

ಔರಂಗಜೇಬನ ಸೇನೆ ಗಡಿತುದಿಗೆ ಬಂತು. ರಾಜಾರಾಮನನ್ನು ಒಪ್ಪಿಸಿದರೆ ರಾಣಿಯೊಂದಿಗೆ ಸ್ನೇಹ ಎಂಬ ಆಮಿಷ. ಅಷ್ಟರವೇಳೆಗೆ ರಾಜಾರಾಮನನ್ನು ಜಿಂಜಿಯ ಕೋಟೆಗೆ ತಲುಪಿಸಿ ಆತ ಅಲ್ಲಿಂದ ರಾಜ್ಯಭಾರ ಮಾಡುವಂತೆ ರಾಣಿ ವ್ಯವಸ್ಥೆ ಮಾಡಿದ್ದಳು. ಔರಂಗಜೇಬನ ಸೇನೆ ಮಲೆನಾಡಿನ ತೀವ್ರ ಮಳೆಯಲ್ಲಿ ಕೊಚ್ಚಿಹೋಯ್ತು. ಗಡಿಯಲ್ಲೇ ಅವರನ್ನಡ್ಡಗಟ್ಟಿದ ಕೆಳದಿಯ ಸೈನಿಕರು ಔರಂಗಜೇಬನ ಸೈನಿಕರ ವಿರುದ್ಧ ತಿರುಗಿಬಿದ್ದರು. ಇತ್ತ ಮುನ್ನುಗ್ಗಲಾಗದೇ ಅತ್ತ ಮರಳಲಾಗದೇ ಸೇನೆ ಹಾಹಾಕಾರ ಮಾಡಿತು. ಅನಿವಾರ್ಯವಾಗಿ ಔರಂಗಜೇಬ್ ಕೆಳದಿಯ ರಾಣಿಯೊಂದಿಗೆ ಸಂಧಾನ ಮಾಡಿಕೊಳ್ಳಬೇಕಾಯ್ತು. ಕನ್ನಡದ ಘನತೆಗೆ ತಕ್ಕಂತೆ ಅಭಯ ಪ್ರದಾನ ಮಾಡುತ್ತ ಶತ್ರುಗಳ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಛಾತಿಯನ್ನು ತೋರಿದ ಆ ದಿಟ್ಟ ಮಹಾರಾಣಿ ಕೆಳದಿಯ ಚೆನ್ನಮ್ಮ. ಫೆಬ್ರವರಿ 27ಕ್ಕೆ ಆಕೆ ಅಧಿಕಾರಕ್ಕೆ ಬಂದು 350 ವರ್ಷಗಳಾಗುತ್ತವೆ! ಸುಮಾರು 25 ವರ್ಷಗಳ ಕಾಲ ಆಳ್ವಿಕೆ ಮಾಡಿದ ಈ ರಾಣಿಯ ಪಟ್ಟದ ಸಂಭ್ರಮವನ್ನು ಆಚರಿಸುವುದು ನಮ್ಮೆಲ್ಲರ ಹೊಣೆಗಾರಿಕೆಯೇ ಹೌದು.
ಅದಕ್ಕೆ ವಿಶೇಷವಾದ ಕಾರಣವೂ ಇದೆ. ನಾವು ಕನ್ನಡಿಗರು ರಾಷ್ಟ್ರಮಟ್ಟದಲ್ಲಿ, ಜಾಗತಿಕ ಮಟ್ಟದಲ್ಲಿ ನಮ್ಮನ್ನು ನಾವು ಪ್ರತಿಷ್ಠಾಪಿಸಿಕೊಳ್ಳುವಲ್ಲಿ ಯಾವಾಗಲೂ ಸೋತಿದ್ದೇವೆ. ಕರ್ನಾಟಕದಿಂದ ಸರಿಯಾದ ವ್ಯಕ್ತಿಯನ್ನು ಸರಿಯಾದ ಸಂದರ್ಭದಲ್ಲಿ ರಾಷ್ಟ್ರಕ್ಕೆ ಪರಿಚಯಿಸುವಲ್ಲಿ ನಾವು ಆಕ್ರಮಣಕಾರಿಯೇ ಅಲ್ಲ. ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ ಎಂದೊಡನೆ ದೇಶಕ್ಕೆಲ್ಲ ನೆನಪಾಗೋದು ಟಿಪು್ಪ ಸುಲ್ತಾನನೇ! ಆತ ಸ್ವಾತಂತ್ರ್ಯಕ್ಕೆ ಹೋರಾಡಿದ್ದಿರಲಿ, ಈ ನಾಡಿನ ಹಿಂದೂಗಳನ್ನೇ ಹಿಂಸಿಸಿದ ರೀತಿ ಅಸಹ್ಯಕರವಾದದ್ದು. ಮಹಾರಾಷ್ಟ್ರದಲ್ಲಿ ದುಃಖಕರವಾದ ಸಂಗತಿಯೊಂದು ಇತ್ತೀಚೆಗೆ ನಡೆಯಿತು. ಅಲ್ಲಿನ ಕ್ರೀಡಾ ಸಮುಚ್ಚಯವೊಂದಕ್ಕೆ ಶಿವಸೇನೆ ನೇತೃತ್ವದ ಸರ್ಕಾರ ಟಿಪು್ಪ ಸುಲ್ತಾನನ ಹೆಸರಿಟ್ಟು ಕೃತಾರ್ಥವಾಯ್ತು. ವಾಸ್ತವವಾಗಿ ಮಹಾರಾಷ್ಟ್ರದ ಜನತೆ ಕನ್ನಡಿಗರದ್ದೇ ಹೆಸರಿಡಬೇಕು ಎಂದು ನಿಶ್ಚಯಿಸಿದರೆ ಆಯ್ಕೆ ಮಾಡಿಕೊಳ್ಳಬೇಕಾದ್ದು ಕೆಳದಿಯ ಚೆನ್ನಮ್ಮನ ಹೆಸರನ್ನೇ. ಮರಾಠಾ ಇತಿಹಾಸಕಾರರಿಂದಲೂ ರಾಜಾರಾಮನಿಗೆ ರಕ್ಷಣೆ ಕೊಟ್ಟ ವಿಚಾರದಲ್ಲಿ ಅಪಾರ ಗೌರವಕ್ಕೊಳಗಾಗಿರುವಳು ಕೆಳದಿಯ ಚೆನ್ನಮ್ಮ.
ಕೆಳದಿಯ ಸಾಮ್ರಾಜ್ಯ 1499ರಲ್ಲಿ ಅಸ್ತಿತ್ವಕ್ಕೆ ಬಂತು. ಮುಂದೆ 18ನೇ ಶತಮಾನದ ಮಧ್ಯಭಾಗದಲ್ಲಿ ಹೈದರ್ಆಲಿಯ ದಾಳಿಗೆ ತುತ್ತಾಗುವವರೆಗೂ ವೈಭವಯುತವಾಗಿ ಆಳ್ವಿಕೆ ನಡೆಸಿದ ಸಾಮ್ರಾಜ್ಯ. 263 ವರ್ಷಗಳ ಕಾಲ ವಿಸ್ತಾರವಾದ ಭೂಭಾಗವನ್ನು ಆಳಿದವರು ಅವರು. ಸಾಮ್ರಾಜ್ಯದ ಆರಂಭದ ಕುರಿತಂತೆ ಅನೇಕ ಐತಿಹ್ಯಗಳಿವೆಯಾದರೂ ಎಡವ ಮುರಾರಿಯರ ತ್ಯಾಗದಿಂದಾಗಿ ಚೌಡಪ್ಪನಾಯಕ ಕಟ್ಟಿದ ಸಾಮ್ರಾಜ್ಯವಿದು. ನಂತರ ಬಂದ ಸದಾಶಿವ ನಾಯಕ ಇಕ್ಕೇರಿಯನ್ನು ರಾಜಧಾನಿಯಾಗಿಸಿಕೊಂಡು ಈ ಸಂಸ್ಥಾನಕ್ಕೆ ಭದ್ರ ಬುನಾದಿ ಹಾಕಿದ. ಸ್ವತಃ ವಿಜಯನಗರದ ಅರಸ ಕೃಷ್ಣದೇವರಾಯ ಈ ನಾಯಕರ ಸಾಮರ್ಥ್ಯವನ್ನು ಗಮನಿಸಿ ತುರುಷ್ಕರಾದಿಯಾಗಿ ಕೆಲವು ಸಣ್ಣಪುಟ್ಟ ಪಾಳಯಗಳಿಂದ ತಮಗಾಗುತ್ತಿದ್ದ ಕಿರುಕುಳ ತಪ್ಪಿಸಿಕೊಳ್ಳಲು ಇವರ ಸಹಾಯ ಕೇಳಿದ್ದ. ಇವರು ಅಂತಹ ಕೆಲವು ಪಾಳೇಗಾರರನ್ನು ಸೋಲಿಸಿ ವಿಜಯನಗರದ ಅರಸರ ಕೃಪೆಗೆ ಪಾತ್ರರಾದರು. ಮುಂದೆ ವಿಜಯನಗರದ ಅವನತಿಯ ನಂತರ ಅದೇ ಮೌಲ್ಯಗಳ ರಕ್ಷಣೆಗೋಸ್ಕರ ಸ್ವತಂತ್ರ ಸಂಸ್ಥಾನವಾಗಿ ವಿಸ್ತಾರವಾಗುತ್ತಲೇ ನಡೆದ ಸಾಮ್ರಾಜ್ಯವಿದು. ಕೆಳದಿಯ ಇತಿಹಾಸದಲ್ಲಿ ಕಂಡುಬರುವ ದೊಡ್ಡ ಸಂಕಣ್ಣನಾಯಕ ರಾಜನಾಗಿದ್ದೂ ಸನ್ಯಾಸಿಯಂತೆ ಬದುಕು ನಡೆಸಿದವ. ಆತನ ದೈವಭಕ್ತಿ ಅಪಾರ. ಆತನ ಕಾಲದಲ್ಲಿಯೇ ದಕ್ಷಿಣ ಮತ್ತು ಉತ್ತರಗಳ ಸಂಬಂಧವೂ ಧಾರ್ವಿುಕವಾಗಿ ಬಲಗೊಂಡಿದ್ದು. ತನ್ನ ತಮ್ಮನ ಕೈಗೆ ಅಧಿಕಾರ ಕೊಟ್ಟು ತೀರ್ಥಯಾತ್ರೆಗೆಂದು ಹೊರಟ ದೊಡ್ಡ ಸಂಕಣ್ಣನಾಯಕ ಕಾಶಿಯಲ್ಲಿ ಭಗ್ನ ವಿಶ್ವನಾಥನಿಗೆ ಪೂಜೆ ಸಲ್ಲಿಸಿ ಅಲ್ಲಿಯೇ ಮುಸಲ್ಮಾನರ ಹಿಡಿತದಲ್ಲಿದ್ದ ಮಠವೊಂದನ್ನು ಬಿಡಿಸಿಕೊಂಡು ಅದಕ್ಕೆ ಜಂಗಮವಾಡಿ ಎಂಬುದಾಗಿ ಹೆಸರಿಸಿ ಪಂಚಮಠಗಳನ್ನು ಕಟ್ಟಿ ಜಂಗಮರಿಗೆ ಸಮರ್ಪಿಸಿದ. ಅದೇ ವೇಳೆಯಲ್ಲಿ ಕಪಿಲಧಾರಾ, ಮಾನಸ ಸರೋವರ, ಗಂಧರ್ವ ಸಾಗರ ಎಂಬ ಗಂಗೆಯ ತೀರ್ಥಗಳನ್ನು ನಿರ್ವಿುಸಿದ್ದಲ್ಲದೆ ತನ್ನ ಮಗನ ಹೆಸರಿನಲ್ಲಿ ಕಾಶಿಯ ಅನೇಕ ದೇವಾಲಯಗಳನ್ನು ಜೀಣೋದ್ಧಾರಗೊಳಿಸಿದ. ಮುಂದೆ ದೆಹಲಿಗೆ ಪ್ರಯಾಣ ಬೆಳೆಸಿ ಅಲ್ಲಿಯೂ, ಪ್ರಯಾಗದಲ್ಲಿಯೂ ಜಂಗಮಮಠ ಸ್ಥಾಪಿಸಿದ. ಗಯೆಯಲ್ಲಿ ಮಠವನ್ನು ಕಟ್ಟಿ ನೇಪಾಳದ ಭಕ್ತಪುರದಲ್ಲೂ ಶಿವನ ದೇವಸ್ಥಾನವನ್ನು ಕಟ್ಟಿಸಿದ. ಈತನ ಮಠ ನಿರ್ವಣದ ಕೈಂಕರ್ಯ ಕೇದಾರದವರೆಗೂ ಹಬ್ಬಿದೆ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.
ಶಿವಪ್ಪ ನಾಯಕನ ಸಾಮರ್ಥ್ಯವೂ ಕಡಿಮೆಯೇನಲ್ಲ. ಆತ ರೂಪಿಸಿದ ಕಂದಾಯ ವ್ಯವಸ್ಥೆಯನ್ನು ಈಗಲೂ ಕೂಡ ಬಲ್ಲವರು ಕೊಂಡಾಡುತ್ತಾರೆ. ಸ್ಥಳೀಯರು ಕಂದಾಯವನ್ನು ‘ಸಿಸ್ತು’ ಎಂದು ಕರೆಯುತ್ತಿದ್ದ ಕಾಲಕ್ರಮದಲ್ಲಿ ಶಿವಪ್ಪನ ಸಿಸ್ತು ಎಂದೇ ಅದು ಖ್ಯಾತಿಗೊಂಡಿತ್ತು. ರ್ಚಚಿನ ಪ್ರಮುಖ ಅಧಿಕಾರಿಗಳು ಭಾರತೀಯರೇ ಆಗಿರಬೇಕೆಂಬುದು ಆತನ ಕಟ್ಟಾಜ್ಞೆಯಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ವ ಸರಸಂಘಚಾಲಕರಾದ ಸುದರ್ಶನ್ಜೀ ಚರ್ಚ್ ಮತ್ತು ಮಸೀದಿಗಳ ರಾಷ್ಟ್ರೀಕರಣದ ಬಗ್ಗೆ ಮಾತನಾಡುತ್ತಿದ್ದರಲ್ಲ ಅದು ಇದೇ ಬಗೆಯ ಕಲ್ಪನೆ.
ಶಿವಪ್ಪನಾಯಕನ ಮಗನಾದ ಸೋಮಶೇಖರ ನಾಯಕನ ಹೆಂಡತಿಯೇ ರಾಣಿ ಚೆನ್ನಮ್ಮ. ಸೋಮಶೇಖರ ನಾಯಕ ಧಾರ್ವಿುಕ ವ್ಯಕ್ತಿತ್ವದವನಾಗಿದ್ದು ಅನೇಕ ವರ್ಷಗಳ ಕಾಲ ಮದುವೆಯೇ ಆಗದೇ ಉಳಿದಿದ್ದ. ಕೊನೆಗೆ ಸಾಮಾನ್ಯ ಮನೆತನದವಳಾದರೂ ರೂಪವತಿಯೂ ಸಮರ್ಥಳೂ ಆಗಿದ್ದ ಚೆನ್ನಮ್ಮಳನ್ನು ಇಚ್ಛೆಪಟ್ಟು ಮದುವೆಯಾದರು. ಆಕೆ ಬರಿ ಪತ್ನಿಯಾಗಷ್ಟೇ ಉಳಿಯದೆ ರಾಜ್ಯ ನಡೆಸುವಲ್ಲಿ ಗಂಡನಿಗೆ ಸಹಕಾರಿಯೂ ಆಗಿದ್ದಳು. ದುರದೃಷ್ಟವಶಾತ್ ಸೋಮಶೇಖರ ನಾಯಕ ವೇಶ್ಯೆಯ ಸಹವಾಸಕ್ಕೆ ಬಿದ್ದು ಕೆಟ್ಟುಹೋದ. ಆತನಿಗೆ ವಿಷಪ್ರಾಶನವಾಗಲಾರಂಭಿಸಿತು. ವೇಶ್ಯೆಯ ತೋಳಪು್ಪಗೆಯಲ್ಲಿ ಮೈಮರೆಯುತ್ತಿದ್ದ ಆತ ರಾಜ್ಯಭಾರವನ್ನು ಕಡೆಗಣಿಸಿ ಹುಚ್ಚನಂತಾಗಿಬಿಟ್ಟ. ಪಾಳುಬಿದ್ದ ದೇವಸ್ಥಾನಗಳನ್ನೇ ಮಸೀದಿಯಾಗಿ ಪರಿವರ್ತಿಸಿಬಿಡುವ ಮುಸಲ್ಮಾನರು ಅರಾಜಕತೆಯಿಂದ ನರಳುತ್ತಿರುವ ರಾಜ್ಯವನ್ನು ಬಿಟ್ಟಾರೇನು? ಬಿಜಾಪುರದ (ಈಗಿನ ವಿಜಯಪುರ) ಸುಲ್ತಾನನ ಕಣ್ಣು ಬಿದನೂರಿನ ಮೇಲೆ ಬಿತ್ತು. ಸೇನೆ ಅತ್ತಲಿಂದ ಬರುತ್ತಿದ್ದಂತೆ ಇತ್ತ ಮಕ್ಕಳಿಲ್ಲದ ಚೆನ್ನಮ್ಮ ತನ್ನ ಮಗುವನ್ನೇ ದತ್ತು ತೆಗೆದುಕೊಳ್ಳಬೇಕೆಂದು ಮಂತ್ರಿಗಳು, ಸೇನಾನಾಯಕರು ಒತ್ತಡ ಹೇರಲಾರಂಭಿಸಿದರು. ಚತುರಳಾಗಿದ್ದ ರಾಣಿ ಕಾಲವನ್ನು ದೂಡುತ್ತಬಂದು ಕೊನೆಗೊಮ್ಮೆ ವೇಶ್ಯೆಯ ಮನೆಗೇ ಹೋಗಿ ರಾಜ್ಯರಕ್ಷಣೆಗೆ ರಾಜ ಮರಳಿ ಬರುವಂತೆ ಕೇಳಿಕೊಂಡಳು. ಕಾಲ ಮಿಂಚಿತ್ತು. ಬಿಜಾಪುರದ ಪರವಾಗಿ ಜನ್ನೋಪಂತ ಮಾತುಕತೆಗೆ ಬಂದ. ರಾಣಿ ಯುದ್ಧಕ್ಕೆ ಕಾಲಾವಕಾಶ ಬೇಕೆನ್ನುವ ದೃಷ್ಟಿಯಿಂದ ಮೂರು ಲಕ್ಷಕೊಟ್ಟು ಜನ್ನೋಪಂತನನ್ನು ಸಾಗಹಾಕಿದಳು. ಆತ ಸುಮ್ಮನೇ ಹೋಗದೇ ವೇಶ್ಯೆಯ ಮನೆಯಲ್ಲಿದ್ದ ರಾಜನನ್ನು ಕೊಲ್ಲುವ ಸಂಚುರೂಪಿಸಿ ಅದನ್ನು ಸಾಧಿಸಿಯೂಬಿಟ್ಟ.
ಬಿಜಾಪುರದ ಸೇನೆ ಮುತ್ತಿಗೆ ಹಾಕಿಯೇಬಿಟ್ಟಿತು. ಕದನಕ್ಕೆ ರಾಣಿ ಸಿದ್ಧಳಾದರೂ ಕೆಲವು ಆಪ್ತರ ಸಲಹೆಯ ಮೇರೆಗೆ ಬಿದನೂರನ್ನು ಬಿಟ್ಟು ಹೊರಡಲೇಬೇಕಾಯ್ತು. ಆಕೆ ಸುರಕ್ಷಿತವಾಗಿದ್ದ ಭುವನಗಿರಿ ಕೋಟೆಗೆ ಹೋಗಿ ನೆಲೆಸಿದಳು. ಇತ್ತ ರಾಣಿಯೂ ಇಲ್ಲದೆ ಖಾಲಿಯಾದ ಬೊಕ್ಕಸವನ್ನು ಕಂಡ ಬಿಜಾಪುರ ಸೇನೆ ಅವಳನ್ನು ಅರಸಿಕೊಂಡು ಭುವನಗಿರಿಯತ್ತ ಹೊರಟಿತು. ಅಷ್ಟರವೇಳೆಗೆ ನಾಡು, ಮುಸಲ್ಮಾನರ ಪಾಲಾಗಿದ್ದನ್ನು ಕಂಡು ನೊಂದ ಮಂತ್ರಿ ಮತ್ತಿತರರು ರಾಣಿಯ ಬಳಿ ಹೋಗಿ ಕ್ಷಮೆಕೇಳಿ ಸಂಸ್ಥಾನವನ್ನು ಮರಳಿ ಪಡೆಯುವ ಸಾಹಸಕ್ಕೆ ಯೋಜನೆ ರೂಪಿಸಿದರು. ಭುವನಗಿರಿಯ ಬಳಿ ಹೊಂಚುಹಾಕಿ ಬಿಜಾಪುರದ ಸೈನಿಕರನ್ನು ಕೆಳದಿಯ ಸೈನಿಕರು ಕೊಂದರು. ರಣರಂಪವೇ ನಡೆಯಿತು. ರಾಣಿ ಬಿದನೂರಿಗೆ ಮರಳುತ್ತಿದ್ದಂತೆ ಜನರಲ್ಲಿ ಹಷೋದ್ಗಾರ. ಆಕೆ ನಾಡಿಗೆ ವಿರೋಧಿಗಳಾಗಿದ್ದವರನ್ನೆಲ್ಲ ಮಟ್ಟ ಹಾಕಿದಳು. ಕೆಲವರನ್ನು ಗಡಿಪಾರು ಮಾಡಿದಳು. ಮತ್ತೂ ಕೆಲವರನ್ನು ನೇಣಿಗೇರಿಸಿದಳು. ಒಳಗಿದ್ದೂ ಶತ್ರುಗಳಿಗೆ ಬೆಂಬಲಕೊಡುವ ಜನ ಯಾರೇ ಆಗಿದ್ದರೂ ಅವರು ವಧೆಗೆ ಯೋಗ್ಯರು ಎಂಬುದು ರಾಣಿಗೆ ಗೊತ್ತಿತ್ತು.
ಮುಂದೆ ರಾಣಿ 25 ವರ್ಷಗಳ ಕಾಲ ಅಕ್ಕ-ಪಕ್ಕದ ರಾಜರುಗಳನ್ನು, ಕೊನೆಗೆ ಮೈಸೂರಿನ ಸೇನೆಯನ್ನೂ ಎದುರಿಸಿ ವಿಜಯಪತಾಕೆ ಹಾರಿಸಿದಳು. ಸ್ವತಃ ಮೈಸೂರಿನ ಮಹಾರಾಜರು ಆಕೆಯೊಂದಿಗೆ ಸಂಧಾನ ನಡೆಸಿ ಆಕೆಯ ಸ್ನೇಹವನ್ನು ಬಲಗೊಳಿಸಿಕೊಂಡಿದ್ದರು. ಜಾತಿಗೊಂದು ಯೋಜನೆಯನ್ನು, ಆಯಾ ಜಾತಿಯ ಮಹಾಪುರುಷರಿಗೆ ಪ್ರತಿಮೆ-ಮಂದಿರಗಳನ್ನು ಕಟ್ಟಿರುವ ನಮಗೆ ಕೆಳದಿಯ ಚೆನ್ನಮ್ಮನ ನೆನಪೇ ಇಲ್ಲ. ಆಕೆಯ 350ನೇ ಪಟ್ಟಾಧಿಕಾರ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲ್ಪಡಬೇಕು. ಕರ್ನಾಟಕ ತನ್ನ ಬಜೆಟ್ನಲ್ಲಿ ಆಕೆಯ ಹೆಸರಿನ ಯೋಜನೆಯೊಂದನ್ನು ಘೊಷಿಸಬೇಕು. ಸಂಸ್ಕೃತಿ, ಪರಂಪರೆಯ ರಕ್ಷಕರೆಂದು ಹೇಳಿಕೊಳ್ಳುವ ಬಿಜೆಪಿಗರು ಈ ಒಂದು ಪ್ರಯತ್ನ ಮಾಡುವರೇ? ಆ ಮೂಲಕ ಮರಾಠರು ಮತ್ತು ಕನ್ನಡಿಗರ ನಡುವಿರುವ ತ್ವೇಷಮಯ ವಾತಾವರಣವನ್ನು ಭಾವನಾತ್ಮಕವಾಗಿ ತಿಳಿಗೊಳಿಸುವರೇ? ಪ್ರಶ್ನೆ ಕೇಳಬೇಕಿದೆ. ಬೆಳಗಾವಿಯಲ್ಲಿ ಮರಾಠರ ನಡುವೆಯೇ ಕೆಳದಿ ಚೆನ್ನಮ್ಮನ ಗುಣಗಾನವಾಗುವಂತೆ ನೋಡಿಕೊಳ್ಳಬೇಕಾದ್ದು ನಮ್ಮ ಜವಾಬ್ದಾರಿ. ಆಕೆಯ ಸಾಮರ್ಥ್ಯ ಕೆಚ್ಚೆದೆಗಳು ರಾಷ್ಟ್ರಮಟ್ಟದಲ್ಲೂ ಅನುರಣಿತವಾಗುವಂತೆ ಮಾಡಲು ನಾವೇ ಒಂದು ಹೆಜ್ಜೆ ಮುಂದಿಡಬೇಕು. ಆದರೇನು? ಸಾಂಸ್ಕೃತಿಕ ಪರಂಪರೆಯ ನಿರ್ವಣಕ್ಕೆ ಕಾರಣರಾದವರಿಗೆ ನಾಡಿನಲ್ಲಿ ಬೆಲೆ ಯಾವತ್ತೂ ಕಡಿಮೆಯೇ! ಕನ್ನಡಕ್ಕೆ ವಿಶಿಷ್ಟ ಕೃತಿಗಳ ಕೊಡುಗೆಯನ್ನು ಕೊಟ್ಟ ಕೆ.ಎಸ್. ನಾರಾಯಣಾಚಾರ್ಯರು ತೀರಿಕೊಂಡಾಗ ಒಬ್ಬ ಮಂತ್ರಿಯೂ ಅವರ ಮನೆಗೆ ಭೇಟಿ ಕೊಟ್ಟಿರಲಿಲ್ಲ. ಅವರು ಸಿನಿಮಾ ನಟರಲ್ಲವಲ್ಲ! ಕೆಳದಿಯ ಚೆನ್ನಮ್ಮನ ವಿಚಾರದಲ್ಲೂ ಹಾಗಾಗದಿದ್ದರೆ ಸಾಕು ಅಷ್ಟೇ!
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)