

ಒಂದು ಸಿದ್ಧಾಂತವಾಗಿ ಬಹಳ ಚೆನ್ನಾಗಿದೆ. ಆದರೆ ಜೀವನದಲ್ಲಿ ಮಾಡುವುದು ಹೇಗೆ? ಅದು ಸಾಧ್ಯವೆ? ಅದು ಪ್ರಾಯೋಗಿಕವಾದದ್ದೆ? ಹೌದು ಸಾಧ್ಯ. ಅದು ಪ್ರಾಯೋಗಿಕವಾದದ್ದು. ಇಂತಹ ಪ್ರೇಮ ನಿಮ್ಮಲ್ಲಿ ಉದಯಿಸಲು ಸಾಧ್ಯ. ಎದ್ದೇಳಿ. ನಿಮ್ಮನ್ನು ಕಡಿಮೆಯಾಗಿ ಅಂದಾಜು ಮಾಡಿಕೊಳ್ಳಬೇಡಿ. ನಿಮ್ಮ ಪ್ರೇಮ ನಿಯಮರಹಿತವಾದದ್ದು, ನಿಮ್ಮ ಪ್ರೇಮ ನಿಮ್ಮ ಹೊರಗಿನ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿಲ್ಲ, ಜನರ ಮೇಲೆ ಅವಲಂಬಿತವಾಗಿಲ್ಲ. ನೀವು ಎಲ್ಲಿ ಬೇಕಾದರೂ ಉಸಿರಾಡಬಹುದು, ಎಲ್ಲಿದ್ದರೂ ಕಣ್ಣು ಮಿಟುಕಿಸಬಹುದು. ನಿಮ್ಮ ಕಣ್ಣನ್ನು ಮಿಟುಕಿಸಿದಂತೆ, ದೀರ್ಘವಾದ ಉಸಿರನ್ನು ತೆಗೆದುಕೊಂಡಂತೆ, ಅಸ್ತಿತ್ವದ ಇಂತಹ ಸರಳ ಕ್ರಿಯೆಗಳನ್ನು ಮಾಡಿದಂತೆಯೆ ಪ್ರೇಮ. ಪ್ರೇಮವು ಅದಕ್ಕಿಂತಲೂ ಸರಳ, ಏಕೆಂದರೆ ನೀವೇ ಅದು.
ಪ್ರೇಮ ಮತ್ತು ವ್ಯಾಪಾರ ಸ್ವಭಾವಗಳಿಗೆ ವಿರುದ್ಧವಾದವು. ಪ್ರೇಮದಲ್ಲಿ ನೀವು ಹೆಚ್ಚು ಕೊಡುತ್ತೀರಿ ಮತ್ತು ಸ್ವಲ್ಪವೇ ತೆಗೆದುಕೊಳ್ಳುತ್ತೀರಿ. ವ್ಯಾಪಾರದಲ್ಲಿ ಸ್ವಲ್ಪವೇ ಕೊಡುತ್ತೀರಿ ಮತ್ತು ಹೆಚ್ಚು ತೆಗೆದುಕೊಳ್ಳುತ್ತೀರಿ. ಅವೆರಡೂ ಜೊತೆಯಾಗಿ ಹೋಗುವುದಿಲ್ಲ. ವ್ಯಾಪಾರವು ತಲೆಯ ವಿಷಯವಾದರೆ ಪ್ರೇಮವು ಹೃದಯದ ವಿಷಯ. ಪ್ರೇಮದಲ್ಲಿದ್ದಾಗ ತೀರ್ಪಗಳನ್ನು ನೀಡುತ್ತಲೇ ಇರಬಾರದು, ಕುಯುಕ್ತಿಗಳನ್ನು ಮಾಡುತ್ತಲೇ ಇರಬಾರದು. ಹಾಗೆ ಮಾಡಿದರೆ ಪ್ರೇಮವನ್ನು ನಾಶ ಮಾಡುತ್ತೀರಿ. ಪ್ರೇಮ ಮತ್ತು ವ್ಯಾಪಾರ ಪೂರ್ಣವಾಗಿ ವಿರುದ್ಧವಾದ ಮೌಲ್ಯಗಳನ್ನು ಹೊಂದಿವೆ. ನಿಮ್ಮ ಹೃದಯದಿಂದ ವ್ಯಾಪಾರವನ್ನು ಮಾಡಲೇಬೇಡಿ ಮತ್ತು ತಲೆಯಿಂದ ಪ್ರೀತಿಸಬೇಡಿ. ಹೃದಯದಿಂದ ವ್ಯಾಪಾರ ಮಾಡಲು ಹೊರಟರೆ, ವ್ಯಾಪಾರದಲ್ಲಿ ಸೋಲನ್ನು ಕಾಣುತ್ತೀರಿ.
ಅವೆರಡನ್ನೂ ಅವುಗಳ ಸ್ಥಾನದಲ್ಲಿ ಇರಿಸಿ. ಸೂಪ್ ಮತ್ತು ಐಸ್ಕ್ರೀಂ ಅನ್ನು ಬೆರೆಸಬೇಡಿ. ಒಂದೇ ಊಟದಲ್ಲಿ ತಿನ್ನಬಹುದಾದಾದರೂ, ದೂರವಾಗಿಡಿ. ಅವುಗಳನ್ನು ದೂರವಾಗಿಯೇ ಇಡಿ, ಇಲ್ಲವಾದರೆ ಐಸ್ಕ್ರೀಂ ಅನ್ನೂ ಆನಂದಿಸಲು ಸಾಧ್ಯವಿಲ್ಲ, ಸೂಪನ್ನೂ ಆನಂದಿಸಲು ಸಾಧ್ಯವಿಲ್ಲ. ಒಬ್ಬರು ಪ್ರೇಮದಲ್ಲಿದ್ದಾಗ ತಗಾದೆ ಮಾಡಲು ಆರಂಭಿಸುತ್ತಾರೆ, ಮತ್ತೊಬ್ಬರ ಮೇಲೆ ಅಸೂಯೆ ಪಡುತ್ತಾರೆ. ಅಸೂಯೆ, ತಗಾದೆ, ಕೋಪ ಇವೆಲ್ಲವೂ ನಿಮ್ಮ ಪ್ರೀತಿಪಾತ್ರರನ್ನು ಉನ್ನತವಾದ ಸ್ಥಾನದಲ್ಲಿ ಇರಿಸದಿದ್ದರೆ ಬರುತ್ತವೆ. ದೈವವನ್ನು ಉನ್ನತವಾದ ಸ್ಥಾನದಲ್ಲಿ ಕುಳ್ಳಿರಿಸಿದಾಗ ಶರಣಾಗತಿಯ ಭಾವವಿರುತ್ತದೆ, ಸಮರ್ಪಣೆಯ ಭಾವವಿರುತ್ತದೆ, ನಿಯಮರಹಿತವಾದ ಪ್ರೇಮದ ಭಾವನೆಯಿರುತ್ತದೆ. ಅದನ್ನೆ ಮಹಾತ್ಮ್ಯ, ಅತ್ಯುನ್ನತ, ವೈಭವ ಎಂದೆಲ್ಲಾ ಕರೆಯುತ್ತಾರೆ.
ಒಬ್ಬರನ್ನು ವೈಭವೀಕರಿಸಿದಾಗ ಅವರನ್ನು ಉನ್ನತ ಸ್ಥಾನದಲ್ಲಿ ಕುಳ್ಳಿರಿಸುತ್ತೀರಿ, ಆದರೆ ನಿಮ್ಮ ಮತ್ತು ಅವರ ಮಧ್ಯೆ ಪ್ರೇಮವಿರುವು ದಿಲ್ಲ. ನಿಮ್ಮ ಹಂತದವರನ್ನೆ ಪ್ರೀತಿಸುತ್ತೀರಿ. ನಿಮಗಿಂತಲೂ ಮೇಲಿರುವವರನ್ನು ಪ್ರೀತಿಸಲು ಸಾಧ್ಯವಿಲ್ಲ; ಅವರನ್ನು ಮೆಚ್ಚುತ್ತೀರಿ, ವೈಭವೀಕರಿ ಸುತ್ತೀರಿ. ಆದರೆ ಏಕತೆಯ ಭಾವ, ಸಂಬಂಧವನ್ನು ಅನುಭವಿಸಲು ಸಾಧ್ಯವಿಲ್ಲ, ಏಕೆಂದರೆ ಒಂದು ಅಂತರವನ್ನು ಅನುಭವಿಸುತ್ತೀರಿ, ಓ ಅವರು ಮೇಲಿನ ಸ್ಥಾನದಲ್ಲಿದ್ದಾರೆ. ಅವರೊಡನೆ ನಾನು ಹೇಗೆ ಒಂದಾಗುವುದು? ಭಗವಂತನೊಡನೆ ಹೇಗೆ ಒಂದಾಗುವುದು? ಪ್ರವಾದಿ ಗಳೊಡನೆ ಹೇಗೆ ಒಂದಾಗುವುದು? ಸಂತರೊಡನೆ ನಾನು ಹೇಗೆ ಒಂದಾಗುವುದು? ಅವರು ಸಂತರು. ನಾನು ಸಾಧಾರಣ ವ್ಯಕ್ತಿ ಎನ್ನುತ್ತೀರಿ.
ನಿಮ್ಮನ್ನು ಕೆಳಗಿರಿಸಿಕೊಂಡಾಗ ಪೂರ್ಣ ಸಂಪರ್ಕ, ಪೂರ್ಣ ಸಹಯೋಗ ಇರುವುದಿಲ್ಲ. ಅದೊಂದು ಅಡಚಣೆಯಾಗುತ್ತದೆ. ಪ್ರೇಮ ಮತ್ತು ವ್ಯಾಪಾರವನ್ನು ಬೇರೆ ಬೇರೆಯಾಗಿ ಇಡಬೇಕು. ಅವುಗಳನ್ನು ಬೆರೆಸಿದರೆ ವೇಶ್ಯೆಯಂತಾಗುತ್ತದೆ. ಅದರಲ್ಲಿ ಯಾರಿಗೂ ಸುಖವಿಲ್ಲ, ಯಾರಿಗೂ ಸಂತೋಷವಿಲ್ಲ. ದೈವೀ ಪ್ರೇಮ ಒಂದೆಡೆ, ವೇಶ್ಯೆಯ ಪ್ರೇಮ ಮತ್ತೊಂದೆಡೆ. ಇವೆರಡೂ ದೈವೀ ಪ್ರೇಮದ ವಿಪರೀತಗಳು. ದೈವೀ ಪ್ರೇಮವು ಕೃತ್ಯಕ್ಕಿಂತಲೂ ದೊಡ್ಡದು, ನೀವು ಮಾಡಬಹುದಾದ ಯಾವುದೇ ಸೇವೆಗಿಂತಲೂ ದೊಡ್ಡದು. ಪ್ರೇಮವಿಲ್ಲದ ಸೇವೆಯಿಂದ ಎಳ್ಳಷ್ಟೂ ಉಪಯೋಗವಿಲ್ಲ. ಜನರು ಬಹಳ ಸೇವೆ ಮಾಡುತ್ತಾರೆ. ರೆಡ್ಕ್ರಾಸ್ನಲ್ಲಿ, ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಾರೆ, ಅದನ್ನು ಇದನ್ನು ಮಾಡುತ್ತಾರೆ. ಜನರಿಗೆ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡ ಬಹುದು, ಆದರೆ ದೈವೀ ಪ್ರೇಮವು ಕಾರ್ಯಕ್ಕಿಂತಲೂ ಮಿಗಿಲಾದದ್ದು.