

ಅಸ್ಮಾ ನಿದ್ದೆಯಿಂದ ಎಚ್ಚರಗೊಂಡಾಗ ಪಕ್ಕದ ತೊಟ್ಟಿಲಲ್ಲಿ ಶಿಶು ಇಲ್ಲದ್ದನ್ನು ಕಂಡು ಗಾಬರಿಯಾಗಿ ನರ್ಸ್ಳನ್ನು ಕರೆದು, ‘ನನ್ನ ಮಗುವೆಲ್ಲಿ?’ ಎಂದು ವಿಚಾರಿಸಿದಳು. ‘ನನಗೇನೂ ಗೊತ್ತಿಲ್ಲ’ ಎಂದಳಾಕೆ. ಅಷ್ಟರಲ್ಲಿ ವಾರ್ಡಿಗೆ ವಾಪಸಾದ ಜಾಫರ್ ಮಗನನ್ನು ಕೂಡಲೇ ತಂದೊಪ್ಪಿಸಿ ಎಂದ. ಇಡೀ ಆಸ್ಪತ್ರೆ ಜಾಲಾಡಿದರೂ ಶಿಶು ಪತ್ತೆಯಾಗಲಿಲ್ಲ. ಜಾಫರ್ ಪೊಲೀಸ್ ಠಾಣೆಗೆ ಹೋಗಿ ದೂರನ್ನು ಕೊಟ್ಟ. ಪೊಲೀಸರು ಸ್ಥಳಕ್ಕೆ ಬಂದು ವಿಚಾರಿಸಿದಾಗ ಅಸ್ಮಾಳ ಬಳಿಗೆ ವೈದ್ಯೆ ಬಂದು ಶಿಶುವನ್ನು ಪರೀಕ್ಷಿಸಿದಳೆಂದು ತಿಳಿಯಿತು. ಆಕೆ ಯಾರೆಂದು ಕೇಳಿದಾಗ ಆಸ್ಪತ್ರೆಯ ಸಿಬ್ಬಂದಿ ‘ನಮ್ಮ ಯಾವ ವೈದ್ಯೆಯೂ ಅಸ್ಮಾಳಿದ್ದ ವಾರ್ಡಿಗೆ ಹೋಗಲಿಲ್ಲ’ ಎಂದರು. ಅಷ್ಟರಲ್ಲಿ ಒಬ್ಬ ಆಟೋ ಚಾಲಕ ಪೊಲೀಸರ ಬಳಿಗೆ ಬಂದು ಹಸಿರು ಸಲ್ವಾರ್ ಧರಿಸಿದ ಮಹಿಳೆ ತನ್ನನ್ನು ಹೊರಗೆ ಕಾಯಲು ಹೇಳಿ ಆಸ್ಪತ್ರೆಯೊಳಗೆ ಹೋದವಳು ಇನ್ನೂ ವಾಪಸ್ ಬರಲಿಲ್ಲವೆಂದು ತಿಳಿಸಿದ. ಆಕೆಯೇ ಶಿಶುವನ್ನು ಒಯ್ದಿರಬಹುದೆಂದು ಭಾವಿಸಿ ಸುತ್ತಮುತ್ತಲಿದ್ದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲಾಯಿತು. ಆಸ್ಪತ್ರೆಯ ಮುಂಬಾಗಿಲಿನಲ್ಲಿ ಆಟೋದಿಂದಿಳಿದ ಮಹಿಳೆ ಹತ್ತು ನಿಮಿಷದ ತರುವಾಯ ಆಸ್ಪತ್ರೆಯ ಹಿಂದಿನ ಬಾಗಿಲಿನಿಂದ ಮಗುವನ್ನು ಕೈಯಲ್ಲಿಟ್ಟುಕೊಂಡು ಇನ್ನೊಂದು ಆಟೋ ವೊಂದರಲ್ಲಿ ಹೋದದ್ದು ದಾಖಲಾಗಿತ್ತು. ಆದರೆ ಈ ಎಲ್ಲ ದೃಶ್ಯಗಳೂ ಅಸ್ಪಷ್ಟವಾಗಿದ್ದು ಮಹಿಳೆ ಮುಖಕ್ಕೆ ಮಾಸ್ಕ್ ಧರಿಸಿದ ಕಾರಣ ಆಕೆ ಯಾರೆಂಬುದನ್ನು ಅರಿಯುವುದು ಕಷ್ಟವಾಯಿತು. ಆಕೆ ಉದ್ದ ಕೂದಲಿನವಳಾಗಿದ್ದಳು ಮತ್ತು ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದಳು ಎಂದು ಅಸ್ಮಾ ಹೇಳಿದ ಕಾರಣ, ಆಕೆ ಸುಶಿಕ್ಷಿತ ಹೆಣ್ಣುಮಗಳಿರಬಹುದು ಎಂದು ಭಾವಿಸಲಾಯಿತು.
ಮಗುವಿನ ಅಪಹರಣ ಪ್ರಕರಣ ದಾಖಲಿಸಿದ ಪೊಲೀಸರು ಅಪರಿಚಿತ ಮಹಿಳೆ ಮತ್ತು ಕಳೆದ ಶಿಶುವಿಗಾಗಿ ಹುಡುಕಾಟ ಪ್ರಾರಂಭಿಸಿದರು. ಹಲವಾರು ದಿನಗಳು ಹುಡುಕಾಡಿದರೂ ಯಾವುದೇ ಕುರುಹು ಸಿಗಲಿಲ್ಲ. ಈ ಪ್ರಕರಣ ನಾಪತ್ತೆಯಾದ ಪ್ರಕರಣಗಳ ಪಟ್ಟಿಗೆ ಸೇರಿತು. ಆದರೆ ಮಗುವನ್ನು ಬೇಗನೇ ಹುಡುಕಿಕೊಡಲು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಜಾಫರ್ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಈ ಪ್ರಕರಣದ ಪತ್ತೆಗೆ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ವಿಶೇಷ ತಂಡ ತಯಾರಾಯಿತು. ಸಿಸಿಟಿವಿಯಲ್ಲಿ ಅಪರಿಚಿತ ಮಹಿಳೆ ಬೆಳಗಿನ 9.10ಕ್ಕೆ ಆಸ್ಪತ್ರೆಯೊಳಗೆ ಬಂದು 9.30ಕ್ಕೆ ಹೊರ ಹೋಗಿದ್ದಾಗಿ ತಿಳಿದು ಬಂದ ಕಾರಣ ಆ 20 ನಿಮಿಷಗಳ ಕಾಲ ಯಾವ ಸೆಲ್ಫೋನ್ಗಳು ಆ ಟವರಿನ ವ್ಯಾಪ್ತಿಯಲ್ಲಿ ಚಾಲನೆಯಲ್ಲಿದ್ದವು ಎನ್ನುವುದನ್ನು ಪರಿಶೀಲಿಸಲಾಯಿತು. 35 ಸಾವಿರ ಸೆಲ್ಫೋನ್ಗಳು ಅದೇ ಸಮಯದಲ್ಲಿ ಆ ಟವರ್ನಲ್ಲಿ ಚಾಲನೆಯಲ್ಲಿದ್ದವು.
ಇಪ್ಪತ್ತು ಬೇರೆ ಬೇರೆ ತಂಡಗಳು ಆ ಸೆಲ್ಫೋನ್ಗಳ ಮಾಹಿತಿಯನ್ನು ಒಂದೊಂದಾಗಿ ಪರಿಶೀಲಿಸಿದವು. ಯಾವ ಫೋನ್ ಮಹಿಳೆಯರ ಹೆಸರಿನಲ್ಲಿತ್ತೋ ಅವನ್ನು ಮೊದಲಿಗೆ ಪರಿಶೀಲಿಸಬೇಕೆಂದು ತೀರ್ವನಿಸಿದಾಗ ಅಂತಹ 3 ಸಾವಿರ ಫೋನ್ಗಳು ಪತ್ತೆಯಾದವು. ಅವುಗಳನ್ನು ಉಪಯೋಗಿಸುತ್ತಿದ್ದವರನ್ನು ಒಬ್ಬೊಬ್ಬರನ್ನಾಗಿ ಮಾತನಾಡಿಸಲಾಯಿತು. ಕಡೆಗೆ ಸಂಶಯಾಸ್ಪದವಾಗಿದ್ದ 10 ಸೆಲ್ಫೋನ್ಗಳನ್ನು ಪಟ್ಟಿ ಮಾಡಿಕೊಳ್ಳಲಾಯಿತು. ಒಂದು ಫೋನ್ 20 ನಿಮಿಷಗಳ ಕಾಲ ಶಿಶು ಕಳೆದಿದ್ದ ಸ್ಥಳದಲ್ಲಿದ್ದದ್ದನ್ನು ಕಂಡು ಅದರ ಮಾಲೀಕರ ಬಗ್ಗೆ ವಿಚಾರಿಸಲಾಯಿತು. ಆ ಫೋನ್ ಉತ್ತರ ಕರ್ನಾಟಕದ ಡಾ.ಭಾರತಿ ಎಂಬ ವೈದ್ಯೆಯ ಹೆಸರಿನಲ್ಲಿ ದಾಖಲಾಗಿತ್ತು. ಪೊಲೀಸರು ಕೂಡಲೇ ಅವಳಿದ್ದ ಊರಿಗೆ ಧಾವಿಸಿದರು.
ಆರಂಭದಲ್ಲಿ ಆಕೆ ಈ ಬಗ್ಗೆ ತನಗೇನೂ ಗೊತ್ತಿಲ್ಲವೆಂದರೂ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ತೋರಿಸಿ ಕೂಲಂಕಷವಾಗಿ ಪ್ರಶ್ನಿಸಿದಾಗ ತಾನೇ ಮಗುವನ್ನು ಕದ್ದಿದ್ದಾಗಿ ಒಪ್ಪಿ ಹೀಗೆಂದಳು: ‘ಎಂಬಿಬಿಎಸ್ ಪದವಿ ನಂತರ ಮನಃಶಾಸ್ತ್ರದಲ್ಲಿ ಸ್ನಾತ್ತಕೋತರ ಪದವಿ ಪಡೆದು ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿ ಕೆಲಸ ಮಾಡುತ್ತಿರುವೆ. ಕೆಲವರ್ಷದ ಹಿಂದೆ ನನ್ನ ಬಳಿ ದಂಪತಿ ತಮ್ಮ 10 ವರ್ಷದ ಬುದ್ಧಿಮಾಂದ್ಯ ಮಗಳನ್ನು ಚಿಕಿತ್ಸೆಗಾಗಿ ಕರೆತಂದಿದ್ದರು. ಕಾಲಕ್ರಮೇಣ ನಮ್ಮಲ್ಲಿ ಸ್ನೇಹ ಬೆಳೆಯಿತು. ಅವರು ತಾವು ಇನ್ನೊಂದು ಮಗುವಿಗಾಗಿ ಎಷ್ಟೇ ಪ್ರಯತ್ನ ಪಟ್ಟರೂ ಫಲಕಾರಿಯಾಗಲಿಲ್ಲ ಎಂದರು. ನಾನು ಅವರನ್ನು ಪ್ರಸೂತಿ ತಜ್ಞೆಯ ಬಳಿ ಕಳಿಸಿದಾಗ ಆ ಹೆಣ್ಣುಮಗಳಿಗೆ ಗರ್ಭದಾರಣೆ ಮಾಡುವ ಶಕ್ತಿಯಿಲ್ಲವೆಂದು ತಿಳಿಯಿತು. ಅವರ ದುಃಖವನ್ನು ನೋಡಿದ ನಾನು ಅವರ ಮಗುವನ್ನು ಬೇರೊಬ್ಬರ ಉದರದಲ್ಲಿ ಬೆಳೆಸುವಂಥ ವ್ಯವಸ್ಥೆಯಿರುವುದಾಗಿ ತಿಳಿಸಿ ಬಾಡಿಗೆತಾಯಿಗಾಗಿ ಹಣ ಕೊಡಲೊಪ್ಪಿದರೆ ನಿಮ್ಮ ಮಗುವನ್ನು ಆಕೆ ಗರ್ಭದಲ್ಲಿ ಬೆಳೆಯುವಂತೆ ಮಾಡಬಹುದು ಎಂದೆ. ಅದಕ್ಕೊಪ್ಪಿದ ಆ ದಂಪತಿ ಎಷ್ಟು ಹಣವಾಗುತ್ತದೆ ಎಂದು ಕೇಳಿದರು. ನಾನು 15 ಲಕ್ಷವಾಗುತ್ತದೆ ಎಂದಾಗ ಅವರು ಒಪ್ಪಿ ಮುಂಗಡವಾಗಿ 5 ಲಕ್ಷ ರೂ. ಕೊಟ್ಟರು.
ಬಳಿಕ ಅವರಿಬ್ಬರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವರಿಗೆ ಪರೀಕ್ಷೆ ಮಾಡಿಸುವ ನಾಟಕವಾಡಿ ಆಕೆಯ ಪತಿಯ ವೀರ್ಯವನ್ನು ಬಾಡಿಗೆ ತಾಯಿಗೆ ಕೊಡಿಸಲು ಸಂಗ್ರಹ ಮಾಡಲಾಗಿದೆ ಎಂದು ತಿಳಿಸಿದೆ. ಇದಾದ ನಂತರ ಮಹಾನಗರಕ್ಕೆ ಹೋಗಿ ಅಲ್ಲಿಯ ಒಂದು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಆ ದಂಪತಿ ಪದೇಪದೆ ಕರೆ ಮಾಡಿ ಬಾಡಿಗೆ ತಾಯಿ ದೊರಕಿದರೇ ಎಂದು ಕೇಳುತ್ತಿದ್ದರು. ಅವರ ಕಾಟ ತಾಳಲಾರದೆ ‘ಬಾಡಿಗೆ ತಾಯಿ ಸಿಕ್ಕಿದ್ದಾಳೆ, ನಿಮ್ಮ ಗಂಡು ಮಗು ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿದೆ’ ಎಂದು ಸುಳ್ಳು ಹೇಳಿದೆ.
ಏಪ್ರಿಲ್ ತಿಂಗಳಲ್ಲಿ ಆ ದಂಪತಿ ಸಂರ್ಪಸಿದಾಗ ‘ನಿಮ್ಮ ಮಗು ಮುಂದಿನ ತಿಂಗಳಾಂತ್ಯಕ್ಕೆ ಬಾಡಿಗೆ ತಾಯಿಗೆ ಜನಿಸುತ್ತದೆ’ ಎಂದೆ. ಅವರಿಬ್ಬರೂ ಮಹಾನಗರಕ್ಕೆ ಬಂದು ಮಗುವಿಗಾಗಿ ಕಾತರದಿಂದ ಕಾಯತೊಡಗಿದರು. ಆ ಸಮಯದಲ್ಲಿ ಯಾವುದಾದರೊಂದು ನವಜಾತ ಶಿಶುವನ್ನು ಖರೀದಿಸಿ ಅದನ್ನು ಅವರಿಗೆ ಕೊಡಬೇಕೆಂದು ತೀರ್ವನಿಸಿದೆ. ಶಿಶು ಖರೀದಿಸಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದವು. ಆಗ ಶಿಶುವನ್ನು ಅಪಹರಿಸಬೇಕೆಂಬ ಉಪಾಯ ಹೊಳೆಯಿತು. ಆ ದಿನ ಐದಾರು ಆಸ್ಪತ್ರೆಗಳಿಗೆ ಹೋದರೂ ಯಾವ ಗಂಡುಮಗುವೂ ಸಿಗಲಿಲ್ಲ. ಕಡೆಗೆ ಮಹಾನಗರ ಪಾಲಿಕೆಯ ಆಸ್ಪತ್ರೆಯಲ್ಲಿ ಬಡ ಮಹಿಳೆಯೊಬ್ಬಳಿಗೆ ಗಂಡುಮಗುವಾಗಿದೆ ಎಂಬ ಮಾಹಿತಿ ದೊರೆಯಿತು. ಕೂಡಲೇ ಅಲ್ಲಿಗೆ ಹೋಗಿ ಆ ಮಗುವನ್ನು ಅಪಹರಿಸಿ ನನಗಾಗಿ ಕಾಯುತ್ತಿದ್ದ ದಂಪತಿಗೆ ಅದನ್ನು ಹಸ್ತಾಂತರಿಸಿ, ಬಾಕಿ ಬರಬೇಕಾದ ಹಣವನ್ನು ಪಡೆದೆ’.
ಭಾರತಿಯಿಂದ ಮಗುವನ್ನು ಪಡೆದಿದ್ದ ದಂಪತಿಯನ್ನು ಹುಡುಕಿಕೊಂಡು ಪೊಲೀಸರು ಉತ್ತರ ಕರ್ನಾಟಕದ ಜಿಲ್ಲೆಯೊಂದಕ್ಕೆ ಹೋದರು. ಮಗುವನ್ನು ಪಡೆದಿದ್ದ ದಂಪತಿ ಶ್ರೀಮಂತರಾಗಿದ್ದು ಆ ಊರಿನ ಗಣ್ಯರಾಗಿದ್ದರು. ಅಷ್ಟರಲ್ಲಾಗಲೇ ಆ ಮಗುವಿಗೆ ಒಂದು ವರ್ಷವಾಗಿದ್ದು ಅವರು ಬಹಳ ಮುದ್ದಾಗಿ ಆ ಮಗುವನ್ನು ಸಾಕಿದ್ದರು. ಈ ಮಗು ಅಪಹರಣಗೊಂಡಿರುವ ಬಾಲಕ ಎಂದು ಪೊಲೀಸರು ಹೇಳಿದಾಗ ಅವರು ನಂಬಲೇ ಇಲ್ಲ. ‘ಈ ಮಗು ನನ್ನ ವೀರ್ಯದಿಂದಲೇ ಬಾಡಿಗೆ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದು’ ಎಂದು ಮಗುವಿನ ‘ತಂದೆ’ ತಗಾದೆ ತೆಗೆದ. ಆಗ ಅಸ್ಮಾಳ ಇತರ ಇಬ್ಬರು ಮಕ್ಕಳ ಫೋಟೋ ತೋರಿಸಿ, ‘ಬೇಕಾದರೆ ಈ ಮಗುವಿಗೆ ಡಿಎನ್ಎ ಪರೀಕ್ಷೆ ಮಾಡಿಸೋಣ. ಆಗ ಇದು ನಿಮ್ಮ ಮಗುವಲ್ಲ’ ಎಂದು ಸಾಬೀತಾಗುತ್ತದೆ ಎಂದು ಪೊಲೀಸರು ಹೇಳಿದರೂ ಅವರು ಮಗುವನ್ನು ಹಸ್ತಾಂತರಿಸಲು ಒಪ್ಪಲಿಲ್ಲ. ಹೀಗಾಗಿ ಈ ಪ್ರಕರಣ ಹೈಕೋರ್ಟಿಗೆ ಹೋಯಿತು. ಜನ್ಮಕೊಟ್ಟ ತಾಯಿಗೆ ತನ್ನ ಮಗುವಿಗೆ ಎದೆಹಾಲುಣಿಸುವ ಹಕ್ಕಿದೆಯೆಂದು ಹೇಳಿ ಆ ಬಾಲಕನನ್ನು ಅಸ್ಮಾಳಿಗೆ ಹಿಂದಿರುಗಿಸುವಂತೆ ನ್ಯಾಯಾಲಯ ಆದೇಶ ನೀಡಿತು. ಭಾರತಿಯನ್ನು ಬಂಧಿಸಿ ಅವಳ ವಿರುದ್ಧ ಹಾಕಿರುವ ಅಪಹರಣ ಮತ್ತು ಮೋಸದ ಪ್ರಕರಣ ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ಉತ್ತಮ ಕುಟುಂಬದಿಂದ ಬಂದು ಕಾಲೇಜು ಪ್ರೊಫೆಸರ್ ಆಗಿದ್ದ ವೈದ್ಯೆ ಭಾರತಿ ಹೀಗೇಕೆ ಮಾಡಿದಳೆಂದು ಪೊಲೀಸರು ವಿಚಾರಿಸಿದಾಗ ಆಕೆ ಬಹಳ ಜನರಿಂದ ಸಾಲ ಮಾಡಿ, ಅದನ್ನು ತೀರಿಸಲು ಈ ಪ್ಲಾನ್ ಹಾಕಿದ್ದಳೆಂದು ತಿಳಿಯಿತು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)