ಯುವಕರು ರಾಜಕೀಯಕ್ಕೆ ಬರಬೇಕು ನಿಜ, ಆದರೆ...

ವಿಶೇಷ ಅಂಕಣ
ವಿಶೇಷ ಅಂಕಣ
Published on

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

2024ರ ಮಾಹಿತಿ ಪ್ರಕಾರ ಚೀನಾದ 104 ವರ್ಷ ಇತಿಹಾಸದ ಕಮ್ಯುನಿಸ್ಟ್ ಪಕ್ಷವು 10 ಕೋಟಿಯಷ್ಟು ಸದಸ್ಯರನ್ನು ಹೊಂದಿದೆ. ಇದು ಅಲ್ಲಿನ ಜನಸಂಖ್ಯೆಯ ಸುಮಾರು ಶೇಕಡ 7 ರಷ್ಟಾಗುತ್ತದೆ. ಅಮೆರಿಕದಲ್ಲಿ ಎರಡು ಪಕ್ಷಗಳು ಪ್ರಧಾನವಾಗಿದ್ದು, 198 ವರ್ಷ ಹಳೆಯ ಡೆಮಾಕ್ರಟಿಕ್ ಪಕ್ಷವು ನಾಲ್ಕೂವರೆ ಕೋಟಿ ಸದಸ್ಯರನ್ನು ಹೊಂದಿದ್ದರೆ, 171 ವರ್ಷ ಇತಿಹಾಸದ ರಿಪಬ್ಲಿಕನ್ ಪಕ್ಷದ ಸದಸ್ಯರ ಸಂಖ್ಯೆ 3.75 ಕೋಟಿ. ಭಾರತದಲ್ಲಿ ಬಿಜೆಪಿಗೆ ಪ್ರಧಾನ ಎದುರಾಳಿಯಾಗಿರುವ ಕಾಂಗ್ರೆಸ್ ಪಕ್ಷವು 2022ರ ಲಭ್ಯ ಅಂಕಿಅಂಶದ ಪ್ರಕಾರ, 2.6 ಕೋಟಿ ಸದಸ್ಯರನ್ನು ಹೊಂದಿದೆ.

ಮೊದಲು ಜನಸಂಘ ಎಂದು ಜನ್ಮ ತಳೆದು 1980ರಲ್ಲಿ ಭಾರತೀಯ ಜನತಾ ಪಕ್ಷ ಎಂಬ ಹೆಸರು ಪಡೆದ ಈ ರಾಜಕೀಯ ಪಕ್ಷ ನಂತರದ ದಿನಗಳಲ್ಲಿ ದೊಡ್ಡದಾಗಿ ಬೆಳೆಯಿತು. ಒಂದು ಕಾಲದಲ್ಲಿ ನಾಲ್ವರು ಸಂಸದರನ್ನು ಹೊಂದುವುದಕ್ಕೂ ಪರದಾಟ ನಡೆಸುತ್ತಿದ್ದ ಪಕ್ಷವೊಂದು ಸ್ವಂತ ಬಲದ ಮೇಲೆ ಕೇಂದ್ರದಲ್ಲಿ ಸರ್ಕಾರ ರಚಿಸುವಷ್ಟು ಪ್ರಬಲವಾಗಿ ರೂಪುಗೊಂಡಿದ್ದು ಸಸಾರವಲ್ಲ. ಅಯೋಧ್ಯೆ ಆಂದೋಲನ ಬಳಿಕ ಬಿಜೆಪಿ ಗತಿಯೇ ಬದಲಾಯಿತು. ನಂತರ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವಧಿಯಲ್ಲಿ ಇನ್ನಷ್ಟು ಬೆಳವಣಿಗೆ ಕಂಡಿತು. ಬಿಜೆಪಿ ಹೆಸರೇ ಕೇಳಿರದ ಪ್ರದೇಶಗಳಿಗೂ ಪಕ್ಷದ ಬೇರು ಇಳಿಯಲು ಸಾಧ್ಯವಾಯಿತು. ಕೆಲ ವಿಚಾರಗಳಲ್ಲಿ ಆ ಪಕ್ಷದ ನೀತಿ ನಿಲುವಿನ ಬಗ್ಗೆ ಟೀಕೆಗಳು ಕೂಡ ಇವೆ. ಇದೇನೇ ಇದ್ದರೂ ಸಮಕಾಲೀನ ರಾಜಕೀಯದಲ್ಲಿ ಅದರ ಛಾಪು ಅಲ್ಲಗಳೆಯಲು ಆಗದು ಎಂಬ ಸ್ಥಿತಿ ಇದೆ.

ಇಂಥ ದೊಡ್ಡ ಪಕ್ಷದ ಅಧ್ಯಕ್ಷರಾಗಿ ನಿತಿನ್ ನವೀನ್ ಅವರು ಇದೇ ಜನವರಿ 20ರಂದು ಅಧಿಕಾರ ವಹಿಸಿಕೊಂಡರು. ಬಿಜೆಪಿಯು ಹೊಸ ಪೀಳಿಗೆಯ ನಾಯಕತ್ವ ಬೆಳೆಸುವ ಕುರುಹು ಈ ನೇಮಕ ಎಂಬುದಾಗಿ ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಮೋದಿ, ಅಮಿತ್ ಷಾ, ರಾಜನಾಥ ಸಿಂಗ್, ಜೆ.ಪಿ.ನಡ್ಡಾ ಮುಂತಾದ ಹಿರಿಯರು ಆ ಸಮಯದಲ್ಲಿ ಹಾಜರಿದ್ದರು. ‘ಪಕ್ಷದ ವಿಷಯದಲ್ಲಿ ನಿತಿನ್ ನವೀನ್ ಅವರೇ ನನ್ನ ಬಾಸ್’ ಎಂದು ಮೋದಿ ಹೇಳಿದ್ದು ಪಕ್ಷದ ವಲಯದಲ್ಲಿ ನಾನಾ ಸಂದೇಶಗಳನ್ನು ರವಾನಿಸಿತು. ಬಿಹಾರದ ನಿತಿನ್ ನವೀನ್ ಅವರಿಗೆ ಇನ್ನೂ 45 ವರ್ಷ. ಈ ವಯಸ್ಸಿನಲ್ಲೇ ಬಿಜೆಪಿಯಂಥ ಬೃಹತ್ ಪಕ್ಷದ ನೊಗ ಹೊರುವ ಹೊಣೆ ಸಿಕ್ಕಿರುವುದು ವಿಶೇಷ.

ಐದು ಬಾರಿ ಶಾಸಕರಾಗಿರುವ ಅವರು ಮೋದಿಗೆ ನಿಕಟವಿರುವವರು ಎಂದು ಹೇಳಲಾಗುತ್ತದೆ. ಅಧ್ಯಕ್ಷ ಎಂದಾಕ್ಷಣ ಪಕ್ಷದ ಎಲ್ಲ ವ್ಯವಹಾರ ಮತ್ತು ಕಾರ್ಯತಂತ್ರಗಳು ನಿತಿನ್ ಅವರಿಂದಲೇ ರೂಪುಗೊಳ್ಳುತ್ತವೆ ಎಂದು ಹೇಳಲಾಗದು. ಇದಕ್ಕೆ ಕಾರಣವೂ ಇದೆ. ಈಚಿನ ವರ್ಷಗಳಲ್ಲಿ ಬಿಜೆಪಿ ಪ್ರವರ್ಧಮಾನದ ಹಿಂದೆ ಮೋದಿ ಜನಪ್ರಿಯತೆ ಮತ್ತು ಅಮಿತ್ ಷಾ ಕಾರ್ಯತಂತ್ರ ಪ್ರಮುಖವಾದುದು. ದೀರ್ಘಕಾಲ ಗುಜರಾತ್ ಸಿಎಂ ಆಗಿ ಗಮನಸೆಳೆದಿದ್ದ ಮೋದಿ 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟು ರಾಷ್ಟ್ರ ರಾಜಕಾರಣಕ್ಕೆ ಧುಮುಕಿ ಮೊದಲ ಯತ್ನದಲ್ಲೇ ಭರ್ಜರಿ ಲಯ ಕಂಡುಕೊಂಡರು.

ಬಿರುಗಾಳಿಯಂತೆ ಸಂಚರಿಸುತ್ತ, ಚುನಾವಣಾ ಪ್ರಚಾರ ಸಭೆಗಳಲ್ಲಿ ಅಬ್ಬರದ ಭಾಷಣ ಮಾಡುತ್ತ ಜನರನ್ನಾಕರ್ಷಿಸುವ ಕಲೆ ಕರಗತ ಮಾಡಿಕೊಂಡಿರುವ ಮೋದಿ, 2019ರಲ್ಲಿಯೂ ಗೆದ್ದರು. 2024ರಲ್ಲಿ ಬಿಜೆಪಿ ಸಂಸದರ ಸಂಖ್ಯೆ ಕಡಿಮೆಯಾಗಿದ್ದರೂ, ಇವತ್ತಿಗೂ ಜನರನ್ನು ದೊಡ್ಡ ಪ್ರಮಾಣದಲ್ಲಿ ಆಕರ್ಷಿಸಿ ಮತಗಳನ್ನು ಗುಡ್ಡೆ ಹಾಕುವ ಸಾಮರ್ಥ್ಯ ಮೋದಿಗೆ ಇರುವಷ್ಟು ಬೇರೆಯವರಿಗೆ ಇಲ್ಲ ಎಂಬುದನ್ನು ಅವರ ವಿರೋಧಿಗಳು ಸಹ ಒಪ್ಪುತ್ತಾರೆ. ರಾಹುಲ್ ಗಾಂಧಿ ಮೋದಿಗೆ ಎದುರಾಗಿ ಸೆಡ್ಡು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಖರೆ. ಆದರೆ ಆ ಪಟ್ಟುಗಳು ನಿರೀಕ್ಷೆ ಮಾಡಿದ ಮಟ್ಟಕ್ಕೆ ಫಲ ನೀಡುತ್ತಿಲ್ಲ. ಇನ್ನೊಂದೆಡೆ, ಕಾರ್ಯತಂತ್ರ ಹೊಸೆಯುವಲ್ಲಿ. ಸಮಯಕ್ಕೆ ತಕ್ಕ ದಾಳ ಉರುಳಿಸುವಲ್ಲಿ ಅಮಿತ್ ಷಾ ಚತುರ. ಹೀಗಾಗಿ ಬಿಜೆಪಿ ಓಟ ವೇಗದಿಂದ ಸಾಗುತ್ತಿದೆ.

ವಾಸ್ತವ ಹೀಗಿರುವಾಗ ಪಕ್ಷದ ಅಧ್ಯಕ್ಷರಾಗಿ ನಿತಿನ್ ನವೀನ್ ಅವರೇ ಎಲ್ಲ ಪ್ರಮುಖ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರೆ ನಂಬುವುದು ಕಷ್ಟ. ಹಾಗಂತ ಅಧ್ಯಕ್ಷ ಹುದ್ದೆ ನಗಣ್ಯ ಎಂದಲ್ಲ. ಮೋದಿ ಮತ್ತು ಷಾ ಅವರೇ ಪ್ರತಿಯೊಂದು ವಿಷಯದಲ್ಲಿಯೂ ಮಧ್ಯಪ್ರವೇಶಿಸಿ ನಿರ್ಣಯ ಮಾಡುವುದು ಕಷ್ಟ. ಅವರ ಕಾರ್ಯದೊತ್ತಡ ಹಾಗಿರುತ್ತದೆ. ಬಿಜೆಪಿಯಂತಹ ಬೃಹತ್ ಪಕ್ಷದ ನಿತ್ಯದ ವ್ಯವಹಾರಗಳೇ ಸಾಕಷ್ಟು ಇರುತ್ತವೆ. ಜತೆಗೆ ರಾಜ್ಯ ಹಾಗೂ ರಾಷ್ಟ್ರೀಯ ಚುನಾವಣೆಗಳು ವಿಪರೀತ ಒತ್ತಡವನ್ನು ಹೇರುತ್ತವೆ. ಈ ವರ್ಷವನ್ನೇ ತೆಗೆದುಕೊಂಡರೆ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಿದೆ. ಕೇರಳ ಹಾಗೂ ತಮಿಳುನಾಡಿನಲ್ಲಂತೂ ಬಿಜೆಪಿ ಅಂಥ ಹೆಜ್ಜೆಗುರುತು ಹೊಂದಿಲ್ಲ. ಆದರೂ ಚುನಾವಣೆಗೆ ಕಾರ್ಯತಂತ್ರ ರಚಿಸಿ ಶ್ರಮ ಹಾಕಲೇಬೇಕಲ್ಲ. ಯುದ್ಧಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡಿದರೆ ನಗೆಪಾಟಲು. ಇದಲ್ಲದೆ, ಪಕ್ಷದ ಟಾಪ್ ನಾಯಕರ ಸಂದೇಶ-ಸೂಚನೆಗಳನ್ನು ಕಾರ್ಯಕರ್ತರ ಕೇಡರ್​ಗೆ ತಲುಪಿಸುವ ದೊಡ್ಡ ಜವಾಬ್ದಾರಿ ಪಕ್ಷದ ಅಧ್ಯಕ್ಷರ ಮೇಲಿರುತ್ತದೆ. ಹಾಗೇ ಸರ್ಕಾರದ ಜತೆ ಸಮನ್ವಯ ಸಾಧಿಸಿ, ಪ್ರಮುಖ ನೀತಿಗಳು, ಯೋಜನೆಗಳನ್ನು ಜನರಿಗೆ ಸೂಕ್ತವಾಗಿ ತಲುಪಿಸಿ ಜನಾಭಿಪ್ರಾಯ ಮೂಡಿಸುವಲ್ಲಿಯೂ ಪಕ್ಷಕ್ಕೆ ತನ್ನದೇ ಆದ ಹೊಣೆ ಇರುತ್ತದೆ (ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್ ಅವರು ಸರ್ಕಾರ ಮತ್ತು ಪಕ್ಷ ಎರಡರ ನೇತೃತ್ವವನ್ನೂ ವಹಿಸಿದ ಕೆಲ ವಿರಳ ನಿದರ್ಶನಗಳು).

ಇವನ್ನೆಲ್ಲ ನಿಭಾಯಿಸುವುದು ಬಹಳ ಉತ್ಸಾಹ, ಶ್ರಮ ಮತ್ತು ಶಕ್ತಿಯನ್ನು ಬಯಸುತ್ತದೆ. ನಿತಿನ್ ನವೀನ್ ಈ ಹಾಟ್ ಸೀಟ್ ಅನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದು ಕಾದು ನೋಡಬೇಕಾದ ಸಂಗತಿ. ಆದರೆ, ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಆಡಿದ ಒಂದು ಮಾತು ಗಮನ ಸೆಳೆಯುವಂತಿದೆ. ‘ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪಕ್ಕೆ ಬಲ ತುಂಬಲು ಯುವಜನರು ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯ ರಂಗಕ್ಕೆ ಬರಬೇಕು. ಮೋದಿಯವರು 2025ರ ಸ್ವಾತಂತ್ರೊ್ಯೕತ್ಸವ ಭಾಷಣದಲ್ಲಿ ಈ ಕರೆ ನೀಡಿದ್ದರು. ಹೀಗಾಗಿ ಯುವಜನರು ರಾಜಕೀಯದಿಂದ ಅಂತರ ಕಾಯ್ದುಕೊಳ್ಳುವುದು ಪರಿಹಾರವಲ್ಲ. ಯುವಜನರು ಸಕಾರಾತ್ಮಕ ರಾಜಕಾರಣದಲ್ಲಿ ಭಾಗವಹಿಸುವ ಅವಶ್ಯಕತೆ ಇದೆ’ಎಂದು ನಿತಿನ್ ನವೀನ್ ಹೇಳಿದರು. ಒಬ್ಬ ಯುವ ನಾಯಕನಾಗಿ ಅವರ ಈ ಕರೆ ಮಹತ್ವ ಪಡೆಯುತ್ತದೆ. ಹಾಗೆ ನೋಡಿದರೆ ಯುವಜನರು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂಬ ಕರೆ ಅಥವಾ ಆಶಯ ಹೊಸದೇನಲ್ಲ.

ಹಾಗಿದ್ದರೆ ಯುವಜನರು ಯಾಕೆ ರಾಜಕೀಯ ರಂಗಕ್ಕೆ ಬಂದು ಪ್ರಮುಖ ಹೊಣೆಗಾರಿಕೆಗಳನ್ನು ನಿಭಾಯಿಸಬೇಕು? ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಸಹ ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಆದಿಯಾಗಿ ಅಗಣಿತ ಯುವಜನರ ಕೊಡುಗೆಯನ್ನು ನಾವು ಬಲ್ಲೆವು. ಯಾವುದೇ ಕ್ಷೇತ್ರ ಇರಲಿ ಅದು ನಿಂತ ನೀರಾಗದೆ ಹರಿವ ತೊರೆಯಾಗಬೇಕು. ನೀರು ಬಹು ಕಾಲ ನಿಂತರೆ ಮಲಿನವಾಗುತ್ತದೆ. ಹೊಸ ಹೊಸ ಆಲೋಚನೆಗಳು ಬಂದಾಗಲೇ ಏನಾದರೂ ನವೀನ ಬದಲಾವಣೆ ಆಗುತ್ತದೆ. ಯುವಜನರಲ್ಲಿ ಆದರ್ಶದ ಕನಸುಗಳ ಮೆರವಣಿಗೆಯೇ ಇರುತ್ತದೆ. ಆ ಕನಸಿನ ಸಾಕಾರಕ್ಕೆ ದಾರಿ ಹುಡುಕುತ್ತಿರುತ್ತಾರೆ. ವ್ಯವಸ್ಥೆಯಲ್ಲಿ ಏನಾದರೂ ಬದಲಾವಣೆ ತರಬೇಕು ಎಂಬ ತುಡಿತ-ತಹತಹ ಇರುತ್ತದೆ. ಯುವಜನರಿಗೆ ತಂತ್ರಜ್ಞಾನ ಬಳಕೆ ಮತ್ತು ಮಾಹಿತಿ ಜಾಸ್ತಿ ಇರುತ್ತದೆ. ಶಿಕ್ಷಣ, ಸಾಮಾಜಿಕ ನ್ಯಾಯ ಇತ್ಯಾದಿ ರಂಗಗಳಲ್ಲಿ ಅವರು ದೊಡ್ಡ ಬದಲಾವಣೆ ತರಬಲ್ಲರು. ಇದಲ್ಲದೆ, ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಯುವಜನರ ಆಸೆ ಆಕಾಂಕ್ಷೆಗಳು, ಅನಿಸಿಕೆಗಳು, ಒಳತೋಟಿಗಳನ್ನು ಇವರು ಚೆನ್ನಾಗಿ ಅರಿತು ಸ್ಪಂದಿಸಬಲ್ಲರು. ಈ ಎಲ್ಲ ಸಂಗತಿಗಳನ್ನು ಪೋಣಿಸಿಕೊಂಡು ಪ್ರಮುಖ ಸ್ಥಾನದಲ್ಲಿ ಕುಳಿತು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಒಳಿತಾಗುತ್ತದೆ ಎಂಬುದು ಈ ಬೇಡಿಕೆಯ ಹಿಂದಿರುವ ಭಾವನೆ. ಆದರೆ ಒಟ್ಟಾರೆಯಾಗಿ ರಾಜಕೀಯ ವ್ಯವಸ್ಥೆಯಲ್ಲಿ ವಾಸ್ತವ ಅಷ್ಟು ಪೂರಕವಾಗಿದೆಯೇ?

ಧನಬಲ ಅಥವಾ ತೋಳ್ಬಲ ಇಲ್ಲದವರು ರಾಜಕೀಯದ ಉನ್ನತ ಹಂತಕ್ಕೆ ಬರುವುದು ಸುಲಭವಲ್ಲ ಎಂಬುದು ಗೊತ್ತಿರುವ ಸಂಗತಿ. ಶೂನ್ಯದಿಂದ ದೊಡ್ಡ ಹಂತಕ್ಕೆ ಹೋಗುವುದು ಎಲ್ಲೋ ಕೆಲವರ ವಿಷಯದಲ್ಲಿ ದಿಟವಾಗುತ್ತದೆ ಅಷ್ಟೇ. ಚುನಾವಣೆಗೆ ಕೋಟಿ ಕೋಟಿ ಹಣ ಖರ್ಚು ಮಾಡಬೇಕು ಎಂಬ ಇವತ್ತಿನ ಸಂದರ್ಭದಲ್ಲಿ ಸಾಮಾನ್ಯರು ಈ ಬಗ್ಗೆ ಆಲೋಚನೆ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆಗೆ ರಾಜಕೀಯ ಪಕ್ಷಗಳೇ ಉತ್ತರ ಹೇಳಬೇಕು. ಅಂದರೆ ಮೂಲಭೂತವಾಗಿ ಕೆಲವು ಬದಲಾವಣೆಗಳನ್ನು ಎಲ್ಲ ರಾಜಕೀಯ ಪಕ್ಷಗಳು ತಮ್ಮಲ್ಲಿ ತಾವು ತಂದುಕೊಳ್ಳಬೇಕು. ಅದಾಗದಿದ್ದರೆ ದೊಡ್ಡ ಬದಲಾವಣೆಯನ್ನು ನಿರೀಕ್ಷೆ ಮಾಡುವುದು ಹೇಗೆ?

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಒಕ್ಕೂಟ (ಒಸಿಇಡಿ) ಇದು 34 ದೇಶಗಳನ್ನು ಪ್ರತಿನಿಧಿಸುವ ಸಂಸ್ಥೆ. ಅಮೆರಿಕ, ಜರ್ಮನಿ, ಫ್ರಾನ್ಸ್, ಜಪಾನ್, ಕೆನಡಾ, ಆಸ್ಟ್ರೇಲಿಯಾ ಇತ್ಯಾದಿ ಮುಂದುವರಿದ ದೇಶಗಳನ್ನು ಇದು ಒಳಗೊಂಡಿದೆ. ಭಾರತ ಇದರ ಸದಸ್ಯ ದೇಶವಲ್ಲದಿದ್ದರೂ ಪ್ರಮುಖ ಪಾಲುದಾರನಾಗಿದೆ. ಒಸಿಇಡಿ ದೇಶಗಳಲ್ಲಿ 2024ರಲ್ಲಿ 40ಕ್ಕಿಂತ ಕಡಿಮೆ ವಯಸ್ಸಿನ ಸಂಸದರ ಸಂಖ್ಯೆ ಕೇವಲ ಶೇ.22 ಇತ್ತು ಎಂದು ವರದಿ ಹೇಳಿದೆ. ಅಲ್ಲಿ 20-39 ವಯೋಮಾನದವರ ಪ್ರಮಾಣ ಶೇ.34 ಇತ್ತು.

2023ರಲ್ಲಿ ಭಾರತದ ಜನಸಂಖ್ಯೆಯಲ್ಲಿ 25 ವರ್ಷಕ್ಕಿಂತ ಕಡಿಮೆ ವಯೋಮಾನದವರ ಪ್ರಮಾಣ ಸುಮಾರು ಶೇ.50ರಷ್ಟು ಇತ್ತು. 30ಕ್ಕಿಂತ ಕಡಿಮೆ ವಯಸ್ಸಿನವರ ಪ್ರಮಾಣ ಶೇ.65 ಇತ್ತು. 2019ರಲ್ಲಿ ಸಂಸದರ ಸರಾಸರಿ ವಯಸ್ಸು 54 ಇತ್ತು. 40ಕ್ಕಿಂತ ಕಡಿಮೆ ವಯಸ್ಸಿನ ಸಂಸದರ ಪ್ರಮಾಣ ಶೇ. 12 ಮಾತ್ರ ಇತ್ತು.

ಕೊನೇ ಮಾತು: ಯುವಜನರು ರಾಜಕೀಯಕ್ಕೆ ಬರಬೇಕು ಎಂಬುದೇನೋ ಸರಿ. ಆದರೆ ಅನುಭವಸ್ಥರ ಮಾರ್ಗದರ್ಶನವೂ ಇರಲೇಬೇಕು. ಹಾಗಿಲ್ಲದೆ ಹೋದಲ್ಲಿ ಆಡಳಿತದಲ್ಲಿ ಅವಾಂತರಕ್ಕೆ ದಾರಿಯಾದೀತು. ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net