

| ಡಾ.ಕೆ.ಎಸ್. ಪವಿತ್ರ ಮನೋವೈದ್ಯೆ
ಬಸ್ ಸ್ಟ್ಯಾಂಡ್ನಲ್ಲೋ, ರೈಲ್ವೆ ಸ್ಟೇಷನ್ನಲ್ಲೋ ಇದ್ದಾಗ ಫೋನ್ ಬದಿಗಿಟ್ಟು, ಕೆಲನಿಮಿಷ ಸುತ್ತಮುತ್ತ ನೋಡಿ. ಹೆಚ್ಚಿನವರ ತಲೆ ತಗ್ಗಿರುತ್ತದೆ, ಬೆರಳು ‘ಸ್ವೈಪ್’ ಮಾಡುತ್ತಿರುತ್ತದೆ. ಕಣ್ಣು ಆಗಾಗ ಮೆಸೇಜ್ ಪರೀಕ್ಷಿಸುತ್ತಿರುತ್ತದೆ. ಒಬ್ಬರೊಂದಿಗೆ ಇನ್ನೊಬ್ಬ ವ್ಯಕ್ತಿ ಇದ್ದಂತೆ, ಪ್ರತಿಯೊಬ್ಬರ ಜೊತೆಗಾರ ಮೊಬೈಲ್! ‘‘ಪ್ರತಿದಿನ ಎಷ್ಟು ಗಂಟೆಗಳ ಕಾಲ ಮೊಬೈಲ್ ಬಳಸುತ್ತೀರಿ?’ ಎಂಬ ಪ್ರಶ್ನೆಗೆ ಬಹುಜನರು ‘‘ಅರ್ಧಗಂಟೆ’ ಎಂಬ ಉತ್ತರ ನೀಡುತ್ತಾರೆ. ಆದರೆ ಪ್ರತಿಯೊಬ್ಬರ ಅಂದಾಜು ಮೊಬೈಲ್ ಬಳಕೆ ಇಂದು 2ರಿಂದ 8 ಗಂಟೆಗಳು! 10 ವರ್ಷಗಳ ಹಿಂದೆ ಇದ್ದ ಸಂದೇಶಗಳನ್ನು ಪಡೆದುಕೊಳ್ಳುವ ಸಾಧ್ಯತೆಗಿಂತ ಇಂದು 427% ಸಂದೇಶಗಳ ಗ್ರಹಿಕೆ ಹೆಚ್ಚಿದೆ. ಹಿಂದಿನ ದಿನಗಳಿಗಿಂತ ಇಂದಿನ ಜನರು 278% ಹೆಚ್ಚು ಮೆಸೇಜ್ ಕಳಿಸುತ್ತಾರೆ.
ಮತ್ತೆ ಮತ್ತೆ ಸ್ಕ್ರೀನ್ ನೋಡಬೇಕು, ಯಾರಾದರು ಮೆಸೇಜ್ ಕಳಿಸಿದ್ದಾರೆಯೋ ನೋಡೋಣ ಎಂಬ ತುಡಿತ ಮೊಬೈಲ್ ಬಳಕೆಯಲ್ಲಿ ಕಂಡು ಬರುತ್ತದೆ. ಮೊಬೈಲ್ ಚಾರ್ಜ್ ಮುಗಿಯುತ್ತಾ ಬಂದರೆ ಎಂಬ ಆತಂಕ ಪ್ರಯಾಣ ಮಾಡುವಾಗ ತಲೆದೋರುವುದು ಕೇವಲ ಕರೆ ಮಾಡಲಲ್ಲ, ಬದಲಾಗಿ ಆಡಲಾಗುವುದಿಲ್ಲ/ವಿಡಿಯೋ ನೋಡಲಾಗುವುದಿಲ್ಲ ಎಂಬ ಚಡಪಡಿಕೆಗಳಿಂದ. ಅಂದರೆ ಇವೆಲ್ಲವನ್ನು ನೋಡಿದರೆ ಮೊಬೈಲ್ ಬಳಕೆ ‘ವ್ಯಸನ’ ಎಂಬ ಅರ್ಹತೆ ಗಳಿಸಲು ಸುಲಭವಾಗಿ ಸಿದ್ಧವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ನಿದ್ರಾಹೀನತೆ: ನಿದ್ರಾ ಹೀನತೆಯ ಪ್ರಮುಖ ಕಾರಣ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ. ದೀಪ ಆರಿಸಿ ಹಾಸಿಗೆ ಮೇಲೆ ಮಲಗಿ ವಾಟ್ಸ್ ಆಪ್/ಫೇಸ್ಬುಕ್ ನೋಡುವುದು ಬಹುಜನರ ಅಭ್ಯಾಸ. ಮೊಬೈಲ್ ತೆರೆಯ ಬೆಳಕು, ಮಾಹಿತಿಯ ಮಹಾಪೂರ ಎರಡೂ ಸೇರಿ ಮಿದುಳಿನ ನಿದ್ರಾಕೇಂದ್ರಗಳನ್ನು ಕೆಲಸ ಮಾಡಲು ಬಿಡುವುದಿಲ್ಲ. ಪರಿಣಾಮ ನಿದ್ರಾಹೀನತೆ.
ಕೆಲವೊಂದು ಮೊಬೈಲ್ ಅನ್ನು ನಿಮ್ಮ ನಿಯಂತ್ರಣದಲ್ಲಿರಿಸುವ ಪ್ರಯತ್ನಕ್ಕೆ ತೊಡಗಬೇಕು. ಬೋರ್ ಆದಾಗ, ಯಾವ ಚಟುವಟಿಕೆಯೂ ಇಲ್ಲದೆ ಕುಳಿತಾಗ ಮೊಬೈಲ್ ತೆಗೆದು ನೋಡುವುದನ್ನು ನಿಲ್ಲಿಸಿ. ಬದಲಾಗಿ, ಆಟ-ವ್ಯಾಯಾಮ-ನಡಿಗೆಯಂತಹ ದೈಹಿಕ ಚಟುವಟಿಕೆಯೆಡೆಗೆ ತಿರುಗಿ. ಸಭೆಗಳಲ್ಲಿರುವಾಗ ಮೊಬೈಲ್ ಬದಿಗಿಟ್ಟು ಮಾತನಾಡಿ ಬೆರೆಯುವ ನಿಯಮ ಪಾಲಿಸಬೇಕು. ಯಾವುದೋ ಮುಖ್ಯ ಸಂದೇಶ ತಪ್ಪಿಹೋದರೆ ಎಂಬ ಆತಂಕ ಬೇಡವೇ ಬೇಡ. ಹಾಗೊಮ್ಮೆ ಅಂಥ ತುರ್ತಿನ ಸಂದೇಶವಾದರೆ ನಿಮ್ಮನ್ನು ಹೇಗಾದರೂ ಸಂರ್ಪಸುತ್ತಾರೆ ಎಂಬುದು ಸತ್ಯದ ಮಾತು. ಕೆಲಸದ ಸಮಯದಲ್ಲಿ ಮತ್ತು ನಿದ್ರೆ ಮಾಡುವ ಸಮಯದಲ್ಲಿ ಡೇಟಾ ಆಫ್ ಮಾಡಿ. ಹಾಸಿಗೆ ಮೇಲೆ ಮಲಗಿ ಮೊಬೈಲ್ ನೋಡುವ ಅಭ್ಯಾಸ ಬೇಡವೇ ಬೇಡ. ಸ್ನೇಹಿತರಿಗೆ ಮೆಸೇಜ್ ಮಾಡುವ ಬದಲು ಕರೆ ಮಾಡಿ ಮಾತನಾಡಿ. ಮೊಬೈಲ್ ಬಳಕೆ ವ್ಯಸನವಾಗಿ, ವ್ಯಸನ ಮುಕ್ತಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ಸೇರುವ ಸ್ಥಿತಿಯಲ್ಲಿ ಇಡೀ ಸಮಾಜ ಮುನ್ನಡೆಯುತ್ತಿರುವಂತಿದೆ. ಅಂತಹ ಪರಿಸ್ಥಿತಿ ಬರುವ ಮೊದಲೇ ಎಚ್ಚೆತ್ತುಕೊಳ್ಳೋಣ, ಮೊಬೈಲ್ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸೋಣ!!