ನಮ್ಮ ಅಸಲಿ ಧುರಂಧರರಿಗೊಂದು ಸಲಾಂ!

Dhurandhar
Dhurandhar
Published on

(ಲೇಖಕರು ವಿಜಯವಾಣಿ ಡೆಪ್ಯೂಟಿ ಎಡಿಟರ್)

ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಾಯಕನ ಪಾತ್ರದಲ್ಲಿರುವ ‘ಧುರಂಧರ್’ ಭಾಗ 1 ಮತ್ತು ಭಾಗ 2 ಸಿನಿಮಾಗಳು ಭರ್ಜರಿ ಯಶಸ್ಸು ಗಳಿಸಿರುವುದು ಗೊತ್ತೇ ಇದೆ. ಪಾಕಿಸ್ತಾನಕ್ಕೆ ಹೋಗುವ ಗೂಢಚಾರನೊಬ್ಬನ ಕಥೆಯನ್ನು ವಾಸ್ತವ ಸಂಗತಿಗಳೊಡನೆ ಸಮೀಕರಿಸಿ ಚಿತ್ರಿಸಿರುವ ರೀತಿ ನೋಡುಗರ ಮನಸ್ಸನ್ನು ಗೆದ್ದಿದೆ. ಇದಕ್ಕೆ ಪುಟವಿಟ್ಟಂತೆ ಪಾತ್ರಧಾರಿಗಳ ಸಶಕ್ತ ಅಭಿನಯ ಮತ್ತು ಯುವ ಸಂಗೀತ ನಿರ್ದೇಶಕ ಶಾಶ್ವತ್ ಸಚ್‌ದೇವ್ ಅವರ ಸಂಗೀತ ಸಿನಿಮಾವನ್ನು ಎತ್ತರಕ್ಕೆ ಒಯ್ಯಲು ಸಹಕರಿಸಿವೆ. ಹೊಡೆದಾಟದ ಸನ್ನಿವೇಶಗಳು, ಹಿಂಸೆಯ ದೃಶ್ಯಗಳು ಅತಿಯಾಯಿತು ಅನಿಸಿದರೂ, ಸಿನಿಮಾದಲ್ಲಿ ಸ್ವಲ್ಪ ಹೈಪ್ ಇರೋದು ಸಹಜವಾದ್ದರಿಂದ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಭಯೋತ್ಪಾದನೆ, ಭಾರತದ ವಿರುದ್ಧ ಷಡ್ಯಂತ್ರ, ಮುಂಬೈ ದಾಳಿ, ಕಂದಹಾರ್ ವಿಮಾನ ಅಪಹರಣ ಪ್ರಸಂಗ ಮುಂತಾದ ನೈಜ ಘಟನೆಗಳನ್ನು ಕಥೆಗೆ ಆಧಾರವಾಗಿಸಿಕೊಳ್ಳುವ ಮೂಲಕ ನಿರ್ದೇಶಕರು ಹೊಸ ಬಗೆಯ ಸಿನಿಮಾ ಮಾಡಿದ್ದಾರೆಂಬುದು ವಿಮರ್ಶಕರ ಅಂಬೋಣ. ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ಕಥೆಯಾದ್ದರಿಂದ ಪ್ರೇಕ್ಷಕರ ಮೇಲೆ ಭಾವನಾತ್ಮಕ ಪರಿಣಾಮವನ್ನೂ ಬೀರಿದೆ. ಈ ಚಿತ್ರದಲ್ಲಿ ಗೂಢಚಾರನೊಬ್ಬ ಪಾಕಿಸ್ತಾನದಲ್ಲಿ ಸಾಹಸಿಕ ಕಾರ್ಯಾಚರಣೆ ನಡೆಸುವ ಕಾಲ್ಪನಿಕ ಚಿತ್ರಣವಿದ್ದರೆ, ವಾಸ್ತವದಲ್ಲಿಯೂ ನಮ್ಮ ಅನೇಕ ಗೂಢಚಾರರು ಕಲ್ಪನೆಗೂ ಮೀರಿದ ಸಾಹಸಗೈದ ಎಷ್ಟೋ ನಿದರ್ಶನಗಳಿವೆ.
ಪಂಜಾಬ್ ರಾಜ್ಯದ ಮೋಹನ್ ಲಾಲ್ ಎಂಬಾತ ಬಿಎಡ್ ಪದವಿ ಪೂರೈಸಿದ್ದ. ಜತೆಗೆ ಕಥೆ, ಕವನ ಬರೆಯುವುದರಲ್ಲೂ ಆಸಕ್ತಿಯಿತ್ತು. ಎಲ್ಲ ಯುವಜನರ ಹಾಗೆ, ದೇಶಸೇವೆ ಮಾಡಬೇಕೆಂಬ ಸಹಜ ಆಸೆಯಿತ್ತು. ಒಂದು ದಿನ ಸೇನಾಧಿಕಾರಿಯೊಬ್ಬರು ಆತನ ಮನೆಗೆ ಬಂದು, ‘ಈ ನೌಕರಿ ಮಾಡುವಾಗ ನಿನ್ನ ಜೀವಕ್ಕೆ ಅಪಾಯ ಬರಬಹುದು. ನಿನ್ನನ್ನು ಜೈಲಿಗೆ ಕಳಿಸಬಹುದು. ಆದರೆ ಇದರಲ್ಲಿ ಥ್ರಿಲ್ ಸಿಗುತ್ತದೆ. ಸಾಹಸಕೃತ್ಯಗಳನ್ನು ಮಾಡುವುದು ನಿನಗೆ ಇಷ್ಟ ಎಂದಾದಲ್ಲಿ ಯಾವ ಕೆಲಸ ಎಂದು ಹೇಳುತ್ತೇನೆ’ ಎಂದು ಆಫರ್ ಕೊಟ್ಟಿದ್ದು ಮೋಹನ್ ಲಾಲ್ ಜೀವನದ ತಿರುವಿಗೆ ಕಾರಣವಾಯಿತು. ಅದು ಬೇಹುಗಾರಿಕೆ ಕೆಲಸ! ಕೆಲ ದಿನಗಳ ಬಳಿಕ, ಮನೆಯವರನ್ನು ಒಂದು ಮಾತು ಕೇಳದೆ ಆತ ಒಪ್ಪಿಯೇಬಿಟ್ಟ. ಆ ಸೇನಾಧಿಕಾರಿ ಇನ್ನೂ ಒಂದು ಎಚ್ಚರಿಕೆ ಮಾತು ಹೇಳಿದರು: ‘ನಿನ್ನನ್ನು ಸೇವೆಗೆ ಸೇರಿಸಿಕೊಂಡ ಬಗ್ಗೆ ಯಾವುದೇ ಲಿಖಿತ ಆದೇಶ ನೀಡಲಾಗುವುದಿಲ್ಲ. ನಿನಗೆ ಪ್ರತಿ ತಿಂಗಳು ಸಂಬಳ ಕೊಡಲಾಗುತ್ತದೆ. ನಿನ್ನನ್ನು ರಹಸ್ಯವಾಗಿ ಪಾಕಿಸ್ತಾನಕ್ಕೆ ನುಸುಳಿಸುತ್ತೇವೆ. ಅಲ್ಲಿಗೆ ಹೋದ ನಂತರ ನಾವು ಸೂಚಿಸಿದ ಮಾಹಿತಿಯನ್ನು ಸಂಗ್ರಹಿಸಿ ತರಬೇಕು. ಒಂದೊಮ್ಮೆ ಅಲ್ಲಿ ಪೊಲೀಸರು ಅಥವಾ ಸೇನೆಯವರಿಗೆ ಸಿಕ್ಕಿಬಿದ್ದರೆ ಏನೇ ಚಿತ್ರಹಿಂಸೆ ಕೊಟ್ಟರೂ ಭಾರತಕ್ಕಾಗಿ ಕೆಲಸ ಮಾಡುತ್ತಿದ್ದೇನೆಂದು ಬಾಯ್ಬಿಡಬಾರದು. ಒಂದು ವೇಳೆ ಅಲ್ಲಿ ಬಂಧಿಯಾದರೆ ಬಿಡಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೇವೆ. ಆದರೆ ಈ ಪ್ರಯತ್ನ ವಿಫಲವಾದಲ್ಲಿ ಅನೇಕ ವರ್ಷ ಕಾಲ ಅಲ್ಲಿನ ಜೈಲುಗಳಲ್ಲಿ ಕೊಳೆಯುವ ಸಂದರ್ಭ ಬರಬಹುದು. ಕರ್ತವ್ಯದ ವೇಳೆ ಮರಣವನ್ನೂ ಹೊಂದಬಹುದು. ಇದಕ್ಕೆಲ್ಲ ಒಪ್ಪಿದರೆ ಮಾತ್ರ ನೌಕರಿ ನೀಡಲಾಗುತ್ತದೆ. ಯೋಚಿಸಿ ತಿಳಿಸು.’ ಮೋಹನ್ ಲಾಲ್ ಆಗಲೇ ನಿಶ್ಚಯಿಸಿಯಾಗಿತ್ತು, ತಾನು ಗೂಢಚಾರನಾಗಬೇಕು ಎಂದು. ಕಠಿಣಾತಿ ಕಠಿಣ ತರಬೇತಿ ನೀಡಿದ ಬಳಿಕ, ಮೊದಲಿಗೆ ಕಳ್ಳಸಾಗಣೆದಾರರ ಗುಂಪೊಂದರ ಜತೆ ಆತನನ್ನು ಪಾಕ್‌ಗೆ ಕಳಿಸಲಾಗುತ್ತದೆ. ಒಂದು ವಾರ ಅಲ್ಲಿದ್ದ ಆತ ತಾನು ಕಂಡು ಕೇಳಿದ ವಿಷಯಗಳ ಬಗ್ಗೆ ವರದಿಯೊಂದನ್ನು ನೀಡಿದ. ಆತನ ನೆನಪಿನ ಶಕ್ತಿ ಅಗಾಧವಾಗಿತ್ತು, ವಿಷಯಗ್ರಹಿಕೆಯೂ ಅಸಾಧಾರಣವಾಗಿತ್ತು. 1967-68ರಲ್ಲಿಯೂ ಆತ ಪಾಕಿಸ್ತಾನಕ್ಕೆ ತೆರಳಿ ಅನೇಕ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ. ಈ ನಡುವೆ, 1968ರಲ್ಲಿ ಆತನ ವಿವಾಹ ನೆರವೇರಿತು. ಅದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ ಪಾಕಿಸ್ತಾನಕ್ಕೆ ಹೋಗಬೇಕಾಗಿ ಬಂತು. ಆದರೆ ಈ ಸಲದ ಪ್ರಯಾಣ ಹಿಂದಿನಂತಿರಲಿಲ್ಲ. ಅಮ್ರಿಕ್ ಸಿಂಗ್ ಎಂಬ ಡಬಲ್ ಏಜೆಂಟ್‌ನ ದ್ರೋಹದಿಂದಾಗಿ ಮೋಹನ್ ಲಾಲ್ ಪಾಕ್ ಸೇನೆಯ ಕೈಗೆ ಸಿಕ್ಕಿಬೀಳಬೇಕಾಯಿತು. ಅಲ್ಲಿಂದ ಮುಂದೆ ಅಕ್ಷರಶಃ ನರಕದರ್ಶನ.
ಪಾಕಿಸ್ತಾನದ ಅಣುಶಕ್ತಿ ಆಯೋಗಕ್ಕೆ ಸೇರಿದ ಫೈಲನ್ನು 13 ಸಾವಿರ ರೂ. ನೀಡಿ ಪಡೆದ ಆರೋಪ ಹೊರಿಸಿ, ಲಾಹೋರ್ ಸೇರಿ ವಿವಿಧ ಜೈಲುಗಳಲ್ಲಿ ಆತನಿಗೆ ಚಿತ್ರಹಿಂಸೆ ನೀಡಲಾಯಿತು. ಆ ಹಿಂಸಾವಿಧಾನಗಳೋ ಭಯಾನಕ. ಮಂಜುಗಡ್ಡೆ ಮೇಲೆ ಮಲಗಿಸುವುದು, ತಲೆಕೆಳಗಾಗಿ ನೇತುಹಾಕಿ ಹೊಡೆಯುವುದು, ಉಗುರಿಗೆ ಸೂಜಿ ಚುಚ್ಚುವುದು... ಮನುಷ್ಯಮಾತ್ರರಿಗೆ ಸಹಿಸಲು ಸಾಧ್ಯವಾಗದ ಹಿಂಸಾವಿಧಾನಗಳು. ಆದರೆ ಎಂಥ ಹಿಂಸೆ ಕೊಟ್ಟರೂ ಮೋಹನ್ ಲಾಲ್ ತಾನು ಭಾರತದ ಬೇಹುಗಾರ ಎಂಬುದನ್ನು ಒಪ್ಪಲಿಲ್ಲ. ಕೊನೆಗೆ ನಾನಾ ಹಂತದ ವಿಚಾರಣೆ ನಡೆದು, 14 ವರ್ಷಗಳ ಶಿಕ್ಷೆಯಾಗುತ್ತದೆ.
ಈ ಎಲ್ಲ ಮಾಹಿತಿಗಳನ್ನು ನಿವೃತ್ತ ಐಪಿಎಸ್ ಅಧಿಕಾರಿ, ಲೇಖಕ ಡಾ.ಡಿ.ವಿ.ಗುರುಪ್ರಸಾದ್ ಅವರು ‘ಪಾಕ್‌ನಲ್ಲಿ ನಮ್ಮ ಧುರಂಧರರು’ ಎಂಬ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಬೇಹುಗಾರಿಕೆ ಬಗ್ಗೆ ಅವರು ಈಗಾಗಲೇ ಆರು ಕೃತಿಗಳನ್ನು ರಚಿಸಿದ್ದು, ಈ ಕೃತಿಯಲ್ಲಿ, ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ನಾನಾ ಸಂಕಷ್ಟ ಅನುಭವಿಸಿದ ನಮ್ಮ ಗೂಢಚಾರರ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಮೋಹನ್ ಲಾಲ್ ಕೇವಲ ಬೇಹುಗಾರನಾಗಿರದೆ ಆ ಕಾಲಘಟ್ಟದ ಅನೇಕ ಐತಿಹಾಸಿಕ ಘಟನೆಗಳಿಗೂ ಸಾಕ್ಷಿಯಾಗುವುದು ವಿಶೇಷ. 1970ರ ಹೊತ್ತಿಗೆ ಪಶ್ಚಿಮ ಪಾಕಿಸ್ತಾನ-ಪೂರ್ವ ಪಾಕಿಸ್ತಾನ ಸಂಘರ್ಷ ಜೋರಾಗಿ, 1971ರ ಹೊತ್ತಿಗೆ ಭಾರತ-ಪಾಕಿಸ್ತಾನ ಯುದ್ಧ ಸಂಭವಿಸುತ್ತದೆ. ಆ ವರ್ಷದ ಡಿ. 16ರಂದು ಪಾಕಿಸ್ತಾನ ಶರಣಾಗುವುದರೊಂದಿಗೆ ಯುದ್ಧ ಮುಕ್ತಾಯವಾಗುತ್ತದೆ, ಬಾಂಗ್ಲಾದೇಶ ಉದಯಿಸುತ್ತದೆ. ಈ ನಡುವೆ, ಮೋಹನ್ ಲಾಲ್ ಇದ್ದ ಜೈಲಿಗೆ ಜುಲ್ಪೀಕರ್ ಅಲಿ ಭುಟ್ಟೋ ಭೇಟಿ, 1971ರ ಯುದ್ಧಕ್ಕೆ ಮೂಲಕಾರಣವಾದ ವಿಮಾನಾಪಹರಣದ ಘಟನೆ, ಆಗಿನ ಭಾರತ ಮತ್ತು ಪಾಕ್ ಪರಿಸ್ಥಿತಿ ಇತ್ಯಾದಿ ಮಾಹಿತಿಯನ್ನೂ ಲೇಖಕರು ಚಿತ್ರಿಸಿರುವುದರಿಂದಾಗಿ ಇತಿಹಾಸದತ್ತಲೂ ಕೃತಿ ನೋಟ ಹರಿಸುತ್ತದೆ. ಪೂರ್ವ ಪಾಕಿಸ್ತಾನದ ಜನಪ್ರಿಯ ನಾಯಕ ಶೇಖ್ ಮುಜಿಬುರ್ ರೆಹಮಾನ್ ಅವರನ್ನು ಮಿಯಾವಾಲಿ ಜೈಲಿಗೆ ಕರೆತಂದಾಗಿನ ಒಂದು ಪ್ರಸಂಗವಂತೂ ವಿಶೇಷವಾಗಿದೆ. ಮೋಹನ್ ಲಾಲ್ ಕೂಡ ಆಗ ಅಲ್ಲಿಯೇ ಇದ್ದ. ಮುಜಿಬುರ್ ಅವರನ್ನು ಗಲ್ಲಿಗೇರಿಸಲು ಪಾಕ್ ನಿರ್ಧರಿಸಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ, ಶವ ದಫನ್ ಮಾಡಲು ಮೋಹನ್ ಲಾಲ್ ಹಾಗೂ ಇತರ ಏಳು ಭಾರತೀಯ ಕೈದಿಗಳಿಂದ ಗುಂಡಿ ತೋಡಿಸಲಾಗುತ್ತದೆ. ಆದರೆ ಪಾಕ್ ಸರ್ಕಾರ ಈ ನಿರ್ಧಾರ ಮುಂದೂಡಿದ್ದರಿಂದಾಗಿ ಆ ಗುಂಡಿ ಮುಚ್ಚಿಸಲಾಗುತ್ತದೆ! ಹೀಗೆ ಇನ್ನೂ ಎರಡು ಬಾರಿ ನಡೆಯುತ್ತದೆ!
ಭಾರತ-ಪಾಕ್ ಸಂಬಂಧ ಸುಧಾರಣೆ ನಿಟ್ಟಿನಲ್ಲಿ 1972ರ ಜುಲೈ 2ರಂದು ಭಾರತದ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಪಾಕ್ ಪ್ರಧಾನಿ ಭುಟ್ಟೋ ನಡುವೆ ಶಿಮ್ಲಾದಲ್ಲಿ ಮಾತುಕತೆ ನಡೆದು, ತನ್ನ ವಶದಲ್ಲಿದ್ದ ಪಾಕ್‌ನ 93 ಸಾವಿರ ಸೈನಿಕರನ್ನು ಬಿಡುಗಡೆ ಮಾಡಲು ಭಾರತ ಒಪ್ಪಿತು. ಹಾಗೇ ಪಾಕಿಸ್ತಾನವು ತನ್ನ ಜೈಲುಗಳಲ್ಲಿದ್ದ ಭಾರತೀಯ ಸೈನಿಕರು ಹಾಗೂ ಇತರ ನಾಗರಿಕರ ಬಿಡುಗಡೆಗೆ ಒಪ್ಪಿತು. ಆ ಪಟ್ಟಿಯಲ್ಲಿ ಮೋಹನ್ ಲಾಲ್ ಸಹ ಇದ್ದ. ಆದರೆ ಆತನ ಬಿಡುಗಡೆ 2 ವರ್ಷ ವಿಳಂಬವಾಗಿ ಕೊನೆಗೂ 1974ರ ಡಿ.9ರಂದು ಆತ ಹಾಗೂ ಇತರ 30 ಭಾರತೀಯ ಕೈದಿಗಳು ಬಂಧಮುಕ್ತರಾಗುತ್ತಾರೆ. ಬಳಿಕ ಆತ ಪತ್ನಿ ಪ್ರಭಾ ಮತ್ತು ಪುತ್ರ ಗೌರವ್ ಸಾಗರ್ ಜತೆ ಪಂಜಾಬಿನ ಫಿರೋಜ್‌ಪುರದಲ್ಲಿ ಬದುಕು ಸಾಗಿಸುತ್ತಾನೆ. ಅಲ್ಲಿಯೇ ಮಕ್ಕಳ ಶಾಲೆ ತೆರೆಯುತ್ತಾನೆ. 2004ರಲ್ಲಿ ಮರಣಿಸುತ್ತಾನೆ.
ಈ ಕೃತಿಯಲ್ಲಿ ಲೇಖಕರು ಮೋಹನ್ ಲಾಲ್ ಭಾಸ್ಕರ್ ಕುರಿತು ಹೆಚ್ಚಿನ ಪುಟ ಮೀಸಲಿಟ್ಟಿದ್ದಾರೆ. ‘ಆತನದು ಕೊಲಂಬಸ್‌ನಂತೆ ಪಯನಿಯರಿಂಗ್ ರೋಲ್ (ಮಾರ್ಗದರ್ಶಕನ ಪಾತ್ರ). ಆತ ಅನುಭವಿಸಿದ್ದನ್ನೇ ಆತನ ನಂತರ ಪಾಕಿಸ್ತಾನಕ್ಕೆ ಹೋದವರು ಅನುಭವಿಸಿದ ಕಾರಣ ಉಳಿದವರ ಬಗ್ಗೆ ವಿವರಣೆ ಸ್ವಲ್ಪ ಕಡಿಮೆ ಇದೆ’ ಎನ್ನುತ್ತಾರೆ ಲೇಖಕರು.
ಬೇಹುಗಾರಿಕೆ ಆರೋಪದ ಮೇಲೆ ಪಾಕ್ ಜೈಲುಗಳಲ್ಲಿ ಸುಮಾರು 35 ವರ್ಷ ನರಳಿ, ಅಂತೂ ಸ್ವದೇಶಕ್ಕೆ ಮರಳಿದ ಕಶ್ಮೀರ್ ಸಿಂಗ್, ‘ಬ್ಲಾಕ್ ಟೈಗರ್’ ಎಂದೇ ಹೆಸರಾದ, ದೇಶಕ್ಕೆ ಅನೇಕ ಅಮೂಲ್ಯ ಮಾಹಿತಿ ರವಾನಿಸಿ, ಕೊನೆಗೆ ಇನ್ನೊಬ್ಬ ಗೂಢಚಾರಿ ಬಾಯ್ಬಿಟ್ಟಿದ್ದರಿಂದಾಗಿ ಪಾಕ್ ಅಧಿಕಾರಿಗಳ ಕೈಗೆ ಸಿಲುಕಿ 16 ವರ್ಷ ಪಾಕ್‌ನ ಬೇರೆ ಬೇರೆ ಕಾರಾಗೃಹಗಳಲ್ಲಿ ಚಿತ್ರಹಿಂಸೆ ಅನುಭವಿಸಿ, ಬಳಿಕ ಅನಾರೋಗ್ಯದಿಂದಾಗಿ ಮಿಯಾವಾಲಿ ಜೈಲಿನಲ್ಲಿ 49ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ರವೀಂದ್ರ ಕೌಶಿಕ್, ಬೇಹು ಆರೋಪದ ಮೇಲೆ ಪಾಕ್‌ನಲ್ಲಿ ಶಿಕ್ಷೆಗೊಳಗಾಗಿ ಕೊನೆಗೆ ಭಾರತಕ್ಕೆ ಮರಳಿ, 73ನೇ ವಯಸ್ಸಿನಲ್ಲಿ ಮರಣಹೊಂದಿದ ಕರಾಮತ್ ರಾಹಿ, 1990ರ ದಶಕದಲ್ಲಿ ಪಾಕಿಸ್ತಾನದ ವಿವಿಧೆಡೆ ಸಂಭವಿಸಿದ ಬಾಂಬ್ ಸ್ಫೋಟಗಳ ರೂವಾರಿ ಎಂಬ ಆಪಾದನೆ ಮೇರೆಗೆ ಗಲ್ಲು ಶಿಕ್ಷೆಗೊಳಗಾಗಿ, ನಂತರ ಕ್ಷಮಾದಾನ ಅರ್ಜಿಯ ಫಲವಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವಾಗ, ಜೈಲಿನಲ್ಲಿ ಸಹಕೈದಿಗಳಿಂದ ತೀವ್ರ ಹಲ್ಲೆಗೀಡಾಗಿ ಸಾವನ್ನಪ್ಪಿದ ಸರಬ್‌ಜಿತ್ ಸಿಂಗ್, ಪಾಕ್ ವಿರುದ್ಧ ಬೇಹುಗಾರಿಕೆ ಹಾಗೂ ಆತಂಕವಾದವನ್ನು ಪ್ರೋತ್ಸಾಹಿಸಿ ದೇಶವನ್ನು ಅಸ್ಥಿರಗೊಳಿಸಲು ಯತ್ನ ನಡೆಸಿದ ಆಪಾದನೆ ಮೇಲೆ ಗಲ್ಲು ಶಿಕ್ಷೆ ವಿಧಿಸಲ್ಪಟ್ಟು, ಭಾರತ ಸರ್ಕಾರ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದಾಗಿ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ದೊರಕಿ, ಪಾಕ್ ಕಾರಾಗೃಹದಲ್ಲಿ ಇಂದಿಗೂ ನವೆಯುತ್ತಿರುವ ಕುಲಭೂಷಣ್ ಜಾಧವ್- ಮುಂತಾದವರ ಕಿರು ಚಿತ್ರಣವನ್ನೂ ಲೇಖಕರು ನೀಡಿದ್ದಾರೆ. ಕೃತಿಯನ್ನು ಓದಿ ಮುಗಿಸಿದ ಮೇಲೆ, ನಮ್ಮ ಗೂಢಚಾರರ ಸಾಹಸಗಳ ಬಗ್ಗೆ ರೋಮಾಂಚನವಾಗುತ್ತದೆ. ಹಾಗೇ, ಅವರು ಜೈಲುಗಳಲ್ಲಿ ಅನುಭವಿಸಿದ ಹಿಂಸಾಕಾಂಡವನ್ನು ನೆನೆದು ಮೈ ನಡುಗುತ್ತದೆ.
ಬಹುಶಃ ಜಗತ್ತಿನಲ್ಲಿ ಅತಿ ಹೆಚ್ಚು ಥ್ರಿಲ್ ನೀಡುವ ವೃತ್ತಿ ಎಂದರೆ ಗೂಢಚಾರಿಕೆಯದೇ ಇರಬೇಕು. ಹೀಗಾಗಿಯೇ, ಅಪಾಯದ ನೆರಳಿನಲ್ಲೇ ಬದುಕಬೇಕಾಗಿದ್ದರೂ, ಇಂದಿಗೂ ಈ ವೃತ್ತಿ ಬಗ್ಗೆ ಕ್ರೇಜ್ ಇದೆ. ಗೂಢಚಾರರು ಶತ್ರುದೇಶದಿಂದ ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿದರೂ, ಅವರಿಗೆ ಸರ್ಕಾರದಿಂದ ಮನ್ನಣೆ ಅಥವಾ ಸವಲತ್ತು ಸಿಗದು. ಇದಕ್ಕೆ ಬಲವಾದ ಕಾರಣವಿದೆ. ಸರ್ಕಾರ ಅಧಿಕೃತವಾಗಿ ಅವರನ್ನು ಗುರುತಿಸುವುದಿಲ್ಲ ಎಂದು ಗೂಢಚಾರರನ್ನು ನೇಮಕ ಮಾಡಿಕೊಳ್ಳುವಾಗಲೇ ಸ್ಪಷ್ಟಪಡಿಸಲಾಗಿರುತ್ತದೆ. ಒಂದು ವೇಳೆ ಆತ ತಮ್ಮವನೇ ಎಂದು ಒಪ್ಪಿಕೊಂಡರೆ, ಸರ್ಕಾರದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಎಂದಾಗುತ್ತದೆ. ಆಗ ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಸಮಸ್ಯೆಗಳು ಎದುರಾಗಬಹುದು. ಏಕೆಂದರೆ, ಒಂದು ದೇಶದ ವಿರುದ್ಧ ಇನ್ನೊಂದು ದೇಶ ಗೂಢಚಾರಿಕೆ ನಡೆಸುವುದು ಅಪರಾಧ. ಹಾಗಂತ ಬಹುಶಃ ಜಗತ್ತಿನ ಯಾವ ದೇಶವೂ ಇನ್ನೊಂದು ದೇಶದಲ್ಲಿ ತನ್ನ ಬೇಹುಗಾರರನ್ನು ನೇಮಿಸದೆ ಇರುವುದಿಲ್ಲ. ಬೇಹುಗಾರರು ನೀಡಿದ ಮಾಹಿತಿಯಿಂದಾಗಿ, ಎಷ್ಟೋ ದಾಳಿ, ಅನಾಹುತಗಳು ತಪ್ಪಿದ್ದೂ ಇದೆ. ಹೀಗಾಗಿ ಬೇಹುಗಾರಿಕೆ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ.
ಕೊನೇ ಮಾತು: ನಿಜನಾಮಧೇಯ ಮರೆಮಾಚಿ, ಬೇರೆ ಹೆಸರಿನಲ್ಲಿ ಬೇರೆ ವ್ಯಕ್ತಿಯೇ ಆಗಿ, ಬೇರಾವುದೋ ದೇಶದಲ್ಲಿ, ಕುಟುಂಬದಿಂದ ದೂರವಿದ್ದು, ನಾನಾ ಕಷ್ಟಗಳನ್ನು ಎದುರಿಸಿ ಗೂಢಚರ್ಯೆ ನಡೆಸುವವರು ಯಾರೆಂದು ಎಲ್ಲ ಸಂದರ್ಭಗಳಲ್ಲಿಯೂ ಗೊತ್ತಾಗದಿದ್ದರೂ, ಆ ಎಲ್ಲರ ಬಗ್ಗೆಯೂ ದೇಶವಾಸಿಗಳ ಹೃದಯದಲ್ಲಿ ಒಂದು ಸಣ್ಣ ಕೃತಜ್ಞತಾಭಾವವಿರಬೇಕಾದುದು ಅಪೇಕ್ಷಣೀಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net