ಮರುಭೂಮಿಯ ಜೀವನಾಡಿ ಖೇಜ್ರಿ ವೃಕ್ಷಕ್ಕೆ ವಂದಿಸುತ್ತ...

ಖೇಜ್ರಿ ಮರ
ಖೇಜ್ರಿ ಮರ
Published on

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

‘ಈ ಹೋರಾಟದಲ್ಲಿ ನನ್ನ ಪ್ರಾಣ ಹೋದರೂ ಹೆದರೆನು. ಹಾಗಾದಲ್ಲಿ ಅದು ಮರ ರಕ್ಷಣೆಗೆ ನನ್ನ ಸಣ್ಣದೊಂದು ತ್ಯಾಗವೆಂದು ಭಾವಿಸುವೆ’ ಎಂದು ಘೋಷಿಸಿದ ಆಕೆ, ಗ್ರಾಮಸ್ಥರಿಗೆ ಪ್ರೇರಣೆಯಾಗುತ್ತಾಳೆ. ಆಗ 363 ಮಂದಿ ಬಿಷ್ಣೋಯಿಗಳ ಹತ್ಯೆಯಾಗುತ್ತದೆ. ಹಸಿರಿನ ರಕ್ಷಣೆಯಲ್ಲಿ ಈ ಸಮುದಾಯ ಯಾವ ಹಂತಕ್ಕೂ ಹೋಗಬಲ್ಲದು ಎಂಬುದಕ್ಕೆ ಇದು ಸಾಕ್ಷಿ. ಕೆಲ ಇತಿಹಾಸಕಾರರು ಬಿಷ್ಣೋಯಿಗಳನ್ನು ‘ಮೊದಲ ಪರಿಸರ ಹೋರಾಟಗಾರರು’ ಎಂದು ಗುರುತಿಸುತ್ತಾರೆ. ಅಮೃತಾ ದೇವಿ ಎಂಬ ಹೆಣ್ಣುಮಗಳು ಬಿಷ್ಣೋಯಿ ಸಮುದಾಯದ ಅಸ್ಮಿತೆಯಾಗುತ್ತಾಳೆ. ಮುಂದೆ ಅನೇಕ ಪರಿಸರ ಹೋರಾಟಗಳಿಗೆ ಈ ಘಟನೆ ಸ್ಪೂರ್ತಿಯಾಗುತ್ತದೆ.

ರಾಜಸ್ಥಾನ ಸರ್ಕಾರ ಈಚೆಗೆ ಖೇಜ್ರಿ ಮರಗಳನ್ನು ಕಡಿಯುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಮೇಲಿನ ಪ್ರಸಂಗ ನೆನಪಾಯಿತು. ಹಾಗಾದರೆ ಖೇಜ್ರಿ ಮರದ ಬಗ್ಗೆ ಯಾಕೆ ಇಷ್ಟೆಲ್ಲ ಆಸಕ್ತಿ ಎಂದು ಹುಡುಕುತ್ತ ಹೊರಟರೆ ಧಾರ್ವಿುಕ, ಕೃಷಿ ಮತ್ತು ಪರಿಸರ ಸಂರಕ್ಷಣೆ ಪರಂಪರೆಯ ಲೋಕವೇ ತೆರೆದುಕೊಳ್ಳುತ್ತದೆ. ಹಸಿರು ಮರಗಳನ್ನು ಕಡಿಯದಿರುವುದು ಮತ್ತು ಪರಿಸರ ಸಂರಕ್ಷಣೆ ಮಾಡುವುದು- ಇವು ಬಿಷ್ಣೋಯಿ ಸಮುದಾಯಕ್ಕೆ ಅವರ ಗುರು ಜಂಭೇಶ್ವರರು (1451-1536) ವಿಧಿಸಿದ ಹಲವು ನಿಯಮಗಳಲ್ಲಿ ಸೇರಿವೆ. ಸಮುದಾಯದ ಜನರ ಬದುಕಿಗೆ ಬೆಳಕಾಗುವ 29 ನೀತಿಸೂತ್ರಗಳನ್ನು ಅವರು ರಚಿಸಿದ್ದು, ಅವನ್ನು ‘ಶಬ್ದವಾಣಿ’ಯಲ್ಲಿ ಸಂಕಲಿಸಲಾಗಿದೆ.

ಗುರುವಾಣಿಯಲ್ಲಿ ಅಪಾರ ಶ್ರದ್ಧೆ ಇರಿಸಿರುವ ಈ ಸಮುದಾಯ ಅವರ ಬೋಧನೆಗಳನ್ನು ಪಾಲಿಸುತ್ತ ಬರುತ್ತಿದೆ. ಪ್ರಾಣಿ ಸಂಕುಲವನ್ನು ಕಾಪಾಡುವುದು ತಮ್ಮ ಧರ್ಮ ಎಂಬುದಾಗಿ ಇವರು ಭಾವಿಸುತ್ತಾರೆ. ಉದಾ: ಕೃಷ್ಣಮೃಗ ತಮ್ಮ ಗುರುವಾದ ಜಂಭೇಶ್ವರರ ಅವತಾರ ಎಂದು ಇವರು ನಂಬುತ್ತಾರೆ. ಹೀಗಾಗಿ ಕೃಷ್ಣಮೃಗವನ್ನು ದೇವತಾಸ್ವರೂಪಿಯಾಗಿ ಗ್ರಹಿಸುತ್ತಾರೆ. ಈ ಪ್ರಾಣಿಯನ್ನು ಎಷ್ಟು ಪ್ರೀತಿಸುತ್ತಾರೆಂದರೆ, ಎಲ್ಲಾದರೂ ಗುಂಪಿನಿಂದ ಬೇರ್ಪಟ್ಟ ಪುಟ್ಟ ಕೃಷ್ಣಮೃಗ ಕಂಡಲ್ಲಿ ಮಹಿಳೆಯರು ಅವಕ್ಕೆ ಮೊಲೆಯೂಡಿಸಿ ಸ್ವಂತ ಮಕ್ಕಳಂತೆ ಸಾಕುತ್ತಾರೆ.

ಕೃಷ್ಣಮೃಗ ಅಳಿವಿನ ಅಂಚಿನಲ್ಲಿ ಇರುವ ಪ್ರಾಣಿ ಎಂದು ಪರಿಗಣಿಸಲಾಗಿದೆ. ಹೆಚ್ಚಾಗಿ ಭಾರತ ಮತ್ತು ನೇಪಾಳದಲ್ಲಿ ಮಾತ್ರ ಕಂಡುಬರುವ ಈ ಪ್ರಾಣಿಗೆ ಬೇಟೆಗಾರರ ಕಾಟ. ರಾಜಸ್ಥಾನದ ಥಾರ್ ಮರುಭೂಮಿ ಸುತ್ತಮುತ್ತ ಹೆಚ್ಚಾಗಿ ಕಂಡುಬರುವ ಬಿಷ್ಣೋಯಿ ಸಮುದಾಯದ ಜನಸಂಖ್ಯೆ ಸುಮಾರು 15 ಲಕ್ಷ ಇರಬಹುದು. ಥಾರ್ ಮರುಭೂಮಿಯ ಪರಿಸರ ವ್ಯವಸ್ಥೆಯಲ್ಲಿ ಖೇಜ್ರಿ ಮರಗಳ ಪಾತ್ರ ಮಹತ್ವದ್ದು. ಬನ್ನಿ ಮರದ ಹಾಗೆ ಕಾಣುವ ಈ ಮರ ಅತಿಯಾದ ಉಷ್ಣ ಮತ್ತು ಚಳಿ ವಾತಾವರಣವನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ‘ಮರುಭೂಮಿಯ ರಾಜ’, ‘ಮರುಭೂಮಿಯ ಜೀವನಾಡಿ’ ಎಂದೇ ಖ್ಯಾತವಾಗಿದೆ. 

ಸಾರಜನಕ ಒದಗಿಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ ಮತ್ತು ಮಣ್ಣಿನ ಸವಕಳಿಯನ್ನು ತಡೆಯುತ್ತದೆ. ಇದು ಆಳ ಬೇರುಗಳನ್ನು ಹೊಂದಿದ್ದು, ಸುದೀರ್ಘ ಕಾಲ ಬರವನ್ನು ತಡೆದುಕೊಳ್ಳಬಲ್ಲದು. ಆಳ ಬೇರು ಇರುವ ಕಾರಣಕ್ಕೆ ನೀರಿನ ಸೆಲೆ ಎಲ್ಲಿದೆ ಎಂದು ಸುಳಿವು ನೀಡುತ್ತದೆ. ಇದರ ಆಧಾರದ ಮೇಲೆ ಬಾವಿ ತೆಗೆಯಬಹುದು. ಈ ಮರದ ಅಡಿಯಲ್ಲಿ ಮತ್ತು ಸುತ್ತಮುತ್ತ ಬೆಳೆಯುವ ಬೆಳೆಗೆ ಇದು ಗಾಳಿನಿರೋಧಕವಾಗಿ ಕೆಲಸ ಮಾಡುತ್ತದೆ ಮತ್ತು ನೆರಳನ್ನು ಒದಗಿಸುತ್ತದೆ. ಇದರ ಕಾಯಿ ಅಥವಾ ಸೋಡಿಗೆ (ಸಾಂಗ್ರಿ) ಪೌಷ್ಟಿಕಾಂಶಭರಿತವಾಗಿದ್ದು ಸ್ಥಳೀಯವಾಗಿ ಕೇರ್ ಸಾಂಗ್ರಿ ಖಾದ್ಯ ತಯಾರಿಗೆ ಬಳಸುತ್ತಾರೆ. 

ಇದಲ್ಲದೆ, ಉರುವಲಾಗಿ ಒದಗುತ್ತದೆ. ಇದರ ತೊಗಟೆ ಮತ್ತು ಎಲೆಗಳು ಔಷಧೀಯ ಗುಣಗಳನ್ನು ಹೊಂದಿದ್ದು ಶೀತ ಹಾಗೂ ಕೆಮ್ಮಿಗೆ ಬಳಸಲಾಗುತ್ತದೆ. ಲೂಂಗ್ ಎಂದು ಕರೆಯಲಾಗುವ ಇದರ ಎಲೆಗಳು ಜಾನುವಾರುಗಳಿಗೆ ಆಹಾರವಾಗಿಯೂ ಬಳಕೆಯಾಗುತ್ತದೆ. ಇದನ್ನು ರಾಜಸ್ಥಾನದ ‘ರಾಜ್ಯ ವೃಕ್ಷ’ ಎಂದು ಘೊಷಿಸಲಾಗಿದೆ. ಧಾರ್ವಿುಕವಾಗಿಯೂ ಮಹತ್ವ ಹೊಂದಿದೆ. ಜನಜೀವನ ಮತ್ತು ಪರಿಸರ ವ್ಯವಸ್ಥೆಯಲ್ಲಿ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ.

ಖೇಜ್ರಿ ಮರ ರಕ್ಷಣೆ ಆಂದೋಲನಕ್ಕೆ ಇದೇ ಫೆಬ್ರವರಿ ತಿಂಗಳು ಮತ್ತೊಮ್ಮೆ ಸಾಕ್ಷಿಯಾಯಿತು. ಪಶ್ಚಿಮ ರಾಜಸ್ಥಾನದಲ್ಲಿ ಸೌರ ವಿದ್ಯುತ್ ಯೋಜನೆಗಳಿಗಾಗಿ ದೊಡ್ಡ ಸಂಖ್ಯೆಯಲ್ಲಿ ಖೇಜ್ರಿ ಮರಗಳನ್ನು ಬಲಿಕೊಡಲಾಗುತ್ತಿದೆ ಎಂಬ ಆರೋಪವು ಪ್ರತಿಭಟನೆಗೆ ಮೂಲ ಕಾರಣ. ಬಿಕಾನೇರ್ ಪ್ರದೇಶದಲ್ಲಿ ಖೇಜ್ರಿ ಮರಗಳನ್ನು ಕಡಿಯುವುದನ್ನು ವಿರೋಧಿಸಿ 360 ಸಂತರು ಮತ್ತು ಸ್ಥಳೀಯ ಬಿಷ್ಣೋಯಿಗಳು ಫೆಬ್ರವರಿ 2ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಇದಕ್ಕೆ ಜನಬೆಂಬಲ ಹೆಚ್ಚುತ್ತ ಹೋಯಿತು. ಪ್ರತಿಭಟನೆ ಕ್ರಮೇಣ ರಾಜ್ಯಕ್ಕೆ ಹಬ್ಬಿ ‘ಖೇಜ್ರಿ ಬಚಾವೋ ಆಂದೋಲನ’ವಾಗಿ ರೂಪಾಂತರವಾಯಿತು. ಇದಕ್ಕೆ ಮಹಾಪದವು (ಮಹಾ ಪ್ರತಿಭಟನೆ) ಎಂದು ಕರೆಯಲಾಯಿತು. 

ಖೇಜ್ರಿ ಮರಗಳ ರಕ್ಷಣೆಗೆ ಪರಿಣಾಮಕಾರಿ ಕಾನೂನು ಜಾರಿಗೆ ತರಬೇಕು ಎಂಬುದು ಇವರ ಬೇಡಿಕೆಯಾಗಿತ್ತು. ಸಾವಿರಾರು ಪರಿಸರಪ್ರೇಮಿಗಳು, ಹಿಂದೂ ಸಂತರು ಹಾಗೂ ಬಿಷ್ಣೋಯಿ ಸಮುದಾಯದ ಜನರು ಮತ್ತು ಗ್ರಾಮೀಣ ಮಹಿಳೆಯರು ಉಪವಾಸ ಸತ್ಯಾಗ್ರಹಕ್ಕೆ ಕೂತುಬಿಟ್ಟರು. ಖೇಜ್ರಿ ಬಚಾವೋ ಆಂದೋಲನದ ಅಂಗವಾಗಿ ಬಿಕಾನೇರ್​ನಲ್ಲಿ ಕಲಶ ಯಾತ್ರೆ ನಡೆಯಿತು. ವೃದ್ಧರು, ಮಹಿಳೆಯರು, ಯುವ ಜನರು ಹೆಜ್ಜೆಹಾಕಿದರು. ಖೇಜ್ರಿ ಮರಗಳ ಮಹತ್ವ ಸಾರುವ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತ, ಘೊಷಣೆಗಳನ್ನು ಕೂಗುತ್ತ ಸಾಗಿದರು. ಈ ನಡುವೆ, ಬೇರೆ ಬೇರೆ ರಾಜಕೀಯ ಪಕ್ಷಗಳು ಸಹ ಇದಕ್ಕೆ ಬೆಂಬಲ ವ್ಯಕ್ತಪಡಿಸಿದವು. ಮಾಜಿ ಸಿಎಂಗಳಾದ ಅಶೋಕ್ ಗೆಹ್ಲೋಟ್ ಮತ್ತು ವಸುಂಧರಾ ರಾಜೆ ಪ್ರತಿಭಟನಾಕಾರರ ಬೇಡಿಕೆಗೆ ದನಿಗೂಡಿಸಿದರು.

ಅಧಿಕ ಸೂರ್ಯಪ್ರಕಾಶ ಮತ್ತು ಭೂಮಿ ಲಭ್ಯತೆ ಕಾರಣಕ್ಕೆ ಪಶ್ಚಿಮ ರಾಜಸ್ಥಾನವು ಸೋಲಾರ್ ಹಬ್ ಆಗಿ ಮಾರ್ಪಾಡಾಗುತ್ತಿದೆ. ಭಾರತದ ಇಂಧನ ಯೋಜನೆಗಳಿಗೆ ಸೌರ ವಿದ್ಯುತ್ ಅಗತ್ಯವಾದರೂ, ಇದಕ್ಕಾಗಿ ಪಾರಿಸಾರಿಕ ಮಹತ್ವದ ಮರವನ್ನು ಬಲಿಕೊಡುವುದು ಸರಿಯಲ್ಲ ಎಂಬುದು ಪ್ರತಿಭಟನಾಕಾರರ ವಾದ. ಖೇಜ್ರಿ ಮರವು ಮರುಭೂಮಿ ವಾತಾವರಣಕ್ಕೆ ಜೀವನಾಡಿ. ಇದರ ನಾಶದಿಂದ ತೊಂದರೆಯಾಗುತ್ತದೆ. ಖೇಜ್ರಿ ಮರಗಳು ಕೃಷಿ ಹಾಗೂ ಪಶು ಸಂಗೋಪನೆಯ ಸಂಸ್ಕೃತಿಯಲ್ಲಿ ಬೆರೆತುಹೋಗಿದ್ದು, ಆ ಮರಕ್ಕೆ ಪರ್ಯಾಯ ಸುಲಭವಲ್ಲ ಎಂಬುದು ರೈತರ ಅಂಬೋಣ. ಅಭಿವೃದ್ಧಿ ಯೋಜನೆ ರೂಪಿಸುವಾಗ ಸ್ಥಳೀಯ ಪರಿಸರ ವ್ಯವಸ್ಥೆಯ ವಾಸ್ತವಾಂಶಗಳು ಮತ್ತು ಸಾಂಪ್ರದಾಯಿಕ ಭೂಬಳಕೆ ಮಾದರಿಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬುದು ಜನರ ಆಗ್ರಹ.

ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದ ಸ್ಥಳಕ್ಕೆ ಬಂದ ರಾಜ್ಯದ ಸಚಿವ ಕೆ.ಕೆ. ಬಿಷ್ಣೋಯಿ ಅವರು ಬಿಕಾನೇರ್ ಮತ್ತು ಜೋಧಪುರ ವಲಯಕ್ಕೆ ಸೀಮಿತವಾಗಿ ಮರ ಕಡಿತ ನಿಷೇಧ ಮಾಡುವುದಾಗಿ ಹೇಳಿದಾಗ ಜನರು ಒಪ್ಪಿರಲಿಲ್ಲ. ಇಡೀ ರಾಜ್ಯಕ್ಕೆ ಅನ್ವಯ ಮಾಡಬೇಕೆಂದು ಪಟ್ಟು ಹಿಡಿದರು. ಈ ನಡುವೆ ಹೋರಾಟಗಾರರ ನಿಯೋಗವೊಂದು ಮುಖ್ಯಮಂತ್ರಿಯನ್ನು ಭೇಟಿಯಾಗಿ ಬೇಡಿಕೆಗಳನ್ನು ಮುಂದಿಟ್ಟಿತು. ಪರಿಸರ ಸಂರಕ್ಷಣೆಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಸಿಎಂ, ಸಂತರು, ಪರಿಸರವಾದಿಗಳು ಮತ್ತು ಸಮುದಾಯ ನಾಯಕರ ಸಲಹೆಗಳನ್ನು ಕಾನೂನಿನಲ್ಲಿ ಸೇರಿಸುವುದಾಗಿ ಹೇಳಿದರು.

ಕೊನೆಗೂ ಸರ್ಕಾರ ಹೋರಾಟಕ್ಕೆ ಮಣಿಯಿತು. ಸಮಗ್ರ ವೃಕ್ಷ ಸಂರಕ್ಷಣಾ ಕಾನೂನನ್ನು ತರುವವರೆಗೆ ರಾಜ್ಯದಾದ್ಯಂತ ಖೇಜ್ರಿ ಮರಗಳನ್ನು ಕಡಿಯುವುದನ್ನು ಸಂಪೂರ್ಣವಾಗಿ ನಿಷೇಧ ಮಾಡುವುದಾಗಿ ಲಿಖಿತ ಭರವಸೆ ನೀಡಿತು. ರಾಜ್ಯ ಸಚಿವ ಕೆ.ಕೆ.ಬಿಷ್ಣೋಯಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿಹಾರಿಲಾಲ್ ಬಿಷ್ಣೋಯಿ ಮುಂತಾದವರು ಬಿಕಾನೇರಿನಲ್ಲಿ ಪ್ರತಿಭಟನಾ ಸ್ಥಳಕ್ಕೆ ತೆರಳಿ ಸರ್ಕಾರದ ಅಧಿಕೃತ ಆದೇಶ ಪ್ರತಿಯನ್ನು ನೀಡಿದರು. ಇದಕ್ಕೂ ಮೊದಲು ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ರಾಜ್ಯ ವಿಧಾನಸಭೆಯಲ್ಲಿ, 

ಖೇಜ್ರಿ ಸಂರಕ್ಷಣಾ ಕಾನೂನನ್ನು ತರುವುದಾಗಿ ಹೇಳಿಕೆ ನೀಡಿದ್ದರು. ಈ ಮರವನ್ನು ‘ಕಲ್ಪವೃಕ್ಷ’ ಎಂದು ಬಣ್ಣಿಸಿದರು. ಈ ಎಲ್ಲ ಹಿನ್ನೆಲೆಯಲ್ಲಿ, ಕಾನೂನು ಜಾರಿಗೆ ತರುವವರೆಗೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಾಗಿ ಇದರ ನೇತೃತ್ವ ವಹಿಸಿದ್ದ ಸಂತ ಸಮಾಜ ಘೊಷಿಸಿತು. ಆದರೆ ಈ ಮಾತಿಗೆ ತಪ್ಪಿದಲ್ಲಿ ಆಂದೋಲನವನ್ನು ಮತ್ತೆ ಶುರು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯಸಭಾ ಸದಸ್ಯ ಮತ್ತು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋಡ್ ಅವರು ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಖೇಜ್ರಿ, ಬೇವು ಮತ್ತು ರೋಹಿಡಾ ಮುಂತಾದ ಮರುಭೂಮಿ ಸಸ್ಯ ಸಂಪತ್ತನ್ನು ಬೆಳೆಸುವುದು ಮತ್ತು ಜೂಲಿಫೋರಾ (ವಿದೇಶಿ ಅಕೇಶಿಯಾ)ವನ್ನು ಹಂತ ಹಂತವಾಗಿ ನಿಮೂಲನೆ ಮಾಡುವ ವಿಚಾರವನ್ನು ಪ್ರಸ್ತಾಪಿಸುವ ಮೂಲಕ, ವಿಷಯದ ಆಯಾಮವನ್ನು ವಿಸ್ತರಿಸಿದ್ದರು.

ಜೂಲಿಫೋರಾದಂತಹ ಆಕ್ರಮಕ ಸಸ್ಯವು ಶುಷ್ಕ ಪ್ರದೇಶಗಳಲ್ಲಿ ವ್ಯಾಪಕವಾಗಿ ಪಸರಿಸುವುದು ಮರುಭೂಮಿ ಪರಿಸರ ವ್ಯವಸ್ಥೆಗೆ ಮಾರಕ ಎಂಬುದಾಗಿ ಅವರು ಹೇಳಿರುವುದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಏಕೆಂದರೆ, ಅನ್ಯ ಪ್ರದೇಶದ, ವೇಗವಾಗಿ ಪಸರಿಸುವ, ಆಕ್ರಮಕ ಗುಣಧರ್ಮದ ಸಸ್ಯ ಪ್ರಭೇದವು ಸ್ಥಳೀಯ ನಿಸರ್ಗ ವ್ಯವಸ್ಥೆಯ ಮೇಲೆ ಹಾನಿಮಾಡುತ್ತದೆ ಎಂಬುದಕ್ಕೆ ಇತರೆಡೆಯೂ ಸಾಕಷ್ಟು ನಿದರ್ಶನಗಳಿವೆ. ಈ ಕಾರಣಕ್ಕೆ ಅಕೇಶಿಯಾದಂತಹ ನೆಡುತೋಪು ಬೇಡ ಎಂದು ಹಲವರು ವಾದಿಸುತ್ತಾರೆ.

ಹಾಲಿ, ವಿವಿಧ ಅರಣ್ಯ ಕಾನೂನುಗಳು ಮತ್ತು ಪರಿಸರ ನಿಯಂತ್ರಣ ನಿಯಮಗಳ ಅನುಸಾರ, ಖೇಜ್ರಿ ಮರಕ್ಕೆ ರಕ್ಷಣೆ ಒದಗಿಸಲಾಗಿದೆ. ಆದರೆ ಪರಿಸರವಾದಿಗಳ ಪ್ರಕಾರ, ನಿಯಮಪಾಲನೆ ಸರಿಯಾಗಿ ಆಗುತ್ತಿಲ್ಲ ಹಾಗೂ ಕಾನೂನಿನಲ್ಲಿ ಕೆಲ ಗೊಂದಲಗಳಿವೆ. ಈ ಹಿಂದೆ ಕೂಡ ಖೇಜ್ರಿ ಸಂರಕ್ಷಣೆಗೆ ಹೋರಾಟ ನಡೆದಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬುದು ಪರಿಸರ ಹೋರಾಟದ ಮುಂಚೂಣಿ ನಾಯಕರ ಆರೋಪ. ಈಗಿನ ಹೋರಾಟದ ಪರಿಣಾಮ ಕಾದುನೋಡಬೇಕು.

ಕೊನೇ ಮಾತು: ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಪಾಡುವ ದೊಡ್ಡ ಸವಾಲು ಇಂದು ಇದೆ. ಇವೆರಡರ ನಡುವೆ ಒಂದು ಸುವರ್ಣ ಮಧ್ಯಮ ಮಾರ್ಗದ ಅನ್ವೇಷಣೆ ಕಾಲದ ತುರ್ತ. ಈ ಸವಾಲನ್ನು ಆಡಳಿತಗಾರರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಭವಿಷ್ಯ ದ ದಿನಗಳು ರೂಪಿತವಾಗುತ್ತವೆ. ಇಷ್ಟೆಲ್ಲದರ ನಡುವೆಯೂ, ಜನರ ದನಿಯನ್ನು ಆಳುಗರು ಅಷ್ಟು ಸುಲಭದಲ್ಲಿ ಕಡೆಗಣಿಸಲಾಗದು ಎಂಬುದಕ್ಕೆ ಖೇಜ್ರಿ ಮರ ರಕ್ಷಣಾ ಆಂದೋಲನ ಮತ್ತೊಂದು ನಿದರ್ಶನವಾಗಿ ನಮ್ಮೆದುರು ನಿಲ್ಲುತ್ತದೆ. ಉತ್ತರ ಕನ್ನಡವೂ ಸೇರಿದಂತೆ ರಾಜ್ಯ ಹಾಗೂ ದೇಶದ ವಿವಿಧೆಡೆ ನಡೆಯುತ್ತಿರುವ ಪರಿಸರ ಹೋರಾಟಗಳಿಗೆ ಇಲ್ಲೊಂದು ಸಕಾರಾತ್ಮಕ ಸಂದೇಶವಂತೂ ದೊರಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net