

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಅದರದೇ ಆದ ಪ್ರಾಚೀನ ಪರಂಪರೆ ಮತ್ತು ಧಾರ್ವಿುಕ ಹಿನ್ನೆಲೆ ಇದೆ. ಇದು ಜೈನ, ಶೈವ, ವೈಷ್ಣವ ಧರ್ಮಗಳ ತ್ರಿವೇಣಿ ಸಂಗಮ. ಇಲ್ಲಿನ ಧರ್ವಧಿಕಾರಿಗಳು ದೇವರ ಸೇವೆ, ಸಾನ್ನಿಧ್ಯ, ರಕ್ಷಣೆಗೆ ಪ್ರಥಮ ಆದ್ಯತೆ ನೀಡಿದ್ದಾರೆ. ಇಲ್ಲಿ ನಡೆಯುವ ಪೂಜೆ, ಆರಾಧನೆ, ರಥೋತ್ಸವ ಹಾಗೂ ಪ್ರತಿವರ್ಷ ನಡೆಯುವ ಲಕ್ಷ ದೀಪೋತ್ಸವವು ಭಕ್ತಿ ಹಾಗೂ ಜ್ಞಾನದ ಬೆಳಕಿನ ಸಂಕೇತವಾಗಿದೆ.
|ಕೆ.ಆರ್. ಪ್ರಕಾಶ್ಬಾಬು ಮಂಡಗದ್ದೆ
ಕಲೆ, ಸಾಹಿತ್ಯ, ಸಂಸ್ಕೃತಿಯ ತ್ರಿವೇಣಿ ಸಂಗಮವೂ ಆಗಿರುವ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಲಕ್ಷ ದೀಪೋತ್ಸವವು ಜಗದ ಅಂಧಕಾರವನ್ನು ಮಾತ್ರವಲ್ಲದೆ ಮನಸ್ಸಿನ ಕತ್ತಲನ್ನೂ ನಿವಾರಿಸುತ್ತದೆ. ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಏಕಾದಶಿಯಿಂದ ಆರಂಭವಾಗಿ ಅಮಾವಾಸ್ಯೆಯವರೆಗೆ ನಡೆಯುವ ಲಕ್ಷ ದೀಪೋತ್ಸವವು ಕೇವಲ ಕ್ಷೇತ್ರಕ್ಕೆ ಸೀಮಿತವಾಗಿರದೆ ನಾಡಿನಾದ್ಯಂತ ತನ್ನ ಬೆಳಕನ್ನು ಪಸರಿಸಿ, ಪ್ರಸಿದ್ಧಿ ಪಡೆದಿದೆ. ಈ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ ದೀಪಗಳನ್ನು ಬೆಳಗಿಸಿ ಜೀವನದ ಅಂಧಕಾರವನ್ನು ನೀಗಿಸಿಕೊಳ್ಳುತ್ತಾರೆ. ಇದು ಎಲ್ಲ ಆಸ್ತಿಕ ವರ್ಗಕ್ಕೆ ಸಂತಸ ಸಂಭ್ರಮದ ಪರ್ವವಾಗಿದೆ. ಇಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನವು 1933ರಿಂದ ನಡೆದುಕೊಂಡು ಬಂದಿದೆ.
ಇದನ್ನು ಆರಂಭಿಸಿದವರು ದಿ. ಮಂಜಮ್ಮ ಹೆಗ್ಗಡೆಯವರು. ಐವತ್ತು ವರ್ಷಗಳ ಹಿಂದೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಕ್ಷೇತ್ರದ 21ನೇ ಧರ್ವಧಿಕಾರಿಯಾಗಿ ಧರ್ಮಪೀಠವನ್ನೇರಿದರು. ಅದರ ಅಂಗವಾಗಿ 50ನೇ ವರ್ಷದ ವರ್ಧಂತಿ ಮಹೋತ್ಸವ ಆಚರಣೆ ವರ್ಷಪೂರ್ತಿ ಶ್ರೀಕ್ಷೇತ್ರದಲ್ಲಿ ನಡೆದಿದೆ. ಮೊದಲು ಇಲ್ಲಿ ಹಿಂದೆ ಹಣತೆ ಹಚ್ಚುತ್ತಾ ದೀಪಗಳನ್ನು ಇಡುತ್ತಿದ್ದರು. ಕ್ರಮೇಣ ಜನಸಂದಣಿ ಜಾಸ್ತಿ ಆಗಿದ್ದರಿಂದ, ಅದರಿಂದ ಆಗಬಹುದಾದ ಅಪಾಯವನ್ನು ಗಮನದಲ್ಲಿ ಇಟ್ಟುಕೊಂಡು ವಿದ್ಯುದ್ದೀಪದ ವ್ಯವಸ್ಥೆ ಮಾಡಲಾಗಿದೆ. ಲಕ್ಷದೀಪ ಈಗ ಕೋಟಿ ದೀಪವಾಗಿದೆ. ಆದರೆ ಸಾಂಪ್ರದಾಯಿಕ ಹಣತೆಗಳ ಮೌಲ್ಯವು ಹಾಗೇ ಉಳಿದಿರುವುದು ಇಲ್ಲಿನ ವಿಶೇಷ. ಧರ್ಮಸ್ಥಳವು ಎಷ್ಟೋ ಜನರ ಬದುಕಿನಲ್ಲಿ ಬೆಳಕಾಗಿದೆ. ಈ ಲಕ್ಷ ದೀಪೋತ್ಸವವು ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸಮಾಜಮುಖಿಯಾಗಿ ಬೆಳೆದು ನಿಂತಿರುವ ಒಂದು ಸಾಂಸ್ಕೃತಿಕ ಸಮಾಗಮವಾಗಿದೆ. ದೀಪ ಬೆಳಗಲು ಮುಖ್ಯವಾಗಿ ಬೆಂಕಿ ಬೇಕು. ನಾನು ಎಂಬ ಸ್ವಾರ್ಥವನ್ನು ಸುಟ್ಟು ಭಸ್ಮ ಮಾಡುವ ಬೆಂಕಿಯ ಕಿಡಿ ತಾಗಿದಾಗ ಮಾತ್ರ ಅರಿವಿನ ದೀಪ ಬೆಳಗುವುದು. ಅಂದರೆ ದೀಪವು ಸೇವೆ ಮತ್ತು ತ್ಯಾಗದ ಅರಿವನ್ನು ನಮಗೆ ತೋರಿಸಿ ನಮ್ಮ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವನ್ನು ಕರುಣಿಸುತ್ತದೆ.
ಎಲ್ಲೆಲ್ಲಿ ಲಕ್ಷ ದೀಪೋತ್ಸವ?: ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ, ಕುಂದಾಪುರದ ಕುಂದೇಶ್ವರ, ಕಾರ್ಕಳ ಶ್ರೀ ಲಕ್ಷ್ಮೀವೆಂಕಟರಮಣ, ಉಡುಪಿ ಶ್ರೀ ಲಕ್ಷ್ಮೀವೆಂಕಟರಮಣ, ಶೃಂಗೇರಿ ಶಾರದಾಂಬೆ, ಪುತ್ತೂರು ಮಹಾಲಿಂಗೇಶ್ವರ, ಮಂಗಳೂರು ಶ್ರೀ ವೆಂಕಟರಮಣ, ಬ್ರಹ್ಮಾವರ ಲಕ್ಷ್ಮೀ ವೆಂಕಟೇಶ, ಸಾಗರದ ವೆಂಕಟರಮಣ ದೇವಾಲಯಗಳಲ್ಲಿ ಲಕ್ಷದೀಪೋತ್ಸವ ನಡೆಯುತ್ತದೆ.
ಕುಕ್ಕೆ ಸುಬ್ರಹ್ಮಣ್ಯ ದೀಪೋತ್ಸವದ ವಿಶೇಷ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ದೇವರನ್ನು ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲದಲ್ಲಿ ಕುಳ್ಳಿರಿಸಿ ರಥಬೀದಿಯಿಂದ ಕಾಶಿಕಟ್ಟೆ ತನಕ ಬೆಳಗುವ ಲಕ್ಷ ಹಣತೆಗಳ ನಡುವೆ ಉತ್ಸವ ನಡೆಯುತ್ತದೆ. ಅಲ್ಲದೆ ವಿದ್ಯುದಲಂಕಾರದಿಂದ ದೇವಸ್ಥಾನ ವಿಶೇಷವಾಗಿ ಕಂಗೊಳಿಸುತ್ತದೆ.
(ಲೇಖಕರು ಅಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ)