ಯಾರಾದರೂ ಹೊಣೆಗಾರಿಕೆ ಹೊರಲೇಬೇಕು...

ಜವಾಬ್ದಾರಿ
ಜವಾಬ್ದಾರಿ
Published on

 (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ಸಿಕ್ಸ್ ಪ್ಯಾಕ್ ಎಂಬುದು ಸಿನಿಮಾ ರಂಗದಲ್ಲಿ ಬಹಳ ಚಾಲ್ತಿಯಲ್ಲಿ ಇರುವ ಪದ. ಗ್ರೀಕ್ ಶಿಲ್ಪಗಳ ಹಾಗೆ ಹುರಿಗಟ್ಟಿದ ಕಟ್ಟುಮಸ್ತು ದೇಹವನ್ನು ಹೊಂದಿದ ನಟರು ತೆರೆ ಮೇಲೆ ಸಕತ್ ಫೈಟ್, ಡಾನ್ಸ್ ಮಾಡುತ್ತ ಮಿಂಚುವ ಅನೇಕ ಉದಾಹರಣೆಗಳನ್ನು ಕಾಣಬಹುದು. ಇದಕ್ಕಾಗಿ ಅವರು ಪ್ರತಿದಿನ ತಾಸುಗಟ್ಟಲೆ ಹೊತ್ತು ವ್ಯಾಯಾಮ ಮಾಡಿ ಬೆವರಿಳಿಸುತ್ತಾರೆ. 
ಹಾಗೇ ಯುವ ಜನತೆಗೆ ಸಹ ಈ ರೀತಿ ಸಿಕ್ಸ್ ಪ್ಯಾಕ್ ಒಡೆಯರಾಗುವ ಕನಸು. ಈ ಉದ್ದೇಶ ಸಾಕಾರಕ್ಕಾಗಿ ಸಾವಿರಾರು ರೂಪಾಯಿ ಕೊಟ್ಟು ಜಿಮ್ ಸೇರಿ ಕಸರತ್ತು ಮಾಡುತ್ತಾರೆ; ವಾರಗೆಯ ಹುಡುಗರ ಬಳಿ ಉಬ್ಬಿದ ಸ್ನಾಯುಗಳನ್ನು ತೋರಿಸಿ ಹೆಮ್ಮೆಪಡುತ್ತಾರೆ. ಈ ಪದವೇ ಗೊತ್ತಿಲ್ಲದಿದ್ದ ಕಾಲದಲ್ಲೇ ಕಟ್ಟುಮಸ್ತು ಶರೀರದ ಮೂಲಕ ಗಮನ ಸೆಳೆದವರು ಹಿಂದಿ ಚಿತ್ರನಟ ಧಮೇಂದ್ರ. ಹೀಗಾಗಿ ಅವರನ್ನು ‘ಹಿ-ಮ್ಯಾನ್’ ಎಂದೇ ಕರೆಯಲಾಗುತ್ತಿತ್ತು. ವಯೋಸಹಜವಾಗಿ ಅನಾರೋಗ್ಯಕ್ಕೆ ಒಳಗಾದ ಅವರನ್ನು ಈಚೆಗೆ ಮುಂಬೈಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಷ್ಟಾಗಿದ್ದೆ ತಡ ಅವರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರಿಗಿಂತ ಹೆಚ್ಚಾಗಿ ‘ಸಾಮಾಜಿಕ ಮಾಧ್ಯಮ ವೈದ್ಯರು’ ತಲೆಕೆಡಿಸಿಕೊಂಡು ವದಂತಿಗಳನ್ನು ಹರಿಯಬಿಡತೊಡಗಿದರು. 
ಮಾಧ್ಯಮಗಳಲ್ಲಿ ಕೂಡ ಹಿರಿಯ ನಟನ ಆರೋಗ್ಯದ ಕುರಿತಾಗಿ ವರದಿಗಳು ಬಿತ್ತರವಾಗತೊಡಗಿದವು. ಇದು ಎಲ್ಲಿಗೆ ಹೋಯಿತು ಎಂದರೆ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಧಮೇಂದ್ರರ ಹಿರಿಯ ಪುತ್ರ ಸನ್ನಿ ಡಿಯೋಲ್, ‘ನಿಮ್ಮ ಕುಟುಂಬಗಳಲ್ಲಿ ವಯಸ್ಸಾದ ತಂದೆ ತಾಯಿ ಇಲ್ಲವೇ?’ ಎಂದು ಪ್ರಶ್ನಿಸಿದ್ದೂ ಆಯಿತು. ಒಂದೆಡೆ ಇದೆಲ್ಲ ನಡೆಯುತ್ತಿದ್ದರೆ, ಧಮೇಂದ್ರ ಅವರು ಟಿವಿಯಲ್ಲಿ ತನ್ನ ಮರಣವಾರ್ತೆ ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರವಾಗುತ್ತಿದ್ದುದನ್ನು ವೀಕ್ಷಿಸುತ್ತಿರುವಂತೆ ಒಂದು ಚಿತ್ರ ಪ್ರಕಟ ಆಯಿತು. ಇದು ಬಹುಶಃ ಎಐ (ಕೃತಕ ಬುದ್ಧಿಮತ್ತೆ) ಮೂಲಕ ಸೃಷ್ಟಿ ಮಾಡಿದ ಫೋಟೋ ಇರಬೇಕು. ಆದರೂ, ಈ ಚಿತ್ರವು ಅವಸರದ, ಅತ್ಯುತ್ಸಾಹದ, ಧಾವಂತದ, ದೃಢಪಡದ ಸುದ್ದಿ ಹರಡುವಿಕೆಯ ಮನೋಭಾವಕ್ಕೆ ಮಾರ್ವಿುಕವಾದ ರೀತಿಯಲ್ಲಿ ಕನ್ನಡಿ ಹಿಡಿಯುವಂತಿತ್ತು.
ಅದಾದ ಕೆಲ ದಿನಗಳಲ್ಲಿ ಧಮೇಂದ್ರ ಮರಣಿಸಿದರು. ಅದು ಬೇರೆ ವಿಚಾರ. ಆದರೆ ಹೆಸರುವಾಸಿ ವ್ಯಕ್ತಿಯೊಬ್ಬನ ಬಗ್ಗೆ ಪರಿಶೀಲನೆ ನಡೆಸದೆ, ಅಧಿಕೃತ ಮೂಲಗಳನ್ನು ಮಾಹಿತಿಗಾಗಿ ಅವಲಂಬಿಸದೆ ಸುದ್ದಿ ಹರಡುವ ಇಂಥ ಹಪಾಹಪಿಗೆ ಮದ್ದು ಅರೆಯುವವರು ಯಾರು? ಹೇಗೆ? ಎಂಬುದು ದೊಡ್ಡ ಪ್ರಶ್ನೆ.

ಅತ್ತ, ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಮಾಜಿ ಕ್ರಿಕೆಟಿಗ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಗ್ಯ ವಿಚಾರ ಟ್ರೆಂಡಿಂಗ್ ಆಗಿದೆ. ಪಾಕ್​ನ ವರ್ಣರಂಜಿತ ವ್ಯಕ್ತಿಗಳಲ್ಲಿ ಇಮ್ರಾನ್ ಕೂಡ ಒಬ್ಬರು. ಅವರ ಕ್ರಿಕೆಟ್ ಹಾಗೂ ರಾಜಕೀಯ ಜೀವನದ ಹಾಗೆ ವೈಯಕ್ತಿಕ ಜೀವನ ಕೂಡ ರ್ಚಚಿತ ವಿಷಯ. 1992ರಲ್ಲಿ ಪಾಕಿಸ್ತಾನ ವಿಶ್ವ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ಆಟದ ಬಳಿಕ ರಾಜಕೀಯ ಇನಿಂಗ್ಸ್ ಆರಂಭಿಸಿ ಪ್ರಧಾನಿ ಪಟ್ಟಕ್ಕೂ ಏರಿದ ಮಹತ್ವಾಕಾಂಕ್ಷಿ. ಆದರೆ ಆಡಳಿತ ಎಂಬುದು ಆಟದಂತಲ್ಲ ಎಂಬುದು ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.

ಆಡಳಿತದಲ್ಲಿನ ಅವಧಿಯಲ್ಲಿ ಮಾಡಿಕೊಂಡ ಅಪಸವ್ಯಗಳ ಜೊತೆಗೆ ಸೇನೆಯ ಜೊತೆಗಿನ ಭಿನ್ನಾಭಿಪ್ರಾಯ ಅವರಿಗೆ ಮುಳುವಾಯಿತು. ಅಧಿಕಾರ ಹೋಯಿತು. ಹಲವು ಪ್ರಕರಣಗಳು ಅವರ ವಿರುದ್ಧ ದಾಖಲಾದವು. ಪಾಕ್ ರಾಜಕಾರಣದಲ್ಲಿ ಇಂಥ ಹತ್ತೆಂಟು ‘ಆಟಗಾರ’ರನ್ನು ಮಣಿಸಿದ ಸೇನೆಗೆ ಇಮ್ರಾನ್ ದೊಡ್ಡ ಲೆಕ್ಕವೆ? ಭ್ರಷ್ಟಾಚಾರ ಪ್ರಕರಣದಲ್ಲಿ ಸದ್ಯ ಅವರನ್ನು ಅಡಿಯಾಲಾ ಜೈಲಿನಲ್ಲಿ ಇರಿಸಲಾಗಿದೆ. ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಇಮ್ರಾನ್ ಆರೋಗ್ಯ ಸ್ಥಿತಿ ಬಗ್ಗೆ ದೊಡ್ಡ ಗೌಜಿ ಗದ್ದಲ ನಡೆದಿದೆ. ಜೈಲಿನಲ್ಲಿಯೇ ಅವರನ್ನು ಹತ್ಯೆ ಮಾಡಲಾಗಿದೆ ಎಂದೂ ವದಂತಿ ಹಬ್ಬಿದೆ. ಇದಕ್ಕೆ ಇಂಬು ನೀಡುವಂತೆ ಬಲೂಚಿಸ್ತಾನದ ಸ್ವಯಂಘೊಷಿತ ಸರ್ಕಾರದ ವಿದೇಶಾಂಗ ಇಲಾಖೆಯು ಇಮ್ರಾನ್​ರನ್ನು ಜೈಲಿನಲ್ಲಿ ಹತ್ಯೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದೆ. 

ಇಮ್ರಾನ್​ರ ಮೂವರು ಸೋದರಿಯರಿಗೆ ಅಡಿಯಾಲಾ ಜೈಲಿನಲ್ಲಿ ಅವರನ್ನು ಭೇಟಿ ಮಾಡಲು ಅವಕಾಶ ನೀಡದೆ ಇರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಕಾರಾಗೃಹದಲ್ಲಿ ಇಮ್ರಾನ್ ಆರೋಗ್ಯ ಸ್ಥಿರವಾಗಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದರು ಕೂಡ ಅನುಮಾನ ಪೂರ್ತಿಯಾಗಿ ಬಗೆಹರಿದಿಲ್ಲ. ಏಕೆಂದರೆ ಅಲ್ಲಿನ ಇತಿಹಾಸ ಹಾಗಿದೆ. ಸೇನೆಯ ಮಾತೇ ನಡೆಯುವ ಪಾಕಿಸ್ತಾನದಲ್ಲಿ ಏನು ಬೇಕಾದರೂ ಘಟಿಸಬಹುದು. ಇದೇನೇ ಇರಲಿ, ಇಂತಹ ಎಷ್ಟೋ ಪ್ರಸಂಗಗಳು ನಿತ್ಯವೂ ನಡೆಯುತ್ತಲೇ ಇರುತ್ತವೆ. ಡಿಜಿಟಲ್ ತಂತ್ರಜ್ಞಾನ ಬೆಳೆಯುತ್ತಿದ್ದಂತೆ, ಸಾಧ್ಯತೆಗಳು ವಿಸ್ತಾರವಾಗುತ್ತಿರುವಂತೆ ಕುಚೋದ್ಯಕ್ಕಾಗಿ, ಅವಹೇಳನಕ್ಕಾಗಿ ಬಳಸುವ ಪರಿಪಾಠವೂ ಹೆಚ್ಚುತ್ತಿರುವುದು ಅನಪೇಕ್ಷಿತ ವಿದ್ಯಮಾನ. 

ಇದರಿಂದ ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನ ಮೇಲಾಗುವ ದುಷ್ಪರಿಣಾಮಗಳು ಸರ್ಕಾರ, ಸರ್ಕಾರದ ಸಂಬಂಧಿಸಿದ ಇಲಾಖೆಗಳು, ಸಮಾಜ ವಿಜ್ಞಾನಿಗಳು, ತಂತ್ರಜ್ಞಾನ ಪರಿಣತರು ಎಲ್ಲರನ್ನೂ ಕಳವಳಕ್ಕೀಡುಮಾಡಿದೆ. ಇದಕ್ಕೆಲ್ಲ ಕಡಿವಾಣ ಹೇಗೆ ಎಂಬ ಚಿಂತನ ಮಂಥನ ನಡೆಯುತ್ತಿದೆ. ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ನಡುವೆ. ಸಾಮಾಜಿಕ ಮಾಧ್ಯಮಗಳು ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೊಸ ಮಜಲನ್ನು ನೀಡಿವೆ ಎಂಬುದರಲ್ಲಿ ಎರಡು ಮಾತಿಲ್ಲ. ತಂತ್ರಜ್ಞಾನದ ಸ್ವಲ್ಪ ಮಟ್ಟಿನ ಪರಿಚಯ ಇದ್ದವರು ತಮಗೆ ಅನಿಸಿದ್ದನ್ನು ಬರೆಯುವ, ನಾಲ್ಕು ಜನರೊಂದಿಗೆ ಹಂಚಿಕೊಳ್ಳುವ ಅದ್ಭುತ ಅವಕಾಶವನ್ನು ಸೋಷಿಯಲ್ ಮೀಡಿಯಾ ತೆರೆದಿಟ್ಟಿದೆ. ಆದರೆ ಈ ಸ್ವಾತಂತ್ರ್ಯವು ಸ್ವೇಚ್ಛೆ ಮಟ್ಟಕ್ಕೆ ಹೋಗಿರುವುದು ಸಮಸ್ಯೆಗಳಿಗೆ ಕಾರಣವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯುವವರು, ಪೋಸ್ಟ್ ಹಾಕುವವರು, ಇತರರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವವರು ಎಚ್ಚರಿಕೆಬೆರೆತ ವಿವೇಚನೆ ಬಳಸುವುದು ಅಪೇಕ್ಷಣೀಯ. ಯಾವುದು ಅಸಭ್ಯ ಹೇಳಿಕೆಯಾಗುತ್ತದೆ, ಯಾವುದು ಮಾನಹಾನಿ ಉಂಟುಮಾಡುವಂತಿರುತ್ತದೆ ಎಂಬುದನ್ನು ಅರಿತು, ಇದಕ್ಕೆ ಸಂಬಂಧಿಸಿದ ಕಾನೂನಿನ ಬಗ್ಗೆ ಸ್ವಲ್ಪವಾದರೂ ತಿಳಿದುಕೊಂಡಿರುವುದು ಉತ್ತಮ. ಇಲ್ಲವಾದಲ್ಲಿ ಮುಂದೆ ಪ್ರಕರಣ ದಾಖಲಾಗಿ ಕಾನೂನಾತ್ಮಕ ತೊಂದರೆಯಲ್ಲಿ ಸಿಲುಕುವ ಫಜೀತಿ ಉಂಟಾಗಬಹುದು. ಇಂಥ ಎಷ್ಟೋ ನಿದರ್ಶನಗಳಿವೆ. ಇಷ್ಟೆಲ್ಲದರ ನಡುವೆಯೇ, ಸಾಮಾಜಿಕ ಮಾಧ್ಯಮ ಬಳಕೆದಾರರ ಏರುಗತಿ ಅಚ್ಚರಿ ಮೂಡಿಸುವಂತಿದೆ ಮತ್ತು ಈ ಪ್ರಮಾಣ ಬೆಳೆಯುತ್ತಲೇ ಇದೆ.

ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಮತ್ತು ಇಂಥ ಬಹುತೇಕ ಕಂಪನಿಗಳ ನೆಲೆಯಾಗಿರುವ ಅಮೆರಿಕದಲ್ಲಿ ಶೇ.72ರಷ್ಟು ಜನರು ಸಾಮಾಜಿಕ ಮಾಧ್ಯಮ ಬಳಸುತ್ತಾರೆ. ಯೂಟ್ಯೂಬ್ ಮತ್ತು ಫೇಸ್​ಬುಕ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರತಿವರ್ಷ ಇಂಥ ಬಳಕೆದಾರರು ಶೇ.2ರಷ್ಟು ಪ್ರಮಾಣದಲ್ಲಿ ಹೆಚ್ಚುತ್ತಿದ್ದಾರಂತೆ. ನಿತ್ಯ ಸರಾಸರಿ 2 ತಾಸು 8 ನಿಮಿಷ ವೇಳೆಯನ್ನು ಇದರಲ್ಲಿ ಕಳೆಯುತ್ತಾರೆ ಎಂದು ಅಧ್ಯಯನ ವರದಿಗಳು ಹೇಳುತ್ತವೆ. 25-34 ವಯೋಮಾನದವರಲ್ಲಿ ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚು. ನಂತರದಲ್ಲಿ 35-44 ವಯೋಮಾನದವರು ಬರುತ್ತಾರೆ. ಆದರೆ ಅತಿಯಾದ ಬಳಕೆಯಿಂದಾಗಿ ನಿದ್ರಾಹೀನತೆ, ಸಾಮಾಜಿಕ ಉದ್ವಿಗ್ನತೆ, ಸೈಬರ್ ಸಮಸ್ಯೆಗೀಡಾಗುವುದು ಮುಂತಾದ ತೊಂದರೆಗಳನ್ನು ಎದುರಿಸುತ್ತಾರೆ ಎಂದೂ ವರದಿಗಳು ಹೇಳಿವೆ.

ಅಮೆರಿಕದ ಕಥೆ ಇರಲಿ, ನಮ್ಮ ಭಾರತವೇನೂ ಈಗ ಕಡಿಮೆ ಇಲ್ಲ. 2025ರ ಹೊತ್ತಿಗೆ ಭಾರತದಲ್ಲಿ ಸುಮಾರು 49 ಕೋಟಿ (ಜನಸಂಖ್ಯೆಯ ಶೇ.33) ಸಕ್ರಿಯ ಸಾಮಾಜಿಕ ಮಾಧ್ಯಮ ಬಳಕೆದಾರರಿದ್ದು, ಚೀನಾದ ನಂತರ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ನಿತ್ಯ ಸುಮಾರು 194 ನಿಮಿಷಗಳನ್ನು ಇದರಲ್ಲಿ ಕಳೆಯುತ್ತಿದ್ದು, ಜೆನ್ ಝಿ ಎಂದು ಕರೆಯಲಾಗುವ ಯುವಜನರ ಪ್ರಮಾಣ ಹೆಚ್ಚಿಗೆಯಿದೆ. ಮೊಬೈಲ್ ಫೋನ್ ಬಳಸುವವರ ಸಂಖ್ಯೆ ಅಗಾಧ ವೇಗದಲ್ಲಿ ಬೆಳೆಯುತ್ತಿರುವುದು; ಅಂತರ್ಜಾಲ ವೆಚ್ಚ ತಗ್ಗುತ್ತಿರುವುದು ಸಹ ಇದಕ್ಕೆ ಕೊಡುಗೆ ನೀಡಿದೆ.

ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂಬುದು ಗಾದೆಮಾತು. ಆದರೆ ಇವತ್ತಿನ ಧಾವಂತದ, ವೇಗದ ಯುಗದಲ್ಲಿ ಪರಾಂಬರಿಸಿ ನೋಡುವುದು ಒತ್ತಟ್ಟಿಗಿರಲಿ, ಕಣ್ಣಾರೆ ನೋಡದಿದ್ದರೂ ಕಂಡಂತೆಯೇ ಬಿಂಬಿಸುವುದು ಸಾಮಾನ್ಯವಾಗಿಬಿಟ್ಟಿದೆ. ಅತಿಯಾದರೆ ಅಮೃತವೂ ವಿಷ. ಯಾವುದೇ ವಿಷಯ ಅತಿಯಾದಲ್ಲಿ ಅದಕ್ಕೆ ಕ್ರಮೇಣ ನಿಯಂತ್ರಣ, ಮೂಗುದಾರ ಬೀಳುತ್ತದೆ. ಸಾಮಾಜಿಕ ಮಾಧ್ಯಮಗಳ ಪೋಸ್ಟ್ ವಿಚಾರದಲ್ಲಿ ಈ ಮಾತು ದಿಟವಾಗುವ ಸಮಯ ಹತ್ತಿರ ಬಂದಿದೆ ಎಂಬ ಸುಳಿವು ಈಗ ಸಿಕ್ಕಿದೆ. ಭಾರತದ ಸವೋಚ್ಚ ನ್ಯಾಯಾಲಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್​ಗಳ ಬಗ್ಗೆ ಯಾರಾದರೂ ಹೊಣೆಗಾರಿಕೆಯನ್ನು ಹೊರಲೇಬೇಕು ಎಂದು ಸ್ಪಷ್ಟ ಪದಗಳಲ್ಲಿ ಹೇಳಿದೆ. 

ಈ ಕುರಿತು ಕರಡು ನಿಯಮ ರೂಪಿಸಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶವನ್ನು ನೀಡಿದೆ. ಕರಡು ನಿಯಮ ರೂಪಿಸಿ ಸಾರ್ವಜನಿಕ ಅಭಿಪ್ರಾಯಕ್ಕೆ ಮುಕ್ತವಾಗಿಸಬೇಕು. ನಂತರ ಸಮಸ್ಯೆಗಳ ಅಧ್ಯಯನಕ್ಕಾಗಿ ವಿಷಯ ತಜ್ಞರ ಹಾಗೂ ನ್ಯಾಯಾಂಗ ತಜ್ಞರ ಸಮಿತಿ ರಚನೆ ಮಾಡಬೇಕು ಎಂದು ಸೂಚನೆ ನೀಡಿದೆ. ಸದ್ಯ ಸಾಮಾಜಿಕ ಮಾಧ್ಯಮಗಳ ವಿಷಯದಲ್ಲಿ ಸ್ವಯಂ ನಿಯಂತ್ರಣ ಮಾದರಿ ಜಾರಿಯಲ್ಲಿದ್ದು, ಇದರ ಕಾರ್ಯಕ್ಷಮತೆ ಬಗ್ಗೆ ಸುಪ್ರೀಂ ಕೋರ್ಟು ಅತೃಪ್ತಿ ವ್ಯಕ್ತಪಡಿಸಿದೆ. ಸ್ವಯಂನಿಯಂತ್ರಣ ಇದ್ದರೂ ಉಲ್ಲಂಘನೆ ಯಾಕೆ ಎಂದು ಪ್ರಶ್ನಿಸಿದೆ. ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ರೂಪಿಸುತ್ತಿದ್ದು ಸಂಬಂಧಪಟ್ಟ ಪಾಲುದಾರರ ಜತೆ ಚರ್ಚಿಸುತ್ತಿದೆ ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟಿನ ನ್ಯಾಯಪೀಠಕ್ಕೆ ವಿವರಣೆ ನೀಡಿದ್ದಾರೆ.

 ‘ಅಭಿವ್ಯಕ್ತಿ ಸ್ವಾತಂತ್ರ್ಯ ಅಮೂಲ್ಯವಾದುದು. ಆದರೆ ಅದು ವಿಕೃತಿಗೆ ತಲುಪಬಾರದು’ ಎಂದು ಮೆಹ್ತಾ ಹೇಳಿರುವುದು ಒಪ್ಪತಕ್ಕ ಮಾತು. ಕೇಂದ್ರವೂ ಈ ನಿಟ್ಟಿನಲ್ಲಿ ಗಂಭೀರವಾಗಿದೆ ಎಂಬುದು ಅವರ ಮಾತಿನಲ್ಲಿ ವ್ಯಕ್ತವಾಗುತ್ತದೆ. ಒಂದು ಸರ್ವ ಸಮ್ಮತ ಮಾರ್ಗಸೂಚಿ ರಚನೆಯಾಗಿ ಆರೋಗ್ಯಕರ ಸಮಾಜ ನಿರ್ವಣಕ್ಕೆ ಕೊಡುಗೆ ನೀಡುವಂತಾಗಲಿ ಎಂದು ಹಾರೈಸೋಣ. ಕೊನೇ ಮಾತು, ಕರೊನಾ ಮಾರಿ ಜಗತ್ತನ್ನು ಪೀಡಿಸುತ್ತಿದ್ದಾಗ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಬಗೆಯ ಸುದ್ದಿ-ವದಂತಿಗಳು ಹರಡುತ್ತಿದ್ದವು. ಅಲ್ಲಿ ಹಾಗಂತೆ ಇಲ್ಲಿ ಹೀಗಂತೆ, ಈ ಆಹಾರ ಒಳ್ಳೇದಂತೆ ಅದು ಬೇಡವಂತೆ... ಇತ್ಯಾದಿ ಮಹಾಪೂರ. ಇವುಗಳಲ್ಲಿ ಯಾವುದು ನಿಜ ಯಾವುದು ಸುಳ್ಳು ಎಂಬುದನ್ನು ತಿಳಿಯುವುದೇ ಜನರಿಗೆ ದೊಡ್ಡ ಸವಾಲಾಗಿತ್ತು. 

ಅಪರಿಚಿತ ಸಾಂಕ್ರಾಮಿಕವೊಂದು ವೈದ್ಯಕೀಯ ವಲಯವನ್ನು ಸಹ ಕಂಗಾಲು ಮಾಡಿದ್ದಾಗ ಇನ್ನು ಜನಸಾಮಾನ್ಯರ ಕತೆ ಏನು? ಅಂತಹ ಸಂದರ್ಭದಲ್ಲಿ ಜನರು ವಿಶ್ವಾಸಾರ್ಹ ಮಾಹಿತಿಗಾಗಿ ನೆಚ್ಚಿದ್ದು ಮುದ್ರಣ ಮಾಧ್ಯಮಗಳನ್ನು. ಜವಾಬ್ದಾರಿಯುತ ವರದಿ ಮತ್ತು ನಿಖರ ಮಾಹಿತಿಗಳನ್ನು ನೀಡುವ ಮೂಲಕ ಮಾಧ್ಯಮಗಳು ಬಿಕ್ಕಟ್ಟಿನ ಸಂದರ್ಭದಲ್ಲಿ ವಿವೇಚನೆಯಿಂದ ವರ್ತಿಸಿ ಹೊಣೆಗಾರಿಕೆಯನ್ನು ನಿರ್ವಹಿಸಿದವು. ಈ ಕಾರಣಕ್ಕಾಗಿಯೇ ಇವತ್ತಿನ ಸಾಮಾಜಿಕ ಮಾಧ್ಯಮಗಳ ಅಬ್ಬರದ ನಡುವೆಯೂ ಪತ್ರಿಕೆಗಳು ವಿಶ್ವಾಸಾರ್ಹತೆ ಉಳಿಸಿಕೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net