ಆಹಾರ ಪೋಲಾಗದಿರಲಿ: ಮನೋಲ್ಲಾಸ

Food Waste
Published on
| ರಾಮ ಸುಬ್ರಾಯ ಶೇಟ್ 
ಅಂತಾರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ರಾಜೇಶನಿಗೆ ಕೈತುಂಬಾ ಸಂಬಳವಿತ್ತು. ಸ್ಪುರದ್ರೂಪಿ ಯುವಕನಾಗಿದ್ದ. ಆತನಿಗೆ ಮದುವೆ ಮಾಡಲು ತಂದೆ-ತಾಯಿ ಹೆಣ್ಣನ್ನು ನಿಶ್ಚಯಿಸಿದರು. ಮಾತುಕತೆ ಮುಗಿದು, ಊಟ ಮುಗಿಸಿ ಮರುದಿನ ಲಗ್ನಪತ್ರಿಕೆಶಾಸ್ತ್ರವೆಂದು ನಿರ್ಣಯಿಸಿ ಮನೆಗೆ ಮರಳಿದರು. ಸಂಜೆ ಹೆಣ್ಣಿನ ತಂದೆಯಿಂದ ರಾಜೇಶನ ತಂದೆಗೆ ದೂರವಾಣಿ ಕರೆ ಬಂತು.

‘ನಮ್ಮ ಮಗಳು ನಿಮ್ಮ ಹುಡುಗನನ್ನು ಒಪ್ಪಲಿಲ್ಲ, ಕ್ಷಮಿಸಿ’ ಎಂದು ತಿಳಿಸಿದರು. ಇವರು ಗಾಬರಿಯಿಂದ, ‘ಏಕೆ, ಏನಾಯಿತು?’ ಎಂದು ಕೇಳಿದಾಗ, ‘ಬೇರೆ ಏನೂ ಇಲ್ಲ, ನಿಮ್ಮ ಮಗ ತಿಂಡಿ ತಿನ್ನುವಾಗಲೂ, ಊಟ ಮಾಡಿದ ಮೇಲೂ ಮುಷ್ಟಿ ಮುಷ್ಟಿ ಆಹಾರ ಬಿಟ್ಟು ಎದ್ದಿದ್ದನ್ನು ನಮ್ಮ ಮಗಳು ಗಮನಿಸಿದ್ದಾಳೆ. ನಮ್ಮ ಮನೆಯಲ್ಲಿ ತಟ್ಟೆಯಲ್ಲಿ ಒಂದು ಅಗುಳನ್ನೂ ಬಿಡುವಂತಿಲ್ಲ. ಹಾಗಾಗಿ ನೀವು ಬೇರೆ ಸಂಬಂಧ ನೋಡಿಕೊಳ್ಳಿ’ ಎಂದರು. ಅನೇಕರಿಗೆ ಆಹಾರಪದಾರ್ಥಗಳ ಮಹತ್ವದ ಅರಿವಿರುವುದಿಲ್ಲ. ಕೆಲವರು ಎಲ್ಲವನ್ನೂ ಬಳಿದು ತಿಂದರೆ ಪ್ರತಿಷ್ಠೆಯ ವಿಷಯವೆಂದು ತಿಳಿಯುತ್ತಾರೆ. ಅನೇಕ ಸಮಾರಂಭಗಳಲ್ಲಿ ಒಂದು ಸಾವಿರ ಜನ ಊಟ ಮಾಡಿದ ಮೇಲೆ ನೂರಿನ್ನೂರು ಜನರಿಗೆ ಸಾಲುವಷ್ಟು ಆಹಾರ ಹಾಳಾಗಿರುವುದನ್ನು ಕಾಣುತ್ತೇವೆ. ಒಂದು ವೇಳೆ ಯಾರಾದರೂ ಇದನ್ನು ಹೇಳಲು ಹೋದರೆ, ‘ನಿಮಗೇನ್ರೀ ಆಗಬೇಕು? ನಿಮ್ಮದೇನೂ ಹೋಗಿಲ್ಲವಲ್ಲ’ ಎಂಬ ಮುಖಭಂಗದ ಮಾತುಗಳನ್ನು ಕೇಳಬೇಕಾಗುತ್ತದೆ. ಎಷ್ಟು ತಿಂದರೂ ಆಕ್ಷೇಪವಿಲ್ಲ. ಆದರೆ, ತಟ್ಟೆಯಲ್ಲಿ ಬಡಿಸಿಕೊಂಡು ವ್ಯರ್ಥಮಾಡುವ ವಿಕೃತ ಬುದ್ಧಿಗೆ ಕಡಿವಾಣ ಹಾಕಲೇಬೇಕು.

ಇತ್ತೀಚೆಗೆ ವಿದೇಶದ ಹೋಟೆಲೊಂದರಲ್ಲಿ ಊಟ ಮಾಡಿದವನಿಗೆ 500ರ ಬದಲು 1000 ರೂ. ಮೊತ್ತದ ಬಿಲ್ಲು ನೀಡಿದಾಗ ಗ್ರಾಹಕ ಆಕ್ಷೇಪವೆತ್ತಿದ. ಅದಕ್ಕೆ ಮಾಲಿಕ, ಊಟದ ದರ 500. ಆದರೆ, ಆಹಾರಪದಾರ್ಥ ವ್ಯರ್ಥ ಮಾಡಿದ್ದಕ್ಕೆ 500 ರೂ. ದಂಡ’ ಎಂದಾಗ ಗ್ರಾಹಕ ತೆಪ್ಪಗೆ ಹಣ ನೀಡಿದ್ದು ಸುದ್ದಿಯಾಗಿದೆ. ಚಲನಚಿತ್ರ ನಿರ್ದೇಶಕರೊಬ್ಬರು ಪ್ರಸಿದ್ಧ ನಟನ ಮನೆಗೆ ಊಟಕ್ಕೆ ಬಂದಿದ್ದರು. ಊಟದ ಕೊನೆಯಲ್ಲಿ ಎಲೆಯಲ್ಲಿ ಬಿಟ್ಟ ಅನ್ನ ಉಣ್ಣುವಂತೆ ನಟ ವಿನಂತಿಸಿಕೊಂಡರು. ಆದರೆ ನಿರ್ದೇಶಕ ತಿರಸ್ಕರಿಸಿ ಎದ್ದಾಗ ನಟನು ಒಂದು ಪಾತ್ರೆಯಿಂದ ನೀರನ್ನು ಹಾಕಿಕೊಂಡು ಅನ್ನದ ಅಗುಳನ್ನು ಅದರಲ್ಲಿ ಮುಳುಗಿಸಿ ತಿನ್ನಲು ಮುಂದಾದ. ಆಗ ನಿರ್ದೇಶಕ ಓಡಿಬಂದು ಕೈಹಿಡಿದು, ತಪ್ಪಾಯಿತೆಂದು ಕೇಳಿಕೊಂಡು ಅನ್ನವನ್ನು ತಿಂದ ಘಟನೆ ನಡೆದಿದೆ. ಅನ್ನವನ್ನು ಬ್ರಹ್ಮವೆಂದಿದ್ದಾರೆ. ಕೋಟಿ ಕೋಟಿ ವೆಚ್ಚ ಮಾಡಿದರೂ ಪ್ರಯೋಗಶಾಲೆಯಲ್ಲಿ ಒಂದು ಹಿಡಿಧಾನ್ಯವನ್ನು ಸೃಷ್ಟಿಸಲಾರೆವು. ಹಾಗಾಗಿ ಸಮಾರಂಭಗಳಲ್ಲಾಗಲಿ, ಮನೆಯಲ್ಲಾಗಲಿ ಸ್ವಲ್ಪವೂ ಆಹಾರಪದಾರ್ಥ ಪೋಲಾಗದಂತೆ ಎಚ್ಚರ ವಹಿಸಬೇಕಾದದ್ದು ಅತ್ಯಗತ್ಯ.

(ಲೇಖಕರು ನಿವೃತ್ತ ಉಪನ್ಯಾಸಕರು, ಗಮಕಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net