ಬೇಡವಾಗುತ್ತಿದೆಯೇ ಬಿಇ-ಬಿ.ಟೆಕ್?: ಇಳಿಯುತ್ತಿದೆ ಇಂಜಿನಿಯರಿಂಗ್ ಇನ್​ಟೇಕ್

Masth
Published on

| ರಮೇಶ್ ಮೈಸೂರು ಬೆಂಗಳೂರು

ಆರ್ಟಿಷಿಯಲ್ ಇಂಟಲಿಜೆನ್ಸ್, ಮಷಿನ್ ಲರ್ನಿಂಗ್, ಇಂಟರ್​ನೆಟ್ ಆಫ್ ಥಿಂಗ್ಸ್, ಡಿಜಿಟಲ್, ಸೈಬರ್... ಹೀಗೆ ತಾಂತ್ರಿಕ ಹಾಗೂ ತಂತ್ರಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಲೆಗಳು ಕಾಣಿಸಿಕೊಂಡಿವೆ. ಹೊಸ ಇಂಜಿನಿಯರ್ ಕಾಲೇಜುಗಳನ್ನು ಪ್ರಾರಂಭಿಸುವುದಾದಲ್ಲಿ ಈ ಕೋರ್ಸ್​ಗಳಿಗೆ ಆದ್ಯತೆ ನೀಡಬೇಕು ಎಂಬ ಷರತ್ತಿನೊಂದಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅನುಮೋದನೆ ನೀಡುತ್ತಿದೆ. ಆದರೆ, ಬಿಇ, ಬಿ.ಟೆಕ್ ಓದುವವರ ಸಂಖ್ಯೆ ಹೆಚ್ಚಾಗುತ್ತಿದೆಯೇ ಎಂಬ ಪ್ರಶ್ನೆಗೆ ಇಲ್ಲ ಎಂದೇ ಉತ್ತರಿಸಬೇಕಾಗುತ್ತಿದೆ. ಕಾರಣ ಕಳೆದ ಮೂರು ವರ್ಷದಲ್ಲಿ ದೇಶದಲ್ಲಿ ಎಐಸಿಟಿಇಯಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಜತೆಗೆ, ಒಟ್ಟು ವಿದ್ಯಾರ್ಥಿಗಳ ಪ್ರವೇಶಾವಕಾಶ ಸಾಮರ್ಥ್ಯ (ಇನ್​ಟೇಕ್) ಕೂಡ ಗಣನೀಯವಾಗಿ ಕಡಿಮೆಯಾಗಿದೆ. ಇನ್ನೊಂದೆಡೆ, ಮ್ಯಾನೇಜ್​ವೆುಂಟ್ ಹಾಗೂ ಡಿಪ್ಲೊಮಾ ಕೋರ್ಸ್​ಗಳತ್ತ ಆಸಕ್ತಿ ತೋರುತ್ತಿದ್ದಾರೆ ಎನ್ನುವುದು ಇತ್ತೀಚೆಗೆ ಎಐಸಿಟಿಇ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ಬಯಲಾಗಿದೆ. ಕಳೆದೈದು ವರ್ಷದಲ್ಲಿ ಬಿಇ, ಬಿ.ಟೆಕ್ ಸೀಟುಗಳ ಸಂಖ್ಯೆ ಕುಸಿಯುತ್ತಲೇ ಸಾಗಿದೆ. 2017-18ರಲ್ಲಿ 16,61,318 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲಾಗಿತ್ತು. ನಂತರದ ವರ್ಷಗಳಲ್ಲಿ ಇದು ಕುಸಿಯುತ್ತಲೇ ಸಾಗಿದೆ. 2018-19ರಲ್ಲಿ 15,86,544 ಇನ್​ಟೇಕ್ ಆಗಿತ್ತು. 2019-20ರಲ್ಲಿ 14,96,439 ಇದ್ದರೆ, 2020-21ಕ್ಕೆ 14,34,370ಕ್ಕೆ ಇಳಿಯಿತು. 2021-22ರಲ್ಲಿ ಹಿಂದಿನ ವರ್ಷಕ್ಕಿಂತ 44 ಸಾವಿರಕ್ಕೂ ಅಧಿಕ ಕಡಿಮೆಯಾಗಿ 13,89,973ಕ್ಕೆ ತಲುಪಿದೆ. ಐದು ವರ್ಷಗಳಲ್ಲಿ ಇನ್​ಟೇಕ್ ಸಂಖ್ಯೆಯೇ 2,71,345 ಇಳಿಕೆಯಾಗಿರುವಾಗ ಭರ್ತಿಯಾಗದ ಸೀಟುಗಳಿಗೆ ಹೋಲಿಸಿದಲ್ಲಿ, ಇಂಜಿನಿಯರ್​ಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿ ರುವುದಂತೂ ಸತ್ಯ. ಇದಲ್ಲದೆ, ಫಾರ್ಮಸಿ, ಆರ್ಕಿಟೆಕ್ಚರ್ ಆಂಡ್ ಪ್ಲಾನಿಂಗ್​ನಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.

ಸ್ವಾಯತ್ತ ಸಂಸ್ಥೆಗಳ ಸಂಖ್ಯೆಯೂ ಇಳಿಕೆ: ದೇಶದಲ್ಲಿ ಒಟ್ಟಾರೆ ಸ್ವಾಯತ್ತ ಶಿಕ್ಷಣ ಸಂಸ್ಥೆ ಅಥವಾ ಡೀಮ್್ಡ ವಿವಿಗಳ ಪ್ರಮಾಣ ಭಾರಿ ಸಂಖ್ಯೆಯಲ್ಲಿ ಕಡಿಮೆಯಾಗಿರುವುದು ಎಐಸಿಟಿಇ ಅಂಕಿ-ಅಂಶಗಳಿಂದ ತಿಳಿದು ಬರುತ್ತದೆ. 2019-20ರಲ್ಲಿ ಒಟ್ಟು 129 ಸಂಸ್ಥೆಗಳು ಈ ಸ್ಥಾನಮಾನ ಪಡೆದಿದ್ದವು. ಇವುಗಳ ಒಟ್ಟಾರೆ ಇನ್​ಟೇಕ್ ಸಾಮರ್ಥ್ಯ 1,41,059 ಆಗಿತ್ತು. ಈ ಅವಧಿಯಲ್ಲಿ ರಾಜ್ಯದಲ್ಲಿದ್ದ ಡೀಮ್್ಡ ವಿವಿಗಳು 22 ಹಾಗೂ ಇನ್​ಟೇಕ್ 22,208 ಆಗಿತ್ತು. ಆದರೆ, ಮರುವರ್ಷ ಇವುಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿ 296ಕ್ಕೆ ತಲುಪಿತ್ತು. ಜತೆಗೆ, 1,63,108 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶ ನೀಡಿತ್ತು. ರಾಜ್ಯದಲ್ಲಿ 26 ಸಂಸ್ಥೆಗಳು ಮಾನ್ಯತೆ ಪಡೆದರೂ ಇನ್​ಟೇಕ್ ಇಳಿಕೆಯಾಗಿ 13,431 ಆಗಿತ್ತು. ಆದರೆ, 2021-22ರಲ್ಲಿ ತಾಂತ್ರಿಕ ಶಿಕ್ಷಣ ಮಂಡಳಿ ಹೊರಡಿಸಿರುವ ಪಟ್ಟಿಯಲ್ಲಿ ಇರುವುದು 120 ಶಿಕ್ಷಣ ಸಂಸ್ಥೆಗಳಷ್ಟೇ. ಇನ್​ಟೇಕ್ ಕೂಡ ಕುಸಿದು 1,22,925ಕ್ಕೆ ಇಳಿಕೆಯಾಗಿದೆ. ಇನ್ನು, ರಾಜ್ಯದಲ್ಲಿ ಪ್ರಸ್ತುತ 22 ಡೀಮ್್ಡ ವಿವಿಗಳಿದ್ದು, 14,932 ಸೀಟುಗಳನ್ನು ಹೊಂದಿವೆ.

ಡಿಪ್ಲೊಮಾಗಳಿಗೆ ಭಾರಿ ಬೇಡಿಕೆ: ಡಿಪ್ಲೊಮಾ ಹಾಗೂ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್​ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕಳೆದೈದು ವರ್ಷಗಳಲ್ಲಿ ಇನ್​ಟೇಕ್ ಏರಿಕೆಯಾಗಿದೆ. 2018-19ರಲ್ಲಿ 81,891 ಆಗಿದ್ದ ಪ್ರವೇಶಾವಕಾಶ ನಂತರದ 2 ವರ್ಷ ಕೆಳಗಿಳಿದು 70 ಸಾವಿರಕ್ಕೆ ಕುಸಿಯಿತು. ಆದರೆ, 2 ವರ್ಷಗಳಲ್ಲಿ ಮತ್ತೆ ಬೇಡಿಕೆಯನ್ನು ಪಡೆದುಕೊಂಡು 2021-22ರಲ್ಲಿ 82,375 ಇನ್​ಟೇಕ್ ಪಡೆದುಕೊಂಡಿದೆ.

ರಾಜ್ಯದಲ್ಲಿ ಹೇಗಿದೆ?: ಪ್ರತಿ ಬಾರಿ ಸಿಇಟಿಯಿಂದ ಸೀಟು ಹಂಚಿಕೆ ಮುಗಿದ ಬಳಿಕ 20-25 ಸಾವಿರ ಸೀಟುಗಳು ಭರ್ತಿಯಾಗದಿರುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಪ್ರತಿವರ್ಷ ಇಲ್ಲಿನ ಶಿಕ್ಷಣ ಸಂಸ್ಥೆಗಳ ಇನ್​ಟೇಕ್ ಕೂಡ ಇಳಿಮುಖವಾಗುತ್ತಿದೆ. ರಾಜ್ಯದಲ್ಲಿ 2019-20ರಲ್ಲಿ ಎಐಸಿಟಿಇ ಮಾನ್ಯತೆ ಪಡೆದ 754 ಸಂಸ್ಥೆಗಳಿದ್ದವು. ಇದರಲ್ಲಿ ಒಟ್ಟಾರೆ 2,49,148 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲು ಎಐಸಿಟಿಇ ಅನುಮತಿ ನೀಡಿತ್ತು. 2020-21ರಲ್ಲಿ ಸಂಸ್ಥೆಗಳ ಸಂಖ್ಯೆ 743ಕ್ಕೆ ಇಳಿದು, 2,51,635 ವಿದ್ಯಾರ್ಥಿಗಳಿಗೆ ದಾಖಲಾತಿ ನೀಡಲು ಅನುಮೋದಿಸಲಾಗಿತ್ತು. 2021-22ರಲ್ಲಿ ಈ ಪ್ರಮಾಣ ಇನ್ನಷ್ಟು ಕುಸಿದು 736 ಸಂಸ್ಥೆಗಳಷ್ಟೇ ಮಾನ್ಯತೆ ಪಡೆಯಲು ಸಾಧ್ಯವಾಗಿದ್ದು, ಇವುಗಳಲ್ಲಿ ಇನ್​ಟೇಕ್ ಪ್ರಮಾಣವೂ 2,48,335ಕ್ಕೆ ಕುಸಿದಿದೆ. ಪ್ರಸಕ್ತ ವರ್ಷ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ತಜ್ಞರು.

ಮುಕ್ತ ಅವಕಾಶಗಳು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹಿನ್ನೆಲೆಯಲ್ಲಿ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲೂ ಹಲವು ಬದಲಾವಣೆಗಳಾಗುತ್ತಿವೆ. ಇಂಜಿನಿಯರಿಂಗ್ ವ್ಯಾಸಂಗಕ್ಕೆ ಕಡ್ಡಾಯವಾಗಿದ್ದ ಮೂರು ವಿಷಯ (ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ) ಜತೆಗೆ ಮತ್ತೆ 11 ಐಚ್ಛಿಕ ವಿಷಯಗಳಿಗೆ ಅವಕಾಶ ನೀಡಲಾಗಿದೆ. ಪದವಿಗೂ ಮುನ್ನವೇ ತಾಂತ್ರಿಕ ಶಿಕ್ಷಣ ಹಾಗೂ ಕೌಶಲ ತರಬೇತಿ ಪಡೆಯುವ ಅವಕಾಶವೂ ಇದೆ. ಜತೆಗೆ, ಯಾವುದೇ ವಿಭಾಗದಲ್ಲಿ ಓದಿದ್ದರೂ ತಾಂತ್ರಿಕ ಕೋರ್ಸ್​ಗಳ ವ್ಯಾಸಂಗ ಮಾಡಬಹುದು. ಜತೆಗೆ, ತಾಂತ್ರಿಕ ಶಿಕ್ಷಣದಲ್ಲಿ ಉದ್ಯೋಗಾವಕಾಶಗಳು ಹೆಚ್ಚಿರುವುದರಿಂದ ಬೇಡಿಕೆ ಇದ್ದೇ ಇರುತ್ತದೆ ಎನ್ನುವುದು ತಜ್ಞರ ಅಭಿಮತ.

ಕುದುರಿದ ಮ್ಯಾನೇಜ್​ವೆುಂಟ್: ಇಂಜಿನಿಯರಿಂಗ್​ಗೆ ಇನ್​ಟೇಕ್ ಇಳಿದರೂ ಮ್ಯಾನೇಜ್​ವೆುಂಟ್ ಶಿಕ್ಷಣಕ್ಕೆ ಹೆಚ್ಚು ಒಲವು ಕಂಡುಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ಇನ್​ಟೇಕ್ ಏರುಗತಿಯಲ್ಲಿದ್ದು, 2021-22ರಲ್ಲಿ 3,20,680 ಇನ್​ಟೇಕ್​ಗೆ ಎಐಸಿಟಿಇ ಅವಕಾಶ ನೀಡಿದೆ. 2018-19ರಲ್ಲಿ 3,11,132 ಇದ್ದದ್ದು, ಕ್ರಮೇಣ ಕಡಿಮೆಯಾಗಿ ಮೂರು ಲಕ್ಷಕ್ಕೆ ಇಳಿಕೆಯಾಗಿತ್ತು. ಬಳಿಕ ಮತ್ತೆ ಇನ್​ಟೇಕ್ ಏರುತ್ತ ಬಂದು 3.20 ಲಕ್ಷಕ್ಷೆ ತಲುಪಿದೆ. ಇದಲ್ಲದೆ, ಹೋಟೆಲ್ ಹಾಗೂ ಕೇಟರಿಂಗ್ ಮ್ಯಾನೇಜ್​ವೆುಂಟ್​ಗೂ ವಿದ್ಯಾರ್ಥಿಗಳು ಆಸ್ಥೆ ತೋರುತ್ತಿದ್ದಾರೆ. ಕಳೆದೈದು ವರ್ಷದಿಂದ ಈ ಸಂಖ್ಯೆ ಏರುತ್ತಲೇ ಇದೆ. 2021-22ರಲ್ಲಿ ಇನ್​ಟೇಕ್ 7,766ಕ್ಕೆ ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net