

1876ರ ಜುಲೈ 26ರಂದು, ಅಂದರೆ 150 ವರ್ಷಗಳ ಹಿಂದೆ ಸುರೇಂದ್ರನಾಥ ಬ್ಯಾನರ್ಜಿ ಮತ್ತು ಆನಂದ ಮೋಹನ ಬೋಸ್ ಅವರು ಕೊಲ್ಕತದಲ್ಲಿ ಇಂಡಿಯನ್ ಅಸೋಸಿಯೇಷನ್ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ದೇಶದಲ್ಲಿ ಸಾರ್ವಜನಿಕ ಅಭಿಪ್ರಾಯ ರೂಪಿಸುವುದಕ್ಕೆ ಬಲವಾದ ವೇದಿಕೆ ಒದಗಿಸುವುದು, ಸಾಮಾನ್ಯ ರಾಜಕೀಯ ಆಸಕ್ತಿ ಮತ್ತು ಆಕಾಂಕ್ಷೆಗಳ ಆಧಾರದ ಮೇಲೆ ಜನರ ಒಗ್ಗಟ್ಟು, ಸಾರ್ವಜನಿಕ ಆಂದೋಲನಗಳಿಗೆ ಜನರನ್ನು ಒಳಗೊಳ್ಳುವುದು, ಹಿಂದೂ-ಮುಸ್ಲಿಮರ ನಡುವೆ ಸ್ನೇಹಭಾವ ಪ್ರಚುರಪಡಿಸುವುದು- ಮುಂತಾದ ಉದ್ದೇಶಗಳನ್ನು ಈ ಸಂಘಟನೆ ಹೊಂದಿತ್ತು. 1857ರ ಪ್ರಥಮ ಸ್ವಾತಂತ್ರ್ಯಸಂಗ್ರಾಮದ ಕೆಲ ವರ್ಷಗಳ ಅಂತರದಲ್ಲಿ, ದೇಶದಲ್ಲಿ ಸ್ವಾತಂತ್ರ್ಯ ಆಂದೋಲನ ಇನ್ನೂ ಹೆಪು್ಪಗಟ್ಟಬೇಕಾದ ಸಂದರ್ಭದಲ್ಲಿ ಈ ಸಂಘಟನೆಯ ಕಾರ್ಯಚಟುವಟಿಕೆ- ಉದ್ದೇಶಗಳು ಗಮನಾರ್ಹವಾಗಿದ್ದವು.
ವಿಶೇಷ ಅಂದರೆ ಈ ಸಂಘಟನೆ ವತಿಯಿಂದ ಕೈಗೊಂಡ ಆರಂಭಿಕ ಪ್ರತಿಭಟನೆ ವಿದ್ಯಾರ್ಥಿಗಳ ಸಮಸ್ಯೆ ಕುರಿತಾಗಿತ್ತು. ಅಂದಿನ ವಸಾಹತುಶಾಹಿ ಬ್ರಿಟಿಷ್ ಸರ್ಕಾರವು ಭಾರತೀಯ ನಾಗರಿಕ ಪರೀಕ್ಷೆಗಳನ್ನು (ಇಂಡಿಯನ್ ಸಿವಿಲ್ ಸರ್ವಿಸ್) ತೆಗೆದುಕೊಳ್ಳಬಹುದಾದ ಗರಿಷ್ಠ ವಯೋಮಿತಿಯನ್ನು 21ರಿಂದ 19ಕ್ಕೆ ಇಳಿಸಿತ್ತು. ಈ ಸಿವಿಲ್ ಸರ್ವಿಸ್ ಪರೀಕ್ಷೆಯು ಸರ್ಕಾರದಲ್ಲಿ ಉನ್ನತ ಸ್ಥಾನ ಗಳಿಸಲು ರಹದಾರಿಯಾಗಿತ್ತು- ಈಗಿನ ಐಎಎಸ್, ಐಪಿಎಸ್ನಂತೆ. ಗರಿಷ್ಠ ವಯೋಮಿತಿ ತಗ್ಗಿಸಿದ್ದರಿಂದ ಭಾರತೀಯ ಯುವಕರು ಐಸಿಎಸ್ ಪರೀಕ್ಷೆಗೆ ಕೂಡ್ರುವ ಅವಕಾಶಗಳು ಕ್ಷೀಣಿಸುತ್ತವೆ ಎಂಬುದು ಇಂಡಿಯನ್ ಅಸೋಸಿಯೇಷನ್ ವಾದವಾಗಿತ್ತು.
ಆಗ ಆ ಪರೀಕ್ಷೆ ಬರೆಯಲು ಲಂಡನ್ಗೆ ಹೋಗಬೇಕಿದ್ದುದರಿಂದ ಬಹಳ ಖರ್ಚೂ ಬರುತ್ತಿತ್ತು. ಹೀಗಿರುವಾಗ ವಯೋಮಿತಿಯನ್ನೂ ತಗ್ಗಿಸಿದ್ದು ಗಾಯದ ಮೇಲಿನ ಬರೆಯೇ ಆಗಿತ್ತು. ಈ ನಿರ್ಧಾರದ ವಿರುದ್ಧ ಪ್ರತಿಭಟಿಸಲು ಇಂಡಿಯನ್ ಅಸೋಸಿಯೇಷನ್ ವತಿಯಿಂದ ಕೊಲ್ಕತದಲ್ಲಿ ಸಾರ್ವಜನಿಕ ಸಭೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಮತ್ತೊಂದೆಡೆ, ಬ್ಯಾನರ್ಜಿಯವರು ದೇಶದ ವಿವಿಧೆಡೆ ಸುತ್ತಿ ಯುವಜನರ ಆಕ್ರೋಶಕ್ಕೆ ದನಿನೀಡಿದರು. ಇದರಿಂದಾಗಿ ಬ್ರಿಟಿಷ್ ಸರ್ಕಾರವೇನು ತಕ್ಷಣಕ್ಕೆ ವಯೋಮಿತಿಯನ್ನು ಏರಿಸಲಿಲ್ಲವಾದರೂ, ಮುಂದಿನ ರಾಷ್ಟ್ರೀಯ ಪ್ರತಿಭಟನೆಗಳಿಗೆ ಇದು ಬುನಾದಿಯನ್ನಂತೂ ಹಾಕಿತು ಎಂದು ಇತಿಹಾಸಕಾರರು ದಾಖಲಿಸಿದ್ದಾರೆ.
ಕ್ರಮೇಣ ಇಂಡಿಯನ್ ಅಸೋಸಿಯೇಷನ್ನಿನ ಪ್ರಮುಖ ನಾಯಕರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರಿಂದಾಗಿ ಸಂಘಟನೆ ತನ್ನ ಪ್ರತ್ಯೇಕ ರಾಜಕೀಯ ಅಸ್ಮಿತೆಯನ್ನು ಕಳೆದುಕೊಂಡಿತು. ಆದರೂ ಸರ್ಕಾರದ ನಿರ್ಧಾರಗಳ ವಿರುದ್ಧ ಬಲವಾದ ಜನಾಂದೋಲನ ಹುಟ್ಟುಹಾಕಬಹುದೆಂಬ ನಿದರ್ಶನವನ್ನು ಇದು ನೀಡಿತು.