

ಒಮ್ಮೆ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದ ಸಂದರ್ಭದಲ್ಲಿ ಒಂದು ಕುಟುಂಬ ಪುಟ್ಟ ಮಗುವಿನ ಜೊತೆ ದೇವರಿಗೆ ಪ್ರದಕ್ಷಿಣೆ ಬರುತ್ತಿದ್ದರು. ಮಗು ಕೂಡ ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಹೆತ್ತವರನ್ನು ಹಿಂಬಾಲಿಸುತ್ತಿತ್ತು. ಪ್ರದಕ್ಷಿಣೆ ಪೂರ್ಣಗೊಂಡ ನಂತರ ಅವರು ಸಾಷ್ಟಾಂಗ ನಮಸ್ಕಾರ ಮಾಡಿದರು. ಅದನ್ನು ನೋಡಿದ ಮಗುವು ಅವರನ್ನು ಅನುಕರಿಸಿತು. ಹೀಗೆ ಹಿರಿಯರು, ತಾಯಿ, ತಂದೆ ಆಡುವ ಮಾತುಗಳು, ಹಾಡು, ಕಥೆಗಳನ್ನು ಮಕ್ಕಳು ಸೂಕ್ಷ್ಮವಾಗಿ ಕೇಳಿಸಿಕೊಳ್ಳುತ್ತಾರೆ. ವರ್ತನೆ, ಮಾಡುವ ಕೆಲಸ, ರೀತಿ-ರಿವಾಜುಗಳನ್ನು ಗಮನಿಸಿ ಮಗು ಕಲಿಯುತ್ತದೆ ಮತ್ತು ಅದನ್ನೇ ಮಾಡುತ್ತದೆ. ಇದು ಮಗುವಿನ ಆರಂಭಿಕ ಕಲಿಕೆಯಾಗಿದೆ.
ತದನಂತರ ಶಾಲೆಯಲ್ಲಿ ಅ, ಆ, ಇ, ಈ... ಎಬಿಸಿಡಿ, ಕಾಗುಣಿತಗಳ ಪ್ರಥಮ ಜ್ಞಾನವನ್ನು ಪಡೆಯುತ್ತಾರೆ. ಅಕ್ಷರಗಳನ್ನು ಬರೆಯುವುದು, ಪದಗಳನ್ನು ಜೋಡಿಸುವುದು, ಓದುವುದು ಹೀಗೆ ಪಾಠಗಳನ್ನು ಮುಂದುವರಿಸುತ್ತಾರೆ. ಪ್ರಾಥಮಿಕ ಶಿಕ್ಷಣ ಮಕ್ಕಳ ಪಾಲಿಗೆ ಅಮೂಲ್ಯವಾದುದು. ಮಕ್ಕಳ ಬದುಕು ರೂಪಿಸುವ ಅಡಿಗಲ್ಲು ಎನ್ನಬಹುದು. ಪಠ್ಯದ ಜೊತೆ ನೈತಿಕ, ಮೌಲ್ಯಯುತ ಶಿಕ್ಷಣ ಒದಗಿದಾಗ ಮಾತ್ರ ಮಕ್ಕಳು ಉತ್ತಮ ಪ್ರಜೆಗಳಾಗಲು ಸಾಧ್ಯ. ಮನೆ ಕಟ್ಟುವಾಗ ಅದರ ಅಡಿಪಾಯವನ್ನು ಎಷ್ಟು ಗಟ್ಟಿಯಾಗಿ ಹಾಕುತ್ತೇವೆಯೋ ಅಷ್ಟು ಒಳ್ಳೆಯದು. ಅಡಿಪಾಯದ ಗಟ್ಟಿತನದ ಮೇಲೆ ಎಷ್ಟು ಮಹಡಿಗಳನ್ನು ಕಟ್ಟಬಹುದು, ಅದರ ಬಾಳಿಕೆ ಎಷ್ಟು, ಸದೃಢವಾಗಿದೆಯೋ ಇಲ್ಲವೋ ಎಂದು ಅಂದಾಜಿಸಲಾಗುತ್ತದೆ. ಹಾಗೆಯೇ ಮಕ್ಕಳು ಬಾಲ್ಯದಲ್ಲಿ ಎಷ್ಟು ಉತ್ತಮವಾದ ಶಿಕ್ಷಣ, ಸಂಸ್ಕಾರವನ್ನು ಪಡೆಯುತ್ತಾರೋ ಅಷ್ಟೇ ಉತ್ತಮವಾದ ಬಾಳನ್ನು ಹೊಂದಲು ಸಾಧ್ಯವಾಗುವುದು. ಹಾಗಾಗಿ ವ್ಯಕ್ತಿಯ ವ್ಯಕ್ತಿತ್ವ ನಿರ್ವಣದಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಹುಟ್ಟಿ ಬೆಳೆಯುವ ಪರಿಸರ ಮಹತ್ತರವಾದ ಪ್ರಭಾವ ಬೀರುತ್ತವೆ.
ಮಕ್ಕಳ ಕಲಿಕೆ ಪ್ರಶ್ನೆಯಿಂದ ಪ್ರಾರಂಭವಾಗುತ್ತದೆ. ‘ಅಮ್ಮ ಅದು ಯಾಕೆ ಹಾಗೆ?’ ‘ಅಪ್ಪ ಅದು ಯಾಕೆ ಹೀಗೆ?’ ‘ಟೀಚರ್, ಚಂದಿರ ಏಕೆ ಮೇಲಿದ್ದಾನೆ?’ ಹೀಗೆ ಪ್ರತಿಯೊಂದಕ್ಕೂ ಪ್ರಶ್ನೆ ಕೇಳುತ್ತ ಕುತೂಹಲಭರಿತ ಅನ್ವೇಷಣೆಯ ಮೂಲಕ ಕಲಿಯುತ್ತಾರೆ. ಪ್ರಶ್ನೆ ಮಾಡುವ ಅವರ ಗುಣ ಕಲಿಕೆಗೆ ದಾರಿ ಮಾಡಿಕೊಡುತ್ತದೆ. ಹೀಗೆ ಮಕ್ಕಳು ಬೆಳೆಯುತ್ತಾರೆ. ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಶಿಕ್ಷಣ ಅಗತ್ಯ. ಪ್ರಾಥಮಿಕ ಹಂತದಿಂದ ಹತ್ತನೇ ತರಗತಿಯವರೆಗೆ ಮಕ್ಕಳ ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ನೈತಿಕ ಬೆಳವಣಿಗೆಗೆ ಬುನಾದಿ ದೊರೆಯುತ್ತದೆ. ಈ ಹಂತದ ಶಿಕ್ಷಣದ ಸ್ವರೂಪ ಮತ್ತು ಪಾಠದ ವಿಧಾನಗಳು ಮಕ್ಕಳ ಮನಸ್ಸನ್ನು ತಟ್ಟುತ್ತವೆ. ಉದಾಹರಣೆಗೆ ಕೆಲವೊಮ್ಮೆ ತರಗತಿಯಲ್ಲಿ ಶಿಕ್ಷಕರು ಹಾಡುತ್ತ ಕುಣಿಯುತ್ತ ಪಾಠ ಮಾಡಿದರೆ ಮಕ್ಕಳೂ ಆಸಕ್ತಿಯಿಂದ ಕೇಳುತ್ತಾರೆ. ಅರ್ಥೈಸಿಕೊಂಡು ಓದಿನಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ. ಯಾವುದೇ ವಿಷಯವೂ ಕಷ್ಟ ಎಂದು ಅನಿಸಲಾರದು.
ಸರ್ಕಾರದ ಸರ್ವಶಿಕ್ಷಣ ಅಭಿಯಾನದ ಭಾಗವಾಗಿರುವ ‘ನಲಿ ಕಲಿ’ ಯೋಜನೆ ಮಕ್ಕಳ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ಇದು ಆಟದ ಮೂಲಕ ಕಲಿಕೆ, ಅನುಭವದ ಮೂಲಕ ಅರಿವನ್ನು ಮಕ್ಕಳಿಗೆ ಒದಗಿಸಿ ಮಕ್ಕಳು ಚಟುವಟಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುತ್ತದೆ. ಈ ಮೂಲಕ ಮಕ್ಕಳಲ್ಲಿ ಚತುರತೆ, ಗ್ರಹಣ ಶಕ್ತಿ, ಜ್ಞಾಪಕ ಶಕ್ತಿ, ತಿಳಿವಳಿಕೆ ಹಾಗೂ ಕೌಶಲವನ್ನೂ ವೃದ್ಧಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕಲಿಕೆಯ ಸ್ವರೂಪ ಬದಲಾಗಿದೆ. ಅನೇಕ ಹೊಸ ವಿಧಾನಗಳು ರೂಪುಗೊಂಡಿವೆ. ಪ್ರಯೋಗಗಳು ನಡೆದಿವೆ. ಕರೊನಾ ಸಂದರ್ಭದಲ್ಲಿ ಲಾಕ್ಡೌನ್ ಆದಾಗ ಆನ್ಲೈನ್ ಶಿಕ್ಷಣ ಪದ್ಧತಿ ಹೆಚ್ಚು ಪ್ರಚಲಿತವಾಯಿತು. ಮೊಬೈಲ್ ಫೋನ್, ಲ್ಯಾಪ್ಟಾಪ್, ಇಂಟರ್ನೆಟ್ ಬಳಸಿ ಮಕ್ಕಳಿಗೆ ಶಿಕ್ಷಣ ಒದಗಿಸುವ ಕಾರ್ಯ ನಡೆಯಿತು. ಮಕ್ಕಳು ಮನೆಯಲ್ಲೇ ಕೂತು ಶಿಕ್ಷಣ ಪಡೆಯುವ ಪರಿಸ್ಥಿತಿ ಎದುರಾಯಿತು. ಮುಂದೆ ಕರೊನಾ ನಂತರ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಸ್ಮಾರ್ಟ್ಕ್ಲಾಸ್ ಹೆಚ್ಚು ಪ್ರಚಲಿತವಾಯಿತು.
ಸ್ಮಾರ್ಟ್ಕ್ಲಾಸ್ ಎಂಬುದು ಆಧುನಿಕ ತಂತ್ರಜ್ಞಾನವನ್ನು ಬಳಸಿ ತರಗತಿಗಳನ್ನು ನಡೆಸುವುದಾಗಿದೆ. ಸಾಂಪ್ರದಾಯಿಕ ಶೈಲಿಯ ಬೋಧನೆಯ ಜೊತೆಗೆ ವಿಡಿಯೋ, ಆಡಿಯೋ, ಅನಿಮೇಷನ್ ಬಳಸಿ ಮಕ್ಕಳಿಗೆ ಮನದಟ್ಟಾಗುವಂತೆ ಗುಣಮಟ್ಟದ ಶಿಕ್ಷಣ ನೀಡುವುದಾಗಿದೆ. ನಾಲ್ಕು ಗೋಡೆಯ ನಡುವೆ ಕುಳಿತು ಶಿಕ್ಷಕರಿಂದ ಪಾಠ ಕೇಳುವುದರ ಬದಲಾಗಿ ಪಾಠವನ್ನು ದೃಶ್ಯಾತ್ಮಕವಾಗಿ ಚಟುವಟಿಕೆ ಮೂಲಕ ಶಿಕ್ಷಕರು ಪಾಠ ಮಾಡಿದಾಗ ಅದು ಹೆಚ್ಚು ಪರಿಣಾಮಕಾರಿಯಾಗಿ ಮಕ್ಕಳ ನೆನಪಿನಲ್ಲಿ ಉಳಿಯುತ್ತದೆ. ಈ ಆಧುನಿಕ ಸ್ಮಾರ್ಟ್ಕ್ಲಾಸ್ ಶಿಕ್ಷಣ ಕಲಿಕೆಯ ಗುಣಮಟ್ಟವನ್ನು ಸುಧಾರಿಸಲು ನೆರವಾಗುತ್ತದೆ. ನಗರ ಪ್ರದೇಶಗಳಲ್ಲಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಲಭ್ಯವಿದ್ದ ಸ್ಮಾರ್ಟ್ಕ್ಲಾಸ್ ಶಿಕ್ಷಣದ ವ್ಯವಸ್ಥೆ ಗ್ರಾಮೀಣ ಪ್ರದೇಶದ ಮಕ್ಕಳಿಗೂ ದೊರಯಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಘಸಂಸ್ಥೆಗಳು ಅನೇಕ ಪ್ರಯತ್ನಗಳನ್ನು ಮಾಡುತ್ತಿವೆ. ಹಳ್ಳಿಗಳಲ್ಲಿರುವ ಮಕ್ಕಳಿಗೆ ಗುಣಮಟ್ಟದ, ಆಧುನಿಕ ಶಿಕ್ಷಣವನ್ನು ತಲುಪಿಸಬೇಕೆಂಬ ನಿಟ್ಟಿನಲ್ಲಿ ಈ ಬಾರಿ ನನ್ನ ರಾಜ್ಯಸಭಾ ಸಂಸದರ ನಿಧಿಯಿಂದ ಬೆಳ್ತಂಗಡಿ ತಾಲೂಕಿನ 100 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ಕ್ಲಾಸ್ ಯೋಜನೆಗೆ 1.46 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಮೂಲಕ ಹಳ್ಳಿಗಳಲ್ಲಿರುವ ಮಕ್ಕಳಿಗೆ ಗುಣಮಟ್ಟದ, ಆಧುನಿಕ ಶಿಕ್ಷಣವನ್ನು ತಲುಪಿಸಲು ಸಹಕಾರಿಯಾಗಲಿದೆ ಎಂಬ ಆಶಾಭಾವನೆ ಇದೆ.
ಜಗತ್ತು ವೇಗವಾಗಿ ಸಾಗುತ್ತಿದ್ದು ತಂತ್ರಜ್ಞಾನ ಎಲ್ಲ ಕ್ಷೇತ್ರಗಳಲ್ಲೂ ಹಾಸುಹೊಕ್ಕಿದೆ. ಶಿಕ್ಷಣ ರಂಗದಲ್ಲೂ ಆಧುನಿಕ ತಂತ್ರಜ್ಞಾನ ಬಳಸಿ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸಿದಾಗ ಅವರು ಔಟ್ಡೇಟ್ ಆಗದೆ ಅಪ್ಡೇಟ್ ಆಗಲು ಸಾಧ್ಯವಾಗುತ್ತದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ವ್ಯವಸ್ಥೆ, ಸೌಕರ್ಯ ಕಲಿಕೆ ವಿಧಾನ ಮುಂತಾದ ಹಲವು ವಿಚಾರಗಳಲ್ಲಿ ಸಾಕಷ್ಟು ಅಂತರವಿದೆ. ನಗರ ಪ್ರದೇಶದ ಮಕ್ಕಳಿಗೆ ವ್ಯವಸ್ಥೆಗಳು ಕೈಗೆಟುಕುವುದರಿಂದ ಕಲಿಕೆಯಲ್ಲೂ ತೊಡಗಿಸಿಕೊಳ್ಳುವುದಕ್ಕೆ ಸುಲಭವಾಗುತ್ತದೆ. ಆದರೆ ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿ ಕಲಿಕೆಯ ಬಗ್ಗೆ ಎಷ್ಟೇ ಆಸಕ್ತಿ ಹೊಂದಿದ್ದರೂ ಮೂಲಭೂತ ಸೌಕರ್ಯ ವಂಚಿತನಾಗಿ ಕಲಿಕೆಯಲ್ಲಿ ಹಿಂದುಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಉದಾಹರಣೆಗೆ ಹಳ್ಳಿಯ ಒಂದು ಶಾಲೆಯಲ್ಲಿ ಮಕ್ಕಳು ಭಾರತದ ನಕ್ಷೆ ಕಲಿಯುವಾಗ, ಪಠ್ಯದಲ್ಲಿ ನಕ್ಷೆ ಓದಿದರೆ ನೆನಪಿಟ್ಟುಕೊಳ್ಳುವುದು ಕಷ್ಟ. ಆದರೆ ಸ್ಮಾರ್ಟ್ಕ್ಲಾಸ್ನಲ್ಲಿ ಅನಿಮೇಷನ್ ಮೂಲಕ ನದಿ, ಪರ್ವತದ ಜೊತೆಗೆ ಭಾರತದ ನಕ್ಷೆ ತೋರಿಸಿದರೆ ಮಕ್ಕಳಲ್ಲಿ ಆಸಕ್ತಿ ಬೆಳೆದು, ಮನಸ್ಸಿನಲ್ಲಿ ಚಿತ್ರಣ ಅಚ್ಚೊತ್ತಿದಂತಿರುತ್ತದೆ. ಮತ್ತು ಸಹಜವಾಗಿ ನೆನಪಾಗುತ್ತದೆ. ಹಾಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಕಲಿಕೆಗೆ ಸುಲಭವಾದರೆ, ಕಲಿಕೆಯಲ್ಲಿ ಅತಿ ಹಿಂದುಳಿದ ವಿದ್ಯಾರ್ಥಿಯೂ ಪಾಠ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.
‘ಅಮ್ಮಾ, ನಾನು ಇವತ್ತು ಅಶ್ವಿನಿ ಮಿಸ್ನ ಪಾಠ ನೋಡಿದೆ. ಅವರು ಹಕ್ಕಿಗಳ ಬಗ್ಗೆ ವಿಡಿಯೋ ತೋರಿಸಿದ್ರು!’ ಎಂದು ಶಾಲೆಯಿಂದ ಮನೆಗೆ ಬರುತ್ತಲೇ ಸಂಭ್ರಮದಿಂದ ಕುಣಿದು ಅಮ್ಮನ ಬಳಿ ಐದನೇ ತರಗತಿಯ ಅಚಲ ಹೇಳಿದಳು. ಇದನ್ನು ಕೇಳಿದ ತಾಯಿ ಕುತೂಹಲದಿಂದ, ‘ಅವರು ಪಾಠ ಮಾಡಲ್ವಾ? ವಿಡಿಯೋ ತೋರಿಸೋದಾ?’ ಎಂದು ಕೇಳಿದಳು, ಆಗ ಅಚಲ, ‘ಹೌದು, ಅಮ್ಮ ಅವರು ವಿಡಿಯೋ ತೋರಿಸುತ್ತ ಪಾಠ ಮಾಡುತ್ತಾರೆ. ಹಕ್ಕಿ ಗೂಡು ಕಟ್ಟೋದು, ಮೊಟ್ಟೆ ಇಡೋದು, ಮರಿಗಳಿಗೆ ಆಹಾರ ತಿನ್ನಿಸೋದು ಎಲ್ಲ ತೋರಿಸುತ್ತಾರೆ. ಈಗ ಹಕ್ಕಿ ಬಗ್ಗೆ ನನಗೆ ಎಲ್ಲ ಗೊತ್ತಿದೆ ಅಮ್ಮಾ’ ಎಂದು ತರಗತಿಯಲ್ಲಿ ನಡೆದ ಪಾಠದ ಬಗ್ಗೆ ಅಮ್ಮನಲ್ಲಿ ವಿವರ ಒಪ್ಪಿಸಿದಳು. ಇದು ಸ್ಮಾರ್ಟ್ಕ್ಲಾಸ್ನ ಬಗ್ಗೆ ಮಗುವಿನ ಅನುಭದ ಮಾತು. ಹಾಗೆಯೇ ಒಮ್ಮೆ ತರಗತಿಯಲ್ಲಿ ಶಿಕ್ಷಕರು ಮಕ್ಕಳಿಗೆ 30 ಪೇಜಿನಷ್ಟು ಉದ್ದವಿರುವ ಪಾಠ ಮಾಡುತ್ತಿದ್ದರು. ಆಗ ಮಕ್ಕಳ ಮುಖ ಬಾಡಿ ಹೋಯಿತು. ಅಯ್ಯೋ ಎಷ್ಟೊಂದು ಉದ್ದದ ಪಾಠ. ಅದನ್ನು ಓದಿ ಹೇಗೆ ಅರ್ಥ ಮಾಡಿಕೊಳ್ಳುವುದು ಎಂಬ ಚಿಂತೆ. ಆದರೆ ಆ ಪಾಠದ ಆಡಿಯೋ-ವಿಡಿಯೋ ತೋರಿಸಿದಾಗ ಮಕ್ಕಳು ಕುಳಿತು ಕಣ್ತುಂಬಿಕೊಂಡು ನೋಡಿ, ಪಾಠ ಎಷ್ಟು ಸುಲಭವಾಗಿ ಅರ್ಥವಾಯಿತು ಅಲ್ಲವೇ ಎಂದು ಸಹಪಾಠಿಗಳೊಂದಿಗೆ ಮಾತನಾಡಿದರು. ಇದಕ್ಕೆ ಕಾರಣ ಮಕ್ಕಳಿಗೆ ದೃಶ್ಯದ ಮೂಲಕ ಮಾಡಿದ ಪಾಠ ಮನಸ್ಸಲ್ಲಿ ಗಟ್ಟಿಯಾಗಿ ನೆನಪಿನಲ್ಲಿ ಉಳಿಯುತ್ತದೆ.
ಇಂತಹ ನವೀನ ಪಾಠದ ವಿಧಾನಗಳು ಈಗ ಮಕ್ಕಳ ಕಲಿಕೆಯಲ್ಲಿ ಹೊಸ ಯುಗವನ್ನೇ ಆರಂಭಿಸುತ್ತಿವೆ. ಶಾಲೆಯ ಬ್ಲ್ಯಾಕ್ಬೋರ್ಡ್ಗಳು ಸ್ಮಾರ್ಟ್ಬೋರ್ಡ್ಗಳಾಗಿ ಬದಲಾಗುತ್ತಿವೆ. ಶಿಕ್ಷಣಕ್ಕೆ ಡಿಜಿಟಲ್ ಸ್ಪರ್ಶ ಒದಗಿಸುವ ಕಾರ್ಯವು ಮಕ್ಕಳ ಭವಿಷ್ಯವನ್ನು ರೂಪಿಸುವ ಮಹತ್ವದ ಹಾದಿಯಾಗಿದೆ. ಡಿಜಿಟಲ್ ಶಿಕ್ಷಣ ಎಲ್ಲರಿಗೂ ಲಭ್ಯವಿಲ್ಲ. ವಿದ್ಯುತ್, ಇಂಟರ್ನೆಟ್ ಸವಲತ್ತು, ಉಪಕರಣಗಳ ಕೊರತೆ ಇನ್ನೂ ಸಾಕಷ್ಟು ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿದೆ. ಅಂತಹ ಶಾಲೆಗಳಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ, ವಿದ್ಯಾಭಿಮಾನಿಗಳು, ಶಿಕ್ಷಕರು, ಪಾಲಕರು ಒಂದಾಗಿ ಕೆಲಸ ಮಾಡಿದ್ದಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುವುದು.
ಪ್ರಾಥಮಿಕ ಶಿಕ್ಷಣವು ಮಕ್ಕಳ ಬದುಕಿನ ಅಡಿಪಾಯ. ಈ ಅಡಿಪಾಯ ಬಲವಾಗಬೇಕಾದರೆ, ಕಾಲಕ್ಕನುಗುಣವಾಗಿ ಹೊಸತನಕ್ಕೆ ಒಡ್ಡಿಕೊಂಡು ಶಿಕ್ಷಣ ಕ್ಷೇತ್ರ ಪರಿಷ್ಕರಣೆಗೊಳ್ಳುವುದು ಅಗತ್ಯ. ಸ್ಮಾರ್ಟ್ಕ್ಲಾಸ್ ಎಂಬ ಡಿಜಿಟಲ್ ಸ್ಪರ್ಶವು ಶಿಕ್ಷಣದಲ್ಲಿ ಹೊಸ ಬೆಳಕನ್ನು ತಂದಿದೆ. ಈ ಬೆಳಕು ಎಲ್ಲ ಮಕ್ಕಳ ಬದುಕನ್ನು ಬೆಳಗಿಸಲಿ ಎಂಬುದು ನಮ್ಮ ಆಶಯ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)