ಹಾಗಾದರೆ, ಮಕ್ಕಳಿಗೆ ಓದಿ ಎಂದು ಹೇಳುವುದೇ ತಪ್ಪಾ?

Read
Published on
‘ಅಪ್ಪಾ ಅಮ್ಮಾ, ನನ್ನನ್ನು ದಯವಿಟ್ಟು ಕ್ಷಮಿಸಿ. ಏಕೋ ಜೀವನ ಬೇಸರವಾಗಿದೆ. ಯಾವುದಕ್ಕೂ ಮನಸ್ಸಾಗುತ್ತಿಲ್ಲ. ಓದಲು ಸಹ ಆಗುತ್ತಿಲ್ಲ. ನನ್ನೊಳಗೆ ಏನಾಗುತ್ತಿದೆ ಎಂದು ನನಗೇ ಗೊತ್ತಾಗುತ್ತಿಲ್ಲ. ಹೀಗಾಗಿ ಲೈಫಿಗೆ ಗುಡ್​ಬೈ ಹೇಳುತ್ತಿದ್ದೇನೆ. ಮುಂದಿನ ಜನ್ಮ ಅಂತಿದ್ದರೆ ಮತ್ತೆ ನಿಮ್ಮ ಮಗಳಾಗಿ ಹುಟ್ಟಲು ಬಯಸುತ್ತೇನೆ...’

ಹೀಗೆಂದು ಬರೆದಿಟ್ಟ ಆ ಯುವತಿ ಒಂದು ದಿನ ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು. ಮುಂದಿನ ಜನ್ಮದಲ್ಲಿ ಜನಿಸುವುದು ಹಾಗಿರಲಿ, ಆ ತಂದೆ-ತಾಯಿಗೆ ಈ ಜನ್ಮಪೂರ್ತಿ ಕೊರಗನ್ನು ಶಾಶ್ವತವಾಗಿಸಿ ತಾನು ಇಲ್ಲವಾದಳು. ಮಗಳಿಗೆ ಆದದ್ದಾದರೂ ಏನು ಎಂಬುದು ಆ ಪಾಲಕರಿಗೆ ಇನ್ನೂ ಬಗೆಹರಿಯದ ಪ್ರಶ್ನೆ.

***

‘ಅಮ್ಮಾ, ನೀನು ಮನೆಯಲ್ಲಿ ನನಗೆ ಎಲ್ಲವನ್ನೂ ಕೊಟ್ಟಿದ್ದೀಯಾ. ಯಾವುದಕ್ಕೂ ಕೊರತೆ ಮಾಡಿಲ್ಲ. ಆದರೂ ನನಗೆ ಏಕೋ ಚಡಪಡಿಕೆ. ಏನೋ ಸಾಧನೆ ಮಾಡಬೇಕೆಂದು ಅನಿಸುತ್ತಿದೆ. ಸ್ಪಷ್ಟತೆ ಇಲ್ಲ. ಎಲ್ಲವೂ ಗೊಂದಲಗೋಜಲು. ಮನೆಯಿಂದ ತೆರಳುತ್ತಿದ್ದೇನೆ. ಮನಸ್ಸಿಗೆ ಸಮಾಧಾನವಾದ ಮೇಲೆ ವಾಪಸ್ ಬರುತ್ತೇನೆ’- ಈ ಒಕ್ಕಣೆಯ ಚೀಟಿ ಬರೆದಿಟ್ಟ ಎದೆಯೆತ್ತರ ಬೆಳೆದ ಮಗ ಒಂದು ದಿನ ಇದ್ದಕ್ಕಿದ್ದಂತೆ ಎಲ್ಲಿಗೋ ಹೊರಟುಹೋದ. ಮಗ ಇಂದು ಬರುತ್ತಾನೆ ನಾಳೆ ಬರುತ್ತಾನೆ ಎಂದು ಕಾಯುತ್ತಲೇ ಇದ್ದಾಳೆ. ಆಕೆ ಊಟಮಾಡುವಾಗ ಕೈಲಿಹಿಡಿದ ಅನ್ನದ ಮೇಲೆ ಕಣ್ಣೀರು ಇಳಿಯುವುದು ಮಗನಿಗೆ ಕಂಡೀತಾದರೂ ಹೇಗೆ? ಊಟ ಮಾಡಲಾಗದೆ ಎದ್ದುಬಿಡುತ್ತಾಳೆ.

***

‘ಮನೆಯಲ್ಲಿನ ಬಡತನ ಮತ್ತು ಸಮಾಜದಲ್ಲಿ ಆದ ಅವಮಾನಗಳನ್ನು ನೋಡಿ ನೋಡಿ ನನ್ನಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಮೂಡಿತು. ಕೊರತೆಗಳ ನಡುವೆಯೂ ಪರಿಶ್ರಮದಿಂದ ಓದಿದೆ. ಅದರ ಫಲ ಇದು’-ಸ್ನಾತಕೋತ್ತರ ಡಿಗ್ರಿಯಲ್ಲಿ ಚಿನ್ನದ ಪದಕ ಪಡೆದುಕೊಂಡ ಯುವಕನೊಬ್ಬ ಹೇಳಿದ ಮಾತಿದು.

ಈ ಮೂರು ನಿದರ್ಶನಗಳು ನಮ್ಮ ಯುವಜನರ ಮನಸ್ಸಿನ ಮೇಲೆ ಹಿಡಿದ ಕನ್ನಡಿಗಳು ಅಲ್ಲವಾ? ಈ ಕನ್ನಡಿಯ ಬಿಂಬ ಅನೇಕ ಅರ್ಥಗಳನ್ನು, ಸಂದೇಶಗಳನ್ನು ನೀಡುವಂತಿದೆ. ಇವತ್ತಿನ ದಿನಮಾನದಲ್ಲಿ ಮಕ್ಕಳನ್ನು ಸಾಕುವುದು, ಬೆಳೆಸುವುದು, ಶಿಕ್ಷಣ ನೀಡುವುದು ಪಾಲಕರಿಗೆ ದೊಡ್ಡ ಸವಾಲಾಗಿ ಕಾಡುತ್ತಿದೆ. ಅವರ ಪ್ರಕಾರ ತಾವು ಎಲ್ಲವನ್ನೂ ಸರಿಯಾಗಿಯೇ ಮಾಡುತ್ತಿರುತ್ತಾರೆ. ಕೂಲಿನಾಲಿ ಮಾಡಿಯಾದರೂ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸುತ್ತಾರೆ; ಕೇಳಿಕೇಳಿದ್ದನ್ನು ಕೊಡಿಸುತ್ತಾರೆ. ಆದರೂ ಎಲ್ಲಿಯೋ ಏನೋ ಕೊಂಡಿ ಸಡಿಲವಾಗುತ್ತದೆ. ಅದರಲ್ಲೂ ಪರೀಕ್ಷೆ ಹತ್ತಿರ ಬಂತೆಂದರೆ ಪಾಲಕರಿಗೆ ಅಗ್ನಿಪರೀಕ್ಷೆ. ಮಕ್ಕಳ ಕೈಯಿಂದ ಮೊಬೈಲ್ ಆಚೆಗಿರಿಸುವುದೇ ದೊಡ್ಡ ಸವಾಲು. ಅಕಸ್ಮಾತ್ ಮೊಬೈಲಲ್ಲಿ ಏನು ಮಾಡುತ್ತಿದ್ದಾರೆ ಎಂದೇನಾದರೂ ನೋಡಿಬಿಟ್ಟರಂತೂ ಮುಗಿದೇಹೋಯಿತು. ‘ನಿಮಗೆ ನನ್ನ ಮೇಲೆ ಸಂಶಯ ಅಲ್ವಾ? ನನಗೆ ಏನು ಮಾಡಲೂ ಬಿಡುವುದಿಲ್ಲ. ನನಗೆ ಅಷ್ಟು ತಿಳಿಯಲ್ವಾ? ನಾನೇನು ಚಿಕ್ಕ ಮಗೂನಾ’ ಎಂದು ಜಗಳ. ಮಲಗಿದರೂ ಚಾದರದ ನಡುವೆ ಮೊಬೈಲ್ ಬೆಳಕು ತೂರಿಬರುವುದು ಅಪ್ಪ-ಅಮ್ಮನಿಗೆ ಕಾಣದೆ ಇರುತ್ತದೆಯಾ? ಅದನ್ನು ಕೇಳುವ ಹಾಗಿಲ್ಲ. ಓದಿಕೋ ಎಂದು ಪದೇಪದೆ ಹೇಳಲೂ ಹಿಂಜರಿಕೆ; ಏನಾದರೂ ಮಾಡಿಕೊಂಡಾರು ಎಂದು ಹೆದರಿಕೆ. ಗದರಿಸಿದರೆ ಕೆಲಸವಾಗದು; ಬೈದರಂತೂ ಮುಗಿದೇಹೋಯಿತು ರಣರಂಪ ಗ್ಯಾರೆಂಟಿ. ‘ನೀವಿಬ್ರೂ ಸೇರಿಕೊಂಡು ಯಾಕೆ ನನ್ನ ಜೀವ ತಿನ್ನುತ್ತೀರಿ. ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ’ಎಂದು ತಾಕೀತು.

‘ಮಕ್ಕಳ ಮೇಲೆ ಒತ್ತಡ ಹಾಕಲು ಹೋಗಬೇಡಿ. ಬೇರೆಯವರೊಂದಿಗೆ ಹೋಲಿಕೆ ಮಾಡಬೇಡಿ. ಅವರು ಅವರಾಗಿ ಇರಲು, ಬೆಳೆಯಲು ಬಿಡಿ’ ಎಂದು ತಜ್ಞರು, ಮನೋವಿಜ್ಞಾನಿಗಳು ಪಾಲಕರಿಗೆ ಸಲಹೆ ನೀಡುತ್ತಾರೆ. ಇದು ಸರಿಯೇ. ಆದರೆ ಇತರರನ್ನು ನೋಡಿ ಪ್ರೇರಣೆ ಹೊಂದಲಿ, ಉತ್ತೇಜನ ಪಡೆಯಲಿ ಎಂಬ ಉದ್ದೇಶಕ್ಕೆ ಹೇಳಿದರೆ ಅದರಲ್ಲಿ ತಪ್ಪೇನಿದೆ ಎಂಬುದು ಪಾಲಕರಿಗೆ ಅರ್ಥವಾಗದ ಸಂಗತಿ. ಪಕ್ಕದ ಮನೆ ಹುಡುಗ/ಹುಡುಗಿ ಐಎಎಸ್ ಮಾಡಿದರಂತೆ, ಸ್ವಂತ ಬಿಜಿನೆಸ್ ಶುರುಮಾಡಿದರಂತೆ...’ ಎಂದೆಲ್ಲ ಹೇಳುವ ಹಾಗೇ ಇಲ್ಲ. ‘ನಿಮಗೆ ನನ್ನ ಮೇಲೆ ಚೂರೂ ವಿಶ್ವಾಸವಿಲ್ಲ. ಯಾವಾಗಲೂ ಹೀಯಾಳಿಸುತ್ತೀರಿ’ ಎಂದು ಆಕ್ಷೇಪ. ಅಕಸ್ಮಾತ್ ಓದಲು ಆಗದಿದ್ದರೆ, ‘ಮುಂಚಿನಿಂದ ಓದಲು ನನಗೆ ಪ್ರೋತ್ಸಾಹ ನೀಡುತ್ತ ಇದ್ದಿದ್ದರೆ ನಾನೂ ಒಳ್ಳೆಯ ಅಂಕ ತೆಗೆಯುತ್ತಿದ್ದೆನೇನೋ. ಈಗ ನೋಡಿ ಏನಾಗಿದೆ ಅಂತ’ ಎಂದು ಪಾಲಕರ ಮೇಲೆ ಪುಕಾರು ಬೇರೆ. ಅತ್ತ ಮಕ್ಕಳ ಮನಸ್ಥಿತಿಯೂ ಭಿನ್ನವೇನಲ್ಲ. ಶಾಲೆ-ಕಾಲೇಜಿನಲ್ಲಿ ಅಂಕದ ಓಟದ ಭರಾಟೆ. ಅದಕ್ಕೆ ತಕ್ಕ ಹಾಗೆ ತಯಾರಿ ನಡೆಸಬೇಕು. ಇಲ್ಲವಾದರೆ ಶಿಕ್ಷಕರಿಂದ ವಾರ್ನಿಂಗ್. ಮನೆಗೆ ದೂರು. ಸ್ಪೆಷಲ್ ಕ್ಲಾಸ್, ಪ್ರಶ್ನೆಪತ್ರಿಕೆ ಬಿಡಿಸುವುದು... ಇಡೀ ವರ್ಷ ಒಂದಿಲ್ಲೊಂದು ಚಟುವಟಿಕೆ. ಕ್ಯಾಂಪಸ್ ಇಂಟರ್​ವ್ಯೂ, ರ್ಯಾಂಕ್ ಮೆರುಗು, ಲಕ್ಷ ಲಕ್ಷ ಸಂಬಳದ ಆಫರ್... ಇತ್ಯಾದಿ ಮಾತುಗಳೇ ಎಲ್ಲೆಲ್ಲೂ ಅನುರಣಿಸುತ್ತಿರುವಾಗ ಇವರಾದರೂ ಏನು ಮಾಡಿಯಾರು?

ಇನ್ನು, ವ್ಯವಸ್ಥೆಯ ದೃಷ್ಟಿಯಿಂದ ನೋಡಿದರೂ, ಶೈಕ್ಷಣಿಕ ಸಾಧನೆ ಅಳೆಯಲು ಒಂದು ಮಾನದಂಡ ಅಂತ ಬೇಕಲ್ಲ. ನೌಕರಿಗೆ ತೆಗೆದುಕೊಳ್ಳುವವರಿಗೆ ಒಂದು ಅಳತೆಗೋಲು ಬೇಕು. ಅದಕ್ಕೆ ಅಂಕವೇ ಮುಖ್ಯ. ಪರೀಕ್ಷೆಯೇ ಇಲ್ಲದಿದ್ದರೆ ಕಲಿಕೆಯನ್ನು ಒರೆಗೆ ಹಚ್ಚುವುದು ಹೇಗೆ? ಇದಕ್ಕೆ ಪರ್ಯಾಯ ಬರುವವರೆಗೂ ಬೇರೆ ದಾರಿಯಿಲ್ಲ. ಒಟ್ಟಿನಲ್ಲಿ ಈ ಅಂಕಚಕ್ರ ಅಂಕೆಯಿಲ್ಲದೆ ಸುತ್ತುತ್ತಲೇ ಇದೆ. ಹೀಗಾಗಿ ಅವರವರ ಪಾತ್ರವನ್ನು ಅವರವರು ನಿರ್ವಹಿಸಲೇಬೇಕಾಗುತ್ತದೆ.

ಹಾಗೆ ನೋಡಿದರೆ ಜೀವನವೇ ಒಂದು ದೊಡ್ಡ ಪರೀಕ್ಷೆ.

‘ಯಶಸ್ವಿ ಮತ್ತು ಅಯಶಸ್ವಿ ವ್ಯಕ್ತಿಗಳ ಸಾಮರ್ಥ್ಯದಲ್ಲಿ ಬಹಳ ವ್ಯತ್ಯಾಸವೇನಿಲ್ಲ. ಆದರೆ ಆ ಸಾಮರ್ಥ್ಯವನ್ನು ಅಭಿವ್ಯಕ್ತಿಸುವಲ್ಲಿ ವ್ಯತ್ಯಾಸವಿರುತ್ತದೆ’ ಎನ್ನುತ್ತಾನೆ, ಲೇಖಕ ಜಾನ್ ಮ್ಯಾಕ್ಸ್​ವೆಲ್.

‘ಅನೇಕರು ಪರೀಕ್ಷೆಯಲ್ಲಿ ಇತರರನ್ನು ಕಾಪಿ ಮಾಡಲು ಹೋಗುತ್ತಾರೆ. ಹೀಗಾಗಿ ಫೇಲಾಗುತ್ತಾರೆ. ಪ್ರತಿಯೊಬ್ಬರಿಗೂ ಭಿನ್ನವಾದ ಪ್ರಶ್ನೆಪತ್ರಿಕೆಯಿರುತ್ತದೆ ಎಂಬುದನ್ನು ಅರಿಯಲು ಅವರು ವಿಫಲರಾಗುತ್ತಾರೆ’ ಎಂಬ ಮಾತು ಎಷ್ಟು ಅದ್ಭುತ... ಜೀವನದ ಪ್ರಶ್ನೆಪತ್ರಿಕೆ ಎಲ್ಲರಿಗೂ ಒಂದೇ ತೆರನಾಗಿರುವುದಿಲ್ಲ.

‘ನೀನು ಏನಾಗಬೇಕೆಂಬುದನ್ನು ಬಯಸುವಿಯೋ ಅದನ್ನು ಸಾಧಿಸಲು ನಿನ್ನನ್ನು ನೀನು ಅರ್ಪಿಸಿಕೊಳ್ಳದಿದ್ದರೆ ಕನಸನ್ನು ತ್ಯಾಗಮಾಡಬೇಕಾಗುತ್ತದೆ’ ಎಂಬ ಅನಾಮಿಕ ಚಿಂತಕನ ಮಾತು ಎಷ್ಟು ಮನನೀಯವಲ್ಲವೆ? ಕನಸು ಕಂಡರಾಗದು, ಅದನ್ನು ಈಡೇರಿಸಲು ಬೆವರು ಬಸಿಯಬೇಕು, ನರನಾಡಿ ಹಿಂಡಬೇಕು. ಇದು ಶಾಲಾಪರೀಕ್ಷೆ ಮತ್ತು ಜೀವನಪರೀಕ್ಷೆ ಎರಡಕ್ಕೂ ಏಕಪ್ರಕಾರವಾಗಿ ಅನ್ವಯ.

‘ಖಾಲಿತಲೆಯನ್ನು ಮುಕ್ತವಿಚಾರಗಳ ವೇದಿಕೆಯಾಗಿ ರೂಪಿಸುವುದು ಶಿಕ್ಷಣದ ಉದ್ದೇಶ’ ಎಂದು ವ್ಯಾಖ್ಯಾನಿಸಿದ್ದಾರೆ ಉದ್ಯಮಿ ಮಾಲ್ಕಮ್ ಫೋರ್ಬ್ಸ್. ‘ಒಬ್ಬ ವ್ಯಕ್ತಿ ಪರ್ವತವನ್ನು ಎಷ್ಟು ಎತ್ತರಕ್ಕೆ ಏರುತ್ತಾನೆ ಎಂಬುದರ ಮೇಲೆ ನಾನು ಆತನ ಸಾಮರ್ಥ್ಯವನ್ನು ಅಳೆಯುವುದಿಲ್ಲ. ಬದಲಿಗೆ, ಪರ್ವತದಿಂದ ಕೆಳಗುರುಳಿದಾಗ ಮೇಲೇರಲು ಎಷ್ಟು ಶಕ್ತಿ ಹಾಕಿ ಯತ್ನಿಸುತ್ತಾನೆ ಎಂಬುದರ ಮೇಲೆ ಅವನ ತಾಕತ್ತನ್ನು ಅಳೆಯುತ್ತೇನೆ’ ಎಂದಿದ್ದರು, ದ್ವಿತೀಯ ಮಹಾಯುದ್ಧ ಸಂದರ್ಭದಲ್ಲಿ ಅಮೆರಿಕ ಸೇನೆಯ ಕಮಾಂಡರ್ ಆಗಿದ್ದ ಜ.ಜಾರ್ಜ್ ಎಸ್.ಪ್ಯಾಟನ್. ಸತತ ಪ್ರಯತ್ನಶೀಲತೆಯ ಮಹತ್ವವನ್ನು ಇದು ಬಿಂಬಿಸುತ್ತದೆ. ‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ...’ ‘ಎದುರಿಸಲು ತಯಾರಿ ಮಾಡಿಕೊಳ್ಳುವಲ್ಲಿ ನೀನು ವಿಫಲನಾದರೆ ಅನುತ್ತೀರ್ಣನಾದಂತೆಯೇ ಸರಿ’ ಎನ್ನುವ ಮೂಲಕ, ಪ್ರಯತ್ನ ಹಾಗೂ ಸಿದ್ಧತೆಯ ಮಹತ್ವವನ್ನು ತೆರೆದಿಡುತ್ತಾನೆ, ಅಮೆರಿಕನ್ ತತ್ತ್ವಜ್ಞ, ಬರಹಗಾರ ಬೆಂಜಮಿನ್ ಫ್ರಾಂಕ್ಲಿನ್. ಈ ಓದುವುದು, ಬರೆಯುವುದು ಏನೇ ಇರಲಿ, ಪರೀಕ್ಷೆಯಲ್ಲಿ ಉತ್ತಮ ಅಂಕ ತೆಗೆಯಲಾಗದವರಿಗೂ ಬೇರೆ ಯಾವುದೇ ರೀತಿಯಲ್ಲಾದರೂ ಬದುಕಲು ಅವಕಾಶ ನೀಡಬೇಕಾದುದು ಸಮಾಜ ಮತ್ತು ಸರ್ಕಾರದ ಕರ್ತವ್ಯ. ಅವರವರಿಗೆ ಯಾವ ವಿಷಯದಲ್ಲಿ ಆಸಕ್ತಿ ಇರುತ್ತದೆಯೋ ಆ ವಿಷಯದಲ್ಲಿ ಮುಂದುವರಿಯುವ ವಾತಾವರಣ ನಿರ್ವಿುಸಿದರೆ ಅವರೂ ಸಮಾಜಕ್ಕೆ ಉತ್ತಮ ಆಸ್ತಿಯಾಗಬಲ್ಲರು.

ನನ್ನ ಪರಿಚಯದವರೊಬ್ಬರ ಮಗ ಶಾಲೆಯಲ್ಲಿ ಗಣಿತದಲ್ಲಿ ಯಾವಾಗಲೂ ಶೂನ್ಯಸಂಪಾದನೆ ಮಾಡುತ್ತಿದ್ದ. ಮಾಸ್ತರರ ಕೈಲಿ ಬೈಸಿಕೊಳ್ಳುವುದೇ ಕೆಲಸ. ಮನೆಯವರಿಗಂತೂ ಸಾಕಾಗಿಹೋಗಿತ್ತು. ಆತ ಎಸ್​ಎಸ್​ಎಲ್​ಸಿ ನಂತರ ಓದು ಮುಂದುವರಿಸುವುದಿಲ್ಲ ಎಂದು ನಿಶ್ಚಯಿಸಿ ಸಣ್ಣಪ್ರಮಾಣದಲ್ಲಿ ಬಿಜಿನೆಸ್ ಶುರುಮಾಡಿದ. ಕ್ರಮೇಣ ಅದರ ಆಳ ಅಗಲ ಅರಿಯುತ್ತ ಹಂತಹಂತವಾಗಿ ಬೆಳೆಯುತ್ತ ಈಗ ಉದ್ಯಮಿಯೇ ಆಗಿಬಿಟ್ಟಿದ್ದಾನೆ; ಕೈಲಿ ಝುಣಝುಣ ರೊಕ್ಕ ಎಣಿಸುತ್ತಾನೆ. ಆತನ ಈ ‘ಜೀವನಗಣಿತ’ದ ಎದುರು ಲೆಕ್ಕ ಪರಿಶೋಧಕರು ಕೂಡ ಮೂಗಿನ ಮೇಲೆ ಬೆರಳಿಡಬೇಕು. ‘ಉದ್ಯೋಗ ಕೇಳುವ ಬದಲು ಉದ್ಯೋಗ ನೀಡುವಂಥವರಾಗಿ’ಎಂದು ಈಗ ಸರ್ಕಾರಗಳು ಏನು ಅಭಿಯಾನ ನಡೆಸುತ್ತಿವೆ, ಆತ ಅನೇಕ ವರ್ಷಗಳ ಹಿಂದೆಯೇ ತನ್ನದೇ ರೀತಿಯಲ್ಲಿ ಅದನ್ನು ಅನುಷ್ಠಾನಿಸಿದ್ದ. ‘ಸರಿಯಾಗಿ ನೋಡಿದರೆ, ಶಾಲೆಯಲ್ಲಿ ಹಿಂದಿನ ಬೆಂಚುಗಳಲ್ಲಿ ಕುಳಿತ ಮಕ್ಕಳಲ್ಲಿ ಮೇಧಾವಿಗಳು ಕಾಣಸಿಗುತ್ತಾರೆ’ ಎಂದಿದ್ದರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ. ಲಾಸ್ಟ್ ಬೆಂಚಿನಲ್ಲಿ ಕೂಡ್ರುವವರು ದಡ್ಡರು ಎಂಬ ಸಾಮಾನ್ಯಗ್ರಹಿಕೆಯನ್ನು ತಲೆಕೆಳಗಾಗಿಸಿ ಹೊಸದೊಂದು ಹೊಳಹನ್ನು ನೀಡಬಲ್ಲ ಶಕ್ತಿ ಈ ಹೇಳಿಕೆಗಿದೆ.

‘ನಿಜವಾದ ಜ್ಞಾನ ಎಂದರೆ, ತನ್ನಲ್ಲಿ ಎಷ್ಟು ಅಜ್ಞಾನವಿದೆ ಎಂಬುದನ್ನು ಅರಿಯುವುದು’ ಎಂದಿದ್ದ ತತ್ತ್ವಜ್ಞಾನಿ ಕನ್​ಫ್ಯೂಷಿಯಸ್. ನಮ್ಮಲ್ಲಿರುವ ಅಜ್ಞಾನದ ಪೊರೆ ಕಳಚುತ್ತ ಹೋದಂತೆ ಜ್ಞಾನದ ಬೆಳಕು ಕಾಣುತ್ತದೆ ಎಂಬುದು ಅವನ ಮಾತಿನ ಅಂತರಾರ್ಥ. ತನಗೆ ತಿಳಿದಿಲ್ಲ ಎಂದು ಗೊತ್ತಾದಾಗ ವ್ಯಕ್ತಿ ತಿಳಿಯಲು ಯತ್ನಿಸುತ್ತಾನೆ. ಅದುವೇ ಬೆಳಕು.

‘ಉತ್ತಮ ಶಿಕ್ಷಣ ಎಂದರೆ ಕೇವಲ ಮಾಹಿತಿಯನ್ನು ನಮ್ಮಲ್ಲಿ ತುಂಬುವುದಲ್ಲ. ಈ ಸೃಷ್ಟಿಯ ಎಲ್ಲ ವಸ್ತುಗಳೊಡನೆ ಸೌಹಾರ್ದದಿಂದ ಬೆಸೆಯುವಂತೆ ಮಾಡುವುದು ನೈಜಶಿಕ್ಷಣ’ ಎನ್ನುವುದರ ಮೂಲಕ, ರವೀಂದ್ರನಾಥ ಟ್ಯಾಗೋರರು ಶಿಕ್ಷಣದ ಎಲ್ಲೆಯನ್ನು ಅಪರಿಮಿತವಾಗಿ ಹಿಗ್ಗಿಸುತ್ತಾರೆ. ‘ಆತ್ಮಜ್ಞಾನ ಹೊಂದಿದವನು ಇಡೀ ಪ್ರಪಂಚವೇ ತನ್ನದೆಂದು ಭಾವಿಸುತ್ತಾನೆ’ ಎಂಬ ಆಧ್ಯಾತ್ಮಿಕ ಮಾತಿಗೆ ಟ್ಯಾಗೋರರ ಮಾತು ಹೊಂದಿಕೆಯಾಗುತ್ತದೆ. ಅಂದರೆ, ಅರಿವಿನ ವಿಸ್ತಾರ.

ಕೊನೇ ಮಾತು: ‘ಉತ್ತಮ ಅಂಕ ತೆಗೆದವರು ಮಾತ್ರ ಜಾಣರು’ ಎಂಬ ಮನಸ್ಥಿತಿಯನ್ನು ಬಿತ್ತುತ್ತಲೇ ನಮ್ಮ ಶಿಕ್ಷಣ ವ್ಯವಸ್ಥೆ ಇಷ್ಟು ವರ್ಷ ಸಾಗಿಬಂತು. ನಮ್ಮ ಶಿಕ್ಷಣ ವ್ಯವಸ್ಥೆ ಸರಿ ಇಲ್ಲ ಎಂಬ ಮಾತು ಸ್ವಾತಂತ್ರ್ಯದ ಮರುಕ್ಷಣದಿಂದಲೂ ಕೇಳುತ್ತಲೇ ಇದೆ. ನಮ್ಮದು ವಸಾಹತುಶಾಹಿ ಶಿಕ್ಷಣದ ಪಡಿಯಚ್ಚು; ಭಾರತೀಯ ಜಾಯಮಾನಕ್ಕೆ ಸರಿಹೊಂದುವ ಶಿಕ್ಷಣ ನಮಗೆ ಬೇಕು ಎಂಬ ಆಕ್ಷೇಪ ಅನಿಸಿಕೆ ಇದ್ದೇ ಇದೆ. ಆದರೆ ಸರಿಪಡಿಸಲು ಮುಂದಾದವರಿರಲಿಲ್ಲ. ಅಂತೂ ಈಗ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಮಗುವಿನ ಆಸಕ್ತಿ, ಅಭಿರುಚಿಗೆ ಅನುಗುಣವಾಗಿ, ಅವರ ಸರ್ವಾಂಗೀಣ ಏಳಿಗೆಗೆ ಇದು ಇಂಬು ನೀಡುತ್ತದೆ ಎಂದು ಆಳುಗರು ಪ್ರತಿಪಾದನೆ ಮಾಡುತ್ತಿದ್ದಾರೆ. ನಮ್ಮ ಕರ್ನಾಟಕದಲ್ಲಿ ಹೊಸ ನೀತಿಯ ಅನುಷ್ಠಾನಕ್ಕೆ ಚಾಲನೆ ಸಿಕ್ಕಿಯೇ ಬಿಟ್ಟಿದೆ. ಈ ನೀತಿ ಇನ್ನೂ ಶೈಶವಾವಸ್ಥೆಯಲ್ಲಿ ಇರುವುದರಿಂದ ಈಗಲೇ ಏನೂ ಹೇಳಲಾಗದು. ಕಾದುನೋಡಬೇಕಷ್ಟೆ...

‘ಶಿಕ್ಷಣ ಎಂದರೆ ವಾಸ್ತವಾಂಶಗಳನ್ನು, ಮಾಹಿತಿಗಳನ್ನು ಮಾತ್ರ ತಲೆಗೆ ತುಂಬುವದಲ್ಲ. ಬದಲಿಗೆ ಚಿಂತಿಸುವುದನ್ನು ಮನಸ್ಸಿನಲ್ಲಿ ಬಿತ್ತುವುದು ನಿಜವಾದ ಶಿಕ್ಷಣ’ ಎಂದಿದ್ದಾನೆ ವಿಜ್ಞಾನಿ ಐನ್​ಸ್ಟೀನ್. ಅಂಥ ಚಿಂತನೆ ವ್ಯಕ್ತಿಯಲ್ಲಿ ಮೊಳೆತಲ್ಲಿ ಇನ್ನೇನು ಬೇಕು?

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net