

| ಮಧುರಾ ಎಲ್. ಭಟ್ಟ
ಆಧುನಿಕ ಯುಗದಲ್ಲೂ ಪುರುಷ ಪ್ರಧಾನ ಸಮಾಜದ ವೈಭವೀಕರಣ ಕಡಿಮೆಯಾದರೂ, ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗಿಲ್ಲ. ಸಾಮಾಜಿಕವಾಗಿ ಇಂದಿಗೂ ಪುರುಷರಿಗೆ ಪ್ರಾಧಾನ್ಯತೆ ಕೊಂಚ ಹೆಚ್ಚೇ ಇದೆ. ಹಲವು ಕಡೆ ವ್ಯವಸ್ಥೆಗೆ ಹೆದರಿ ಹೆಣ್ಣುಮಕ್ಕಳು ಇಂದಿಗೂ ಪುರುಷ ಪ್ರಧಾನ ಸಮಾಜದಲ್ಲಿ ಬದುಕಲು ಅಂಜುತ್ತಾರೆ. ಪುರುಷರ ಕಿರುಕುಳ ತಾಳಲಾಗದೆ ಅದೆಷ್ಟೋ ಹೆಣ್ಣುಮಕ್ಕಳು ನೇಣಿಗೆ ಶರಣಾದ ಉದಾಹರಣೆಗಳು ನಮ್ಮ ನಡುವೆ ಇದೆ. ಹೆಣ್ಣು ಮಕ್ಕಳ ರಕ್ಷಣೆಗಾಗಿ ಸರ್ಕಾರಗಳು ಹಲವಾರು ಕಾನೂನುಗಳನ್ನು ಜಾರಿಗೆ ತಂದಿವೆ. ಅವೆಲ್ಲವೂ ಮೇಲ್ನೋಟಕ್ಕೆ ಹೆಣ್ಣಿಗೆ ನ್ಯಾಯ, ರಕ್ಷಣೆ, ಸ್ಥಾನಮಾನ, ಮತ್ತು ಸಮಾನತೆ ಒದಗಿಸಿದ್ದರೂ, ವಾಸ್ತವದಲ್ಲಿ ಹೆಣ್ಣು ಅನುಭವಿಸುವ ತೊಂದರೆಗಳು ನಿರೀಕ್ಷಿತ ಮಟ್ಟದಲ್ಲಿ ಶಮನವಾಗಿಲ್ಲ. ಇದಕ್ಕೆ ಒಂದು ಉತ್ತಮ ಉದಾಹರಣೆ ಕೆಲ ತಿಂಗಳ ಹಿಂದೆ ಬೆಳಕಿಗೆ ಬಂದ ತಮಿಳುನಾಡಿನ ಮಹಿಳೆಯೊಬ್ಬಳ ಕಥೆ.
57 ವರ್ಷದ ತಮಿಳುನಾಡಿನ ಮಹಿಳೆಯೊಬ್ಬಳು ತನ್ನ ಮಗಳನ್ನು ಒಂಟಿಯಾಗಿ ಬೆಳೆಸುವ ಸಲುವಾಗಿ ಪುರುಷ ಪ್ರಧಾನ ಸಮಾಜದಲ್ಲಿ 30 ವರ್ಷ ಪುರುಷನಂತೆ ವೇಷ ಧರಿಸಿದ್ದಳು ಎಂದು ಕೇಳಿದರೆ ಆಶ್ಚರ್ಯವಾಗುತ್ತದೆ. ಹೌದು. ತಮಿಳುನಾಡಿನ ಕಾಟುನಾಯಕನಹಟ್ಟಿ ನಿವಾಸಿಯಾದ ಎಸ್.ಪಚ್ಚಿಯಮ್ಹಾಳ್ ಎಂಬ ಮಹಿಳೆಯೇ ಆ ಗಟ್ಟಿಗಿತ್ತಿ. 20ನೇ ವಯಸ್ಸಿಗೇ ವೈವಾಹಿಕ ಬಂಧನಕ್ಕೆ ಒಳಗಾದರೂ, ಮದುವೆಯಾಗಿ ಕೆಲ ದಿನಗಳಲ್ಲಿಯೇ ಪತಿಯನ್ನು ಕಳೆದುಕೊಳ್ಳುತ್ತಾಳೆ. ಹೃದಯಾಘಾತದಿಂದ ಪತಿ ಮರಣ ಹೊಂದಿದ ಕೆಲ ತಿಂಗಳಲ್ಲೇ ಹೆಣ್ಣು ಮಗುವಿಗೂ ಜನ್ಮ ನೀಡುತ್ತಾಳೆ. ಕುಟುಂಬ ನಿರ್ವಹಣೆಗೆ ದುಡಿಯುವುದು ಅನಿವಾರ್ಯವಾಗುತ್ತದೆ. ಆದರೆ ಅವಳು ಜೀವಿಸುತ್ತಿರುವುದು ಪುರುಷ ಪ್ರಧಾನ ಸಮಾಜದಲ್ಲಾಗಿದ್ದರಿಂದ ಅಲ್ಲಿನ ಗ್ರಾಮಸ್ಥರ ಲೈಂಗಿಕ ಕಿರುಕುಳ ಮತ್ತಿತರ ಕೆಲ ಸವಾಲು ಎದುರಿಸಬೇಕಾಗಿ ಬರುತ್ತದೆ. ಅದಕ್ಕಾಗಿಯೇ ಇರುವ ಕಟ್ಟುಪಾಡು ಮುರಿದು, ಪುರುಷನ ವೇಷ ಧರಿಸುವ ದೃಢ ನಿರ್ಧಾರ ಮಾಡಿಕೊಳ್ಳುತ್ತಾಳೆ. ಪುರುಷರಂತೆ ಕೂದಲು ಕತ್ತರಿಸಿಕೊಂಡು, ಸೀರೆ ಬಿಟ್ಟು ಶರ್ಟ್, ಲುಂಗಿ ಧರಿಸಲು ಮುಂದಾಗುತ್ತಾಳೆ ಮತ್ತು ಹೆಸರನ್ನು ಮುತ್ತು ಎಂದು ಬದಲಾಯಿಸಿಕೊಂಡು ಪುರುಷನಂತೆಯೇ ಜೀವಿಸಲು ಆರಂಭಿಸು ತ್ತಾಳೆ. ನಂತರ ಕಟ್ಟಡ ನಿರ್ಮಾಣ ಸ್ಥಳ, ಹೋಟೆಲ್ ಮತ್ತು ಟೀ ಅಂಗಡಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿ ಸುತ್ತಾಳೆ. ಅಲ್ಲದೇ ಕೆಲಸಕ್ಕೆ ತಕ್ಕಂತೆ ಪಚ್ಚಿಯಮ್ಹಾಳ್ ಅಲಿಯಾಸ್ ಮುತ್ತು ತಮ್ಪಚ್ಚಿಯಮ್ಹಾಳ್ಮ ಎಂಬ ಹೆಸರಿನಲ್ಲೇ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಬ್ಯಾಂಕ್ ಖಾತೆಯನ್ನೂ ಮಾಡಿಸುತ್ತಾಳೆ.
ಗೊತ್ತಿದ್ದದ್ದು ಕುಟುಂಬಸ್ಥರಿಗೆ ಮಾತ್ರ: ಆದರೆ ಆಕೆ ಪುರುಷನಲ್ಲ ಮಹಿಳೆ ಎಂಬ ವಿಚಾರ ಗೊತ್ತಿದ್ದದ್ದು ಮಗಳು ಮತ್ತು ಹತ್ತಿರದ ಸಂಬಂಧಿಕರಿಗೆ ಮಾತ್ರ. ಸುಮಾರು 30 ವರ್ಷ ಪುರುಷನ ವೇಷದಲ್ಲೇ ಜೀವನ ಸಾಗಿಸುತ್ತಿದ್ದಳು. ಕೆಲಸ ಮಾಡುವ ಸ್ಥಳದಲ್ಲೂ ಆಕೆಯನ್ನು ಅನ್ನಾಚಿ (ಪುರುಷನ ಸಾಂಪ್ರದಾಯಿಕ ಹೆಸರು) ಎಂದೇ ಕರೆಯುತ್ತಿದ್ದರು. ಮಗಳ ಸುರಕ್ಷೆಗಾಗಿ ಪೇಂಟರ್, ಟೀ ಮಾಸ್ಟರ್, ಪರೋಟಾ ಮಾಸ್ಟರ್ ಸೇರಿ ಎಲ್ಲ ರೀತಿಯ ಕೆಲಸವನ್ನೂ ಮಾಡಿ ಪ್ರತಿಯೊಂದು ರೂಪಾಯಿಯನ್ನೂ ಉಳಿತಾಯ ಮಾಡಿದ್ದಾಳೆ.
ಈಗಲೂ ಅದೇ ಉಡುಗೆ!: ಪಚ್ಚಿಯಮ್ಮಾಳ್ ಮಗಳು ಷಣ್ಮುಗ ಸುಂದರಿ ಈಗ ಮದುವೆಯಾಗಿದ್ದಾಳೆ. ಮಗಳ ಕುಟುಂಬವೂ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ಆದರೆ 57ರ ಹರೆಯದ ಈ ಮಹಿಳೆ ತನ್ನ ಉಡುಗೆ ತೊಡುಗೆಯನ್ನು ಬದಲಿಸಿಕೊಳ್ಳಲು ತಯಾರಿಲ್ಲ. ಏಕೆಂದರೆ ಪರ್ಯಾಯ ಗುರುತು ತನ್ನ ಮಗಳಿಗೆ ಸುರಕ್ಷಿತ ಜೀವನವನ್ನು ಖಾತ್ರಿಪಡಿಸಿದೆ ಎಂಬ ಕಾರಣಕ್ಕಾಗಿ, ತಾನು ಸಾಯುವವರೆಗೂ ‘ಮುತ್ತು’ ಆಗಿಯೇ ಉಳಿಯಲು ಬಯಸಿರುವುದು ನಿಜಕ್ಕೂ ಅವಳ ಗಟ್ಟಿತನಕ್ಕೆ ಸಾಕ್ಷಿ.