

ತಾಯಿ ಮಗುವನ್ನು ಗರ್ಭದಲ್ಲಿ ಹೊರಲು ಪ್ರಾರಂಭಿಸಿದ ಕ್ಷಣದಿಂದ ಹಿಡಿದು ತನ್ನ ಕೊನೆಯುಸಿರಿನವರೆಗೆ ನೀಡುವ ಪ್ರೀತಿಯಲ್ಲಿ ಯಾವುದೇ ಸ್ವಾರ್ಥವಿರುವುದಿಲ್ಲ. ‘ನನಗೆ ಏನು ಸಿಗುತ್ತದೆ’ ಎಂದು ಯೋಚಿಸದೆ, ‘ನನ್ನ ಮಗುವಿಗೆ ಏನು ಬೇಕು?’ ಎಂದು ಮಾತ್ರ ಯೋಚಿಸುವ ಏಕೈಕ ಜೀವಿ ತಾಯಿ. ನಾವು ಎಷ್ಟೇ ತಪ್ಪು ಮಾಡಿದರೂ, ಇಡೀ ಜಗತ್ತೇ ನಮ್ಮ ವಿರುದ್ಧ ನಿಂತರೂ, ನಮ್ಮನ್ನು ಯಾವುದೇ ಷರತ್ತಿಲ್ಲದೆ ಅಪ್ಪಿಕೊಂಡು ಕ್ಷಮಿಸುವ ಹೃದಯ ತಾಯಿಯದು ಮಾತ್ರ. ಮಗುವಿನ ಸಣ್ಣ ನಗುವಿಗಾಗಿ ತನ್ನ ಸಂತೋಷವನ್ನೇ ತ್ಯಾಗ ಮಾಡಲು ಆಕೆ ಎಂದೂ ಹಿಂಜರಿಯುವುದಿಲ್ಲ.
ಪುರಾಣಗಳಲ್ಲಿ ತಾಯಿಯ ವಾತ್ಸಲ್ಯಕ್ಕೆ ಅತ್ಯುತ್ತಮ ಉದಾಹರಣೆ ಯಶೋದೆ. ಶ್ರೀಕೃಷ್ಣನು ಯಶೋದೆಯ ಹೆತ್ತ ಮಗನಲ್ಲದಿದ್ದರೂ, ಆಕೆ ತೋರಿದ ಪ್ರೀತಿಯಲ್ಲಿ ಎಳ್ಳಷ್ಟೂ ವ್ಯತ್ಯಾಸವಿರಲಿಲ್ಲ. ಕೃಷ್ಣನ ಪ್ರತಿಯೊಂದು ತುಂಟಾಟ, ಕಂಸ ಕಳುಹಿಸಿದ ರಾಕ್ಷಸರಿಂದ ಆತನನ್ನು ರಕ್ಷಿಸುವ ತಾಯಿಯ ಆತಂಕ ಇವೆಲ್ಲವೂ ತಾಯಿಯ ಮಮತೆಗೆ ಶ್ರೇಷ್ಠ ಸಾಕ್ಷಿ. ಅದೇ ರೀತಿ, ಪ್ರೇಮಿಯಾಗಿ ಕೃಷ್ಣನ ಮೇಲಿದ್ದ ರಾಧೆಯ ಪ್ರೀತಿ ಅಪೂರ್ವವಾದುದು. ಲೌಕಿಕ ಬಂಧನಗಳನ್ನು ಮೀರಿದ ಅಪೂರ್ವ ಪ್ರೇಮವದು. ರಾಧೆಗೆ ಕೃಷ್ಣನಿಂದ ಯಾವುದೇ ಅಧಿಕಾರ ಅಥವಾ ದಾಂಪತ್ಯದ ಭರವಸೆ ಬೇಕಿರಲಿಲ್ಲ. ಆಕೆಗೆ ಕೃಷ್ಣನ ಸಂತೋಷವೇ ತನ್ನ ಸಂತೋಷ. ಕೃಷ್ಣನು ವೃಂದಾವನವನ್ನು ತೊರೆದು ಹೋದಾಗ, ರಾಧೆ ಎಂದಿಗೂ ಆತನನ್ನು ತಡೆದು ನಿಲ್ಲಿಸಲಿಲ್ಲ. ಆಕೆಯ ಪ್ರೀತಿಯಲ್ಲಿ ನಿರೀಕ್ಷೆಯಿರಲಿಲ್ಲ, ಸಮರ್ಪಣಾ ಭಾವವಿತ್ತು.
ತಾಯಿ ಪ್ರೀತಿಯಂತೆ ಪ್ರಕೃತಿ ಪ್ರೀತಿಯೂ. ಪ್ರಕೃತಿಯೂ ನಮಗೆ ತಾಯಿಯೇ. ಪ್ರಕೃತಿಯನ್ನು ಪ್ರೀತಿಸುವುದೆಂದರೆ ನಮ್ಮ ಮೂಲವನ್ನು ನಾವೇ ಗೌರವಿಸಿದಂತೆ. ಮಾನವನು ಪ್ರಕೃತಿಯ ಒಂದು ಭಾಗವೇ ಹೊರತು, ಆತ ಪ್ರಕೃತಿಯ ಒಡೆಯನಲ್ಲ. ಭೂಮಿ, ನೀರು, ಗಾಳಿ, ಗಿಡ-ಮರಗಳು ಮತ್ತು ಸಕಲ ಚರಾಚರ ವಸ್ತುಗಳನ್ನು ಒಳಗೊಂಡ ಈ ಪರಿಸರ ಹಾಗೂ ಅದರಲ್ಲಿ ಬಾಳುವ ಕೋಟ್ಯಂತರ ಜೀವರಾಶಿಗಳ ಮೇಲಿನ ಪ್ರೀತಿಯೇ ಈ ಜಗತ್ತಿನ ಸೌಂದರ್ಯವನ್ನು ಕಾಯ್ದುಕೊಂಡಿದೆ. ಪ್ರಕೃತಿ ನಮಗೆ ಪ್ರತಿಯೊಂದನ್ನೂ ನೀಡುತ್ತದೆ- ಉಸಿರಾಡಲು ಗಾಳಿ, ಕುಡಿಯಲು ನೀರು, ಬದುಕಲು ಅನ್ನ ಮತ್ತು ಕಣ್ಣಿಗೆ ತಂಪು ನೀಡುವ ಸುಂದರ ದೃಶ್ಯಗಳು. ಈ ಅಪಾರ ಔದಾರ್ಯಕ್ಕೆ ನಾವು ನೀಡಬಹುದಾದ ಅತ್ಯಂತ ಸರಳ ಪ್ರತ್ಯುಪಕಾರ ಎಂದರೆ ಅದರ ಮೇಲಿನ ಕಾಳಜಿ ಮತ್ತು ಪ್ರೀತಿ. ಪ್ರಕೃತಿಯನ್ನು ಪ್ರೀತಿಸುವುದೆಂದರೆ ಅದನ್ನು ನಾಶ ಮಾಡದೆ, ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಕಾಯ್ದಿರಿಸುವುದು. ಹಾಗಾಗಿ ತಾಯಿ ಮತ್ತು ಪ್ರಕೃತಿ ಪ್ರೀತಿಗೆ ಎಂದೂ ಬೆಲೆ ಕಟ್ಟಲಾಗದು.
ಗೆಳೆತನದ ಪ್ರೀತಿಗೆ ಸಾಕ್ಷಿಯಾದ ಕಥೆ ಎಂದರೆ ಸುದಾಮ ಮತ್ತು ಕೃಷ್ಣನ ಸ್ನೇಹ-ಪ್ರೀತಿ. ಸುದಾಮ (ಕುಚೇಲ) ಅತ್ಯಂತ ಬಡತನದಲ್ಲಿದ್ದರೂ ತನ್ನ ಬಾಲ್ಯದ ಗೆಳೆಯ ಕೃಷ್ಣನ ಬಳಿಗೆ ಹೋದಾಗ ಯಾವುದೇ ಸಂಪತ್ತಿನ ನಿರೀಕ್ಷೆ ಇಟ್ಟುಕೊಳ್ಳಲಿಲ್ಲ. ತನ್ನಲ್ಲಿದ್ದ ಅಲ್ಪ ಅವಲಕ್ಕಿಯನ್ನೇ ಪ್ರೀತಿಯಿಂದ ನೀಡಿದ. ಕೃಷ್ಣನೂ ಮಿತ್ರನ ನಿಸ್ವಾರ್ಥ ಪ್ರೀತಿಯನ್ನು ಕಂಡು ಆತನಿಗೆ ಹೇಳಿಕೊಳ್ಳದೆ ಅಪಾರ ಐಶ್ವರ್ಯವನ್ನು ಕರುಣಿಸಿದ.
ದಾಂಪತ್ಯ ಜೀವನ ಹೇಗಿರಬೇಕು ಎಂಬುದಕ್ಕೆ ಅನೇಕ ಕಥೆಗಳಿವೆ. ಆದರ್ಶ ದಾಂಪತ್ಯಕ್ಕೆ ಶ್ರೀರಾಮ-ಸೀತೆಯರ ಜೀವನವೇ ಅತಿ ದೊಡ್ಡ ಉದಾಹರಣೆ. ರಾಮನು ಏಕಪತ್ನಿವ್ರತಸ್ಥನಾಗಿ ಸೀತೆಗೆ ನೀಡಿದ ಗೌರವ ಹಾಗೂ ಸೀತಾದೇವಿ ಅರಮನೆಯ ಸುಖವನ್ನು ತೊರೆದು ಪತಿಯ ಜತೆ ವನವಾಸಕ್ಕೆ ತೆರಳಿದ ತ್ಯಾಗ ಮನೋಭಾವವು, ದಾಂಪತ್ಯದಲ್ಲಿ ಇರಬೇಕಾದ ಪರಸ್ಪರ ನಿಷ್ಠೆ ಮತ್ತು ಕಷ್ಟ ಸುಖಗಳಲ್ಲಿ ಜತೆಯಾಗಿರುವ ಬದ್ಧತೆ ತೋರಿಸುತ್ತದೆ.
ಸತ್ಯವಾನ-ಸಾವಿತ್ರಿ ಕಥೆ ಮನಸ್ಸನ್ನು ತಟ್ಟುತ್ತದೆ. ಸಾವಿತ್ರಿಯು ಸತ್ಯವಾನನನ್ನು ಮದುವೆಯಾಗುವಾಗ, ಆತ ಒಂದು ವರ್ಷ ಮಾತ್ರ ಜೀವಿಸುತ್ತಾನೆ ಎಂಬ ಕಠೋರ ಸತ್ಯ ನಾರದ ಮಹರ್ಷಿಗಳಿಂದ ತಿಳಿದಿತ್ತು. ಆದರೂ ಆಕೆ ಅಧಿಕಾರ, ಐಶ್ವರ್ಯ ಅಥವಾ ದೀರ್ಘ ದಾಂಪತ್ಯದ ನಿರೀಕ್ಷೆಯಿಲ್ಲದೆ ಸತ್ಯವಾನನನ್ನು ನಿಷ್ಕಲ್ಮಷವಾಗಿ ಪ್ರೀತಿಸಿ ವರಿಸಿದಳು. ಆತನ ಆಯಸ್ಸು ಮುಗಿದು ಯಮಧರ್ಮರಾಯ ಪ್ರಾಣ ಕೊಂಡೊಯ್ಯುವಾಗ, ತನ್ನ ಅಚಲ ಪ್ರೀತಿ ಮತ್ತು ಧರ್ಮದಿಂದ ಯಮನನ್ನೇ ಮೆಚ್ಚಿಸಿ, ಗಂಡನ ಪ್ರಾಣವನ್ನು ಮರಳಿ ಪಡೆದಳು. ತನಗಾಗಿ ಏನನ್ನೂ ಬಯಸದ ನಿಸ್ವಾರ್ಥ ನಿಷ್ಠೆ ಆಕೆಯ ಪ್ರೀತಿಯಲ್ಲಿತ್ತು.
ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ, ಸಿರಿವಂತಿಕೆ ಕಳೆದುಕೊಂಡು ಕಷ್ಟದಲ್ಲಿದ್ದಾಗಲೂ ಒಬ್ಬರನ್ನೊಬ್ಬರು ಬಿಟ್ಟುಕೊಡದೆ, ಪ್ರೀತಿಯಿಂದ ಮತ್ತೆ ಒಂದಾಗುವ ನಳ-ದಮಯಂತಿಯರ ಕಥೆಯು ಸಂಕಷ್ಟದ ಸಮಯದಲ್ಲಿ ದಾಂಪತ್ಯ ಬಂಧವು ಹೇಗೆ ಗಟ್ಟಿಯಾಗಿರಬೇಕು ಎಂಬುದನ್ನು ತೋರ್ಪಡಿಸುತ್ತದೆ. ಅರ್ಧನಾರೀಶ್ವರರಾದ ಶಿವ-ಪಾರ್ವತಿ, ಹೃದಯದಲ್ಲೇ ಸ್ಥಾನ ನೀಡಿದ ಲಕ್ಷ್ಮೀನಾರಾಯಣರ ದಾಂಪತ್ಯ ಎಲ್ಲರಿಗೂ ಮಾದರಿ. ಈ ಕಥೆಗಳನ್ನು ಗಮನಿಸಿದಾಗ ಯಶಸ್ವಿ ದಾಂಪತ್ಯಕ್ಕೆ ಸೌಂದರ್ಯ ಅಥವಾ ಸಂಪತ್ತು ಮುಖ್ಯವಲ್ಲ; ಸಹನೆ, ನಂಬಿಕೆ, ತ್ಯಾಗ, ಕಷ್ಟದ ಸಮಯದಲ್ಲಿ ಜತೆಯಾಗಿ ನಿಲ್ಲುವ ಮನೋಭಾವ, ನಿಷ್ಕಲ್ಮಶ ಪ್ರೀತಿ ಮುಖ್ಯ.
ಇನ್ನು ಭಕ್ತಿ ಮಾರ್ಗದಲ್ಲಿ ಪ್ರೀತಿಯ ಆಳವನ್ನು ಗಮನಿಸಿದಾಗ ಬೇಡರ ಕಣ್ಣಪ್ಪನ ಭಕ್ತಿ-ಪ್ರೇಮ ಕಣ್ಣಮುಂದೆ ಬರುತ್ತದೆ. ಶಿವನ ಮೇಲಿದ್ದ ಕಣ್ಣಪ್ಪನ ಪ್ರೀತಿಯಲ್ಲಿ ಯಾವುದೇ ದ್ವಂದ್ವ ಇರಲಿಲ್ಲ. ಶಿವಲಿಂಗದ ಕಣ್ಣಿನಿಂದ ರಕ್ತ ಬರುವುದನ್ನು ಕಂಡಾಗ, ತಡಮಾಡದೆ ತನ್ನದೇ ಕಣ್ಣನ್ನು ಕಿತ್ತು ಅರ್ಪಿಸಿದ. ಅಲ್ಲಿ ‘ದೇವರು ನನಗೆ ಏನು ಕೊಡುತ್ತಾನೆ?’ ಎಂಬ ನಿರೀಕ್ಷೆಯಿರಲಿಲ್ಲ, ಲೋಭ ಇರಲಿಲ್ಲ. ನಿಸ್ವಾರ್ಥ ತ್ಯಾಗವಿತ್ತು.
ರಾಮಾಯಣದ ಕಾಲದಲ್ಲಿ ಶಬರಿ ಶ್ರೀರಾಮನ ದರ್ಶನವೇ ತನ್ನ ಜೀವನದ ಗುರಿ ಎಂದು ಭಾವಿಸಿದ್ದಳು. ಒಂದು ದಿನ ರಾಮ ಆಶ್ರಮಕ್ಕೆ ಬರುತ್ತಾನೆ ಎಂಬ ನಂಬಿಕೆಯಿಂದ ಕಾಯುತ್ತಿದ್ದಳು. ಕೊನೆಗೂ ಒಂದು ದಿನ ರಾಮ ಮತ್ತು ಲಕ್ಷ್ಮಣ ಅವಳ ಆಶ್ರಮಕ್ಕೆ ಬಂದರು. ರಾಮನನ್ನು ಕಂಡ ಕ್ಷಣದಲ್ಲಿ ಶಬರಿಯ ಆನಂದಕ್ಕೆ ಮಿತಿಯೇ ಇರಲಿಲ್ಲ. ಅವಳು ಪ್ರೀತಿಯಿಂದ ಸಂಗ್ರಹಿಸಿದ್ದ ಹಣ್ಣುಗಳನ್ನು ರಾಮನಿಗೆ ಅರ್ಪಿಸಿದಳು. ಪ್ರತಿ ಹಣ್ಣನ್ನೂ ಮೊದಲು ರುಚಿ ನೋಡಿ, ಸಿಹಿಯಾದದ್ದನ್ನೇ ರಾಮನಿಗೆ ನೀಡುತ್ತಿದ್ದಳು. ಹೊರಗಿನ ದೃಷ್ಟಿಯಿಂದ ಅದು ಎಂಜಲು ಹಣ್ಣು. ಆದರೆ ರಾಮನ ದೃಷ್ಟಿಯಲ್ಲಿ ಅದು ಶಬರಿಯ ಅಚಲ ಭಕ್ತಿಯ ಪ್ರೀತಿ ಮತ್ತು ಸಂಪೂರ್ಣ ಸಮರ್ಪಣೆ. ಭಗವಂತನಿಗೆ ಬೇಕಾಗಿರುವುದು ಬೆಲೆಬಾಳುವ ಕಾಣಿಕೆಯಲ್ಲ; ಪ್ರೀತಿಯಿಂದ ಅರ್ಪಿಸಿದ ನಿರ್ಮಲ ಹೃದಯ.
ಇಂದಿನ ಧಾವಂತದ, ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಪ್ರೀತಿಯ ಸ್ವರೂಪ ಬದಲಾಗಿದೆ. ಲೈಕ್ಸ್, ಕಾಮೆಂಟ್ಸ್ ಮತ್ತು ಜೋಡಿಸೆಲ್ಪಿಗಳನ್ನು ಹಂಚಿಕೊಳ್ಳುವುದೇ ಪ್ರೀತಿಯ ಅಳತೆಗೋಲಾಗಿದೆ. ಆಧುನಿಕ ಪ್ರೀತಿಯಲ್ಲಿ ‘ಗಿವ್ ಆಂಡ್ ಟೇಕ್’ ಎಂಬ ವ್ಯವಹಾರಿಕ ಮನೋಭಾವ ಹೆಚ್ಚಾಗುತ್ತಿದ್ದು, ‘ನಾನು ನಿನಗಾಗಿ ಇಷ್ಟೊಂದು ಮಾಡಿದೆ, ನೀನು ನನಗೇನು ಮಾಡಿದೆ?’ ಎಂಬ ನಿರೀಕ್ಷೆಗಳು ಸಂಬಂಧಗಳನ್ನು ಸಡಿಲಗೊಳಿಸುತ್ತಿವೆ. ನೈಜ ಪ್ರೀತಿ, ಕಾಳಜಿ ಅಪರೂಪವಾಗುತ್ತಿವೆ. ಬಾಂಧವ್ಯಗಳಲ್ಲಿ ಬಿರುಕು ಮೂಡಲು ಇದು ಮುಖ್ಯ ಕಾರಣ. ಅತಿಯಾದ ನಿರೀಕ್ಷೆ. ‘ನಾನು ಅವರನ್ನು ಎಷ್ಟು ಪ್ರೀತಿಸುತ್ತೇನೋ, ಅವರೂ ನನ್ನನ್ನು ಅಷ್ಟೇ ಅಥವಾ ಅದಕ್ಕಿಂತಲೂ ಪ್ರೀತಿಸಬೇಕು, ನಾನು ನೀಡುವ ಕಾಳಜಿಗೆ ಪ್ರತಿಯಾಗಿ ಅವರಿಂದಲೂ ಕೊಡುಗೆ ಸಿಗಬೇಕು’ ಎಂಬ ಅಪೇಕ್ಷೆ ಮೂಡಿದಾಗ ಪ್ರೀತಿ ಒಂದು ವ್ಯವಹಾರದಂತಾಗುತ್ತದೆ. ನಿರೀಕ್ಷೆ ಹುಸಿಯಾದಾಗ ನಿರಾಸೆ, ಕೋಪ ಮತ್ತು ನೋವು ಆವರಿಸಿಕೊಳ್ಳುತ್ತವೆ. ಸಂಬಂಧಗಳೂ ಹಳಸುತ್ತವೆ. ದ್ವೇಷ, ಅಸೂಯೆಗಳಿಂದ ಏನನ್ನೂ ಗೆಲ್ಲಲು ಸಾಧ್ಯವಿಲ್ಲ; ಪ್ರೀತಿಯಿಂದ ಮಾತ್ರ ಪ್ರತಿಯೊಂದು ಹೃದಯವನ್ನೂ ತಲುಪಲು ಸಾಧ್ಯ.
ಎಲ್ಲಕ್ಕಿಂತ ಮುಖ್ಯವಾಗಿ, ನಾವು ಇತರರನ್ನು ಪ್ರೀತಿಸಲು ಮೊದಲು ನಮ್ಮನ್ನು ನಾವು ಪ್ರೀತಿಸುವುದು ಮತ್ತು ಗೌರವಿಸುವುದು ಅಗತ್ಯ. ನಮ್ಮ ಕೊರತೆಗಳನ್ನು ಒಪ್ಪಿಕೊಂಡು, ನಮ್ಮತನವನ್ನು ಗೌರವಿಸಿದಾಗ ಮಾತ್ರ ನಾವು ಮತ್ತೊಬ್ಬರಿಗೆ ನೈಜ ಪ್ರೀತಿ ನೀಡಲು ಸಾಧ್ಯ. ಮಾತಿನಲ್ಲಿ ಮೃದುತ್ವ, ನಡತೆಯಲ್ಲಿ ಕರುಣೆ ಮತ್ತು ಹೃದಯದಲ್ಲಿ ಪ್ರೀತಿಯನ್ನಿಟ್ಟುಕೊಂಡು ಬಾಳಿದರೆ ಈ ಜೀವನವೇ ಒಂದು ಸುಂದರ ಕಾವ್ಯವಾಗುತ್ತದೆ. ನಾವು ಪ್ರೀತಿಸುವವರಿಂದ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಂಡಾಗ, ನಮ್ಮ ಪ್ರೀತಿಯು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಯುಗಗಳು ಬದಲಾಗಬಹುದು, ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನ ಬದಲಾಗಬಹುದು, ಆದರೆ ಪುರಾಣ ಇತಿಹಾಸದ ಕಥೆಗಳು ಸಾರಿದಂತೆ ನಿಸ್ವಾರ್ಥದಿಂದ ಪ್ರೀತಿಸಿದಾಗ ಪ್ರತಿಯೊಂದು ಸಂಬಂಧವೂ ಅಮರವಾಗುತ್ತದೆ.