ಉರಿವಾ ಸೂರ್ಯನ ಹಾಂಗೆ ಮೈನೊಗವ ಉರಿಸೋ...

Column F
Published on
ಕೊಮರಂ ಭೀಮುದೋ ಕೊಮರಂ ಭೀಮುದೋ

ಉರಿವಾ ಸೂರ್ಯನ ಹಾಂಗೆ ಮೈನೊಗವ ಉರಿಸೋ.. ಮೈನೊಗವ ಉರಿಸೋ

ಕೊಮರಂ ಭೀಮುದೋ ಕೊಮರಂ ಭೀಮುದೋ

ನರನಾದಿ ಕುದಿವಾಂಗೆ ಧಗಧಗನೇ ಉರಿಸೋ... ಧಗಧಗನೇ ಉರಿಸೋ

ಕೈಮುಗಿದು ಬಿಳಿದೊರೆಯ ಕಾಲಿಗೆ ನೀ ಬಿದ್ರೆ

ಕಾಡಡವಿಯ ಮಗನಲ್ಲ ಕೇಳೋ... ಮಗನಲ್ಲ ಕೇಳೋ

ಜುಲುಮೆ ದರ್ಪವನ ನೀನು ಸಹಿಸಿ ಶರಣೆಂದ್ರೆ

ಭೂತಾಯ ಮಡಿಲಲ್ಲಿ ಬೆಳೆದಿಲ್ಲ ಕೇಳೋ... ಬೆಳೆದಿಲ್ಲ ಕೇಳೋ

ಈಚೆಗೆ ತೆರೆಕಂಡು ಭರ್ಜರಿ ಕಮಾಯಿ ಮಾಡುತ್ತಿರುವ ‘ಆರ್​ಆರ್​ಆರ್’ ಸಿನಿಮಾದಲ್ಲಿ ಬರುವ ಒಂದು ಹಾಡಿನ ಸಾಲುಗಳಿವು. ಈ ಚಿತ್ರದ ಎರಡು ಪ್ರಮುಖ ಪಾತ್ರಗಳಲ್ಲಿ ಒಂದಾದ ಭೀಮನನ್ನು(ತೆಲುಗಿನ ಜನಪ್ರಿಯ ನಟ ಜ್ಯೂನಿಯರ್ ಎನ್​ಟಿಆರ್ ಈ ಪಾತ್ರವನ್ನು ಸಶಕ್ತವಾಗಿ ಪೋಷಿಸಿದ್ದಾರೆೆ) ಬ್ರಿಟಿಷರು ಹಿಂಸಿಸುವ ಸನ್ನಿವೇಶದ ಚಿತ್ರಣ ಇದು. ಬ್ರಿಟಿಷ್ ಅಧಿಕಾರಿಗಳ ಎದುರು ಮಂಡಿಯೂರಿದರೆ ಗಲ್ಲು ಶಿಕ್ಷೆಯಿಂದ ವಿನಾಯಿತಿ ನೀಡುವ ಆಫರನ್ನು ಅವನಿಗೆ ನೀಡಲಾಗಿರುತ್ತದೆ. ಅಪ್ಪಟ ದೇಶಪ್ರೇಮಿಯಾದ ಯಾರೇ ಆದರೂ ಕನಸಿನಲ್ಲಿಯೂ ಯೋಚಿಸಲಾಗದಂಥದು ಇದು. ಅದರಲ್ಲೂ ಭೀಮನಂಥವನು... ಛೆ! ಸಾಧ್ಯವೇ ಇಲ್ಲ. ಅದಕ್ಕಾಗಿ ಅವನನ್ನು ಸಾರ್ವಜನಿಕವಾಗಿ ಬಹಿರಂಗ ವೇದಿಕೆಯ ಮೇಲೆ ಕ್ರೂರವಾಗಿ ಹಿಂಸಿಸಲಾಗುತ್ತದೆ; ಚಾಟಿಯಿಂದ ಹೊಡೆಯಲಾಗುತ್ತದೆ; ಮೊಳೆ ಅಳವಡಿಸಿದ ಬಾರುಕೋಲಿನಿಂದ ಹೊಡೆಯಲಾಗುತ್ತದೆ. ಉಹುಂ. ಇಷ್ಟೆಲ್ಲ ಏಟು ಬಿದ್ದರೂ ಆತ ಮೊಣಕಾಲನ್ನು ನೆಲಕ್ಕೆ ತಾಗಿಸುವುದಿಲ್ಲ. ಒಂದೊಮ್ಮೆ ಹಾಗೆಮಾಡಿದಲ್ಲಿ ಬ್ರಿಟಿಷ್ ವಸಾಹತುಶಾಹಿ ಎದುರು ಶರಣಾದಂತಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಇಂಥದೊಂದು ಮನಸ್ಥಿತಿ ಆಳವಾಗಿ ಬೇರೂರಿತ್ತು. ಪ್ರಾಣಹೋದರೂ ಸರಿ; ಬ್ರಿಟಿಷರಿಗೆ ತಲೆಬಾಗೆನು ಎಂಬ ಛಲ ಅದು. ಸಿನಿಮಾದಲ್ಲಿ ಇಂಥ ದೃಶ್ಯಗಳನ್ನು ಸ್ವಲ್ಪ ಉತ್ಪ್ರೇಕ್ಷೆಯಾಗಿ ತೋರಿಸುತ್ತಾರೆ ಎಂಬುದು ನಿಜವೆನ್ನೋಣ. ಅದರಲ್ಲೂ ರಾಜಮೌಳಿಯಂತಹ ನಿರ್ದೇಶಕರು ತೆರೆಮೇಲೆ ಭಾವುಕತೆ ಹಾಗೂ ದೃಶ್ಯ ವೈಭವಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಆದರೆ, ವಾಸ್ತವದಲ್ಲಿ ಕೂಡ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅನುಭವಿಸಿದ ಕಷ್ಟನಷ್ಟಗಳೇನು ಕಡಿಮೆಯಾ? ಕೆಲವೊಮ್ಮೆ ಚಲನಚಿತ್ರಗಳಲ್ಲಿ ತೋರಿಸುವುದಕ್ಕಿಂತಲೂ ಕಠಿಣ ಹಿಂಸಾವಿಧಗಳನ್ನು ಬ್ರಿಟಿಷರು ಪ್ರಯೋಗಿಸುತ್ತಿದ್ದರು. ಅವರ ಆ ಬರ್ಬರ ಶಿಕ್ಷೆಗಳ ವಿಧಾನಗಳನ್ನು ನೆನೆದರೆ ಸಾಕು, ಈಗಲೂ ಎದೆ ನಡುಗುತ್ತದೆ. ಚಿಕ್ಕ ಕೋಣೆಯಲ್ಲಿ ಏಕಾಂಗಿಯಾಗಿ ಇರಿಸುವುದು; ಅರೆಹೊಟ್ಟೆ ಊಟ; ಬೂಟುಕಾಲಿನ ಏಟು; ಅವಾಚ್ಯ ಶಬ್ದಗಳಿಂದ ಬೈದು ಅವಮಾನಿಸುವುದು; ಕರಿನೀರಿನ ಶಿಕ್ಷೆ; ಎತ್ತುಗಳ ರೀತಿಯಲ್ಲಿ ಎಣ್ಣೆಗಾಣಕ್ಕೆ ಕಟ್ಟಿ ಎಣ್ಣೆ ತೆಗೆಸುವುದು;ಎಲೆಕ್ಟ್ರಿಕ್ ಶಾಕ್ ನೀಡುವುದು; ವಿಶ್ರಾಂತಿಯನ್ನೇ ನೀಡದೆ ದಿನವಿಡೀ ಕಷ್ಟದ ಕೆಲಸ ಮಾಡಿಸುವುದು... ಬ್ರಿಟಿಷರ ಕ್ರೌರ್ಯದ ಮುಖ ಒಂದಾ ಎರಡಾ? ಇಂಥ ಶಿಕ್ಷೆಗಳ ಕಾರಣಕ್ಕೆ ಎಷ್ಟೋ ಜನರು ಮತಿಭ್ರಮಣೆಗೀಡಾಗಿದ್ದನ್ನು ನಮ್ಮ ಇತಿಹಾಸ ದಾಖಲಿಸಿದೆ. ಇಷ್ಟಿದ್ದರೂ ಅಪ್ಪಟ ದೇಶಭಕ್ತರು ಆಂಗ್ಲರೆದುರು ಮಂಡಿಯೂರಲಿಲ್ಲ; ಪ್ರಾಣಭಿಕ್ಷೆ ಬೇಡಲಿಲ್ಲ. ಇದು ಭಾರತದ ನೆಲದ ಗುಣ.

ಕೊಮರಂ ಭೀಮ (1900-1940) ಅಂದಿನ ಹೈದರಾಬಾದ್ ಸಂಸ್ಥಾನದ ಅಸಿಫಾಬಾದ್​ನ ಸಂಕೇಪಲ್ಲಿ ಎಂಬಲ್ಲಿ ಜನಿಸಿದವ. ಗೊಂಡ ಸಮುದಾಯದ ಈತ ಹೈದರಾಬಾದಿನ ನಿಜಾಮರು ಹಾಗೂ ಬ್ರಿಟಿಷ್ ಆಡಳಿತದ ವಿರುದ್ಧ ಬಂಡಾಯ ಸಾರುತ್ತಾನೆ. ಬುಡಕಟ್ಟು ಜನರ ಹಕ್ಕುಗಳಿಗಾಗಿ ಸಶಸ್ತ್ರ ಹೋರಾಟ ನಡೆಸುತ್ತಾನೆ. ಸಮುದಾಯದ ಜನನಾಯಕನಾಗಿ ಹೊರಹೊಮ್ಮುತ್ತಾನೆ. ಕೊನೆಯಲ್ಲಿ ಎನ್​ಕೌಂಟರಿನಲ್ಲಿ ಕೊಮರಂ ಭೀಮನನ್ನು ಸಾಯಿಸಲಾಗುತ್ತದೆ. 1990ರಲ್ಲಿ ಅಲ್ಲಾನಿ ಶ್ರೀಧರ್ ನಿರ್ದೇಶನದಲ್ಲಿ ‘ಕೊಮರಂ ಭೀಮ’ ಎಂಬ ಚಲನಚಿತ್ರ ಮೂಡಿಬಂದಿತ್ತು. ಈಗ ‘ಆರ್​ಆರ್​ಆರ್’ ಸಿನಿಮಾದಲ್ಲಿ ರಾಜಮೌಳಿ ಅವರು ಕೊಮರಂ ಭೀಮನ ಕಥೆಯ ಎಳೆಯನ್ನಿಟ್ಟುಕೊಂಡು, ಆತನ ಸಮಕಾಲೀನ ಅಲ್ಲೂರಿ ಸೀತಾರಾಮರಾಜು ಪಾತ್ರವನ್ನು ಸೇರಿಸಿಕೊಂಡು ಅದಕ್ಕೆ ಕಲ್ಪನೆಯನ್ನು ಬೆರೆಸಿ ಕಥೆಯನ್ನು ಹೊಸೆದಿದ್ದಾರೆ. ಜ್ಯೂನಿಯರ್ ಎನ್​ಟಿಆರ್ ಕೊಮರಂ ಭೀಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಅಲ್ಲೂರಿ ಪಾತ್ರದಲ್ಲಿ ರಾಮಚರಣ ತೇಜ ಅಭಿನಯಿಸಿದ್ದಾರೆ.

***

‘ಆದ್ಯ ಕ್ರಾಂತಿಕಾರಿ’ ಎಂದೇ ಪರಿಗಣಿಸಲ್ಪಡುವ ವಾಸುದೇವ ಬಲವಂತ ಫಡಕೆಯ ಬದುಕೇ ಸಾಹಸಗಳ ಸರಮಾಲೆ. ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಕುದುರೆಯ ಮೇಲೆ ಮಿಂಚಿನಂತೆ ಸಂಚರಿಸುತ್ತ, ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ ಶೂರ. ಇಂದು ಇಲ್ಲಿದ್ದರೆ ನಾಳೆ ಮತ್ತೊಂದೆಡೆ. ಫಡಕೆಯ ಕಲಿತನದಿಂದ ಬೆದರಿದ ಬ್ರಿಟಿಷರು ಅವನ ತಲೆಗೆ 4 ಸಾವಿರ ರೂಪಾಯಿಗಳ ಇನಾಮು ಘೋಷಿಸಿ ಪ್ರಕಟಣೆ ಹೊರಡಿಸುತ್ತಾರೆ. ಫಡಕೆ ಎಂಥ ದಿಟ್ಟನೆಂದರೆ, ಆಂಗ್ಲ ಗವರ್ನರ್ ಹಾಗೂ ಕಲೆಕ್ಟರರ ತಲೆಗಳನ್ನು ತಂದುಕೊಟ್ಟವರಿಗೆ ಇದರ ಎರಡು ಪಟ್ಟು ಬಹುಮಾನ ನೀಡುವುದಾಗಿ ಘೋಷಿಸುತ್ತಾನೆ. ಆಂಗ್ಲರಿಗೆ ಹೇಗಾಗಬೇಡ! ಅಂತೂ ಕೊನೆಗೆ ಡೇನಿಯಲ್ ಎಂಬ ಅಧಿಕಾರಿ ಫಡಕೆಯ ಸುಳಿವನ್ನು ಪತ್ತೆಹಚ್ಚುತ್ತಾನೆ. ಒಂದಿ ದಿನ ಮಧ್ಯರಾತ್ರಿ ಸಮಯದಲ್ಲಿ ನಿದ್ರೆಯಲ್ಲಿದ್ದ ಫಡಕೆಯ ಎದೆಮೇಲೆ ಕುಳಿತು, ‘ನಿನ್ನನ್ನು ಬಂಧಿಸಿದ್ದೇನೆ’ಎನ್ನುತ್ತಾನೆ. ಆಗ ಫಡಕೆ - ‘ನೀನು ಗಂಡಸಾಗಿದ್ದರೆ ನನ್ನೊಂದಿಗೆ ಹೋರಾಡಿ ಗೆಲ್ಲು’ಎಂದು ಸವಾಲೆಸೆಯುತ್ತಾನೆ. ಕೊನೆಗೆ, ದೂರದ ಏಡನ್ ಕಾರಾಗೃಹದಲ್ಲಿ ಈ ಕ್ರಾಂತಿಪುರುಷ ಕೊನೆಯುಸಿರೆಳೆದ. ಆಗ ಆತನ ಬಲಗೈ ಬಿಡಿಸಿ ನೋಡಿದಾಗ ಅದರಲ್ಲಿ ಆತ ಭಾರತದಿಂದ ಬರುವಾಗ ತಂದಿದ್ದ ಒಂದು ಹಿಡಿ ಮಣ್ಣು ಇತ್ತು!

***

ಮುಂಬಯಿಯ ಕೋಟೆ ಪ್ರದೇಶದಲ್ಲಿ ವಿಕ್ಟೋರಿಯಾ ಮಹಾರಾಣಿಯ ಬಿಳಿಯ ಬಣ್ಣದ ಪ್ರತಿಮೆ ಇತ್ತು. ಆ ಪ್ರತಿಮೆಗೆ ಡಾಂಬರು ಬಳಿದು ಚಪ್ಪಲಿ ಹಾರ ಹಾಕಿದ್ದು ಚಾಪೇಕರ್ ಸೋದರರು! ಅವರ ಪ್ರಕಾರ ಆ ಪ್ರತಿಮೆ ಭಾರತದ ಶತ್ರುಗಳ ಸಾಂಕೇತಿಕ ಪ್ರತಿನಿಧಿ. ಹೀಗಾಗಿ ಈ ರೀತಿ ಮಾಡುತ್ತಾರೆ. ಆ ಕಾಲದಲ್ಲಿ ಬ್ರಿಟಿಷರ ರಾಣಿಗೆ ಈ ರೀತಿ ಅಪಮಾನ ಮಾಡುವುದೆಂದರೆ ಹುಡುಗಾಟವಲ್ಲ, ಅದಕ್ಕೆ ಮಹಾಧೈರ್ಯವೇ ಬೇಕು. ಈ ಮೂವರು ಸೋದರರಿಗೆ ಆ ತಾಕತ್ತು ಇತ್ತು. 1890ರ ದಶಕದ ಮಧ್ಯಂತರದಲ್ಲಿ ಮಹಾರಾಷ್ಟ್ರದಲ್ಲಿ ಭೀಕರ ಕ್ಷಾಮ ತಲೆದೋರಿತು; ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸಾಯತೊಡಗಿದರು. ಇಷ್ಟು ಸಾಲದೆಂಬಂತೆ, 1896ರ ಹೊತ್ತಿಗೆ ಪ್ಲೇಗ್ ಮಾರಿ ವಕ್ಕರಿಸಿ ಜನರು ಹುಳುಗಳಂತೆ ಸಾಯತೊಡಗಿದರು. ಆ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರವು ಪುಣೆಯಲ್ಲಿ ಪ್ಲೇಗ್ ಸನ್ನಿವೇಶವನ್ನು ನಿರ್ವಹಿಸಲು ವಾಲ್ಟರ್ ಚಾರ್ಲ್ಸ್ ರ್ಯಾಂಡ್ ಎಂಬಾತನನ್ನು ಪ್ಲೇಗ್ ಕಮಿಷನರ್ ಎಂದು ನೇಮಕ ಮಾಡಿತು. ಮೊದಲೇ ಕಾಯಿಲೆಯಿಂದ ಹೈರಾಣಾಗಿದ್ದ ಜನರನ್ನು ಈ ರ್ಯಾಂಡ್ ಎಂಬ ರಕ್ಕಸ ನಾನಾರೀತಿಯಲ್ಲಿ ಕಾಡತೊಡಗಿದ. ಪ್ಲೇಗ್ ಸೋಂಕಿನ ನಿಯಂತ್ರಣಕ್ಕೆಂದು ರ್ಯಾಂಡ್ ಅಡಿಯಾಳುಗಳಾದ ಸಿಪಾಯಿಗಳು ಮನೆಮನೆಗೆ ನುಗ್ಗಿ ಹಾಹಾಕಾರವೆಬ್ಬಿಸಿದರು. ಪುಣೆ ನಗರ ಇವರ ಅಟ್ಟಹಾಸಕ್ಕೆ ನಲುಗಿಹೋಯಿತು. ಆಗ ಚಾಪೇಕರ್ ಸೋದರರು- ದಾಮೋದರ, ಬಾಲಕೃಷ್ಣ ಮತ್ತು ವಾಸುದೇವ- ಈ ಅನ್ಯಾಯದ ವಿರುದ್ಧ ದನಿಯೆತ್ತಿದರು. ಕ್ರೂರಿ ರ್ಯಾಂಡನನ್ನು ಮುಗಿಸಬೇಕೆಂದು ಯೋಜನೆ ರೂಪಿಸಿದರು. ವಿಕ್ಟೋರಿಯಾ ರಾಣಿಯ ಪಟ್ಟಾಭಿಷೇಕದ ವಜ್ರಮಹೋತ್ಸವದ ದಿನವಾದ 1897ರ ಜೂನ್ 22ನ್ನು ರ್ಯಾಂಡ್ ಸಂಹಾರಕ್ಕೆ ಮುಹೂರ್ತವಾಗಿ ನಿಗದಿಮಾಡುತ್ತಾರೆ. ಜನರು ಪ್ಲೇಗ್​ನಿಂದ ಸಾಯುತ್ತಿದ್ದರೆ ಆಳುಗ ಬ್ರಿಟಿಷರು ಮೋಜುಮಸ್ತಿ ಮಾಡುವುದನ್ನು ಕಂಡು ದೇಶಭಕ್ತರ ನೆತ್ತರು ಕುದಿಯುತ್ತದೆ. ಗವರ್ನಮೆಂಟ್ ಹೌಸ್​ನಲ್ಲಿ ಏರ್ಪಡಾಗಿದ್ದ ಭರ್ಜರಿ ಪಾರ್ಟಿಯ ಸಂದರ್ಭದಲ್ಲಿ ರ್ಯಾಂಡನನ್ನು ಮುಗಿಸಬೇಕೆಂದು ಚಾಪೇಕರರು ಸಂಕಲ್ಪಿಸುತ್ತಾರೆ. ಪಾರ್ಟಿ ಮುಗಿಸಿ ಹೊರಡುವಾಗ ರ್ಯಾಂಡ್ ಎಂದು ತಪ್ಪಾಗಿ ತಿಳಿದು ಆಯರ್ಸ್ಟ ಎಂಬಾತನ ಮೇಲೆ ಬಾಲಕೃಷ್ಣ ಗುಂಡುಹಾರಿಸಿದ. ಆದರೆ ಮುಖ್ಯ ಬೇಟೆ ತಪ್ಪದಂತೆ ಈ ಸೋದರರು ನೋಡಿಕೊಂಡರು. ನಂತರದಲ್ಲಿ ರ್ಯಾಂಡನ ಗಾಡಿಯನ್ನು ಏರಿ ದಾಮೋದರ ಆತನ ಮೇಲೆ ಗುಂಡುಹಾರಿಸಿದ. ಅದಾಗಿ ಹತ್ತು ಹನ್ನೆರಡು ದಿನಗಳ ನಂತರ ರ್ಯಾಂಡ್ ಸಾವನ್ನಪ್ಪಿದ. ಕೆಲ ಮನೆಮುರುಕರ ಕೃತ್ಯದಿಂದಾಗಿ ಇವರ ಬಗ್ಗೆ ಬ್ರಿಟಿಷರಿಗೆ ಸುಳಿವು ದೊರೆತು ದಾಮೋದರನ ಬಂಧನವಾಗಿ ಗಲ್ಲು ಶಿಕ್ಷೆ ವಿಧಿಸಲಾಯಿತು. ನೇಣಿಗೇರಲು ತೆರಳುವಾಗ ನಾರಾಯಣ ಸ್ಮರಣೆ ಮಾಡುತ್ತಿದ್ದ ಆತ, ಗಲ್ಲಿನ ಕುಣಿಕೆಗೆ ಕೊರಳೊಡ್ಡುವ ಮುನ್ನ ಭಗವದ್ಗೀತೆಯ ಶ್ಲೋಕವನ್ನು ಪಠಿಸಿದ! ನಂತರದಲ್ಲಿ ಬಾಲಕೃಷ್ಣನ ಬಂಧನವಾಗಿ ಆತನಿಗೂ ಗಲ್ಲು ಶಿಕ್ಷೆ ವಿಧಿಸಲಾಯಿತು. ತಮ್ಮ ಜತೆಗೇ ಇದ್ದು ದ್ರೋಹವೆಸಗಿ ಬ್ರಿಟಿಷರಿಗೆ ಸುಳಿವು ನೀಡಿದ ದ್ರವಿಡ್ ಸೋದರರಲ್ಲಿ ಇಬ್ಬರನ್ನು ವಾಸುದೇವ ಚಾಪೇಕರ್ ಮತ್ತು ಮಹಾದೇವ ರಾನಡೆ ಗುಂಡಿಟ್ಟು ಸಾಯಿಸುತ್ತಾರೆ. ಇದಕ್ಕಾಗಿ ಆ ಇಬ್ಬರಿಗೂ ಗಲ್ಲುಶಿಕ್ಷೆ ಘೋಷಣೆಯಾಗುತ್ತದೆ. ವಾಸುದೇವ ಸಹ ಗಲ್ಲುಗಂಬದತ್ತ ನಡೆಯುವಾಗ ಭಗವದ್ಗೀತೆಯನ್ನು ಕೈಲಿ ಹಿಡಿದುಕೊಂಡಿದ್ದ! ಹೀಗೆ ಮೂವರು ಸೋದರರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುತ್ತಾರೆ.

ಇಂಥ ಸಾವಿರ ಸಾವಿರ ಕಥೆಗಳು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿವೆ. ‘ಕಪ್ಪವಂತೆ ಕಪ್ಪ. ನಾವೇಕೆ ಕೊಡಬೇಕು ಕಪ್ಪ ಆ ಬ್ರಿಟಿಷರಿಗೆ...’ಎಂದು ಅಬ್ಬರಿಸಿ ಆಂಗ್ಲರನ್ನು ಕಂಗೆಡಿಸಿದ ಕಿತ್ತೂರು ಚೆನ್ನಮ್ಮ; ವಿದೇಶಗಳ ಜತೆ ಸಂಪರ್ಕ ಸಾಧಿಸಿ ಸೇನೆಯನ್ನೂ ಕಟ್ಟಿ, ಸ್ವಾತಂತ್ರ್ಯ ಹೋರಾಟವನ್ನು ಹೀಗೂ ಮಾಡಬಹುದು ಎಂಬುದನ್ನು ಲೋಕಕ್ಕೆ ಸಾರಿದ ಸುಭಾಷ ಚಂದ್ರ ಬೋಸ್, ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಎಂದು ಘೋಷಿಸಿ ಸಾವಿರ ಸಾವಿರ ಜನರನ್ನು ಸ್ವಾತಂತ್ರ್ಯದೀಕ್ಷೆಗೆ ಅಣಿಗೊಳಿಸಿದ ಬಾಲಗಂಗಾಧರ ತಿಲಕ್, ಪ್ರತಿಭಟನೆಗೆ ಭಿನ್ನ ದಾರಿ ಹಿಡಿದ ಭಗತ್ ಸಿಂಗ್; ಲೇಖಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ- ಹೀಗೆ ಬಹುಮುಖ ವ್ಯಕ್ತಿತ್ವದ, ಅಂಡಮಾನ್ ಜೈಲಿನಲ್ಲಿ ಕಠೋರಾತಿ ಕಠೋರ ಶಿಕ್ಷೆಯನ್ನು ಅನುಭವಿಸಿದ ವೀರ ಸಾವರ್ಕರ್....ಹೀಗೆ ಹೇಳುತ್ತ ಹೋದರೆ ಕೈಸೋಲುತ್ತದೆಯೇ ವಿನಾ ಈ ಯಾದಿಗೆ ಕೊನೆ ಎಂಬುದಿಲ್ಲ. ಸ್ವಾತಂತ್ರ್ಯದ ಅಗ್ನಿದಿವ್ಯದಲ್ಲಿ ಮಿಂದೆದ್ದು, ಗಲ್ಲುಶಿಕ್ಷೆಯನ್ನು ಸಹ ನಗುನಗುತ್ತ ಎದುರಿಸಿದವರು ಸಾವಿರಗಟ್ಟಲೆ ಇದ್ದಾರೆ. ಹಾಗೆಯೇ, ಪ್ರಲೋಭನೆಗೆ ಒಳಗಾಗಿ, ಬ್ರಿಟಿಷರ ಎಂಜಲು ಕಾಸಿಗೆ ಕೈಯೊಡ್ಡಿ ದ್ರೋಹವೆಸಗಿದವರೂ ಕೆಲವರು ಇದ್ದರು. ಇದರ ಜತೆಗೆ, ಜನಸಾಮಾನ್ಯರಲ್ಲಿಯೂ ಕ್ಷಾತ್ರತೇಜದ ಹುಮ್ಮಸ್ಸು ತುಂಬಿ, ಆಂಗ್ಲರ ವಿರುದ್ಧದ ಹೋರಾಟಕ್ಕೆ ಸಜ್ಜುಗೊಳಿಸಿದ ವೀರಸಂನ್ಯಾಸಿಗಳ ದೊಡ್ಡ ಪರಂಪರೆಯೇ ನಮ್ಮಲ್ಲಿದೆ.

ಕೊನೇ ಮಾತು: ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕನ್ನಡದಲ್ಲಿ ವಿಪುಲ ಸಾಹಿತ್ಯ ರಚಿಸಿದ ಮುಂಚೂಣಿಗರಲ್ಲಿ ಬಾಬು ಕೃಷ್ಣಮೂರ್ತಿ ಅವರು ಒಬ್ಬರು. ಅಧ್ಯಯನದ ಮೂಲಕ ವಿರಳ ಮಾಹಿತಿಗಳನ್ನು ಕಲೆಹಾಕಿದ್ದಲ್ಲದೆ, ಕೆಲ ಹೋರಾಟಗಾರರ ಸ್ಥಳಕ್ಕೇ ಹೋಗಿ ವಿವರ ಸಂಗ್ರಹ ಮಾಡಿದ್ದು ಮತ್ತು ಹೋರಾಟಗಾರರ ಕಥನವನ್ನು ಆಕರ್ಷಕ ಶೈಲಿಯಲ್ಲಿ ಮಂಡಿಸುವುದು ಅವರ ವಿಶೇಷತೆ. ಭಾರತದ ಸ್ವಾತಂತ್ರ್ಯ ಸಂಗ್ರಾಮವೆಂಬುದು ನೂರಾರು ವರ್ಷಗಳ ದೀರ್ಘಕಾಲ ನಡೆದ ವೀರಗಾಥೆ. ಈ ಸಂಘರ್ಷದ ಆಯಾಮಗಳೂ ಭಿನ್ನ. ಈ ಹೋರಾಟದ ನದಿಗೆ ಸಾವಿರಾರು ತೊರೆಗಳು ಸೇರಿ ದೇಶಭಕ್ತಿಯ ಪ್ರವಾಹ ಉಕ್ಕೇರಿತು. ಈ ಎಲ್ಲದರ ಬಗ್ಗೆ ಸಂಪೂರ್ಣ ಚಿತ್ರಣ ತಿಳಿಯುವುದು ಅಷ್ಟು ಸುಲಭವಲ್ಲ ಎಂಬುದು ನಿಜ. ಆದರೆ, ಬ್ರಿಟಿಷರ ವಿರುದ್ಧ ನಮ್ಮವರು ನಡೆಸಿದ ಹೋರಾಟ ಮತ್ತು ಅವರ ಈ ಮುಳ್ಳಿನ ಹಾದಿಯ ನಡಿಗೆಯ ಬಗ್ಗೆ ಸ್ವಲ್ಪವಾದರೂ ಪರಿಚಯ ನಮಗಿರದಿದ್ದರೆ; ಆ ಹೋರಾಟಗಾರರ ಕುಟುಂಬದವರು ಕಂಡುಂಡ ಕಷ್ಟಪರಂಪರೆಯ ಚಿತ್ರಣ ತುಸುವಾದರೂ ನಮ್ಮ ಕಣ್ಣೆದುರು ಬರದಿದ್ದರೆ; ಅವನ್ನು ನೆನೆದಾಗ ಕಣ್ಣು ಮಂಜಾಗದಿದ್ದರೆ, ಭಾರತಮಾತೆ ನಮ್ಮನ್ನು ಕ್ಷಮಿಸುವುದಿಲ್ಲ, ಅಲ್ಲವಾ?

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net