

‘ದಯವಿಟ್ಟು ನನ್ನನ್ನ ಅರ್ಥಮಾಡ್ಕೊಳಿ’ ಅಂತಿರ್ತಾಳೆ ಆಕೆ. ಅವನು ಅರ್ಥಮಾಡಿಕೊಳ್ಳುವುದೇ ಇಲ್ಲ. ತುಂಬ ಸಲ ಹಾಗೆ ವಿನಂತಿಸಿ, ಪ್ರಯೋಜನವಾಗಲಿಲ್ಲವೆಂದು ಖಚಿತವಾದ ಮೇಲೆ ಆಕೆ ಉದ್ವೇಗವಿಲ್ಲದ ದನಿಯಲ್ಲಿ ಹೇಳುತ್ತಾಳೆ, ‘ಅರ್ಥಮಾಡಿಕೊಳ್ಳದಿದ್ದರೂ ಪರವಾಗಿಲ್ಲ: ಅಪಾರ್ಥ ಮಾಡಿಕೊಳ್ಳಬೇಡಿ ನನ್ನನ್ನ!’
ಸರಿಯಾಗಿ ಯೋಚಿಸಿದರೆ, ನಾವು ಇತರರಿಗೆ ಅರ್ಥವಾಗುವುದಕ್ಕಿಂತ ಹೆಚ್ಚು ಅಪಾರ್ಥವೇ ಆಗಿರುತ್ತೇವೆ. ನನ್ನ ವಿಷಯದಲ್ಲಂತೂ ಅದು ವರ್ಷಾಂತರಗಳಿಂದ ನಾನು ಗಮನಿಸುತ್ತ ಬಂದಿರುವ, ಅನುಭವಿಸುತ್ತ ಬಂದಿರುವ ಸತ್ಯ. ನಾನು ತುಂಬ ಬೇಗ ಅಪಾರ್ಥಕ್ಕೀಡಾಗುತ್ತೇನೆ. ಅದಕ್ಕೆ ಕಾರಣ ನನ್ನ ಸಿಗರೇಟಿನಂಥ ಅಭ್ಯಾಸಗಳಾ? ಮಾತಿನಲ್ಲಿನ ಒರಟುತನವಾ? ಬಾಡಿ ಲಾಂಗ್ವೇಜಾ? ಗೊತ್ತಿಲ್ಲ.
ಸರಿಯಾಗಿ ಕಸುಬು ಕಲಿಯದ ಹುಡುಗನನ್ನು ನಿಲ್ಲಿಸಿಕೊಂಡು ‘ಕತ್ತೆ ಮೇಯ್ಸೋಕೆ ಲಾಯಕ್ಕು ನೀನು’ ಅಂತ ಥಡಥಡ ಬೈದಿರುತ್ತೇನೆ. ಅವನು ಬೈಗುಳದ ಹಿಂದಿನ ಉದ್ದೇಶ ಅರ್ಥಮಾಡಿಕೊಳ್ಳುವುದಿಲ್ಲ. ‘ನಮಗೆ ಊಟ ಹಾಕಿ ಬೆಳೆಸಿದ ತಂದೇ ತಾಯೀನೇ ಹಿಂಗೆ ಬೈದಿರಲಿಲ್ಲ ಕಣ್ರೀ’ ಅಂತ ಬೇಸರಪಟ್ಟುಕೊಂಡು ಹೊರಟು ಹೋಗುತ್ತಾನೆ. ಊಟ ಹಾಕಿ ಬೆಳೆಸುವಾಗ ಬೈಯಲಿಕ್ಕೇನೂ ಇರುವುದಿಲ್ಲ. ಆದರೆ ಪತ್ರಿಕೋದ್ಯಮದ ಪಟ್ಟು ಹೇಳಿಕೊಡುವಾಗ ಒದೆ ಕೊಟ್ಟೂ ಹೇಳಿಕೊಡಬೇಕಾಗುತ್ತದೆ.
‘ನೀನು ಇಲ್ಲದ್ದೆಲ್ಲ ಮಾಡ್ತೀಯ. ಆ ಪರಿ ಬಯ್ಯೋ ಬದಲು, ಅವರನ್ನ ಕೆಲಸದಿಂದ ತೆಗೆದು ಹಾಕಿದರಾಯ್ತು. ಯಾಕೆ ಬೈದು ಕೆಟ್ಟವನಾಗ್ತೀಯ?’ ಅಂತಾಳೆ ಗೆಳತಿ. ಹಾಗೆ ಶಾಮರಾಯರು ತೆಗೆದು ಹಾಕಿದ್ದಿದ್ದರೆ ಇವತ್ತಿಲ್ಲಿ ನಾನು ರವಿ ಬೆಳಗೆರೆಯಾಗಿ ಕೂಡಲಾಗುತ್ತಿರಲಿಲ್ಲ. ಬೈಗುಳ ಅನುದ್ದೇಶಿತವಾಗಿರುವಾಗ, ನೋಯಿಸುವ ಇಂಟೆನ್ಷನ್ ಅವುಗಳಿಗಿಲ್ಲದಾಗ ಬೈಸಿಕೊಳ್ಳಬೇಕು. ಇದು ನನ್ನ ವಾದ. ಆದರೆ ಬೈಸಿಕೊಂಡವರು ತುಂಬ ಜನ. ಅದರಿಂದ ಕೆಲಸ ಕಲಿತವರು ಸ್ವಲ್ಪೇ ಜನ. ಎಗ್ಗರಿಬಿದ್ದು ಬಿಟ್ಟು ಹೋದವರೇ ಜಾಸ್ತಿ: ಅಪಾರ್ಥ ಪಾತ್ರರು. ಅವರು ನನ್ನನ್ನು ಕ್ಷಮಿಸಲಿ.
ಆದರೆ ಕೆಲವು ಸಲ ಅರಿವುಗೇಡಿಗಳಂತೆ ನಾವೇ ಅಪಾರ್ಥಗಳಿಗೆ ಎಡೆಮಾಡಿಕೊಟ್ಟು ಬಿಡುತ್ತೇವೆ. ದೊಡ್ಡವರೆದುರಿಗೆ ಸಿಗರೇಟು ಸೇದಿ ದುರಹಂಕಾರಿಗಳೆನ್ನಿಸಿಕೊಂಡಿರುತ್ತೇವೆ. ನಮ್ಮ ಕುಡಿತದ ಬಗ್ಗೆ ನಾವೇ ಮಾತಾಡಿಕೊಂಡು ‘ಭಯಂಕರ ಕುಡುಕರು ನಾವು’ ಎಂಬಂಥ ಇಮೇಜು ತಂದುಕೊಂಡಿರುತ್ತೇವೆ. ನಮಗಿಂತ ಅವಿವೇಕಿಗಳು ಹುಡುಗಿಯರು. ತುಂಬಿದ ಕಾಲೇಜ್ ಬಸ್ಸಿನಲ್ಲಿ ಹುಡುಗನಿಗೆ ಎಲ್ಲರ ಎದುರಿನಲ್ಲೇ ಹುಡುಗಿಯೊಬ್ಬಳು ಒಂದು ಚೀಟಿ ಕೊಟ್ಟು ಹೋಗುತ್ತಾಳೆ. ಖಂಡಿತ ಅವರಿಬ್ಬರ ಮಧ್ಯೆ affair ಇದೆ ಅಂತ ಇಡೀ ಬಸ್ಸು ಮಾತಾಡಿಕೊಳ್ಳುತ್ತದೆ. ಆದರೆ ಆ ಪತ್ರದಲ್ಲಿ ಹುಡುಗಿ ‘ನಿನ್ನನ್ನು ಒಡಹುಟ್ಟಿದ ಅಣ್ಣನಿಗಿಂತಲೂ ಆತ್ಮೀಯವಾಗಿ ಕಾಣುವ, ಗೌರವಿಸುವ ಈ ತಂಗಿಗೆ ರಾಖಿ ಹಬ್ಬದ ದಿನ ಸಿಗುವುದನ್ನ ಮರೆಯಬೇಡ’ ಅಂತ ಬರೆದಿರುತ್ತಾಳೆ. ಆದದ್ದು ಅರ್ಥವಾ, ಅಪಾರ್ಥವಾ?
ಕೆಲವರಿರುತ್ತಾರೆ ಗಮನಿಸಿ. ಸದಾ ಹೆಂಗಸರ ಗುಂಪಿನಲ್ಲಿರುತ್ತಾರೆ. ಅವರೊಂದಿಗೇ ಮಾತು, ಹರಟೆ, ಷಾಪಿಂಗು, ಬಸ್ಸಿನಲ್ಲೂ ಇವರು ಅವರ ಮಧ್ಯೆಯೇ ಇರುತ್ತಾರೆ. ಪರಿಶೀಲಿಸಿ ನೋಡಿದರೆ ಆ ಗುಂಪಿನ ಯಾರೊಂದಿಗೂ ಇವರಿಗೆ ಸಂಬಂಧವಿರುವುದಿಲ್ಲ. ಸಂಬಂಧವಿಟ್ಟುಕೊಳ್ಳಬಹುದಾದ ಗಂಡಸಿವನು ಅಂತ ಆ ಗುಂಪಿನ ಹೆಂಗಸರಿಗೂ ಅನ್ನಿಸಿರುವುದಿಲ್ಲ. ನೋಡುವವರಿಗೆ ಮಾತ್ರ, ಎಂಥ ಸ್ತ್ರೀಲೋಲ ಕಣ್ರೀ ಇವನು, ಆಹ, ಗೋಪೀ ಜನಪ್ರಿಯ ಗೋಪಾಲ... ಅನ್ನುವಂತಾಗಿರುತ್ತದೆ.
ಕೆಲವರು, ತಾವು ತುಂಬ ಶ್ರೀಮಂತರೇನೋ ಎಂಬಂತಾಡುತ್ತಿರುತ್ತಾರೆ. ಕಿಸೆಯಲ್ಲಿ ಒಂದೂ ಮುಕ್ಕಾಲು ರುಪಾಯಿ ಇರುವುದಿಲ್ಲ. ರೌಡಿಗಳ ಗುಂಪಿನಲ್ಲಿ ಸುಳ್ಳೇ ಎಗರಾಡುವ, ಆವಾಜು ಹಾಕುವ, ತಾನು ಬಹಳ ಕ್ರೂರಿ ಎಂಬಂತೆ ತೋರಿಸಿಕೊಳ್ಳುವ ಒಬ್ಬಿಬ್ಬರಾದರೂ ಇರುತ್ತಾರೆ. ಲಾಕಪ್ಪಿನಲ್ಲಿ ನಿಲ್ಲಿಸಿ ಒದ್ದರೆ ಎಲ್ಲರಿಗಿಂತ ಜೋರಾಗಿ ಅಳುವವರು ಅವರೇ. ಪರಿಶೀಲಿಸಿ ನೋಡಿದರೆ, ತುಂಬ ಸಂಭಾವಿತ ಮನೆತನದಿಂದ ಬಂದವರಾಗಿರುತ್ತಾರೆ. ಇಂತಹ ವರ್ತನೆಗೆ ಬೇರೆ ಬೇರೆ ಕಾರಣಗಳಿರಬಹುದು. ಆದರೆ ಇವ್ಯಾವೂ ಅವರ ನೈಜ, ಸಹಜ ವರ್ತನೆಗಳಲ್ಲ. ಅವರ ಸ್ವಭಾವವೂ ಅದಾಗಿರುವುದಿಲ್ಲ. ಕೇರಿಯಲ್ಲಿ, ಕಾಲೇಜಿನಲ್ಲಿ ವಿನಾಕಾರಣ ‘ಅವಳು ಭಯಂಕರ fast ಕಣೋ’ ಅಂತ unpopular ಆಗಿರುವ ಹುಡುಗಿಯರನ್ನು ಕರೆದು ಮಾತಾಡಿಸಿ ನೋಡಿ. ನೋಡಿದ ತಕ್ಷಣ ‘ಹುಡುಗಿ ಫಾಸ್ಟ್ ಇದ್ದಾಳೆ’ ಅಂತ ನಿಮಗೆ ಅನ್ನಿಸಲೂಬಹುದು. ಆದರೆ ಮಾತಾಡುತ್ತ ಆಡುತ್ತ ಅವಳೊಬ್ಬ ತುಂಬ ಅಮಾಯಕ ಮನಸ್ಸಿನ, ಸೀದಾ ಸಾದಾ ಹುಡುಗಿ ಅಂತ ಗೊತ್ತಾಗುತ್ತದೆ. ಹಾಗಾದರೆ ‘ಫಾಸ್ಟು’ ಎಂಬ ಹೆಸರೇಕೆ ಬಂತು? ತನ್ನ ವ್ಯಕ್ತಿತ್ವಕ್ಕೆ ಒಪ್ಪದ ದಿರಿಸು ಧರಿಸುತ್ತಿರುತ್ತಾಳೆ. ಯಡಬಟ್ಟಾಗಿ ಮುಂದಲೆಯ ಕೂದಲು ಕತ್ತರಿಸಿಕೊಂಡಿರುತ್ತಾಳೆ. ನಡಿಗೆಯ ಶೈಲಿಯಲ್ಲೇ ಒಂದು ಪಡಪೋಸಿತನವನ್ನು ತನಗೇ ಗೊತ್ತಿಲ್ಲದೆ ರೂಢಿಸಿಕೊಂಡು ಬಿಟ್ಟಿರುತ್ತಾಳೆ. ಮನೆಯಲ್ಲಿ ಅಥವಾ ಗೆಳತಿಯರ ಮಧ್ಯೆ ಮಾತಾಡುವಂತೆಯೇ ಬಿಡುಬೀಸಾಗಿ ಕಾಲೇಜಿನ ಕಾರಿಡಾರಿನಲ್ಲೂ ಮಾತಾಡಿಬಿಟ್ಟಿರುತ್ತಾಳೆ. ಇವೆಲ್ಲವೂ ಅಂತಿಮವಾಗಿ ತನ್ನ ಕ್ಯಾರೆಕ್ಟರ್ ಬಗ್ಗೆ ಉಳಿದವರು ನಿರ್ಣಯ ತಳೆಯಲಿಕ್ಕೆ ಕಾರಣವಾಗಬಹುದು ಅಂತ ಆ ಪೆದ್ದಿಗೆ ಗೊತ್ತೇ ಇರುವುದಿಲ್ಲ.
‘ಗೊತ್ತಲ್ಲ... ನಾನೆಂಥೋನು ಅಂತ’ ಎಂದು ಕೆಲವರು ಗುಟುರು ಹಾಕುತ್ತಿರುತ್ತಾರೆ. ಓಡಾಡುವುದೇ ಮೇಕಪು್ಪ ಬಿಚ್ಚಿಟ್ಟ ದುರ್ಯೂೕಧನನ ಶೈಲಿಯಲ್ಲಿ. ವಿನಾಕಾರಣ ಮೀಸೆ ಹುರಿಮಾಡಿಕೊಂಡಿರುತ್ತಾರೆ. ಸಭೆಯಲ್ಲಿ ಕುಳಿತಾಗ ಹೆಂಗಸರ ಕಡೆಗೆ ಕೆಕ್ಕರಿಸಿ ನೋಡಿಬಿಡೋದು. ಮಾತನಾಡುವಾಗ ವಿನಾಕಾರಣ ಕೈಗಳನ್ನು ಅಶ್ಲೀಲವಾಗಿ ಆಡಿಸುವುದು. (ಉದಾಹರಣೆ ಕೊಡ್ತೀನಿ ನೋಡಿ: ‘ನಂಗೊತ್ತು, ನೀವು ಅಲ್ಲಿ ಹೋಗಿ ಚೆನ್ನಾಗಿ ತಿಂದು ಬಂದ್ರಿ ಅಲ್ವಾ’ ಅಂತ ಕೇಳಬೇಕಾಗಿರುತ್ತದೆ ಒಬ್ಬನಿಗೆ. ಅಷ್ಟನ್ನು ಬಾಯಿಮಾತಿನಲ್ಲಿ ಕೇಳಿದರೆ ಸಾಕು. ಆದರೆ ಅವನು ತನ್ನ ಐದೂ ಬೆರಳು ಮಡಚಿ, ಮುಷ್ಟಿ ಹಿಡಿದು ಎದುರಿಗೆ ನಿಂತವರ ಕಡೆಗೆ ಮುಷ್ಟಿ ಆಡಿಸುತ್ತ ‘ತಿಂದುಬಂದ್ರಿ ಅಲ್ವಾ?’ ಅಂತ ಅಸಹ್ಯಕರವಾಗಿ ಕಣ್ಣು ಮಾಡಿ ಕೇಳಿರುತ್ತಾನೆ!)
ಹೆಚ್ಚಿನ ಸಲ ಇವೇ ನಮ್ಮನ್ನು ಅಪಾರ್ಥ ಮಾಡಿಕೊಳ್ಳುವಂತೆ ಮಾಡುತ್ತವೆ. ನಮ್ಮದೇ body language ನಮ್ಮನ್ನು ಉದ್ಧಟ, ದುರಹಂಕಾರಿ, ಅತಿರೇಕಿ, ರೌಡಿ, ಕೈಲಾಗದವ, ಹೆಣ್ಣಗ, ಲೋಲುಪ ಅಂತೆಲ್ಲ ನಾನಾ ರೀತಿಯಲ್ಲಿ ಚ್ಟಿಚ್ಞಛ ಆಗುವಂತೆ ಮಾಡುತ್ತದೆ. ನಮ್ಮ ದನಿ ಕೂಡ ಕೆಲವು ಸಲ ಈ ಅಪಾರ್ಥಗಳಿಗೆ ಈಡುಮಾಡುತ್ತದೆ. ಗರ್ವಿ, ಉಡಾಫೆ, ಬಲಹೀನ, ತಪ್ಪಿತಸ್ಥ-ಇವೇ ಮುಂತಾದ ಇಂಪ್ರೆಷನ್ಗಳನ್ನು ನಮ್ಮ ದನಿ ನಮಗೆ ತಗಲಗಟ್ಟುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ಅಪಾರ್ಥಕ್ಕೆ ಈಡುಮಾಡುವುದು ನಮ್ಮ ಕಣ್ಣುಗಳು.
ತುಂಬ ಎಚ್ಚರದಿಂದಿರಿ. ‘ಅವನ ಕಣ್ಣು ನೋಡಿದರೇ ಗೊತ್ತಾಗುತ್ತೆ ಅವನೇನು ಅಂತ’ ಎಂಬ ಅವಿವೇಕದ ಮಾತೊಂದಿದೆ ಚಾಲ್ತಿಯಲ್ಲಿ. "Face is the index of mind' ಎಂಬ ತಪ್ಪು ಗಾದೆಮಾತಿದೆ. ಇವೆಲ್ಲವೂ ಅಪಾರ್ಥ ಶಿಖಾಮಣಿಗಳ ಪರಿಣಾಮಗಳೇ. ನಮ್ಮ ಮುಖ, ಕಣ್ಣು, ಕೈಗಳ ಹಾವಭಾವ, ಬಾಡಿ ಲಾಂಗ್ವೇಜ್, ದನಿ, ಅದರ ಏರಿಳಿತಗಳು-ಎಲ್ಲವೂ ನಮ್ಮನ್ನು ಅಪಾರ್ಥಕ್ಕೀಡುಮಾಡಬಲ್ಲವು. ಹಾಗೇನೇ ಇವೆಲ್ಲವನ್ನೂ ಸರಿಯಾಗಿಟ್ಟುಕೊಂಡು ಪಿಗ್ಗಿ ಬೀಳಿಸುವವರೂ ಇದ್ದಾರೆ. ಖಂಡಿತ ಇದ್ದಾರೆ.
(ಲೇಖಕರು ಹಿರಿಯ ಪತ್ರಕರ್ತರು)