

| ಮೃತ್ಯುಂಜಯ ಕಪಗಲ್ ಬೆಂಗಳೂರು
ನಾವೀನ್ಯತೆ, ತಂತ್ರಜ್ಞಾನದ ಆವಿಷ್ಕಾರ ಹಾಗೂ ನವೋದ್ಯಮ (ಸ್ಟಾರ್ಟ್ಅಪ್)ದಲ್ಲಿ ರಾಷ್ಟ್ರೀಯ ಅಗ್ರ ಶ್ರೇಯಾಂಕ ಕಾಯ್ದುಕೊಳ್ಳಲೆಂದು ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದೆ. ಸರ್ಕಾರದ ಈ ನಡೆಯಿಂದ ಮತ್ತಷ್ಟು ನವೋದ್ಯಮಗಳು ತಲೆ ಎತ್ತಲಿವೆ. ತಾಂತ್ರಿಕ ನೈಪುಣ್ಯ ಹೆಚ್ಚಳ, ಹೊಸ ಉದ್ಯಮಿಗಳು, ಯುವಜನರ ಸ್ವಾವಲಂಬಿ ಜೀವನಕ್ಕೆ ಇದು ನೆರವಾಗಲಿದೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಅಧಿನಿಯಮಕ್ಕೆ ಪ್ರಮುಖ ತಿದ್ದುಪಡಿ ಮಾಡಲಾಗಿದ್ದು, ನವೋದ್ಯಮಗಳ ಭಾಗಿದಾರಿಕೆಗೆ ಹೊಸ ವೇದಿಕೆ ಸೃಷ್ಟಿಯಾಗಿದೆ. ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ತಿದ್ದುಪಡಿ) ನಿಯಮಗಳು, 2021ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಹಲವಾರು ಷರತ್ತುಗಳನ್ನು ವಿಧಿಸಿದ ಅಧಿಸೂಚನೆ ಪ್ರಕಟವಾಗಿದೆ. ಇದು ಸರ್ಕಾರಿ ಖರೀದಿ, ತಾಂತ್ರಿಕ ಸೇವೆಗಳಲ್ಲಿ ಸ್ಪರ್ಧೆ, ಉತ್ತಮಗುಣಮಟ್ಟ ಖಾತರಿ, ಹೊಸ ಪ್ರಯೋಗ ಜತೆಗೆ ನವೋದ್ಯಮಗಳು ಆರ್ಥಿಕವಾಗಿ ಸದೃಢಗೊಳ್ಳಲು ನೆರವಾಗುತ್ತದೆ. ಇದರಿಂದ ‘ನವೋದ್ಯಮಗಳ ಹಬ್’ ಹೆಗ್ಗಳಿಕೆಗೆ ಮತ್ತಷ್ಟು ಮೆರುಗು ಮೂಡಲಿದೆ ಎನ್ನುತ್ತವೆ ಕರ್ನಾಟಕ ನವೋದ್ಯಮ ಮತ್ತು ತಂತ್ರಜ್ಞಾನ ಸೊಸೈಟಿ ಮೂಲಗಳು.
ಪ್ರಸ್ತಾವನೆಗೆ ಅಸ್ತು: ವಿಜ್ಞಾನ, ತಂತ್ರಜ್ಞಾನ, ಐಟಿ-ಬಿಟಿ ಇಲಾಖೆ ಸಲ್ಲಿಸಿದ್ದ ತಿದ್ದುಪಡಿ ಪ್ರಸ್ತಾವನೆಗೆ ಸರ್ಕಾರ ಅಸ್ತು ಎಂದಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಹಾದಿ ಸುಗಮಗೊಳಿಸಿದೆ. ಈ ಮೊದಲು ಟೆಂಡರ್ಲ್ಲಿ ಭಾಗಿಯಾಗಲು ಅಗತ್ಯವಾದ ಠೇವಣಿ ಮೊತ್ತ (ಇಎಂಡಿ) ಇರಿಸಲು ಸ್ಟಾರ್ಟ್ಅಪ್ಗಳಿಗೆ ಸಾಧ್ಯವಾಗುತ್ತಿರಲಿಲ್ಲ. ತಿದ್ದುಪಡಿ ಫಲವಾಗಿ ನವೋದ್ಯಮಗಳಿಗೆ ಇಎಂಡಿ ವಿನಾಯಿತಿ ಲಭಿಸಿದೆ. ವಿಜ್ಞಾನ-ತಂತ್ರಜ್ಞಾನ, ಉದ್ಯಮ-ವ್ಯವಹಾರ, ಆರೋಗ್ಯ, ವೈದ್ಯಕೀಯ, ಶಿಕ್ಷಣ, ಪ್ರವಾಸೋದ್ಯಮ, ವಿಹಾರಧಾಮ ಸೇರಿ ಜನರ ದೈನಂದಿನ ಅಗತ್ಯತೆಗಳನ್ನು ಪೂರೈಸುವ ಸೇವೆಯಲ್ಲಿ ಸ್ಟಾರ್ಟ್ಅಪ್ಗಳು ತೊಡಗಿವೆ. ಇವುಗಳ ತಾಂತ್ರಿಕ ನೈಪುಣ್ಯತೆ, ಸೇವಾ ದಕ್ಷತೆ ಹಾಗೂ ಕಾರ್ಯಕ್ಷತೆಯನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಸರ್ಕಾರದ ಯಾವುದೇ ಖರೀದಿ, ತಾಂತ್ರಿಕ ಸೇವೆಗಳ ಟೆಂಡರ್ ಪ್ರಕ್ರಿಯೆಯಲ್ಲಿ ನೇರ ಅಥವಾ ಪರೋಕ್ಷವಾಗಿ ಸೇರಿಸಿಕೊಳ್ಳಲು ಅವಕಾಶ ನೀಡಿದ್ದು, ಸ್ಪರ್ಧೆಗೆ ಉತ್ತೇಜನ ನೀಡಿದಂತಾಗಿದೆ ಎಂದು ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಇಲಾಖೆ ಮೂಲಗಳು ತಿಳಿಸಿವೆ.
ವಹಿವಾಟು ಅವಕಾಶ: ಸರ್ಕಾರದ ವಿವಿಧ ಇಲಾಖೆಗಳು ಪ್ರತಿ ವರ್ಷ ನೂರಾರು ಕೋಟಿ ರೂ. ಮೊತ್ತದ ತಾಂತ್ರಿಕ ಉತ್ಪನ್ನಗಳು ಹಾಗೂ ಸೇವೆಗಳನ್ನು ಖರೀದಿಸುತ್ತವೆ. ಸ್ಟಾರ್ಟ್ಅಪ್ಗಳ ಇತಿಮತಿ ಹಾಗೂ ಸಾಮರ್ಥ್ಯಕ್ಕೆ ಅನುಸಾರ ಟೆಂಡರ್ನಲ್ಲಿ ಪಾಲ್ಗೊಳ್ಳಬಹುದಾಗಿದ್ದು, ವಾರ್ಷಿಕ ಎರಡೂವರೆ ಕೋಟಿ ರೂ. ಮೊತ್ತದ ವಹಿವಾಟು ಅವಕಾಶ ದಕ್ಕಿಸಿಕೊಂಡಿವೆ.
ಸಾವಿರಾರು ನವೋದ್ಯಮ: ರಾಜ್ಯದಲ್ಲಿ 13,266 ನವೋದ್ಯಮಗಳಿದ್ದು, ಈ ಪೈಕಿ 2017 ಸ್ಟಾರ್ಟ್ಅಪ್ಗಳು ಕಿಟ್ಸ್ನಲ್ಲಿ ನೋಂದಣಿಯಾಗಿವೆ. ಅಲ್ಲದೆ, 470 ಧನಸಹಾಯದ ಸ್ಟಾರ್ಟ್ಅಪ್ಗಳು, ಸಾಹಸೋದ್ಯಮ ಧನಸಹಾಯದ ನವೋದ್ಯಮ ಗಳು ಹಾಗೂ 693 ಪರಿಪೋಷಣ ಕೇಂದ್ರಗಳಿವೆ.
ಸಣ್ಣ ಸ್ಟಾರ್ಟ್ಅಪ್ಗಳ ಮೇಲೆ ಹೆಚ್ಚು ಫೋಕಸ್: ಸಣ್ಣ ನವೋದ್ಯಮಗಳ ಮೇಲೆ ತಿದ್ದುಪಡಿ ನಿಯಮವು ಹೆಚ್ಚು ಫೋಕಸ್ ಮಾಡಿದೆ. ದೊಡ್ಡ ಮೊತ್ತದ ಗುತ್ತಿಗೆ ಬಿಡ್ಗಳಲ್ಲಿ ಶೇ.10 ಸ್ಟಾರ್ಟ್ಅಪ್ಗಳಿಗೆ ಮೌಲ್ಯಮಾಪನದ ವೇಳೆ ಶೇ.6 ವೈಟೇಜ್ (ಹೆಚ್ಚುವರಿ ಅಂಕ) ನೀಡಲು ನಿರ್ಧರಿಸಿದೆ. ಹೀಗಾಗಿ ದೊಡ್ಡ ಕಂಪನಿಗಳು ಮತ್ತು ಸಣ್ಣಪ್ರಮಾಣದ ನವೋದ್ಯಮಗಳು ಜತೆಯಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಹೆಜ್ಜೆಯಿಡಲಿದ್ದು, ಈ ಕ್ರಮದಿಂದ ಮತ್ತು ದೊಡ್ಡ ಕಂಪನಿಗಳು ಮತ್ತು ಸಣ್ಣ ಸ್ಟಾರ್ಟ್ ಅಪ್ಗಳ ಸಮತೋಲಿತ ಏಳಿಗೆಗೆ ಅನುಕೂಲವಾಗಲಿದೆ.
ಸರ್ಕಾರಕ್ಕೆ ಅಗತ್ಯವಿರುವ ನಾವೀನ್ಯತೆಯ ಉತ್ಪನ್ನಗಳ ಪೂರೈಕೆ ಸಾಮರ್ಥ್ಯ, ಆಳ ತಾಂತ್ರಿಕ ಕೌಶಲವುಳ್ಳ ಸ್ಟಾರ್ಟ್ ಅಪ್ಗಳಿಗೆ ಅವಕಾಶ ಕೊಡಲೆಂದು ಈ ಉಪ ಕ್ರಮಕೈಗೊಳ್ಳ ಲಾಗಿದೆ. ಇದರಿಂದ ಒಟ್ಟಾರೆ ನವೋದ್ಯಮಕ್ಕೆ ಉತ್ತೇಜನ ನೀಡಿದಂತಾಗುತ್ತದೆ.
| ಡಾ.ಸಿ.ಎನ್.ಅಶ್ವತ್ಥ ನಾರಾಯಣ ಐಟಿ-ಬಿಟಿ, ವಿಜ್ಞಾನ ತಂತ್ರಜ್ಞಾನ ಸಚಿವ