ನನ ಬಾಳು ಸವಿಜೇನು/ಚಲ್ಲವಾಡುತ ಜಿಗಿದು ಕುಣಿಯುತ್ತಲಿದ್ದೆ/ಬಂಡೆಗಲ್ಲಿನ ದಾಹ ತಣಿಸುತ್ತಲಿದ್ದೆ/ಮುಂದೆ ಕಂದರದಲ್ಲಿ ಭೋರೆಂದು ಹಾರಿ/ಲಲಿತ ಜಲಪಾತದಲಿ ಚೇತನವ ತೋರಿ/ಬೆಟ್ಟವನು ಬಿಟ್ಟು ಬಿಸಿ ಬೈಲೊಳಗೆ ಬಂದೆ/ಇಷ್ಟರಲಿ ಯೌವನವು ಬಂತೆನಗೆ; ಮುಂದೆ/ದಾರಿಯಲಿ ಹಳ್ಳಕೊಳ್ಳಗಳು ನೂರಾರು ಸೇರಿ/ಸಂಸಾರ- ವಿಸ್ತಾರ ಬೆಳೆದು ಮಿತಿಮೀರಿ/ ದೋಣಿ-ಹಡಗದ ಬಳಗ ಮೈಮೇಲೆ ನಿಂತು/ಸಂಸಾರ-ಭಾರವೆ ಸಾಕಾಗಿ ಬಂತು/ಜಂತುಮೊಸಳೆಗಳೆಲ್ಲ ಒಡಲಲ್ಲಿ ಸೇರಿ/ಬೇನೆ ತಂದವು, ಸಾಕು ಜೀವನ, ಮುರಾರಿ/ಮುಂದೆ ಉಸುಬಿಗೆ ಬರಲು ಮುದುಕಾದೆ, ದೇವ/ಮುಂದಮಂದನೆ ಸಾಗಿ ಜಿಣುಗಾಯ್ತು ಜೀವ/ಇನ್ನು ಕಡಲನು ಸೇರೆ, ಮರಣದಲಿ ಶಾಂತಿ/ಮುನ್ನೀರ ತೆರೆಯಲ್ಲಿ ಜೀವನದ ಕ್ರಾಂತಿ’ ಇದು ನದಿಯ ಆತ್ಮಚರಿತ್ರೆ ಮಾತ್ರವಲ್ಲ, ಮಾನವನ ಬದುಕಿನ ಸಾರವೂ ಇಲ್ಲಿದೆ. ಆದರೆ ಯೋಜನೆಗಳ ಹೆಸರಿನಲ್ಲಿ ನದಿಗಳ ಸಹಜ ಹರಿವಿಗೆ ತಡೆಹಾಕಿದರೆ, ದಿಕ್ಕುದೆಸೆಯನ್ನೇ ಬದಲಿಸಿದರೆ, ಅದು ಸಾಗರ ಸೇರುವ ಬಗೆ ಎಂತು? ಸಾರ್ಥಕತೆ ಪಡೆಯುವ ದಾರಿ ಎಂತು?
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)