ಸ್ವಾತಂತ್ರ್ಯದ ನೈಜ ಅರ್ಥ

Freedom
Freedom
Published on

ನಿನ್ನೆಯಷ್ಟೇ ನಾವು ದೇಶಾದ್ಯಂತ ಬಹಳ ಸಂಭ್ರಮ, ಸಡಗರದಿಂದ ಸ್ವಾತಂತ್ರ್ಯೋತ್ಸವ ಆಚರಿಸಿದೆವು. ಎಲ್ಲರಲ್ಲೂ ದೇಶ ಭಕ್ತಿ, ದೇಶ ಪ್ರೇಮ ಒಡಮೂಡಿತ್ತು. ಭಾರತಕ್ಕೆ 1947ರ ಆ. 15ರಂದು ಸ್ವಾತಂತ್ರ್ಯ ಸಿಕ್ಕಾಗ, ಇಡೀ ದೇಶವೇ ಸಂಭ್ರಮದಲ್ಲಿ ತೇಲಿತ್ತು. ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಾಡಿತ್ತು. ಬ್ರಿಟಿಷರ ಆಡಳಿತ ಕೊನೆಗೊಂಡು, ನಾವು ಸರ್ವಸ್ವತಂತ್ರರಾದೆವು ಎಂಬ ಮನೋಭಾವ ಮೂಡಿತ್ತು. ಆದರೆ, ಮಹಾತ್ಮ ಗಾಂಧೀಜಿಯವರ ದೃಷ್ಟಿಯಲ್ಲಿ ಅದು ಕೇವಲ ಒಂದು ಘಟನೆಯಷ್ಟೇ ಆಗಿತ್ತು. ಸ್ವಾತಂತ್ರ್ಯ ಎಂದರೆ ಬ್ರಿಟಿಷರ ಆಡಳಿತದಿಂದ ಬಿಡುಗಡೆ ಪಡೆಯುವುದಷ್ಟೇ ಅಲ್ಲ, ಬದಲಾಗಿ ದೇಶದ ಕಟ್ಟಕಡೆಯ ವ್ಯಕ್ತಿಗೂ ಗೌರವದ, ಸ್ವಾವಲಂಬನೆಯ, ಭಯಮುಕ್ತ ಬದುಕನ್ನು ಕಲ್ಪಿಸಿಕೊಡುವುದು ಎಂಬುದು ಗಾಂಧೀಜಿ ಆಶಯವಾಗಿತ್ತು.

ಬ್ರಿಟಿಷರ ನಿರ್ಗಮನದ ವೇಳೆಗೆ ದೇಶದ ಸಂಪತ್ತು ಬಹಳಷ್ಟು ಕೊಳ್ಳೆಯಾಗಿತ್ತು. ಭಾರತ ಆಹಾರ ಧಾನ್ಯಗಳಿಗಾಗಿ ಬೇರೆ ದೇಶಗಳನ್ನು ಅವಲಂಬಿಸಬೇಕಾದ ಸ್ಥಿತಿಯಿತ್ತು. ಕೈಗಾರಿಕಾ ಕ್ಷೇತ್ರ ತೀರಾ ಹಿಂದುಳಿದಿತ್ತು. ನಿರುದ್ಯೋಗ, ಅನಕ್ಷರತೆ, ಮೂಢನಂಬಿಕೆ, ಅಸ್ಪಶ್ಯತೆ, ಲಿಂಗಪಕ್ಷಪಾತ, ಜಾತೀಯತೆ ಮುಂತಾದವು ಸಮಾಜವನ್ನು ಆವರಿಸಿಕೊಂಡಿದ್ದವು. ಇಂತಹ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸುವುದು ಬಹಳ ಕಷ್ಟಕರವಾಗಿತ್ತು.
ಯಾವುದೇ ದೇಶವು ಸರ್ವಾಂಗೀಣ ಅಭಿವೃದ್ಧಿ ಹೊಂದಿದರೆ ಮಾತ್ರ ಜಗತ್ತಿನ ಭೂಪಟದಲ್ಲಿ ಪ್ರಬಲ ಹಾಗೂ ಸಮೃದ್ಧ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯ. ನಿಜವಾದ ಸ್ವಾತಂತ್ರ್ಯ ಎಂಬುದು ಕೇವಲ ರಾಜಕೀಯ ಮುಕ್ತಿಯಲ್ಲ; ಅದು ಶಿಕ್ಷಣ, ವ್ಯಾಪಾರ ವಹಿವಾಟು, ಕೃಷಿ, ಆರೋಗ್ಯ, ಸಾರಿಗೆ, ಸಂಪರ್ಕ, ವಿಜ್ಞಾನ ಹಾಗೂ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸರ್ವತೋಮುಖ ಅಭಿವೃದ್ಧಿ ಹೊಂದುವುದಾಗಿದೆ. ಜತೆಗೆ ಆಂತರಿಕ ಸ್ವಚ್ಛತೆ, ಆರ್ಥಿಕ ಶಿಸ್ತು, ಸ್ವಾವಲಂಬನೆ, ಗ್ರಾಮಗಳ ಸಮಗ್ರ ಏಳಿಗೆಯಲ್ಲಿ ಅಡಗಿದೆ. ಜಿಡಿಪಿ ಹೆಚ್ಚಳ, ಕಟ್ಟಡಗಳ ನಿರ್ಮಾಣ ಮಾತ್ರವೇ ದೇಶದ ಅಭಿವೃದ್ಧಿಯಲ್ಲ. ದೇಶದ ಕಟ್ಟಕಡೆಯ ವ್ಯಕ್ತಿಯೂ ಎಲ್ಲ ಸೌಲಭ್ಯಗಳನ್ನು ಪಡೆದಾಗ, ನಾಗರಿಕರ ಸರ್ವಾಂಗೀಣ ವಿಕಾಸವಾದಾಗ ರಾಷ್ಟ್ರದ ನೈಜ ಪ್ರಗತಿಯಾಗುತ್ತದೆ.
ಸ್ವಾತಂತ್ರ್ಯ ಪಡೆದ ಬಳಿಕ ಶೂನ್ಯದಿಂದ ಆರಂಭವಾದ ಭಾರತದ ಪಯಣ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸ್ಥಿತಿಗೆ ತಲುಪುತ್ತಿದೆ. ಬಾಹ್ಯಾಕಾಶ, ಡಿಜಿಟಲ್ ತಂತ್ರಜ್ಞಾನ, ಔಷಧೋದ್ಯಮ, ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಮೂಲ ಸೌಕರ್ಯದಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಬಡತನ, ನಿರುದ್ಯೋಗ, ಸಾಮಾಜಿಕ ಅಸಮಾನತೆ, ಗ್ರಾಮೀಣ ಹಿಂದುಳಿಯುವಿಕೆ, ಆರೋಗ್ಯ, ಪರಿಸರ ನಾಶ, ಭಯೋತ್ಪಾದನೆಯಂಥ ಸವಾಲುಗಳು ಇನ್ನೂ ಇವೆ. ಆದ್ದರಿಂದ ಅಭಿವೃದ್ಧಿ ಕೇವಲ ಸರ್ಕಾರದಿಂದ ಸಾಧ್ಯವಾಗದು. "ನಾವೂ ಮಾಡೋಣ' ಎಂಬ ಮನೋಭಾವದಿಂದ ಸಾಧ್ಯವಾಗುತ್ತದೆ.
ಗ್ರಾಮೀಣ ಸಮಸ್ಯೆ ಹಾಗೂ ಬಡತನವನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಸ್ವಾತಂತ್ರ್ಯ ಪೂರ್ವದಲ್ಲೇ ಶ್ರೀಕ್ಷೇತ್ರದಲ್ಲಿ ದಾನಧರ್ಮಾದಿ ನಡೆಯುತ್ತಿದ್ದವು. ವಿವಿಧ ಕಡೆಗಳಿಂದ ಭಕ್ತರು ಆಗಮಿಸುತ್ತಿದ್ದರು. ಆ ಕಾಲದಲ್ಲಿ ಮಳೆ ಇದ್ದರೆ ಮಾತ್ರ ಬೆಳೆ ಎಂಬ ಸ್ಥಿತಿ. ಬರಗಾಲ ಎದುರಾದಾಗ ಜನರು ಊರು ಬಿಟ್ಟು ಗುಳೆ ಹೋಗುತ್ತಿದ್ದರು. ಹೆಚ್ಚಿನವರು ಕ್ಷೇತ್ರಕ್ಕೆ ಬಂದು "ಏನಾದರೂ ಕೆಲಸ ಕೊಡಿ' ಎನ್ನುತ್ತಿದ್ದರು. ಊರಿಂದ ಊರಿಗೆ ಅಲೆಯುವವರು ಕೆಲವು ದಿನಗಳ ಕಾಲ ಇಲ್ಲಿದ್ದು, ಅನ್ನಛತ್ರದಲ್ಲಿ ದಾಸೋಹ ಸ್ವೀಕರಿಸಿ ಸಂತೃಪ್ತಿ ಹೊಂದುತ್ತಿದ್ದರು. ನಿತ್ಯವೂ ಕಷ್ಟ ಹೇಳಿಕೊಂಡು ನೂರಾರು ಜನ ಬರುತ್ತಿದ್ದವು. ನಮ್ಮಿಂದಾಗುವ ಸಹಾಯ ಮಾಡುತ್ತಿದ್ದೆವು. ಆಗ ಅವರ ವೈಯಕ್ತಿಕ ಪರಿಹಾರಕ್ಕಿಂತ ಎಲ್ಲರಿಗೂ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚಿಂತನೆ ಮಾಡಿದಾಗ ಗ್ರಾಮಾಭಿವೃದ್ಧಿಯ ಕನಸು ಚಿಗುರಿತು.
ಗ್ರಾಮೀಣಾಭಿವೃದ್ಧಿಗಾಗಿ ಪ್ರಾರಂಭದಲ್ಲಿ ಬೆಳ್ತಂಗಡಿ ತಾಲೂಕನ್ನು ಆಯ್ಕೆ ಮಾಡಿಕೊಂಡು ಬಡ ಕುಟುಂಬಗಳಿಗೆ ಪಶು ಸಾಕಾಣಿಕೆಗಾಗಿ ಹಸುಗಳನ್ನು, ಕೃಷಿಗಾಗಿ ಸಲಕರಣೆ ಹಾಗೂ ತೆಂಗಿನ ಸಸಿ, ಅಡಿಕೆ ಸಸಿಗಳನ್ನು ಕ್ಷೇತ್ರದ ವತಿಯಿಂದ ನೀಡಿದೆವು. ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಣೆಗಾಗಿ ಸ್ವಸಹಾಯ ಸಂಘಗಳನ್ನು ಆರಂಭಿಸಿದೆವು. ಈ ಪ್ರಯೋಗ ಯಶಸ್ವಿಯಾದ ಬಳಿಕ ನಾಡಿನಾದ್ಯಂತ ಈ ಯೋಜನೆಯನ್ನು ವಿಸ್ತರಿಸಿ ಗ್ರಾಮೀಣಾಭಿವೃದ್ಧಿ ಕಾರ್ಯಗಳನ್ನು ಕೈಗೊಂಡೆವು. ಇದು ಗ್ರಾಮೀಣ ಜನರ ಬದುಕನ್ನು ಬದಲಿಸುವಲ್ಲಿ ಮಹತ್ತರ ಪಾತ್ರ ವಹಿಸಿತು.
ವಿಶೇಷವಾಗಿ ಮಹಿಳೆಯರು ಸ್ವಾವಲಂಬಿಯಾದರು. ಜನರಲ್ಲಿ ಆರ್ಥಿಕ ಶಿಸ್ತಿನ ಜಾಗೃತಿಯಿಂದ ಕುಟುಂಬಗಳು ಅಭಿವೃದ್ಧಿಯಾದವು. ಹೀಗೆ ಗ್ರಾಮೀಣ ಜನರು ಬಡತನದಿಂದ ಸ್ವಾವಲಂಬನೆಯತ್ತ ಸಾಗಲು ಶ್ರೀಕ್ಷೇತ್ರವು ನಾನಾ ರೀತಿಯಲ್ಲಿ ನೆರವಾಯಿತು. ಇದರ ಜತೆಗೆ ಕೆರೆ ಸಂರಕ್ಷಣೆ, ಸ್ವಚ್ಛತೆ, ವರದಕ್ಷಿಣೆ ಹಾಗೂ ದುಂದುವೆಚ್ಚ ನಿವಾರಣೆಗೆ ಸಾಮೂಹಿಕ ವಿವಾಹ, ಸ್ವಸ್ಥ ಸಮಾಜ ರೂಪಿಸಲು ಮದ್ಯವರ್ಜನ ಶಿಬಿರ, ಧಾರ್ಮಿಕತೆ ಮೂಡಿಸಲು ಭಜನಾ ಕಮ್ಮಟ, ಭಜನಾ ಮಂದಿರಗಳ ಅಭಿವೃದ್ಧಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಕ್ಷೇತ್ರದ ವತಿಯಿಂದ ಹಮ್ಮಿಕೊಳ್ಳುತ್ತಾ ಬರಲಾಯಿತು. ದೇಶದ ಅಭಿವೃದ್ಧಿಗೆ ಇದು ಕ್ಷೇತ್ರದ ಅಳಿಲು ಸೇವೆ ಎನ್ನಬಹುದು.

ಗಾಂಧೀಜಿಯವರು ರಾಷ್ಟ್ರದ ಅಭಿವೃದ್ಧಿಯನ್ನು ಗ್ರಾಮ ಸ್ವರಾಜ್ಯ ಎಂದಿದ್ದರು. ಪ್ರತಿಯೊಂದು ಗ್ರಾಮವೂ ತನ್ನ ಅಗತ್ಯಗಳನ್ನು ಸಾಧ್ಯವಾದಷ್ಟು ಸ್ಥಳೀಯವಾಗಿಯೇ ಪೂರೈಸಿಕೊಳ್ಳಬೇಕು. ಗ್ರಾಮಗಳು ಸ್ವಚ್ಛವಾಗಿರಬೇಕು, ಜನರು ಆರ್ಥಿಕವಾಗಿ ಸದೃಢವಾಗಿರಬೇಕು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಥಳೀಯ ಉದ್ಯೋಗಗಳನ್ನು ಸೃಷ್ಟಿಸಬೇಕು. ಗ್ರಾಮಸ್ಥರೇ ತಮ್ಮ ಸಮಸ್ಯೆಗಳನ್ನು ಗುರುತಿಸಿ, ಪರಿಹಾರ ಕಂಡುಕೊಳ್ಳುವಂತಹ ಜನಪರ ಸ್ಥಳೀಯ ಆಡಳಿತ ವ್ಯವಸ್ಥೆ ರೂಪುಗೊಳ್ಳಬೇಕು. ಇದೇ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಆಶಯವಾಗಿತ್ತು.

ಇಂದು ಭಾರತ ಅನೇಕ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುತ್ತಿದೆ. ಒಂದು ಕಾಲದಲ್ಲಿ ಅಗತ್ಯ ವಸ್ತುಗಳು ಮತ್ತು ತಂತ್ರಜ್ಞಾನಕ್ಕಾಗಿ ವಿದೇಶಗಳ ಮೇಲೆ ಅವಲಂಬಿತವಾಗಿದ್ದ ಭಾರತ, ಇಂದು ಅನೇಕ ಕ್ಷೇತ್ರಗಳಲ್ಲಿ ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದೆ. ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವ ಹಲವು ಕಾರ್ಯಕ್ರಮಗಳ ಮೂಲಕ ಸರ್ಕಾರವೂ ಆತ್ಮನಿರ್ಭರ ಭಾರತದ ಆಶಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.

ಸ್ವಾವಲಂಬನೆ ಎಂದರೆ ಕೇವಲ ಕಾರ್ಖಾನೆ ಹಾಗೂ ಕೈಗಾರಿಕೆಗಳು, ವಿಜ್ಞಾನ ಹಾಗೂ ತಂತ್ರಜ್ಞಾನ ಅಥವಾ ರಕ್ಷಣಾ ಕ್ಷೇತ್ರದಲ್ಲಿ ಸಾಧಿಸುವ ಪ್ರಗತಿಯಷ್ಟೇ ಅಲ್ಲ. ಬದಲಾಗಿ ಪ್ರತಿ ಗ್ರಾಮವೂ ಸರ್ವತೋಮುಖ ಅಭಿವೃದ್ಧಿ ಹೊಂದುವುದಾಗಿದೆ. ಕೃಷಿ, ಪಶುಸಂಗೋಪನೆ, ಗುಡಿ ಕೈಗಾರಿಕೆ, ಕರಕುಶಲ, ಆಹಾರ ಸಂಸ್ಕರಣೆ ಹಾಗೂ ಸ್ಥಳೀಯ ಉದ್ಯಮ ಒದಗಿಸುವ ಮೂಲಕ ಗ್ರಾಮದಲ್ಲೇ ಉದ್ಯೋಗ ಸೃಷ್ಟಿಸುವುದಾಗಿದೆ. ಇದರಿಂದ ನಗರಗಳತ್ತ ವಲಸೆ ಹೋಗುವುದನ್ನು ತಡೆಯುವುದರ ಜತೆಗೆ ಗ್ರಾಮೀಣ ಆರ್ಥಿಕತೆಗೆ ಬಲ ನೀಡಿದಂತಾಗುತ್ತದೆ. ಇಂದಿನ ದಿನಗಳಲ್ಲಿ ಮಣ್ಣು, ಗಾಳಿ, ನೀರು, ಒಟ್ಟಾರೆಯಾಗಿ ಇಡೀ ವಾತಾವರಣವೇ ದಿನದಿಂದ ದಿನಕ್ಕೆ ಕಲುಷಿತಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯಕರ ಹಾಗೂ ಸ್ವಚ್ಛ ಪರಿಸರ ನಿರ್ಮಾಣಕ್ಕೂ ನಾವೆಲ್ಲ ಒತ್ತು ನೀಡಬೇಕಾದ ಅಗತ್ಯವಿದೆ.

ಆಧುನಿಕ ಕಾಲಘಟ್ಟದಲ್ಲಿ ಡಿಜಿಟಲ್ ತಂತ್ರಜ್ಞಾನ ಹೊಸ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಇಂಟರ್ನೆಟ್ ವ್ಯವಸ್ಥೆ ಜಗತ್ತನ್ನೇ ನಮ್ಮ ಅಂಗೈಯಲ್ಲಿರಿಸಿದೆ. ಶಿಕ್ಷಣ, ಕೃಷಿ, ತಂತ್ರಜ್ಞಾನ, ಆರೋಗ್ಯ, ವ್ಯವಹಾರ ಮುಂತಾದ ಕ್ಷೇತ್ರಗಳಿಗೆ ಡಿಜಿಟಲ್ ವ್ಯವಸ್ಥೆ ಹೊಸ ವೇಗವನ್ನು ನೀಡಿದೆ. ಇದರಿಂದಾಗಿ ಸ್ಥಳೀಯ ಉತ್ಪಾದನೆಯು ಜಾಗತಿಕ ಮಾರುಕಟ್ಟೆಯನ್ನು ತಲುಪಲು ಸುಲಭ ಸಾಧ್ಯವಾಗಿದೆ.
ಗ್ರಾಮೀಣ ಪ್ರದೇಶಗಳು ಸ್ವಾವಲಂಬಿಗಳಾದಾಗ ಭಾರತವೂ ಸ್ವಾವಲಂಬಿಯಾಗುವುದು. ಗ್ರಾಮಗಳು ಅಭಿವೃದ್ಧಿಯಾದರೆ ದೇಶವೂ ಅಭಿವೃದ್ಧಿಯಾಗುವುದು. ಹಾಗಾಗಿ ಪ್ರತಿಯೊಂದು ಗ್ರಾಮವೂ ತನ್ನ ಸಂಪನ್ಮೂಲ, ಶ್ರಮ, ಜ್ಞಾನ ಮತ್ತು ಜನರ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನಡೆದಾಗ ಮಾತ್ರ ದೇಶದ ನಿಜವಾದ ಅಭಿವೃದ್ಧಿಯಾಗುತ್ತದೆ.
ಸ್ವಾತಂತ್ರ್ಯ ಎಂಬುದು ಒಂದೇ ದಿನದಲ್ಲಿ ಮುಗಿದುಹೋಗುವ ಘಟನೆಯಲ್ಲ; ಅದೊಂದು ನಿರಂತರ ಪ್ರಕ್ರಿಯೆ. ಅದಕ್ಕಾಗಿ ನಾವು ಸ್ವಾತಂತ್ರ್ಯದ ಮೌಲ್ಯವನ್ನು ಅರಿತು, ನಮ್ಮ ಹಕ್ಕುಗಳ ಜತೆಗೆ ಕರ್ತವ್ಯಗಳನ್ನೂ ನಿಷ್ಠೆಯಿಂದ ಪಾಲಿಸಬೇಕು. ದೇಶದ ಏಕತೆ, ಅಖಂಡತೆ, ಸಂಸ್ಕೃತಿ ಮತ್ತು ಸಂವಿಧಾನದ ಆಶಯಗಳನ್ನು ಗೌರವಿಸುವ ಮೂಲಕ ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಸಾಕಾರಗೊಳಿಸಬೇಕು. ಸ್ವಾವಲಂಬನೆ, ಸಾಮಾಜಿಕ ಹೊಣೆಗಾರಿಕೆ, ಪರಿಸರ ಸಂರಕ್ಷಣೆ ಹಾಗೂ ಪರಸ್ಪರ ಗೌರವದಂತಹ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಪಡೆದ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿಸಬಹುದು. ಆ ಕಾರ್ಯವನ್ನು ಸದಾ ಮುಂದುವರಿಸೋಣ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net