ವೈಕಲ್ಯ ಗೆದ್ದ ಅಸಾಮಾನ್ಯರು; ಈ ಶತಮಾನದ ಮಾದರಿ ಮಹಿಳೆಯರು

sdfsdfsdfsdfsdfsdfsdf
Published on
‘ವೈಕಲ್ಯ ಮನಸ್ಸಿಗೇ ಹೊರತು ದೇಹಕ್ಕಲ್ಲ. ಬದುಕಿ ಸಾಧಿಸುವ ಛಲ ಇದ್ದರೆ ಸಿಕ್ಕೇ ಸಿಗುತ್ತದೆ ಫಲ....’ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡರೂ ಎದೆಗುಂದದೆ ಕೃತಕ ಕಾಲಿನಲ್ಲೇ ಭರತನಾಟ್ಯ ಕಲಿತು ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಿಂಚು ಹರಿಸಿ ಸಿನಿಮಾದಲ್ಲೂ ಸೈ ಎನಿಸಿಕೊಂಡಿರುವ ಮಾಜಿ ಸಿನಿಮಾ ನಟಿ ಸುಧಾಚಂದ್ರನ್ ಅವರ ದಶಕಗಳ ಹಿಂದಿನ ಮಾತಿದು. ಇದು ಸುಧಾ ಅವರೊಬ್ಬರ ಅಭಿಪ್ರಾಯವಲ್ಲ. ಅಂಗವೈಕಲ್ಯತೆಯ ಕಹಿಯ ಮೂಟೆ ಹೊತ್ತು ಸಾಧನೆಯ ಶಿಖರವೇರಿ ಯಶಸ್ಸಿನ ಧ್ವಜ ಹಾರಿಸಿರುವ ನೂರಾರು ಮಹಿಳೆಯರು ಅಂತರಾಳವೂ ಹೌದು. ಇವರ್ಯಾರೂ ಕಣ್ಣೀರಿನ ಕನಿಕರ ಕೇಳಲಿಲ್ಲ. ಹಣಕ್ಕಾಗಿ ಕೈಯೊಡ್ಡಲಿಲ್ಲ. ಚಪ್ಪಾಳೆ ತಟ್ಟಿ ಎಂದು ಗೋಗರೆಯಲಿಲ್ಲ. ಆತ್ಮಸ್ಥೈರ್ಯದ ಒಂದೇ ಶಕ್ತಿಯೊಂದಿಗೆ ಜೀವನದ ಸಾರ್ಥಕತೆ ಕಂಡುಕೊಂಡವರು. ಇಂತಹ ಕೆಲವು ಸಾಧಕರ ಹೆಜ್ಜೆ ಗುರುತಿನ ಅವಲೋಕನ ಇಲ್ಲಿದೆ.

|ಮಂಜುನಾಥ್ ಬಿ.ಎಸ್.

 ಕೀರುತಿ ತಂದ ಮಾಲತಿ: ಅವರು ಮಾಲತಿಹೊಳ್ಳ. ಉಡುಪಿ ಜಿಲ್ಲೆಯ ಕೋಟಾ ಗ್ರಾಮದಲ್ಲಿ ಹುಟ್ಟಿದ ಮಾಲತಿ ಮೊದಲನೇ ವರ್ಷದ ಹುಟ್ಟುಹುಬ್ಬ ಆಚರಿಸಿಕೊಂಡ ಕೆಲವೇ ದಿನಗಳಲ್ಲಿ ಪೋಲಿಯೋಗೆ ತುತ್ತಾದರು. ದೇಹ ಸ್ವಾಧೀನ ಕಳೆದುಕೊಂಡಿತು. ಮೇಲೇಳಲೂ ಕಷ್ಟಪಡಬೇಕಾದ ಸ್ಥಿತಿ. ಹಾಗಂತ ಅವರು ಹಾಸಿಗೆ ಹಿಡಿಯಲಿಲ್ಲ. ಕ್ರೀಡೆಯಲ್ಲಿ ತಮ್ಮ ಭವಿಷ್ಯದ ಬೆಳಕು ಕಂಡರು. ಕಡು ಬಡತನದಲ್ಲೂ ಡಿಸ್ಕಸ್, ಶಾಟ್​ಪುಟ್ ಗೀಳಂಟಿಸಿಕೊಂಡರು. ಅದೃಷ್ಟ ಅವರ ಕೈಬಿಡಲಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ 450ಕ್ಕೂ ಅಧಿಕ ಪದಕ ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದಿರುವ ಅವರು ನಾಲ್ಕು ಬಾರಿ ಪ್ಯಾರಾಲಿಂಪಿಕ್ಸ್​ನಲ್ಲೂ ಭಾಗಿಯಾಗುವ ಮೂಲಕ ದೇಶದ ಹಿರಿಮೆಯನ್ನೂ ಎತ್ತಿಹಿಡಿದರು. ಐವಾಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿದ್ದು ಅವರ ಐತಿಹಾಸಿಕ ಸಾಧನೆ. ತಮ್ಮ ಅಂಗವೈಕಲ್ಯದ ಬಗ್ಗೆ ಅವರಿಗೆ ಮರುಕವಿಲ್ಲ. ದೇಹದಲ್ಲಿ ಶಕ್ತಿ ಇರುವವರೆಗೂ ನಾನು ಕ್ರೀಡಾಪಟು ಆಗಿಯೇ ಇರುತ್ತೇನೆಂಬ ಅವರ ಛಲದ ಮಾತು ಇಂದಿನ ಯುವಶಕ್ತಿಗೆ ಪ್ರೇರಣೆ.

ಪರ್ವತ ಸಿಂಹ ಸಿನ್ಹಾ: ಮಾಲತಿ, ಸುಧಾಗಿಂತ ಪರ್ವತಾರೋಹಿ ಅರುಣಿಮಾ ಸಿನ್ಹಾ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಕ್ರೀಡಾಪಟುವಾದ ಸಿನ್ಹಾ ವಾಲಿಬಾಲ್ ಆಟಗಾರ್ತಿಯಾಗಿಯೂ ಹೆಸರು ಮಾಡಿದ್ದರು. ಮೌಂಟ್ ಎವರೆಸ್ಟ್, ಕಿಲಿಮಂಜಾರೋ ಸೇರಿ ಅನೇಕ ಪರ್ವತಗಳನ್ನು ಹತ್ತಿ ದಾಖಲೆಯ ಬಾವುಟ ನೆಟ್ಟಿದ್ದಾರೆ. 2011ರಲ್ಲಿ ಅವರನ್ನು ದರೋಡೆಕೋರರು ಚಲಿಸುತ್ತಿದ್ದ ರೈಲಿನಿಂದಲೇ ಎತ್ತಿ ಎಸೆದಿದ್ದರು. ಇದರಿಂದ ಅರುಣಿಮಾ ತಮ್ಮ ಎಡಗಾಲನ್ನೇ ಕಳೆದುಕೊಳ್ಳ ಬೇಕಾಯಿತು. ಮೊಣಕಾಲಿನವರೆಗೆ ಕತ್ತರಿಸಿದ ಕಾಲಿನಲ್ಲಿ ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಆದರೆ ಆ ಕಷ್ಟವನ್ನೇ ಅಸ್ತ್ರವನ್ನಾಗಿಸಿಕೊಂಡ ಅರುಣಿಮಾ ಪರ್ವತ ಹತ್ತುವ ಸಾಹಸಕ್ಕೆ ಕೈಹಾಕಿದರು. ಪ್ರಾಸ್ಥೆಟಿಕ್ ಕಾಲಿನಿಂದಲೇ ಎವರೆಸ್ಟ್ ಏರಿದರು. ಅವರ ಈ ಸಾಧನೆಗೆ ವಿಶ್ವವೇ ನಿಬ್ಬೆರಗಾಗಿತು. ಅವರ ಸಾಹಸ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಸತ್ಕರಿಸಿತು.

ಭರತನಾಟ್ಯ ಕಲಾವಿದೆ ಸುಧಾ ಚಂದ್ರನ್ ದಕ್ಷಿಣ ಭಾರತದ ಬಹುಮುಖ ಪ್ರತಿಭೆ. ನಾಟ್ಯದ ಜತೆಯಲ್ಲೇ ಚಲನಚಿತ್ರ, ಕಿರುತೆರೆಯಲ್ಲೂ ಸಾಕಷ್ಟು ಮೋಡಿ ಮಾಡಿದ್ದಾರೆ. ಪಾಲಕರೊಂದಿಗೆ ತಮಿಳುನಾಡಿನಲ್ಲಿ ದೇವಸ್ಥಾನಕ್ಕೆ ಹೋಗಿ ಬರುವ ವೇಳೆ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಬಳಿಕ ಅವರ ಭವಿಷ್ಯವೇ ಕತ್ತಲಿಗೆ ಜಾರಿತೆಂದು ಮಾತಾಡಿಕೊಂಡವರೆಷ್ಟೋ. ಹೆತ್ತವರು ತೋಳಿಗೆ ಆಸರೆಯಾದರೂ ಕುಟುಂಬವರ ಅಸಡ್ಡೆ ತಪ್ಪಲಿಲ್ಲ. ಅವಮಾನವನ್ನೇ ಮೆಟ್ಟಿಲಾಗಿಸಿಕೊಂಡ ಸುಧಾ ಕೃತಕ ಕಾಲಲ್ಲೇ ನೃತ್ಯಾಭ್ಯಾಸ ಮಾಡಿದರು. ಅವರ ನಾಟ್ಯ ಪ್ರದರ್ಶನ ಸಿನಿ ಬದುಕಿಗೂ ದಾರಿ ಮಾಡಿಕೊಟ್ಟಿತು. ಕನ್ನಡ ಸೇರಿ ಹತ್ತಾರು ಭಾಷೆಗಳಲ್ಲಿ ನಟಿಸಿರುವ ಸುಧಾಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲೇ ವಿಶೇಷವಾದ ಜ್ಯೂರಿ ಗೌರವ ಸಂದಿದೆ. ಇಂದಿಗೂ ಸುಧಾ ನಾಟ್ಯ ನಂಟು ಬಿಟ್ಟಿಲ್ಲ. ವಿವಿಧ ಶೋಗಳಿಗೆ ಜಡ್ಜ್ ಆಗಿ ಹೋಗುತ್ತಿದ್ದಾರೆ. ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಬಹುಷಃ ಕಾಲಿದ್ದರೂ ನನಗೆ ಇಷ್ಟು ಖ್ಯಾತಿ ಸಿಗುತ್ತಿರಲಿಲ್ಲವೇನೋ ಎಂಬ ಅವರ ಮಾತಿನಲ್ಲಿ ಅಂಗವೈಕಲ್ಯತೆಯ ಬಗೆಗಿನ ಗೌರವ ವ್ಯಕ್ತವಾಗುತ್ತದೆ.

ವಿಶ್ವಸಂಸ್ಥೆಯಲ್ಲಿ ಸೈಮಾ ಮೋಡಿ: ಕ್ರೀಡೆ, ಸಿನಿಮಾ, ಮನರಂಜನೆ ಕ್ಷೇತ್ರ ಬಿಟ್ಟು ಆಡಳಿತಾತ್ಮಕ ಹುದ್ದೆಯ ವಿಚಾರಕ್ಕೆ ಬರುವುದಾದರೆ ಪಾಕಿಸ್ತಾನದ ವಿದೇಶಾಂಗ ಇಲಾಖೆ ಅಧಿಕಾರಿ ಸೈಮಾ ಸಲೀಂ ಹೆಸರು ಗಮನ ಸೆಳೆಯುತ್ತದೆ. ಅಂಧೆಯಾದ ಸೈಮಾ ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಕಾಶ್ಮೀರ ವಿಚಾರವಾಗಿ ಮಾತನಾಡಿದ ಅವರು ಒಂದು ಗಂಟೆ ನಿರರ್ಗಳ ಮಾತಿನ ಮೂಲಕ ಮೋಡಿ ಮಾಡಿದರು. ಭಾರತದ ಸ್ನೇಹಾದುಬೆ ಪಾಕಿಸ್ತಾನದ ದುಷ್ಕೃತ್ಯಗಳಿಗೆ ಸಾಕ್ಷಿ ಸಮೇತ ತಿರುಗೇಟು ನೀಡಿದರೂ ಕಣ್ಣಿಲ್ಲದ ಸೈಮಾ ಮಾತುಗಳು ಮೋಡಿ ಮಾಡಿದ್ದು ಸುಳ್ಳಲ್ಲ. ಮೂಲಭೂತವಾದಿಗಳ ನಾಡಿನಲ್ಲಿ ಓರ್ವ ಅಂಧೆಗೆ ವಿಶ್ವಸಂಸ್ಥೆ ಪ್ರತಿನಿಧಿಸುವ ಅವಕಾಶ ನೀಡಿದ್ದೇ ಒಂದು ಪವಾಡ ಎಂಬ ವಿಶ್ಲೇಷಣೆ ಕೇಳಿಬಂದವು.

ಸಾಹಸಿ ಈ ಮಾನಸಿ...

ಅಂಗವಿಕಲ ಮಹಿಳಾ ಸಾಧಕರನ್ನು ಪ್ರಸ್ತಾಪಿಸುವಾಗ ಮಾನಸಿ ನಯನ ಜೋಶಿ ಹೆಸರನ್ನು ಮರೆಯುವ ಹಾಗಿಲ್ಲ. ಮುಂಬೈ ಮೂಲದ ಅವರ ಕಥೆಯೇ ರೋಚಕ. 2011ರಲ್ಲಿ ರಸ್ತೆ ಅಪಘಾತದಲ್ಲಿ ಎಡಗಾಲು ಕಳೆದುಕೊಂಡ ಮಾನಸಿ ತಮ್ಮ 6ನೇ ವಯಸ್ಸಿನಿಂದಲೇ ಬ್ಯಾಡ್ಮಿಂಟನ್ ಬ್ಯಾಟ್ ಹಿಡಿದು ಮೈದಾನಕ್ಕಿಳಿದವರು. ಆಟದ ಜತೆಯಲ್ಲೇ ಎಲೆಕ್ಟ್ರಾನಿಕ್ಸ್, ಇಂಜಿನಿಯರಿಂಗ್ ಪದವಿ ಪಡೆದಿರುವ ಅವರು ಸಾಫ್ಟ್​ವೇರ್ ಅಭಿವೃದ್ಧಿ ಕೆಲಸದಲ್ಲೂ ಪರಿಣಿತೆ. ಸರಸ್ವತಿ ಕೈಹಿಡಿದಿದ್ದರೂ ಬ್ಯಾಡ್ಮಿಂಟನ್​ನಲ್ಲಿ ಏನಾದರು ಸಾಧಿಸಬೇಕೆಂಬ ಅವರ ಛಲ ಬಿಡಬ್ಲ್ಯುಎಫ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ತಂದುಕೊಟ್ಟಿತು. ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಸ್ವರ್ಣ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಹಾಗೆಯೇ ತಮ್ಮಂತಹ ಸಾವಿರಾರು ಯುವತಿಯರಿಗೂ ಸ್ಪೂರ್ತಿಯಾಗಿದ್ದಾರೆ.

ವೈಕಲ್ಯ ಗೆದ್ದವರು:

  1. ಇರಾ ಸಿಂಘಲ್, 2014ರಲ್ಲಿ ಯುಪಿ ಎಸ್ಸಿಯ ಟಾಪರ್ ಆಗಿ ಹೊರಹೊಮ್ಮಿದ ಮೀರತ್​ನ ಇರಾ ಐಎಎಸ್ ಅಧಿಕಾರಿ.
  2. ಪ್ರೀತಿ ಶ್ರೀನಿವಾಸನ್, ತಮಿಳುನಾಡಿನ 19 ವರ್ಷದೊಳಗಿನ ಕ್ರಿಕೆಟ್ ತಂಡದ ನಾಯಕಿ. 1997ರಲ್ಲಿ ನಡೆದಿದ್ದ ನ್ಯಾಷನಲ್ ಚಾಂಪಿಯನ್​ಶಿಪ್​ನಲ್ಲಿ ನಾಯಕತ್ವ ವಹಿಸಿದ್ದರು. ಈಜಿನಲ್ಲೂ ಈಕೆ ಸಾಧಕಿ.
  3. ವೈಶಾಲಿ ಸಲಾವ್ಕರ್, 2018ರಲ್ಲಿ ನಡೆದ 43ನೇ ವಿಶ್ವ ಚೆಸ್ ಒಲಿಂಪಿಯಾಡ್​ನಲ್ಲಿ ಭಾಗಿಯಾದ ಮೊದಲ ಅಂಧ ಭಾರತೀಯೆ. ಇವರು 8 ಸಲ ನ್ಯಾಷನಲ್ ಚಾಂಪಿಯನ್​ಶಿಪ್ ಗೆದ್ದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net