

ಅದು ಮುಂಬೈನ ಕಾಮಾ ಮತ್ತು ಆಲ್ಬ್ಲೆಸ್ ಆಸ್ಪತ್ರೆ. ಅಂಜಲಿ ಕುಲ್ತೆ ಎಂಬುವವರು ಅಲ್ಲಿನ ಒಬ್ಬ ಸ್ಟಾಫ್ ನರ್ಸ್. ಆ ದಿನ ಅವರ ಪಾಲಿಗೆ 20 ಗರ್ಭಿಣಿಯರ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ ಇತ್ತು. ಆಸ್ಪತ್ರೆ ಅಂದಮೇಲೆ ನಿತ್ಯ ಇಂಥ ಹೊಣೆ ಸಹಜವೇ. ಆದರೆ ಆ ದಿನ ದಿಗಿಲು ಹುಟ್ಟಿಸುವ ಬೆಳವಣಿಗೆ ನಡೆದಿತ್ತು. ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಇಬ್ಬರು ಕಾವಲುಗಾರರನ್ನು ಹೊಡೆದುರುಳಿಸಲಾಗಿತ್ತು. ಇದನ್ನು ಕಂಡು ಅಪಾಯವನ್ನು ಗ್ರಹಿಸಿದ ಅಂಜಲಿ ಕೂಡಲೇ ಓಡಿಹೋಗಿ ಪ್ರಸವಪೂರ್ವ ಆರೈಕೆ ವಿಭಾಗದ ದಪ್ಪ ಬಾಗಿಲನ್ನು ಲಗುಬಗೆಯಿಂದ ಮುಚ್ಚಿದರು. ಅಷ್ಟು ಹೊತ್ತಿಗಾಗಲೇ ಇಬ್ಬರು ಶಸ್ತ್ರಧಾರಿಗಳು ಆಸ್ಪತ್ರೆಯ ಮೊದಲ ಮಹಡಿಗೆ ಬಂದುಬಿಟ್ಟಿದ್ದರು. ಇನ್ನು ಸ್ವಲ್ಪ ವಿಳಂಬವಾಗಿದ್ದರೂ ಆ ಶಸ್ತ್ರಧಾರಿಗಳು ಆಸ್ಪತ್ರೆಯಲ್ಲಿದ್ದವರ ಮೇಲೆ ಗುಂಡಿನ ಮಳೆಗರೆಯುವುದು ನಿಶ್ಚಿತವಾಗಿತ್ತು. ಓ ದೇವರೆ! ಹಾಗೇನಾದರೂ ಆಗಿದ್ದಿದ್ದರೆ ಎಷ್ಟು ಗರ್ಭಿಣಿಯರು ಮತ್ತು ಲೋಕಕಾಣುವ ಮೊದಲೇ ಎಷ್ಟು ಮಕ್ಕಳು ಅಕಾಲಿಕವಾಗಿ ಸಾವನ್ನಪ್ಪಬೇಕಿತ್ತೊ! ಆ ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗೆ 8 ಗಂಟೆಯವರೆಗೆ 20 ಗರ್ಭಿಣಿಯರು ಮತ್ತು ಅವರ ಕೆಲ ಕುಟುಂಬ ಸದಸ್ಯರನ್ನು ಆ ವಾರ್ಡಿನ ಕೊನೆಯಲ್ಲಿ ಸಣ್ಣ ಜಾಗದಲ್ಲಿ ಇರಿಸಿಕೊಂಡು ಏನೂ ತೊಂದರೆಯಾಗದಂತೆ ನೋಡಿಕೊಂಡರು ಅಂಜಲಿ. ಆ ನಡುವೆ, ಒಬ್ಬಾಕೆಗೆ ಪ್ರಸವವೇದನೆ ಜೋರಾದಾಗ ಆಕೆಯನ್ನು ಮೇಲಿನ ಮಹಡಿಯಲ್ಲಿನ ಪ್ರಸೂತಿ ಕೋಣೆಗೆ ಕರೆದೊಯ್ಯಬೇಕಾದ ಪ್ರಸಂಗ ಬಂದಿತ್ತು. ‘ಆಕೆಯ ಕೈ ಹಿಡಿದುಕೊಂಡು ನಿಧಾನಕ್ಕೆ ತೆರಳಿದೆ. ನನ್ನ ಗಮನವೆಲ್ಲ ಜನಿಸಲಿರುವ ಆ ಮಗುವಿನ ರಕ್ಷಣೆಯ ಮೇಲೆಯೇ ಇತ್ತು’ ಎಂದು ಅಂಜಲಿ ನೆನಪಿಸಿಕೊಂಡಿದ್ದಾರೆ. ಅತ್ತ, ಇನ್ನೊಂದೆಡೆ, ಆಸ್ಪತ್ರೆ ಟೆರೇಸ್ ಮೇಲಿದ್ದ ಶಸ್ತ್ರಧಾರಿಗಳು ಮತ್ತು ಕೆಳಗಿದ್ದ ಪೊಲೀಸರ ನಡುವೆ ಸುಮಾರು ಒಂದು ತಾಸು ಗುಂಡಿನ ವಿನಿಮಯ ನಡೆದೇ ಇತ್ತು.
ಅದು 2008 ನವೆಂಬರ್ 26. ಮುಂಬೈ ಮಹಾನಗರಿಯ ಮೇಲೆ ಪಾಕ್ಪ್ರೇರಿತ ಭಯೋತ್ಪಾದಕರು ದಾಳಿ ಮಾಡಿದ್ದರು. ಪಾಕ್ನಿಂದ ಬಂದ ಹತ್ತು ಮಂದಿ ಉಗ್ರರು ಕಂಡಕಂಡಲ್ಲಿ ಯರಾ›ಬಿರ್ರಿ ಗುಂಡುಹಾರಿಸುತ್ತ ಜನರನ್ನು ಸಾಯಿಸುತ್ತಿದ್ದರು. ಕಾಮಾ ಆಸ್ಪತ್ರೆ ಮೇಲೆ ದಾಳಿಗೈದವರೂ ಆ ಉಗ್ರರೇ. ಒಟ್ಟಾರೆ ಮುಂಬೈಯಲ್ಲಿ 166 ಮಂದಿ ಆ ಸಂದರ್ಭದಲ್ಲಿ ಪ್ರಾಣಕಳೆದುಕೊಂಡರೆ ಸುಮಾರು 300 ಜನರು ಗಾಯಗೊಂಡರು. ಅನೇಕ ಪೊಲೀಸ್ ಅಧಿಕಾರಿಗಳು ಸಹ ಭಯೋತ್ಪಾದಕರ ಗುಂಡಿಗೆ ಬಲಿಯಾದರು. ರಾಷ್ಟ್ರೀಯ ಭದ್ರತಾ ದಳದ (ಎನ್ಎಸ್ಜಿ)ಯ ಮೇಜರ್ ಸಂದೀಪ್ ಉನ್ನಿಕೃಷ್ಣನ್ (ಇವರು ನಮ್ಮ ಬೆಂಗಳೂರಿನವರು), ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮುಖ್ಯಸ್ಥ ಹೇಮಂತ ಕರ್ಕರೆ, ಮುಂಬೈನ ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ, ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ವಿಜಯ ಸಲಸ್ಕರ್, ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ತುಕಾರಾಮ ಓಂಬ್ಳೆ (ಇವರು ಬರಿಗೈಯಿಂದ ಅಜ್ಮಲ್ ಕಸಬ್ನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು) ಮುಂತಾದವರು ಈ ಪಟ್ಟಿಯಲ್ಲಿದ್ದಾರೆ. ಅದು ಭಾರತದ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗಳಲ್ಲಿ ಒಂದು.
ಹತ್ತು ವರ್ಷದ ದೇವಿಕಾ ಎಂಬ ಹುಡುಗಿ 2008ರ ನ.26ರಂದು ಮುಂಬೈನ ಛತ್ರಪತಿ ಶಿವಾಜಿ ಟರ್ವಿುನಸ್ಗೆ ಬಂದಿದ್ದಳು. ಮುಂದಿನ ವಿವರವನ್ನು ಆಕೆಯ ಮಾತುಗಳಲ್ಲೇ ಕೇಳಿ: ‘ಒಮ್ಮೆಲೇ ಅಲ್ಲಿ ಗದ್ದಲ ಗೊಂದಲ ಉಂಟಾಯಿತು. ಅಲ್ಲಿಂದ ತೆರಳಬೇಕೆಂದು ನನ್ನ ಒಳಮನಸ್ಸು ಹೇಳುತ್ತಿತ್ತು. ಅಷ್ಟರಲ್ಲಿ ಒಬ್ಬಾತ ನೇರವಾಗಿ ನನ್ನ ಕಾಲಿನ ಮೇಲೆ ಗುಂಡು ಹಾರಿಸಿದ. ತೀವ್ರವಾಗಿ ನೋವುಂಟಾಯಿತು. ಎಚ್ಚರ ತಪ್ಪಿದೆ. ಮರುದಿನ ಎಚ್ಚರವಾದಾಗ ಆಸ್ಪತ್ರೆಯಲ್ಲಿ ಇದ್ದುದು ಅರಿವಿಗೆ ಬಂತು. ಮುಂಚಿನ ದಿನದ ದಾಳಿಯ ಬಗ್ಗೆ ಅಲ್ಲಿನ ವೈದ್ಯರು ವಿವರಿಸಿದರು. ಆ ದಾಳಿಯಿಂದ ಹೆಂಗಸರು ಮತ್ತು ಮಕ್ಕಳು ಅನುಭವಿಸಿದ ಯಾತನೆ ಸ್ಮರಣೆಗೆ ಬಂದು, ಉಗ್ರಕೃತ್ಯದ ಬಗ್ಗೆ ತೀವ್ರ ಕೋಪ ಉಕ್ಕಿತು. ಇಷ್ಟೆಲ್ಲ ಆದರೂ ನನಗೆ ಆತನ ಮುಖ ಪಕ್ಕಾ ನೆನಪಿದೆ. ಒಂದೂವರೆ ತಿಂಗಳು ಆಸ್ಪತ್ರೆಯಲ್ಲಿ ನನಗೆ ಚಿಕಿತ್ಸೆ ಕೊಡಲಾಯಿತು. ಆದರೆ ಆ ದಾಳಿಕೋರನ ಮುಖ ಮಾತ್ರ ನನ್ನಿಂದ ಮರೆಯಾಗಲಿಲ್ಲ. ಚಿಕಿತ್ಸೆಯ ನಂತರ ಊರಿಗೆ ವಾಪಸಾದೆ. ಪ್ರಕರಣ ಕುರಿತು ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಲು ಪೊಲೀಸರು ನನ್ನ ತಂದೆಯನ್ನು ಸಂರ್ಪಸಿದರು. ಅಂದಿನ ದಾಳಿಯಲ್ಲಿ ಬದುಕುಳಿದ ಕೆಲವರಲ್ಲಿ ನಾವೂ ಸೇರಿದ್ದರಿಂದಾಗಿ, ದಾಳಿಕೋರನನ್ನು ನಾವು ಗುರುತಿಸುವುದು ಅವಶ್ಯವಾಗಿತ್ತು. ಆದರೆ, ಕೋರ್ಟಿನಲ್ಲಿ ಸಾಕ್ಷ್ಯ ಹೇಳಿದರೆ ಭಯೋತ್ಪಾದಕರು ನಮ್ಮ ಮೇಲೆ ದಾಳಿ ಮಾಡಬಹುದು ಎಂದೆಣಿಸಿ, ನಮ್ಮ ದೂರದ ಸಂಬಂಧಿಗಳು ಇದನ್ನು ವಿರೋಧಿಸಿದರು. ನಾವು ಅದಕ್ಕೆ ಕಿವಿಗೊಡಲಿಲ್ಲ. ನಾನು ಊರುಗೋಲಿನಲ್ಲಿ ನ್ಯಾಯಾಲಯಕ್ಕೆ ಹೋದೆ. ನಾಲ್ವರನ್ನು ಅಲ್ಲಿ ಹಾಜರುಪಡಿಸಲಾಯಿತು. ತಕ್ಷಣ ನಾನು ಅಜ್ಮಲ್ ಕಸಬ್ನನ್ನು ಗುರುತಿಸಿದೆ. ಆಗ ನನ್ನ ಹೃದಯ ಕೋಪದಿಂದ ಕುದಿಯುತ್ತಿತ್ತು, ಆ ಕ್ಷಣವೇ ನ್ಯಾಯ ಸಿಗಬೇಕೆಂಬುದು ಮನಸ್ಸು ಬಯಸುತ್ತಿತ್ತು. ನಾನು ಮುಂದೆ ಐಪಿಎಸ್ ಅಧಿಕಾರಿಯಾಗಬೇಕೆಂದು ಆಗಲೇ ನಿರ್ಧರಿಸಿದೆ. ಆದರೆ, ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳುವ ನಿರ್ಧಾರದಿಂದಾಗಿ ನಾವು ವೈಯಕ್ತಿಕ ಬದುಕಿನಲ್ಲಿ ತೊಂದರೆ ಎದುರಿಸಬೇಕಾಯಿತು. ಎಲ್ಲರೂ ನಮ್ಮಿಂದ ದೂರವಾದರು. ಯಾರೊಬ್ಬರೂ ವ್ಯವಹರಿಸಲು ನಿರಾಕರಿಸಿದ್ದರಿಂದಾಗಿ, ನಮ್ಮ ತಂದೆ ಒಣಹಣ್ಣು ಅಂಗಡಿಯನ್ನು ಮುಚ್ಚಬೇಕಾಯಿತು. ನಮಗೆ ಸಿಕ್ಕ ಪ್ರಚಾರದಿಂದಾಗಿ ಬಹಳ ಹಣ ಮಾಡಿರಬೇಕು ಎಂದೆಣಿಸಿದ ಮಾಲೀಕ ಬಾಡಿಗೆಯನ್ನು ಹೆಚ್ಚಿಸಿದ. ಆದರೆ ನಾವು ದೇಶಕ್ಕಾಗಿ ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದರಿಂದಾಗಿ ಹಿಂದೆಸರಿಯುವ ಪ್ರಮೇಯವೇ ಇರಲಿಲ್ಲ’. (2019ರ ನ.26ರಂದು ಜಾಲತಾಣದಲ್ಲಿ ಪ್ರಕಟಿಸಿದ ಪೋಸ್ಟ್). ಅಂತೂ ದೀರ್ಘ ವಿಚಾರಣೆ ನಂತರ ಕಸಬ್ಗೆ ಗಲ್ಲುಶಿಕ್ಷೆಯಾಯಿತು. 2012ರ ನವೆಂಬರ್ 21ರ ಬೆಳಗ್ಗೆ 7.30ರ ಹೊತ್ತಿಗೆ ಪುಣೆಯ ಯೆರವಡಾ ಜೈಲಿನಲ್ಲಿ ಆತನನ್ನು ರಹಸ್ಯವಾಗಿ ಗಲ್ಲಿಗೇರಿಸಲಾಯಿತು. ಇದಕ್ಕೆ ಆಪರೇಷನ್ ‘ಎಕ್ಸ್’ಎಂದು ಹೆಸರಿಡಲಾಗಿತ್ತು. ಮುಂಬೈ ದಾಳಿಯಲ್ಲಿ ಭಾಗವಹಿಸಿದ್ದ ಹತ್ತು ಮಂದಿ ಉಗ್ರರಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರನೆಂದರೆ ಕಸಬ್ ಮಾತ್ರ. ಉಳಿದವರೆಲ್ಲ ಭದ್ರತಾ ಪಡೆಗಳ ಪ್ರತಿದಾಳಿಯಲ್ಲಿ ಹತರಾಗಿದ್ದರು. ಕಸಬ್ಗೆ ಶಿಕ್ಷೆಯಾಗುವುದು ವಿಳಂಬವಾಯಿತು ಎಂದು ಅಲ್ಲಲ್ಲಿ ಅಸಮಾಧಾನದ ದನಿ ಎದ್ದಿತ್ತಾದರೂ, ಭಾರತದ ಕಾನೂನುಗಳ ಅನುಸಾರ, ಎಲ್ಲ ನ್ಯಾಯಿಕ ಪ್ರಕ್ರಿಯೆಗಳನ್ನು ಪೂರೈಸಿಯೇ, ಯಾರೂ ಆಕ್ಷೇಪವೆತ್ತಲು ಆಸ್ಪದವಿಲ್ಲದಂತೆ ಈ ಒಟ್ಟಾರೆ ಪ್ರಕರಣವನ್ನು ನಿರ್ವಹಿಸಲಾಯಿತು ಎಂಬುದನ್ನು ಮರೆಯಲಾಗದು. ಈ ದಾಳಿಯಲ್ಲಿ ಪಾಕ್ ಕೈವಾಡದ ಕುರಿತಂತೆ ಅನೇಕ ದಾಖಲೆಗಳನ್ನು ಭಾರತ ಆ ದೇಶಕ್ಕೆ ಹಸ್ತಾಂತರಿಸಿತು. 1990ರ ದಶಕದಿಂದ ಆರಂಭಿಸಿ ಇಂದಿನವರೆಗೂ ಭಾರತ ಭಯೋತ್ಪಾದಕ ದಾಳಿಗಳನ್ನು ಕಾಣುತ್ತಲೇ ಬಂದಿದೆ. ವಿಶ್ವದಲ್ಲಿ ಅತಿ ಹೆಚ್ಚು ಇಂಥ ದಾಳಿಗಳಾಗುವ ದೇಶಗಳಲ್ಲಿ ಭಾರತವೂ ಒಂದು. ಈವರೆಗೆ 10 ಸಾವಿರಕ್ಕಿಂತ ಹೆಚ್ಚು ಭಯೋತ್ಪಾದಕ ದಾಳಿಗಳು ಈ ದೇಶದಲ್ಲಿ ಆಗಿವೆ. 18 ಸಾವಿರಕ್ಕಿಂತ ಹೆಚ್ಚು ಪ್ರಾಣಹಾನಿಯಾಗಿದೆ. ಅಮೆರಿಕದಂತಹ ದೇಶಗಳು ಮುಂಚೆಯೆಲ್ಲ ಭಾರತದ ಪ್ರತಿಪಾದನೆಯನ್ನು ಅಷ್ಟು ನಂಬುತ್ತಿರಲಿಲ್ಲ. ಯಾವಾಗ ಆ ದೇಶದ ಮೇಲೆಯೇ 2001ರ ಸೆ.11ರಂದು ಭಯೋತ್ಪಾದಕರಿಂದ ದಾಳಿಯಾಯಿತೋ ಅಂದಿನಿಂದ ಅಮೆರಿಕದ ವರಸೆಯೇ ಬದಲಾಗಿಹೋಯಿತು. ಯಾವಾಗಲೂ ಹಾಗೇ, ಸಂಕಟ ಅನುಭವಿಸಿದವರಿಗೆ ಮಾತ್ರ ಗೊತ್ತಾಗುತ್ತದೆಯೇ ವಿನಾ ದೂರದಲ್ಲಿ ನಿಂತು ನೋಡುವವವರಿಗಲ್ಲ. ಆ ಒಂದು ದಾಳಿಯಿಂದ ಅಮೆರಿಕ ಎಷ್ಟು ಹೆದರಿತೆಂದರೆ, ದಾಳಿ ಸಂಚುಕೋರ, ಅಲ್ ಖಯಿದಾ ನಾಯಕ ಒಸಾಮಾ ಬಿನ್ ಲಾಡೆನ್ಗಾಗಿ ಹತ್ತಾರು ವರ್ಷ ಹುಡುಕಾಡಿ, ಅಫ್ಘಾನಿಸ್ತಾನದಲ್ಲಿ ಬೆವರು ಸುರಿಸಿ, ಕೊನೆಗೆ ಪಾಕಿಸ್ತಾನದ ಅಬ್ಬೋಟಾಬಾದ್ನಲ್ಲಿ ಆತನನ್ನು ಪತ್ತೆಹಚ್ಚಿ ಫಿನಿಷ್ ಮಾಡಿ, ಆತನ ಶವವೂ ಸಿಗದಂತೆ ಸಮುದ್ರದಾಳದಲ್ಲಿ ಮುಳುಗಿಸಿತು! ಭಯೋತ್ಪಾದನೆ ಕುರಿತು ಅಮೆರಿಕದ ಅಭಿಪ್ರಾಯ ಯಾವಮಟ್ಟಿಗೆ ಬದಲಾಯಿತು ಎಂಬುದಕ್ಕೆ 2005ರ ಡಿ.18ರಂದು ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಅವರು ಹೇಳಿದ ಈ ಮಾತೇ ಸಾಕ್ಷಿ: ‘ನಾವು ಭಯೋತ್ಪಾದಕರ ವಿರುದ್ಧ ಹೋರಾಡಿದಾಕ್ಷಣ ಭಯೋತ್ಪಾದಕರನ್ನು ಸೃಷ್ಟಿಸಿದಂತಾಗುವುದಿಲ್ಲ. ಅದೇ, ಅವರ ವಿರುದ್ಧ ಕ್ರಮಕೈಗೊಳ್ಳದೆ ನಿರ್ಲಕ್ಷಿಸಿದರೆ ಭಯೋತ್ಪಾದನೆಗೆ ನೀರೆರೆದಂತಾಗುತ್ತದೆ.’
ಮೊನ್ನೆ ನವೆಂಬರ್ 26ರಂದು ಮುಂಬೈ ದಾಳಿಗೆ 12 ವರ್ಷವಾದ ಹಿನ್ನೆಲೆಯಲ್ಲಿ, ಕರಾಳ ದಿನ ಆಚರಿಸಲಾಯಿತು. ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್ ಟಾಟಾ ಆ ಸಂದರ್ಭದಲ್ಲಿ ಒಂದು ಅನಿಸಿಕೆ ಹಂಚಿಕೊಂಡಿದ್ದರು. ಅದು ಹೀಗಿದೆ: ‘ಆ ದಿನ ಆದ ಸಾವುನೋವುಗಳನ್ನು ನೆನೆದರೆ ಈಗಲೂ ಅಪಾರ ವೇದನೆಯಾಗುತ್ತದೆ. ನಗರದಾದ್ಯಂತ ಅಮಾಯಕರು ಅನುಭವಿಸಿದ ಯಾತನೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಆದರೆ ಅಂಥ ನೋವಿನ ಹೊತ್ತಲ್ಲೂ ಮತ್ತು ನಂತರದಲೂ ಮುಂಬೈ ಜನರು ತೋರಿದ ಧೈರ್ಯದ ಬಗ್ಗೆ ಹೆಮ್ಮೆಯುಂಟಾಗುತ್ತದೆ. ನಮ್ಮ ಮೇಲೆ ದಾಳಿ ನಡೆಸಬಹುದು ಮತ್ತು ನಮಗೆ ಗಾಯಗಳನ್ನು ಉಂಟುಮಾಡಬಹುದು. ಆದರೆ ನಮ್ಮ ಚೈತನ್ಯವನ್ನು ಸಾಯಿಸಲು ಎಂದಿಗೂ ಸಾಧ್ಯವಿಲ್ಲ’. ಈ ಮಾತು ಎಷ್ಟು ನಿಜವಲ್ಲವೆ? ಅಂಥದೊಂದು ಸ್ಥೈರ್ಯ ಮತ್ತು ಧೈರ್ಯ ಭಾರತೀಯರಲ್ಲಿ ಇಲ್ಲದೆ ಹೋಗಿದ್ದರೆ, ಇಲ್ಲಿ ನಡೆದ ನೂರಾರು ಆಕ್ರಮಣಗಳು ಈ ಪುರಾತನ ದೇಶದ ನೆಲವನ್ನು ಆಪೋಶನ ತೆಗೆದುಕೊಂಡುಬಿಡುತ್ತಿದ್ದವೇನೋ! ಜಾಗತಿಕವಾಗಿ ಅತಿ ಹೆಚ್ಚು ಸಲ ಅನ್ಯರಿಂದ ದಾಳಿಗೊಳಗಾದ ದೇಶಗಳಲ್ಲಿ ಭಾರತವೂ ಒಂದು. ಗ್ರೀಕರು, ಹೂಣರು, ಅರಬರು, ಪೋರ್ಚುಗೀಸರು, ಬ್ರಿಟಿಷರು... ಭಾರತದ ಮೇಲೆ ದಾಳಿಮಾಡಿದವರ ಯಾದಿ ದೀರ್ಘವಿದೆ. ಇಂತಹ ಆಕ್ರಮಣಗಳಿಂದಾಗಿ ಭಾರತದಲ್ಲಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ವ್ಯಾಪಕ ಪರಿಣಾಮ ಉಂಟಾದುದು ಹೌದಾದರೂ, ಈ ದೇಶದ ಅಂತಃಸತ್ವವನ್ನು, ಅಸ್ಮಿತೆಯನ್ನು ಅಳಿಸಲಾಗಲಿಲ್ಲವೆಂಬುದು ನಮ್ಮ ಭಾಗ್ಯವಿಶೇಷವೇ ಸರಿ. ‘ಧಮಾಲ್’ ಮುಂತಾದ ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ನಟ ಆಶಿಶ್ ಚೌಧರಿಯ ಸಹೋದರಿ ಮೋನಿಕಾ ಮತ್ತು ಭಾವ ಅಜಿತ್ ಛಾಬ್ರಿಯಾ ಅವರು ಮುಂಬೈ ದಾಳಿಯಲ್ಲಿ ಸಾವನ್ನಪ್ಪಿದ್ದರು. ಪ್ರತಿ ವರ್ಷ ಆ ದಿನದಂದು ಜಾಲತಾಣದಲ್ಲಿ ಪೋಸ್ಟ್ ಹಾಕುವ ಆಶಿಶ್ ಚೌಧರಿ ಮೊನ್ನೆ ಇನ್ಸ್ಟಾಗ್ರಾಮ್ಲ್ಲಿ ಪ್ರಕಟಿಸಿದ್ದ ಭಾವನಾತ್ಮಕ ಪೋಸ್ಟ್ನ ಭಾವಾನುವಾದ ಹೀಗಿದೆ:
ನೀನಿಲ್ಲದೆ ದಿನ ಪೂರ್ಣವಾಗದು
ಪ್ರತಿನಿತ್ಯವೂ ನಿನ್ನ ಗೈರು ಕಾಡುತ್ತಿದೆ
ಸುಮ್ಮನೆ ನನ್ನತ್ತ ನೋಡುತ್ತಿರು
ನಾನಾದರೋ ಅದನ್ನೇ ಮಾಡುತ್ತಿರುವೆ
ನನಗೆ ಶಕ್ತಿ ತುಂಬಿದವಳು ನೀನು
ಮುಂಚಿನಂತೆಯೇ ನಾವು ನಲಿಯುತ ಆಟವಾಡಿದಂತೆ
ನೀನಿರುವೆ ನನ್ನ ಪಕ್ಕದಲ್ಲೆ ಪ್ರತಿಕ್ಷಣ
ನನ್ನ ಉಸಿರಿಗೆ ಅದುವೆ ಪ್ರಾಣ
ದುರ್ಘಟನೆಗಳಲ್ಲಿ, ಆಕಸ್ಮಿಕಗಳಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿಯೊಬ್ಬರ ಹೃದಯದ ಮಾತು ಇದು. ಆದರೆ, ಜೀವದ ಬೆಲೆ ಅರಿಯದೆ, ಬಂದೂಕಿನ ಸದ್ದೇ ಆಪ್ಯಾಯಮಾನ ಎನ್ನುವವರಿಗೆ ಇಂಥ ಭಾವನೆ ಅರ್ಥವಾಗುವುದಾದರೂ ಹೇಗೆ? ಕೊನೇ ಮಾತು: ಕರೊನಾ ಮಹಾಮಾರಿ ಬದುಕಿನ ಎಲ್ಲ ರಂಗಗಳ ಮೇಲೂ ಕರಿನೆರಳು ಚಾಚಿದೆ. ಆರ್ಥಿಕತೆ ಕುಸಿದಿದ್ದರೆ, ಲಕ್ಷಾಂತರ ಉದ್ಯೋಗನಷ್ಟವಾಗಿದೆ. ಸಾಮಾಜಿಕವಾಗಿಯೂ ಬದಲಾವಣೆಗಳಾಗಿವೆ. ಎಲ್ಲ ಸವಾಲುಗಳನ್ನು ಎದುರಿಸಿ ನಿಲ್ಲುವ ಛಾತಿಯುಳ್ಳ ಭಾರತೀಯರು ಈ ಮಹಾಸವಾಲನ್ನೂ ಗೆದ್ದುಬರುವುದರಲ್ಲಿ ಸಂಶಯ ಬೇಡ.
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)