

ಶತಮಾನಗಳ ಹೋರಾಟದ ಬಳಿಕ ಅಯೋಧ್ಯೆಯಲ್ಲಿ ಬಾಲರಾಮನ ಭವ್ಯ ಮಂದಿರ ನಿರ್ಮಾಣಗೊಂಡಿದೆ. ಆವರಣದಲ್ಲಿನ ಇತರ ಮಂದಿರಗಳ ನಿರ್ಮಾಣ ಕಾರ್ಯವೂ ಇತ್ತೀಚೆಗೆ ಪೂರ್ಣಗೊಂಡಿದ್ದು, ಈಗ ಮತ್ತೊಂದು ಮಹತ್ವದ ಘಟ್ಟಕ್ಕೆ ಅಯೋಧ್ಯೆ ಸಾಕ್ಷಿಯಾಗಲಿದೆ. ನವೆಂಬರ್ 25ರಂದು ಮಂದಿರದ ಕಳಶದ ಮೇಲೆ ಧ್ವಜಸ್ಥಾಪನೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದಾರೆ. ಅಂದು 7 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಈ ಸಂಭ್ರಮವನ್ನು ಕಣ್ತುಂಬಿಕೊಂಡು, ಬಾಲರಾಮನ ದರ್ಶನ ಪಡೆಯಲಿದ್ದಾರೆ.
ಅಯೋಧ್ಯೆ ಶೀಘ್ರದಲ್ಲೇ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ವಣಗೊಂಡು 2024ರ ಜನವರಿ 22ರಂದು ಉದ್ಘಾಟನೆಗೊಂಡಿರುವ ಬಾಲರಾಮನ ಮಂದಿರದ ಶಿಖರದ ಮೇಲೆ ಭವ್ಯ ಧರ್ಮಧ್ವಜ ಸ್ಥಾಪನೆಯಾಗಲಿದೆ. ಇದೇ ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಈ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಉತ್ತರಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದೇವಾಲಯದ 70 ಎಕರೆ ಸಂಕೀರ್ಣದಲ್ಲಿರುವ ಶೇಷವತಾರ ದೇವಾಲಯ, ಸಪ್ತ ಮಂಟಪ ಸೇರಿ ಎಲ್ಲ ದೇವಾಲಯಗಳಿಗೂ ಪ್ರಧಾನಿ ಭೇಟಿ ನೀಡಲಿದ್ದಾರೆ.
ದೇಗುಲದ ಒಳಭಾಗದಲ್ಲಿ 5ರಿಂದ 6 ಸಾವಿರ ಜನರು ಏಕಕಾಲದಲ್ಲಿ ಸೇರಬಹುದು. 22 ಅಡಿಯ ಎತ್ತರದ ಮೇಲೆ ಧರ್ಮ ಮತ್ತು ನಂಬಿಕೆಯ ಧ್ವಜ ರಾರಾಜಿಸಲಿದೆ. ರಾಮಮಂದಿರ ಮಾತ್ರವಲ್ಲದೆ ಅಕ್ಟೋಬರ್ ಕೊನೆಯ ವಾರದಲ್ಲಿ ಕಾಮಗಾರಿ ಪೂರ್ಣಗೊಂಡಿರುವ ಮಹದೇವ, ಗಣೇಶ, ಹನುಮಾನ್, ಸೂರ್ಯದೇವ್, ಭಗವತಿ ಮಾತೆ, ಅನ್ನಪೂರ್ಣೆ, ಶೇಷಾವತಾರ ಮಂದಿರದ ಮೇಲೂ ಧ್ವಜ ಸ್ಥಾಪನೆಯಾಗಲಿದೆ. ಒಟ್ಟು ಏಳು ಮಂದಿರಗಳ ಮೇಲೆ ಧ್ವಜ ಸ್ಥಾಪನೆಯಾಗಲಿದೆ. ಮುಖ್ಯ ಮಂದಿರದ ಮೇಲೆ ಸ್ಥಾಪನೆಯಾಗಲಿರುವ ಧ್ವಜ 22 ಅಡಿ ಎತ್ತರದಲ್ಲಿ ಇರಲಿದ್ದು, ಧ್ವಜವನ್ನು ರೇಷ್ಮೆ ವಸ್ತ್ರದಿಂದ ತಯಾರಿಸಲಾಗಿದೆ. ಎರಡು ಧ್ವಜಗಳು ಗುಜರಾತಿನ ಅಹಮದಾಬಾದ್ನಲ್ಲಿ ಸಿದ್ಧಗೊಂಡು, ಅಯೋಧ್ಯೆ ತಲುಪಿವೆ.
ನ.21ರಿಂದ 5 ದಿನಗಳ ವೈದಿಕ ಅನುಷ್ಠಾನ ನಡೆಯಲಿದೆ. ಅಯೋಧ್ಯೆ, ಕಾಶಿ ಹಾಗೂ ದಕ್ಷಿಣ ಭಾರತದ 108 ವೇದ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. ಧ್ವಜಾರೋಹಣದ ಧಾರ್ವಿುಕ ವಿಧಿಗಳು ಖ್ಯಾತ ವಿದ್ವಾಂಸ ಪಂಡಿತ್ ಗಣೇಶ್ವರ ಶಾಸ್ತ್ರಿ ಅವರ ನೇತೃತ್ವದಲ್ಲಿ ನಡೆಯಲಿವೆ. ಬೆಳಗ್ಗೆ 10.30ರಿಂದ 12.30ರ ಶುಭ ಮುಹೂರ್ತದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಎರಡು ಗಂಟೆಗಳ ಕಾಲ ಭಕ್ತರಿಗೆ ರಾಮಲಲ್ಲಾನ ದರ್ಶನ ಇರುವುದಿಲ್ಲ. ಕಾರ್ಯಕ್ರಮದ ಬಳಿಕ ದರ್ಶನ ಪುನರಾರಂಭಗೊಳ್ಳಲಿದೆ. ಎಂಟು ಸಾವಿರ ಅತಿಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು 7 ಲಕ್ಷಕ್ಕೂ ಅಧಿಕ ಭಕ್ತರು ರಾಮಲಲ್ಲಾನ ದರ್ಶನ ಮಾಡಲಿರುವುದರಿಂದ, ಅಯೋಧ್ಯೆಯಲ್ಲಿ ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪಾಸ್ಗಳನ್ನು ಆಧಾರ್ಗೆ ಲಿಂಕ್ ಮಾಡಲಾಗಿದ್ದು, ಇದರಿಂದ ಪಾಸ್ನ ದುರುಪಯೋಗ ತಪ್ಪಲಿದೆ.
2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಮಂದಿರವನ್ನು ಉದ್ಘಾಟಿಸಿದಾಗ, ಗರ್ಭಗುಡಿಯ ಕಾಮಗಾರಿಯಷ್ಟೇ ಪೂರ್ಣಗೊಂಡಿತ್ತು. ಈಗ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿದ್ದು, ನವೆಂಬರ್ 25ರ ಹೊತ್ತಿಗೆ ಪೂರ್ಣಗೊಂಡಿರುವ ರಾಮಮಂದಿರ ಮತ್ತು ಆವರಣವನ್ನು ಕಾಣಬಹುದು. 2500 ಕಾರ್ವಿುಕರು ಮತ್ತು ಇಂಜಿನಿಯರ್ಗಳು ಹಗಲು-ರಾತ್ರಿ ಕೆಲಸ ಮಾಡಿ, ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ. ಧ್ವಜ ಸ್ಥಾಪನೆಯ ಕಾರ್ಯಕ್ರಮ ಮುಗಿದ ಮರುದಿನದಿಂದ ಅಂದರೆ ನವೆಂಬರ್ 26ರಿಂದ ಶ್ರೀರಾಮ ಮಂದಿರದ 70 ಎಕರೆ ಪ್ರದೇಶವು ದರ್ಶನಕ್ಕಾಗಿ ಭಕ್ತರಿಗೆ ತೆರೆದುಕೊಳ್ಳಲಿದೆ. ರಾಮಲಲ್ಲಾ ಮಂದಿರ, ಆವರಣದ ಇತರ ಆರು ಮಂದಿರ, ಸಪ್ತ ಮಂಟಪಂ, ಕುಬೇರ ನವರತ್ನ ಟೀಲಾದ ದರ್ಶನ ಭಕ್ತರಿಗೆ ಲಭ್ಯವಾಗಲಿದೆ.
ಶ್ರೀರಾಮಲಲ್ಲಾನ ಮಂದಿರ ಲೋಕಾರ್ಪಣೆಯಾದ (2024ರ ಜನವರಿ 22) ಬಳಿಕ ಅಯೋಧ್ಯೆಯ ಚಿತ್ರಣವೇ ಬದಲಾಗಿದೆ. ಅತ್ಯಾಧುನಿಕ ರೈಲ್ವೆ ನಿಲ್ದಾಣ ಜತೆಗೆ ಹೊಸ ವಿಮಾನ ನಿಲ್ದಾಣದ ಮೂಲಕ ವಾಯು ಸಂಪರ್ಕಕ್ಕೂ ತೆರೆದುಕೊಂಡಿದೆ. ಬೆಂಗಳೂರು, ಕೋಲ್ಕತ್ತ, ಅಹಮದಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳ ಮೂಲಕ ಅಯೋಧ್ಯೆಗೆ ನೇರ ವಿಮಾನ ಸಂಪರ್ಕವಿದೆ. ಸುಸಜ್ಜಿತ ಬಸ್ ನಿಲ್ದಾಣ ಕೂಡ ಸಿದ್ಧಗೊಂಡಿದೆ. ಭಾರತದ ಪ್ರಾಚೀನ ಧಾರ್ವಿುಕ ನಗರಿ, ತನ್ನ ಗತವೈಭವದತ್ತ ಮರಳುತ್ತಿದೆ ಎಂಬ ಸಂತಸ, ಉಲ್ಲಾಸ ಅಯೋಧ್ಯೆಗೆ ಬರುತ್ತಿರುವ ಪ್ರತಿಯೊಬ್ಬ ರಾಮಭಕ್ತನಲ್ಲೂ ಎದ್ದುಕಾಣುತ್ತಿದೆ. ಧಾರ್ವಿುಕ, ಆಧ್ಯಾತ್ಮಿಕ, ಪ್ರವಾಸಿ, ಸಾಮಾಜಿಕ ಸಾಮರಸ್ಯದ ಕೇಂದ್ರವಾಗಿ ಅಯೋಧ್ಯೆ ಜಾಗತಿಕವಾಗಿ ಪ್ರವಾಸಿಗರನ್ನು ಸೆಳೆಯಲು ಸಜ್ಜಾಗಿದ್ದು, ಮಹತ್ವದ ಯೋಜನೆಗಳು ಅಭಿವೃದ್ಧಿಯ ದಿಕ್ಕನ್ನೇ ಬದಲಿಸಲಿವೆ. ಸದ್ಯ, 30 ಸಾವಿರ ಕೋಟಿ ರೂಪಾಯಿ ಮೊತ್ತದ 178 ಯೋಜನೆಗಳು ಪ್ರಗತಿಯಲ್ಲಿವೆ. ಇದರಲ್ಲಿ ಚೌರಾಸಿ ಕೋಸಿ ಪರಿಕ್ರಮ ಮಾರ್ಗದ ಅಗಲೀಕರಣಕ್ಕೆ ರೂ. 6,657 ಕೋಟಿ ಮತ್ತು 67 ಕಿಮೀ ಉದ್ದದ ಅಯೋಧ್ಯೆ ಬೈಪಾಸ್ ನಿರ್ವಣಕ್ಕೆ ರೂ. 5,924 ಕೋಟಿ ಮೀಸಲಿಡಲಾಗಿದೆ. ಹಿರಿಯ ಅಧಿಕಾರಿಗಳ ಪ್ರಕಾರ ಮುಂದಿನ 2-3 ವರ್ಷಗಳಲ್ಲಿ ಅಯೋಧ್ಯೆ ದೇಶದ ಆಧ್ಯಾತ್ಮಿಕ ರಾಜಧಾನಿಯಾಗಿ ಮಾರ್ಪಡಲಿದೆ. ಅಯೋಧ್ಯೆಗೆ ಸಂಪರ್ಕ ಕಲ್ಪಿಸಲು ನಾಲ್ಕು ಹಾಗೂ ಆರುಪಥದ ಹೆದ್ದಾರಿ, ವಿಶ್ವದರ್ಜೆಯ ವಿಮಾನ ನಿಲ್ದಾಣ, ಆಧುನಿಕ ರೈಲ್ವೆ ನಿಲ್ದಾಣದಿಂದ ಅಯೋಧ್ಯೆಯು ಅಧ್ಯಾತ್ಮಿಕ ಪುನರು ಜ್ಜೀವನದ ಜೊತೆಗೆ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ.
ಅಯೋಧ್ಯೆ ಬಾಲರಾಮನ ಮಂದಿರಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. 2025ರ ಜನವರಿಯಿಂದ ಜೂನ್ವರೆಗಿನ ಆರು ತಿಂಗಳಲ್ಲೇ 23.82 ಕೋಟಿ ಭಕ್ತರು ಭೇಟಿ ನೀಡಿ, ದರ್ಶನ ಪಡೆದುಕೊಂಡಿದ್ದಾರೆ. ಮಾತ್ರವಲ್ಲ, ಅಕ್ಟೋಬರ್ 19ರಂದು ದೀಪಾವಳಿ ನಿಮಿತ್ತ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಒಂದೇ ದಿನ 26 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ವಿದೇಶಿ ಭಕ್ತರ ಸಂಖ್ಯೆಯೂ ಏರಿಕೆಯಾಗಿದೆ.
1.ಕೇಸರಿ ವರ್ಣದ ಧ್ವಜ ರಾಮರಾಜ್ಯದ ಪರಂಪರೆಯನ್ನು ಬಿಂಬಿಸಲಿದೆ. ಅಲ್ಲದೆ, ಇದು ತ್ಯಾಗ, ಶಕ್ತಿ ಮತ್ತು ವೀರತೆಯ ಪ್ರತೀಕವಾಗಿದೆ.
2. ಓಂ ಮತ್ತು ಸೂರ್ಯನ ಚಿತ್ರವನ್ನು ಒಳಗೊಂಡಿದೆ.
3.ವಾಲ್ಮೀಕಿ ರಾಮಾಯಣ ದಲ್ಲಿ ಪ್ರಸ್ತಾಪಿಸ ಲಾಗಿರುವ ರಾಜವೃಕ್ಷ ಕೋವಿದಾರನ ಚಿತ್ರವನ್ನೂ ಧ್ವಜ ಒಳಗೊಂಡಿದೆ.
4. ಧ್ವಜದ ತೂಕ 11 ಕೆಜಿ.
5. ಭಾರಿ ಗಾಳಿ, ಮಳೆಗೂ ಧ್ವಜಕ್ಕೆ ಯಾವುದೇ ಹಾನಿಯಾಗುವಿದಿಲ್ಲ. 360 ಡಿಗ್ರಿ ಹಾರಾಡಲಿದೆ.
6. ಗುಜರಾತಿನ ಅಹಮ ದಾಬಾದ್ನಲ್ಲಿ ರೇಷ್ಮೆ ವಸ್ತ್ರ ಮತ್ತು ಪ್ಯಾರಾಶೂಟ್ ಫ್ಯಾಬ್ರಿಕ್ನಿಂದ ಧ್ವಜ ತಯಾರಿಸಲಾಗಿದೆ. ಧ್ವಜ ಆರೋಹಣಕ್ಕೆ ನೈಲಾನ್ ಹಗ್ಗವನ್ನು ಬಳಸಲಾಗುತ್ತದೆ.
7. ಧ್ವಜಸ್ಥಾಪನೆಯ ಈ ಕಾರ್ಯಕ್ರಮ ವಿವಾಹ ಪಂಚಮಿಯಂದು ನಡೆಯಲಿದೆ. ವಿವಾಹ ಪಂಚಮಿಯಂದು ಭಗವಾನ ಶ್ರೀರಾಮಚಂದ್ರ ಮತ್ತು ಸೀತಾಮಾತೆಯ ವಿವಾಹೋತ್ಸವ ಆಚರಿಸಲಾಗುತ್ತದೆ. ಹಾಗಾಗಿ, ಈ ಬಾರಿ ಅಯೋಧ್ಯೆಯಲ್ಲಿ ಸಂಭ್ರಮ ಇಮ್ಮಡಿಗೊಂಡಿದೆ.
ಮುಖ್ಯ ಮಂದಿರ ಸೇರಿ ಎಲ್ಲ ಮಂದಿರಗಳ ಮೇಲಿನ ಧ್ವಜವನ್ನು ವರ್ಷದಲ್ಲಿ 2 ಬಾರಿ ಬದಲಿಸಲಾಗುತ್ತದೆ. ಚೈತ್ರ ನವರಾತ್ರಿ ಉತ್ಸವ (ಏಪ್ರಿಲ್-ಮೇ) ಮತ್ತು ಶಾರದಾ ನವರಾತ್ರಿ ಉತ್ಸವ (ಸೆಪ್ಟೆಂಬರ್-ಅಕ್ಟೋಬರ್) ಸಂದರ್ಭ ದಲ್ಲಿ ಧ್ವಜ ಬದಲಾವಣೆ ಮಾಡಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಡಾ.ಅನಿಲ್ ಮಿಶ್ರ ಹೇಳಿದ್ದಾರೆ.
ದೇಶದ ಪ್ರಮುಖ ಸಾಧು-ಸಂತರು, ಮಹಂತರು, ಉದ್ಯಮಿಗಳು, ಬಿಜೆಪಿ ನಾಯಕರು, ಚಿತ್ರನಟರು, ಗಾಯಕರು, ಕಲಾವಿದರು ಸೇರಿದಂತೆ ಸಮಾಜದ ವಿವಿಧ ವಲಯದ 8 ಸಾವಿರ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಅತಿಥಿಗಳ ವಾಸ್ತವ್ಯಕ್ಕೆ ಮಂದಿರ ಟ್ರಸ್ಟ್ 3 ಸಾವಿರ ಹೋಟೆಲ್, ಅತಿಥಿಗೃಹ, ಹೋಮ್ಸ್ಟೇಗಳನ್ನು ಕಾಯ್ದಿರಿಸಿದೆ.
ಸನಾತನ ಸಂಸ್ಕೃತಿಯಲ್ಲಿ ಧರ್ಮಧ್ವಜಕ್ಕೆ ತುಂಬ ಪ್ರಾಮುಖ್ಯವಿದೆ ಮತ್ತು ಎಲ್ಲ ದೇವತೆಗಳಿಗೂ ಧ್ವಜವಿದೆ. ಧ್ವಜವು ವಿಜಯ ಹಾಗೂ ಪರಾಕ್ರಮದ ಸಂಕೇತ. ಹೀಗಿರುವಾಗ ‘ರಾಮೋ ವಿಗ್ರಹವಾನ ಧರ್ಮಃ’ ಎಂಬ ಪ್ರಸಿದ್ಧ ಸೂಕ್ತಿಯಂತೆ ಸ್ವಯಂ ಧರ್ಮಸ್ವರೂಪನೇ ಆಗಿರುವ ಶ್ರೀರಾಮಚಂದ್ರನ ಭವ್ಯ ದಿವ್ಯ ದೇಗುಲದ ಮೇಲೆ ಧರ್ಮದ ಧ್ವಜ ಹಾರಿಸುವುದು ಅತ್ಯಂತ ಸೂಕ್ತವಾಗಿರುತ್ತದೆ. ಇನ್ನಾದರೂ ಈ ಧರ್ಮಧ್ವಜದ ಆರೋಹಣದ ಫಲವಾಗಿ ನಮ್ಮೆಲ್ಲರ ಹೃದಯಗಳಲ್ಲಿ ವಿಜಯ ಮತ್ತು ಸಾಹಸಗಳು ಮನೆ ಮಾಡಲಿ.
| ಭರತರ್ಷಿ ಸಂಸ್ಕೃತಿ ಚಿಂತಕರು
ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಸಾರ್ವಜನಿಕರಿಂದ 3 ಸಾವಿರ ಕೋಟಿ ರೂ. ಹೆಚ್ಚು ಹಣ ದೇಣಿಗೆ ಬಂದಿದೆ ಎಂದಿದೆ ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ. ರಾಮ ಮಂದಿರ ನಿರ್ಮಾಣ ಯೋಜನೆಯ ಒಟ್ಟು ವೆಚ್ಚ 1800 ಕೋಟಿ ರೂ. ಭಕ್ತರಿಂದ 3 ಸಾವಿರ ಕೋಟಿ ರೂ. ಬಂದಿದೆ. 2022ರಲ್ಲಿ ಧನಸಹಾಯಕ್ಕೆ ಅಭಿಯಾನ ಆರಂಭವಾದಾಗಿನಿಂದ ದೇಶದಾದ್ಯಂತ ಇರುವ ಭಕ್ತರು ದೇಣಿಗೆ ನೀಡಿದ್ದಾರೆ. ಎಲ್ಲ ದಾನಿಗಳನ್ನು ನ.25ರ ಧ್ವಜಾ ರೋಹಣ ಕಾರ್ಯಕ್ರಮಕ್ಕೆ ಆಹ್ವಾನಿಸ ಲಾಗುವುದು ಎಂದು ಮಿಶ್ರಾ ಹೇಳಿದ್ದಾರೆ.