ಸಂಘವೆಂಬ ಮಹಾಸಾಗರದ ಬಗ್ಗೆ ತಿಳಿಯಿರೋ...

putin (1)
Published on

(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)

ಆರೆಸ್ಸೆಸ್ ಕುರಿತು ಜವಾಹರಲಾಲ್ ನೆಹರು ಯಾವ ಅಭಿಪ್ರಾಯ ಹೊಂದಿದ್ದರು ಎಂಬುದು ಈಗಿನ ಕಾಂಗ್ರೆಸ್ ನಾಯಕರಿಗೆ ಅನಗತ್ಯ ವಿಚಾರ ಮತ್ತು ಅಪಥ್ಯದ ಸಂಗತಿ. ಈಗೇನಿದ್ದರೂ ಸೋನಿಯಾ ಪುತ್ರ ರಾಹುಲ್ ಏನು ಹೇಳುತ್ತಾರೆ ಮತ್ತು ಏನೇನು ಮಾಡುತ್ತಾರೆ ಎಂಬುದಷ್ಟೇ ಮುಖ್ಯ. ಏನಕೇನ ಪ್ರಕಾರೇಣ ರಾಹುಲ್ ಮತ್ತು ಸೋನಿಯಾ ಅವರನ್ನು ಮೆಚ್ಚಿಸಬೇಕು. ಅಳಿದುಳಿದ ಸ್ಥಾನಮಾನಗಳನ್ನು ಗಳಿಸಬೇಕು. ಅದಷ್ಟೇ ಗುರಿ ಮತ್ತು ಉದ್ದೇಶ. ಆರೆಸ್ಸೆಸ್ ಸ್ವಯಂಸೇವಕರು ಸಮವಸ್ತ್ರದಲ್ಲಿ ಗಣರಾಜ್ಯೋತ್ಸವ ಪರೇಡಿನಲ್ಲಿ ಭಾಗವಹಿಸಲು ಐವತ್ತರ ದಶಕದಲ್ಲಿ ಆಗಿನ ಪ್ರಧಾನಿ ನೆಹರು ಆಹ್ವಾನ ನೀಡಿದ್ದರಲ್ಲ ಎಂದು ಪ್ರಿಯಾಂಕ ಖರ್ಗೆ ಅವರಿಗೆ ಯಾರಾದರೂ ಕೇಳಿದರೆ ‘ಹೌದು, ಏನಿವಾಗ? ಅದು ಅವರ ಅಭಿಪ್ರಾಯ. ಅದು ಕೂಡ ತಪ್ಪು’ ಎಂದು ಖುಲ್ಲಂಖುಲ್ಲಾ ಹೇಳುವಷ್ಟು ಬದಲಾಗಿದ್ದಾರೆ. ಏಕೆಂದರೆ ಅವರಿಗೆ ನೆಹರು ಬೇಕಿಲ್ಲ, ಓಲೈಸಬೇಕಿರುವುದು ಸೋನಿಯಾ-ರಾಹುಲ್ ಅವರನ್ನು! ಆನುವಂಶಿಕ ಅಪ್ರಬುದ್ಧರಿಂದ ಇನ್ನೇನನ್ನು ನಿರೀಕ್ಷಿಸಲಾದೀತು?

ರಾಮಕೃಷ್ಣ ಹೆಗಡೆ 80ರ ದಶಕದ ಓರ್ವ ಮುಂಚೂಣಿ ಸೆಕ್ಯುಲರ್ ಲೀಡರ್. ಅವರನ್ನೊಮ್ಮೆ ಪತ್ರಕರ್ತರು ಪ್ರಶ್ನೆ ಮಾಡಿದರು, ‘ಆರೆಸ್ಸೆಸ್ ಬ್ಯಾನ್ ಮಾಡಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ನೀವೇನಂತೀರಿ’ ಎಂದು. ಆಗ ಅವರು ಕೊಟ್ಟ ಉತ್ತರ- ‘ರಾಜಕೀಯ ಭಾಷಣ ಬೇರೆ, ವಾಸ್ತವದ ನೆಲೆಗಟ್ಟು ಬೇರೆ. ರಾಜಕಾರಣ ಕುರಿತು ಅನೇಕರು ನಾನಾ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅದಕ್ಕೆ ನಾನೂ ಹೊರತಲ್ಲ. ನಿಜ ಹೇಳಬೇಕೆಂದರೆ ಭಾರತಕ್ಕೆ ಆರೆಸ್ಸೆಸ್​ನಂತಹ ಸಂಘಟನೆ ಬೇಕು. ಹತ್ತಾರು ಭಾಷೆ, ಮತ, ಸಮುದಾಯ, ಸಂಸ್ಕೃತಿ, ನೂರಾರು ಜಾತಿ, ಸಹಸ್ರಾರು ದೇವರು, ಆಚರಣೆ, ನಂಬಿಕೆ ಹೊಂದಿರುವ ದೇಶದಲ್ಲಿ ಅವನ್ನೆಲ್ಲ ಸಂಕುಚಿತ, ಕ್ಷಣಿಕ ಲಾಭಕ್ಕೆ, ಸ್ವಾರ್ಥಕ್ಕೆ ಬಳಸಿಕೊಳ್ಳುವವರ ನಡುವೆ ಈ ಮೇಲೆ ಹೇಳಿದ ಎಲ್ಲ ಭಿನ್ನತೆಗಳನ್ನು ಬದಿಗಿಟ್ಟು ಒಟ್ಟಾಗಿ ಜೋಡಿಸಿ ದೇಶವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಆರೆಸ್ಸೆಸ್ ಬೇಕೇಬೇಕು, ಅದನ್ನು ಬ್ಯಾನ್ ಮಾಡುವುದು ಅಥವಾ ಮಾಡುತ್ತೇನೆಂದು ಹೇಳುವುದು ಕೂಡ ಮೂರ್ಖತನ’ ಎಂದು.

ಸೆಕ್ಯುಲರ್ ವಾದವನ್ನು ಪ್ರತಿಪಾದಿಸುವ ನಾಯಕರೂ ಸೇರಿ ಎಲ್ಲರೂ ಸಾರ್ವಕಾಲಿಕವಾಗಿ ಈ ವಾಸ್ತವವನ್ನು ನೆನಪಿಟ್ಟುಕೊಳ್ಳಬೇಕು. ಹೆಗಡೆ ಹೀಗೆ ಹೇಳಿದ್ದು ಮಾತ್ರವಲ್ಲ, ಸೆಕ್ಯುಲರ್ ರಾಜಕಾರಣದ ಸ್ವಾರ್ಥಕೇಂದ್ರಿತ ಆಟಾಟೋಪ ಮಿತಿಮೀರಿದಾಗ ಅವರು ಮೌನಕ್ಕೆ ಜಾರಿದರು. ಅಂಥವರಿಂದ ದೂರ ಸರಿದರು. ಅವರ ರಾಜಕಾರಣದ ಇಳಿಹೊತ್ತಿನಲ್ಲಿ ತುರ್ತು ಪರಿಸ್ಥಿತಿ ಕಾಲದ ಸುವರ್ಣಯುಗದ ಸ್ನೇಹ, ಪ್ರೀತಿ ಬಂಧವನ್ನು ನೆನೆದು ಲಾಲಕೃಷ್ಣ ಆಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಅವರಂತಹ ಪ್ರಖರ ರಾಷ್ಟ್ರವಾದದ ನಾಯಕರ ಸಖ್ಯ ಮತ್ತು ಸಾಮೀಪ್ಯವನ್ನು ಗಳಿಸಿದರು. ಇಂದು ಅಂಥ ಮುತ್ಸದ್ದಿತನ ಅಥವಾ ಮಾಗಿದ ಚಿಂತನೆಯನ್ನು ಇಂದಿನ ನಾಯಕರಿಂದ ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರಿಯಾಂಕ ಖರ್ಗೆ ಮಾತನಾಡಿದರೆ ಬೇಸರವಿಲ್ಲ, ಸಿದ್ದರಾಮಯ್ಯನವರಂಥ ಹಿರಿಯ ವ್ಯಕ್ತಿ ಆರೆಸ್ಸೆಸ್ ಬಗ್ಗೆ ಆಡುವ ಮಾತು ಸಹಜವಾಗಿ ಬೇಸರ ತರಿಸುತ್ತದೆ. ಇಷ್ಟಾದರೂ ಈಗ ವ್ಯಕ್ತಿಗತ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿ ಪ್ರಯೋಜನವಿಲ್ಲ. ಬದಲಾಗಿ ಅವರು ಮುಂದಿಡುತ್ತಿರುವ ವಿತಂಡವಾದಗಳಲ್ಲಿ ಪ್ರಮುಖವಾದವನ್ನು ರ್ಚಚಿಸುವುದು ಉಚಿತ. ರಾಜಕೀಯ ಸಂಘಟನೆಯೇ?: ಆರೆಸ್ಸೆಸ್ ರಾಜಕೀಯ ಸಂಘಟನೆಯಲ್ಲ, ಸಾಂಸ್ಕೃತಿಕ ಸಂಘಟನೆ. ಆರೆಸ್ಸೆಸ್ ಹೇಳುವುದೂ ಅದನ್ನೇ, ಸ್ಥಳೀಯ ನ್ಯಾಯಾಲಯಗಳಿಂದ ಹಿಡಿದು ವಿವಿಧ ಹೈಕೋರ್ಟ್, ಸುಪ್ರೀಂಕೋರ್ಟ್ ವ್ಯಾಖ್ಯಾನ, ತೀರ್ಪಗಳೂ ಅದನ್ನೇ ಹೇಳಿವೆ.

ಆರೆಸ್ಸೆಸ್-ಬಿಜೆಪಿ ಸಂಬಂಧ ಏನು?: ಆರೆಸ್ಸೆಸ್ ಆಚಾರ-ವಿಚಾರದಿಂದ ಪ್ರೇರೇಪಿತ ವ್ಯಕ್ತಿಗಳು ಒಂದೆಡೆ ಸೇರಿ ರಾಜಕೀಯದಲ್ಲಿ ಪರಿವರ್ತನೆ ತರುವ ಉದ್ದೇಶದಿಂದ ಆರಂಭಿಸಿದ ರಾಜಕೀಯ ಸಂಘಟನೆ ಭಾರತೀಯ ಜನಸಂಘ. ನಂತರ ಅದು ಭಾರತೀಯ ಜನತಾ ಪಾರ್ಟಿ ಆಯಿತು. ಈಗಲೂ ಬಿಜೆಪಿಯು ಸಂಘವನ್ನು ನೆಚ್ಚಿಕೊಂಡಿದೆಯೇ ಹೊರತು ಸಂಘವು ಬಿಜೆಪಿಯನ್ನು ನೆಚ್ಚಿಕೊಂಡಿಲ್ಲ. ಮುಖ್ಯವಾಗಿ ಆರೆಸ್ಸೆಸ್ ಬಿಜೆಪಿ ನಿಯಂತ್ರಕ ಅಥವಾ ಸೂತ್ರಧಾರ ಅಲ್ಲ. ಎಲ್ಲರೂ ಗಮನಿಸಬೇಕಾದದ್ದೆಂದರೆ ಎಲ್ಲ ಪಕ್ಷಗಳಲ್ಲೂ ಆರೆಸ್ಸೆಸ್​ನಿಂದ ಪ್ರಭಾವಿತರಾದ ಸಮರ್ಥ ದೇಶಭಕ್ತ ಕಾರ್ಯಕರ್ತರು, ನಾಯಕರು, ಮತದಾರರು, ಬೆಂಬಲಿಗರು ಇರಬೇಕೆಂದು ಸಂಘ ಬಯಸುತ್ತದೆ. ಆದರೆ ಅಲ್ಪಸಂಖ್ಯಾತ ತುಷ್ಟೀಕರಣಕ್ಕೆ ಜೋತುಬಿದ್ದ ಸ್ವಘೊಷಿತ ಸೆಕ್ಯುಲರ್ ಪಕ್ಷಗಳಿಗೆ ಆರೆಸ್ಸೆಸ್​ನ ಈ ಚಿಂತನೆ ಒಗ್ಗದೆ ದೂರ ಉಳಿಯುತ್ತವೆ. ಅಂಥವರಿಗೆ ಆರೆಸ್ಸೆಸ್ ವಿರೋಧಿಯಂತೆ ಭಾಸವಾಗುತ್ತದೆ. ಇದರಲ್ಲಿ ಆರೆಸ್ಸೆಸ್ ಪಾತ್ರ ಅಥವಾ ಪ್ರಮಾದ ಏನು ಎಂಬುದು ಎಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆ.

ಆರೆಸ್ಸೆಸ್ ಜಾತೀಯ ಸಂಘಟನೆಯೇ?: ಮೂಲಭೂತವಾಗಿ ಆರೆಸ್ಸೆಸ್ ವಿಷಯದಲ್ಲಿ ಇದೊಂದು ಬಹುದೊಡ್ಡ ಮಿಥ್ಯೆ. ಆರೆಸ್ಸೆಸ್ ಎಂದೂ, ಯಾರ ಬಳಿಯೂ ಜಾತಿಯನ್ನು ಕೇಳುವುದಿಲ್ಲ. ಕಾರಣ ಆರೆಸ್ಸೆಸ್​ನಲ್ಲಿ ಹಿಂದುತ್ವದ ಬಂಧುತ್ವ ಇದೆಯೇ ಹೊರತು ಜಾತಿ ಆಧಾರಿತ ಮಾನ್ಯತೆ ಅಲ್ಲ. ಯಾವುದೇ ಸ್ವಯಂಸೇವಕ ಅಥವಾ ಸದಸ್ಯರನ್ನು ಜಾತಿಯಿಂದ ಗುರುತಿಸುವುದಿಲ್ಲ. ಆರೆಸ್ಸೆಸ್ ಸಭೆ ಸಮಾರಂಭಗಳಲ್ಲಿ ಆಸನ ವ್ಯವಸ್ಥೆ ಮಾಡುವುದಾಗಲಿ, ಪಥಸಂಚಲನಗಳಲ್ಲಿ ಸಾಲು ಮಾಡಿಸುವುದಾಗಲಿ ಅದು ಅವರವರ ದೈಹಿಕ ಎತ್ತರದ ಆಧಾರದ ಮೇಲೆಯೇ ಹೊರತು ವ್ಯಕ್ತಿಯ ಜಾತಿ, ಹುದ್ದೆ, ಸ್ಥಾನಮಾನ ಅಥವಾ ಅಂತಸ್ತಿನ ಮೇಲಲ್ಲ. 1940ರ ದಶಕದಲ್ಲಿ ಸಂಘದ ಶಿಬಿರಕ್ಕೆ ಭೇಟಿ ನೀಡಿದ್ದ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಅವರು ಅಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ‘ನಿಮ್ಮ ಜಾತಿ ಯಾವುದು’ ಎಂದು ಕೇಳಿದಾಗ ‘ನಮ್ಮನ್ನು ಇಲ್ಲಿ ಜಾತಿಯಿಂದ ಗುರುತಿಸುವುದಿಲ್ಲ, ನಾವು ಜಾತಿಯನ್ನು ನೆನಪಿಸಿಕೊಂಡೇ ಇರಲಿಲ್ಲ’ ಎಂಬ ಉತ್ತರ ಆ ಇಬ್ಬರೂ ಮಹಾನ್ ವ್ಯಕ್ತಿಗಳನ್ನು ಪುಳಕಿತರನ್ನಾಗಿ ಮಾಡಿ ಆರೆಸ್ಸೆಸ್ ಬಗ್ಗೆ ಅವರ ನಿಲುವನ್ನೇ ಬದಲಿಸುವ ಹಾಗೆ ಮಾಡಿತು ಎಂಬುದನ್ನು ಇತಿಹಾಸ ಹೇಳುತ್ತದೆ. ಪ್ರಮುಖವಾಗಿ ಗಮನಿಸಬೇಕಾದ ಸಂಗತಿ ಎಂದರೆ, ಕಳೆದ ನೂರು ವರ್ಷಗಳಲ್ಲಿ ಜಾತಿಯನ್ನು ಕೇಳದೆ ಹುದ್ದೆ ಅಥವಾ ಜವಾಬ್ದಾರಿ ನೀಡಿದ ಯಾವುದಾದರೂ ಒಂದು ಸಂಘಟನೆ ಇದ್ದರೆ ಅದು ಆರೆಸ್ಸೆಸ್ ಮಾತ್ರ. ಇಷ್ಟಾದರೂ ಆರೆಸ್ಸೆಸ್ ಜಾತೀಯ ಸಂಘಟನೆ ಎಂಬ ಮಿಥ್ಯಾರೋಪ ಅವ್ಯಾಹತವಾಗಿ ನಡೆದೇ ಇದೆ. ಇರಲಿ, ನಿಂದಕರಿರಬೇಕು.

ಆರೆಸ್ಸೆಸ್ ಲಾಠಿ, ಹಿಂಸೆಗೆ ಪ್ರಚೋದಕವೇ?: ಮೂಲಭೂತವಾಗಿ ಭಕ್ತಿಯನ್ನು ಆದರಿಸುವ ಮತ್ತು ಶಕ್ತಿಯನ್ನು ಆರಾಧಿಸುವ ದೇಶ ಭಾರತ. ಅದೇ ಆಧಾರದಲ್ಲಿ ಪ್ರತಿ ವ್ಯಕ್ತಿಯಲ್ಲಿ ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಮತ್ತು ದೈಹಿಕ, ಮಾನಸಿಕ ಶಕ್ತಿ ಸಾಮರ್ಥ್ಯವನ್ನು ಬೆಳೆಸುವ ಕಾಯಕದಲ್ಲಿ ಆರೆಸ್ಸೆಸ್ ನೂರು ವರ್ಷಗಳಿಂದ ತೊಡಗಿಸಿಕೊಂಡಿದೆ. ನಮ್ಮ ದೇವ-ದೇವತೆಗಳ ಕೈಯಲ್ಲಿರುವ ಆಯುಧಗಳು ಶಕ್ತಿಯ ಸಂಕೇತ. ಶಿಷ್ಟರ ರಕ್ಷಣೆ, ದುಷ್ಟರ ದಮನದ ಸೂಚಕವೂ ಹೌದು. ಆ ಶಕ್ತಿ ಸಂಕೇತಗಳು ನಮ್ಮ ಆತ್ಮಶಕ್ತಿ ಬೆಳೆಸುವುದಕ್ಕೂ ಕಾರಣ ಆಗುತ್ತವೆ. ಅದೇ ರೀತಿ ಕಾನೂನಾತ್ಮಕವಾಗಿ ಸಾಂಘಿಕ ರಕ್ಷಣೆಗೆ ಪೊಲೀಸರಿಗೆ, ಸೈನಿಕರಿಗೆ ಶಸ್ತ್ರಾಸ್ತ್ರ ಪೂರೈಕೆ, ವೈಯಕ್ತಿಕ ರಕ್ಷಣೆಗೆ ಶಸ್ತ್ರಾಸ್ತ್ರ ಹೊಂದುವ ಅವಕಾಶ, ಆತ್ಮರಕ್ಷಣೆಗೆ ಕರಾಟೆ ಇತ್ಯಾದಿ ಕಲೆಗಳನ್ನು ಕರಗತ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಇದೆಲ್ಲದರ ಸಂಜ್ಞೆ ಅಥವಾ ಸಂಕೇತ ನಮ್ಮ ರಕ್ಷಣೆಯೇ ಹೊರತು ಬೇರೆಯವರ ಮೇಲೆ ದಾಳಿ ಮಾಡುವ ಉದ್ದೇಶವಲ್ಲ. ಆರೆಸ್ಸೆಸ್ ಸ್ವಯಂಸೇವಕರು ಬಳಸುವ ಲಾಠಿ ಕೂಡ ಆತ್ಮಸ್ಥೈರ್ಯ ಹೆಚ್ಚಿಸುವ, ಆತ್ಮರಕ್ಷಣೆ ಮಾಡಿಕೊಳ್ಳುವ ಕಲೆಯನ್ನು ಕಲಿಸುವ ಉದ್ದೇಶವೇ ಹೊರತು ದೊಂಬಿ ಮಾಡುವ ಉದ್ದೇಶದ್ದಲ್ಲ, ನೂರು ವರ್ಷದಲ್ಲಿ ಅಂತಹ ಒಂದೇ ಒಂದು ಉದಾಹರಣೆಯೂ ಸಿಗುವುದಿಲ್ಲ. ಕುಹಕವಾಡುವ ಮಹಾನುಭಾವರು ಇದನ್ನು ಅರಿಯಬೇಕು.

ಭಗವಾಧ್ವಜ/ರಾಷ್ಟ್ರಧ್ವಜ: ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ ಎನ್ನುವವರು ತಿಳಿಯಬೇಕಾದ ವಿಷಯವೊಂದಿದೆ. ಆರೆಸ್ಸೆಸ್ ಸಂಸ್ಥಾಪಕ ಡಾ. ಹೆಡಗೇವಾರ್ ಮಹಾರಾಷ್ಟ್ರ ಪ್ರಾಂತದ ಕಾಂಗ್ರೆಸ್ ಪ್ರಮುಖರಾಗಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲೂ ಭಾಗವಹಿಸಿದ್ದರು. ಆಗಲೇ ಹಾದಿತಪ್ಪಿದ್ದ ಕಾಂಗ್ರೆಸ್​ನಿಂದ ಸ್ವಾತಂತ್ರ್ಯೋತ್ತರ ಭಾರತಕ್ಕೆ ಎದುರಾಗುವ ಅಪಾಯವನ್ನರಿತೇ ಹೆಡಗೇವಾರ್ ಕಾಂಗ್ರೆಸ್ ತೊರೆದು ಆರೆಸ್ಸೆಸ್ ಸ್ಥಾಪನೆ ಮಾಡಿದ್ದು. ಇದನ್ನು ಕಾಂಗ್ರೆಸ್ ನಾಯಕರು ತಿಳಿದುಕೊಳ್ಳಬೇಕಿದೆ. ಹೆಡಗೇವಾರರ ಆ ದೂರದೃಷ್ಟಿ ಈಗ ನಿಚ್ಚಳವಾಗುತ್ತಿದೆ ಅಲ್ಲವೇ? ಆನಂತರದ್ದು ರಾಷ್ಟ್ರಧ್ವಜದ ಪ್ರಶ್ನೆ. ಸ್ವಾತಂತ್ರ್ಯದ ನಂತರ ತೀರಾ ಇತ್ತೀಚಿನ ವರ್ಷಗಳವರೆಗೆ ರಾಷ್ಟ್ರಧ್ವಜವನ್ನು ಖಾಸಗಿ ಸ್ಥಳಗಳಲ್ಲಿ ಹಾರಿಸಲು ಧ್ವಜಸಂಹಿತೆಯಲ್ಲಿ ಅವಕಾಶ ಇರಲಿಲ್ಲ. ಈ ನಿಯಮ ಬದಲಿಸಿದ ಬಳಿಕ ಆರೆಸ್ಸೆಸ್ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ತಪ್ಪದೇ ನಡೆಯುತ್ತಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಷ್ಟ್ರಧ್ವಜ ಪ್ರತಿ ಮನೆಗೂ ತಲುಪುವ ಹಾಗಾಗಿದೆ. ಹಾಗೆಯೇ ಭಗವಾಧ್ವಜದ ವಿಚಾರ. ತ್ಯಾಗ, ಸಮರ್ಪಣೆಯ ಸಂಕೇತವಾದ ಭಗವಾಧ್ವಜವನ್ನು ಆರೆಸ್ಸೆಸ್ ನೂರು ವರ್ಷದ ಹಿಂದೆಯೇ ಗುರುವೆಂದು ಸ್ವೀಕರಿಸಿದೆ. ಪುರಾಣದ ಹನುಮ, ಮಹಾಭಾರತದ ಅರ್ಜುನನಿಂದ ಹಿಡಿದು ರಾಜಮಹಾರಾಜರ ರಥಗಳ ಆದಿಯಾಗಿ ಅಂದಿನಿಂದ ಇಂದಿನವರೆಗಿನ ದೇವಾಲಯಗಳವರೆಗೆ ಎಲ್ಲರೂ, ಎಲ್ಲೆಡೆ ಬಳಸಿದ್ದು ಭಗವಾಧ್ವಜವನ್ನೇ. ನೆಹರು, ಗಾಂಧಿ ಮನೆತನದವರ ಪೂಜಕರಿಗೆ ಇದೆಲ್ಲಿ ಅರ್ಥವಾಗಬೇಕು? ಅವರು ಪ್ರಶ್ನೆ ಮಾಡುವುದು ಸಹಜ ಅನ್ನಿ!

ಸರ್ಕಾರಿ ನೌಕರರೂ ಭಾರತದ ಪ್ರಜೆಗಳಲ್ಲವೇ?: ಸಂಘವನ್ನು ನಿಷೇಧಿಸುವ ಕಾಂಗ್ರೆಸ್ ಪಕ್ಷದ ಯತ್ನ ಇದೇ ಮೊದಲಲ್ಲ. ಪ್ರತಿ ನಿಷೇಧದವನ್ನೂ ನ್ಯಾಯಾಲಯ ತೆರವು ಮಾಡಿದ್ದು, ‘ಆರೆಸ್ಸೆಸ್ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿಲ್ಲ, ಅದೊಂದು ಸಾಂಸ್ಕೃತಿಕ ಸಂಘಟನೆ’ ಎಂಬ ಎರಡು ಅಂಶಗಳನ್ನು ಒತ್ತಿ ಹೇಳಿದೆ. ಹಾಗಾದರೆ ಸರ್ಕಾರಿ ಜಾಗ ಮತ್ತು ಸರ್ಕಾರಿ ನೌಕರರಿಗೆ ಆರೆಸ್ಸೆಸ್ ನಿರ್ಬಂಧವೇಕೆ? ವರ್ತಮಾನಕ್ಕೆ ಬರುವುದಾದರೆ ಸಂಘ ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಲ್ಲಿ ಪಂಚ ಪರಿವರ್ತನೆ ಘೊಷಣೆ ಅಡಿಯಲ್ಲಿ ಐದು ಆಯಾಮಗಳಲ್ಲಿ ರಾಷ್ಟ್ರದ ಸಶಕ್ತೀಕರಣ ಕಾರ್ಯಕ್ಕೆ ಮುಂದಾಗಿದೆ. ಅವುಗಳಲ್ಲಿ ಮುಖ್ಯವಾದದ್ದು ಸಾಮಾಜಿಕ ಸಾಮರಸ್ಯ ಕಾಪಾಡುವುದು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಜಾತಿ ತಾರತಮ್ಯ ದೂರವಾಗದೆ ಇರುವುದನ್ನು ಆರೆಸ್ಸೆಸ್ ಗಂಭೀರವಾಗಿ ಪರಿಗಣಿಸಿದೆ. ಅಸ್ಪೃಶ್ಯತೆ ಹಿಂದೂ ಸಮಾಜದ ಏಕತೆಗೆ ಕಂಟಕ. ಜಾತಿ ವ್ಯವಸ್ಥೆ ತಾರತಮ್ಯಕ್ಕೆ ಕಾರಣ ಆಗಲೇಬಾರದು. ದೇವಸ್ಥಾನ, ಸ್ಮಶಾನ ಮತ್ತು ಜಲಮೂಲಗಳ ಬಳಕೆಯಲ್ಲಿ ತಾರತಮ್ಯ ಸಲ್ಲದು ಎಂಬ ಸ್ಪಷ್ಟ ನಿಲುವನ್ನು ಹೊಂದಿ ಆ ಕುರಿತಾದ ಪರಿವರ್ತನೆಗೆ ಆರೆಸ್ಸೆಸ್ ಟೊಂಕ ಕಟ್ಟಿದೆ.

ಹಾಗೆಯೇ ಮತ್ತೊಂದು ಸಂಗತಿ ನಾಗರಿಕ ಶಿಷ್ಟಾಚಾರ ಪಾಲನೆ ಜಾಗೃತಿ ಕೆಲಸ. ಸಂವಿಧಾನದತ್ತವಾಗಿ ಲಭ್ಯವಾಗಿರುವ ಮೂಲಭೂತ ಹಕ್ಕಿನ ಬಗ್ಗೆ ಮಾತನಾಡುವ ಮೊದಲು ಗಮನಿಸಬೇಕಾದ ನಾಗರಿಕ ಕರ್ತವ್ಯ ಪಾಲನೆ ಮಹತ್ವವನ್ನು ಪ್ರತಿ ವ್ಯಕ್ತಿಗೆ ತಿಳಿಸಿಕೊಡುವುದು. ಉಳಿದಂತೆ ಕೌಟಂಬಿಕ ಮೌಲ್ಯಗಳ ಉದ್ದೀಪನ, ಸ್ವದೇಶಿ ಭಾವನೆ ಜಾಗೃತಿ, ಪರಿಸರ ಸಂರಕ್ಷಣೆವರೆಗೆ ಎಲ್ಲ ಮಹತ್ವದ ಸಂಗತಿಗಳ ಕಡೆ ಸಂಘ ಗಮನ ಕೇಂದ್ರೀಕರಿಸಿದೆ. ಸಂವಿಧಾನದ ವಾರಸುದಾರ ಎನ್ನುವ ಕಾಂಗ್ರೆಸ್ ಎಂದಾದರೂ ಈ ಯಾವುದಾದರೂ ಒಂದು ಸಂಗತಿ ಕುರಿತಾಗಿ ಕಿಂಚಿತ್ತಾದರೂ ತಲೆಕೆಡಿಸಿಕೊಂಡಿದೆಯೇ ಕೊನೆಯದಾಗಿ ಒಂದು ಮಾತು. ಆರೆಸ್ಸೆಸ್​ನಂತಹ ಸಂಘಟನೆ ಇದ್ದರೆ, ಬಿಜೆಪಿಯ ಹಾಗೆ ತಾನೂ ಅಧಿಕಾರ ಹಿಡಿಯಬಹುದೆಂಬ ಆಸೆ ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳಲ್ಲಿ ಅನೇಕ ಬಾರಿ ಮೂಡಿದ್ದಿದೆ.

ಆ ಕಾರಣಕ್ಕಾಗಿ ನಾವು ಆರೆಸ್ಸೆಸ್​ನ ಹಾಗೆ ಸಂಘಟನೆ ಮಾಡಬೇಕೆಂದು ಅನೇಕ ಬಾರಿ ಮಹಾ ಮಹಾ ನಾಯಕರೇ ಮಾತನಾಡಿದ ಉದಾಹರಣೆ ಇದೆ. ಆದರೆ ಆರೆಸ್ಸೆಸ್ ಸಮರ್ಪಣೆಯಿಂದ ಬೆಳೆದ ಸಂಘಟನೆ. ಸುಖದಿಂದ ಆರಾಮಾಗಿ ಬೆಳೆದದ್ದಲ್ಲ. ಅಧಿಕಾರದಿಂದ ಅಥವಾ ಅಧಿಕಾರಕ್ಕಾಗಿ ಬೆಳೆದದ್ದೂ ಅಲ್ಲ. ಹೀಗಾಗಿ ಆರೆಸ್ಸೆಸ್​ನ ಹಾಗೆ ಬೆಳೆಯುವುದು ಆ ಪಕ್ಷಗಳ ಪಾಲಿಗೆ ಕನಸಿನ ಮಾತಾಗಿಯೇ ಉಳಿದಿದೆ. ಆರೆಸ್ಸೆಸ್ ಅಂಥವರ ಪಾಲಿಗೆ ಹುಳಿ ದ್ರಾಕ್ಷಿ! ಅಂತೆಯೇ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಕಾಂಗ್ರೆಸ್ ಸೇವಾದಳ ಸಂಘಟನೆ ಆರಂಭಿಸಿದ್ದಕ್ಕೂ ಆರೆಸ್ಸೆಸ್ ಮಾದರಿ ಆಗಿತ್ತು. ಆದರೆ ಇಂದು ಅದೇ ಸೇವಾದಳದ ಕತೆ ಏನಾಗಿದೆ? ಆರೆಸ್ಸೆಸ್ ದೂಷಿಸುವವರು, ನಿರ್ಬಂಧಿಸಲು ಹವಣಿಸುವವರು ಆ ಬಗ್ಗೆ ಯೋಚನೆ ಮಾಡಿದರೆ ಒಳಿತು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net