

ಗಾಂಧೀಜಿ 1937ರಲ್ಲಿ ಈಗಿನ ಮ್ಯಾನ್ಮಾರ್ನ ರಂಗೂನ್ಗೆ ಭೇಟಿಕೊಟ್ಟಿದ್ದರು. ಅಲ್ಲಿನ ಸಿರಿವಂತ ಭಾರತೀಯರೊಬ್ಬರ ಮನೆಯಲ್ಲಿ ಬೆಳಗಿನ ಉಪಾಹಾರದ ವ್ಯವಸ್ಥೆಯಾಗಿತ್ತು. ಗಾಂಧೀಜಿ ಆಗಮನದಲ್ಲಿ ಮೈಮರೆತಿದ್ದ ಮನೆಯವರು ಇದ್ದಕ್ಕಿದ್ದಂತೆ ಗಾಬರಿಯಾದದ್ದು ಹತ್ತು ವರ್ಷದ ಮಗಳು ರಾಜಮಣಿ ಕಾಣೆಯಾಗಿದ್ದಾಳೆ ಎಂದು ಗೊತ್ತಾದಾಗ. ಸುತ್ತಲೂ ಹುಡುಕಾಡಿ ನೋಡಿದರೆ ಅವಳು ತೋಟದಲ್ಲಿ ಪಿಸ್ತೂಲಿನೊಂದಿಗೆ ಆಟವಾಡುತ್ತಿದ್ದಳು. ಆಕೆಯ ತಲೆ ನೇವರಿಸುತ್ತ ಗಾಂಧೀಜಿ, ‘ಪಿಸ್ತೂಲು ಹಿಡಿದು ಯಾರನ್ನು ಕೊಲ್ಲುತ್ತಿರುವೆ?’ ಎಂದು ಕೇಳಿದ್ದಕ್ಕೆ, ‘ಲೂಟಿಕೋರರನ್ನು ಕೊಲ್ಲುತ್ತೇನೆ. ಅದಕ್ಕಾಗಿಯೇ ಒಬ್ಬನಾದರೂ ಆಂಗ್ಲನನ್ನು ನಾನು ಕೊಲ್ಲಬೇಕು’ ಎಂದಿದ್ದಳಂತೆ! ಆ ವೇಳೆಗೆ ತೀವ್ರವಾದಿಗಳ ಪ್ರಭಾವ ಪುಟ್ಟಮಕ್ಕಳ ಮೇಲೂ ಎಷ್ಟಿತ್ತೆಂದು ನಿಸ್ಸಂಶಯವಾಗಿ ಊಹಿಸಬಹುದು.
1824ರಿಂದ ಬರ್ವ ಬ್ರಿಟಿಷ್ ಕಾಲನಿಯಾಗಿತ್ತು. ರಾಜಮಣಿಯ ಕುಟುಂಬ ತಮಿಳುನಾಡಿನ ತಿರುಚಿನಾಪಳ್ಳಿಯಿಂದ ಮೈನಿಂಗ್ ವ್ಯಾಪಾರದ ದೃಷ್ಟಿಯಿಂದ ಅಲ್ಲಿಗೆ ಬಂದು ನೆಲೆಸಿತ್ತು. ಈ ಪರಿವಾರ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಸಾಕಷ್ಟು ಧನದಾನ ಮಾಡಿತ್ತು. ರಾಷ್ಟ್ರೀಯತೆಯ ಯಾವುದೇ ಚಟುವಟಿಕೆ ಇದ್ದರೂ ಅಲ್ಲಿ ಈ ಕುಟುಂಬದ ಕೊಡುಗೆ ಇದ್ದೇ ಇರುತ್ತಿತ್ತು. ಇಂತಹ ಕುಟುಂಬದ ಮಗುವಾಗಿ ಜನಿಸಿದವಳು ರಾಜಮಣಿ. ಆಕೆಗೆ ಪ್ರೇರಣೆ ಏನು ಎಂದು ಕೇಳುವಂತೆಯೇ ಇಲ್ಲ. ಸ್ವತಃ ಪರಿವಾರವೇ ರಾಷ್ಟ್ರೀಯ ಭಾವನೆಯಿಂದ ತುಂಬಿಹೋಗಿತ್ತು. ಇನ್ನು ಗಾಂಧೀಜಿಯಾದಿಯಾಗಿ ಅನೇಕ ರಾಷ್ಟ್ರ ನಾಯಕರು ಮ್ಯಾನ್ಮಾರಿಗೆ ಬಂದಾಗಲೆಲ್ಲ ಈ ಪರಿವಾರಕ್ಕೆ ಭೇಟಿ ಕೊಡುತ್ತಿದ್ದರು. 1944ರಲ್ಲಿ ರಾಜಮಣಿಗೆ 17 ವರ್ಷ ವಯಸ್ಸಾಗಿದ್ದಾಗ ಸುಭಾಷ್ ಚಂದ್ರ ಬೋಸರು ರಂಗೂನಿಗೆ ಬಂದಿದ್ದರು. ಅವರ ಭಾಷಣದಿಂದ ಪ್ರಭಾವಿತಳಾದ ಈ ಹುಡುಗಿ ಸುಭಾಷ್ ಬಾಬು ಸೇನೆಕಟ್ಟುವ ಕೆಲಸಕ್ಕೆ ಸಹಾಯವಾಗಲೆಂದು ತನ್ನ ಮೈಮೇಲಿನ ಒಡವೆಯನ್ನೂ ತೆಗೆದುಕೊಟ್ಟಳು. ಈಕೆ ಎಲ್ಲರ ಮುಂದೆ ಹೀಗೆ ಒಡವೆ ಕಳಚಿಕೊಟ್ಟಿದ್ದನ್ನು ನೋಡಿದ ಸುಭಾಷರು ಗಾಬರಿಯಾಗಿ ಈಕೆಯ ಮನೆಯಲ್ಲಿ ರಾದ್ಧಾಂತವಾಗಬಹುದೇನೊ ಎಂದು ಭಾವಿಸುತ್ತ ಆ ಒಡವೆಗಳ ಸಮೇತ ಆಕೆಯ ಮನೆಗೇ ಬಂದುಬಿಟ್ಟರು. ಇವುಗಳ ಅಗತ್ಯವಿಲ್ಲವೆಂದು ಆಕೆಗೆ ಮರಳಿಸಹೋದರು. ಆಕೆಯೂ ಕಡಿಮೆಯಲ್ಲ. ತಂದೆ ಕೊಟ್ಟಿರುವ ಕೊಡುಗೆ ಅವರದ್ದಾಯ್ತು, ಇದು ತನ್ನ ಸ್ವಂತದ್ದು ಎಂದು ಹೇಳಿದಳು. ಮರಳಿ ಕೊಡಲೇಬೇಕೆಂದಾದರೆ ತನ್ನನ್ನು ಸ್ವಯಂಸೇವಕಿಯಾಗಿ ಸೇನೆಗೆ (ಐಎನ್ಎ) ಸೇರಿಸಿಕೊಂಡರೆ ಮಾತ್ರ ಸಾಧ್ಯ ಎಂಬ ಷರತ್ತು ಹಾಕಿದಳು.
ಹೀಗೆ ಹಠಹಿಡಿದು ಇಂಡಿಯನ್ ನ್ಯಾಷನಲ್ ಆರ್ವಿುಗೆ ಸೇರಿಕೊಂಡಳು ರಾಜಮಣಿ. ಆಕೆಗೆ ವಿಶೇಷವಾದ ತರಬೇತಿ ಕೊಟ್ಟು ಗಾಯಾಳುಗಳನ್ನು ನೋಡಿಕೊಳ್ಳುವ ನರ್ಸ್ ಆಗಿ ಐಎನ್ಎಗೆ ಸುಭಾಷರು ನೇಮಿಸಿದರು. ಆಕೆಗೆ ಸರಸ್ವತಿ ಎಂದು ನಾಮಕರಣವನ್ನೂ ಮಾಡಿದರು. ಲಕ್ಷ್ಮೀ ಬರ್ತಾಳೆ ಹೋಗ್ತಾಳೆ. ಆದರೆ ಸರಸ್ವತಿ ಎಂದಿದ್ದರೂ ಶಾಶ್ವತ ಎಂಬುದು ಅವರ ಮನದಿಂಗಿತವಾಗಿತ್ತು. ರಾಜಮಣಿಗೆ ತನ್ನ ತಾನು ಸರಸ್ವತಿ ಎಂದು ಕರೆದುಕೊಳ್ಳುವುದೇ ಪ್ರೀತಿ. ಸುಭಾಷರಿಟ್ಟ ಹೆಸರಲ್ಲವೇ! ಬಲು ಚುರುಕಾಗಿದ್ದ ರಾಜಮಣಿ ಸರಸ್ವತಿ ಬಹಳ ಕಾಲ ನರ್ಸ್ ಆಗಿ ಉಳಿಯಲಿಲ್ಲ. ಆಕೆಗೆ ಮತ್ತಷ್ಟು ತರಬೇತಿ ಕೊಟ್ಟು ದುರ್ಗಾ ಎನ್ನುವ ಮತ್ತೊಬ್ಬ ಹೆಣ್ಣುಮಗಳ ಜೊತೆ ಗೂಢಚರ್ಯುಗಾಗಿ ರಂಗೂನ್ನಿಂದ 680 ಕಿ.ಮೀ. ದೂರದ ಮಾಯ್ಮೊ ಎಂಬ ಸ್ಥಳಕ್ಕೆ ಕಳಿಸಲಾಯ್ತು. ಇಲ್ಲಿ ಆಜಾದ್ ಹಿಂದ್ ಸೇನೆ ಯುದ್ಧನಿರತವಾಗಿತ್ತು. ಇಬ್ಬರು ಹೆಣ್ಣುಮಕ್ಕಳು ತರಲೆ ಹುಡುಗರಂತೆ ವೇಷ ಹಾಕಿಕೊಂಡು ಬ್ರಿಟಿಷ್ ಡೇರೆಗಳಲ್ಲಿ ಕೆಲಸ ಗಿಟ್ಟಿಸಿದರು. ನೆಲ ಒರೆಸುವ, ಬೂಟು ಪಾಲಿಶ್ ಮಾಡುವ ಕೆಲಸಗಳನ್ನೆಲ್ಲ ಇವರಿಬ್ಬರು ಮಾಡುತ್ತ ಸಾಕಷ್ಟು ಮಾಹಿತಿಯನ್ನು ಮುಖ್ಯಕೇಂದ್ರಕ್ಕೆ ದಾಟಿಸಿದರು. ಕೆಲವೊಮ್ಮೆಯಂತೂ ಪ್ರಮುಖವಾದ ಕಡತಗಳನ್ನು ದಾಟಿಸುವಲ್ಲೂ ಇವರು ಯಶಸ್ವಿಯಾದರು. ಅನೇಕ ದಿನಗಳ ಕಾಲ ಈ ಕೆಲಸದಲ್ಲಿ ಯಶಸ್ಸು ಕಂಡಿದ್ದ ಇಬ್ಬರೂ ಹೆಣ್ಣುಮಕ್ಕಳಲ್ಲಿ ದುರ್ಗಾ ಸಿಕ್ಕಿಹಾಕಿಕೊಂಡಳು. ನಿಯಮದ ಪ್ರಕಾರ ಯಾರೊಬ್ಬರು ಸಿಕ್ಕಿಹಾಕಿಕೊಂಡರೂ ಮತ್ತೊಬ್ಬರು ಆ ಕೂಡಲೇ ಪರಾರಿಯಾಗಬೇಕಿತ್ತು. ರಾಜಮಣಿ ವಿಚಾರದಲ್ಲಿ ಹಾಗಾಗಲಿಲ್ಲ. ಆಕೆ ದುರ್ಗೆಯನ್ನು ಹೇಗಾದರೂ ಬಿಡಿಸಿಕೊಂಡು ಬರಬೇಕೆಂದು ಧಾವಿಸಿದಳು. ನೃತ್ಯಗಾರ್ತಿಯ ವೇಷ ಧರಿಸಿಕೊಂಡು ಕಾವಲುಗಾರನಿಗೆ ಅಫೀಮು ಕುಡಿಸಿ, ಮತ್ತು ಬರಿಸಿ ದುರ್ಗೆಯನ್ನು ಬಿಡಿಸಿಕೊಂಡಳು. ತಪ್ಪಿಸಿಕೊಂಡು ಓಡುತ್ತಿರುವಾಗ ಪೊಲೀಸನೊಬ್ಬ ಹಾರಿಸಿದ ಗುಂಡು ಆಕೆಯ ಕಾಲಿಗೆ ಬಿತ್ತು. ದೊಡ್ಡದೊಂದು ಪಡೆ ಇವರೀರ್ವರನ್ನು ಅಟ್ಟಿಸಿಕೊಂಡು ಬರುವಾಗ ಇಬ್ಬರೂ ಕಾಡಿಗೆ ನುಗ್ಗಿದರು. ಓಡಲು ಸಾಧ್ಯವಿಲ್ಲವೆಂದರಿತು ಮರವೊಂದನ್ನು ಹತ್ತಿ ಅಲ್ಲಿಯೇ ಕುಳಿತುಬಿಟ್ಟರು. ಇವರಿಬ್ಬರನ್ನು ಹುಡುಕಲಾಗದೆ ಬ್ರಿಟಿಷ್ ಸೇನೆ ಮರಳಿತು. ಆದರೆ ಇಷ್ಟರವೇಳೆಗೆ ಮರದ ಮೇಲೆಯೇ ಇಬ್ಬರೂ ಹೆಣ್ಣುಮಕ್ಕಳು ಎರಡು ದಿನ ಕಳೆದಿದ್ದರು! ಮುಂದೆ ಸ್ಥಳೀಯ ವಾಹನಗಳನ್ನು ಹಿಡಿದು ರಂಗೂನ್ ತಲುಪಿಕೊಂಡರು.
ಈಕೆಗೆ ಬಹಳ ಪ್ರೀತಿಯಿಂದ ಪತ್ರ ಬರೆದ ಬೋಸರು, ‘ಭಾರತದ ಮೊದಲ ಮಹಿಳಾ ಗೂಢಚಾರಿಣಿ’ ಎಂದು ಹೆಮ್ಮೆಯಿಂದ ಸಂಬೋಧಿಸಿದರು! ಭಾರತ ಸ್ವತಂತ್ರವಾದ ನಂತರ 1957ರಲ್ಲಿ ರಾಜಮಣಿಯ ಪರಿವಾರ ಭಾರತಕ್ಕೆ ಬಂತು. ಆಗ ಆಕೆಗೆ ಬರಿಯ 30 ವರ್ಷ! ಸ್ವಾತಂತ್ರ್ಯ ಹೋರಾಟದ ನೆಪದಲ್ಲಿ ಎಂತೆಂಥವರಿಗೋ ನಿವೃತ್ತಿ ವೇತನ ಕೊಟ್ಟ ಸರ್ಕಾರ ಈಕೆಯನ್ನು ಗುರುತಿಸಲು ನಿರಾಕರಿಸಿತು. ರಾಜಮಣಿ ಸುಭಾಷರ ಅನುಯಾಯಿಯಾಗಿದ್ದಳಲ್ಲ, ಗೌರವಿಸು ವುದು ಹೇಗೆ? 1971ರಲ್ಲಿ ಸರಿಸುಮಾರು ಭಾರತಕ್ಕೆ ಸ್ವಾತಂತ್ರ್ಯ ಬಂದು ಎರಡೂವರೆ ದಶಕಗಳು ಕಳೆದ ನಂತರ ಆಕೆಗೆ ಒಂದು ಪುಟ್ಟ ಮನೆ ಮತ್ತು ಸ್ವಲ್ಪ ಹಣವನ್ನು ತಮಿಳುನಾಡು ಸರ್ಕಾರ ಕೊಟ್ಟಿತು. ಅದನ್ನೇನು ಸ್ವಂತಕ್ಕೆ ಉಳಿಸಿಕೊಳ್ಳಲಿಲ್ಲ ರಾಜಮಣಿ ಸರಸ್ವತಿ. 2006ರಲ್ಲಿ ಸುನಾಮಿ ಅಪ್ಪಳಿಸಿದಾಗ ಎಲ್ಲವನ್ನೂ ದಾನಮಾಡಿಬಿಟ್ಟಳು. 2018ರಲ್ಲಿ ತನ್ನ 90ನೇ ವರ್ಷ ವಯಸ್ಸಿನಲ್ಲಿ ಅನಾಥವಾಗಿ ತೀರಿಕೊಂಡಳು! ಹಾಗೆ ನೋಡಿದರೆ ಅನಾಥವಾಗಿದ್ದು ರಾಜಮಣಿ ಸರಸ್ವತಿಯಲ್ಲ. ಅಂಥವರಿಗೆ ಸರಿಯಾದ ಗೌರವ ಕೊಡಲಾಗದ ನಾನು ಮತ್ತು ನೀವು!
ರಾಜಮಣಿಯಷ್ಟೇ ದುರಂತ ಅಂತ್ಯ ಚಿತ್ತಗಾಂಗ್ನ ಬೀನಾ ದಾಸ್ಳದ್ದು. ಪ್ರಖರ ರಾಷ್ಟ್ರೀಯವಾದಿ, ಸುಭಾಷ್ಚಂದ್ರ ಬೋಸರನ್ನು ಬಾಲ್ಯದಲ್ಲಿಯೇ ರಾಷ್ಟ್ರಕಾರ್ಯಕ್ಕೆ ಪ್ರಭಾವಿಸಿದ ಬೇಣಿ ಮಾಧವ್ದಾಸರ ಮಗಳು ಆಕೆ. ಬೀನಾ ಕೊಲ್ಕತ್ತದ ಡಯೋಸೀಸನ್ ಕಾಲೇಜಿನಲ್ಲಿ ಅಧ್ಯಯನ ಮಾಡಿದಳು. ತಂದೆಯಿಂದಲೇ ರಾಷ್ಟ್ರಕಾರ್ಯಕ್ಕೆ ಪ್ರೇರಣೆ ಪಡೆದ ಬೀನಾ ಪ್ರೌಢಶಾಲೆಯಲ್ಲಿದ್ದಾಗಲೇ ಶರತ್ಚಂದ್ರರ ಗುಪ್ತ ಕ್ರಾಂತಿಕಾರಿ ಸಂಸ್ಥೆಗಳ ಕುರಿತಾದ ಪಥೇರ್ ದಾಬಿ ಕಾದಂಬರಿ ಬಗ್ಗೆ ಬರೆದು ಶಿಕ್ಷಣ ಸಂಸ್ಥೆಯಿಂದ ಛೀಮಾರಿ ಹಾಕಿಸಿಕೊಂಡಿದ್ದಳು. 1928ರಲ್ಲಿ ಸುಭಾಷ್ ಬೋಸರ ಬೆಂಗಾಲ್ ವಾಲಂಟಿಯರ್ ಕಾರ್ಪ್ಸ್ ಸೇರಿದಳು. ಯಾಕೋ ಅವಳಿಗೆ ಸಮಾಧಾನವಿರಲಿಲ್ಲ. ಗೆಳತಿಯೊಬ್ಬಳು ‘ಆಕ್ರಮಣಕಾರಿಯಾದ್ದೇನಾದರೂ ಮಾಡುವ ಬಯಕೆ ಇದೆಯಾ?’ ಎಂದು ಕೇಳಿದಾಗ ‘ಹ್ಞೂಂ’ ಎಂದ ಬೀನಾ ದಾಸ್ ಬೆಂಗಾಲಿ ಕ್ರಾಂತಿಕಾರಿ ಗುಂಪಿಗೆ ಪರಿಚಯಗೊಂಡಳು. ಈಕೆ ಪರಿಚಯವಾಗುವ ವೇಳೆಗೆ ಸರಿಯಾಗಿ ಚಾರ್ಲ್ಸ್ ಟೆಗಾರ್ಟ್ನ ಕೊಲ್ಲಲು ಹೋಗಿ ಕೆಲವರು ಸಿಕ್ಕಿಬಿದ್ದುದರಿಂದ ಇಡೀ ತಂಡವನ್ನೇ ವಿಸರ್ಜಿಸಬೇಕಾಗಿ ಬಂತು. ಇಡಿಯ ತಂಡ ವಿಸರ್ಜನೆಯಾಯ್ತು ನಿಜ, ಆದರೀಗ ಒಬ್ಬೊಬ್ಬರೂ ತಂಡವೇ ಆಗಿ ಪ್ರಖರ ಕ್ರಾಂತಿಕಾರಿಗಳಾದರು. ಬಂಗಾಳದ ಗವರ್ನರ್ನನ್ನೇ ಕೊಲ್ಲಬೇಕೆಂಬ ಇಚ್ಛೆ ಬೀನಾ ದಾಸ್ಳಲ್ಲಿ ಉದಯಿಸಿತು. ಕಮಲಾದಾಸ್ ಗುಪ್ತರನ್ನು ಭೇಟಿಯಾಗಿ ಬಂದೂಕು ಕೊಡುವಂತೆ ಕೇಳಿಕೊಂಡಳು. 280 ರೂಪಾಯಿಗೆ ಬಂದೂಕೇನೋ ಸಿಕ್ಕಿತು. ಆದರೆ ಗುರಿ ಹೊಡೆಯಲು ಅಭ್ಯಾಸ ಬೇಕಲ್ಲ. ಆಕೆ ಈ ಪ್ರಶ್ನೆ ಎತ್ತಿದ್ದಕ್ಕೆ ‘ಬ್ರಿಟಿಷರನ್ನು ಕೊಂದವರೆಲ್ಲ ತರಬೇತಿ ಪಡೆದ ನಂತರವೇ ಈ ಕೆಲಸ ಮಾಡಿದವರಲ್ಲ. ಬಂದೂಕಿನ ಟ್ರಿಗರ್ ಒತ್ತಿದರಾಯ್ತು ಅಷ್ಟೇ. ಎದುರಿಗಿದ್ದ ಅಧಿಕಾರಿ ಸತ್ತು ಹೆಣವಾಗುತ್ತಾನೆ’ ಎಂಬ ಸಲಹೆ ಕೇಳಿ, ಈಕೆ ಗವರ್ನರ್ನ ಸಂಹಾರಕ್ಕೆ ಸಜ್ಜಾಗಿಯೇಬಿಟ್ಟಳು.
ಕೊಲ್ಕತ್ತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗವರ್ನರ್ ಜ್ಯಾಕ್ಸನ್ ಮಾತನಾಡುತ್ತಿದ್ದಾಗ ಈಕೆ ಅವಕಾಶ ಸಾಧಿಸಿಕೊಂಡು ಆತನ ಪಕ್ಕದಲ್ಲೇ ನಿಂತು ಗುಂಡು ಹಾರಿಸಿದಳು. ಗುಂಡು ಅವನ ಕಿವಿಯ ಬದಿಯಿಂದ ಹಾದುಹೋಯ್ತು. ಅಲ್ಲಿಯೇ ಇದ್ದ ಲೆಫ್ಟಿನೆಂಟ್ ಕರ್ನಲ್ ಹಸನ್ ಸುಹ್ರವರ್ದಿ ಈಕೆಯ ಕೈಗಳನ್ನು ಹಿಡಿದುಕೊಂಡು ನೆಲದಮೇಲೆ ಬೀಳಿಸಿದ. ಆನಂತರವೂ ಬಿಡದೇ ಆಕೆ ಗುಂಡು ಹಾರಿಸುತ್ತಲೇ ಇದ್ದಳು. ಗವರ್ನರ್ ಬಚಾವಾದ, 21 ವರ್ಷದ ಬೀನಾ ಬಂಧನಕ್ಕೊಳಗಾದಳು. ಒಂದೇ ದಿನದ ವಿಚಾರಣೆ. ಆಕೆಗೆ 9 ವರ್ಷಗಳ ಶಿಕ್ಷೆ ಘೊಷಿಸಲಾಯ್ತು. ಜೈಲಿನಲ್ಲಿ ಆಕೆಯನ್ನು ಮಾತನಾಡಿಸಲು ಬೇಣಿ ಮಾಧವ್ದಾಸರು ಬಂದಿದ್ದರು. ಜೈಲಿನ ಅಧಿಕಾರಿ ಬಂದೂಕು ಎಲ್ಲಿಂದ ಸಿಕ್ಕಿತು ಎಂದು ಮಾಹಿತಿ ಕೊಟ್ಟರೆ ಆಕೆಯನ್ನು ಬಿಟ್ಟುಬಿಡುವುದಾಗಿ ಪುಸಲಾಯಿಸಿದ. ಜೈಲರ್ನತ್ತ ತಿರುಗಿದ ಬೀನಾ ತನ್ನ ತಂದೆಯತ್ತ ಕೈತೋರಿಸಿ, ‘ನನ್ನ ತಂದೆ ದೇಶದ್ರೋಹಿಗಳನ್ನು ನನ್ನ ಮನೆಯಲ್ಲಿ ಬೆಳೆಸಲಿಲ್ಲ’ ಎಂದು ಖಡಕ್ಕಾಗಿ ಉತ್ತರಿಸಿದಳು! ತಂದೆ ಕೂಡ ಏನೂ ಹೇಳದೇ ಸುಮ್ಮನಿದ್ದರು. ಏಕೆಂದರೆ ಅವರ ಹಿರಿಯರಿಬ್ಬರು ಮಕ್ಕಳೂ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತ ಜೈಲಿಗೆ ಹೋದವರೇ. ಬೀನಾ ‘ಜ್ಯಾಕ್ಸನ್ ವಿರುದ್ಧ ವೈಯಕ್ತಿಕವಾಗಿ ನನಗೆ ಯಾವ ದ್ವೇಷವೂ ಇಲ್ಲ. ಆದರೆ ಬಂಗಾಳದ ಗವರ್ನರ್ ಆಗಿ ಆತ ಲಕ್ಷಾಂತರ ಜನರ ಬದುಕು ಹಾಳುಮಾಡಿದ್ದಾನೆ. ಹೀಗಾಗಿ ಅವನ ಸಾವು ಬಯಸಿದೆ’ ಎಂದಳು. 1941ರಲ್ಲಿ ಜೈಲಿನಿಂದ ಹೊರಬಂದ ಬೀನಾ ಕಾಂಗ್ರೆಸ್ ಸೇರಿದಳು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಮತ್ತೆ ಮೂರು ವರ್ಷ ಸೆರೆವಾಸ ಅನುಭವಿಸಿದಳು. ಸ್ವಾತಂತ್ರ್ಯಪ್ರಾಪ್ತಿಯ ನಂತರ ಅದೇ ಕಾಂಗ್ರೆಸ್ಸಿನ ವಿರುದ್ಧ ಕಾರ್ವಿುಕರ ಪರವಾಗಿ ಹೋರಾಟ ನಡೆಸಿದಳು. ಸ್ವಾತಂತ್ರ್ಯ ಯೋಧರ ನಿವೃತ್ತಿ ವೇತನವನ್ನು ನಿರಾಕರಿಸಿದಳು. ಗಂಡನನ್ನು ಕಳೆದುಕೊಂಡ ಮೇಲಂತೂ ಏಕಾಂತದಲ್ಲೇ ಹೆಚ್ಚು ಉಳಿಯಲಾರಂಭಿಸಿದಳು. ಹೃಷಿಕೇಶಕ್ಕೆ ಹೋಗಿ ಸಾಧನೆಯಲ್ಲಿ ನಿರತಳಾದಳು. ಅಲ್ಲಿಯೇ ವಾಹನ ಅಪಘಾತವೊಂದರಲ್ಲಿ ರಸ್ತೆ ಬದಿಯ ಶವವಾಗಿ ಹೋದಳು ಬೀನಾ. ಅರ್ಧ ಕೊಳೆತಿದ್ದ ಶವದ ಅಂತ್ಯಸಂಸ್ಕಾರ ಮಾಡಲಾಯ್ತಾದರೂ ಅದು ಈಕೆಯದ್ದೇ ದೇಹ ಎಂದು ಪತ್ತೆ ಹಚ್ಚಲು ಒಂದು ತಿಂಗಳು ಕಾಯಬೇಕಾಯ್ತು. ಸ್ವತಂತ್ರ ಭಾರತದಲ್ಲಿ ಬೀನಾ ದಾಸ್ರಂಥವರಿಗೆ ಸಿಕ್ಕ ಗೌರವ ಇದು! ಇಂದಿಗೂ ಕೋಟ್ಯಂತರ ಜನ ಭಾರತೀಯರ ಹೃದಯದಲ್ಲಿ ಆಕೆ ಸಾಮ್ರಾಜ್ಞಿಯಾಗಿ ರಾರಾಜಿಸುತ್ತಿದ್ದಾಳೆ.
ಸ್ವಾತಂತ್ರ್ಯ ಎಂಬುದು ಅಪ್ಪ ಮಾಡಿಟ್ಟ ಆಸ್ತಿಯಲ್ಲ. ಅದು ಮುಂದಿನ ಪೀಳಿಗೆಯವರು ನಮ್ಮ ಬಳಿ ಇಟ್ಟಿರುವ ಡೆಪಾಸಿಟ್ಟು. ಖರ್ಚು ಮಾಡುವುದಿರಲಿ, ವಾಸ್ತವವಾಗಿ ನಾವು ಬಡ್ಡಿ ಕೊಡಬೇಕಿದೆ. ಭಾರತದ ಸ್ವಾತಂತ್ರ್ಯ ಕದನವಂತೂ ಜಗತ್ತಿನ ಇತಿಹಾಸದಲ್ಲಿ ಅತಿಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿದ ಚಳವಳಿ. ಜಾತಿ-ಮತ-ಪಂಥಗಳನ್ನು ಮರೆತು, ಸಿರಿತನ-ಬಡತನಗಳನ್ನು ದೂರವಿರಿಸಿ, ಗಡಿರೇಖೆಗಳನ್ನು ಅಳಿಸಿ ಹಾಕಿ, ಕೈ-ಕೈ ಹಿಡಿದೇ ನಡೆಸಿದ ಹೋರಾಟ. ಜಗತ್ತೆಲ್ಲವನ್ನೂ ಆಪೋಷನ ತೆಗೆದುಕೊಂಡ ಬ್ರಿಟಿಷರು ಅದೇ ತಂತ್ರಗಾರಿಕೆಯನ್ನು ಭಾರತದಲ್ಲೂ ಬಳಸಿದರು. ಆದರೆ ಈ ದೇಶದ ಅಂತಃಸತ್ವ ಭಾರತವನ್ನು ಉಳಿಸಿತು. ದುರದೃಷ್ಟವೆಂದರೆ ಹೋರಾಟದ ಕಾಲಕ್ಕೆ ಅವರು ಕಂಡ ಕನಸುಗಳನ್ನು ಅದೇ ಸ್ವರೂಪದಲ್ಲಿ ನನಸುಗೊಳಿಸಲು ನಮ್ಮಿಂದ ಆಗುತ್ತಿಲ್ಲ. ನಾವು ಅಕ್ಷರಶಃ ಸೋತಿದ್ದೇವೆ. ಮೊದಲಿಗಿಂತ ಹೆಚ್ಚು ಭ್ರಷ್ಟರಾಗಿದ್ದೇವೆ, ಜಾತೀಯತೆ ಅಂದಿಗಿಂತಲೂ ಹೆಚ್ಚು ಬಲಿಷ್ಠವಾಗಿದೆ, ನಾವು ಹೆಚ್ಚು ಶಿಕ್ಷಣ ಪಡೆದುಕೊಂಡಿದ್ದೇವೆ; ಆದರೆ ಅಷ್ಟೇ ಪ್ರಮಾಣದ ಅಜ್ಞಾನ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಹೊಸಪೀಳಿಗೆಯ ತರುಣರು ಹೊಸ ಭಾರತದ ನಿರ್ವಣಕ್ಕೆ ಜೊತೆಯಾಗಬೇಕಾಗಿದೆ. ಹಳೆಯ ಮತ್ತು ಹಳಸಿ ಹೋದ ವಿಭಜನೆಗೆ ಪೂರಕವಾಗುವ ಆಲೋಚನೆಗಳನ್ನು ಮುಲಾಜಿಲ್ಲದೆ ಕಿತ್ತೊಗೆಯಬೇಕಾಗಿದೆ. ಸ್ವಾತಂತ್ರ್ಯಕ್ಕೆ 75ರ ಹೊಸ್ತಿಲಲ್ಲಿ ನಿಂತಿರುವಾಗ ನಾವು ದೃಢವಾದ ಸಂಕಲ್ಪದೊಂದಿಗೆ ಹೆಜ್ಜೆ ಇಡಬೇಕಾಗಿದೆ.
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)