ಭಾರತಕ್ಕೆ ಗುಜರಿ ಟೈರ್​ಗಳ ವಿಲೇವಾರಿ ವರಿ

3-67f2bd8cd449b
Published on
ಪೈರಾಲಿಸಿಸ್ ತಂತ್ರಜ್ಞಾನದ ಸಂಸ್ಕರಣಾ ಘಟಕವನ್ನು ನಿರ್ವಿುಸಬೇಕಾದರೆ ಉನ್ನತ ದರ್ಜೆಯ ಯಂತ್ರಗಳನ್ನು ಸ್ಥಾಪಿಸಬೇಕು. ಆದರೆ ಇದೊಂದು ಖರ್ಚಿನ ಬಾಬ್ತು ಆಗಿರುವ ಕಾರಣಕ್ಕೆ ನಮ್ಮಲ್ಲಿ ಎಲ್ಲ ನಿಬಂಧನೆಗಳನ್ನು ಗಾಳಿಗೆ ತೂರಿ ಅಪಾಯಕಾರಿ ತ್ಯಾಜ್ಯಗಳನ್ನು ನೇರವಾಗಿ ಜಲಮೂಲ, ವಾಯುಮೂಲವಾಗಿ ಹೊರಬಿಟ್ಟು ವಾತಾವರಣವನ್ನು ಕಲುಷಿತಗೊಳಿಸಲಾಗುತ್ತಿದೆ.

ಪ್ರಸಕ್ತ ವರ್ಷದ ಷೇರು ಮಾರುಕಟ್ಟೆಯಲ್ಲಿ ಭಾರತೀಯ ಟೈರ್ ಕಂಪನಿಗಳ ಹವಾ ಸ್ವಲ್ಪ ಇಳಿದಿದೆ. ಟೈರ್ ತಯಾರಿಕೆಯ ಮೂಲವಸ್ತುವಾಗಿರುವ ರಬ್ಬರ್ ದಿನೇದಿನೇ ತುಟ್ಟಿಯಾಗುತ್ತಿದೆ. ಆದರೆ, ಟೈರ್ ತಯಾರಿಕಾ ಕಂಪನಿಗಳು ಆ ಭಾರವನ್ನು ಗ್ರಾಹಕನಿಗೆ ಹಾಕದೆ ತಾವೇ ಹೊತ್ತುಕೊಳ್ಳುವ ನಿರ್ಧಾರ ತಳೆದಿರುವುದರಿಂದ ಲಾಭ ಕಡಿಮೆಯಾಗುತ್ತಿದೆ ಎಂಬುದು ಉದ್ಯಮವನ್ನು ಬಲ್ಲವರ ಅಭಿಪ್ರಾಯ. ಆದರೆ ಕಳೆದ ಕೆಲ ವರ್ಷಗಳಿಂದ ಹಲವು ಸವಾಲುಗಳ ನಡುವೆಯೂ ಭಾರತದ ಟೈರ್ ಕಂಪನಿಗಳು ಉತ್ತಮ ಸಾಧನೆಯನ್ನೇ ಮಾಡಿವೆ. ಭಾರತವು ಜಾಗತಿಕ ಟೈರ್ ಉತ್ಪಾದನೆಯಲ್ಲಿ ಏಳನೆಯ ಸ್ಥಾನದಲ್ಲಿದ್ದು, ನಮ್ಮ ಐದು ಕಂಪನಿಗಳು ವಿಶ್ವದ ಟಾಪ್ ಮೂವತ್ತು ಕಂಪನಿಗಳ ಪಟ್ಟಿಯಲ್ಲಿರುವುದು ಈ ಮಾತಿಗೆ ಪುರಾವೆ.

ವಾರ್ಷಿಕವಾಗಿ ಇನ್ನೂರು ಮಿಲಿಯನ್ ಟೈರ್​ಗಳನ್ನು ಉತ್ಪಾದಿಸುವ ಭಾರತವು ಕಳೆದ ಹಣಕಾಸು ವರ್ಷದಲ್ಲಿ ಒಟ್ಟು 23 ಸಾವಿರ ಕೋಟಿ ರೂಪಾಯಿ ಮೌಲ್ಯದ ಟೈರ್​ಗಳನ್ನು ರಫ್ತು ಮಾಡಿದ್ದು ನಮ್ಮ ದೇಶದಿಂದ ಸುಮಾರು ನೂರಎಪ್ಪತ್ತು ದೇಶಗಳು ಟೈರ್​ಗಳನ್ನು ಖರೀದಿಸುತ್ತಿವೆ. ಇದು ಭಾರತದ ಟೈರ್ ಕಂಪನಿಗಳು ಹೊರದೇಶಗಳಲ್ಲೂ ತಮ್ಮ ಬ್ರಾ್ಯಂಡ್ ಬಿಲ್ಡಿಂಗ್ ಮಾಡಿರುವುದನ್ನು ಸೂಚಿಸುತ್ತವೆ. ವಿಪರ್ಯಾಸವೆಂದರೆ ಟೈರ್ ಉದ್ಯಮದಲ್ಲಿ ಇಷ್ಟೆಲ್ಲ ಸಾಧಿಸುತ್ತಿರುವ ಭಾರತವು ವಿಶ್ವದ ಅತಿಹೆಚ್ಚು ಗುಜರಿ ಟೈರ್​ಗಳನ್ನು ಆಮದು ಮಾಡಿಕೊಳ್ಳುವ ದೇಶವೆಂಬ ಸತ್ಯವನ್ನೂ ಅರಗಿಸಿಕೊಳ್ಳಬೇಕಾಗಿರುವ ಪರಿಸ್ಥಿತಿ ಈಗ ಉದ್ಭವಿಸಿದೆ.

2025ರ ಜನವರಿ 29ರಂದು ಮುಂಬೈ ಶಹರದ ಹೊರವಲಯದ ಪಾಲಘರ್ ಜಿಲ್ಲೆಯ ವಾಡಾ ಎಂಬಲ್ಲಿನ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭಾರಿ ಸ್ಫೋಟ ಮತ್ತು ಬೆಂಕಿ ಅವಘಡದಲ್ಲಿ ನಾಲ್ಕು ಜನರು ಸಾವನ್ನಪ್ಪಿದರು. ಆ ಕಾರ್ಖಾನೆಯು ಗುಜರಿ ಟೈರ್​ಗಳನ್ನು ಸಂಸ್ಕರಿಸುತ್ತಿದ್ದು ಅಲ್ಲಿ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿರುವ ವಿಷಯ ತನಿಖೆಯ ನಂತರ ತಿಳಿದು ಬಂತು. ಈ ದುರ್ಘಟನೆ ಭಾರತದ ಮಾಧ್ಯಮಗಳಲ್ಲಿ ಅಷ್ಟೊಂದು ಸುದ್ದಿಯಾಗದಿದ್ದರೂ ಕಳೆದ ವಾರ ಬಿಬಿಸಿ ಸಂಸ್ಥೆ ಈ ಕುರಿತು ತನಿಖಾ ವರದಿ ಪ್ರಕಟಿಸಿದ್ದು ಭಾರತವು ಹೊರದೇಶಗಳ ಟೈರ್​ಗಳ ಕೊನೆಯ ನಿಲ್ದಾಣವಾಗುತ್ತಿದೆಯೇ ಎಂಬ ಆತಂಕಕಾರಿ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಎಲ್ಲ ತ್ಯಾಜ್ಯಗಳ ವಿಲೇವಾರಿಗೂ ನಿರ್ದಿಷ್ಟ ಮರುಬಳಕೆಯ ಯೋಜನೆ ಇರುವಂತೆ ಹಳೆಯ ಟೈರ್​ಗಳ ವಿಲೇವಾರಿಗೂ ಇದೆ. ಈ ವ್ಯವಸ್ಥೆಯಲ್ಲಿ ತಮ್ಮ ಜೀವಾವಧಿಯನ್ನು ಮುಗಿಸಿದ ಟೈರ್​ಗಳನ್ನು ತೊಳೆದು ಅವುಗಳನ್ನು ಸಂಸ್ಕರಣಾ ಘಟಕಕ್ಕೆ ಸಾಗಿಸಲಾಗುತ್ತದೆ. ಅಲ್ಲಿರುವ ಚಿತಾಗಾರದಂಥ ವ್ಯವಸ್ಥೆಯಲ್ಲಿ ಈ ಟೈರ್​ಗಳನ್ನು ಐನೂರು ಡಿಗ್ರಿ ತಾಪಮಾನದಲ್ಲಿ ಸುಡಲಾಗುತ್ತದೆ. ಹೀಗೆ ಸುಡಲ್ಪಟ್ಟ ಟೈರ್ ಉಕ್ಕು , ನೈಲಾನ್, ರಬ್ಬರ ಪುಡಿ, ದಟ್ಟ ಇಂಗಾಲದ ಧೂಳು ಮತ್ತು ಎಣ್ಣೆ ಹೀಗೆ ವಿವಿಧ ರೂಪದಲ್ಲಿ ಪರಿವರ್ತನೆಯಾಗಿ ಹೊರಬರುತ್ತದೆ. ಆಮ್ಲಜನಕದ ಅನುಪಸ್ಥಿತಿಯಲ್ಲಿ ಹೆಚ್ಚಿನ ತಾಪಮಾನಕ್ಕೆ ಕೊಂಡೊಯ್ದು ಟೈರ್ ತಾಜ್ಯವನ್ನು ಸಂಸ್ಕರಿಸುವ ಈ ಪ್ರಕ್ರಿಯೆಗೆ ‘ಪೈರಾಲಿಸಿಸ್’ ಎಂದು ಹೇಳಲಾಗುತ್ತದೆ.

ಪೈರಾಲಿಸಿಸ್ ಮೂಲಕ ಪರಿವರ್ತನೆಗೊಂಡ ಉಕ್ಕನ್ನು ಮರುಸಂಸ್ಕರಿಸಿ ಕಾಂಕ್ರೀಟ್​ಗೆ ಗಟ್ಟಿತನವನ್ನು ನೀಡುವ ಸ್ಟೀಲ್ ಕಂಬಿಗಳ ತಯಾರಿಕೆಯಂಥ ಕಾರ್ಯಗಳಿಗೆ ಬಳಸಲಾಗುತ್ತದೆ. ನೈಲಾನ್ ಗೃಹಬಳಕೆಯ ಬ್ರಶ್ ಮತ್ತು ಕಾರ್ಪೆಟ್ಟುಗಳ ತಯಾರಿಕೆಯಲ್ಲಿ ಬಳಕೆಯಾದರೆ, ಎಣ್ಣೆಯನ್ನು ಕೈಗಾರಿಕೆಗಳಲ್ಲಿ ಶಾಖೋತ್ಪನ್ನಕ್ಕೆ ಬಳಸಲಾಗುವ ಚಿಮಣಿಗಳಲ್ಲಿ ಇಂಧನವನ್ನಾಗಿ ಉಪಯೋಗಿಸಲಾಗುತ್ತದೆ. ದಟ್ಟ ಇಂಗಾಲದ ಧೂಳು ಮುದ್ರಣಕ್ಕೆ ಬಳಸಲ್ಪಡುವ ಶಾಯಿಯ ತಯಾರಿಕೆಗೆ ಪ್ರಮುಖ ಕಚ್ಚಾವಸ್ತು. ಆದರೆ ಪೈರಾಲಿಸಿಸ್ ಮೂಲಕ ಉತ್ಪತ್ತಿಯಾಗುವ ಉಪ ಉತ್ಪನ್ನಗಳಲ್ಲಿಯೇ ಅತಿ ಹೆಚ್ಚು ವೈವಿಧ್ಯಮಯ ಕಾರ್ಯಗಳಲ್ಲಿ ಉಪಯೋಗಿಸಲ್ಪಡುವ ವಸ್ತುವೆಂದರೆ ರಬ್ಬರ ಪುಡಿ. ರಸ್ತೆಯ ನಡುವಿನ ಹಂಪ್ ಮುಚ್ಚಲು, ಮಕ್ಕಳ ಪಾರ್ಕ್​ನ ಆಟದ ಸಾಮಾನುಗಳು ತಯಾರಿಸಲು, ಕ್ರೀಡಾಂಗಣದಲ್ಲಿ ಬಳಸಲಾಗುವ ಸಿಂಥೆಟಿಕ್ ಟ್ರಾ್ಯಕ್, ಕೃತಕ ನೆಲೆಹಾಸು, ರಸ್ತೆ ನಿರ್ಮಾಣ ಹೀಗೆ ಅನೇಕ ಉಪಯುಕ್ತ ವಸ್ತುಗಳ ತಯಾರಿಕೆಯಲ್ಲಿ ಈ ರಬ್ಬರ ಪುಡಿಯನ್ನು ಬಳಸಲಾಗುತ್ತದೆ.

ಪೈರಾಲಿಸಿಸ್ ಮೂಲಕ ಹಳೆಯ ಟೈರ್​ಗಳು ಇಷ್ಟೊಂದು ಕಾರ್ಯಗಳಿಗೆ ಬಳಕೆಯಾಗುತ್ತಿರುವಾಗ ತೊಂದರೆಯೇನು ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಟೈರ್​ಗಳ ಸಂಸ್ಕರಣೆ ಅಷ್ಟೊಂದು ಸರಳವಲ್ಲ. ಪೈರಾಲಿಸಿಸ್ ತಂತ್ರಜ್ಞಾನದ ಸಂಸ್ಕರಣಾ ಘಟಕವನ್ನು ನಿರ್ವಿುಸಬೇಕಾದರೆ ಲಕ್ಷಗಟ್ಟಲೇ ಹಣವನ್ನು ಹೂಡಿ ಉನ್ನತ ದರ್ಜೆಯ ಯಂತ್ರಗಳನ್ನು ಸ್ಥಾಪಿಸಬೇಕು. ಈ ಪ್ರಕ್ರಿಯೆಯಲ್ಲಿ ಕೆಲವು ಅಪಾಯಕಾರಿ ಅನಿಲಗಳು ಮತ್ತು ರಾಸಾಯನಿಕಗಳೂ ಉತ್ಪತ್ತಿಯಾಗುತ್ತವೆ. ಅವುಗಳನ್ನು ಸೂಕ್ತ ತಂತ್ರಜ್ಞಾನ ಬಳಸಿ ಸಾರ್ವಜನಿಕರಿಗೆ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಸಂಸ್ಕರಿಸಬೇಕು.

ಆದರೆ ಇದೊಂದು ಖರ್ಚಿನ ಬಾಬ್ತು ಆಗಿರುವ ಕಾರಣಕ್ಕೆ ನಮ್ಮಲ್ಲಿ ಎಲ್ಲ ನಿಬಂಧನೆಗಳನ್ನು ಗಾಳಿಗೆ ತೂರಿ ಈ ಅಪಾಯಕಾರಿ ತ್ಯಾಜ್ಯಗಳನ್ನು ನೇರವಾಗಿ ಜಲಮೂಲ, ವಾಯುಮೂಲವಾಗಿ ಹೊರಬಿಟ್ಟು ವಾತಾವರಣವನ್ನು ಕಲುಷಿತಗೊಳಿಸಲಾಗುತ್ತಿದೆ. ಸಾರ್ವಜನಿಕರಿಗೆ ಮತ್ತು ಜಾನುವಾರುಗಳ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿರುವ ಇಂಥ ಅನಧಿಕೃತ ಘಟಕಗಳು ಆಡಳಿತಕ್ಕೆ ಸವಾಲು ಹಾಕುವ ಮಟ್ಟದಲ್ಲಿ ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಭಾರತದಲ್ಲಿ ಹೆಚ್ಚುತ್ತಿರುವ ಗುಜರಿ ಟೈರ್​ಗಳ ಆಮದಿಗೆ ಕಡಿವಾಣ ಹಾಕುವ ಕುರಿತು ಕೆಲ ದಿನಗಳ ಹಿಂದೆ ‘ಭಾರತೀಯ ಮೋಟಾರು ವಾಹನಗಳ ಟೈರ್ ಉತ್ಪಾದಕರ ಸಂಘ (ATMA)’ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಹೆಚ್ಚಿನ ಲಾಭದ ಆಸೆಗೆ ಅನಧಿಕೃತ ಗುಜರಿ ಟೈರ್ ಸಂಸ್ಕರಣಾ ಘಟಕಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಬಂಧನೆಗಳನ್ನು ಗಾಳಿಗೆ ತೂರುತ್ತಿರುವುದರ ಬಗ್ಗೆ ಆ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಜೊತೆಗೆ ನಮ್ಮಲ್ಲಿನ ಗುಜರಿ ಟೈರ್​ಗಳನ್ನಷ್ಟೆ ಅಲ್ಲದೆ ಇದೀಗ ಭಾರಿ ಪ್ರಮಾಣದಲ್ಲಿ ಹೊರಗಿನಿಂದ ಹಳೆಯ ಟೈರ್​ಗಳನ್ನು ಆಮದು ಮಾಡಿಕೊಂಡು ಸಂಸ್ಕರಿಸುವ ಮೂಲಕ ಈ ಘಟಕಗಳು ನಮ್ಮ ಮೂಲಸೌಕರ್ಯಕ್ಕೆ ಸವಾಲು ಹಾಕುವ ಜೊತೆಗೆ ಪರಿಸರವನ್ನು ಹಾಳು ಮಾಡುತ್ತಿರುವ ಕುರಿತು ಆ ಮನವಿಯಲ್ಲಿ ಗಮನಸೆಳೆಯಲಾಗಿದೆ.

2022ರಲ್ಲಿ ಭಾರತೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ತನ್ನ ವಿಸ್ತರಿತ ಮಾಲೀಕರ ಜವಾಬ್ದಾರಿ (EPR) ಮಾರ್ಗಸೂಚಿಗೆ ತಿದ್ದುಪಡಿ ಮಾಡಿ ಅದರಲ್ಲಿ ಪ್ಲಾ್ಯಸ್ಟಿಕ್, ಹಳೆಯ ಟೈರ್, ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಸಂಸ್ಕರಿಸುವ ಕ್ರಮಗಳು ಮತ್ತು ವ್ಯವಸ್ಥೆ ಕುರಿತಂತೆ ವಿಸ್ಕೃತವಾದ ವಿವರಣೆಯನ್ನು ಕೊಟ್ಟಿದೆ. ಟೈರ್ ಉತ್ಪಾದಕರ ಸಂಘದ ಆರೋಪದಂತೆ ಅದನ್ನು ಪಾಲಿಸಲು ಮತ್ತು ಅಂತಹುದೊಂದು ಮೂಲಭೂತ ವ್ಯವಸ್ಥೆಯನ್ನು ಸ್ಥಾಪಿಸಲು ಕಂಪನಿಗಳು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಬೇಕಾಗಿದೆ. ಮತ್ತೊಂದೆಡೆ ಹೆಚ್ಚಿನ ಲಾಭದ ಆಸೆಗೆ ಯಾವುದೇ ಅನುಮತಿ ಮತ್ತು ಸುರಕ್ಷಾ ವ್ಯವಸ್ಥೆಯಿಲ್ಲದೆ ರಾಜಾರೋಷವಾಗಿ ಅನಧಿಕೃತ ಸಂಸ್ಕರಣೆಯನ್ನು ಮಾಡುತ್ತಿರುವವರು ಪೂರ್ತಿ ವ್ಯವಸ್ಥೆಯನ್ನೇ ಅಣಕಿಸುತ್ತಿದ್ದಾರೆ.

ಒಂದು ಅಂದಾಜಿನಂತೆ ಭಾರತದಲ್ಲಿ ಸುಮಾರು ಎರಡು ಸಾವಿರ ಅನಧಿಕೃತ ಗುಜರಿ ಟೈರ್ ಸಂಸ್ಕರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಭಾರತವು 2021ರ ವಾಣಿಜ್ಯ ವರ್ಷದಲ್ಲಿ ಎರಡೂವರೆ ಲಕ್ಷ ಮೆಟ್ರಿಕ್ ಟನ್ ಗುಜರಿ ಟೈರ್​ಗಳನ್ನು ಆಮದು ಮಾಡಿಕೊಂಡಿದ್ದರೆ ಅದು 2024ರಲ್ಲಿ ಹದಿನಾಲ್ಕು ಲಕ್ಷ ಮೆಟ್ರಿಕ್ ಟನ್​ಗೆ ತಲುಪಿದೆ. ನಮ್ಮಲ್ಲಿ ಅನಧಿಕೃತ ಗುಜರಿ ಟೈರ್ ಸಂಸ್ಕರಣಾ ಕೇಂದ್ರಗಳು ಯಾವ ವೇಗದಲ್ಲಿ ತಲೆ ಎತ್ತುತ್ತಿವೆ ಎಂದು ಊಹಿಸಿಕೊಳ್ಳಲು ಈ ಅಂಕಿ-ಅಂಶಗಳೇ ಸಾಕು.

ಮತ್ತೊಂದು ಕಳವಳಕಾರಿ ವಿಷಯವೇನೆಂದರೆ ಜಗತ್ತಿನ ಶೇಕಡ ಮೂವತ್ತರಷ್ಟು ಗುಜರಿ ಟೈರ್​ಗಳಿಗೆ ಭಾರತವೇ ಮುಕ್ತಿಧಾಮ. ವಿಶೇಷವೆಂದರೆ ಭಾರತವು ಆಮದು ಮಾಡಿಕೊಳ್ಳುವ ಗುಜರಿ ಟೈರ್​ಗಳ ಪೈಕಿ ಅರ್ಧಪಾಲು ಬ್ರಿಟನ್​ನಿಂದ ಬರುತ್ತದೆ. ನಮ್ಮವರಿಗೆ ಅದೇಕೆ ಬ್ರಿಟನ್ನಿನ ಹಳೆಯ ಟೈರ್ ಬಗ್ಗೆ ಮೋಹ? ಬಿಬಿಸಿ ಸಂಸ್ಥೆಯ ತನಿಖಾ ವರದಿ ಆ ಕುರಿತು ಕೆಲ ಕುತೂಹಲಕಾರಿ ವಿಷಯಗಳನ್ನು ಹೊರಹಾಕಿದೆ. ಬ್ರಿಟನ್​ನಲ್ಲಿ ಹೊಸ ಟೈರ್ ಕೊಂಡಾಗ ಆ ವಾಹನದ ಮಾಲೀಕನಿಂದ ಹಳೆಯ ಟೈರ್​ಗಳನ್ನು ಸಂಸ್ಕರಿಸಲು ಶುಲ್ಕವನ್ನು ಪಾವತಿಸಿಕೊಳ್ಳಲಾಗುತ್ತದೆ. ಇದಾದ ನಂತರ ಅಂತಹ ಹಳೆಯ ಟೈರ್​ಗಳನ್ನು ಸಂಸ್ಕರಿಸುವ ಸಂಪೂರ್ಣ ಜವಾಬ್ದಾರಿ ಹೊಸ ಟೈರ್ ತಯಾರಕನದ್ದು. ಆತ ಸ್ಥಳೀಯವಾಗಿ ಲಭ್ಯವಿರುವ ಅಧಿಕೃತ ಹಳೆಯ ಟೈರ್ ಸಂಸ್ಕರಣಾ ಘಟಕದವರಿಗೆ ಒಂದು ದರ ನಿಗದಿ ಮಾಡಿ ಮಾರುತ್ತಾನೆ. ಆ ಗುತ್ತಿಗೆದಾರರು ಆ ಟೈರ್​ಗಳನ್ನು ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಿ ಪ್ರತಿಯೊಂದಕ್ಕೂ ಒಂದೊಂದು ಪ್ರಮಾಣಪತ್ರ ನೀಡುತ್ತಾರೆ. ತೊಂದರೆ ಇರುವುದು ಇಲ್ಲೇ.

ಭಾರತೀಯ ದಲ್ಲಾಳಿಗಳು ಇದೀಗ ಫೀಲ್ಡಿಗೆ ಇಳಿದ ಮೇಲೆ ಅಲ್ಲಿನ ಹಳೆಯ ಟೈರ್ ಮಾರುಕಟ್ಟೆಯ ಚಿತ್ರಣವೇ ಬದಲಾಗಿದೆ. ಇವರುಗಳು ನೇರವಾಗಿ ಟೈರ್ ತಯಾರಕರನ್ನು ಸಂರ್ಪಸಿ ಅವರಿಗೆ ಹೆಚ್ಚಿನ ದುಡ್ಡು ಕೊಟ್ಟು ಹಳೆಯ ಟೈರ್​ಗಳನ್ನು ತಾವೇ ಖರೀದಿಸುತ್ತಿದ್ದಾರೆ. ಇವರು ಕೊಡುವ ದರಕ್ಕೆ ಬ್ರಿಟನ್ ಟೈರ್ ಸಂಸ್ಕರಣಾ ಘಟಕದವರಿಗೆ ಸ್ಪರ್ಧೆ ನೀಡಲು ಆಗದೇ ಕೈಚೆಲ್ಲಿ ಕೂತಿದ್ದಾರೆ. ಮತ್ತೊಂದೆಡೆ ಅಲ್ಲಿನ ಟೈರ್ ತಯಾರಕರಂತೂ ಈ ಹಳೆಯ ಟೈರ್​ಗಳಿಂದ ಸಾಕಷ್ಟು ದುಡ್ಡು ಹುಟ್ಟುತ್ತಿರುವುದಕ್ಕೆ ಫುಲ್ ಖುಷ್ ಆಗಿದ್ದಾರೆ. ತಮ್ಮ ಜವಾಬ್ದಾರಿಯನ್ನು ಭಾರತದತ್ತ ಹೊರಡುವ ಹಡಗಿನ ಮೇಲೆ ದಾಟಿಸಿ ಸಮುದ್ರದ ನೀರಿನಲ್ಲಿ ಕೈತೊಳೆದುಕೊಳ್ಳುತ್ತಿರುವ ಅವರುಗಳನ್ನು ನೋಡುತ್ತ ಅಸಹಾಯಕರಾಗಿ ಕುಳಿತುಕೊಳ್ಳುವ ಪಾಳಿ ಈಗ ಸ್ಥಳೀಯ ಟೈರ್ ಸಂಸ್ಕರಣಾ ಘಟಕದವರದ್ದು.

ಒಂದು ಲೆಕ್ಕಾಚಾರದಂತೆ ಭಾರತವು ಪ್ರತಿವರ್ಷ ಹದಿನೈದು ಲಕ್ಷ ಟನ್ ಗುಜರಿ ಟೈರ್​ಗಳನ್ನು ಉತ್ಪಾದಿಸುತ್ತದೆ. ನಮ್ಮಲ್ಲಿರುವ ಎಂಟನೂರು ಅಧಿಕೃತ ಪೈರಾಲಿಸಿಸ್ ಕೇಂದ್ರಗಳ ಕ್ಷಮತೆಗಿಂತ ಸ್ವಲ್ಪ ಹೆಚ್ಚೇ ಇದು. ಹೀಗಿರುವಾಗ ವಿದೇಶದಿಂದ ಈ ಪಾಟಿ ಗುಜರಿ ಟೈರ್​ಗಳನ್ನು ಆಮದು ಮಾಡಿಕೊಳ್ಳುವ ಅಗತ್ಯ ಏನಿದೆ ಎಂಬುದರ ಕುರಿತು ನಮ್ಮ ಚಿಂತಕರ ಚಾವಡಿಯು ಯೋಚಿಸಬೇಕಾಗಿದೆ. ಭಾರತೀಯ ಮೋಟಾರು ವಾಹನಗಳ ಟೈರ್ ಉತ್ಪಾದಕರ ಸಂಘ (ATMA) ನೀಡಿದ ದೂರಿನ ನಂತರ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚೆತ್ತು ಭಾರತದೆಲ್ಲೆಡೆ ದಾಳಿ ನಡೆಸಿ ಸುಮಾರು ಮುನ್ನೂರರಷ್ಟು ಅನಧಿಕೃತ ಸಂಸ್ಕರಣಾ ಘಟಕಗಳಿಗೆ ಬೀಗ ಜಡಿದಿದೆ ಎಂಬ ಸುದ್ದಿ ಇದೆ. ಆದರೆ ತೊಂದರೆಯನ್ನು ಮೂಲದಲ್ಲಿ ಚಿವುಟಲು ಗುಜರಿ ಟೈರ್​ಗಳ ಆಮದಿಗೆ ಬ್ರೇಕ್ ಹಾಕುವಂಥ ದೃಢ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ಮತ್ತೊಂದು ಪೆಡಂಭೂತದ ಹುಟ್ಟಿಗೆ ನಾವೆಲ್ಲ ಕಾರಣವಾಗಲಿದ್ದೇವೆ. (ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net