ಪ್ರವಾಸೋದ್ಯಮವೆಂಬ ಸಂಕೀರ್ಣ ವಿಷಯದ ಸುತ್ತ...

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
‘ಸರ್, ಇಲ್ಲಿ ಟ್ರಾಫಿಕ್ ಎಷ್ಟು ಹೊತ್ತಿಗೆ ಹೇಗಿರುತ್ತದೆ ಎಂದು ಹೇಳಲಿಕ್ಕಾಗಲ್ಲ. ಈಗ ರಸ್ತೆಯಲ್ಲಿ ಬಹಳ ವಾಹನಗಳು
ಕಾಣದಿದ್ದರೂ ಸ್ವಲ್ಪ ಸಮಯಕ್ಕೆ ಜಾಮ್ ಆದ್ರೂ ಆಶ್ಚರ್ಯವಿಲ್ಲ. ಹೀಗಾಗಿ ನೀವು ಸ್ವಲ್ಪ ಮೊದ್ಲೇ ಹೊರಡೋದು ಉತ್ತಮ’- ಕಾಶ್ಮೀರದ ಶ್ರೀನಗರದಲ್ಲಿನ ಟ್ಯಾಕ್ಸಿ ಚಾಲಕರು ಪ್ರವಾಸಿಗರಿಗೆ ನೀಡುವ ಸಾಮಾನ್ಯ ಸಲಹೆ ಇದು. ಎಷ್ಟೆಂದರೂ ಅವರದು ಅನುಭವದ ಮಾತು. ಈ ಮಾತಿಗೆ ಸಾಕ್ಷಿ ನಮಗೆ ಸಿಕ್ಕೇಬಿಟ್ಟಿತು. ಶ್ರೀನಗರದ ದಾಲ್ ಲೇಕ್ ಬಳಿ ಹೋಗಿದ್ದಾಗ, ನಮ್ಮ ಜತೆಯಿದ್ದವರು ಏನೋ ವಸ್ತು ತರಲೆಂದು ಅಲ್ಲೇ ಐದಾರು ನೂರು ಮೀಟರ್ ದೂರದ ಅಂಗಡಿಗೆ ಹೋಗಲಿಕ್ಕೂ ತ್ರಾಸುಪಡಬೇಕಾಯಿತು. ಅದು ಸಾಯಂಕಾಲದ ಹೊತ್ತು ಬೇರೆ. ಎಲ್ಲೆಲ್ಲೂ ವಾಹನಗಳ ಸಾಲು...
ಬೆಂಗಳೂರಿನ ಸಂಚಾರ ದಟ್ಟಣೆ ಹೆಸರುವಾಸಿ. ಯಾರಾದರೂ ಖ್ಯಾತನಾಮರು ಇಲ್ಲಿನ ಸಂಚಾರಸಿಕ್ಕಿನಲ್ಲಿ ಸಿಕ್ಕಿಬಿದ್ದಾಗ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗುವುದಿದೆ. ಇಲ್ಲಿನ ಟ್ರಾಫಿಕ್ ಕಂಡವರು ಸಹ ಶ್ರೀನಗರದಲ್ಲಿನ ಟ್ರಾಫಿಕ್​ನಲ್ಲಿ ಸಿಕ್ಕಿಬಿದ್ದರೆ ಬೆಚ್ಚಿಬಿದ್ದಾರು! ಪ್ರವಾಸಿ ವಾಹನಗಳು, ಸ್ಥಳೀಯರ ವಾಹನಗಳು ಮತ್ತು ಭದ್ರತಾ ಪಡೆಗಳ ವಾಹನಗಳು... ಹೀಗೆ ಅಲ್ಲಿ ವಾಹನಗಳ ಭರಾಟೆ. ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಒಟ್ಟಾರೆ ಸುಮಾರು 26 ಲಕ್ಷ ವಾಹನಗಳನ್ನು ಹೊಂದಿದೆ. ಈ ಪೈಕಿ ಶ್ರೀನಗರದಲ್ಲಿ ಹೆಚ್ಚು ವಾಹನಗಳಿದ್ದು, ಇಲ್ಲಿ ಸುಮಾರು ನಾಲ್ಕು ಲಕ್ಷ ನೋಂದಾಯಿತ ವಾಹನಗಳಿವೆ. ದಿನಕ್ಕೆ ಸರಾಸರಿ 3.75 ಲಕ್ಷ ವಾಹನಗಳು ಇಲ್ಲಿನ ರಸ್ತೆಯಲ್ಲಿ ಓಡಾಟ ನಡೆಸುತ್ತವೆ. ಕಿರಿದಾದ ರಸ್ತೆಗಳು, ಸಂಚಾರ ನಿಯಮ ಪಾಲಿಸದಿರುವುದು, ರ್ಪಾಂಗ್ ತಾಣಗಳ ಕೊರತೆ ಮತ್ತು ಅತಿಕ್ರಮಣ- ಇವೆಲ್ಲ ಸೇರಿ ಪರಿಸ್ಥಿತಿಯನ್ನು ಹದಗೆಡಿಸಿವೆ ಎಂದು ನಗರಯೋಜನಾ ತಜ್ಞರು ಹೇಳುತ್ತಾರೆ. ಇದರ ನಡುವೆ ಗಣ್ಯರು ಹಾಗೂ ಸೇನಾ ವಾಹನಗಳಿಗೆ ದಾರಿ ಮಾಡಿಕೊಡುವ ದೃಶ್ಯ ಸಾಮಾನ್ಯ. ಶ್ರೀನಗರ ಮಾತ್ರವಲ್ಲ, ಅಲ್ಲಿಂದ 80 ಕಿಲೋಮೀಟರ್ ದೂರದ ಸೋನಾಮಾರ್ಗ್​ಗೆ ಹೋಗುವ ರಸ್ತೆಯಲ್ಲಿ ಸಹ ವಾಹನ ದಟ್ಟಣೆಯಾಗುವುದಿದೆ. ಬದಲಾದ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯಿಂದಾಗಿ, ಸ್ಥಳೀಯ ಜನರು ಸ್ವಂತ ವಾಹನ ಹೊಂದುವ ಪರಿಪಾಠ ಹೆಚ್ಚುತ್ತಿದೆ. ಇನ್ನೊಂದೆಡೆ, ದೊಡ್ಡ ಸಂಖ್ಯೆಯಲ್ಲಿ ಬರುವ ಪ್ರವಾಸಿಗರ ವಾಹನಗಳು ಮತ್ತು ಪ್ರವಾಸಿಗರನ್ನು ಕರೆದೊಯ್ಯುವ ಬಾಡಿಗೆ ವಾಹನಗಳು... ಇವೆಲ್ಲ ಸೇರಿ ವಾಹನದ ಜಾತ್ರೆಯೇ ಏರ್ಪಡುತ್ತದೆ.
ತಮಿಳುನಾಡಿನ ನೀಲಗಿರಿ ಜಿಲ್ಲೆ ವ್ಯಾಪ್ತಿಗೆ ಬರುವ ಊಟಿ, ಪ್ರವಾಸಿಗರ ಮೆಚ್ಚಿನ ತಾಣಗಳಲ್ಲಿ ಒಂದು. ಊಟಿ ಹಾಗೂ ಸುತ್ತಮುತ್ತಲಿನ ಸ್ಥಳಗಳು ತಮ್ಮದೇ ಆದ ವಿಶಿಷ್ಟ ವಿಭಿನ್ನ ಭೌಗೋಳಿಕ ವಿನ್ಯಾಸ ಹೊಂದಿವೆ. ವಾಹನದಲ್ಲಿ ನೀಲಗಿರಿ ಪರ್ವತಶ್ರೇಣಿಯನ್ನು ಏರುವುದೇ ಒಂದು ರೋಚಕ ಅನುಭವ. ಒಂದರ ನಂತರ ಒಂದರಂತೆ ಸಿಗುವ ಹೇರ್​ಪಿನ್ ತಿರುವುಗಳು ವಾಹನ ಚಾಲಕರ ನೈಪುಣ್ಯವನ್ನು ಪರೀಕ್ಷಿಸುತ್ತವೆ. ಊಟಿಯಿಂದ ಕೂನೂರಿಗೆ ಹೋಗುವ ರಸ್ತೆಯಲ್ಲಿನ ಅನುಭವವೇ ಮತ್ತೊಂದು ಬಗೆ. ಬೆಟ್ಟಗಳ ಇಳಿಜಾರಿನಲ್ಲಿ ಹಸಿರು ನಗು ಚೆಲ್ಲುತ್ತ ನಿಲ್ಲುವ ಚಹಾ ತೋಟಗಳು ತಾಜಾ ಚಹಾವನ್ನು ಹೀರಿದ ಅನುಭವ ಕೊಡುತ್ತವೆ. ಅಲ್ಲಿಯೂ ಹಾಗೆ, ಎಲ್ಲಿ ನೋಡಿದರೂ ವಾಹನಗಳು. ಊಟಿಯ ಚಳಿಯಲ್ಲೂ ಬೆವರು ಬರುವಂತೆ ಮಾಡುತ್ತದೆ.
ಸವಾಲುಗಳ ಸರಮಾಲೆ: ಹಿಂದೆಲ್ಲ ಜನಸಾಮಾನ್ಯರಿಗೆ ತೀರ್ಥಯಾತ್ರೆಯೇ ಎಲ್ಲವೂ ಆಗಿರುತ್ತಿತ್ತು (ಉದಾಹರಣೆಗೆ ಹೇಳಬೇಕೆಂದರೆ- ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಮಾಡಬೇಕೆಂಬುದು ಹಿಂದುಗಳ ಹೆಬ್ಬಯಕೆ). ಆಗೀಗ ಹತ್ತಿರದ ಸ್ಥಳಗಳಿಗೆ ಹೋಗುವುದು ಬಿಟ್ಟರೆ, ಈಗಿನ ಹಾಗೆ ದೂರದ ತಾಣಗಳಿಗೆ ಟೂರ್ ಹೋಗುವ ಪರಿಕಲ್ಪನೆ ಇರಲಿಲ್ಲ. ಹೆಚ್ಚಿನವರಿಗೆ ಆರ್ಥಿಕ ಶಕ್ತಿಯೂ ಇರಲಿಲ್ಲ ಎನ್ನಿ. ಸಂಪರ್ಕ ಸಾಧನಗಳೂ ಬಹಳ ಇರುತ್ತಿರಲಿಲ್ಲ. ಈಗ ಸನ್ನಿವೇಶ ಬದಲಾಗಿದೆ. ಜನರ ಆದ್ಯತೆಗಳೂ ಬದಲಾಗಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಸ್ವಂತ ವಾಹನ ಇರುವವರ ಸಂಖ್ಯೆ ಅಗಾಧವಾಗಿ ಹೆಚ್ಚಿದೆ; ಹೆಚ್ಚುತ್ತಿದೆ. ಬೇರೆ ಬೇರೆ ಸ್ಥಳಗಳನ್ನು ನೋಡಬೇಕು ಎಂಬ ತುಡಿತ ಹೆಚ್ಚುತ್ತಿದೆ. ಬಹುಕಾಲದಿಂದ ಪ್ರವಾಸಿಗಳನ್ನು ಸೆಳೆಯುವ ನಿಸರ್ಗ ತಾಣಗಳಲ್ಲದೆ, ಈಚಿನ ವರ್ಷಗಳಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮ ಸಹ ಗರಿಗೆದರಿದೆ. ಕಾಶಿ, ಅಯೋಧ್ಯೆ, ಮಧ್ಯಪ್ರದೇಶದ ಮಹಾಕಾಲ ಕಾರಿಡಾರ್ ಮುಂತಾದವು ಈಗಿನ ಕಾಲಕ್ಕೆ ತಕ್ಕಂತೆ ಅಭಿವೃದ್ಧಿಗೊಂಡಿವೆ. ಆದರೆ ಎಲ್ಲ ಸ್ಥಳಗಳೂ ಹೀಗಿಲ್ಲ. ಅವುಗಳ ಧಾರಣಾ ಶಕ್ತಿ ಈಗಿನ ಒತ್ತಡಕ್ಕೆ ತಕ್ಕ ಹಾಗೆ ಇಲ್ಲ. ಕೆಲವು ತಾಣಗಳಿಗೆ ಕಾಯಕಲ್ಪ ನೀಡುವುದೂ ಸುಲಭವಿಲ್ಲ. ಕಿರಿದಾದ ರಸ್ತೆಗಳನ್ನು ಅಗಲ ಮಾಡುವುದಕ್ಕೆ ಅತಿಕ್ರಮಣ, ಭೂಸ್ವಾಧೀನವೂ ಸೇರಿ ಹಲವು ಸವಾಲುಗಳು. ಈ ಸವಾಲನ್ನು ಆಡಳಿತಗಾರರು ಹೇಗೆ ಎದುರಿಸುತ್ತಾರೆ ಎಂಬುದರ ಮೇಲೆ ಪ್ರವಾಸೋದ್ಯಮದ ಮುಂದಿನ ದಿನಗಳು ನಿರ್ಣಾಯಕ.
ಭಾರತದ ಪ್ರವಾಸೋದ್ಯಮ ವಲಯ ಅಗಾಧ ವೇಗದಲ್ಲಿ ಬೆಳೆಯುತ್ತಿದೆ. ಕರೊನಾ ಕಾಲಘಟ್ಟದಲ್ಲಿ ಕಳಾಹೀನವಾಗಿದ್ದ ಈ ರಂಗ ಮತ್ತೆ ಚೇತರಿಕೆಯ ಹಾದಿ ಹಿಡಿದಿದೆ. ಭಯೋತ್ಪಾದನೆಯ ಭೀತಿ ಇರುವ ಜಮ್ಮು-ಕಾಶ್ಮೀರದಂಥ ಜಾಗಕ್ಕೇ ಕುಟುಂಬಸಮೇತ ಬರುವವರ ಪ್ರಮಾಣ ಹೆಚ್ಚಿದೆ ಎಂದಮೇಲೆ ಉಳಿದ ತಾಣಗಳಿಗೆ ಕೇಳಬೇಕೆ?
ಕೇಂದ್ರ ಪ್ರವಾಸೋದ್ಯಮ ಇಲಾಖೆ ಪ್ರಕಾರ, 2023ರಲ್ಲಿ ಈ ವಲಯವು ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ಕ್ಕೆ ಶೇ.10ರಷ್ಟು ಕೊಡುಗೆ ಅಂದರೆ, ಸುಮಾರು 19 ಟ್ರಿಲಿಯನ್ ರೂ. ನೀಡಿದೆ. 2019ಕ್ಕೆ ಹೋಲಿಸಿದರೆ ಇದು ಶೇ.10ರಷ್ಟು ಅಧಿಕ. 2024ರಲ್ಲಿ ಜಿಡಿಪಿಗೆ ಈ ವಲಯದ ಕೊಡುಗೆ 21.15 ಟ್ರಿಲಿಯನ್ ಹಾಗೂ 2047ರ ಹೊತ್ತಿಗೆ 43 ಟ್ರಿಲಿಯನ್ ರೂಪಾಯಿಗೆ ಏರುವ ನಿರೀಕ್ಷೆ ಇದೆ ಎಂದು ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಮಂಡಳಿ (ಡಬ್ಲ್ಯುಟಿಟಿಸಿ) ಮುನ್ನಂದಾಜು ಮಾಡಿದೆ.
2047ರ ಹೊತ್ತಿ್ತೆ ದೇಶೀಯ ಪ್ರವಾಸಿಗರ ಸಂಖ್ಯೆಯನ್ನು 10 ಕೋಟಿಗೆ ಏರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು ಇದಕ್ಕಾಗಿ ವಿಜನ್-2047 ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದೆ. ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ವೀಸಾ ಸರಳೀಕರಣ ಸೇರಿದಂತೆ ಹಲವು ನೀತಿಗಳನ್ನು ಸರ್ಕಾರ ಪ್ರಕಟಿಸಿದೆ. ಭಾರತಕ್ಕೆ ವಾರ್ಷಿಕ ಸುಮಾರು 95 ಲಕ್ಷ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಅನಿವಾಸಿ ಭಾರತೀಯ (ಎನ್​ಆರ್​ಐ)ರನ್ನೂ ಸೇರಿಸಿದರೆ ಒಟ್ಟು ವಿದೇಶಿ ಪ್ರವಾಸಿಗರ ಸಂಖ್ಯೆ ಎರಡು ಕೋಟಿ ದಾಟುತ್ತದೆ. ವಿದೇಶಿಗರ ಆಕರ್ಷಣೆಯಲ್ಲಿ ಮಹಾರಾಷ್ಟ್ರ ಮುಂದಿದೆ. ವಾರ್ಷಿಕ ಸುಮಾರು 37 ಲಕ್ಷ ಪ್ರವಾಸಿಗರು ಆ ರಾಜ್ಯಕ್ಕೆ ಭೇಟಿ ನೀಡುತ್ತಾರೆ.
ಭಾರತ-ಬಾಂಗ್ಲಾ ಸಂಬಂಧ ಮತ್ತು ಪ್ರವಾಸೋದ್ಯಮ: 2025ರಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ 90.2 ಲಕ್ಷದಷ್ಟಿದ್ದು, ಅದರ ಹಿಂದಿನ ವರ್ಷಕ್ಕಿಂತ ಶೇ.9.4ರಷ್ಟು ಕಡಿಮೆಯಾಗಿತ್ತು. ಇದಕ್ಕೆ ಮುಖ್ಯ ಕಾರಣ ಬಾಂಗ್ಲಾದೇಶದಿಂದ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಕುಸಿತವಾಗಿದ್ದು. 2024ರಲ್ಲಿ ಆ ದೇಶದಿಂದ ಭಾರತಕ್ಕೆ 17,50,165 ಮಂದಿ ಆಗಮಿಸಿದ್ದರೆ, 2025ರಲ್ಲಿ 4,66,012 ಮಂದಿ ಮಾತ್ರ ಬಂದಿದ್ದರು. ಭದ್ರತಾ ಕಾರಣಗಳ ಮೇಲೆ, 2024ರ ಆಗಸ್ಟ್ 6ರಿಂದ ಭಾರತವು ಆ ದೇಶದ ಮೇಲೆ ವೀಸಾ ನಿರ್ಬಂಧಗಳನ್ನು ವಿಧಿಸಿದ್ದರಿಂದಾಗಿ ಪ್ರವಾಸಿಗರ ಸಂಖ್ಯೆ ಕುಸಿದಿದೆ. 2024ರ ಜುಲೈ-ಆಗಸ್ಟ್​ನಲ್ಲಿ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು-ಯುವಜನರ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದು, ಶೇಖ್ ಹಸೀನಾ ನೇತೃತ್ವದ ಸರ್ಕಾರವನ್ನು ಕೆಳಗಿಳಿಸಲಾಯಿತು; ನಂತರ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಬಾಂಗ್ಲಾದಲ್ಲಿ ಮಧ್ಯಂತರ ಸರ್ಕಾರ ಬಂದ ತರುವಾಯ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಬಿಗಡಾಯಿಸಿತು. ಈಗ ಈ ಸನ್ನಿವೇಶದಲ್ಲಿ ಬದಲಾವಣೆ ಕಂಡುಬಂದಿದೆ. ಬಾಂಗ್ಲ್ಲಾದೇಶದ ಜತೆ ರಾಜತಾಂತ್ರಿಕ ಸಂಬಂಧವನ್ನು ಭಾರತ ಮರುಸ್ಥಾಪಿಸಿದ್ದು, ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ದಿನೇಶ್ ತ್ರಿವೇದಿ ಅವರನ್ನು ಅಲ್ಲಿನ ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಅಷ್ಟೇ ಅಲ್ಲ, ಅವರಿಗೆ ಕೇಂದ್ರ ಸಂಪುಟ ಸಚಿವ ದರ್ಜೆ ಸ್ಥಾನಮಾನ ನೀಡಿರುವುದು ವಿಶೇಷ. ಇದು ಭಾರತ ರಾಜತಾಂತ್ರಿಕ ಸಂಬಂಧವರ್ಧನೆಗೆ ನೀಡಿರುವ ಮಹತ್ವವನ್ನು ಬಿಂಬಿಸುತ್ತದೆ ಎಂದು ರಾಜತಾಂತ್ರಿಕ ತಜ್ಞರು ಹೇಳುತ್ತಾರೆ. ಬಾಂಗ್ಲಾದಲ್ಲಿನ ಭಾರತದ ರಾಯಭಾರಿಗೆ ಇಂಥ ಮನ್ನಣೆ ನೀಡಿರುವುದು ಇದೇ ಮೊದಲಾಗಿದ್ದು, ಈ ಹಿಂದೆ, ಐ.ಕೆ.ಗುಜ್ರಾಲ್ (ರಷ್ಯಾ), ಕರಣ್ ಸಿಂಗ್ (ಅಮೆರಿಕ), ತ್ರಿಲೋಕಿ ಕೌಲ್ (ರಷ್ಯಾ) ಅವರಿಗೆ ಈ ಸ್ಥಾನಮಾನ ನೀಡಲಾಗಿತ್ತು. ದಿನೇಶ್ ತ್ರಿವೇದಿ ಅವರು ಬಾಂಗ್ಲಾ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಬಾಂಗ್ಲಾ ನಾಗರಿಕರಿಗೆ ಸ್ಥಗಿತವಾಗಿದ್ದ ಪ್ರವಾಸಿ ವೀಸಾ ಪುನರ್ ನೀಡಿಕೆಯ ಘೋಷಣೆ ಮಾಡಿದ್ದಾರೆ. ಬಾಂಗ್ಲಾದ ಢಾಕಾ, ರಾಜ್​ಶಾನಿ, ಚಿತ್ತಗಾಂಗ್, ಸಿಲೆಟ್ ಮತ್ತು ಖುಲ್ನಾ- ಈ ಐದು ಸ್ಥಳಗಳಲ್ಲಿ ವೀಸಾ ಕೇಂದ್ರಗಳಿವೆ. ಪ್ರವಾಸಿ ವೀಸಾ ಮರುಸ್ಥಾಪನೆಯ ನಂತರದಲ್ಲಿ, ಭಾರತಕ್ಕೆ ಬರುವ ಬಾಂಗ್ಲಾದೇಶಿಯರ ಪ್ರಮಾಣ ಮತ್ತೆ ಏರಿಕೆಯಾಗುತ್ತದೆ ಎಂದು ಪ್ರವಾಸೋದ್ಯಮ ತಜ್ಞರು ಹೇಳುತ್ತಾರೆ. ಅಕ್ರಮ ಬಾಂಗ್ಲಾ ವಲಸಿಗರ ಚರ್ಚೆ ದೇಶದಲ್ಲಿ ಜೋರಾಗಿ ನಡೆಯುತ್ತಿರುವ ನಡುವೆಯೇ, ಅಲ್ಲಿಂದ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚೆನ್ನುವುದು ಕುತೂಹಲದ ಸಂಗತಿ.
ಉಳಿದಂತೆ ನೋಡುವುದಾದಲ್ಲಿ ಕ್ರಮವಾಗಿ ಅಮೆರಿಕ ಹಾಗೂ ಯುನೈಟೆಡ್ ಕಿಂಗ್ಡಮ್ಂದ ಹೆಚ್ಚಿನ ಪ್ರವಾಸಿಗರು ನಮ್ಮಲ್ಲಿಗೆ ಬರುತ್ತಾರೆ. ಸುಂದರ ಕರಾವಳಿಯನ್ನು ಹೊಂದಿರುವ ಉತ್ತರ ಕನ್ನಡದ ಗೋಕರ್ಣ ಮತ್ತಿತರ ಪ್ರದೇಶಗಳು ಹಾಗೂ ಗೋವಾ ಇತ್ಯಾದಿ ತಾಣಗಳು ವಿದೇಶಿ ಪ್ರವಾಸಿಗರ ಮೆಚ್ಚಿನ ಸ್ಥಳಗಳಲ್ಲಿ ಸೇರಿವೆ.
ಉದ್ಯೋಗ ಸೃಷ್ಟಿ: ಭಾರತದ ಪ್ರಮುಖ ಉದ್ಯೋಗ ಸೃಷ್ಟಿ ವಲಯಗಳಲ್ಲಿ ಪ್ರವಾಸೋದ್ಯಮ ಕೂಡ ಒಂದು. ಸುಮಾರು 7.6 ಕೋಟಿ ಜನರು ಈ ರಂಗವನ್ನು ಅವಲಂಬಿಸಿ ಜೀವನೋಪಾಯ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. ಸಾರಿಗೆ, ಆತಿಥ್ಯ ವಲಯ, ಹೋಟೆಲ್ ಮತ್ತು ರೆಸ್ಟೋರೆಂಟ್, ಪ್ರವಾಸಿ ಗೈಡ್​ಗಳು... ಹೀಗೆ ಹಲವು ವಿಧದ ಉದ್ಯೋಗಗಳಿಗೆ ಪ್ರವಾಸೋದ್ಯಮ ರಂಗವು ಮಡಿಲಾಗಿದೆ.
ಕೊನೇ ಮಾತು: ಉತ್ತರ ಕನ್ನಡವು ನಿಸರ್ಗ ಸಂಪತ್ತಿನ ಭರಪೂರ ವರ ಪಡೆದ ಜಿಲ್ಲೆ. ಮಲೆನಾಡು, ಅರೆಮಲೆನಾಡು, ಕರಾವಳಿ... ಹೀಗೆ ವೈವಿಧ್ಯಮಯ ಭೂ ವಾತಾವರಣ ಇಲ್ಲಿವೆ. ಜಲಪಾತಗಳು, ಗುಡ್ಡಬೆಟ್ಟಗಳು, ದಟ್ಟಾರಣ್ಯ, ಬೀಚುಗಳು.... ಒಹ್ ಇಲ್ಲಿನ ಸೌಂದರ್ಯ ಬಣ್ಣಿಸಲಸದಳವು. ಈ ಸಲ ಮಳೆಗಾಲ ಆರಂಭವಾಗುತ್ತಿದ್ದಂತೆ ಅರಣ್ಯ ಇಲಾಖೆಯು, ಅರಣ್ಯದೊಳಗಿನ ಜಲಪಾತ ಮತ್ತಿತರ ಸ್ಥಳಗಳಿಗೆ ಸುರಕ್ಷತೆಯ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿರುವುದಾಗಿ ಫಲಕಗಳನ್ನು ಹಾಕಿತು. ಯಾಣ, ಮಾಗೋಡ ಜಲಪಾತ, ಜೇನುಕಲ್ಲುಗುಡ್ಡ ಮುಂತಾದ ತಾಣಗಳು ಇದರಲ್ಲಿ ಸೇರಿದ್ದವು. ಜಲಪಾತಗಳು ಮಳೆಗಾಲದಲ್ಲಿ ಮೈದುಂಬುವುದನ್ನು ನೋಡುವುದೇ ಒಂದು ಭಿನ್ನ ಅನುಭವ. ಕಾವಲುಗಾರರ ನೇಮಕ, ಬ್ಯಾರಿಕೇಡ್ ಹಾಕುವುದು, ಎಚ್ಚರಿಕೆ ಫಲಕ- ಇತ್ಯಾದಿ ಕ್ರಮಗಳ ಮೂಲಕ ಪ್ರವಾಸಿಗರ ಸುರಕ್ಷತೆ ಖಾತ್ರಿಪಡಿಸಬೇಕೇ ವಿನಾ ನಿರ್ಬಂಧ ವಿಧಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಆಕ್ಷೇಪದ ದನಿಗಳು ಕೇಳಿಬಂದವು. ಪ್ರವಾಸೋದ್ಯಮ ಎಂಬುದು ಹೇಗೆ ಸಂಕೀರ್ಣ ವಿಷಯವೂ ಹೌದು ಎಂಬುದಕ್ಕೆ ಇದನ್ನು ಉಲ್ಲೇಖಿಸಬೇಕಾಯಿತು. ಅಂದಹಾಗೆ, ಕೆಲ ವಿದೇಶಿ ಮಾದರಿಯ ಮುಕ್ತ ಪ್ರವಾಸೋದ್ಯಮ ನಮ್ಮ ಪರಂಪರೆ, ಸಂಸ್ಕೃತಿಗೆ ಹೊಂದಿಕೆಯಾಗದು. ಸಾರ್ವಜನಿಕರು, ಸಮಾಜ ಮತ್ತು ಸರ್ಕಾರ- ಈ ಮೂರೂ ಅಂಗಗಳು ತಂತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದಾಗ ಮಾತ್ರ ಪ್ರವಾಸೋದ್ಯಮ ಸಾರ್ಥಕತೆ ಪಡೆಯುತ್ತದೆ...
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net