

ನಲವತ್ತೈದು ವರ್ಷದ ಸಿದ್ದಪ್ಪ ಬಿ.ಕಾಂ ಪದವಿ ಪಡೆದ ನಂತರ ಜಿಲ್ಲಾ ಕೇಂದ್ರವೊಂದರಲ್ಲಿದ್ದ ಖಾಸಗಿ ಕಚೇರಿಯಲ್ಲಿ ಅಕೌಂಟೆಂಟ್ ಕಮ್ ಟೈಪಿಸ್ಟ್ ಆಗಿದ್ದ. 35 ವರ್ಷದ ಪತ್ನಿ ರೇಣುಕಾಳೊಡನೆ ಸಣ್ಣ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಅವರಿಗೆ ಮೂರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನಿದ್ದರು. ಹದಿನೈದು ವರ್ಷದ ಆಶಾ ಹಾಗೂ ಹನ್ನೆರಡು ವರ್ಷದ ಅನಿತಾ ಖಾಸಗಿ ಶಾಲೆಯಲ್ಲಿ ಕ್ರಮವಾಗಿ ಎಂಟನೆಯ ಹಾಗೂ ಐದನೆಯ ತರಗತಿಯಲ್ಲಿ ಓದುತ್ತಿದ್ದರು.
ದೊಡ್ಡ ಸಂಸಾರಕ್ಕೆ ತನ್ನ ಸಂಬಳ ಏನೂ ಸಾಲದ ಕಾರಣ ಸಿದ್ದಪ್ಪ ಪಾರ್ಟ್ಟೈಂ ಕೆಲಸಗಳನ್ನೂ ಮಾಡುತ್ತಿದ್ದ. ಬೆಳಗಿನ 6ರಿಂದ 8 ಗಂಟೆಯವರೆಗೆ ದೇಗುಲವೊಂದರಲ್ಲಿ ಅರ್ಚಕನ ಕೆಲಸ ಮಾಡಿ ಮನೆಗೆ ಬಂದು ಉಪಾಹಾರ ಸೇವಿಸಿ ಕಚೇರಿಗೆ ಹೋಗಿ, ನಂತರ ಸಂಜೆ 7ರಿಂದ 8ರವರೆಗೆ ಅಂಗಡಿಯೊಂದರಲ್ಲಿ ಲೆಕ್ಕಪತ್ರಗಳನ್ನು ನೋಡಿ ಆನಂತರ ಒಬ್ಬ ವಕೀಲರ ಕಚೇರಿಯಲ್ಲಿ ಟೈಪಿಂಗ್ ಮಾಡುತ್ತಿದ್ದ. ರಾತ್ರಿ 11 ಗಂಟೆಯ ನಂತರವೇ ಆತ ಮನೆಗೆ ಬರುತ್ತಿದ್ದುದು. ಇಷ್ಟೆಲ್ಲಾ ಕಷ್ಟಪಟ್ಟರೂ ಆತ ಗಳಿಸುತ್ತಿದ್ದ ಹಣ ಸಂಸಾರವನ್ನು ಸರಿದೂಗಿಸಲು ಸಾಲುತ್ತಿರಲಿಲ್ಲ.
ಬೆಳಗಿನಿಂದ ರಾತ್ರಿಯವರೆಗೆ ಸಿದ್ದಪ್ಪ ದುಡಿಯುತ್ತಿದ್ದ ಕಾರಣ ಮಕ್ಕಳ ಜವಾಬ್ದಾರಿ ತಾಯಿ ರೇಣುಕಾಳ ಮೇಲೆಯೇ ಬಿದ್ದಿತ್ತು. ಆದರೆ ಆಕೆಗೆ ಮನೆಕೆಲಸಗಳನ್ನೂ ನೋಡಿಕೊಂಡು ಮಕ್ಕಳ ವಿದ್ಯಾಭ್ಯಾಸದ ಬಗ್ಗೆಯೂ ಗಮನಕೊಡುವುದು ಸಾಧ್ಯವಾಗುತ್ತಿರಲಿಲ್ಲ. ಏತನ್ಮಧ್ಯೆ, ಆಕೆ ಮತ್ತೊಮ್ಮೆ ಗರ್ಭಿಣಿಯಾಗಿ ತವರಿಗೆ ಹೋದಾಗ ಸಿದ್ದಪ್ಪನ ವಿಧವೆ ಅಕ್ಕ ಅವರ ಮನೆಗೆ ಬಂದು ಸಹಾಯಮಾಡತೊಡಗಿದಳು.
ಒಂದು ದಿನ ಶಾಲೆಯಲ್ಲಿ ಆಶಾ ಪಾಠವನ್ನು ಕೇಳದೇ ತೂಕಡಿಸುತ್ತಿದ್ದುದನ್ನು ಗಮನಿಸಿದ ಕ್ಲಾಸ್ ಟೀಚರ್ ಫರೀದಾ, ‘ಏನು ಆಶಾ, ಕೆಲವು ವಾರಗಳಿಂದ ನೀನು ತರಗತಿಯಲ್ಲಿ ಪಾಠಗಳತ್ತ ಗಮನವನ್ನೇ ಕೊಡುತ್ತಿಲ್ಲ, ನಿದ್ದೆಗೆ ಜಾರಿಹೋಗುತ್ತಿರುವೆ. ಸ್ನೇಹಿತರ ಜತೆಯೂ ಬೆರೆಯುತ್ತಿಲ್ಲ, ಸದಾಕಾಲ ಯಾವುದೋ ಗುಂಗಿನಲ್ಲಿರುವೆ, ಏಕೆ ನಿನ್ನ ದೇಹಸ್ಥಿತಿ ಸರಿಯಾಗಿಲ್ಲವೇ?’ ಎಂದು ಪ್ರಶ್ನಿಸಿದಳು. ಆಶಾ ಕೂಡಲೇ ಆಕೆ ಅಳತೊಡಗಿ, ‘ಮೇಡಂ, ನನಗೆ ರಾತ್ರಿ ಸರಿಯಾಗಿ ನಿದ್ರೆ ಆಗುತ್ತಿಲ್ಲ, ಏಕೆಂದರೆ ನನ್ನ ತಂದೆ ರಾತ್ರಿ ಮಲಗಲು ಬಿಡದೆ ಲೈಂಗಿಕ ಕಿರುಕುಳ ಕೊಡುತ್ತಾರೆ’ ಎಂದಳು.
ಗಾಬರಿಯಾದ ಫರೀದಾ ಅವಳನ್ನು ತನ್ನ ಕೋಣೆಗೆ ಕರೆದುಕೊಂಡು ಹೋಗಿ ಆಪ್ತಸಮಾಲೋಚನೆ ನಡೆಸಿದಾಗ ಆಶಾ ಹೀಗೆ ಹೇಳಿದಳು: ‘ನಮ್ಮ ಮನೆಯಲ್ಲಿ ಇರುವುದು ಒಂದೇ ಬೆಡ್ರೂಂ. ಅದರಲ್ಲಿ ಅಮ್ಮ, ಅಪ್ಪ, ಮತ್ತು ತಮ್ಮ ಮಲಗುತ್ತಾರೆ. ನಾನು ಮತ್ತು ಅನಿತಾ ಹಜಾರದಲ್ಲಿ ಮಲಗುತ್ತೇವೆ. ಸದ್ಯಕ್ಕೆ ನಮ್ಮ ಮನೆಗೆ ಬಂದಿರುವ ಅತ್ತೆ ಅಡುಗೆ ಕೋಣೆಯಲ್ಲಿ ಮಲಗುತ್ತಾರೆ. ಈಗ ನನ್ನ ಇನ್ನೊಬ್ಬ ತಂಗಿ ಮತ್ತು ತಮ್ಮ ಅಮ್ಮನ ಜತೆ ಅಜ್ಜಿಯ ಮನೆಯಲ್ಲಿದ್ದಾರೆ. ನಿನ್ನೆ ರಾತ್ರಿ ನಾನು ತಂಗಿಯ ಪಕ್ಕದಲ್ಲಿ ಮಲಗಿದ್ದಾಗ ತಂದೆ ನಮ್ಮಿಬ್ಬರ ಮಧ್ಯದಲ್ಲಿ ಬಂದು ಮಲಗಿದರು. ಮಧ್ಯರಾತ್ರಿಯ ನಂತರ ಅವರು ನನ್ನ ಉಡುಪುಗಳನ್ನು ಬಿಚ್ಚಿ ನನ್ನನ್ನು ಬಲವಂತವಾಗಿ ಚುಂಬಿಸಿ ಗುಪ್ತಾಂಗಗಳನ್ನು ಮುಟ್ಟಿದರು. ನನ್ನ ತಂಗಿಗೂ ಹಾಗೇ ಮಾಡಿದರು. ನಂತರ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದರು. ಹೀಗಾಗಿದ್ದು ಮೊದಲೇನಲ್ಲ. ಈ ಕಾರಣಕ್ಕಾಗಿಯೇ ನನಗೆ ಆಟಪಾಠಗಳಲ್ಲಿ ಆಸಕ್ತಿ ಬರುತ್ತಿಲ್ಲ’ ಎಂದಾಗ ಹೌಹಾರಿದ ಫರೀದಾ ಆಶಾಳನ್ನು ಕೂಡಲೇ ಶಾಲಾ ಪ್ರಿನ್ಸಿಪಾಲರ ಬಳಿ ಕರೆದುಕೊಂಡು ಹೋದರು.
ಪ್ರಿನ್ಸಿಪಾಲರು ವಿಚಾರಿಸಿದಾಗ, ‘ನಮ್ಮ ಅಮ್ಮ ಮನೆಯಲಿದ್ದಾಗಲೂ ತಂದೆ ನನಗೂ, ತಂಗಿ ಅನಿತಾಳಿಗೂ ಹೀಗೆ ಮಾಡಿದ್ದಾರೆ. ಅಮ್ಮನಿಗೆ ವಿಷಯ ತಿಳಿಸಿದಾಗ, ಆಕೆ ‘ನಿನ್ನ ಅಪ್ಪನಿಗೆ ಈ ರೀತಿ ಮಾಡದಿರಲು ತಾಕೀತು ಮಾಡುವೆ, ಈ ವಿಷಯವನ್ನು ಯಾರ ಮುಂದೆಯೂ ಹೇಳಬೇಡ, ಕುಟುಂಬದ ಮಾನ ಹೋಗುತ್ತದೆ’ ಎಂದಿದ್ದಳು. ಹೀಗಾಗಿ ನಾನೂ ಸುಮ್ಮನಿದ್ದೆ. ಈಗ ಅಮ್ಮ ಮನೆಯಲ್ಲಿಲ್ಲದ ಅವಕಾಶ ಬಳಸಿಕೊಂಡು ಅಪ್ಪ ತನ್ನ ಚಾಳಿಯನ್ನು ಮತ್ತೆ ಮುಂದುವರಿಸಿದ್ದಾನೆ’ಎಂದು ಆಶಾ ಹೇಳಿದಳು. ಪ್ರಿನ್ಸಿಪಾಲರು ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ ವಿಷಯ ತಿಳಿಸಿದರು. ಮಕ್ಕಳ ಕಲ್ಯಾಣ ಸಮಿತಿಯ ನಾಲ್ವರು ಸದಸ್ಯರು ಮಾರನೆಯ ದಿನವೇ ಶಾಲೆಗೆ ಭೇಟಿ ನೀಡಿ ಆಶಾ ಮತ್ತು ಅನಿತಾರನ್ನು ಬೇರೆ ಬೇರೆಯಾಗಿ ವಿಚಾರಣೆ ಮಾಡಿದರು. ಆಶಾ ಶಿಕ್ಷಕಿಯ ಮುಂದೆ ಹೇಳಿದ್ದನ್ನು ಸಮಿತಿಯ ಮುಂದೆಯೂ ತಿಳಿಸಿದಳು. ಅನಿತಾ ತನಗೇನೂ ಗೊತ್ತಿಲ್ಲ ಎಂದಳು. ಬಾಲಕಿಯ ಮೇಲೆ ಪೋಕ್ಸೋ ಕಾಯ್ದೆಯನ್ವಯ ಅಪರಾಧವಾಗಿರುವುದು ಆಶಾಳ ಹೇಳಿಕೆಯ ಮೇರೆಗೆ ವಿದಿತವಾಗಿದೆ ಎಂದು ಮನಗಂಡ ಸಮಿತಿಯ ಅಧ್ಯಕ್ಷೆ ತಮ್ಮ ಕಚೇರಿಯ ಸಿಬ್ಬಂದಿಯೊಬ್ಬನ ಮೂಲಕ ಅವಳನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ದೂರು ಕೊಡಲು ಕಳುಹಿಸಿದರು.
ಮಹಿಳಾ ಪೊಲೀಸ್ ಅಧಿಕಾರಿ ಆಶಾಳನ್ನು ವಿಚಾರಿಸಿದಾಗ, ಆಕೆ ಈ ಹಿಂದೆ ಇತರರ ಮುಂದೆ ಹೇಳಿದ ವಿಷಯಗಳನ್ನೇ ದೃಢೀಕರಿಸಿದಳು. ಮಕ್ಕಳ ಗುಪ್ತಾಂಗಗಳನ್ನು ಮುಟ್ಟುವುದು ಪೋಕ್ಸೋ ಕಾಯ್ದೆಯನ್ವಯ ಅಪರಾಧವಾಗುವ ಕಾರಣ ಸಿದ್ದಪ್ಪನ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಆಶಾಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಅವಳ ಮೇಲೆ ಯಾವುದೇ ಬಲಾತ್ಕಾರವಾದಂತೆ ಕಾಣುತ್ತಿಲ್ಲವೆಂದು ವೈದ್ಯರು ವರದಿ ಮಾಡಿದರು. ಅದೇ ದಿನವೇ ಸಿದ್ದಪ್ಪನನ್ನು ಬಂಧಿಸಲಾಯಿತು. ಆತ ತನ್ನ ಮೇಲೆ ಸುಳ್ಳು ದೂರನ್ನು ಕೊಡಲಾಗಿದೆ ಎಂದು ವಾದಿಸಿದ. ‘ನಾನು ಮನೆಯಲ್ಲಿ ಸ್ವಲ್ಪವೇ ಸಮಯ ಇರುವ ಕಾರಣ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಹೆಂಡತಿಗೂ ಅವರ ಮೇಲೆ ಹಿಡಿತವಿಲ್ಲ. ನಮ್ಮ ಪಕ್ಕದ ಮನೆಯಲ್ಲಿ ವಿವಾಹ ವಿಚ್ಛೇದನ ಪಡೆದಿರುವ ನರ್ಸ್ ಲಿಲ್ಲಿ ಎನ್ನುವ ತನ್ನ 18 ವರ್ಷದ ಮಗಳ ಜತೆ ವಾಸಿಸುತ್ತಾಳೆ. ಲಿಲ್ಲಿ ಕಾಲೇಜಿಗೆ ಹೋಗದೇ ಮನೆಯಲ್ಲಿಯೇ ಇರುತ್ತಿದ್ದು ಕೆಟ್ಟ ನಡತೆಯವಳಾಗಿದ್ದಾಳೆ. ಆಶಾ ಅವಳ ಗೆಳೆತನ ಮಾಡಿದ ಕಾರಣ ದುರ್ಗಣಗಳನ್ನು ಬೆಳೆಸಿಕೊಂಡು ಏಳನೇ ತರಗತಿಯಲ್ಲಿ ಫೇಲ್ ಆದಳು. ಲಿಲ್ಲಿಯ ಸಹವಾಸದಿಂದ ದೂರವಿರುವಂತೆ ನಾವು ಅವಳಿಗೆ ಗದರಿದ್ದೆವು. ಕೆಲವು ತಿಂಗಳುಗಳ ಹಿಂದೆ ನಾನು ಯಾವುದೋ ತುರ್ತು ಕಾರ್ಯಕ್ಕಾಗಿ ಮಧ್ಯಾಹ್ನ ಮನೆಗೆ ಬಂದಾಗ ನನ್ನ ಬೆಡ್ರೂಮಿನಲ್ಲಿ ಲಿಲ್ಲಿ ಮತ್ತು ಆಶಾ ಮೊಬೈಲ್ ಫೋನಿನಲ್ಲಿ ಏನನ್ನೋ ನೋಡುತ್ತಾ ಒಬ್ಬರನ್ನೊಬ್ಬರು ಅಪ್ಪಿಕೊಂಡು ಮಲಗಿದ್ದರು. ನಾನು ಅಸಹ್ಯಗೊಂಡು ಆಶಾಳನ್ನು ತರಾಟೆಗೆ ತೆಗೆದುಕೊಂಡೆ. ಲಿಲ್ಲಿಯ ಕೈಯಲ್ಲಿದ್ದ ಮೊಬೈಲ್ ಫೋನನ್ನು ಕಸಿದುಕೊಂಡು ನೋಡಿದಾಗ ಇಬ್ಬರು ಸ್ತ್ರೀಯರ ಸಲಿಂಗಕಾಮಿ ವಿಡಿಯೋವನ್ನು ಅವರು ನೋಡುತ್ತಿದ್ದುದು ಕಂಡಿತು. ನಮ್ಮ ಮನೆಗೆ ಇನ್ನು ಮುಂದೆ ಕಾಲಿಡಕೂಡದೆಂದು ಲಿಲ್ಲಿಗೆ ಗದರಿ ಅವಳನ್ನು ಮನೆಯಿಂದ ಓಡಿಸಿದೆ. ಇನ್ನು ಮುಂದೆ ಲಿಲ್ಲಿಯ ಸಹವಾಸ ಮಾಡಿದರೆ ಶಾಲೆಯಿಂದ ಬಿಡಿಸುವುದಾಗಿ ಆಶಾಳಿಗೆ ಎಚ್ಚರಿಕೆ ನೀಡಿದೆ. ಈ ವಿಷಯವನ್ನು ನಾನು ಅದೇ ದಿನವೇ ತನ್ನ ತವರಿನಲ್ಲಿದ್ದ ಹೆಂಡತಿಗೂ ತಿಳಿಸಿರುವೆ, ಬೇಕಾದರೆ ಅವಳನ್ನೂ ವಿಚಾರಿಸಿ. ಇದಾದ ಮಾರನೆಯ ದಿನ ಆಶಾ ಮನೆ ಬಿಟ್ಟು ಹೋಗಿ ರೈಲ್ವೆ ಹಳಿಯ ಬಳಿ ಕುಳಿತಿದ್ದಳು. ನಾವೇ ಅವಳನ್ನು ಹುಡುಕಿ ಮನೆಗೆ ವಾಪಸ್ ಕರೆತಂದೆವು. ಲಿಲ್ಲಿಯ ಸಂಗವನ್ನು ಬಿಡಿಸಿದ ಕಾರಣ ಲಿಲ್ಲಿಯ ತಾಯಿಯ ಪ್ರಚೋದನೆಯ ಮೇರೆಗೇ ನನ್ನ ಮೇಲೆ ಸುಳ್ಳು ದೂರನ್ನು ಕೊಟ್ಟಿದ್ದಾಳೆ’ ಎಂದು ಆತ ಹೇಳಿದ.
ಸಿದ್ದಪ್ಪನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಯಿತು. ಆಶಾ ಮತ್ತು ಅನಿತಾರನ್ನು ಸರ್ಕಾರಿ ಬಾಲಕಿಯರ ಗೃಹಕ್ಕೆ ಸೇರಿಸಲಾಯಿತು. ನಂತರ ಆಶಾ ಪೊಲೀಸರ ಮುಂದೆ ತಾನು ತಂದೆಯ ಮೇಲೆ ಸುಳ್ಳು ದೂರನ್ನು ನೀಡಿರುವುದಾಗಿ ಹೇಳಿದಾಗ ಅವಳನ್ನು ಮ್ಯಾಜಿಸ್ಟ್ರೇಟರೆದುರು ಹಾಜರುಪಡಿಸಲಾಯಿತು. ಅವರ ಮುಂದೆಯೂ ತಾನು ಸುಳ್ಳು ದೂರನ್ನು ನೀಡಿದ್ದಾಗಿ ಹೇಳಿದ ಆಶಾ, ತಂದೆ ತನಗೆ ಲೈಂಗಿಕ ಕಿರುಕುಳ ನೀಡಿಲ್ಲ ಎಂದಳು.
ಆಶಾ ದ್ವಂದ್ವ ಹೇಳಿಕೆಗಳನ್ನು ನೀಡಿದರೂ ಪೊಲೀಸರು ನ್ಯಾಯಾಲಯದಲ್ಲಿ ಸಿದ್ದಪ್ಪನ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದರು. ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಆಶಾ ತಂದೆ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದೇ ಆರಂಭದಲ್ಲಿ ಹೇಳಿಕೆ ನೀಡಿ ಆನಂತರ ಪಾಟೀಸವಾಲು ಮಾಡುವಾಗ ತಾನು ಲಿಲ್ಲಿ ಮತ್ತು ಅವಳ ತಾಯಿಯ ಕುಮ್ಮಕ್ಕಿನ ಮೇರೆಗೆ ತಂದೆಯ ವಿರುದ್ಧ ಸುಳ್ಳು ದೂರನ್ನು ನೀಡಿರುವುದಾಗಿ ಹೇಳಿದಳು. ಇತರ ಎಲ್ಲ ಸಾಕ್ಷಿದಾರರ ಹೇಳಿಕೆಗಳನ್ನು ಗಮನಿಸಿದ ನ್ಯಾಯಾಧೀಶರು ತನ್ನ ತಂದೆಯನ್ನು ರಕ್ಷಿಸಲು ಆಶಾ ಆರಂಭದಲ್ಲಿ ನೀಡಿದ್ದ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾಳೆಂದು ಭಾವಿಸಿ ಆರೋಪಿ ಸಿದ್ದಪ್ಪನಿಗೆ 10 ವರ್ಷ ಜೈಲುವಾಸದ ಶಿಕ್ಷೆ ನೀಡಿದರು. ಸಿದ್ದಪ್ಪ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾನೆ.
ಸಿದ್ದಪ್ಪ ಮಗಳ ಮೇಲೆ ಲೈಂಗಿಕ ಶೋಷಣೆ ಮಾಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ; ಅಂತೆಯೇ ಆಶಾಳೂ ತಂದೆಯ ಮೇಲೆ ಸುಳ್ಳು ದೂರನ್ನು ನೀಡಿರುವ ಸಾಧ್ಯತೆಯಿದೆ. ‘ಎಲ್ಲವೂ ಒಗಟೇ, ಒಂದು ಒಗಟಿನ ಕೀಲಿಕೈ ಇನ್ನೊಂದು ಒಗಟು’ ಎಂದು ಆಂಗ್ಲ ಕವಿ ರಾಲ್ಪ್ ವಾಲ್ಡೋ ಎಮರ್ಸನ್ ಹೇಳಿದಂತೆ ಈ ಪ್ರಕರಣದಲ್ಲಿ ಸಿದ್ದಪ್ಪ ಹೇಳುವುದು ನಿಜವೋ, ಆಶಾ ಹೇಳುವುದು ನಿಜವೋ ಎನ್ನುವುದು ತಿಳಿಯದಾಗಿದೆ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)