

ಭೌಗೋಳಿಕವಾಗಿ ಬೃಹತ್ತಾಗಿದ್ದರೆ ಆಡಳಿತವನ್ನು ಸರಿಯಾಗಿ ನಡೆಸುವುದು ಕಷ್ಟ; ಹೀಗಾಗಿ, ಸಣ್ಣ ರಾಜ್ಯಗಳಿದ್ದರೆ ಅನುಕೂಲ ಎಂಬುದು ಕೆಲವರ ವಾದ. ಈ ಕಾರಣಕ್ಕೆ ರಾಜ್ಯಗಳನ್ನು ವಿಭಜಿಸುತ್ತ ಹೋದರೆ ಅದಕ್ಕೆ ಕೊನೆಯೇ ಇರುವುದಿಲ್ಲ. ಆಡಳಿತದ ಪರಿಣಾಮಕಾರಿತ್ವ ಆಳುಗರ ಕ್ಷಮತೆಯನ್ನು ಅವಲಂಬಿಸಿರುತ್ತದೆ ಎಂಬುದು ಈ ಪರಿಕಲ್ಪನೆಯನ್ನು ವಿರೋಧಿಸುವವರ ಪ್ರತಿಪಾದನೆ.
ಎಂಥ ಚೆಂದದ ಹೆಸರು. ಕೇಳಿದಾಕ್ಷಣ ನಮ್ಮ ಅಕ್ಕನೋ ತಂಗಿಯೋ ನೆನಪಿಗೆ ಬರುವಂತಿದೆ. ಒಡಹುಟ್ಟಿದವರ ಸ್ಮರಣೆ ಬಂದಾಗ, ಹೇಗಿದ್ದಾರೊ, ಆರಾಮಿರಬಹುದು, ಎಲ್ಲ ಮಾಮೂಲಿನಂತೆ ಸಾಗುತ್ತಿರಬಹುದು, ಏನೂ ತೊಂದರೆಯಾಗದಿರಲಿ ಎಂದೆಲ್ಲ ಭಾವನೆ ಮೂಡುವುದು ಸಾಮಾನ್ಯ. ಈ ಏಳು ಸೋದರಿಯರ ಕುರಿತೂ ಇಂಥದೇ ಅನಿಸಿಕೆ ಮೂಡುತ್ತದೆ. ಆದರೆ ಈ ಸೋದರಿಯರ ವಾಸ್ತವ ಅಷ್ಟು ಸರಳವಾಗಿಲ್ಲ.
ಈಶಾನ್ಯದ ಏಳು ರಾಜ್ಯಗಳನ್ನು-ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾ ಸೇರಿಸಿ ಸಪ್ತ ಸೋದರಿಯರು ಎಂದು ಕರೆಯುವುದು ವಾಡಿಕೆ. 1972ರಲ್ಲಿ ಹೊಸ ರಾಜ್ಯಗಳ ಉದಯದ ಸಂದರ್ಭದಲ್ಲಿ, ಅಸ್ಸಾಂನ ಜ್ಯೋತಿ ಪ್ರಸಾದ ಸೈಕಿಯಾ ಎಂಬ ಅಧಿಕಾರಿ ಈ ಪದವನ್ನು ರೇಡಿಯೊ ಕಾರ್ಯಕ್ರಮವೊಂದರಲ್ಲಿ ಠಂಕಿಸಿದರಂತೆ. ಮುಂದೆ ಅವರು ಈ ಏಳು ರಾಜ್ಯಗಳಲ್ಲಿನ ಸಮಾನ ಅಂಶಗಳ ಕುರಿತು ಪುಸ್ತಕವನ್ನೂ ಬರೆದರು. ಹೀಗಾಗಿ ಈ ಏಳು ರಾಜ್ಯಗಳನ್ನು ಒಟ್ಟಾಗಿ ಕರೆಯುವಾಗ ‘ಸಪ್ತ ಸೋದರಿಯರು’ ಎಂಬ ಪದ ಸಾಮಾನ್ಯವಾಗಿ ಬಳಕೆಗೆ ಬಂತು. ಈ ಸಾಲಿಗೆ ಈಗ ಸಿಕ್ಕಿಂ ಅನ್ನೂ ಸೇರಿಸಿ ಈಶಾನ್ಯ ರಾಜ್ಯಗಳು ಎಂದು ಕರೆಯಲಾಗುತ್ತದೆ.
ಈಶಾನ್ಯದ ರಾಜ್ಯಗಳು ಒಂದೊಂದರದೂ ಒಂದೊಂದು ಸಮಸ್ಯೆ; ಅಥವಾ ಕೆಲವು ಸಮಸ್ಯೆಗಳು ಸಮಾನವಾಗಿವೆ. ಗುಡ್ಡಗಾಡು ಪ್ರದೇಶಗಳನ್ನು ಹೊಂದಿರುವ ಇಲ್ಲಿ, ಬುಡಕಟ್ಟು ಜನರ ಪ್ರಮಾಣವೂ ಜಾಸ್ತಿ ಇದೆ. ಹೀಗಾಗಿ ವೈವಿಧ್ಯತೆ ಇಲ್ಲಿನ ಉಸಿರು. ಈಗೀಗ ಅಲ್ಲಿನ ಕೆಲ ಭಾಗಗಳಿಗೆ ಅಭಿವೃದ್ಧಿಯ ಸ್ಪರ್ಶವಾಗುತ್ತಿದೆ. ಅದನ್ನು ಬದಿಗಿಟ್ಟು ನೋಡುವುದಾದರೆ, ಈಚೆಗೆ ಅಸ್ಸಾಂನಲ್ಲಿ ನಡೆದ ಒಂದು ಒಪ್ಪಂದ ಶಾಂತಿ ಮತ್ತು ಅಭಿವೃದ್ಧಿಯ ಹೊಸ ಭರವಸೆಯನ್ನು ಮೂಡಿಸುವಂತಿದೆ. (ಈ ಹಿಂದೆ ಎರಡು ಒಪ್ಪಂದ ಏರ್ಪಟ್ಟಿದ್ದವು) ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ ಮತ್ತು ಬಂಡುಕೋರ ಗುಂಪಿನ ನಾಲ್ಕು ಬಣಗಳ ನಡುವೆ ಕೆಲ ದಿನಗಳ ಹಿಂದೆ ತ್ರಿಪಕ್ಷೀಯ ಒಪ್ಪಂದ ಏರ್ಪಟ್ಟಿದೆ. ಒಡಂಬಡಿಕೆಯ ಕೆಲ ಮುಖ್ಯಾಂಶಗಳು ಇವು: ಬೋಡೋ ಲ್ಯಾಂಡ್ ಪ್ರಾಂತೀಯ ಸಮಿತಿಗಳನ್ನು (ಬಿಟಿಸಿ) ಬೋಡೋಲ್ಯಾಂಡ್ ಪ್ರಾಂತೀಯ ಪ್ರದೇಶ (ಬಿಟಿಆರ್) ಎಂದು ಹೆಸರು ಬದಲಿಸಿ ಹೆಚ್ಚಿನ ಅಧಿಕಾರ; ಬೋಡೋ ಸಮುದಾಯದವರು ಅಧಿಕವಾಗಿರುವ ಪ್ರದೇಶಗಳು ಬಿಟಿಆರ್ನಲ್ಲಿ ಸೇರ್ಪಡೆ; ಬಂಡುಕೋರರ ವಿರುದ್ಧದ ಗಂಭೀರವಲ್ಲದ ಕ್ರಿಮಿನಲ್ ಪ್ರಕರಣಗಳ ವಾಪಸಾತಿ; ಪ್ರತ್ಯೇಕ ಬೋಡೋ ರಾಜ್ಯದ ಹೋರಾಟದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ 5 ಲಕ್ಷ ರೂ. ನೆರವು. ಈ ಒಪ್ಪಂದದ ಪ್ರಕಾರ, ಬಂಡುಕೋರರು ಇನ್ನುಮುಂದೆ ಪ್ರತ್ಯೇಕ ಬೋಡೋ ರಾಜ್ಯದ ಸೊಲ್ಲೆತ್ತುವಂತಿಲ್ಲ ಮತ್ತು ರಾಜ್ಯದ ಅಭಿವೃದ್ಧಿಗೆ ಸಹಕರಿಸಬೇಕು. ಮುಂದಿನ ಮೂರು ವರ್ಷಗಳಲ್ಲಿ ಬೋಡೋ ಪ್ರದೇಶಗಳ ಅಭಿವೃದ್ಧಿಗಾಗಿ ಒಟ್ಟು 1500 ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತದೆ. ಮೇಲ್ನೋಟಕ್ಕೆ ಇದೊಂದು ಐತಿಹಾಸಿಕ ಹೆಜ್ಜೆಯಂತೆ ಭಾಸವಾಗುತ್ತಿದ್ದು, ಈಶಾನ್ಯದ ಹಲವು ಪ್ರದೇಶಗಳಲ್ಲಿ ಮುಖ್ಯವಾಗಿ ಅಸ್ಸಾಂನಲ್ಲಿ ಶಾಂತಿ ನೆಲೆಸುವ ಆಶಾಭಾವನೆ ವ್ಯಕ್ತವಾಗಿದ್ದು, ಪ್ರಧಾನಿ ಸಹಿತ ಅನೇಕ ನಾಯಕರು ಇದೇ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಆದರೆ, ಈಗ ಅಸ್ಸಾಂನಲ್ಲಿ ಬೋಡೋಗಳ ಪ್ರಮಾಣ ಕುಸಿದಿದ್ದು, ಅವರಿಗೆ ಹೆಚ್ಚಿನ ಆದ್ಯತೆ ನೀಡಿದರೆ ಉಳಿದವರು ಸುಮ್ಮನುಳಿಯುವರೇ ಎಂಬ ಸಣ್ಣ ಸಂಶಯವೂ ಇಣುಕಿದೆ.
ಈ ಹೋರಾಟದ ಇತಿಹಾಸದ ಕುರಿತು ಸಂಕ್ಷಿಪ್ತದಲ್ಲಿ ನೋಡುವುದಾದರೆ-ಅಸ್ಸಾಂನ ಹಲವು ಮೂಲನಿವಾಸಿಗಳನ್ನು ಸೇರಿಸಿ ಬೋಡೋಗಳು ಎಂದು ಕರೆಯಲಾಗುತ್ತದೆ. ಆ ರಾಜ್ಯದಲ್ಲಿ ಬುಡಕಟ್ಟು ಸಮುದಾಯಗಳೂ ಇವೆ. 1970 ರ ದಶಕದಲ್ಲಿನ ಬೆಳವಣಿಗೆಗಳು ಆ ರಾಜ್ಯವನ್ನು ಅಶಾಂತಿಯ ಮಡಿಲಿಗೆ ನೂಕಿದವು. 1971ರಲ್ಲಿ ನಡೆದ ಭಾರತ-ಪಾಕ್ ಯುದ್ಧ ಹಾಗೂ ಬಾಂಗ್ಲಾದೇಶದ ಉದಯದ ನಂತರದಲ್ಲಿ, ಅಲ್ಲಿಂದ ಭಾರಿ ಸಂಖ್ಯೆಯ ಜನರು ಅಸ್ಸಾಂನತ್ತ ದಾಂಗುಡಿಯಿಟ್ಟರು. ಇನ್ನೊಂದೆಡೆ, ಮ್ಯಾನ್ಮಾರ್ನಿಂದ ರೊಹಿಂಗ್ಯಾ ಮುಸ್ಲಿಮರೂ ಬಂದರು. ಈ ವಲಸೆ ರಾಜ್ಯದ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಪರಂಪರೆಯ ನಿಟ್ಟಿನಲ್ಲಿ ಅನೇಕ ಬಗೆಯಲ್ಲಿ ಆತಂಕಗಳನ್ನು ತಂದಿಟ್ಟು, ಕೆಲ ಮೂಲೆಗಳಿಂದ ಪ್ರತ್ಯೇಕ ರಾಜ್ಯದ ಕೂಗು ಕೇಳಲಾರಂಭಿಸಿತು. ಕೆಲ ಸಂಘಟನೆಗಳಂತೂ ಪ್ರತ್ಯೇಕ ಬೋಡೋ ದೇಶದ ಆಗ್ರಹ ಮುಂದಿಟ್ಟವು. ಪ್ರತ್ಯೇಕ ದೇಶದ ಆಗ್ರಹಕ್ಕೆ ಹೆಚ್ಚು ಮನ್ನಣೆ ಸಿಗಲಿಲ್ಲವಾದರೂ ಪ್ರತ್ಯೇಕ ರಾಜ್ಯದ ಬೇಡಿಕೆ ಕ್ರಮೇಣ ಹಿಂಸಾತ್ಮಕ ಹೋರಾಟಕ್ಕೆ ಹಾದಿಮಾಡಿಕೊಟ್ಟಿತು. 1979ರಲ್ಲಿ ಅಸ್ತಿತ್ವಕ್ಕೆ ಬಂದ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ(ಉಲ್ಪಾ) ಈ ನಿಟ್ಟಿನಲ್ಲಿ ಮುಖ್ಯ ತೀವ್ರವಾದಿ ಸಂಘಟನೆಯಾಗಿತ್ತು. ಉಲ್ಪಾ ನಾಯಕರು ಹೋರಾಡಿ ಹೋರಾಡಿ ಕ್ರಮೇಣ ಹಣ್ಣಾದರು. ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್
(ಎನ್ಡಿಎಫ್ಬಿ), ಯುನೈಟೆಡ್ ಡೆಮಾಕ್ರಟಿಕ್ ಸಾಲಿಡಾರಿಟಿ (ಯುಪಿಡಿಎಸ್) ಮುಂತಾದ ತೀವ್ರವಾದಿ ಸಂಘಟನೆಗಳೂ ಹೋರಾಟದ ಕಣದಲ್ಲಿ ಕಾಣಿಸಿಕೊಂಡವು. ಈ ನಡುವೆ, ಅಕ್ರಮ ವಲಸೆ ವಿರುದ್ಧ ಅಸ್ಸಾಂ ವಿದ್ಯಾರ್ಥಿಗಳು ಹೋರಾಟಕ್ಕೆ ಧುಮುಕಿದರು. ಒಟ್ಟಿನಲ್ಲಿ, ಆ ರಾಜ್ಯ ಹೋರಾಟದ ಕುಲುಮೆಯಲ್ಲಿ ನೊಂದು ಬೆಂದಿತು. ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರಕಾರ, ಹಿಂಸಾಚಾರದಿಂದಾಗಿ ಅಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಇನ್ನಾದರೂ ಅಲ್ಲಿ ಶಾಂತಿ ನೆಲೆಸಲೆಂಬುದು ಎಲ್ಲರ ಆಶಯ.
****
ತಮ್ಮನ್ನು ಕಡೆಗಣಿಸಲಾಗುತ್ತಿದೆ, ಅಭಿವೃದ್ಧಿ ಆಗುತ್ತಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿದಾಗ ಅಸಮಾಧಾನಗೊಳ್ಳುವುದು, ಬೇಡಿಕೆ ಮುಂದಿರಿಸಿ ಕೊಂಡು ಆಳುಗರನ್ನು ಆಗ್ರಹಿಸುವುದು ಇವೆಲ್ಲ ಇದ್ದದ್ದೇ. ಮತ್ತು ಪ್ರಜಾಪ್ರಭುತ್ವದಲ್ಲಿ ಇಂಥ ಅವಕಾಶ ಇದೆ. ಆದರೆ ಹೋರಾಟ ಹಿಂಸಾತ್ಮಕ ರೂಪ ತಳೆದಾಗ ಸಮಸ್ಯೆ ಉಂಟಾಗುತ್ತದೆ. ಅಸ್ಸಾಂನಲ್ಲಿ ಆದದ್ದು ಅದೇ. ಹಾಗೆನೋಡಿದರೆ, ವರ್ತಮಾನದಲ್ಲಿ ನಮ್ಮ ದೇಶದಲ್ಲಿ ಇನ್ನೂ ಕೆಲವು ರಾಜ್ಯಗಳ ಸ್ಥಾಪನೆ ಬೇಡಿಕೆ ಇದೆ.
ಉತ್ತರ ಪ್ರದೇಶವನ್ನು ವಿಭಜಿಸಿ ಹರೀತ್ ಪ್ರದೇಶ (ರಾಜ್ಯದ ಉತ್ತರ ಭಾಗ)ವಾಗಿಸಬೇಕೆಂಬ ಆಗ್ರಹ ಇದೆ. ರಾಷ್ಟ್ರೀಯ ಲೋಕದಳದ ಅಜಿತ್ ಸಿಂಗ್ ಈ ಬೇಡಿಕೆಯ ಮುಂಚೂಣಿಯಲ್ಲಿದ್ದಾರೆ. ರಾಜ್ಯದ ಪೂರ್ವಭಾಗಗಳನ್ನು ಸೇರಿಸಿ ಪೂರ್ವಾಂಚಲವಾಗಿಸಬೇಕೆಂಬ ಮತ್ತೊಂದು ಬೇಡಿಕೆಯೂ ಇದೆ. ಉತ್ತರ ಪ್ರದೇಶ ಬೃಹತ್ ರಾಜ್ಯವಾಗಿರುವುದರಿಂದ ಆಡಳಿತಾತ್ಮಕ ಅನುಕೂಲದ ಉದ್ದೇಶದಿಂದ ಅದನ್ನು ವಿಭಜಿಸಬೇಕೆಂಬ ಬೇಡಿಕೆ ಬೇರೆ ಬೇರೆ ವಲಯದಲ್ಲಿಯೂ ಇದೆ. ಮಾಯಾವತಿ ಮುಖ್ಯಮಂತ್ರಿಯಾಗಿದ್ದಾಗ, ಉಪ್ರವನ್ನು ನಾಲ್ಕು ರಾಜ್ಯಗಳನ್ನಾಗಿ ವಿಭಜಿಸಬೇಕೆಂಬ ಪ್ರಸ್ತಾವನೆ ಚರ್ಚೆಗೆ ಬಂದಿತ್ತು. ಆದರೆ ಆ ವಿಷಯ ಮುಂದಕ್ಕೆ ಹೋಗಲಿಲ್ಲ. ದಕ್ಷಿಣ ಗುಜರಾತ್ ಭಾಗಗಳನ್ನು ಸೇರಿಸಿ ಸೌರಾಷ್ಟ್ರ ರಾಜ್ಯವಾಗಿಸಬೇಕೆಂಬ ಬೇಡಿಕೆ ಇದೆ. ಉತ್ತರ ಪಶ್ಚಿಮ ಬಂಗಾಳದ ಪ್ರದೇಶಗಳನ್ನು ಗೋರ್ಖಾಲ್ಯಾಂಡ್ ರಾಜ್ಯವಾಗಿಸಬೇಕೆಂಬ ಆಗ್ರಹ ಬಹುದಿನಗಳಿಂದ ಚಾಲ್ತಿಯಲ್ಲಿದೆ. ಇನ್ನು, ಜಮ್ಮು-ಕಾಶ್ಮೀರದ ಲಡಾಖನ್ನು ಪ್ರತ್ಯೇಕ ರಾಜ್ಯವಾಗಿಸಬೇಕೆಂಬ ಬೇಡಿಕೆಯನ್ನು, ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಈಚೆಗೆ ಈಡೇರಿಸಿದೆ. ತಮಿಳುನಾಡಿನ ದಕ್ಷಿಣ ಭಾಗಗಳನ್ನು ಕೊಂಗುನಾಡು ಹೆಸರಿನಲ್ಲಿ ಪ್ರತ್ಯೇಕ ರಾಜ್ಯವಾಗಿಸಬೇಕೆಂಬ ದನಿ ಅಲ್ಲಲ್ಲಿ ಇದೆ. ಮಹಾರಾಷ್ಟ್ರದಲ್ಲಿ ವಿದರ್ಭ ರಾಜ್ಯದ ಬೇಡಿಕೆ ಇದೆ. ನಮ್ಮ ಕರ್ನಾಟಕದಲ್ಲಿಯೂ ಆಗೀಗ ಉತ್ತರ ಕರ್ನಾಟಕ ಮತ್ತು ಕೊಡಗು ಪ್ರತ್ಯೇಕ ರಾಜ್ಯದ ದನಿಗಳು ಕೇಳಿಬರುವುದುಂಟು. ಆದರೆ ಆ ಆಗ್ರಹಗಳು ಅಷ್ಟು ಸಾರ್ವಜನಿಕ ಸ್ವೀಕಾರಾರ್ಹತೆ ಪಡೆದಿಲ್ಲ. ತೆಲಂಗಾಣ ಪ್ರತ್ಯೇಕ ರಾಜ್ಯದ ಬೇಡಿಕೆ ಈಡೇರಿದೆ. ಅಂದಹಾಗೆ, 1950ರ ದಶಕದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಗೆ ಆಗ್ರಹಿಸಿ ಆಂಧ್ರದ ಪೊಟ್ಟಿ ಶ್ರೀರಾಮುಲು ಸತ್ಯಾಗ್ರಹ ನಡೆಸಿದ್ದರು. ಆ ರಾಜ್ಯ ಈಗ ಎರಡಾಗಿದೆ.
ಭೌಗೋಳಿಕವಾಗಿ ಬೃಹತ್ತಾಗಿದ್ದರೆ ಆಡಳಿತವನ್ನು ಸರಿಯಾಗಿ ನಡೆಸುವುದು ಕಷ್ಟ; ಆಡಳಿತಕೇಂದ್ರದಿಂದ ದೂರವಿರುವವರಿಗೆ ಅಭಿವೃದ್ಧಿಯ ಫಲ ಸರಿಯಾಗಿ ಸಿಗುವುದು ಕಷ್ಟವಾಗುತ್ತದೆ. ಹೀಗಾಗಿ, ಸಣ್ಣ ರಾಜ್ಯಗಳಿದ್ದರೆ ಅನುಕೂಲ ಎಂಬುದು ಕೆಲವರ ವಾದ. ಆದರೆ ಈ ಕಾರಣಕ್ಕೆ ರಾಜ್ಯಗಳನ್ನು ವಿಭಜಿಸುತ್ತ ಹೋದರೆ ಅದಕ್ಕೆ ಕೊನೆಯೇ ಇರುವುದಿಲ್ಲ. ಆಡಳಿತದ ಪರಿಣಾಮಕಾರಿತ್ವ ಆಳುಗರ ಕ್ಷಮತೆಯನ್ನು ಅವಲಂಬಿಸಿರುತ್ತದೆ. ಅಲ್ಲದೆ, ಪ್ರತ್ಯೇಕತಾಭಾವನೆ ಬೆಳೆಯುತ್ತ ಹೋಗಿ ಒಕ್ಕೂಟ ವ್ಯವಸ್ಥೆಗೆ ಬೇರೆ ಬೇರೆ ಸಮಸ್ಯೆಗಳು ಎದುರಾಗಬಹುದು ಎಂಬುದು ಈ ಪರಿಕಲ್ಪನೆಯನ್ನು ವಿರೋಧಿಸುವವರ ಪ್ರತಿಪಾದನೆ. ಒಟ್ಟಿನಲ್ಲಿ ಇದು ಬಗೆಹರಿಯದ ಜಿಜ್ಞಾಸೆ.
ಈ ವಿಭಕ್ತತೆ ಎಂಬುದು ರಾಜ್ಯಗಳಿಗೆ ಮಾತ್ರವಲ್ಲ ಕುಟುಂಬಗಳಿಗೂ ಅನ್ವಯ. ಈಚಿನ ವರ್ಷಗಳಲ್ಲಿ ಭಾರತದಲ್ಲಿ ವಿಭಕ್ತ ಕುಟುಂಬಗಳು ಹೆಚ್ಚುತ್ತಿವೆ ಎಂಬುದು ಎಲ್ಲರ ಗಮನಕ್ಕೂ ಬಂದಿರುವ ಸಂಗತಿ. ಇಷ್ಟು ದಿನಗಳ ಕಾಲ ಒಂದೇ ಮನೆಯಲ್ಲಿದ್ದ ಅಣ್ಣತಮ್ಮಂದಿರಲ್ಲಿ ಭಿನ್ನಾಭಿಪ್ರಾಯ ಮೂಡಿ ಬೇರೆ ಬೇರೆ ಮನೆ ಮಾಡುತ್ತಾರೆ; ಅಪ್ಪ-ಮಕ್ಕಳು ಹಿಸೆಯಾಗುತ್ತಾರೆ. ಅನೇಕ ಸಲ ಇಲ್ಲಿ ಮನೆ ಮಾತ್ರವಲ್ಲ ಮನಸುಗಳೂ ಒಡೆಯುತ್ತವೆ. ಗಾದೆಯೇ ಇದೆಯಲ್ಲ- ‘ಹುಟ್ಟುವಾಗ ಅಣ್ಣತಮ್ಮಂದಿರು; ಬೆಳೆಯುವಾಗ ದಾಯಾದಿಗಳು’ ಅಂತ. ಕೆಲವೊಮ್ಮೆ ಏನಾಗುತ್ತದೆಯೆಂದರೆ, ಒಟ್ಟಿಗಿರುವಾಗ ಆ ಮನೆ ವಿಶೇಷ ಏರುಗತಿ ಕಾಣುವುದಿಲ್ಲ. ಅವನು ಮಾಡಲಿ ಎಂದು ಇವನು; ಇವನು ಮಾಡಲಿ ಎಂದು ಅವನು- ಹೀಗೆ ಹಗ್ಗಜಗ್ಗಾಟದಲ್ಲೇ ದಿನ ಕಳೆಯುತ್ತದೆ. ಆದರೆ ಹಿಸೆ ಮಾಡಿಕೊಟ್ಟಾಗ ತಂತಮ್ಮ ‘ಪಾಲಿಗೆ ಬಂದ ಪಂಚಾಮೃತವನ್ನು’ ಸರಿಯಾಗಿ ನಡೆಸಿಕೊಂಡು ಹೋಗಲೇಬೇಕು. ಇಲ್ಲವಾದರೆ ಕಷ್ಟನಷ್ಟ ಅವರಿಗೇ. ಆ ಲೆಕ್ಕದಲ್ಲಿ ನೋಡಿದರೆ, ಅವರವರದನ್ನು ಅವರವರಿಗೆ ಕೊಟ್ಟರೆ ಮನೆಯನ್ನು ಅಭಿವೃದ್ಧಿ ಮಾಡಿಕೊಂಡಾದರೂ ಹೋಗುತ್ತಾರೆ. ಆದರೆ ಅವಿಭಕ್ತ ಕುಟುಂಬವೊಂದು ವಿಭಕ್ತವಾಗಿ ಪರಿವರ್ತನೆಯಾದರೆ ಅದರಿಂದಾಗುವ ನಷ್ಟಗಳೂ ಅಧಿಕ ಎಂಬುದನ್ನು ಮರೆಯಬಾರದು. ಅದರ ಪರಿಣಾಮ ಈಗಾಗಲೇ ನಮ್ಮ ನಗರ ಮತ್ತು ಗ್ರಾಮಗಳಲ್ಲಿ ಕಂಡುಬರುತ್ತಿದೆ. ಆದರೆ, ಭೌತಿಕ ಪ್ರಗತಿಯ ಲೆಕ್ಕಾಚಾರವೇ ಪ್ರಮುಖವಾದಾಗ ಭಾವನೆಗೆ ಬೆಲೆಯೆಲ್ಲಿ?
ಕುಟುಂಬ ಇರಲಿ, ತಂದೆ-ಮಕ್ಕಳು, ಗಂಡ-ಹೆಂಡತಿ ಮುಂತಾದ ಸಂಬಂಧಗಳೂ ಒಡೆದುಹೋಗುತ್ತಿರುವುದು ಮತ್ತಷ್ಟು ಕಳವಳಕಾರಿ. ಮೊದಲಾದರೆ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಅಷ್ಟಾಗಿ ಇರಲಿಲ್ಲ. ಹೀಗಾಗಿ ಅಸಮಾಧಾನ, ಮುನಿಸುಗಳ ನಡುವೆಯೇ ದಿನದೂಡುತ್ತಿದ್ದರು. ಈಗ ಹಾಗಲ್ಲ. ‘ನಾನು ನಾನು’ ಎಂಬ ಅಹಂ ತಾರಕಕ್ಕೇರಿ ಮನಸು ಛಿದ್ರವಾಗುತ್ತದೆ.
ಭಾರತದ ಟ್ರೆಂಡ್ ಗಮನಿಸುವಾಗ, ಏಕ ಸದಸ್ಯ ಕುಟುಂಬಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಂದರೆ, ಉದ್ಯೋಗದ ಸಲುವಾಗಿ ಮನೆಯ ಒಬ್ಬ ಸದಸ್ಯ ಬೇರೆಡೆ ವಲಸೆ ಹೋಗುವುದು ಅಥವಾ ಇಬ್ಬರಿರುವ ಮನೆಯಲ್ಲಿ ಒಬ್ಬರು ಸಾವನ್ನಪ್ಪಿದರೆ ಒಬ್ಬರೇ ಉಳಿಯುವಂತಾಗುತ್ತದೆ. 2001ರ ಜನಗಣತಿ ಪ್ರಕಾರ, ಭಾರತದಲ್ಲಿ ಇಂಥ ಏಕಸದಸ್ಯ ಕುಟುಂಬಗಳ ಸಂಖ್ಯೆ ಸುಮಾರು 75 ಲಕ್ಷಇತ್ತು. ಅಂದರೆ, ಒಟ್ಟು ಕುಟುಂಬಗಳ ಲೆಕ್ಕದಲ್ಲಿ ಶೇ.3.9ರಷ್ಟು.
ಕೊನೇ ಮಾತು: ಒಟ್ಟಿಗಿದ್ದರೂ, ಪ್ರತ್ಯೇಕವಾಗಿದ್ದರೂ ಮನಸುಗಳು ಹತ್ತಿರದಲ್ಲಿರುವಂತೆ ನೋಡಿಕೊಂಡರೆ ಇದ್ದುದರಲ್ಲಿ ನೆಮ್ಮದಿ. ಇಲ್ಲವಾದರೆ ಹತ್ತಿರದಲ್ಲಿದ್ದರೂ ದೂರವೇ!