ಧರ್ಮಜಾಗೃತಿಯ ಕೊಟ್ಟೂರೇಶ್ವರರು; ಫೆಬ್ರವರಿ 18ರಂದು ರಥೋತ್ಸವ

KOtturu Rathotsava 12 Feb 20
Published on

ಶ್ರೀ ಗುರು ಕೊಟ್ಟೂರೇಶ್ವರಸ್ವಾಮಿಯ ರಥೋತ್ಸವವು ಸಾಮಾಜಿಕ, ಧಾರ್ವಿುಕ ಜಾಗೃತಿಯ ಉತ್ಸವವಾಗಿ ಗುರುತಿಸಿಕೊಂಡಿದೆ. ಜಾತ್ಯತೀತ ನಿಲುವಿನಿಂದ ದೆಹಲಿಯ ಚಕ್ರವರ್ತಿ ಅಕ್ಬರ್ ಬಾದಷಹನಿಂದಲೂ ಗೌರವಿಸಲ್ಪಟ್ಟಿದ್ದ ಈ ಶರಣತತ್ವ ಪ್ರತಿಪಾದಕರ ಹೆಸರಿನಲ್ಲಿ ಇದೇ ಫೆ. 18ರಂದು ರಥೋತ್ಸವ ನಡೆಯಲಿದೆ. ತನ್ನಿಮಿತ್ತ ಬರಹವಿದು.

ಜನರಲ್ಲಿ ಧರ್ಮಜಾಗೃತಿ, ಭಕ್ತಿಯ ಸಂಸ್ಕಾರ, ಮೂಢನಂಬಿಕೆಗಳ ನಿಮೂಲನೆ, ಶರಣತತ್ತ್ವ ಪಾಲನೆ-ಬೋಧನೆಗಾಗಿ 16ನೇ ಶತಮಾನದಲ್ಲಿ ಅವತರಿಸಿದವರು ಪಂಚಗಣಾಧೀಶ್ವರರು. ಈ ಐವರಲ್ಲಿ ತಿಪ್ಪೇಸ್ವಾಮಿ ನಾಯಕನಹಟ್ಟಿಯಲ್ಲಿ, ಕೆಂಪೇಶ್ವರ ಹರಪನಹಳ್ಳಿಯಲ್ಲಿ, ಕೋಲಶಾಂತೇಶ್ವರ ಅರಸಿಕೇರೆಯಲ್ಲಿ, ಗೋಣಿಬಸವೇಶ್ವರ ಕೂಲಹಳ್ಳಿಯಲ್ಲಿ, ಶ್ರೀ ಗುರು ಕೊಟ್ಟೂರೇಶ್ವರ ಕೊಟ್ಟೂರಿನಲ್ಲಿ ನೆಲೆಸಿದರು. ನಾಡಿನ ಧರ್ಮಜಾಗೃತಿ ಕೇಂದ್ರವಾದ ಕೊಟ್ಟೂರು ಹಲವು ರಾಜರ ಆಳ್ವಿಕೆಗೆ ಒಳಪಟ್ಟಿತ್ತೆಂಬುದನ್ನು ಪಟ್ಟಣದ ಒಳ-ಹೊರಗಿರುವ ಐತಿಹಾಸಿಕ ಕುರುಹುಗಳು, ಶಾಸನಗಳು ಸಾರುತ್ತವೆ. ಇಷ್ಟೇ ಅಲ್ಲದೆ ಚಿತ್ರದುರ್ಗ- ದಾವಣಗೆರೆ ಪ್ರಾಂತದ ಜನತೆಯ ನಿಷ್ಪಕ್ಷಪಾತ ನ್ಯಾಯಚಾವಡಿಯೂ ಇದಾಗಿತ್ತು. ಕೊಟ್ಟೂರೇಶ್ವರರ ಪಾದಸ್ಪರ್ಶದಿಂದಾಗಿ ಭಕ್ತಿಯ, ಶರಣಸಂಸ್ಕೃತಿಯ ಕೇಂದ್ರವಾಯಿತು.

ಕೊಟ್ಟೂರೇಶ್ವರರು ಇಲ್ಲಿಗೆ ಆಗಮಿಸುವ ಪೂರ್ವದಲ್ಲಿ 16ನೇ ಶತಮಾನದಲ್ಲಿ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಸೂರಿನಿಂದ ಹೊರಟು, ಕೋಲಾರ ಜಿಲ್ಲೆಯ ಕೊಟ್ಟೂರಿನಲ್ಲಿ ಕೆಲವು ಕಾಲ ಧರ್ಮಪ್ರಚಾರ ಕೈಗೊಂಡರು.

ಅಲ್ಲಿಂದ ಯಡಿಯೂರು ತಲುಪಿ ತೋಂಟದ ಸಿದ್ಧಲಿಂಗಯತಿಗಳ ಶಿಷ್ಯರಾಗಿ ಜ್ಞಾನಸಂಪನ್ನರಾಗಿ ಚಾಮರಾಜನಗರ ಪ್ರಾಂತಕ್ಕೆ ಬಂದರು. ಆ ಬಳಿಕ ಸಾವಿರಾರು ಶಿಷ್ಯರೊಂದಿಗೆ ದಾರಿಯುದ್ದಕ್ಕೂ ಸಾಮಾಜಿಕ, ಧಾರ್ವಿುಕ ಜಾಗೃತಿ ಮೂಡಿಸುತ್ತ ಚನ್ನರಾಯಪಟ್ಟಣದ ಸಮೀಪದ ನುಗ್ಗೇಹಳ್ಳಿಗೆ ಬಂದು, ಅಲ್ಲಿಂದ ಹಂಪೆಗೆ ಆಗಮಿಸಿದರು. ಕೊಟ್ಟೂರು ತಲುಪುವ ಮೊದಲು ಕುಪ್ಪಿನಕೇರೆ ಆಂಜನೇಯನಿಗೆ ಲಿಂಗಧಾರಣೆ ಮಾಡಿದರು ಎಂಬ ಪ್ರತೀತಿಯೂ ಇದೆ.

ಭಕ್ತರೆಲ್ಲರೂ ಸಮಾನರು ಎಂಬ ಕೊಟ್ಟೂರೇಶ್ವರರ ಈ ಜಾತ್ಯತೀತ ನಿಲುವು ದೆಹಲಿಯ ಚಕ್ರವರ್ತಿ ಅಕ್ಬರ್ ಬಾದಷಹನಿಗೂ ತಲುಪಿದ್ದರಿಂದ ತನ್ನ ಭಕ್ತಿಯ ದ್ಯೋತಕವಾಗಿ ವಿಶೇಷ ದೂತನ ಮೂಲಕ ಮಣಿಮಂಚ, ರತ್ನಖಚಿತ ಖಡ್ಗವನ್ನು ಕಳುಹಿಸಿಕೊಟ್ಟಿದ್ದ.

ಕೊಟ್ಟೂರಿನ ಸುತ್ತಮುತ್ತ ಇದ್ದ ಹರಪನಹಳ್ಳಿ, ಜರ್ಮಲಿ, ಗುಡೇಕೋಟೆ ಪಾಳೆಗಾರರಿಂದ ಪೂಜಿಸಿಕೊಳ್ಳುತ್ತಿದ್ದ ಈ ಕೊಟ್ಟೂರೇಶ್ವರರು ಜೀವತಾವಧಿಯಲ್ಲಿ ಮಾಡಿದ ಪವಾಡ, ತೊಡೆದುಹಾಕಿದ ಮೌಢ್ಯತೆ, ಅಪಾರ. ಈ ಶರಣತತ್ವ ಪ್ರತಿಪಾದಕ ಶ್ರೀ ಗುರು ಕೊಟ್ಟೂರೇಶ್ವರಸ್ವಾಮಿಯ ರಥೋತ್ಸವವು ಇದೇ ಫೆ. 18ರಂದು ಜರುಗಲಿದೆ. ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವವು ಮೂಲಾನಕ್ಷತ್ರದಲ್ಲಿ ಜರುಗುವುದು ವಿಶೇಷ. ಅಲ್ಲದೆ ಕೊಟ್ಟೂರೇಶ್ವರ ಸ್ವಾಮಿಯನ್ನು ಭಕ್ತಿಯಿಂದ ಭಜಿಸಲು ಗಚ್ಚಿನಮಠವಿದೆ. ಮುಕ್ತಿಯ ಪ್ರಾರ್ಥನೆಗೆ ಮೂರಕಲ್ಲು ಮಠವಿದ್ದರೆ, ಸಂತಾನಪ್ರಾಪ್ತಿಗೆ ತೊಟ್ಟಿಲು ಮಠ, ಭಕ್ತರ ಇಷ್ಟಾರ್ಥಸಿದ್ಧಿಗೆ ಹೀರೆಮಠ ಇದೆ. ಕೊಟ್ಟೂರೇಶ್ವರ ಸ್ವಾಮಿಗೆ ನಾಲ್ಕು ಮಠಗಳಿರುವುದು ಗಮನಾರ್ಹ. ಸಮಸಮಾಜದ ನಿರ್ವಣದ ಕನಸು ಹೊತ್ತಿದ್ದ ಕೊಟ್ಟೂರೇಶ್ವರ ಸ್ವಾಮಿ ಇಂದಿಗೂ ರಥವೇರುವುದು ಹರಿಜನ ಮಹಿಳೆ ಆರತಿ ಬೆಳಗಿದ ನಂತರವೇ. ಇದು ಅನಾದಿಕಾಲದಿಂದಲೂ ತಪ್ಪದೆ ನಡೆದುಬಂದಿದೆ.

ಪುರಾಣಗಳಲ್ಲಿ ಕೊಟ್ಟೂರೇಶ್ವರರು

ತುಮಕೂರು ಪ್ರಾಂತ್ಯದ ಕವಿ ಬಸವಲಿಂಗ ರಚಿಸಿರುವ ಶ್ರೀ ಗುರು ಕೊಟ್ಟೂರು ಬಸವೇಶ್ವರ ಚರಿತ್ರೆ, ಗುರುಸಿದ್ಧನಂಜೇಶ ಬರೆದಿರುವ ಗುರುರಾಜ ಚರಿತ್ರೆ, ಸಜ್ಜೆಯ ಸಿದ್ಧಲಿಂಗಕವಿಯ ಮಳೆರಾಜ ಚರಿತ್ರೆ, ಮರುಳಸಿದ್ಧೇಶ್ವರನ ಗುರುಲಿಂಗ ಜಂಗಮ ಚಾರಿತ್ರ್ಯ ಚನ್ನಬಸವದೇವರ ಎಮ್ಮೆ ಬಸವನ ಕಾಲಜ್ಞಾನಗಳು, ಸಿದ್ಧರಾಮನ ಕೊಟ್ಟೂರಯ್ಯನ ಕಂದ, ವಿರೂಪಾಕ್ಷ ಪಂಡಿತರ ಚನ್ನಬಸವ ಪುರಾಣಗಳಲ್ಲಷ್ಟೇ ಅಲ್ಲದೆ ಜಾನಪದ ಸಾಹಿತ್ಯದಲ್ಲಿ ಕೊಟ್ಟೂರೇಶ್ವರರ ಚರಿತ್ರೆ ಜೀವಂತವಾಗಿವೆ.

ಕೊಟ್ಟೂರೇಶ್ವರ ಸ್ವಾಮಿ ಪವಾಡ

ಕೊಟ್ಟೂರೇಶ್ವರರನ್ನು ನೆನೆಯುತ್ತ, ಭಜನೆ ಮಾಡುತ್ತ, ನೂರಾರು ಕಿ.ಮೀ. ದೂರದಿಂದ ಮಕ್ಕಳನ್ನು ಹೆಗಲಮೇಲೆ ಹೊತ್ತು ನಡೆಯುವ ಹೆತ್ತವರು, ಕಣ್ಣಿದ್ದವರನ್ನು ಕೈಹಿಡಿದು ಹೆಜ್ಜೆ ಹಾಕುವ ಅಂಧರು, ಅಂಗವಿಕಲರು, ವೃದ್ಧರು, ಸಾವಧಾನವಾಗಿ ನಡೆಯುವ ಗರ್ಭಿಣಿಯರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವಕ್ಕೆ ನದಿಯಂತೆ ಹರಿದುಬರುತ್ತಾರೆ. ರಥೋತ್ಸವಕ್ಕೆ ಮೂರು ನಾಲ್ಕು ದಿನಗಳಿರುವಂತೆಯೇ ದಾವಣಗೆರೆ, ಹರಿಹರ, ಹಾವೇರಿ, ರಾಣಿಬೆನ್ನೂರು, ಚಿತ್ರದುರ್ಗ, ಮುಂಡರಗಿ, ಗದಗ - ಹೀಗೆ ನೂರಾರು ಊರುಗಳಿಂದ ಪಾದಯಾತ್ರೆ ಬರುವವರಿದ್ದಾರೆ. ಹಗಲು, ರಾತ್ರಿ, ಬೆಳಗಿನ ಜಾವವಾದರೂ ಸರಿ, ಕಾದು ಅವರನ್ನು ತಮ್ಮ ಮನೆಗಳಿಗೆ ಕರೆದು ಭಕ್ತರು ಸತ್ಕರಿಸುತ್ತಾರೆ. ಆಯಾಸವಾಗಿದ್ದರೆ ತಂಗಲು ವ್ಯವಸ್ಥೆ ಮಾಡುವ ಗ್ರಾಮಸ್ಥರು, ನಡೆದು ಪಾದಗಳಲ್ಲಿ ಬೊಬ್ಬೆ ಬಂದವರ ಪಾದಗಳಿಗೆ ಚಿಕಿತ್ಸೆ ಮಾಡುತ್ತಾರೆ. ಕಾಯಿಲೆಯಿಂದ ಬಳಲುವ ಭಕ್ತರಿಗೆ ವೈದ್ಯರು ಹಗಲು ರಾತ್ರಿ ಸೇವೆ ಮಾಡುತ್ತಾರೆ. ಎಲ್ಲವೂ ಕೊಟ್ಟೂರೇಶ್ವರ ಸ್ವಾಮಿ ಹೆಸರಿನಲ್ಲಿ ನಡೆಯುತ್ತವೆ. ಅಲ್ಲಲ್ಲಿ ಮೊಬೈಲ್ ಆಸ್ಪತ್ರೆಗಳೇ ತೆರೆದಿರುತ್ತವೆ. ಕೊಟ್ಟೂರು ಬಂದು ಸೇರುವ ಎಲ್ಲ ದಾರಿಗಳ ಮಧ್ಯದ ಊರುಗಳಲ್ಲಿ ಪಾದಯಾತ್ರಿಗಳಿಗಾಗಿ ಪಾನಕ, ಹಣ್ಣು, ಚಿತ್ರಾನ್ನ, ಉಪ್ಪಿಟ್ಟು ಇತ್ಯಾದಿ ಹಲವಾರು ತಿಂಡಿತಿನಸುಗಳು ಸಿದ್ಧವಾಗಿರುತ್ತವೆ. ಇಲ್ಲಿ ಮತ, ವರ್ಗ, ವರ್ಣ ಯಾವುದೂ ಭೇದವಿಲ್ಲ. ಕೊಟ್ಟೂರು ಪಟ್ಟಣ ಕೂಡ ಪಾದಯಾತ್ರಿಗಳ ಸೇವೆಗಾಗಿ ಟೊಂಕ ಕಟ್ಟಿ ನಿಂತಿರುತ್ತದೆ. ಯಾವುದೇ ಮನೆಗೆ ಹೋದರೂ, ಬಂಧುಗಳಂತೆ ಆಹ್ವಾನಿಸುತ್ತಾರೆ. ಸ್ನೇಹಿತರಂತೆ ಸತ್ಕರಿಸುತ್ತಾರೆ. ಕೊಟ್ಟೂರೇಶ್ವರ ಸ್ವಾಮಿಯ ಪವಾಡಗಳನ್ನು ನೋಡಿದವರಿಲ್ಲ. ಆದರೆ ನಾಡಿನ ನಾನಾ ಮೂಲೆಗಳಿಂದ ಹರಿದುಬರುವ ಪಾದಯಾತ್ರಿಗಳನ್ನು ಹಾಗೂ ಅವರನ್ನು ಸತ್ಕರಿಸುವ ಭಕ್ತರನ್ನು ಕಂಡರೆ ಇದು ಕೊಟ್ಟೂರೇಶ್ವರರ ಪವಾಡವೇ ಎನಿಸುತ್ತದೆ.

ರಥೋತ್ಸವ

ರಥೋತ್ಸವಕ್ಕೆ ಐದು ದಿವಸ ಇರುವಾಗಲೇ ಪ್ರತಿ ರಾತ್ರಿ ಮಠದಲ್ಲಿ ಉತ್ಸಾವಾದಿಗಳು ನಡೆಯುವುದರಿಂದ ಸಣ್ಣದಾಗಿ ಜಾತ್ರೆಯೇ ನಡೆಯುತ್ತದೆ. ಬೆಳ್ಳಿರಥದಲ್ಲಿ ಫೆ. 14ರಂದು ನಾಗರವಾಹನೋತ್ಸವ, 15ರಂದು ನವಿಲು ವಾಹನೋತ್ಸವ, 16ರಂದು ಗಜವಾಹನೋತ್ಸವ, 17ರಂದು ವೃಷಭ ವಾಹನೋತ್ಸವಗಳು ಜರುಗುತ್ತವೆ. ಪ್ರತಿ ರಾತ್ರಿ ಸಂಭ್ರಮ ಸಡಗರದಿಂದ ಸಾವಿರಾರು ಭಕ್ತರು ಪಾಲ್ಗೊಂಡು ಸ್ವಾಮಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುವ ಪರಿ ಕಣ್ಣಿಗೆ ಹರ್ಷವನ್ನುಂಟುಮಾಡುತ್ತದೆ.

| ಉಜ್ಜಿನಿ ರುದ್ರಪ್ಪ ಕೊಟ್ಟೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net